ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Leena Joshi Column: 400 ಸುದ್ದಿವಾಹಿನಿ ಇರೋ ಭಾರತದಲ್ಲಿ ಪ್ರೆಸ್‌ ಫ್ರೀಡಂ ಇಲ್ವಂತೆ !

ಭಾರತದಲ್ಲಿ ಒಂದು ಅಪರಾಧ ನಡೆದರೆ, ಅದು ತಕ್ಷಣ ಜಾಗತಿಕ ಸುದ್ದಿಯಾಗುತ್ತದೆ. ಒಂದು ಘಟನೆ ಆಧಾರವಾಗಿ ಇಡೀ ದೇಶದ ಸಾಮಾಜಿಕ ವ್ಯವಸ್ಥೆಯನ್ನು ಪ್ರಶ್ನಿಸಲಾಗುತ್ತದೆ. ಆದರೆ ಇದೇ ರೀತಿಯ ಅಥವಾ ಅದಕ್ಕಿಂತ ದೊಡ್ಡ ಸಮಸ್ಯೆಗಳು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ನಡೆದಾಗ, ಅವುಗಳನ್ನು ‘ಪ್ರತ್ಯೇಕ ಘಟನೆ’ ಎಂದು ಹೇಳಲಾಗುತ್ತದೆ. ಭಾರತದ ವಿಷಯದಲ್ಲಿ ಮಾತ್ರ ಪ್ರತಿಯೊಂದು ಸಮಸ್ಯೆ ಯನ್ನೂ ವ್ಯವಸ್ಥೆಯ ವೈಫಲ್ಯ ಎಂದು ತೋರಿಸುವ ಪ್ರವೃತ್ತಿ ಕಾಣಿಸುತ್ತದೆ.

400 ಸುದ್ದಿವಾಹಿನಿ ಇರೋ ಭಾರತದಲ್ಲಿ ಪ್ರೆಸ್‌ ಫ್ರೀಡಂ ಇಲ್ವಂತೆ !

-

Profile
Ashok Nayak May 21, 2026 8:39 AM

ಮುಕ್ತ ಮಾಧ್ಯಮ

ಲೀನಾ ಜೋಶಿ

ಭಾರತ ಇಂದು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಭಾಷೆ, ಧರ್ಮ, ಸಂಸ್ಕೃತಿ, ಜಾತಿ, ವಿವಿಧ ರಾಜಕೀಯ ಪಕ್ಷಗಳು - ಇಷ್ಟು ವೈವಿಧ್ಯತೆಯ ನಡುವೆಯೂ ಭಾರತ ಒಂದು ಪ್ರಬಲ ರಾಷ್ಟ್ರ ವಾಗಿ ನಿಂತಿರುವುದು ಆಶ್ಚರ್ಯಕರ! ಆದರೆ ಜಾಗತಿಕ ವೇದಿಕೆಯಲ್ಲಿ ಭಾರತದ ಚಿತ್ರಣವನ್ನು ನೋಡಿದಾಗ, ಹಲವಾರು ಬಾರಿ ಭಾರತವನ್ನು ಅತಿಯಾದ ನಕಾರಾತ್ಮಕ ದೃಷ್ಟಿಯಿಂದಲೇ ಪ್ರದರ್ಶಿಸಲಾಗುತ್ತದೆ.

ಭಾರತದಲ್ಲಿ ಒಂದು ಅಪರಾಧ ನಡೆದರೆ, ಅದು ತಕ್ಷಣ ಜಾಗತಿಕ ಸುದ್ದಿಯಾಗುತ್ತದೆ. ಒಂದು ಘಟನೆ ಆಧಾರವಾಗಿ ಇಡೀ ದೇಶದ ಸಾಮಾಜಿಕ ವ್ಯವಸ್ಥೆಯನ್ನು ಪ್ರಶ್ನಿಸಲಾಗುತ್ತದೆ. ಆದರೆ ಇದೇ ರೀತಿಯ ಅಥವಾ ಅದಕ್ಕಿಂತ ದೊಡ್ಡ ಸಮಸ್ಯೆಗಳು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ನಡೆದಾಗ, ಅವುಗಳನ್ನು ‘ಪ್ರತ್ಯೇಕ ಘಟನೆ’ ಎಂದು ಹೇಳಲಾಗುತ್ತದೆ. ಭಾರತದ ವಿಷಯದಲ್ಲಿ ಮಾತ್ರ ಪ್ರತಿಯೊಂದು ಸಮಸ್ಯೆ ಯನ್ನೂ ವ್ಯವಸ್ಥೆಯ ವೈಫಲ್ಯ ಎಂದು ತೋರಿಸುವ ಪ್ರವೃತ್ತಿ ಕಾಣಿಸುತ್ತದೆ.

ಇದರರ್ಥ ಭಾರತದಲ್ಲಿ ಸಮಸ್ಯೆಗಳಿಲ್ಲ ಎನ್ನುವುದಲ್ಲ. ಭಾರತದಲ್ಲಿ ಅಪರಾಧಗಳಿವೆ, ಸಾಮಾಜಿಕ ಸವಾಲುಗಳಿವೆ, ರಾಜಕೀಯ ಸಂಘರ್ಷಗಳಿವೆ. ಆದರೆ 140 ಕೋಟಿಗೂ ಹೆಚ್ಚು ಜನರ ದೇಶವನ್ನು ಒಂದೇ ಘಟನೆ ಆಧಾರವಾಗಿ ನಿರ್ಧರಿಸುವುದು ನ್ಯಾಯವಲ್ಲ.

ವಿಶ್ವದ ಪ್ರತಿಯೊಂದು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಮಸ್ಯೆಗಳು ಇರುತ್ತವೆ. ಆದರೆ ಭಾರತವನ್ನು ಹಲವಾರು ಬಾರಿ ಸಮತೋಲನವಿಲ್ಲದ ರೀತಿಯಲ್ಲಿ ಜಗತ್ತಿಗೆ ಪರಿಚಯಿಸಲಾಗುತ್ತದೆ. ಅತ್ಯಂತ ದೊಡ್ಡ ವಿರೋಧಾಭಾಸವೇನೆಂದರೆ- ಭಾರತದಲ್ಲಿ ಮಾಧ್ಯಮ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾರವಾಗಿದೆ.

ಇದನ್ನೂ ಓದಿ: Leena Joshi Column: ಬಂಗಾರ ಖರೀದಿಗಿಂತ, ಭಾರತವೇ ಬಂಗಾರವಾಗಲಿ

ದೇಶದಲ್ಲಿ ನೂರಾರು ಟಿವಿ ಚಾನೆಲ್‌ಗಳು, ಸಾವಿರಾರು ಪತ್ರಿಕೆಗಳು, ಲಕ್ಷಾಂತರ ಡಿಜಿಟಲ್ ವೇದಿಕೆ ಗಳು ಸರ್ಕಾರವನ್ನು ಪ್ರತಿದಿನ ಟೀಕಿಸುತ್ತಿವೆ. ಪ್ರಧಾನಮಂತ್ರಿಯಿಂದ ಹಿಡಿದು ಮುಖ್ಯಮಂತ್ರಿ ವರೆಗೆ ಯಾರನ್ನಾದರೂ ಓಪನ್ ಆಗಿ ಟೀಕಿಸುವ ಚರ್ಚೆಗಳು ಪ್ರತಿದಿನ ಪ್ರಸಾರವಾಗುತ್ತವೆ.

ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿರುದ್ಧ ತೀವ್ರ ಅಭಿಪ್ರಾಯಗಳು ನಿರಂತರವಾಗಿ ಹರಿದಾಡುತ್ತವೆ. ಆದರೆ ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಅಭಿವ್ಯಕ್ತಿ ಸ್ವಾತಂತ್ರ್ಯ (freedom of speech) ಇಲ್ಲದ ದೇಶ ಎಂದು ಚಿತ್ರಿಸುವ ಪ್ರಯತ್ನಗಳು ನಡೆಯುತ್ತವೆ. ಮಾತಿನ ಸ್ವಾತಂತ್ರ್ಯ ಇಲ್ಲದ ದೇಶದಲ್ಲಿ ಇಷ್ಟು ಮುಕ್ತ ಚರ್ಚೆಗಳು ಸಾಧ್ಯವೇ? ಚೀನಾದಲ್ಲಿ ಮಾಧ್ಯಮ ವ್ಯವಸ್ಥೆ ಸರ್ಕಾರದ ನಿಯಂತ್ರಣದಲ್ಲಿದೆ.

ಸರ್ಕಾರವನ್ನು ಸಾರ್ವಜ ನಿಕವಾಗಿ ಟೀಕಿಸುವ ಅವಕಾಶಗಳು ಬಹಳ ಸೀಮಿತ. ಅನೇಕ ಜಾಗತಿಕ ಸಾಮಾಜಿಕ ಜಾಲತಾಣಗಳೇ ಅಲ್ಲಿ ನಿರ್ಬಂಧಿತವಾಗಿವೆ. ಆದರೂ ಜಾಗತಿಕ ಮಾಧ್ಯಮದಲ್ಲಿ ಭಾರತ ಕ್ಕಿಂತ ಚೀನಾವನ್ನು ಸುಸ್ಥಿರ ವ್ಯವಸ್ಥೆ ಎಂದು ಹಲವಾರು ಬಾರಿ ಬಿಂಬಿಸಲಾಗುತ್ತದೆ. ಇದು ಕೇವಲ ರಾಜಕೀಯವಲ್ಲ; ಇದು ಜಾಗತಿಕ ಕಥನದ ಪ್ರಶ್ನೆ. ಯಾರಿಗೆ ತಮ್ಮ ಕಥೆಯನ್ನು ಜಗತ್ತಿಗೆ ತಲುಪಿಸುವ ಶಕ್ತಿ ಇದೆಯೋ, ಅವರ ಚಿತ್ರಣವೇ ಹೆಚ್ಚು ಪ್ರಭಾವ ಬೀರುತ್ತದೆ.

ಪಾಶ್ಚಾತ್ಯ ಮಾಧ್ಯಮ ಸಂಸ್ಥೆಗಳು ದಶಕಗಳಿಂದ ಜಾಗತಿಕ ಮನೋಭಾವವನ್ನು ರೂಪಿಸುತ್ತಿವೆ. ಪರಿಣಾಮವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳ ಬಗ್ಗೆ ಹಲವಾರು ಬಾರಿ ಏಕಪಕ್ಷೀಯ ದೃಷ್ಟಿಕೋನ ನಿರ್ಮಾಣವಾಗುತ್ತದೆ. ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಧಾರ್ಮಿಕ ಸ್ವಾತಂತ್ರ್ಯ ಇಲ್ಲ ಎಂದು ಪುಂಗಿ ಊದುವವರು ಹೇರಳ. ಆದರೆ ಇದೇ ಭಾರತದಲ್ಲಿ ಮಸೀದಿಗಳು, ಚರ್ಚುಗಳು, ಗುರುದ್ವಾರಗಳು, ದೇವಾಲಯಗಳು ಒಂದೇ ನಗರದಲ್ಲಿ ಸಹಜವಾಗಿ ಕಾರ್ಯ ನಿರ್ವಹಿಸುತ್ತವೆ.

ಅಲ್ಪಸಂಖ್ಯಾತ ಸಮುದಾಯದ ಜನರು ರಾಜಕೀಯ, ಸಿನಿಮಾ, ಕ್ರೀಡೆ, ನ್ಯಾಯಾಂಗ, ಉದ್ಯಮ- ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಮುಖ ಸ್ಥಾನದಲ್ಲಿದ್ದಾರೆ. ಭಾರತದಲ್ಲಿ ಸಮಸ್ಯೆಗಳಿಲ್ಲ ಎಂದು ಹೇಳುವುದು ತಪ್ಪು; ಆದರೆ ಭಾರತದಲ್ಲಿ ಸ್ವಾತಂತ್ರ್ಯವೇ ಇಲ್ಲ ಎನ್ನುವುದೂ ವಾಸ್ತವಿಕತೆಯಿಂದ ಬಹು ದೂರ. ಇಂದಿನ ಜಗತ್ತಿನಲ್ಲಿ ದೃಷ್ಟಿಕೋನವೇ ದೊಡ್ಡ ಶಕ್ತಿ. ಜಗತ್ತು ಒಂದು ದೇಶವನ್ನು ಹೇಗೆ ನೋಡುತ್ತದೆ ಎಂಬುದೇ ಅದರ ರಾಜತಾಂತ್ರಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಪ್ರಭಾವವನ್ನು ನಿರ್ಧರಿಸುತ್ತದೆ. ಆದ್ದರಿಂದ ಭಾರತ ತನ್ನದೇ ಜಾಗತಿಕ ಮಾಧ್ಯಮ ಧ್ವನಿಯನ್ನು ನಿರ್ಮಿಸಬೇಕಾದ ಅಗತ್ಯ ಈಗ ಹೆಚ್ಚಾಗಿದೆ.

Screenshot_9

ಭಾರತದ ಕಥೆಯನ್ನು ಭಾರತವೇ ಹೇಳಬೇಕು. ಭಾರತದ ಯಶಸ್ಸು, ಅದರ ಸವಾಲುಗಳು, ಅದರ ಪ್ರಜಾಪ್ರಭುತ್ವದ ಶಕ್ತಿ - ಇವೆಲ್ಲವನ್ನು ಸಮತೋಲನದಿಂದ ಜಗತ್ತಿಗೆ ತಲುಪಿಸುವ ಜಾಗತಿಕ ಭಾರತೀಯ ಮಾಧ್ಯಮ ವ್ಯವಸ್ಥೆ ನಿರ್ಮಾಣವಾಗಬೇಕಿದೆ.

ಇಲ್ಲವಾದರೆ, ಭಾರತದ ಬಗ್ಗೆ ಇತರರು ಬರೆಯುವ ಕಥೆಯೇ ಜಗತ್ತಿನ ಸತ್ಯವಾಗಿ ಉಳಿಯುತ್ತದೆ. ಜಗತ್ತು ಇಂದು ಕೇವಲ ಗಡಿಗಳಿಂದ ನಿಯಂತ್ರಿತವಾಗುತ್ತಿಲ್ಲ. ಜನರ ಮನಸ್ಸು, ಅಭಿಪ್ರಾಯ ಮತ್ತು ನಂಬಿಕೆಗಳನ್ನು ಯಾರು ರೂಪಿಸುತ್ತಾರೋ, ನಿಜವಾದ ಶಕ್ತಿ ಅವರ ಕೈಯಲ್ಲಿದೆ. ಈ ಶಕ್ತಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸುತ್ತಿರುವುದು ಅಂತರರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳು. ಭಾರತ ಇಂದು ವಿಶ್ವದ ಪ್ರಮುಖ ಆರ್ಥಿಕ ಮತ್ತು ರಾಜತಾಂತ್ರಿಕ ಶಕ್ತಿಗಳಲ್ಲಿ ಒಂದಾಗಿ ಬೆಳೆಯು ತ್ತಿದ್ದರೂ, ಜಾಗತಿಕ ಕಥನ (Global Narrative) ನಿರ್ಮಾಣದಲ್ಲಿ ಇನ್ನೂ ದುರ್ಬಲವಾಗಿದೆ.

ವಿಶ್ವದ ಜನರು ಭಾರತದ ಬಗ್ಗೆ ಏನು ಯೋಚಿಸಬೇಕು ಎಂಬುದನ್ನು ಭಾರತದ ಹೊರಗಿನ ಮಾಧ್ಯಮವೇ ನಿರ್ಧರಿಸುತ್ತದೆ. ಇದೇ ಭಾರತದ ದೊಡ್ಡ ಕೊರತೆ. ಇಂದಿನ ಜಗತ್ತಿನಲ್ಲಿ ಶಕ್ತಿ ಅಂದರೆ ಕೇವಲ ಸೇನೆ, ಆರ್ಥಿಕತೆ ಅಥವಾ ತಂತ್ರಜ್ಞಾನವಲ್ಲ; ಜನರು ಏನು ನಂಬಬೇಕು ಎಂಬುದನ್ನು ನಿರ್ಧರಿಸುವ ಸಾಮರ್ಥ್ಯವೂ ದೊಡ್ಡ ಶಕ್ತಿ. ಅದನ್ನು ಇಂದಿನ ಅಂತರರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳು ಹೊಂದಿವೆ.

ಬಿಬಿಸಿ, ಅಲ್ ಜಝೀರಾ, ಸಿಎನ್‌ಎನ್ ಮುಂತಾದ ಸಂಸ್ಥೆಗಳು ಕೇವಲ ಸುದ್ದಿಯನ್ನು ಪ್ರಸಾರ ಮಾಡುವುದಿಲ್ಲ; ಅವು ಜಾಗತಿಕ ಅಭಿಪ್ರಾಯವನ್ನು ರೂಪಿಸುತ್ತವೆ. ಯಾವ ವಿಷಯವನ್ನು ಮಾನವ ಹಕ್ಕುಗಳ ಸಮಸ್ಯೆ ಎಂದು ತೋರಿಸಬೇಕು, ಯಾವ ದೇಶವನ್ನು ಆಕ್ರಮಣಕಾರಿ ಎಂದು ಚಿತ್ರಿಸಬೇಕು, ಯಾವ ಸರ್ಕಾರವನ್ನು ಪ್ರಜಾಪ್ರಭುತ್ವದ ರಕ್ಷಕ ಎಂದು ಬಿಂಬಿಸಬೇಕು- ಇವೆಲ್ಲವೂ ಮಾಧ್ಯಮದ ಪ್ರಭಾವದಿಂದ ರೂಪುಗೊಳ್ಳುತ್ತದೆ.

ಅಮೆರಿಕ ಮಧ್ಯಪ್ರಾಚ್ಯದಲ್ಲಿ ನಡೆಸಿದ ಯುದ್ಧಗಳ ಸಮಯದಲ್ಲಿ ಪಾಶ್ಚಾತ್ಯ ಮಾಧ್ಯಮ ನೀಡಿದ ವರದಿಗಳನ್ನು ಗಮನಿಸಿದರೆ, ಜಗತ್ತಿನ ಅನೇಕ ಜನರು ಆ ಯುದ್ಧಗಳನ್ನು ಭದ್ರತಾ ಕ್ರಮ ಎಂದು ಸ್ವೀಕರಿಸಿದರು, ಬೆಂಬಲಿಸಿದರು. ಅದೇ ವೇಳೆ ಅಲ್ ಜಝೀರಾ ಅರಬ್ ಜಗತ್ತಿನ ನೋವು, ಸಾವು ಮತ್ತು ಮಾನವೀಯ ದುರಂತವನ್ನು ಹೆಚ್ಚು ಪ್ರಾಮುಖ್ಯತೆಯಿಂದ ತೋರಿಸಿತು. ಒಂದೇ ಘಟನೆ ಯನ್ನು ಎರಡು ವಿಭಿನ್ನ ಮಾಧ್ಯಮಗಳು ಎರಡು ವಿಭಿನ್ನ ಸತ್ಯಗಳಾಗಿ ಜಗತ್ತಿಗೆ ತೋರಿಸಿವೆ.

ಬಿಬಿಸಿ ಭಾರತ ಕುರಿತ ವರದಿಗಳಲ್ಲಿ ಹಲವಾರು ಬಾರಿ ವಿವಾದಕ್ಕೀಡಾಗಿದೆ. ಭಾರತದ ಸಾಮಾಜಿಕ ಸಮಸ್ಯೆಗಳು, ಧಾರ್ಮಿಕ ವಿಷಯಗಳು ಅಥವಾ ರಾಜಕೀಯ ವಿಷಯಗಳನ್ನು ಜಾಗತಿಕ ಮಟ್ಟದಲ್ಲಿ ತೀವ್ರವಾಗಿ ತೋರಿಸುವ ಮೂಲಕ, ವಿಶ್ವದ ಹಲವಾರು ಜನರು ಭಾರತದ ಬಗ್ಗೆ ಒಂದು ನಿರ್ದಿಷ್ಟ ಅಭಿಪ್ರಾಯವನ್ನು ರೂಪಿಸಿಕೊಳ್ಳುತ್ತಾರೆ.

ಒಂದು ದೇಶದ ಬಗ್ಗೆ ಹೊರಗಿನ ಜನರ ಮನಸ್ಸಿನಲ್ಲಿ ಮೂಡುವ ಚಿತ್ರಣವನ್ನು ಮಾಧ್ಯಮವೇ ಬಹುಮಟ್ಟಿಗೆ ನಿರ್ಧರಿಸುತ್ತದೆ. ಇದೇ ಪ್ರಭಾವವನ್ನು ಭಾರತದ ಮೇಲೂ ಕಾಣಬಹುದು. ಭಾರತ ದಲ್ಲಿ ಒಂದು ನಕಾರಾತ್ಮಕ ಘಟನೆ ನಡೆದರೆ ಅದು ಜಾಗತಿಕ ಶೀರ್ಷಿಕೆ ಆಗುತ್ತದೆ. ಆದರೆ ಭಾರತದ ಯಶಸ್ಸುಗಳು- ಡಿಜಿಟಲ್ ಕ್ರಾಂತಿ, ಬಡತನ ನಿವಾರಣೆ, ಬೃಹತ್ ಪ್ರಜಾಪ್ರಭುತ್ವ ವ್ಯವಸ್ಥೆ, ಸ್ಟಾರ್ಟಪ್ ಬೆಳವಣಿಗೆ, ಬಾಹ್ಯಾಕಾಶ ಸಾಧನೆಗಳು- ಇವುಗಳಿಗೆ ಅಷ್ಟೇ ಮಟ್ಟದ ಜಾಗತಿಕ ಪ್ರಚಾರ ಸಿಗುವುದಿಲ್ಲ.

ಇತ್ತೀಚೆಗೆ ನಾರ್ವೆಯಲ್ಲಿ ನಡೆದ ಘಟನೆಯು ಮತ್ತೊಮ್ಮೆ ಈ ವಾಸ್ತವವನ್ನು ನೆನಪಿಸಿತು. ವಿದೇಶಿ ಪತ್ರಕರ್ತರು ಭಾರತದ ಬಗ್ಗೆ ಪ್ರಶ್ನೆ ಮಾಡುವ ರೀತಿಯ ಹಲವಾರು ಬಾರಿ ಪೂರ್ವ ನಿರ್ಧರಿತ ದೃಷ್ಟಿಕೋನ ಗೋಚರಿಸುತ್ತದೆ. ಭಾರತದ ಜಟಿಲ ವಾಸ್ತವಿಕತೆಯನ್ನು ಅರ್ಥ ಮಾಡಿಕೊಳ್ಳುವು ದಕ್ಕಿಂತ, ಪೂರ್ವಗ್ರಹದ ಆಧಾರದ ಮೇಲೆ ಪ್ರಶ್ನೆ ಕೇಳುವ ಪ್ರವೃತ್ತಿ ಕಂಡುಬರುತ್ತದೆ.

ಕಾರಣ ಒಂದೇ- ಭಾರತದ ಪರವಾಗಿ ಸಮತೋಲನದ ಜಾಗತಿಕ ಧ್ವನಿ ಇನ್ನೂ ಬಲವಾಗಿಲ್ಲ. ಚೀನಾ ಈ ವಿಷಯವನ್ನು ಬಹಳ ಹಿಂದೆಯೇ ಅರ್ಥಮಾಡಿಕೊಂಡಿತ್ತು. ಅದಕ್ಕಾಗಿ ಅದು ಜಾಗತಿಕ ಮಾಧ್ಯಮ, ಡಿಜಿಟಲ್ ಪ್ರಚಾರ ಮತ್ತು ಅಂತರರಾಷ್ಟ್ರೀಯ ಮಾಹಿತಿ ಜಾಲಗಳಲ್ಲಿ ದೊಡ್ಡ ಮಟ್ಟದ ಹೂಡಿಕೆ ಮಾಡಿತು. ಪಾಶ್ಚಾತ್ಯ ರಾಷ್ಟ್ರಗಳು ದಶಕಗಳಿಂದ ತಮ್ಮ ಕಥನವನ್ನು ಜಗತ್ತಿಗೆ ತಲುಪಿಸು ತ್ತಿವೆ. ಆದರೆ ಭಾರತ ಇನ್ನೂ ತನ್ನ ಬಗ್ಗೆ ಇತರರು ಹೇಳುವ ಕಥೆಯನ್ನು ಕೇಳುತ್ತಲೇ ಇದೆ.

ಭಾರತಕ್ಕೆ ಈಗ ಅಗತ್ಯವಿರುವುದು ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಸ್ವತಂತ್ರ ಮತ್ತು ವೃತ್ತಿಪರ ಅಂತರರಾಷ್ಟ್ರೀಯ ಮಾಧ್ಯಮ ವ್ಯವಸ್ಥೆ. ವಿಶ್ವದ ವಿವಿಧ ಭಾಗಗಳಲ್ಲಿ ಅತ್ಯುತ್ತಮ ಭಾರತೀಯ ಹಾಗೂ ಅಂತರರಾಷ್ಟ್ರೀಯ ಪತ್ರಕರ್ತರನ್ನು ನೇಮಿಸಿ, ಭಾರತದ ನಿಜವಾದ ಧ್ವನಿ ಯನ್ನು ಜಗತ್ತಿಗೆ ತಲುಪಿಸಬೇಕು. ಇದು ಸರ್ಕಾರದ ಪ್ರಚಾರ ಯಂತ್ರವಾಗಬಾರದು; ಸತ್ಯವನ್ನು ಭಾರತದ ದೃಷ್ಟಿಕೋನದಿಂದ ಸಮತೋಲನವಾಗಿ ಜಗತ್ತಿಗೆ ಪರಿಚಯಿಸುವ ವೇದಿಕೆಯಾಗಬೇಕು.

ಇಂದು ಯುದ್ಧಗಳು ಕೇವಲ ಗಡಿಗಳಲ್ಲಿ ನಡೆಯುವುದಿಲ್ಲ. ಅವು ಕ್ಯಾಮೆರಾ ಮುಂದೆ, ಸುದ್ದಿಯ ಶೀರ್ಷಿಕೆಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿವೆ. ಜಗತ್ತಿನ ಮನಸ್ಸನ್ನು ಗೆಲ್ಲುವ ರಾಷ್ಟ್ರವೇ ಭವಿಷ್ಯವನ್ನು ರೂಪಿಸುತ್ತದೆ. ಚೀನಾ ತನ್ನ ಜಾಗತಿಕ ಪ್ರಭಾವಕ್ಕಾಗಿ ದೊಡ್ಡ ಮಟ್ಟದಲ್ಲಿ ರಾಜ್ಯ ಬೆಂಬಲಿತ ಮಾಧ್ಯಮ ವ್ಯವಸ್ಥೆಯನ್ನು ನಿರ್ಮಿಸಿದೆ.

ಪಾಶ್ಚಾತ್ಯ ರಾಷ್ಟ್ರಗಳು ದಶಕಗಳ ಹಿಂದೆಯೇ ಜಾಗತಿಕ ಮಾಧ್ಯಮ ಜಾಲಗಳನ್ನು ನಿರ್ಮಿಸಿ ಕೊಂಡಿವೆ. ಆದರೆ ಭಾರತ ಇನ್ನೂ ಸ್ಥಳೀಯ ಮಾಧ್ಯಮ ಚರ್ಚೆಗಳ ಸೀಮಿತವಾಗಿದೆ. ಭಾರತಕ್ಕೆ ಈಗ ಅಗತ್ಯವಿರುವುದು ಒಂದು ಬಲಿಷ್ಠ ಜಾಗತಿಕ ಭಾರತೀಯ ಮಾಧ್ಯಮ ಜಾಲ. ವಿಶ್ವದ ಪ್ರಮುಖ ನಗರಗಳಲ್ಲಿ ಭಾರತದ ಪರವಾಗಿ ನಿಂತು ಕೆಲಸ ಮಾಡುವ ಅತ್ಯುತ್ತಮ ಪತ್ರಕರ್ತರು, ವಿಶ್ಲೇಷಕರು, ಸಂಶೋಧಕರು ಮತ್ತು ಮಾಧ್ಯಮ ತಜ್ಞರನ್ನು ನೇಮಿಸಬೇಕು. ಅವರು ಕೇವಲ ಸರ್ಕಾರದ ಪರವಾಗಿ ಮಾತಾಡುವವರಾಗಬಾರದು; ಭಾರತದ ವಾಸ್ತವಿಕತೆಯನ್ನು ಸಮತೋಲನದಿಂದ, ವೃತ್ತಿಪರ ರೀತಿಯಲ್ಲಿ ಜಗತ್ತಿಗೆ ತಲುಪಿಸುವವರಾಗಿರಬೇಕು.

ಉದಾಹರಣೆಗೆ, ಭಾರತದಲ್ಲಿ ವಿeನ, ಸ್ಟಾರ್ಟಪ್, ಬಡತನ ನಿವಾರಣೆ, ಡಿಜಿಟಲ್ ಕ್ರಾಂತಿ, ಮಹಿಳಾ ನಾಯಕತ್ವ, ಗ್ರಾಮೀಣ ಅಭಿವೃದ್ಧಿ ಮತ್ತು ಪ್ರಜಾಪ್ರಭುತ್ವದ ಯಶಸ್ಸುಗಳ ಬಗ್ಗೆ ಜಗತ್ತಿಗೆ ಎಷ್ಟು ಮಾಹಿತಿ ತಲುಪುತ್ತಿದೆ? ಬಹಳ ಕಡಿಮೆ. ಆದರೆ ಯಾವುದೇ ವಿವಾದಾತ್ಮಕ ಘಟನೆ ನಡೆದರೆ, ಅದು ಜಾಗತಿಕ ಶೀರ್ಷಿಕೆ ಆಗುತ್ತದೆ.

ಇದೇ ಕಥನದ ಯುದ್ಧ. ಇಂದು ಮಾಹಿತಿ ಯುಗದಲ್ಲಿ ಜನಾಭಿಪ್ರಾಯವೇ ಶಕ್ತಿ. ಜನರ ಮನಸ್ಸಿನಲ್ಲಿ ಯಾವ ಚಿತ್ರಣ ನಿರ್ಮಾಣವಾಗುತ್ತದೆ ಎಂಬುದೇ ಶಕ್ತಿ. ಜಗತ್ತಿನ ಜನರು ಭಾರತದ ಬಗ್ಗೆ ಏನು ಯೋಚಿಸಬೇಕು ಎಂಬುದನ್ನು ಭಾರತವೇ ನಿರ್ಧರಿಸಬೇಕು. ಇಲ್ಲವಾದರೆ, ಇತರ ರಾಷ್ಟ್ರಗಳ ಮಾಧ್ಯಮವೇ ಭಾರತದ ಕಥೆಯನ್ನು ತಮ್ಮ ದೃಷ್ಟಿಕೋನದಿಂದ ಬರೆಯುತ್ತವೆ.

ಭಾರತಕ್ಕೆ ಈಗ ಬೇಕಾಗಿರುವುದು ಕೇವಲ ಆರ್ಥಿಕ ಶಕ್ತಿ ಅಲ್ಲ; ಜಾಗತಿಕ ಕಥನವನ್ನು ರೂಪಿಸುವ ಮಾಧ್ಯಮ ಶಕ್ತಿ. ಭಾರತ ತನ್ನ ಧ್ವನಿಯನ್ನು ಜಗತ್ತಿಗೆ ತಲುಪಿಸದಿದ್ದರೆ, ಇತರರ ಧ್ವನಿಯೇ ಭಾರತದ ಗುರುತಾಗಿ ಉಳಿಯುತ್ತದೆ. ಭಾರತ ತನ್ನ ಕಥೆಯನ್ನು ತಾನೇ ಹೇಳದಿದ್ದರೆ, ಇತರರು ಬರೆದ ಕಥೆಯೇ ಭಾರತದ ಇತಿಹಾಸವಾಗಿ ಉಳಿಯುತ್ತದೆ.