Roopa Gururaj Column: ಭಗವದ್ಗೀತೆಯ ಸಾರ ತಿಳಿದವರು
ಪಂಡಿತ ಪಟ್ಟು ಹಿಡಿದ. ಗೀತೆ ನನಗೆ ಸರಿಯಾಗಿ ಅರ್ಥವಾಗಿಲ್ಲವೆಂದು ರಾಜ ಜಾರಿಕೊಂಡ. ಪಂಡಿತ ಬಿಡಲಿಲ್ಲ. ತೀರ್ಮಾನಕ್ಕೆ ವಿಂಧ್ಯಾಚಲದ ತಪೋವನದಲ್ಲಿರುವ ಮುನಿ ಬಳಿ ಕರೆದೊಯ್ದ. ಮುನಿಗಳು ‘ನೀನು ರಾಜನಿಗೆ ಗೀತೆ ಕಲಿಸಿದ್ದು ನಿಜವೇ?’ ಎಂದು ಪ್ರಶ್ನಿಸಿದರು. ಪ್ರತಿ ಪದದ ಪ್ರಕೃತಿ ಪ್ರತ್ಯಯ ಭಿನ್ನ ಭಿನ್ನ ಅರ್ಥ ಎಲ್ಲಾ ತಿಳಿಸಿದ್ದೇನೆ ಎಂದ ಪಂಡಿತ.


ಒಂದೊಳ್ಳೆ ಮಾತು
rgururaj628@gmail.com
ಒಬ್ಬ ರಾಜ ತನಗೆ ಭಗವದ್ಗೀತೆಯನ್ನು ಯಾರು ಅರ್ಥ ಮಾಡಿಸುವರೋ ಅವರಿಗೆ ಅರ್ಧ ರಾಜ್ಯ ಕೊಡುವುದಾಗಿ ಘೋಷಣೆ ಮಾಡಿದ. ಇದನ್ನು ಕೇಳಿ ಅನೇಕ ಪಂಡಿತರು ರಾಜನಿಗೆ ಗೀತೆ ಕಲಿಸಲು ಬಂದರು. ಆದರೆ ರಾಜನ ಒಂದೆರಡು ಪ್ರಶ್ನೆಗಳಿಗೆ ಹೆದರಿ ಹಿಂದಿರುಗಿದರು. ಒಬ್ಬ ಮಹಾ ಪಂಡಿತ ಬಂದು ರಾಜನ ಪ್ರಶ್ನೆಗಳಿಗೆ ಉತ್ತರ ಹೇಳಿ ಗೀತೆಯನ್ನು ಕಲಿಸಿದ. ರಾಜ ಆತನ ವಿದ್ವತ್ತನ್ನು ಮೆಚ್ಚಿ ದಕ್ಷಿಣೆಯನ್ನು ನೀಡಿ ಗೌರವಿಸಿದ. ಆದರೆ ಅರ್ಧ ರಾಜ್ಯ ಕೊಡಲಿಲ್ಲ.
ಪಂಡಿತ ಪಟ್ಟು ಹಿಡಿದ. ಗೀತೆ ನನಗೆ ಸರಿಯಾಗಿ ಅರ್ಥವಾಗಿಲ್ಲವೆಂದು ರಾಜ ಜಾರಿಕೊಂಡ. ಪಂಡಿತ ಬಿಡಲಿಲ್ಲ. ತೀರ್ಮಾನಕ್ಕೆ ವಿಂಧ್ಯಾಚಲದ ತಪೋವನದಲ್ಲಿರುವ ಮುನಿ ಬಳಿ ಕರೆದೊಯ್ದ. ಮುನಿಗಳು ‘ನೀನು ರಾಜನಿಗೆ ಗೀತೆ ಕಲಿಸಿದ್ದು ನಿಜವೇ?’ ಎಂದು ಪ್ರಶ್ನಿಸಿದರು. ಪ್ರತಿ ಪದದ ಪ್ರಕೃತಿ ಪ್ರತ್ಯಯ ಭಿನ್ನ ಭಿನ್ನ ಅರ್ಥ ಎಲ್ಲಾ ತಿಳಿಸಿದ್ದೇನೆ ಎಂದ ಪಂಡಿತ.
ರಾಜನಿಗೆ ಪ್ರಶ್ನಿಸಿದಾಗ ಹೌದೆಂದು ಒಪ್ಪಿದ. ಆಗ ಮುನಿಗಳೆಂದರು, ‘ನೀನು ಕಲಿಸಿಯೂ ಇಲ್ಲ, ರಾಜ ಅದನ್ನು ಕಲಿತೂ ಇಲ್ಲ. ಗೀತೆಯನ್ನು ನೀನು ತಿಳಿದವನಾದರೆ ನಿನಗೆ ರಾಜ್ಯದ ಲೋಭವೇಕೆ? ರಾಜ ಗೀತೆಯನ್ನು ಅರ್ಥ ಮಾಡಿಕೊಂಡಿದ್ದರೆ ಕೊಟ್ಟ ಮಾತು ಉಳಿಸಿಕೊಳ್ಳಲು ಹಿಂಜರಿಕೆ ಏಕೆ’ ಎಂದರು. ನಾಲಿಗೆ - ಹೃದಯದಲ್ಲಿ ಶುದ್ಧಿ ಇಲ್ಲದ ಮೇಲೆ ಗೀತೆ ಕಲಿತರೇನು ಎಂದರು. ರಾಜ, ಪಂಡಿತ ಇಬ್ಬರಿಗೂ ಕೂಡ ಮುನಿಗಳ ಮಾತು ಅರ್ಥವಾಗಿ ತಲೆತಗ್ಗಿಸಿದರು.
ಇದನ್ನೂ ಓದಿ: Roopa Gururaj Column: ಶ್ರೀರಾಮ ರಕ್ಷಾ ಸ್ತ್ರೋತ್ರ ಏಕೆ ಪಠಿಸಬೇಕು ?
ನಿಜ ಜೀವನದಲ್ಲೂ ನಮ್ಮ ಸುತ್ತಲೂ ಅನೇಕ ವಿದ್ಯಾವಂತರನ್ನು ನೋಡುತ್ತೇವೆ. ಹೆಸರಿಗೆ ಡಿಗ್ರಿ, ಡಬಲ್ ಡಿಗ್ರಿ ಮಾಡಿಕೊಂಡಿರುತ್ತಾರೆ. ಆದರೆ ಅವರ ಓದಿಗೂ ಅವರ ಸಂಸ್ಕಾರಕ್ಕೂ ಸಂಬಂಧವೇ ಇರುವುದಿಲ್ಲ. ಹೆಚ್ಚು ಓದಿದವರಿಗೂ ಕೆಲವೊಮ್ಮೆ ಸಾಮಾನ್ಯ ಜ್ಞಾನ ಕಡಿಮೆ ಇರುವುದನ್ನು ನೋಡುತ್ತೇವೆ. ವಿದ್ಯಾರ್ಜನೆ ಮಾಡಿದ ಕ್ಷಣ ಜೀವನ ಮೌಲ್ಯಗಳು ಮನವರಿಕೆ ಆಗಿರುತ್ತವೆ ಎಂದು ಯಾವ ಗ್ಯಾರಂಟಿಯೂ ತಂದೆ ತಾಯಿಗಳು ಮಕ್ಕಳನ್ನು ಬೆಳೆಸುವಾಗ ಬದುಕಿಗೆ ಬೇಕಾದಂಥ ಅನೇಕ ವಿಷಯಗಳನ್ನು ಅವರಿಗೆ ತಿದ್ದಿ ತೀಡಿ ಬೆಳೆಸಬೇಕಾಗುತ್ತದೆ.
ಬದುಕು ನಡೆಸಲು ವಿದ್ಯಾರ್ಜನೆ ಒಂದೇ ಸಾಲದು, ಜೀವನ ಕೌಶಲ್ಯ, ಸಾಮಾನ್ಯ ಜ್ಞಾನ 10 ಜನರೊಡನೆ ಬೆರೆತು ಬದುಕುವ ಕಲೆ ಎಲ್ಲವೂ ಗೊತ್ತಿರಬೇಕಾಗುತ್ತದೆ. ಅದಿಲ್ಲದೆ ಹೋದರೆ ಅವರು ಅದೆಂತಹ ಮೇಧಾವಿಗಳಾದರು, 10 ಜನರೊಡನೆ ಬೆರೆತು ಹೇಗೆ ನಡೆದುಕೊಳ್ಳಬೇಕು ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲದೆ ಎಲ್ಲರ ಹತ್ತಿರ ನಿಷ್ಟೂರವಾಗಬೇಕಾಗುತ್ತದೆ. ಜೀವನದಲ್ಲಿ ಅನೇಕ ಸಂದರ್ಭ ಗಳಲ್ಲಿ ಅಸಹಾಯಕರನ್ನು, ಕಷ್ಟದಲ್ಲಿರುವವರನ್ನು ನೋಡಿದಾಗ ಅವರಿಗೆ ಏನಾದರೂ ಮಾಡಬೇಕು ಅನ್ನುವ ತುಡಿತ ಇರುವಂತಹ ವೈಚಾರಿಕತೆ, ಮಾನವೀಯ ಮೌಲ್ಯಗಳು ಇವೆಲ್ಲ ವನ್ನೂ ರೂಡಿಸಿಕೊಂಡಾಗ ನಾವು ಗಳಿಸಿದ ವಿದ್ಯೆಗೂ ಒಂದು ಮೌಲ್ಯ.
ಅದಿಲ್ಲದೆ ಸ್ವಾರ್ಥದಿಂದ ನಾನು ಮಾತ್ರ ಉದ್ಧಾರವಾಗಬೇಕು, ನನ್ನ ಕುಟುಂಬ ಚೆನ್ನಾಗಿದ್ದರೆ ಸಾಕು, ನಾನು ನನ್ನದು ಎನ್ನುವ ಆಲೋಚನೆಗಳಲ್ಲೇ ಬಂದಿಯಾದವರು ಸಮಾಜಕ್ಕೆ ಒಂದು ಹೊರೆ ಎಂತಲೇ ಹೇಳಬೇಕು. ಅವರಿಂದ ಯಾರಿಗೂ ಕಿಂಚಿತ್ತು ಸಹಾಯವೂ ಆಗುವುದಿಲ್ಲ, ಅವರನ್ನು ಅವರಂತಾಗುತ್ತಾರೆ. ಅವರು ಬೆಳೆಸುವ ಮಕ್ಕಳು ಕೂಡ ಸಮಾಜಕ್ಕೆ ಹೊರೆಯಾಗುತ್ತಾರೆ. ಆದ್ದರಿಂ ದಲೇ ವಿದ್ಯಾರ್ಜನೆಯ ಜೊತೆಗೆ ಜೀವನ ಕೌಶಲ್ಯ, ಮಾನವೀಯ ಮೌಲ್ಯಗಳನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಕೂಡ ಬಹಳ ಮುಖ್ಯವಾಗುತ್ತದೆ.
ಇವುಗಳಿಂದ ನಮಗೆ ಯಾವುದೇ ರೀತಿಯ ಆರ್ಥಿಕ ಸಹಾಯ ಆಗದೆ ಹೋದರೂ, ಬೌದ್ಧಿಕವಾಗಿ ಇವು ನಮ್ಮನ್ನು ಸಮಾಜ ದಲ್ಲಿ ಬಹಳ ಎತ್ತರಕ್ಕೆ ಕೊಂಡೊಯ್ಯುವ ಸಾಮರ್ಥ್ಯವಿರುವ ಗುಣಗಳು. ನಾವು ಇದನ್ನು ಅಳವಡಿಸಿಕೊಂಡಾಗ ನಮ್ಮ ಸುತ್ತಲೂ ಇರುವ ಅನೇಕರನ್ನು ನಾವು ಚೆನ್ನಾಗಿ ನೋಡಿಕೊಂಡು ನೂರಾರು ಜನರಿಗೆ ಮಾದರಿಯಾಗಿ ಬದುಕುವ ಜೀವವಾಗುತ್ತೇವೆ. ಇಂತಹ ಸಮಾಜಮುಖಿ ಜೀವನ ನಮ್ಮೆಲ್ಲರದು ಆಗಲಿ ಎನ್ನುವ ಶುಭ ಹಾರೈಕೆ ಮಾತ್ರ ನನ್ನದು.