ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishweshwar Bhat Column: ಓಶೋ ನೀಡಿದ ಎರಡು ಉತ್ತರ

ಓಶೋ ಯಾವ ಪ್ರವಚನಕ್ಕೂ ಸಿದ್ಧತೆ ಮಾಡಿಕೊಳ್ಳುತ್ತಿರಲಿಲ್ಲ. ತಮ್ಮ ಮಾತುಗಳನ್ನು ಕೇಳಲು ಬಂದವ ರನ್ನು ನೋಡಿ, ಯಾವ ವಿಷಯದ ಬಗ್ಗೆ ಮಾತಾಡಬೇಕು ಎಂದು ತೀರ್ಮಾನಿಸುತ್ತಿದ್ದರು. ಹೆಚ್ಚಿನ ಸಂದರ್ಭಗಳಲ್ಲಿ ಅವರ ಪ್ರವಚನ, ಪ್ರೇಕ್ಷಕರ ಪ್ರಶ್ನೆಗಳಿಗೆ ಉತ್ತರಿಸುವುದಕ್ಕೆ ಮೀಸಲಾಗಿರು ತ್ತಿತ್ತು. ಯಾರಾದರೂ ಒಂದು ಪ್ರಶ್ನೆ ಕೇಳಿದರೆ, ಅದಕ್ಕೆ ಅವರು ಒಂದು-ಒಂದೂವರೆ ಗಂಟೆ ಉತ್ತರಿಸುತ್ತಿದ್ದರು.

Vishweshwar Bhat Column: ಓಶೋ ನೀಡಿದ ಎರಡು ಉತ್ತರ

-

ಸಂಪಾದಕೀಯ ಸದ್ಯಶೋಧನೆ

ಓಶೋ ಯಾವ ಪ್ರವಚನಕ್ಕೂ ಸಿದ್ಧತೆ ಮಾಡಿಕೊಳ್ಳುತ್ತಿರಲಿಲ್ಲ. ತಮ್ಮ ಮಾತುಗಳನ್ನು ಕೇಳಲು ಬಂದವರನ್ನು ನೋಡಿ, ಯಾವ ವಿಷಯದ ಬಗ್ಗೆ ಮಾತಾಡಬೇಕು ಎಂದು ತೀರ್ಮಾನಿಸುತ್ತಿದ್ದರು. ಹೆಚ್ಚಿನ ಸಂದರ್ಭಗಳಲ್ಲಿ ಅವರ ಪ್ರವಚನ, ಪ್ರೇಕ್ಷಕರ ಪ್ರಶ್ನೆಗಳಿಗೆ ಉತ್ತರಿಸುವುದಕ್ಕೆ ಮೀಸಲಾಗಿರು ತ್ತಿತ್ತು. ಯಾರಾದರೂ ಒಂದು ಪ್ರಶ್ನೆ ಕೇಳಿದರೆ, ಅದಕ್ಕೆ ಅವರು ಒಂದು-ಒಂದೂವರೆ ಗಂಟೆ ಉತ್ತರಿಸುತ್ತಿದ್ದರು.

ಕೆಲವೊಮ್ಮೆ ಅಷ್ಟಕ್ಕೇ ಅವರ ಪ್ರವಚನ ಮುಗಿಯುತ್ತಿತ್ತು. ಹಾಗೆಂದು ಓಶೋ ತಮಾಷೆ ಉತ್ತರ ಗಳನ್ನೂ ನೀಡುತ್ತಿದ್ದರು. ಒಮ್ಮೆ ಅವರ ಪ್ರವಚನ ಕೇಳಲು ಬಂದವರೊಬ್ಬರು, ‘ಕೆಲವು ಸತ್ಯಗಳು ಕವಿಗೆ ಮಾತ್ರ ಅರ್ಥವಾಗುತ್ತವೆ ಎಂದು ಹೇಳುತ್ತಾರೆ, ನಿಜವಾ?’ ಎಂದು ಕೇಳಿದರು. ಅದಕ್ಕೆ ಓಶೋ ಹೀಗೆ ಉತ್ತರಿಸಿದ್ದರು- ‘ಬದುಕಿನ ಬುದ್ಧಿವಂತಿಕೆಯ ವಿಷಯ ಬಂದಾಗ ಕವಿಯಷ್ಟು ದಡ್ಡರು ಯಾರೂ ಇಲ್ಲ. ಆತನಿಗೆ ಹಣ ಮಾಡುವುದು ಗೊತ್ತಿಲ್ಲ. ಅಧಿಕಾರ ಹಿಡಿಯುವುದರಲ್ಲಿ ಆಸಕ್ತಿ ಇಲ್ಲ.

ಆದರೆ ಆತ ತನ್ನ ಕವಿತೆಯ ಜಗತ್ತಿನಲ್ಲಿ ಶ್ರೀಮಂತ. ಈ ಶ್ರೀಮಂತಿಕೆ ಉಳಿದವರಲ್ಲಿ ಕಾಣಲು ಸಾಧ್ಯವಿಲ್ಲ. ಕವಿಗೆ ಪ್ರೀತಿ-ಪ್ರೇಮದ ಮಹತ್ವ ಗೊತ್ತು. ಆತ ದೇವರ ಜತೆ ಸಹ ಸಂವಾದ ನಡೆಸಬಲ್ಲ. ಜೀವನದ ಸಣ್ಣ-ಪುಟ್ಟ ಸಂಗತಿಗಳಲ್ಲಿ ಸಂತಸ ಕಾಣುವವರು ದೇವರಿದ್ದಾನೆ ಎಂದು ನಂಬಬಲ್ಲರು. ದೇವರು ಸಣ್ಣ-ಪುಟ್ಟ ಸಂಗತಿಗಳಲ್ಲೂ ನೆಲೆಸಿದ್ದಾನೆ. ಆತ ನೀವು ಸೇವಿಸುವ ಆಹಾರದಲ್ಲಿ, ಉಸಿರಾಡುವ ಗಾಳಿಯಲ್ಲಿ, ಬೆಳಗಿನ ಕಿರಣಗಳಲ್ಲಿ, ನಡಿಗೆಯಲ್ಲಿ ಇದ್ದಾನೆ.

ಇದನ್ನೂ ಓದಿ: Vishweshwar Bhat Column: ಪೋಸ್ಟ್ ಇಟ್ ಸ್ಟಿಕರ್

ಆತ ನಿಮ್ಮ ಪ್ರೀತಿಯಲ್ಲಿ, ಸ್ನೇಹದಲ್ಲೂ ಇದ್ದಾನೆ. ಆದರೆ ದೇವರು ದೇವಸ್ಥಾನದಲ್ಲಿ, ಚರ್ಚಿನಲ್ಲಿ, ಮಸೀದಿಯಲ್ಲಿ ಇಲ್ಲ. ಅವು ಕವಿತೆಯ ಭಾಗವಲ್ಲ. ಅವೇನಿದ್ದರೂ ರಾಜಕೀಯದ ಭಾಗ. ಜೀವನ ದಲ್ಲಿ ಮೂರ್ಖ ಎಂದು ಕರೆಯಿಸಿಕೊಳ್ಳಲು ಧೈರ್ಯ ಬೇಕು. ಈ ರೀತಿಯ ಧೈರ್ಯ ಇರುವುದಾದರೆ ಅದು ಕವಿಗೆ ಮಾತ್ರ. ಆತನಿಗೆ ತನ್ನ ಕವಿತೆಯ ಮುಂದೆ ಉಳಿದುದೆಲ್ಲವೂ ನಶ್ವರ.

ಆತ ತಲೆಬಾಗುವುದು ಕವಿತೆಗಳಿಗೆ ಮಾತ್ರ. ಆತ ಹೆಚ್ಚು ಹೆಚ್ಚು ಕವಿತ್ವವನ್ನು ಹೊಂದಲು ಬಯಸು ತ್ತಾನೆ. ಕವನಗಳನ್ನು ಬರೆದವರು ಮಾತ್ರ ಕವಿಗಳಲ್ಲ. ಒಂದು ಸಾಲು ಕವನ ಬರೆಯದೇ ಕವಿಯಾಗ ಬಹುದು. ಅಷ್ಟಕ್ಕೂ ಕವನ ಮೂಡುವುದು ಕಾಗದದ ಮೇಲಲ್ಲ, ಹೃದಯ, ಮನಸ್ಸುಗಳಲ್ಲಿ. ಸಾವಿರ ಕವನಗಳನ್ನು ಬರೆದೂ ಕವಿಯಾಗದೇ ಇರಬಹುದು. ಕವಿಯಾಗುವುದು ಬದುಕಿನ ರೀತಿ. ಅದು ಬದುಕಿಗೆ ಪ್ರೀತಿ ನೀಡಿದ ಹಾಗೆ. ಜೀವನವನ್ನು ಗೌರವಿಸಿದಂತೆ. ಬದುಕನ್ನು ಇಡಿಯಾಗಿ ಆಸ್ವಾದಿಸ ಬೇಕೆಂದರೆ ಕವಿಯಾಗಬೇಕು.

ಕವಿಗುಣವನ್ನು ಪೊರೆಯಬೇಕು. ಕವಿತ್ವವನ್ನು ಕಳೆದುಕೊಂಡರೆ ಬದುಕು ನೀರಸವಾಗುತ್ತದೆ. ಎಲ್ಲ ಇದ್ದರೂ ಏನೂ ಇಲ್ಲದವರಂತೆ ಬದುಕುವುದು ನೀರಸವೆನಿಸುತ್ತದೆ. ತನ್ನ ಮುಂದೆ ಸೂರ್ಯೋ ದಯ ಮತ್ತು ಸೂರ್ಯಾಸ್ತದ ಸೊಬಗು ಇಲ್ಲದಿದ್ದರೂ, ಕವಿ ಅವೆರಡರ ಸೌಂದರ್ಯವನ್ನೂ ಕಾಣಬಲ್ಲ ಮತ್ತು ಅನುಭವಿಸಬಲ್ಲ. ಹೀಗಾಗಿ ನಮ್ಮಲ್ಲಿ ಕವಿಗುಣದ ಆರ್ದ್ರತೆಯನ್ನು ಕಾಪಾಡಿ ಕೊಳ್ಳಬೇಕು’.

ಇನ್ನೊಂದು ಪ್ರವಚನದಲ್ಲಿ ಓಶೋಗೆ ಒಬ್ಬರು, ‘ನಾವು ಯಾವತ್ತೂ ಯಾವ ಸ್ಥಿತಿಯಲ್ಲಿ ಇರಬೇಕು?’ ಎಂದು ಕೇಳಿದರು. ಅದಕ್ಕೆ ಓಶೋ ಹೇಳಿದ್ದು- ‘ಮನಸ್ಸನ್ನು ಯಾವತ್ತೂ ಆನಂದದ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ತಲೆಯ ಮೇಲೆ ಗ್ಲಾಸಿನ ಲೋಟವನ್ನು ಇಟ್ಟುಕೊಂಡಂತಿರಬೇಕು. ಕೊನೆಗೆ ಆ ಲೋಟ ತಲೆ ಮೇಲೆ ಇಲ್ಲವೇನೋ ಎಂಬಂತೆ ಇದ್ದುಬಿಡಬೇಕು. ಮನುಷ್ಯನ ಜೀವನದ ಮೂಲ ಉದ್ದೇಶವೇ ಆನಂದ ಮತ್ತು ನೆಮ್ಮದಿ. ಆದರೆ ಬಹುತೇಕ ಜನರಿಗೆ ಈ ಸರಳ ಸತ್ಯವೇ ಗೊತ್ತಿಲ್ಲ.

ಅವರು ಸದಾ ತಮ್ಮನ್ನು ಒತ್ತಡದ ಕಾವಲಿಯ ಮೇಲೆ ಇಟ್ಟುಕೊಂಡು ಸುಟ್ಟುಕೊಳ್ಳುತ್ತಿರುತ್ತಾರೆ. ನೀವು ಅಶಾಂತಿ, ಬೇಸರವನ್ನು ತುಂಬಿಕೊಂಡರೆ, ನಿಮಗೆ ಅನ್ಯಾಯ ಮಾಡಿಕೊಳ್ಳುತ್ತಿದ್ದೀರಿ ಎಂದರ್ಥ. ಹಾಗಂತ ಬೇಸರ, ವಿಷಾದ, ಅಸಮಾಧಾನ ಮನಸ್ಸಿನೊಳಗೆ ಇಣುಕುತ್ತವೆ. ಆದರೆ ಅವನ್ನು ಹೊರಗೋಡಿಸುವ ಕೆಲಸವನ್ನು ಮಾಡುತ್ತಿರಬೇಕು. ಅವುಗಳಿಗೆ ನಿಮ್ಮ ಮನಸ್ಸಿನೊಳಗೆ ಕಾಯಮ್ಮಾಗಿ ನೆಲೆಸಲು ಬಿಡಬಾರದು’.