Prashanth Kumar Column: ಜಗತ್ತಿಗೆ ಅರಿವಿನ ಬೆಳಕು ಹಂಚುವವರು
ಮುಂಜಾನೆ 4-5 ಗಂಟೆಗೆ ಎದ್ದು, ಪತ್ರಿಕಾ ವಿತರಕರ ಕೇಂದ್ರಕ್ಕೆ ಹೋಗಿ ನೂರಾರು ಪ್ರತಿಗಳನ್ನು ವಿಂಗಡಿಸಿ, ಸೈಕಲ್ ಅಥವಾ ದ್ವಿಚಕ್ರ ವಾಹನದಲ್ಲಿ ತುಂಬಿಕೊಂಡು, ಮಳೆ, ಚಳಿ, ಗಾಳಿ, ಯಾವುದನ್ನೂ ಲೆಕ್ಕಿಸದೆ ಮನೆ-ಮನೆಗೆ ಪತ್ರಿಕೆ ತಲುಪಿಸುವ ಕಾಯಕ. ಒಬ್ಬ ವಿತರಕನ ಭುಜದ ಮೇಲೆ ಕೆಲವೊಮ್ಮೆ ಹತ್ತಾರು ಕಿಲೋ ಪತ್ರಿಕೆಗಳ ಭಾರ ಇರುತ್ತದೆ. ಆದರೆ ಅದಕ್ಕಿಂತಲೂ ದೊಡ್ಡ ಭಾರ ಅವನ ಕುಟುಂಬದ ಜವಾಬ್ದಾರಿ. ಅವನಿಗೆ ರಜೆ ಕಡಿಮೆ
-
ಸಕಾಲಿಕ
ಪ್ರಶಾಂತ್ ಕುಮಾರ್ ಎನ್.
ಇಂದು (ಸೆ.4) ವಿಶ್ವ ಪತ್ರಿಕಾ ವಿತರಕರ ದಿನಾಚರಣೆ. ಪ್ರತಿದಿನ ನಿಮ್ಮ ಮನೆ ಬಾಗಿಲಿಗೆ ಪತ್ರಿಕೆ ತಂದಿಡುವ ವಿತರಕರ ಬಗ್ಗೆ ಕಣ್ತೆರೆಸುವ ಲೇಖನ.
ನೀವು ಬೆಳಗ್ಗೆ ಕಣ್ಣು ತೆರೆಯುವ ಮೊದಲೇ, ನಿಮ್ಮ ಮನೆ ಬಾಗಿಲಿಗೆ ಜಗತ್ತನ್ನೇ ತಂದು ಇಡುವವನು ಪತ್ರಿಕಾ ವಿತರಕ. ಪತ್ರಿಕೋದ್ಯಮಕ್ಕೆ ಸುಮಾರು 400 ವರ್ಷಗಳ ಇತಿಹಾಸವಿದ್ದರೆ, ಪತ್ರಿಕೆ ವಿತರಣಾ ವೃತ್ತಿಗೂ ಸುಮಾರು ಎರಡು ಶತಮಾನಗಳ ಇತಿಹಾಸವಿದೆ. 19ನೇ ಶತಮಾನದಲ್ಲಿ ಬಾಲಕರಿಂದ ಆರಂಭವಾದ ‘ನ್ಯೂಸ್‌ಪೇಪರ್ ಬಾಯ’ ಸಂಸ್ಕೃತಿ ಕ್ರಮೇಣ ಸಂಘಟಿತ ಪತ್ರಿಕಾ ವಿತರಣಾ ವ್ಯವಸ್ಥೆಯಾಗಿ ಬೆಳೆದಿದ್ದು, ಇಂದು ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಪತ್ರಿಕಾ ವಿತರಕರು ಮುದ್ರಿತ ಮಾಧ್ಯಮದ ಕೊನೆಯ ಕೊಂಡಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕಾಲ ಬದಲಾಯಿತು. ತಂತ್ರಜ್ಞಾನ ಬದಲಾಯಿತು. ಪತ್ರಿಕೆಗಳ ಗಾತ್ರ, ವಿನ್ಯಾಸ, ಮುದ್ರಣ ತಂತ್ರeನ ಮತ್ತು ವಿಷಯಗಳೆಲ್ಲವೂ ಬದಲಾದವು. ಕಂಪ್ಯೂಟರ್ ಬಂತು, ಇಂಟರ್ನೆಟ್ ಬಂತು, ಮೊಬೈಲ್ ಬಂತು, ಸಾಮಾಜಿಕ ಜಾಲತಾಣಗಳು ಬಂದವು. ಇಂದು ಕ್ಷಣಾರ್ಧದಲ್ಲಿ ಜಗತ್ತಿನ ಸುದ್ದಿಯನ್ನು ಮೊಬೈಲ್‌ನಲ್ಲಿ ಪಡೆಯುವ ಕಾಲ. ಆದರೆ ಪತ್ರಿಕಾ ವಿತರಕನ ಬದುಕು ಮಾತ್ರ ಇನ್ನೂ ಹಲವು ದಶಕಗಳ ಹಿಂದಿನಂತೆಯೇ ಉಳಿದಿದೆ.
ಮುಂಜಾನೆ 4-5 ಗಂಟೆಗೆ ಎದ್ದು, ಪತ್ರಿಕಾ ವಿತರಕರ ಕೇಂದ್ರಕ್ಕೆ ಹೋಗಿ ನೂರಾರು ಪ್ರತಿಗಳನ್ನು ವಿಂಗಡಿಸಿ, ಸೈಕಲ್ ಅಥವಾ ದ್ವಿಚಕ್ರ ವಾಹನದಲ್ಲಿ ತುಂಬಿಕೊಂಡು, ಮಳೆ, ಚಳಿ, ಗಾಳಿ, ಯಾವುದನ್ನೂ ಲೆಕ್ಕಿಸದೆ ಮನೆ-ಮನೆಗೆ ಪತ್ರಿಕೆ ತಲುಪಿಸುವ ಕಾಯಕ. ಒಬ್ಬ ವಿತರಕನ ಭುಜದ ಮೇಲೆ ಕೆಲವೊಮ್ಮೆ ಹತ್ತಾರು ಕಿಲೋ ಪತ್ರಿಕೆಗಳ ಭಾರ ಇರುತ್ತದೆ. ಆದರೆ ಅದಕ್ಕಿಂತಲೂ ದೊಡ್ಡ ಭಾರ ಅವನ ಕುಟುಂಬದ ಜವಾಬ್ದಾರಿ. ಅವನಿಗೆ ರಜೆ ಕಡಿಮೆ. ಮುಂಜಾನೆಯ ನಿದ್ರೆ ಕಡಿಮೆ. ಆದಾಯ ಸೀಮಿತ. ಅಪಘಾತದ ಅಪಾಯ ಹೆಚ್ಚು. ವಯಸ್ಸಾದರೂ ಕೆಲಸ ನಿಲ್ಲಿಸುವ ಪರಿಸ್ಥಿತಿ ಇಲ್ಲ.
ಇದನ್ನೂ ಓದಿ: Vishweshwar Bhat Column: ಸ್ನಾನ ಮಾಡುವುದು ಹೇಗೆ?
ಅವನಿಲ್ಲದೆ ಪತ್ರಿಕೆಯಿಲ್ಲ. ಪತ್ರಿಕೆಯಿಲ್ಲದೆ ಜ್ಞಾನದ ಬೆಳಕಿಲ್ಲ. ಆದರೆ ಜ್ಞಾನದ ಬೆಳಕು ಹಂಚುವ ಅವನ ಜೀವನ ಮಾತ್ರ ಇಂದಿಗೂ ಕತ್ತಲ ಇದೆ. ರಾಜಕೀಯ ನಾಯಕರು, ಅಧಿಕಾರಿಗಳು, ಉದ್ಯಮಿ ಗಳು, ವೈದ್ಯರು, ಶಿಕ್ಷಕರು, ವಕೀಲರು, ಕಾರ್ಮಿಕರು, ವಿದ್ಯಾರ್ಥಿಗಳು- ಎಲ್ಲರೂ ಬೆಳಗ್ಗೆ ಪತ್ರಿಕೆ ಓದುವುದರ ಹಿಂದೆ ಒಬ್ಬ ವಿತರಕನ ಪರಿಶ್ರಮವಿದೆ.
ಪತ್ರಿಕಾ ವಿತರಕ ಏಕೆ ಅಗತ್ಯ?
ಡಿಜಿಟಲ್ ಮಾಧ್ಯಮ ವೇಗವಾಗಿ ಬೆಳೆಯುತ್ತಿದ್ದರೂ ಮುದ್ರಿತ ಪತ್ರಿಕೆಗೆ ತನ್ನದೇ ಆದ ವಿಶ್ವಾಸಾರ್ಹತೆ ಮತ್ತು ಸಾಮಾಜಿಕ ಮೌಲ್ಯವಿದೆ. ಬೆಳಗಿನ ಚಹಾದೊಂದಿಗೆ ಪತ್ರಿಕೆ ಓದುವ ಅಭ್ಯಾಸ ಇಂದಿಗೂ ಕೋಟ್ಯಂತರ ಜನರ ಜೀವನದ ಭಾಗವಾಗಿದೆ. ಡಿಜಿಟಲ್ ಮಾಧ್ಯಮದ ವೇಗದ ಜೊತೆಗೆ ತಪ್ಪು ಮಾಹಿತಿ, ಸುಳ್ಳುಸುದ್ದಿ ಮತ್ತು ಗೊಂದಲಗಳೂ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಜವಾಬ್ದಾರಿಯುತ ಪತ್ರಿಕೋದ್ಯಮದ ಮಹತ್ವ ಮತ್ತಷ್ಟು ಹೆಚ್ಚಾಗಿದೆ. ಆ ಪತ್ರಿಕೆಯನ್ನು ಮನೆ ಬಾಗಿಲಿಗೆ ತಲುಪಿಸುವ ವಿತರಕನ ಪಾತ್ರವೂ ಅಷ್ಟೇ ಮಹತ್ವದ್ದು.
ಇತರರು ನಿದ್ರಿಸುವಾಗ ಪತ್ರಿಕಾ ವಿತರಕನ ದಿನ ಆರಂಭವಾಗುತ್ತದೆ. ಮುಂಜಾನೆ ಪತ್ರಿಕೆಗಳ ಕಟ್ಟನ್ನು ಸ್ವೀಕರಿಸುವುದು, ಪ್ರತಿಗಳನ್ನು ವಿಂಗಡಿಸುವುದು, ಮಾರ್ಗವಾರು ಜೋಡಿಸುವುದು, ಸೈಕಲ್/ದ್ವಿಚಕ್ರ ವಾಹನದಲ್ಲಿ ತುಂಬುವುದು, ಮನೆ-ಮನೆಗೆ ವಿತರಿಸುವುದು, ಬಾಕಿ ಹಣ ಸಂಗ್ರಹಿಸುವುದು, ಏಜೆನ್ಸಿ ಯ ಲೆಕ್ಕಪತ್ರ ಮುಗಿಸುವುದು. ಇದೆಲ್ಲ ಮುಗಿಯುವ ವೇಳೆಗೆ ಬಹುತೇಕ ಜನರ ದಿನ ಆರಂಭವಾಗಿರು ತ್ತದೆ. ಮಳೆ ಬಂದರೂ, ಹಬ್ಬ ಇದ್ದರೂ ಪತ್ರಿಕೆ ತಲುಪಬೇಕು. ಮನೆಯಲ್ಲಿ ಸಾವಿದ್ದರೂ, ರಸ್ತೆಯಲ್ಲಿ ಸಮಸ್ಯೆ ಇದ್ದರೂ, ಅವನಿಗೆ ಅನಾರೋಗ್ಯವಿದ್ದರೂ ಸಾಧ್ಯವಾದಷ್ಟು ಪತ್ರಿಕೆ ತಲುಪಿಸಲೇಬೇಕು.
ವಿತರಕರ ಒಕ್ಕೂಟದ ಹೋರಾಟ
ಈ ಕತ್ತಲಿನ ಬದುಕಿಗೆ ಬೆಳಕಾಗಬೇಕೆಂಬ ಉದ್ದೇಶದಿಂದ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ (ರಿ.) ಕಳೆದ ಹಲವು ವರ್ಷಗಳಿಂದ ರಾಜ್ಯದ ಪತ್ರಿಕಾ ವಿತರಕರ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಕಳೆದ 6 ವರ್ಷಗಳಲ್ಲಿ ರಾಜ್ಯದ 31 ಜಿಲ್ಲೆಗಳಿಗೆ ತೆರಳಿ, ಸುಮಾರು 40000 ವಿತರಕರ ಸಮಸ್ಯೆಗಳನ್ನು ಆಲಿಸಿ, ಅವರ ಜೀವನದ ನೈಜ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಸರಕಾರದ ಗಮನಕ್ಕೆ ತರಲಾಗಿದೆ.
ರಾಜ್ಯಮಟ್ಟದಲ್ಲಿ 5 ಬೃಹತ್ ಸಮ್ಮೇಳನಗಳನ್ನು ಆಯೋಜಿಸಿ, ಪತ್ರಿಕಾ ವಿತರಕರ ಸಾಮಾಜಿಕ ಭದ್ರತೆ, ಆರೋಗ್ಯ, ವಯೋಮಿತಿ ಸಡಲಿಕೆ, ವಸತಿ, ವೃತ್ತಿ ಭದ್ರತೆ ಹಾಗೂ ರಾಜ್ಯ ಪ್ರಶಸ್ತಿ ಗೌರವದ ಕುರಿತು ಸರಕಾರದ ಗಮನ ಸೆಳೆಯಲಾಗಿದೆ. ಸರಕಾರದಿಂದ ಕೆಲವು ನೆರವು ದೊರೆತಿರುವುದು ಸ್ವಾಗತಾರ್ಹ. ಆದರೆ ರಾಜ್ಯದ ಸಾವಿರಾರು ವಿತರಕರ ಬದುಕಿಗೆ ಶಾಶ್ವತ ಭದ್ರತೆ ನೀಡಲು ಇನ್ನಷ್ಟು ಪರಿಣಾಮಕಾರಿ ಕ್ರಮಗಳ ಅಗತ್ಯವಿದೆ.
ಸರ್ಕಾರ ಈಡೇರಿಸಬೇಕಾದ 5 ಪ್ರಮುಖ ಬೇಡಿಕೆಗಳು
- ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿ: ಪತ್ರಿಕಾ ವಿತರಕರು ಹಾಗೂ ಅವರ ಕುಟುಂಬಗಳ ಭವಿಷ್ಯಕ್ಕಾಗಿ ಕನಿಷ್ಠ ರೂ.50 ಕೋಟಿ ಅನುದಾನದೊಂದಿಗೆ ಪ್ರತ್ಯೇಕ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಬೇಕು. ಈ ನಿಧಿಯಿಂದ ಮಕ್ಕಳ ವಿದ್ಯಾಭ್ಯಾಸ, ಅಪಘಾತ, ಗಂಭೀರ ಅನಾರೋಗ್ಯ, ವಿತರಕರ ಮರಣದ ಸಂದರ್ಭದಲ್ಲಿ ಕುಟುಂಬಕ್ಕೆ ನೆರವು ಸೇರಿದಂತೆ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಬೇಕು.
- ಪತ್ರಿಕಾ ವಿತರಕರ ವೃತ್ತಿ ಭದ್ರತೆಗೆ ಕಾನೂನು ಕ್ರಮ: ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿರುವ ಪತ್ರಿಕಾ ವಿತರಕರಿಗೆ ಸಾಮಾಜಿಕ ಮತ್ತು ವೃತ್ತಿ ಭದ್ರತೆ ದೊರೆಯುವಂತೆ ಸರಕಾರ ಸೂಕ್ತ ಕಾನೂನು ಮತ್ತು ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು.
- ಆರೋಗ್ಯ ವಿಮಾ ಷರತ್ತುಗಳ ಸಡಿಲಿಕೆ: ಪ್ರಸ್ತುತ ಇರುವ ಆರೋಗ್ಯ ವಿಮಾ ಯೋಜನೆಗಳಲ್ಲಿ ವಯಸ್ಸು, ಆದಾಯ ಮುಂತಾದ ಕಠಿಣ ಷರತ್ತುಗಳನ್ನು ಸಡಿಲಿಸಿ, ಅರ್ಹ ಪತ್ರಿಕಾ ವಿತರಕರಿಗೆ ಸುಲಭವಾಗಿ ಮತ್ತು ಉಚಿತವಾಗಿ ಆರೋಗ್ಯ ವಿಮೆ ದೊರೆಯುವಂತೆ ಮಾಡಬೇಕು. ವಿತರಕರು ಮತ್ತು ಅವರ ಕುಟುಂಬದ ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು.
- ವಸತಿ ಭಾಗ್ಯ: ನಗರ, ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ 20-30 ವರ್ಷಗಳಿಂದ ನಿರಂತರ ವಾಗಿ ಸೇವೆ ಸಲ್ಲಿಸುತ್ತಿರುವ ಪತ್ರಿಕಾ ವಿತರಕರಿಗೆ ನಿವೇಶನ ಅಥವಾ ಮನೆ ಒದಗಿಸಲು ಪ್ರತ್ಯೇಕ ವಸತಿ ಯೋಜನೆ ರೂಪಿಸಬೇಕು.
- ರಾಜ್ಯಮಟ್ಟದ ಅತ್ಯುತ್ತಮ ಪತ್ರಿಕಾ ವಿತರಕ ಸೇವಾ ಪ್ರಶಸ್ತಿ: ಪ್ರತಿ ವರ್ಷ ಅತ್ಯುತ್ತಮ ಸೇವೆ ಸಲ್ಲಿಸುವ ಪತ್ರಿಕಾ ವಿತರಕರನ್ನು ಗುರುತಿಸಿ, ಪತ್ರಿಕಾ ವಿತರಕರ ದಿನಾಚರಣೆಯಂದು ಸರಕಾರದ ವತಿಯಿಂದ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಬೇಕು.
ಇನ್ನೂ ಬೇಕಿರುವುದು ಗೌರವ ಮತ್ತು ಸಾಮಾಜಿಕ ಭದ್ರತೆ. ವಯಸ್ಸಾದಾಗ ಪಿಂಚಣಿ, ಅಪಘಾತ ವಾದಾಗ ಕುಟುಂಬಕ್ಕೆ ನೆರವು, ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ, ಆರೋಗ್ಯ ಸಮಸ್ಯೆ ಬಂದಾಗ ಚಿಕಿತ್ಸೆ, ವರ್ಷಗಳ ಸೇವೆಗೆ ಸರಕಾರದಿಂದ ಮಾನ್ಯತೆ ದೊರೆಯಬೇಕು.
ಮುದ್ರಿತ ಪತ್ರಿಕೆ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಡಿಜಿಟಲ್ ಮಾಧ್ಯಮದ ಸ್ಪರ್ಧೆ, ಮುದ್ರಣ ವೆಚ್ಚ, ಕಾಗದದ ಬೆಲೆ, ವಿತರಣಾ ವೆಚ್ಚ ಮತ್ತು ಓದುಗರ ಬದಲಾಗುತ್ತಿರುವ ಅಭ್ಯಾಸಗಳು ಪತ್ರಿಕಾ ಉದ್ಯಮದ ಮುಂದೆ ಹೊಸ ಸವಾಲುಗಳನ್ನು ತಂದಿವೆ. ಈ ಸಂದರ್ಭದಲ್ಲಿ ವಿತರಣಾ ವ್ಯವಸ್ಥೆ ಯನ್ನು ಬಲಪಡಿಸುವುದು ಅತ್ಯಂತ ಅಗತ್ಯ. ವಿತರಕನನ್ನು ಉಳಿಸಿದರೆ ಪತ್ರಿಕೆಯ ಕೊನೆಯ ತುದಿಯನ್ನು ಉಳಿಸುವುದೆಂದರ್ಥ.
ಈ ವಿಶ್ವ ಪತ್ರಿಕಾ ವಿತರಕರ ದಿನದಂದು ಒಂದು ಕ್ಷಣ ಪತ್ರಿಕಾ ವಿತರಕನನ್ನು ನೆನಪಿಸಿಕೊಳ್ಳೋಣ. ಬೆಳಗ್ಗೆ ಪತ್ರಿಕೆ ಕೈಗೆತ್ತಿಕೊಳ್ಳುವಾಗ ಅದರ ಹಿಂದೆ ಇರುವ ಆ ಮುಂಜಾನೆ ಪರಿಶ್ರಮವನ್ನು ನೆನಪಿಸಿ ಕೊಳ್ಳೋಣ. ನಮ್ಮ ಮನೆ ಬಾಗಿಲಿಗೆ ಪ್ರತಿದಿನ ಸುದ್ದಿಯ ಬೆಳಕನ್ನು ತಂದ ಆ ವ್ಯಕ್ತಿಗೆ ಒಂದು ಧನ್ಯವಾದ ಹೇಳೋಣ. ಪತ್ರಿಕಾ ವಿತರಕ ಪ್ರಜಾಪ್ರಭುತ್ವದ ಬೆಳಗಿನ ಕಾವಲುಗಾರ. ಅವನ ಬೆಳಗು ಚೆನ್ನಾಗಿದ್ದರೆ ಮಾತ್ರ ನಾಡಿನ ಬೆಳಗು ಚೆನ್ನಾಗಿರುತ್ತದೆ.
(ರಾಜ್ಯ ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ)