Gubbi News: ರಾಸಾಯನಿಕಯುಕ್ತ ಆಹಾರವೇ ಕ್ಯಾನ್ಸರ್ ಗೆ ಮೂಲ: ಅನುಪಮಾ ಡಿ.
ಹದಿನಾಲ್ಕು, ಹದಿನೈದು ವಯಸ್ಸಿನ ಹೆಣ್ಣುಮಕ್ಕಳು ಗರ್ಭಕಂಠಕ ಕ್ಯಾನ್ಸರ್ ವಿರುದ್ಧ ಲಸಿಕೆಯನ್ನು ಹಾಕಿಸಿಕೊಂಡು ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳಬೇಕಾಗುತ್ತದೆ. ಕರೋನಾ ಸಮಯದಲ್ಲಿ ವೈದ್ಯರು ಹೆದರಿ ಚಿಕಿತ್ಸೆ ನೀಡದಿದ್ದರೆ ನಾವುಗಳು ಇನ್ನು ಹೆಚ್ಚು ಸಾವಿನ ಸಂಖ್ಯೆಯನ್ನು ಕಾಣ ಬೇಕಾಗುತ್ತಿತ್ತು.
-
ಗುಬ್ಬಿ: ಪ್ರಸ್ತುತ ದಿನದಲ್ಲಿ ಆಹಾರ ಕ್ರಮ ಕಲುಷಿತವಾಗುತ್ತಿದ್ದು, ಪ್ರತಿಯೊಬ್ಬರು ರಾಸಾಯನಿಕ ಯುಕ್ತ ಆಹಾರ ಸೇವನೆ ಮಾಡುತ್ತಾ ಕ್ಯಾನ್ಸರ್ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಅನುಪಮ ಡಿ. ವಿಷಾದಿಸಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಸರ್ಕಾರಿ ಅಭಿಯೋಜನಾ ಇಲಾಖೆ ಹಾಗೂ ಆರೋಗ್ಯ ಇಲಾಖೆ ಇವರುಗಳ ಸಹಯೋಗದೊಂದಿಗೆ ಏರ್ಪಡಿಸಿದ್ದ ಎಚ್ ಪಿವಿ ಲಸಿಕೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಆರೋಗ್ಯ ರಕ್ಷಣೆಗೆ ಧೈರ್ಯ ತೋರಿಸಬೇಕಾಗಿದೆ. ಸರ್ಕಾರವು ಹಲವಾರು ವ್ಯಾಕ್ಸಿನ್ ಗಳನ್ನು ಜಾರಿಗೆ ತಂದಿದ್ದರು ಅವುಗಳನ್ನ ಹಾಕಿಸಿಕೊಳ್ಳದೆ ಕಾಯಿಲೆಗೆ ಬಲಿಯಾಗು ತ್ತಿರುವುದು ಹೆಚ್ಚು ಕಂಡುಬರುತ್ತಿದೆ ಎಂದರು.
ಹದಿನಾಲ್ಕು, ಹದಿನೈದು ವಯಸ್ಸಿನ ಹೆಣ್ಣುಮಕ್ಕಳು ಗರ್ಭಕಂಠಕ ಕ್ಯಾನ್ಸರ್ ವಿರುದ್ಧ ಲಸಿಕೆಯನ್ನು ಹಾಕಿಸಿಕೊಂಡು ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳಬೇಕಾಗುತ್ತದೆ. ಕರೊನಾ ಸಮಯದಲ್ಲಿ ವೈದ್ಯರು ಹೆದರಿ ಚಿಕಿತ್ಸೆ ನೀಡದಿದ್ದರೆ ನಾವುಗಳು ಇನ್ನು ಹೆಚ್ಚು ಸಾವಿನ ಸಂಖ್ಯೆಯನ್ನು ಕಾಣ ಬೇಕಾಗುತ್ತಿತ್ತು. ಆದ್ದರಿಂದ ಯಾವುದೇ ಕಾಯಿಲೆಗೆ ಹೆದರದೆ ಇದ್ದರೆ ಇನ್ನೂ ಹೆಚ್ಚು ಕಾಲ ಆರೋಗ್ಯ ದಿಂದ ಕೂಡಿರಬಹುದು ಎಂದು ತಿಳಿಸಿದರು.
ಇದನ್ನೂ ಓದಿ: Gubbi News: ಗ್ರಾಮೀಣ ಜನರ ಆರೋಗ್ಯಕ್ಕೆ ಮಲ್ಟಿ ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್ ಲೋಕಾರ್ಪಣೆ
ಅಧಿಕ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪೂರ್ಣಿಮಾ ಕೆ.ಯಾದವ್ ಮಾತನಾಡಿ, ತಾಯಿಯಾಗಿ ಮಕ್ಕಳನ್ನು ರಕ್ಷಣೆ ಮಾಡುವುದು ಆದ್ಯ ಕರ್ತವ್ಯವಾಗಿದ್ದು ಈ ನಿಟ್ಟಿನಲ್ಲಿ, ಪೋಷಕರು ಮಕ್ಕಳ ರಕ್ಷಣೆಗಾಗಿ ಹೆಚ್ ಪಿವಿ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಬೇಕು. ಸರ್ಕಾರಕ್ಕೆ ಜವಾಬ್ದಾರಿ ಇರುವುದರಿಂದ ಆರೋಗ್ಯ ರಕ್ಷಣೆ ಮಾಡುವ ನಿಟ್ಟಿನಲ್ಲಿ ಹೊಸ ಹೊಸ ಲಸಿಕೆಗಳನ್ನು ಜಾರಿಗೆ ತರುತ್ತಿದೆ. ಅವುಗಳನ್ನು ನಾವುಗಳು ತಪ್ಪದೆ ಹಾಕಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ತಾಲೂಕು ವೈದ್ಯಾಧಿಕಾರಿ ಡಾ.ಜೆ.ವಿಜಯ್ ಕುಮಾರ್ ಮಾತನಾಡಿ, ಯುವತಿಯರ ಭವಿಷ್ಯದ ಆರೋಗ್ಯವನ್ನು ರಕ್ಷಿಸಲು ಹೆಚ್'ಪಿವಿ ಲಸಿಕೆ ಸಹಕಾರಿ. ಲಸಿಕೆ ಹಾಕಿಸಿಕೊಳ್ಳುವುದರಿಂದ ಕ್ಯಾನ್ಸರ್ ಚಿಕಿತ್ಸೆಗೆ ಬೇಕಾಗುವ ಹೆಚ್ಚಿನ ವೆಚ್ಚ ಮತ್ತು ದೈಹಿಕ ಮಾನಸಿಕ ತೊಂದರೆಗಳನ್ನು ತಪ್ಪಿಸಲು ನೆರವಾಗುತ್ತದೆ. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಲಸಿಕೆಯನ್ನು 9 ರಿಂದ 14 ವರ್ಷದ ಬಾಲಕಿಯರಿಗೆ ನೀಡುವುದು ಅತ್ಯಂತ ಪರಿಣಾಮಕಾರಿಯಾಗಿದೆ.
15 ವರ್ಷ ಮೇಲ್ಪಟ್ಟವರೂ ವೈದ್ಯರ ಸಲಹೆಯಂತೆ ಲಸಿಕೆ ಪಡೆಯಬಹುದು. ಲಸಿಕೆ ಪಡೆದ ನಂತರ ವೂ ವೈದ್ಯರ ಸಲಹೆಯಂತೆ ನಿಯಮಿತ ಗರ್ಭಕಂಠ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಎಂದರು.
ಕಾರ್ಯಕ್ರಮದಲ್ಲಿ ಸಿವಿಲ್ ನ್ಯಾಯಾಧೀಶರಾದ ಎಸ್.ಪಿ.ಕಿರಣ್, ಅಧಿಕ ಸಿವಿಲ್ ನ್ಯಾಯಾಧೀಶರಾದ ಹೆಚ್.ವಿ.ಸವಿತಾರಾಣಿ, ಸರ್ಕಾರಿ ಅಭಿಯೋಜಕರಾದ ಕೆ.ಶೋಭಾ, ಅಕ್ಷತಾ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಪಿ.ರವೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ನಟರಾಜು, ವೈದ್ಯರಾದ ಡಾ.ಕೇಶವ್ ರಾಜ್, ಡಾ.ಪ್ರಭಾ ಡಾ.ಸುದರ್ಶನ್, ಜಗದೀಶ್, ಮಧು, ಇನ್ನರ್ ಕ್ಲಬ್ ಪದಾಧಿಕಾರಿಗಳು, ಆಸ್ಪತ್ರೆಯ ಸಿಬ್ಬಂದಿಗಳು, ಮಕ್ಕಳು, ಪೋಷಕರು ಇತರರು ಇದ್ದರು.