K Shashikumar Column: ಪೀಳಿಗೆಯ ಪರಿ ಇಂತಿದೆ ನೋಡಾ...
1945ರಲ್ಲಿ, ಎರಡನೇ ಜಾಗತಿಕ ಯುದ್ಧದ ನಂತರ, ಭವಿಷ್ಯದ ಭರವಸೆಯಿಂದಾಗಿ ಪ್ರಪಂಚ ದಾದ್ಯಂತ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂತು. ಈ ಪೀಳಿಗೆಯವರನ್ನು, ಅಂದರೆ 1946 ರಿಂದ 1964ರವರೆಗೆ ಜನಿಸಿದ ಮಕ್ಕಳನ್ನು ‘ಬೇಬಿ ಬೂಮರ್ಸ್’ ಎನ್ನುತ್ತಾರೆ. 20ನೇ ಶತಮಾನದ ಮಧ್ಯಭಾಗದಲ್ಲಿ ಜನಿಸಿದ ಇವರಲ್ಲಿನ ಕಿರಿಯರು ಮತ್ತು ಹಿರಿಯರು 2025ರ ವೇಳೆಗೆ ಕ್ರಮವಾಗಿ 61 ಮತ್ತು 79 ವರ್ಷ ವಯಸ್ಸಿನವ ರಾಗಿರುತ್ತಾರೆ


ವಿಶ್ಲೇಷಣೆ
ಕೆ.ಶಶಿಕುಮಾರ್
ನಾವು ಇಷ್ಟು ವರ್ಷಗಳ ಕಾಲ, ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಮೊಬೈಲ್ ನೆಟ್ ವರ್ಕ್ ಗಳಲ್ಲಿ 2ಜಿ, 3ಜಿ, 4ಜಿ ಮತ್ತು 5ಜಿಗಳನ್ನು ನೋಡಿದ್ದೇವೆ, ಅವುಗಳ ಉಪಯೋಗ ಪಡೆದಿದ್ದೇವೆ. ಮನುಷ್ಯ ರಲ್ಲಿಯೂ ಕಾಲಕ್ಕೆ ತಕ್ಕಂತೆ ಹೊಸ ಪೀಳಿಗೆಗಳು/ಜನರೇಷನ್‌ಗಳು ಇದ್ದುದು/ಇರುವುದು ಬಹಳಷ್ಟು ಮಂದಿಗೆ ಗೊತ್ತಿಲ್ಲದಿರಬಹುದು. 2025ರ ಜನವರಿ 1 ರಿಂದ 2039ರವರೆಗೂ ಹುಟ್ಟುವ ಮಕ್ಕಳನ್ನು ‘ಜನರೇಷನ್ ಬೀಟಾ’ ಎಂದು ಕರೆಯುತ್ತಾರೆ. ಈ ಪ್ರಭೇದದ ಕುರಿತು ತಿಳಿದುಕೊಳ್ಳುವುದಕ್ಕೂ ಮುಂಚೆ ಮಿಕ್ಕ ಪೀಳಿಗೆಗಳ ಕುರಿತು ಅರಿಯಬೇಕಾದ್ದು ಅವಶ್ಯಕ. 1925ರಿಂದ 1945ರ ವರ್ಷದವರೆಗೆ ಜನಿಸಿದ ಮಕ್ಕಳನ್ನು ‘ಬಿಲ್ಡರ್ ಜನರೇಷನ್’ ಅಥವಾ ‘ಸೈಲೆಂಟ್ ಜನರೇಷನ್’ ಎನ್ನುತ್ತಾರೆ.
ಏಕೆಂದರೆ, ಎರಡನೇ ಜಾಗತಿಕ ಯುದ್ಧದ ನಂತರ ತಂತಮ್ಮ ದೇಶಗಳ ಮರುನಿರ್ಮಾಣದಲ್ಲಿ ಈ ಪೀಳಿಗೆಯವರು ಪ್ರಮುಖ ಪಾತ್ರವನ್ನು ವಹಿಸಿದ್ದರು. ಅತ್ಯಂತ ಸಂಪ್ರದಾಯಬದ್ಧರಾಗಿದ್ದ ಈ ಪೀಳಿಗೆಯವರು, ಕಠಿಣ ಪರಿಶ್ರಮದ ಕೆಲಸಗಳನ್ನು ಮಾಡುವವರಾಗಿದ್ದರು ಮತ್ತು ಇವರಲ್ಲಿನ ಪಾರಸ್ಪರಿಕ ಬಾಂಧವ್ಯದ ಕೌಶಲ ಅತ್ಯುತ್ತಮವಾಗಿತ್ತು. ಮೊದಲನೇ ಮತ್ತು ಎರಡನೇ ಮಹಾ ಯುದ್ಧಗಳನ್ನು ಕಂಡ ಈ ಪೀಳಿಗೆಯವರು, 1929ರ ಮಹಾ ಆರ್ಥಿಕ ಬಿಕ್ಕಟ್ಟಿನ ಕಷ್ಟಗಳನ್ನು ಅನುಭವಿಸಿದರು ಮತ್ತು ಆಟೋಮೊಬೈಲ್ ತಂತ್ರಜ್ಞಾನವನನ್ನು ಜಗತ್ತಿಗೆ ಪರಿಚಯಿಸಿದರು.
ಇದನ್ನೂ ಓದಿ: Shashikumar K Column: ಭಾರತ ಜ್ಞಾನದ ಹಬ್ ಆಗಲಿದೆಯೇ ?
1945ರಲ್ಲಿ, ಎರಡನೇ ಜಾಗತಿಕ ಯುದ್ಧದ ನಂತರ, ಭವಿಷ್ಯದ ಭರವಸೆಯಿಂದಾಗಿ ಪ್ರಪಂಚ ದಾದ್ಯಂತ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂತು. ಈ ಪೀಳಿಗೆಯವರನ್ನು, ಅಂದರೆ 1946 ರಿಂದ 1964ರವರೆಗೆ ಜನಿಸಿದ ಮಕ್ಕಳನ್ನು ‘ಬೇಬಿ ಬೂಮರ್ಸ್’ ಎನ್ನುತ್ತಾರೆ. 20ನೇ ಶತಮಾನದ ಮಧ್ಯಭಾಗದಲ್ಲಿ ಜನಿಸಿದ ಇವರಲ್ಲಿನ ಕಿರಿಯರು ಮತ್ತು ಹಿರಿಯರು 2025ರ ವೇಳೆಗೆ ಕ್ರಮವಾಗಿ 61 ಮತ್ತು 79 ವರ್ಷ ವಯಸ್ಸಿನವರಾಗಿರುತ್ತಾರೆ.
ಹೆಚ್ಚಿನ ‘ಬೇಬಿ ಬೂಮರ್ ಗಳು’ ಶ್ರೇಷ್ಠ ಪೀಳಿಗೆಯ ಮಕ್ಕಳಾಗಿರುತ್ತಾರೆ. ಇವರ ಅವಧಿಯಲ್ಲಿ, ಅಂದರೆ 1950-60ರ ದಶಕಗಳಲ್ಲಿ, ಜಗತ್ತಿನ ಶೀತಲಸಮರದ ಸೈದ್ಧಾಂತಿಕ ಮುಖಾಮುಖಿಯ ಭಾಗವಾಗಿ ಹಾಗೂ ಅಂತರ್ಯುದ್ಧದ ಅವಧಿಯ ಮುಂದುವರಿಕೆಯಾಗಿ, ಆರ್ಥಿಕ ಸಮೃದ್ಧಿ ಮತ್ತು ತ್ವರಿತ ತಾಂತ್ರಿಕ ಪ್ರಗತಿಯು ಸಾಕ್ಷಿಯಾಗಿತ್ತು. ಈ ಪೀಳಿಗೆಯವರು ಮುಖ್ಯವಾಗಿ ವಾಕ್ಚಾತುರ್ಯದ ಸೃಷ್ಟಿಗೆ ಹೆಸರಾದರು.
ಚೀನಾದಲ್ಲಿ ಬೂಮರ್‌ಗಳು ಸಾಂಸ್ಕೃತಿಕ ಕ್ರಾಂತಿಯ ಮೂಲಕ ಬದುಕಿದ್ದರು ಹಾಗೂ ವಯಸ್ಕ ರಾಗಿದ್ದಾಗ ‘ಒಂದು ಕುಟುಂಬಕ್ಕೆ ಒಂದು ಮಗು’ ನೀತಿಗೆ ಒಳಪಟ್ಟರು. ಈ ಬೆಳವಣಿಗೆಗಳು ಬೂಮರ್ ಗಳ ಗ್ರಹಿಕೆಗಳ ಮೇಲೆ ಪ್ರಭಾವ ಬೀರಿದವು. ಯುರೋಪ್ ಮತ್ತು ಉತ್ತರ ಅಮೆರಿಕದಲ್ಲಿ, ಎರಡನೇ ಜಾಗತಿಕ ಯುದ್ಧದ ನಂತರ ವಸತಿ ಮತ್ತು ಶಿಕ್ಷಣ ವಲಯದಲ್ಲಿ ಹೆಚ್ಚಿದ ಶ್ರೀಮಂತಿಕೆ ಹಾಗೂ ವ್ಯಾಪಕ ಸರಕಾರಿ ಸಬ್ಸಿಡಿಗಳ ಪರಿಣಾಮವಾಗಿ ಗಣನೀಯ ಸಂಖ್ಯೆಯ ಬೂಮರ್‌ಗಳು ಪ್ರಬುದ್ಧತೆ ಯನ್ನು ಮೆರೆದರು ಮತ್ತು ಪ್ರಪಂಚವು ಕಾಲಾನಂತರದಲ್ಲಿ ಸುಧಾರಿಸುತ್ತದೆ ಎಂದು ಪ್ರಾಮಾಣಿಕ ವಾಗಿ ನಿರೀಕ್ಷಿಸುತ್ತಾ ಬೆಳೆದರು.
1964ರಿಂದ 1979ರವರೆಗೆ ಜನಿಸಿದವರಿಗೆ ‘ಜನರೇಷನ್ ಎಕ್ಸ್’ (ಜೆನ್-ಎಕ್ಸ್) ಎನ್ನುತ್ತಾರೆ. ಅಲ್ಲಿಯ ವರೆಗೂ ಇದ್ದಂಥ ಸಂಪ್ರದಾಯಗಳು ಮತ್ತು ವ್ಯವಸ್ಥೆಗಳನ್ನು ಎದುರಿಸಿ ಇವರು ಪ್ರಶ್ನಿಸುತ್ತಿದ್ದ ಕಾರಣ ಈ ಪರಿಭಾಷೆ ಚಾಲ್ತಿಗೆ ಬಂತು. 2019ರ ಹೊತ್ತಿಗೆ, ಅಮೆರಿಕದಲ್ಲಿ 65.2 ಮಿಲಿಯನ್ ‘ಜನರೇ ಷನ್ ಎಕ್ಸ್‌ಗಳು’ ಇದ್ದಾರೆ ಎಂಬ ಮಾಹಿತಿ ಲಭಿಸಿದೆ; ಇವರಲ್ಲಿ ಹೆಚ್ಚಿನವರು ‘ಸೈಲೆಂಟ್ ಜನರೇಷನ್’ ಮತ್ತು ಆರಂಭಿಕ ‘ಬೇಬಿ ಬೂಮರ್’ಗಳ ಮಕ್ಕಳು.
ರಾಜಕೀಯವಾಗಿ ಹೇಳುವುದಾದರೆ, ‘ಜನರೇಷನ್ ಎಕ್ಸ್’ ಪೀಳಿಗೆಯವರು ಸೋವಿಯತ್ ಒಕ್ಕೂಟ, ಮಧ್ಯ ಹಾಗೂ ಪೂರ್ವ ಯುರೋಪಿನ ದೇಶಗಳಲ್ಲಿ ಕಮ್ಯುನಿಸಂನ ಕೊನೆಯ ದಿನಗಳನ್ನು ಅನು ಭವಿಸಿದರು, ಈ ಪ್ರದೇಶಗಳಲ್ಲಿ ಬಂಡವಾಳಶಾಹಿ ಪರಿವರ್ತನೆಗೆ ಸಾಕ್ಷಿಯಾದರು. ಪಾಶ್ಚಿಮಾತ್ಯ ಜಗತ್ತಿನ ಹೆಚ್ಚಿನ ಭಾಗಗಳಲ್ಲಿ ಸದರಿ ಅವಧಿಯನ್ನು, ಸಾಂಪ್ರದಾಯಿಕ ಮತ್ತು ಮುಕ್ತ ಮಾರುಕಟ್ಟೆ ಅರ್ಥಶಾಸ್ತ್ರದ ಪ್ರಾಬಲ್ಯದಿಂದ ವ್ಯಾಖ್ಯಾನಿಸಲಾಗಿದೆ.
1980 ಮತ್ತು 1995ರ ನಡುವೆ ಹುಟ್ಟಿದವರನ್ನು ‘ಜನರೇಷನ್ ವೈ’ ಅಥವಾ ‘ಮಿಲೇನಿಯಲ್ಸ್’ ಎನ್ನುತ್ತಾರೆ. ‘ಮಿಲೇನಿಯಲ್ಸ್’ ಎನ್ನಲು ಕಾರಣ- ಇವರು ತಮ್ಮ ಜೀವನದ ಪ್ರಮುಖ ಘಟ್ಟಗಳನ್ನು 20ನೇ ಶತಮಾನ ಮುಗಿದು 21ನೇ ಶತಮಾನದಲ್ಲಿ ಅನುಭವಿಸುತ್ತಿದ್ದಾರೆ. ಇಂಟರ್‌ನೆಟ್ ಅನ್ನು ಬಳಸಿದ ಮೊದಲ ಪೀಳಿಗೆಯಾಗಿ ‘ಮಿಲೇನಿಯಲ್ಸ್’ ಅನ್ನು ಜಾಗತಿಕವಾಗಿ ಗುರುತಿಸಲಾಗಿದೆ.
ಅಂದರೆ, ಇಂಟರ್‌ನೆಟ್, ಮೊಬೈಲ್ ಸಾಧನಗಳು, ಸಾಮಾಜಿಕ ಮಾಧ್ಯಮ ಮತ್ತು ತಂತ್ರಜ್ಞಾನದ ಹೆಚ್ಚಿನ ಬಳಕೆ ಹಾಗೂ ಪರಿಚಿತತೆಯೊಂದಿಗೆ ಈ ಪೀಳಿಗೆಯವರನ್ನು ಗುರುತಿಸಲಾಗುತ್ತದೆ. ಪ್ರಪಂಚ ದಾದ್ಯಂತದ ಮಿಲೇನಿಯಲ್‌ಗಳು ತಮ್ಮ ಉದ್ಯೋಗ ಜೀವನವನ್ನು ಪ್ರಾರಂಭಿಸಿದಾಗಿನಿಂದ ಗಮನಾರ್ಹ ಆರ್ಥಿಕ ಅಡಚಣೆಗಳನ್ನು ಅನುಭವಿಸಿದ್ದಾರೆ. ಇವರಲ್ಲನೇಕರು, ಮಹಾನ್ ಆರ್ಥಿಕ ಹಿಂಜರಿತ ಮತ್ತು ಕೋವಿಡ್-೧೯ರ ಹಿಂಜರಿತದ ನಂತರ, ಹೆಚ್ಚಿನ ಮಟ್ಟದ ನಿರುದ್ಯೋಗ ಸಮಸ್ಯೆ ಯನ್ನು ಅನುಭವಿಸುತ್ತಿದ್ದಾರೆ.
1996ರಿಂದ 2010ರ ನಡುವೆ ಜನಿಸಿದವರನ್ನು ‘ಜನರೇಷನ್ ಝೆಡ್’ ಅಥವಾ ‘ಜೂಮರ್ಸ್’ ಎನ್ನು ತ್ತಾರೆ. ಪೂರ್ತಿಯಾಗಿ ಡಿಜಿಟಲ್ ಪ್ರಪಂಚದಲ್ಲಿಯೇ ಬೆಳೆದ ಮೊದಲ ಪೀಳಿಗೆ ಇದಾಗಿದ್ದು, ಹಿಂದಿನ ತಲೆಮಾರುಗಳಿಗಿಂತ ನಿಧಾನಗತಿಯಲ್ಲಿ ಇದು ಬದುಕುತ್ತಿದೆ. ಈ ಪೀಳಿಗೆಯವರು ಶಾಲೆ ಮತ್ತು ಉದ್ಯೋಗದ ನಿರೀಕ್ಷೆಗಳ ಮೇಲೆ ಹೆಚ್ಚು ಗಮನಹರಿಸಿರುವವರಾಗಿದ್ದು, ಈ ಗುಂಪಿನವರಲ್ಲಿ ಅಲರ್ಜಿಯ ಹರಡುವಿಕೆ ಮತ್ತು ನಿದ್ರಾಹೀನತೆಯು ಹೆಚ್ಚಾಗಿ ವರದಿಯಾಗಿದೆ.
ಅನೇಕ ದೇಶಗಳಲ್ಲಿ, ಹಳೆಯ ತಲೆಮಾರಿನವರಿಗೆ ಹೋಲಿಸಿದಾಗ ಈ ಪೀಳಿಗೆಯವರು ಮನೋ ವೈದ್ಯಕೀಯ ಅಸ್ವಸ್ಥತೆಗಳಿಂದ ಬಳಲುತ್ತಿರುವ ಸಾಧ್ಯತೆಗಳು ಹೆಚ್ಚಿವೆ. 2010ರಿಂದ 2024ರ ಡಿಸೆಂಬರ್ 31ರ ನಡುವೆ ಜನಿಸಿದ ಪೀಳಿಗೆಯನ್ನು ‘ಜನರೇಷನ್ ಆಲಾ’ ಎನ್ನುವರು. ವಿಶ್ವಾದ್ಯಂತ ಫಲವತ್ತತೆಯ ದರಗಳು ಕುಸಿಯುತ್ತಿರುವ ಸಮಯದಲ್ಲಿ ‘ಆಲಾ ಪೀಳಿಗೆಯವರು’ ಜನಿಸಿದ್ದು; ಇವರಲ್ಲನೇಕರು ಚಿಕ್ಕ ಮಕ್ಕಳಾಗಿದ್ದಾಗ ಕೋವಿಡ್-19 ಸಾಂಕ್ರಾಮಿಕ ರೋಗದ ಭೀಕರ ಪರಿಣಾಮ ಗಳನ್ನು ಅನುಭವಿಸಿದ್ದಾರೆ.
ಇಲೆಕ್ಟ್ರಾನಿಕ್ ತಂತ್ರಜ್ಞಾನ, ಸಾಮಾಜಿಕ ನೆಟ್‌ವರ್ಕ್‌ಗಳು ಮತ್ತು ಸ್ಟ್ರೀಮಿಂಗ್ ಸೇವೆಗಳಿಂದಾಗಿ ಈ ಪೀಳಿಗೆಯವರು ಪ್ರಾಬಲ್ಯ ಹೊಂದಿದ್ದಾರೆ. ಆದರೆ, ಸಾಂಪ್ರದಾಯಿಕ ದೂರದರ್ಶನ ಮಾಧ್ಯಮದ ವೀಕ್ಷಣೆಯಲ್ಲಿ ಈ ಪೀಳಿಗೆಯವರ ಆಸಕ್ತಿ ಕುಸಿಯುತ್ತಿದೆ! ತರಗತಿಯ ಕೊಠಡಿಗಳು ಮತ್ತು ಜೀವನದ ಇತರ ಮಗ್ಗುಲುಗಳಲ್ಲಿ ತಂತ್ರಜ್ಞಾನದ ಬಳಕೆಯಲ್ಲಿ ಕಂಡುಬಂದಿರುವ ಬದಲಾವಣೆಗಳು, ಹಿಂದಿನ ತಲೆಮಾರುಗಳಿಗೆ ಹೋಲಿಸಿದರೆ ಈ ಪೀಳಿಗೆಯವರಲ್ಲಿ ಹೆಚ್ಚಾಗಿದೆ.
ಇನ್ನು, ‘ಜನರೇಷನ್ ಬೀಟಾ’ ಇತ್ತೀಚೆಗಷ್ಟೇ ಜನ್ಮತಾಳಿದ ಪೀಳಿಗೆಯಾಗಿದೆ. ಭಾರತದಲ್ಲಿ ಜನಿಸಿದ ‘ಬೀಟಾ ಪೀಳಿಗೆ’ಯ ಮೊದಲ ಮಗುವಿನ ಹೆಸರು ‘ಫ್ರಾಂಕಿ’. 2025ರ ಜನವರಿ 1ರಂದು ಮಿಜೋರಾಂ ರಾಜಧಾನಿ ಐಜ್ವಾಲ್‌ನಲ್ಲಿ ಈ ಮಗು ಜನಿಸಿತು! ‘ಬೀಟಾ’ ಪೀಳಿಗೆಯ ಮಕ್ಕಳು ‘ಮುಂಬರಿಕೆಯ ಕೃತಕ ಬುದ್ಧಿಮತ್ತೆ’ (Advanced Artificial Intelligence) ಅಪ್ಲಿಕೇಷನ್‌ಗಳ ಮಧ್ಯೆ ಬೆಳೆಯಲಿದ್ದಾರೆ. ‘ಜನರೇಷನ್ ಆಲಾ’ ಎಂಬ ಹೆಸರು ನೀಡಿದ ಮಾರ್ಕ್ ಮೆಕ್ ಕ್ರಿಂಡಲ್‌ರವರೇ ‘ಜನರೇಷನ್ ಬೀಟಾ’ ಹೆಸರನ್ನೂ ನೀಡಿದ್ದಾರೆ.
ಇವರ ಪ್ರಕಾರ, 2035ರ ವೇಳೆಗೆ ಈ ಪೀಳಿಗೆಯವರ ಸಂಖ್ಯೆಯು ವಿಶ್ವದ ಜನಸಂಖ್ಯೆಯಲ್ಲಿ ಶೇ.16 ರಷ್ಟಿರುತ್ತದೆ. ಈ ಪೀಳಿಗೆ ಯವರ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ/ಅಧ್ಯಯನ ನಡೆಸುತ್ತಿರು ವವರಲ್ಲಿ ಜೇಸನ್ ಡೋರ್ಸೆ ಮುಖ್ಯರು. ಪ್ರತಿ 15-20 ವರ್ಷಗಳಿಗೊಮ್ಮೆ ಹೀಗೆ ಪೀಳಿಗೆಗಳು ಬದಲಾ ಗಲಿದ್ದು, ಪ್ರತಿ ಪೀಳಿಗೆಯಲ್ಲೂ ಹೊಸ ಹೊಸ ನೋಟಗಳು/ಪದ್ಧತಿಗಳು ಕಾಣಬರಲಿವೆ ಮತ್ತು ತಂತ್ರಜ್ಞಾನದಲ್ಲಿ ಬದಲಾವಣೆಯಾಗಲಿದೆ.
ಸಾಮಾಜಿಕ ಘಟನಾವಳಿಗಳ ಆಧಾರದ ಮೇಲೆ ಹೊಸ ಪೀಳಿಗೆಗಳಿಗೆ ಹೆಸರುಗಳನ್ನು ನೀಡಲಾಗು ತ್ತದೆ. ಇತ್ತೀಚೆಗಷ್ಟೇ ಅಸ್ತಿತ್ವಕ್ಕೆ ಬಂದಿರುವ ‘ಜನರೇಷನ್ ಬೀಟಾ’ ಕುರಿತು ಸಾಕಷ್ಟು ನಿರೀಕ್ಷೆಗಳಿವೆ. ಅತ್ಯಾಧುನಿಕ ತಂತ್ರಜ್ಞಾನಗಳ ನಡುವೆಯೇ ಬೆಳೆಯಲಿರುವ ಈ ಪೀಳಿಗೆಯವರು ಹಿಂದಿನ ಸಂಪ್ರ ದಾಯಗಳನ್ನು ಪಾಲಿಸುತ್ತಾರೋ ಇಲ್ಲವೋ ಎಂಬುದನ್ನು ಕುತೂಹಲದಿಂದ ಕಾದು ನೋಡು ವಂತಾಗಿದೆ.
(ಲೇಖಕರು ಹವ್ಯಾಸಿ ಬರಹಗಾರರು)