Ravi Sajangadde Column: ಜಗದ ತೈಲಭಂಡಾರ ತನ್ನದೆನ್ನುವ ಟ್ರಂಪ್ ದುರಹಂಕಾರ !
ಪ್ರಪಂಚವನ್ನೇ ಆಳಬೇಕೆಂಬ ಉಮೇದು ಅಮೆರಿಕದ್ದು. ಅಂತೆಯೇ, ಜಗತ್ತಿನ ವಿವಿಧೆಡೆಯ ಪ್ರಕೃತಿ ಸಂಪನ್ಮೂಲ ಹಾಗೂ ತೈಲ ನಿಕ್ಷೇಪಗಳನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಅಮೆರಿಕದ ಯೋಜನೆ ಯ ಮತ್ತು ಚೀನಾ-ರಷ್ಯಾ ದೇಶಗಳಿಗೆ ಮತ್ತಷ್ಟು ಸೆಡ್ಡು ಹೊಡೆದು, ಹೆಚ್ಚಿನ ತೈಲ ಸಿಗುವ ಭೂಮಿಯ ನಿಯಂತ್ರಣವನ್ನು ತೆಕ್ಕೆಗೆ ತೆಗೆದುಕೊಳ್ಳುವ ಅದರ ತಂತ್ರಗಾರಿಕೆಯ ಭಾಗವಾಗಿ ಈ ಒಂದಿಡೀ ಬೆಳವಣಿಗೆ ಯನ್ನು ವಿಶ್ಲೇಷಿಸಲಾಗುತ್ತಿದೆ.
-
ಟ್ರಂಪಾಯಣ
ರವೀ ಸಜಂಗದ್ದೆ
ಒಂದಿಷ್ಟು ಬಾಂಬುಗಳನ್ನು ಹಾಕಿ ಮೂವತ್ತೇ ನಿಮಿಷಗಳೊಳಗೆ ಒಂದು ಸ್ವತಂತ್ರ-ಸಾರ್ವಭೌಮ ರಾಷ್ಟ್ರದ ಆಡಳಿತವನ್ನು ಮತ್ತೊಂದು ರಾಷ್ಟ್ರವು ಸಂಪೂರ್ಣ ತನ್ನ ವಶಕ್ಕೆ ತೆಗೆದುಕೊಂಡ ಉದಾ ಹರಣೆ ಇದೇ ಮೊದಲು!
ಹೌದು, ಹೊಸ ವರ್ಷದ ಆರಂಭದಲ್ಲಿ ಅಮೆರಿಕ ಇಂಥದೊಂದು ಕಾರ್ಯಾಚರಣೆ ನಡೆಸಿ ವೆನಿಜು ವೆಲಾ ದೇಶವನ್ನು ತನ್ನ ವಶಕ್ಕೆ ತೆಗೆದುಕೊಂಡ ಅಪರೂಪದ ಬೆಳವಣಿಗೆ ಸಂಭವಿಸಿದೆ. ಅಧಿಕೃತ ವಾಗಿ ಯಾವುದೇ ಯುದ್ಧವನ್ನು ಸಾರದೆ ಆ ದೇಶವನ್ನು ತನ್ನ ಸುಪರ್ದಿಗೆ ತೆಗೆದುಕೊಂಡ ಅಮೆರಿಕ, ಅದರ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಬಂಧಿಸಿ, ಯುದ್ಧ ನೌಕೆಯಲ್ಲಿ ತನ್ನ ನೆಲಕ್ಕೆ ಕರೆ ತಂದಿತು. ದೇಶವೊಂದರ ಅಧ್ಯಕ್ಷ ಕೆಲವೇ ನಿಮಿಷಗಳಲ್ಲಿ ಯುದ್ಧಕೈದಿ ಯಾದದ್ದು ಹೀಗೆ!
ಪ್ರಪಂಚವನ್ನೇ ಆಳಬೇಕೆಂಬ ಉಮೇದು ಅಮೆರಿಕದ್ದು. ಅಂತೆಯೇ, ಜಗತ್ತಿನ ವಿವಿಧೆಡೆಯ ಪ್ರಕೃತಿ ಸಂಪನ್ಮೂಲ ಹಾಗೂ ತೈಲ ನಿಕ್ಷೇಪಗಳನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಅಮೆರಿಕದ ಯೋಜನೆಯ ಮತ್ತು ಚೀನಾ-ರಷ್ಯಾ ದೇಶಗಳಿಗೆ ಮತ್ತಷ್ಟು ಸೆಡ್ಡು ಹೊಡೆದು, ಹೆಚ್ಚಿನ ತೈಲ ಸಿಗುವ ಭೂಮಿಯ ನಿಯಂತ್ರಣವನ್ನು ತೆಕ್ಕೆಗೆ ತೆಗೆದುಕೊಳ್ಳುವ ಅದರ ತಂತ್ರಗಾರಿಕೆಯ ಭಾಗವಾಗಿ ಈ ಒಂದಿಡೀ ಬೆಳವಣಿಗೆಯನ್ನು ವಿಶ್ಲೇಷಿಸಲಾಗುತ್ತಿದೆ. ಅಚ್ಚರಿಯೆಂದರೆ, ಈ ದಾಳಿ ನಡೆಸಿ ತಮ್ಮ ಅಧ್ಯಕ್ಷರ ಕುಟುಂಬವನ್ನು ಅಮೆರಿಕ ತನ್ನ ವಶಕ್ಕೆ ಪಡೆದುದನ್ನು ವೆನಿಜುವೆಲಾ ನಾಗರಿಕರು ಸಂಭ್ರಮಿಸುತ್ತಿರುವ ಸುದ್ದಿಯೂ ಬರುತ್ತಿದೆ. ಒಟ್ಟಿನಲ್ಲಿ ಪರಿಸ್ಥಿತಿ ಅಯೋಮಯ!
ತೈಲ ಮತ್ತು ಖನಿಜ ಸಂಪತ್ತು ಹೇರಳವಾಗಿರುವ, ಅಭಿವೃದ್ಧಿ ಕುಂಠಿತ ಸಣ್ಣದೇಶಗಳ ಒಳಗೆ, ‘ನಿಮ್ಮನ್ನು ಅಭಿವೃದ್ಧಿಪಡಿಸುತ್ತೇವೆ’ ಎಂಬ ಘೋಷಣೆಯೊಂದಿಗೆ ತೂರಿಕೊಂಡು ಕ್ರಮೇಣ ಪ್ರಭುತ್ವ ಸಾಽಸುವ, ಅಂಥ ದೇಶಗಳ ಮೇಲೆ ಒಂದಿಲ್ಲೊಂದು ನೆಪ ಹೇಳಿ ದಾಳಿ ನಡೆಸಿ, ಅಲ್ಲಿಯ ಸಂಪನ್ಮೂಲ ಮತ್ತು ಸರಕಾರಗಳ ಮೇಲೆ ಹಿಡಿತ ಸಾಧಿಸುವ ಇತಿಹಾಸವಿರುವ ಅಮೆರಿಕ, ತನ್ನ ಈ ಚಾಳಿಯನ್ನು ಮುಂದುವರಿಸಿದೆ!
ಇದನ್ನೂ ಓದಿ: Ravi Sajangadde Column: ಕನಸುಗಳನ್ನು ನನಸಾಗಿಸಿದ ನಿಟ್ಟೆಯ ವಿನಯವಂತ!
ಚೀನಾದೊಂದಿಗೆ ಬಾಂಧವ್ಯ ಬೆಸೆದು ಅಮೆರಿಕಕ್ಕೆ ಸೆಡ್ಡು ಹೊಡೆಯುವ ಯೋಜನೆಯಿತ್ತು ವೆನಿಜು ವೆಲಾ ಮುಖ್ಯಸ್ಥ ಮಡುರೊ ಅವರಿಗೆ; ಇದರಿಂದ ಕೆರಳಿದ ಅಮೆರಿಕ, ಚೀನಾದ ರಾಜ ತಾಂತ್ರಿಕರು ಸಭೆ ನಡೆಸಿ ವೆನಿಜುವೆಲಾದಿಂದ ತೆರಳಿದ ಕೆಲವೇ ಗಂಟೆಗಳೊಳಗೆ ದಾಳಿ ನಡೆಸಿ, ಶಯ್ಯಾಗೃಹ ದಿಂದಲೇ ಮಡುರೊರನ್ನು ಬಂಧಿಸಿ ರಾತ್ರೋರಾತ್ರಿ ಹೊತ್ತೊಯ್ದಿತು. ಇದನ್ನು ‘ಬಂಧನ’ ಅನ್ನುವುದಕ್ಕಿಂತ ‘ಅಪಹರಣ’ ಅನ್ನುವುದೇ ಸೂಕ್ತ!
ಕಳೆದ ಕೆಲ ವರ್ಷಗಳಿಂದ ವೆನಿಜುವೆಲಾ ಆಡಳಿತದ ವಿರುದ್ಧ ಅಮೆರಿಕ ಹಲವಾರು ಆರೋಪ ಗಳನ್ನು ಮಾಡುತ್ತಲೇ ಬಂದಿದೆ. ‘ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಒದಗಿರುವ ಆತಂಕ, ಕೊಕೇನ್ ಮತ್ತಿತರ ಮಾದಕ ದ್ರವ್ಯಗಳ ಕಳ್ಳಸಾಗಣೆ, ಉಗ್ರ ಚಟುವಟಿಕೆಗಳಿಗೆ ಬೆಂಬಲ ಮುಂತಾದ ಗಂಭೀರ ಆರೋಪಗಳ ಆಧಾರದಲ್ಲಿ ಈ ದಾಳಿ ಮತ್ತು ಬಂಧನವನ್ನು ಕೈಗೊಳ್ಳಲಾಗಿದೆ ಎಂಬುದು ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ವಾದ.
ಅದೇನೇ ಇದ್ದರೂ, ತನ್ನ ದಾಳಿಯನ್ನು ಸಮರ್ಥಿಸಿಕೊಳ್ಳಲು ಅಮೆರಿಕವು ಜಗತ್ತಿನ ಕಣ್ಣಿಗೆ ಮಣ್ಣೆ ರಚಲು ಹೂಡಿರುವ ತಂತ್ರವಿದು ಎಂದು ಭಾಸವಾಗುತ್ತದೆ! ವೆನಿಜುವೆಲಾದ ಖನಿಜ ಮತ್ತು ತೈಲ ಸಂಪತ್ತನ್ನು ಇತರ ದೇಶಗಳು ಕೊಳ್ಳಲು ಯೋಚಿಸುತ್ತಿರುವ ಸಂದರ್ಭದಲ್ಲೇ ಅಮೆರಿಕವು ಅದನ್ನು ಹೈಜಾಕ್ ಮಾಡಿರುವುದು ಖರೆ!
ಜಗತ್ತಿನ ಶೇ.18ರಷ್ಟು ತೈಲಸಂಪತ್ತು ವೆನಿಜುವೆಲಾದಲ್ಲಿದೆ ಎಂಬ ಒಂದೇ ಅಂಶವೇ ಅಮೆರಿಕದ ದಾಳಿಯ ಕಾರಣವನ್ನು ಬಿಚ್ಚಿಡುತ್ತದೆ! ಇಷ್ಟೊಂದು ಸಂಪನ್ಮೂಲವಿದ್ದರೂ ಅದನ್ನು ಸಮರ್ಥ ವಾಗಿ ಬಳಸದ ಕಾರಣ ಆರ್ಥಿಕವಾಗಿ ಹೀನಾಯ ಸ್ಥಿತಿಯಲ್ಲಿರುವುದು ವೆನಿಜುವೆಲಾದ ಸಮಸ್ಯೆ. ಹೀಗಾಗಿ ಸಹಜವಾಗಿಯೇ, ಅನೇಕ ವರ್ಷಗಳಿಂದ ಲಕ್ಷಾಂತರ ಪ್ರಜೆಗಳು ದೇಶ ಬಿಟ್ಟು ಸಮೀಪದ ಅಮೆರಿಕದ ಗಡಿಯತ್ತ ವಲಸೆ ಹೋಗುತ್ತಲೇ ಇದ್ದಾರೆ, ಈ ಪೈಕಿ ಹಲವರು ಅಕ್ರಮವಾಗಿ ಅಮೆರಿಕ ವನ್ನು ಪ್ರವೇಶಿಸಿದ ಪ್ರಕರಣಗಳೂ ವರದಿಯಾಗಿವೆ.
ಇದು ಟ್ರಂಪ್ ಆಡಳಿತಕ್ಕೆ ದೊಡ್ಡ ತಲೆನೋವಾಗಿತ್ತು. ಜತೆಗೆ ವೆನಿಜುವೆಲಾ ದೇಶವು ತೈಲ ಮತ್ತಿತರ ಉತ್ಪನ್ನಗಳ ವ್ಯಾಪಾರ ಒಪ್ಪಂದಗಳನ್ನು ರಷ್ಯಾ, ಚೀನಾ ಮತ್ತು ಇರಾನ್ ದೇಶಗಳ ಜತೆಗೆ ಮಾಡಿ ಅವಕ್ಕೆ ಹತ್ತಿರವಾಗುತ್ತಿತ್ತು. ತನ್ನ ನೆರೆಯಲ್ಲಿದ್ದು ಕೊಂಡೇ ವೈರಿದೇಶಗಳಿಗೆ ವೆನಿಜುವೆಲಾ ಮಣೆ ಹಾಕಿದ್ದು ಅಮೆರಿಕದ ಕಣ್ಣನ್ನು ಕೆಂಪಾಗಿಸಿತು ಮತ್ತು ಮೊನ್ನಿನ ಬೆಳವಣಿಗೆಗೆ ಅದು ಕಾರಣ ವಾಯಿತು. ಈ ಕೃತ್ಯವು ಖಂಡಿತವಾಗಿಯೂ ಅಂತಾರಾಷ್ಟ್ರೀಯ ಕಾನೂನುಗಳ ಮತ್ತು ಅಮೆರಿಕದ ಸಂವಿಧಾನದ ಸ್ಪಷ್ಟ ಉಲ್ಲಂಘನೆ.
ಮಾತ್ರವಲ್ಲದೆ, ‘ಸದಸ್ಯ ರಾಷ್ಟ್ರಗಳ ಸಾರ್ವಭೌಮತ್ವವನ್ನು ಗೌರವದಿಂದ ಕಾಣಬೇಕು’ ಎಂಬ ವಿಶ್ವಸಂಸ್ಥೆಯ ವಿಧಿಯೂ ಉಲ್ಲಂಘನೆಯಾಗಿದೆ. ಇರಾಕ್ ಮತ್ತು ಪನಾಮಾ ದೇಶಗಳಂಥ ಇತರ ತೈಲ ಸಂಪದ್ಭರಿತ ನೆಲೆಗಳ ಮೇಲೂ ಅಮೆರಿಕ ಹಿಂದೆ ಹೀಗೆಯೇ ದಾಳಿ ಮಾಡಿ ಆ ದೇಶಗಳ ಮೇಲೆ ಇಂಥದೇ ಹಿಡಿತ ಸಾಧಿಸಿತ್ತು; ತೈಲಸಂಗ್ರಹದ ಸಿಂಹಪಾಲನ್ನು ಸುಪರ್ದಿಗೆ ತೆಗೆದುಕೊಂಡ ಬಳಿಕ ಆ ದೇಶಗಳಿಂದ ಮಿಲಿಟರಿ ಪಡೆಯನ್ನು ಹಿಂಪಡೆದು ‘ಪ್ರಜಾಪ್ರಭುತ್ವ ವ್ಯವಸ್ಥೆಯ ಮರುಸ್ಥಾಪನೆ’ ಎಂಬ ಹಗಲುನಾಟಕವನ್ನಾಡಿತ್ತು. ವೆನಿಜುವೆಲಾ ಮೇಲಿನ ಮೊನ್ನಿನ ದಾಳಿಯು ಈ ಬೃಹನ್ನಾಟಕ ದ ಮುಂದುವರಿದ ಭಾಗವಷ್ಟೇ!
ಹಾಗೆಂದ ಮಾತ್ರಕ್ಕೆ ವೆನಿಜುವೆಲಾ ಅಧ್ಯಕ್ಷ ಮಡುರೊ ಸಾಚಾ ಏನಲ್ಲ! 2013ರಲ್ಲಿ ಆಗಿನ ಅಧ್ಯಕ್ಷ ಹ್ಯೂಗೋ ನಿಧನದ ಬಳಿಕ ಗಾದಿಯೇರಿದ ಕಮ್ಯುನಿಸ್ಟ್ ಸಿದ್ಧಾಂತದ ಪ್ರತಿಪಾದಕ ಮಡುರೊ, ಇಡೀ ಆಡಳಿತವನ್ನು ತಮ್ಮ ಹತೋಟಿಗೆ ತೆಗೆದುಕೊಂಡು ಸರ್ವಾಧಿಕಾರಿಯಂತೆ ವರ್ತಿಸತೊಡಗಿದರು.
ಅಂತಾರಾಷ್ಟ್ರೀಯ ಒತ್ತಡದ ತರುವಾಯ 2024ರಲ್ಲಿ ಚುನಾವಣೆ ನಡೆಸಿ, ಶೇ.51ರಷ್ಟು ಮತ ಗಳೊಂದಿಗೆ ಗೆದ್ದಿರುವುದಾಗಿ ಸ್ವಯಂ ಘೋಷಿಸಿಕೊಂಡು, ದೇಶದ ಜನರ ಬಗೆಗಿನ ಅಸಡ್ಡೆ ಹೆಚ್ಚಿಸಿ ಕೊಂಡು ಅಧಿಕಾರವನ್ನು ಮುಂದುವರಿಸಿದರು. ಮಡುರೊ ಆಡಳಿತಕ್ಕೆ ಜನರು ಅದೆಷ್ಟು ರೋಸಿ ಹೋಗಿದ್ದರು ಎಂಬುದಕ್ಕೆ, ಅವರನ್ನು ಅಮೆರಿಕ ಬಂಧಿಸಿ ಕರೆದೊಯ್ದಿದ್ದಕ್ಕೆ ದೇಶಾದ್ಯಂತ ಜನರು ಕುಣಿದು ಸಂಭ್ರಮಿಸಿದ್ದೇ ಸಾಕ್ಷಿ!
ಮಡುರೊ ಅವರ ಸರ್ವಾಧಿಕಾರಿ ಧೋರಣೆಯನ್ನು ಹೇಗೆ ಒಪ್ಪಲು ಸಾಧ್ಯವಿಲ್ಲವೋ, ಹಾಗೆಯೇ ಅಮೆರಿಕದ ದಾಳಿ ಮತ್ತು ಅಪಹರಣದ ಘಟನೆಯನ್ನೂ ಒಪ್ಪಲಾಗದು. ತನ್ನ ಆರ್ಥಿಕ ಮತ್ತು ಮಿಲಿಟರಿ ಸಾಮರ್ಥ್ಯವನ್ನು ಮುಂದುಮಾಡಿಕೊಂಡು ದುರ್ಬಲ/ಅಸಹಾಯಕ ದೇಶಗಳ ಮೇಲೆ ದಾಳಿ ಮಾಡುವ ಅಮೆರಿಕದ ವರ್ತನೆಯು, ಎರಡು ಶತಮಾನಗಳ ಹಿಂದಿನ ಮನ್ರೋ ಸಿದ್ಧಾಂತದ ಪುನರಾವರ್ತನೆಯಷ್ಟೇ!
ಅಮೆರಿಕದ ಈ ಅನೈತಿಕತೆಯು ಜಗತ್ತಿನೆಲ್ಲೆಡೆ ಅಸ್ಥಿರತೆ ಮತ್ತು ಪ್ರಕ್ಷುಬ್ಧತೆಯನ್ನು ಉಂಟು ಮಾಡುವ ಆತಂಕವಿದೆ. ಮುಂದಿನ ದಿನಗಳಲ್ಲಿ ಕೊಲಂಬಿಯಾ, ಗ್ರೀನ್‌ಲ್ಯಾಂಡ್, ಇರಾನ್, ಕ್ಯೂಬಾ ದೇಶಗಳ ಮೇಲೂ ಅಮೆರಿಕ ದಾಳಿ ನಡೆಸಬಹುದು ಎಂಬುದಾಗಿ ಟ್ರಂಪ್ ಈಗಾಗಲೇ ಆಣಿಮುತ್ತು ಉದುರಿಸಿರುವುದು ಇದಕ್ಕೆ ಪುಷ್ಟಿ ನೀಡುತ್ತದೆ. ಜಗತ್ತು ಈ ದಿಸೆಯಲ್ಲಿ ಸಾಗಿದರೆ ಮುಂದಿನ ದಿನಗಳನ್ನು ಊಹಿಸುವುದು ಕಷ್ಟ.
ಕೆಲ ದೇಶಗಳ ಮೇಲಿನ ಹಿಂದಿನ ಇಂಥ ದಾಳಿ ಮತ್ತು ಹಿಡಿತದಿಂದ ಅಮೆರಿಕವು ಏನನ್ನೂ ಕಡಿದು ಗುಡ್ಡೆ ಹಾಕಲಾಗಿಲ್ಲ ಎಂಬುದನ್ನು ಜಗತ್ತು ನೋಡಿದೆ. ಅಮೆರಿಕವು ಲಿಬಿಯಾದಲ್ಲಿ ಸೃಷ್ಟಿಸಿದ ಎಡವಟ್ಟು, ವರ್ಷಗಳ ಕಾಲ ಇರಾಕ್‌ನಲ್ಲಿ ಕಾಲೂರಿ ನಿಂತರೂ ತನ್ನ ಆರೋಪವನ್ನು ಸಾಬೀತು ಮಾಡಲಾಗದ ಸ್ಥಿತಿಯನ್ನು ತಲುಪಿದ್ದು, ಅಫ್ಘಾನಿಸ್ತಾನವನ್ನು 2 ದಶಕಗಳ ಕಾಲ ನಿಯಂತ್ರಣಕ್ಕೆ ತೆಗೆದುಕೊಂಡು ಸ್ವಯಂಕೃತಾಪರಾಧಗಳನ್ನು ನಿಭಾಯಿಸಲಾಗದೆ ಓಡಿಹೋಗಿದ್ದು ಇವು ಅಂಥ ಒಂದಷ್ಟು ನಿದರ್ಶನಗಳು.
ಅಸಂಬದ್ಧ ವಿದೇಶಾಂಗ ನೀತಿಗಳು ಮತ್ತು ಅಮಾನುಷ ಸೈನಿಕ ಕಾರ್ಯಾಚರಣೆಗಳಿಂದ ಒದಗಿದ ಫಲಿತದಿಂದ ಅಮೆರಿಕ ಇನ್ನೂ ಪಾಠ ಕಲಿತಿಲ್ಲ. ವೆನಿಜುವೆಲಾದಲ್ಲಿ ಗದ್ದುಗೆಯೇರಿರುವ ನೂತನ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೋಡ್ರಿಗಸ್ ನೇತೃತ್ವದ ಹೊಸ ಸರಕಾರವು ಅಲ್ಲಿನ ಚಿನ್ನ, ಖನಿಜ ಮತ್ತು ತೈಲಸಂಪತ್ತನ್ನು ಅಮೆರಿಕದ ಸುಪರ್ದಿಗೆ ಬಿಡದೆ ಮುಕ್ತವಾಗಿಸುವ ಛಲ ತೋರಿಸಬೇಕು.
ಡೆಲ್ಸಿ ಅವರ ಹೇಳಿಕೆಗಳು ಈ ನಿಟ್ಟಿನಲ್ಲಿ ಆಶಾಭಾವನೆ ಮೂಡಿಸಿವೆ. ಇಂಥ ಪರಿಸ್ಥಿತಿಯಲ್ಲಿ ಭಾರತದ ನಿಲುವೇನು ಎಂಬುದು ಅತಿಮುಖ್ಯ. ಅಂತಾರಾಷ್ಟ್ರೀಯ ಸಂಬಂಧ ಮತ್ತು ಅಭಿಪ್ರಾಯ ಗಳ ಮಂಡನೆಯು ಸದಾ ಹಗ್ಗದ ಮೇಲಿನ ನಡಿಗೆಯಿದ್ದಂತೆ. ವೆನಿಜುವೆಲಾದ ಕಚ್ಚಾತೈಲದ ಆಮದಿನಲ್ಲಿ ಭಾರತದ ಪಾಲೂ ಇದೆ; ಅಮೆರಿಕವು ಕ್ಯಾತೆ ತೆಗೆಯದೇ ಇದ್ದರೆ ಮಾತ್ರವೇ ವೆನಿಜು ವೆಲಾ ಜತೆಗಿನ ಭಾರತದ ಇಂಥ ವ್ಯವಹಾರಗಳು ಅಬಾಧಿತವಾಗಿ ನಡೆದಾವು.
ಒಎನ್‌ಜಿಸಿ, ರಿಲಯನ್ಸ್, ನಯಾರಾ ಮುಂತಾದ ತೈಲಸಂಸ್ಥೆಗಳು ವೆನಿಜುವೆಲಾದಲ್ಲಿ ಹೂಡಿಕೆ ಮತ್ತು ಅಸ್ತಿತ್ವವನ್ನು ಹೊಂದಿವೆ. ಅಲ್ಲಿ ಮುಂದಿನ ದಿನಗಳಲ್ಲಿ ಸ್ಥಿರ ಸರಕಾರ ರೂಪುಗೊಂಡರೆ, ಈ ಸಂಸ್ಥೆಗಳ ತೈಲ ವ್ಯವಹಾರ ಸುಗಮವಾಗಿ ಸಾಗಲಿದೆ. ವೆನಿಜುವೆಲಾ ಸರಕಾರವು ಅಮೆರಿಕದ ಕಂಪನಿಗಳಿಗೆ ಒಳಿತಾಗುವ ನಿಯಮಗಳನ್ನು ತಂದರೆ, ಅಮೆರಿಕದೊಂದಿಗೆ ಸಮಕಾಲೀನ ಬಾಂಧವ್ಯ ಹೊಂದಿರುವ ಭಾರತಕ್ಕೆ ಅದರಿಂದ ಅನುಕೂಲವಾಗಲಿದೆ ಎನ್ನುತ್ತಾರೆ ವಿಶ್ಲೇಷಕರು.
ಹಾಗಾಗಲಿ ಎಂದು ಆಶಿಸೋಣ. ಭಾರತವೂ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳು ಈ ಘಟನೆ ಯನ್ನು ಖಂಡಿಸಿವೆ, ಪರಸ್ಪರ ಸಮಾಲೋಚನೆ ನಡೆಸಿ ಸಮಸ್ಯೆಯನ್ನು ಪರಿಹರಿಸುವಂತೆ ಆಗ್ರಹಿಸಿವೆ. ಪಶ್ಚಿಮದ ರಾಷ್ಟ್ರಗಳಲ್ಲಿ ತನ್ನ ಪ್ರಭಾವ/ಪ್ರಾಬಲ್ಯವನ್ನು ಭೌಗೋಳಿಕವಾಗಿ ಹೆಚ್ಚಿಸಿ ಕೊಳ್ಳುವ, ದಕ್ಷಿಣ ಅಮೆರಿಕದ ವ್ಯಾಪ್ತಿಯಲ್ಲಿ ಚೀನಾ ಮತ್ತು ರಷ್ಯಾದ ಪ್ರಭಾವವನ್ನು ತಗ್ಗಿಸುವ ತನ್ನ ಗುರಿಯನ್ನುತಲುಪಲು ಅಮೆರಿಕವು ಈ ಸಾಹಸಕ್ಕೆ ಕೈಹಾಕಿದ್ದು ಸ್ಫಟಿಕದಷ್ಟೇ ಸ್ಪಷ್ಟ!
‘ನಾವು ಯಾವುದೇ ದೇಶದ ವಸಾಹತು ಆಗಲಾರೆವು’ ಎಂದು ಹೇಳುವ ಮೂಲಕ ವೆನಿಜುವೆಲಾದ ಸುಪ್ರೀಂ ಕೋರ್ಟ್, ಅಮೆರಿಕದೊಂದಿಗೆ ಕೈಜೋಡಿಸುವ ಸಾಧ್ಯತೆಯನ್ನು ನಿರಾಕರಿಸಿದೆ. ವೆನಿಜು ವೆಲಾದಲ್ಲಿ ಅಮೆರಿಕದ ಆಡಳಿತ ನಡೆಯುವುದು ಅಷ್ಟು ಸುಲಭವಲ್ಲ ಮತ್ತು ಅದಕ್ಕೆ ಪೂರಕವಾದ ವಾತಾವರಣವೂ ಸದ್ಯಕ್ಕೆ ಅಲ್ಲಿ ಕಾಣುತ್ತಿಲ್ಲ.
ಕೆರಿಬಿಯನ್ ಸಮುದ್ರ ತಟದಲ್ಲಿ ಅಮೆರಿಕ ನಿಯೋಜಿಸಿರುವ ಸೇನೆಗೆ ತೀಕ್ಷ್ಣ ಪ್ರತಿಕ್ರಿಯೆಯಾಗಿ ವೆನಿಜುವೆಲಾ ತನ್ನ ನೆಲೆ ಮತ್ತು ಗಡಿಯಲ್ಲಿ ಸೇನೆಯನ್ನು ಸಜ್ಜುಗೊಳಿಸಿ ಕಟ್ಟೆಚ್ಚರ ವಹಿಸಿದೆ. ಯಾವ ಕಡೆಯಿಂದ ಪ್ರಚೋದನೆಯಾದರೂ ಒಂದಷ್ಟು ಸ್ವತ್ತುನಷ್ಟ ಮತ್ತು ಪ್ರಾಣ ಹಾನಿ ನಿಶ್ಚಿತ.
‘ಎಂಟು ಯುದ್ಧಗಳನ್ನು ನಿಲ್ಲಿಸಿರುವ’ ಸಮರ್ಥನೆಯನ್ನು ಮುಂದುಮಾಡಿಕೊಂಡು ‘ನೊಬೆಲ್ ಶಾಂತಿ ಪುರಸ್ಕಾರ’ಕ್ಕೆ ಹಠ ಮಾಡಿ ಮುಖಭಂಗಕ್ಕೊಳಗಾದ ಟ್ರಂಪ್, ಈಗ ಅಂತಾರಾಷ್ಟ್ರೀಯ ಕಾನೂನು ಮುರಿದು ದೊಡ್ಡ ಅಪರಾಧ ಎಸಗಿದ್ದಾರೆ. ಈ ದಾಳಿಯನ್ನು ಖಂಡಿಸುವಂಥ ನಿರ್ಣಯ ವನ್ನು ಇಡೀ ಜಗತ್ತು ಒಕ್ಕೊರಲಿನಿಂದ ಕೈಗೊಳ್ಳಬೇಕು. ಈ ದಾಳಿಯ ನಂತರವಂತೂ ಟ್ರಂಪ್ ಮಹಾಶಯರಿಗೆ ನೊಬೆಲ್ ಶಾಂತಿ ಪುರಸ್ಕಾರ ಮರೀಚಿಕೆಯೇ ಸರಿ!
ಈ ಘಟನೆಯ ಕುರಿತು ಅಮೆರಿಕ-ವಿರೋಧಿ ರಾಷ್ಟ್ರಗಳು ಯಾವೆಲ್ಲಾ ನಿರ್ಣಯ/ ಯೋಜನೆ ಹೊಂದಿವೆ ಎನ್ನುವುದರ ಮೇಲೆ ಈ ವಿದ್ಯಮಾನದ ದಿಕ್ಕು, ಜಾಗತಿಕ ಆರ್ಥಿಕತೆ ಮತ್ತು ಅಂತಾರಾ ಷ್ಟ್ರೀಯ ವ್ಯವಹಾರಗಳ ದೆಸೆ ನಿರ್ಧಾರವಾಗಲಿದೆ.
ಜಗತ್ತಿನಲ್ಲಿ ಬಹುತೇಕವಾಗಿ ಎಲ್ಲವೂ ಅಂತಿಮವಾಗಿ ನಿಲ್ಲುವುದು ‘ಹಣ-ಅಧಿಕಾರ-ಪ್ರಭಾವ-ನಿಯಂತ್ರಣ’ ಇವುಗಳ ಮೇಲೆಯೇ! ಸದ್ಯದ ಮಟ್ಟಿಗೆ ಇವೆಲ್ಲವೂ ಉಳಿದೆಲ್ಲರಿಗಿಂತ ಅಮೆರಿಕದ ಬಳಿ ಒಂದು ಪಾವು ಜಾಸ್ತಿಯೇ ಇದೆ! ಹಾಗಾಗಿ ಹೆಚ್ಚೇನೂ ಗೊಂದಲ, ಪ್ರತಿಭಟನೆಗಳು ಆಗಲಾರವು. ಅಮೆರಿಕವು ವೆನಿಜುವೆಲಾದಿಂದ ನೈಸರ್ಗಿಕ ಸಂಪತ್ತನ್ನು ಹಂತಹಂತವಾಗಿ ಆಪೋಶನ ಮಾಡಿ ಕೇಕೆ ಹಾಕಲಿದೆ- ಮುಂದೊಂದು ದಿನ ಇನ್ನೊಂದು ಸಂಪದ್ಭರಿತ ‘ಬಕರಾ ದೇಶ’ ಸಿಗುವವರೆಗೆ!
‘ನಾನೊಬ್ಬ ಸಾಮ್ರಾಟ, ಜಗತ್ತಿನ ಮಿಕ್ಕ ದೇಶಗಳು ನನ್ನ ತಾಳಕ್ಕೆ ತಕ್ಕಂತೆ ಕುಣಿಯುವ ಸಾಮಂತ ರಾಗಬೇಕು’ ಎಂಬ ಅಮೆರಿಕದ ದುರಾಸೆ ಇನ್ನಾದರೂ ಅಳಿಯಲಿ!
(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)