Vishweshwar Bhat Column: ಹೀಗಿದ್ದರು ಉಷಾ ಭಗತ್
ಉಷಾ ಭಗತ್ ಅವರು ನೆಹರು ಕುಟುಂಬದ ಒಡನಾಟಕ್ಕೆ ಬಂದದ್ದು 1950ರ ಆರಂಭದಲ್ಲಿ. ಇಂದಿರಾ ತಮ್ಮ ತಂದೆ ಜವಹರಲಾಲ್ ನೆಹರು ಅಧಿಕೃತ ನಿವಾಸವಾದ ತೀನ್ ಮೂರ್ತಿ ಭವನದಲ್ಲಿ ಗೃಹಕೃತ್ಯ ಮತ್ತು ಆತಿಥ್ಯದ ಜವಾಬ್ದಾರಿಗಳನ್ನು ಹೊತ್ತಿದ್ದರು. ಆ ದಿನಗಳಲ್ಲಿ ಇಂದಿರಾ ಪುತ್ರರಾದ ರಾಜೀವ್ ಗಾಂಧಿ ಮತ್ತು ಸಂಜಯ್ ಗಾಂಧಿಯವರಿಗೆ ಶಿಕ್ಷಣ ಮತ್ತು ಪಾಲನೆಯಲ್ಲಿ ನೆರವಾಗಲು ಉಷಾ ಭಗತ್ ಮನೆಗೆ ಬಂದರು
-
ಸಂಪಾದಕೀಯ ಸದ್ಯಶೋಧನೆ
ಉಷಾ ಭಗತ್ ಭಾರತದ ರಾಜಕೀಯ ಇತಿಹಾಸದ ಅತ್ಯಂತ ಪ್ರಭಾವಿ ಮತ್ತು ಶಕ್ತಿಶಾಲಿ ಪ್ರಧಾನಿ ಇಂದಿರಾ ಗಾಂಧಿಯವರ ಬದುಕಿನಲ್ಲಿ ತೆರೆಮರೆಯಲ್ಲಿದ್ದು ಅತಿ ದೀರ್ಘಕಾಲ ಸೇವೆ ಸಲ್ಲಿಸಿದ ಅಪರೂಪದ ವ್ಯಕ್ತಿ. ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಅವರು ಇಂದಿರಾ ನೆರಳಿನಂತೆ ಜೀವಿಸಿದರು. ರಾಜಕೀಯ ಅಧಿಕಾರ, ಪ್ರಚಾರ, ಪತ್ರಿಕಾ ಮಾಧ್ಯಮಗಳ ಬೆಳಕಿನಿಂದ ಸದಾ ದೂರ ವಿದ್ದ ಉಷಾ, ಪ್ರಧಾನಮಂತ್ರಿಯವರ ಆಡಳಿತಾತ್ಮಕ ಗದ್ದಲದ ಆಚೆಗಿನ ವೈಯಕ್ತಿಕ, ಸಾಂಸ್ಕೃತಿಕ ಹಾಗೂ ದೈನಂದಿನ ಜಗತ್ತನ್ನು ಕರಾರುವಾಕ್ಕಾಗಿ ಮುನ್ನಡೆಸಿದ ನಂಬಿಕಸ್ಥ ಆಧಾರಸ್ತಂಭ ವಾಗಿದ್ದರು.
ಉಷಾ ಭಗತ್ ಅವರು ನೆಹರು ಕುಟುಂಬದ ಒಡನಾಟಕ್ಕೆ ಬಂದದ್ದು 1950ರ ಆರಂಭದಲ್ಲಿ. ಇಂದಿರಾ ತಮ್ಮ ತಂದೆ ಜವಹರಲಾಲ್ ನೆಹರು ಅಧಿಕೃತ ನಿವಾಸವಾದ ತೀನ್ ಮೂರ್ತಿ ಭವನದಲ್ಲಿ ಗೃಹಕೃತ್ಯ ಮತ್ತು ಆತಿಥ್ಯದ ಜವಾಬ್ದಾರಿಗಳನ್ನು ಹೊತ್ತಿದ್ದರು. ಆ ದಿನಗಳಲ್ಲಿ ಇಂದಿರಾ ಪುತ್ರರಾದ ರಾಜೀವ್ ಗಾಂಧಿ ಮತ್ತು ಸಂಜಯ್ ಗಾಂಧಿಯವರಿಗೆ ಶಿಕ್ಷಣ ಮತ್ತು ಪಾಲನೆಯಲ್ಲಿ ನೆರವಾಗಲು ಉಷಾ ಭಗತ್ ಮನೆಗೆ ಬಂದರು. ಇವರ ಶಿಸ್ತು, ನಿಷ್ಠೆ ಮತ್ತು ಕೆಲಸದ ಬಗೆಗಿನ ಸಮರ್ಪಣಾ ಮನೋಭಾವವು ಇಂದಿರಾ ಮೆಚ್ಚುಗೆಗೆ ಪಾತ್ರವಾಯಿತು.
ಇದನ್ನೂ ಓದಿ: Vishweshwar Bhat Column: ಈಕೆ ಇಂದಿರಾ ಕೆನ್ನೆಗೆ ಬಾರಿಸಿದ್ದರು !
ಕಾಲಕ್ರಮೇಣ ಶಿಶುಪಾಲಕಿಯ ಪಾತ್ರದಿಂದ ಬೆಳೆದು ಇಂದಿರಾರ ವೈಯಕ್ತಿಕ ಕಾರ್ಯದರ್ಶಿಯಾಗಿ ಉಷಾ ಭಗತ್ ಬಡ್ತಿ ಪಡೆದರು. 1966ರಲ್ಲಿ ಇಂದಿರಾ ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ, ಅವರ ಮೇಲಿನ ಕೆಲಸದ ಹೊರೆ ಅಗಾಧವಾಗಿ ಹೆಚ್ಚಿತು. ಅಂಥ ಬಿಕ್ಕಟ್ಟಿನ ಮತ್ತು ಒತ್ತಡದ ದಿನಗಳಲ್ಲಿ ಉಷಾ ಭಗತ್ ಪ್ರಧಾನಿ ನಿವಾಸದ ಪ್ರತಿಯೊಂದು ಸಣ್ಣ-ಪುಟ್ಟ ವಿಷಯಗಳ ಉಸ್ತುವಾರಿ ವಹಿಸಿಕೊಂಡರು. ಇಂದಿರಾರ ವೈಯಕ್ತಿಕ ಕಾರ್ಯಸೂಚಿ, ಭೇಟಿ ನೀಡುವ ಗಣ್ಯರ ಪಟ್ಟಿ, ಅತಿಥಿ ಸತ್ಕಾರ ಹಾಗೂ ಕುಟುಂಬದ ಒಳಗಿನ ಆಡಳಿತವನ್ನು ಉಷಾ ಅತ್ಯಂತ ಚತುರತೆಯಿಂದ ನಿಭಾಯಿಸಿದರು.
ಇಂದಿರಾ ಗಾಂಧಿಯವರ ಅತ್ಯಂತ ಆಪ್ತವಲಯದಲ್ಲಿದ್ದರೂ ಉಷಾ ಭಗತ್ ರಾಜಕೀಯ ಹಸ್ತಕ್ಷೇಪ ಗಳಿಂದ ಸಂಪೂರ್ಣ ದೂರ ಉಳಿದಿದ್ದರು. ಪ್ರಧಾನಿ ಕಾರ್ಯಾಲಯದಲ್ಲಿ ಅನೇಕ ರಾಜಕೀಯ ಸಲಹೆಗಾರರು, ಐಎಎಸ್ ಅಧಿಕಾರಿಗಳು ಮತ್ತು ಮುಖಂಡರು ಅಧಿಕಾರಕ್ಕಾಗಿ ಪೈಪೋಟಿ ನಡೆಸುತ್ತಿದ್ದಾಗ, ಉಷಾ ಮಾತ್ರ ತಮ್ಮ ಮಿತಿಯನ್ನು ಸ್ಪಷ್ಟವಾಗಿ ಅರಿತಿದ್ದರು. ಅವರು ಕೇವಲ ಇಂದಿರಾ ಅವರ ದೈನಂದಿನ ಅಗತ್ಯಗಳು, ಆರೋಗ್ಯ, ಪ್ರಯಾಣದ ವ್ಯವಸ್ಥೆ ಹಾಗೂ ಮಾನಸಿಕ ಶಾಂತಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸುವುದರ ತೃಪ್ತಿ ಕಂಡುಕೊಂಡಿದ್ದರು. ಈ ನಿಸ್ವಾರ್ಥ ಗುಣವೇ ಅವರ ಮೇಲಿನ ಇಂದಿರಾ ಅವರ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿತು.
ಉಷಾ ಅವರು ಇಂದಿರಾರ ಸಾಂಸ್ಕೃತಿಕ ಆಸಕ್ತಿಗಳನ್ನು ಪೋಷಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಇಂದಿರಾಗೆ ಕಲೆ, ಸಾಹಿತ್ಯ, ಸಂಗೀತ, ನೃತ್ಯ, ನೇಕಾರಿಕೆ ಮತ್ತು ಪರಿಸರದ ಬಗ್ಗೆ ಅಪಾರ ಪ್ರೀತಿಯಿತ್ತು. ದೇಶ-ವಿದೇಶಗಳ ಕಲಾವಿದರು, ಸಾಹಿತಿಗಳು ಹಾಗೂ ಪರಿಸರವಾದಿಗಳನ್ನು ಪ್ರಧಾನಿ ನಿವಾಸಕ್ಕೆ ಆಹ್ವಾನಿಸು ವುದು, ಅವರೊಂದಿಗೆ ಸಂವಾದಗಳನ್ನು ಏರ್ಪಡಿಸುವುದು ಮತ್ತು ಭಾರತೀಯ ಕರಕುಶಲ ಕಲೆಗಳನ್ನು ಪ್ರೋತ್ಸಾಹಿಸುವ ಕಾರ್ಯಕ್ರಮಗಳ ಯೋಜನೆಯನ್ನು ಉಷಾ ನಿರ್ವಹಿಸು ತ್ತಿದ್ದರು.
ಇದರಿಂದಾಗಿ ಪ್ರಧಾನಿ ನಿವಾಸವು ಕೇವಲ ರಾಜಕೀಯ ಕೇಂದ್ರವಾಗದೇ ಸಾಂಸ್ಕೃತಿಕ ತಾಣವಾಗಿ ಯೂ ಹೊರಹೊಮ್ಮಲು ಸಾಧ್ಯವಾಯಿತು. ಇಂದಿರಾ ಜೀವನದ ಕಠಿಣ ಕ್ಷಣಗಳಲ್ಲಿ ಉಷಾ ಒಂದು ಭರವಸೆಯ ಆಸರೆಯಾಗಿದ್ದರು. 1975ರ ತುರ್ತು ಪರಿಸ್ಥಿತಿಯ ಏಳು-ಬೀಳುಗಳು, 1977ರ ಚುನಾವಣಾ ಸೋಲು, ನಂತರದ ಜೈಲುವಾಸ ಹಾಗೂ 1980ರಲ್ಲಿ ಮಗ ಸಂಜಯ್ ಗಾಂಧಿಯವರ ಅಕಾಲಿಕ ನಿಧನದ ಸಂದರ್ಭದಲ್ಲಿ ಇಂದಿರಾ ತೀವ್ರ ಆಘಾತಕ್ಕೆ ಒಳಗಾಗಿದ್ದರು.
ರಾಜಕೀಯ ಆಪ್ತರೆಲ್ಲರೂ ದೂರ ಸರಿದ ದಿನಗಳಲ್ಲೂ ಉಷಾ ಭಗತ್ ಇಂದಿರಾ ಬೆಂಬಲಕ್ಕೆ ನಿಂತು, ಅವರ ಮಾನಸಿಕ ಸ್ಥೈರ್ಯವನ್ನು ಕುಸಿಯದಂತೆ ನೋಡಿಕೊಂಡರು. ಅಧಿಕಾರವಿರಲಿ ಅಥವಾ ಇಲ್ಲದಿರಲಿ, ಇಂದಿರಾ ಅವರ ಜತೆಗಿನ ಅವರ ನಿಷ್ಠೆ ಅಚಲವಾಗಿತ್ತು. ಅಕ್ಟೋಬರ್ 31, 1984ರಂದು ಇಂದಿರಾ ಗಾಂಧಿಯವರ ಹತ್ಯೆಯಾದ ಆ ಕರಾಳ ದಿನದಂದು ಉಷಾ ಭಗತ್ ಪ್ರಧಾನಿ ನಿವಾಸದ ಇದ್ದರು.
ಅಂದು ಬ್ರಿಟಿಷ್ ನಟ ಪೀಟರ್ ಉಸ್ತೀನೋವ್ ಅವರ ಸಾಕ್ಷ್ಯಚಿತ್ರಕ್ಕಾಗಿ ಇಂದಿರಾ ಸಂದರ್ಶನ ನೀಡಬೇಕಿತ್ತು. ಆ ಸಂದರ್ಶನದ ಸಿದ್ಧತೆ ಮತ್ತು ಸಮಯದ ಹೊಂದಾಣಿಕೆಯನ್ನು ಉಷಾ ಅವರೇ ಮಾಡುತ್ತಿದ್ದರು. ಗುಂಡಿನ ಸದ್ದು ಕೇಳಿದ ತಕ್ಷಣವೇ ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಂದಿರಾ ಅವರ ಬಳಿ ಓಡಿಬಂದವರಲ್ಲಿ ಉಷಾ ಕೂಡ ಒಬ್ಬರು.