Roopa Gururaj Column: ವಿಕ್ರಮ ಬೇತಾಳ 21: ವಿಕ್ರಮಾದಿತ್ಯನಿಗೆ ಸಿಕ್ಕ ಉಡುಗೊರೆಗಳ ಬೆಲೆ
ರಾಜನು ಆತನ ಹಣ್ಣು-ರತ್ನಗಳ ಋಣಕ್ಕೆ ಕಟ್ಟುಬಿದ್ದು ಸಮ್ಮತಿಸಿದನು. ಆದರೆ ಕರಾಳ ರಾತ್ರಿಯಂದು ಸ್ಮಶಾನಕ್ಕೆ ಹೋದಾಗ ಮಾತ್ರ ಆ ತಪಸ್ವಿಯ ಭೀಕರ ಸಂಚು ವಿಕ್ರಮನಿಗೆ ಬಯಲಾ ಯಿತು. ಆ ಯೋಗಿ ವಾಸ್ತವವಾಗಿ ಸಾಧುವೇ ಆಗಿರಲಿಲ್ಲ, ವಿದ್ಯಾಧರ ಚಕ್ರವರ್ತಿಯ ಪದವಿ ಪಡೆಯಲು ನರಬಲಿಯನ್ನು ಹುಡುಕುತ್ತಿದ್ದ ಕ್ರೂರ ಕ್ಷುದ್ರ ಮಾಂತ್ರಿಕ!
-
ಒಂದೊಳ್ಳೆ ಮಾತು
ಉಜ್ಜಯಿನಿಯ ಮಹಾರಾಜ ವಿಕ್ರಮಾದಿತ್ಯನ ಆಸ್ಥಾನಕ್ಕೆ ಶಾಂತಿಶೀಲನೆಂಬ ಸನ್ಯಾಸಿಯೊಬ್ಬ ಪ್ರತಿದಿನ ಭೇಟಿ ನೀಡುತ್ತಿದ್ದನು. ಆತ ಪ್ರತಿನಿತ್ಯ ರಾಜನಿಗೆ ಗೌರವಪೂರ್ವಕವಾಗಿ ಒಂದೊಂದು ಬಿಲ್ವಪತ್ರೆ ಅಥವಾ ಕೇವಲ ಒಂದು ತಾಜಾ ಹಣ್ಣನ್ನು ಉಡುಗೊರೆಯಾಗಿ ನೀಡಿ, ಆಶೀರ್ವದಿಸಿ ಮೌನವಾಗಿ ಹೊರಟು ಹೋಗುತ್ತಿದ್ದನು. ರಾಜನು ಆತನನ್ನು ಒಬ್ಬ ನಿಸ್ಪೃಹ, ನಿರಾಡಂಬರ ತಪಸ್ವಿ ಎಂದು ಭಾವಿಸಿ, ಆ ಹಣ್ಣು ಗಳನ್ನು ಖಜಾನೆಯ ಕಪಾಟಿನಲ್ಲಿ ಜೋಪಾನವಾಗಿ ಇರಿಸಲು ಭಂಡಾರಿಗೆ ಒಪ್ಪಿಸುತ್ತಿದ್ದನು. ಹೀಗೆ ಹತ್ತು ವರ್ಷಗಳು ಉರುಳಿದವು!
ಒಂದು ದಿನ ಎಂದಿನಂತೆ ಸನ್ಯಾಸಿ ಬಂದು ಹಣ್ಣೊಂದನ್ನು ನೀಡಿದಾಗ, ಪಕ್ಕದ ಆಡುತ್ತಿದ್ದ ಸಾಕು ಕೋತಿಯೊಂದು ಆ ಹಣ್ಣನ್ನು ಕಿತ್ತುಕೊಂಡು ನೆಲಕ್ಕೆ ಅಪ್ಪಳಿಸಿತು. ಆಶ್ಚರ್ಯವೆಂದರೆ, ಹಣ್ಣು ಒಡೆದಾಗ ಅದರ ಒಳಗಿನಿಂದ ಕಣ್ಣುಕೋರೈಸುವ, ಅಪಾರ ಬೆಲೆಬಾಳುವ ದಿವ್ಯ ಮಾಣಿಕ್ಯ ವೊಂದು ಉರುಳಿ ಬಿತ್ತು!
ಬೆರಗಾದ ರಾಜನು ತಕ್ಷಣವೇ ಖಜಾನೆಗೆ ತೆರಳಿ, ಕಳೆದ ಹತ್ತು ವರ್ಷಗಳಿಂದ ಆ ಸನ್ಯಾಸಿ ಕೊಟ್ಟಿದ್ದ ಹಣ್ಣು ಗಳ ರಾಶಿಯನ್ನು ಪರಿಶೀಲಿಸಿದನು. ಒಣಗಿದ ಪ್ರತಿಯೊಂದು ಹಣ್ಣಿನ ಒಳಗೂ ಒಂದೊಂದು ಬೆಲೆಕಟ್ಟ ಲಾಗದ ಅಪೂರ್ವ ರತ್ನವಿತ್ತು!
ಇದನ್ನೂ ಓದಿ: Roopa Gururaj Column: ವಿಕ್ರಮ ಬೇತಾಳ 20: ಸೋಮದತ್ತನ ಉಪಕಾರ ಮರೆತ ಅಕ್ಕಸಾಲಿಗ
ಮಾರನೆಯ ದಿನ ಸನ್ಯಾಸಿ ಬಂದಾಗ ರಾಜನು ವಿನಮ್ರವಾಗಿ, ಸ್ವಾಮಿ, ಇಂತಹ ಅಪಾರ ಸಂಪತ್ತನ್ನು ನೀವು ನನಗೆ ನಿರಂತರವಾಗಿ ಧಾರೆಯೆರೆಯಲು ಕಾರಣವೇನು? ನಿಮ್ಮ ಈ ಉಪಕಾರಕ್ಕೆ ಪ್ರತಿಯಾಗಿ ನಾನೇನು ಮಾಡಬೇಕು? ಎಂದು ಕೈಮುಗಿದು ಕೇಳಿದನು. ಆಗ ಆ ಕಪಟ ತಪಸ್ವಿಯು ತನ್ನ ಅಸಲಿ ದಾಳವನ್ನು ಉರುಳಿಸಿದನು: ರಾಜಾ, ಮುಂಬರುವ ಕೃಷ್ಣಪಕ್ಷದ ಚತುರ್ದಶಿಯ ಅಮಾವಾಸ್ಯೆಯ ಕಗ್ಗತ್ತಲೆಯ ರಾತ್ರಿಯಲ್ಲಿ, ಸ್ಮಶಾನದಲ್ಲಿ ನಾನು ಮಹಾಸಿದ್ಧಿಯನ್ನು ಪಡೆಯಲು ಒಂದು ಗುಪ್ತ ತಾಂತ್ರಿಕ ಯಾಗವನ್ನು ಕೈಗೊಳ್ಳುತ್ತಿದ್ದೇನೆ. ಆ ಯಾಗದ ರಕ್ಷಣೆಗಾಗಿ ನಿನ್ನಂತಹ ಪರಾಕ್ರಮಿ ಕ್ಷತ್ರಿಯನ ಸಾನ್ನಿಧ್ಯ ಬೇಕು. ನೀನು ನನಗೊಂದು ರಾತ್ರಿ ಕಾವಲು ನಿಲ್ಲಬೇಕು ಎಂದು ಕೋರಿದನು.
ರಾಜನು ಆತನ ಹಣ್ಣು-ರತ್ನಗಳ ಋಣಕ್ಕೆ ಕಟ್ಟುಬಿದ್ದು ಸಮ್ಮತಿಸಿದನು. ಆದರೆ ಕರಾಳ ರಾತ್ರಿ ಯಂದು ಸ್ಮಶಾನಕ್ಕೆ ಹೋದಾಗ ಮಾತ್ರ ಆ ತಪಸ್ವಿಯ ಭೀಕರ ಸಂಚು ವಿಕ್ರಮನಿಗೆ ಬಯಲಾ ಯಿತು. ಆ ಯೋಗಿ ವಾಸ್ತವವಾಗಿ ಸಾಧುವೇ ಆಗಿರಲಿಲ್ಲ, ವಿದ್ಯಾಧರ ಚಕ್ರವರ್ತಿಯ ಪದವಿ ಪಡೆಯಲು ನರಬಲಿಯನ್ನು ಹುಡುಕುತ್ತಿದ್ದ ಕ್ರೂರ ಕ್ಷುದ್ರ ಮಾಂತ್ರಿಕ!
ಆತ ವಿಕ್ರಮನಿಂದಲೇ ಮರದಲ್ಲಿದ್ದ ಬೇತಾಳನ ಶವವನ್ನು ತರಿಸಿ, ಕೊನೆಗೆ ವಿಕ್ರಮಾದಿತ್ಯನನ್ನೇ ಕಾಳಿಗೆ ಬಲಿ ಕೊಟ್ಟು ಸಿದ್ಧಿ ಸಾಧಿಸಲು ಹೊಂಚು ಹಾಕಿದ್ದನು! ಬೇತಾಳನ ಎಚ್ಚರಿಕೆಯಿಂದ ಎಚ್ಚೆತ್ತ ರಾಜನು, ಕಪಟ ತಪಸ್ವಿಯ ರುಂಡವನ್ನೇ ಕತ್ತರಿಸಿ ಆತನ ಕುತಂತ್ರಕ್ಕೆ ಮುಕ್ತಾಯ ಹಾಡಿದನು. ಕಥೆಯನ್ನು ಮುಗಿಸಿದ ಬೇತಾಳನು ವಿಕ್ರಮಾದಿತ್ಯನಿಗೆ ಪ್ರಶ್ನೆಯೊಡ್ಡುತ್ತಾನೆ: ಹೇ ರಾಜಾ, ಆ ತಪಸ್ವಿ ಹತ್ತು ವರ್ಷಗಳ ಕಾಲ ಕಾಯ್ದು ಅಪಾರ ರತ್ನಗಳನ್ನು ವ್ಯರ್ಥವಾಗಿ ದಾನ ಮಾಡಿದ್ದೇಕೆ? ಆತನ ಈ ಕಪಟಕ್ಕೆ ಮೂಲ ಕಾರಣವೇನು? ವಿಕ್ರಮಾದಿತ್ಯನು ಉತ್ತರಿಸುತ್ತಾನೆ- ಮಹಾ ದುರಾಸೆ ಮತ್ತು ಸ್ವಾರ್ಥದ ಸಾಧನೆಗಾಗಿ ಕಪಟಿ ಗಳು ಎಂತಹ ದೊಡ್ಡ ತ್ಯಾಗದ ನಾಟಕವನ್ನಾದರೂ ಆಡಬಲ್ಲರು!
ಮೀನನ್ನು ಹಿಡಿಯಲು ಗಾಳಕ್ಕೆ ಹುಳವನ್ನು ಸಿಕ್ಕಿಸುವಂತೆ, ರಾಜನ ವಿಶ್ವಾಸವನ್ನು ಸಂಪೂರ್ಣ ವಾಗಿ ಗಳಿಸಲು ಆತ ಹತ್ತು ವರ್ಷಗಳ ಕಾಲ ರತ್ನಗಳನ್ನು ಬಲಿಯಾಗಿ ಎಸೆದಿದ್ದನು. ಕಪಟ ತಪಸ್ಸಿನ ವೇಷ ಮತ್ತು ಉಡುಗೊರೆಗಳು ಕೇವಲ ಅಮಾಯಕರ ಕಣ್ಣಿಗೆ ಮಣ್ಣೆರಚುವ ಸಾಧನಗಳಷ್ಟೇ. ಬದುಕಿನಲ್ಲಿ ಯಾರಾದರೂ ಅತಿಯಾದ ನಮ್ರತೆ, ನಿರೀಕ್ಷೆಗೂ ಮೀರಿದ ಉಡುಗೊರೆಗಳು ಅಥವಾ ಮುಖಸ್ತುತಿಯನ್ನು ಸತತವಾಗಿ ಮಾಡುತ್ತಿದ್ದರೆ, ನಾವು ಎಚ್ಚರದಿಂದಿರಬೇಕು.
ಹೊರಗಿನ ಕಾವಿ, ಹಣೆ ಮೇಲಿನ ತಿಲಕ ಅಥವಾ ಸಿಹಿಯಾದ ಮಾತುಗಳು ಎಂದಿಗೂ ಒಬ್ಬ ವ್ಯಕ್ತಿಯ ಶುದ್ಧತೆಗೆ ಸಾಕ್ಷಿಯಾಗಲಾರವು. ಅತಿಯಾದ ವಿನಯ ಮತ್ತು ಒಳ್ಳೆಯತನದ ಹಿಂದೆ ಹಲವು ವಿನಾಶ ಕಾರಿ ಸ್ವಾರ್ಥ ಅಡಗಿರ ಬಹಕದು. ಮನುಷ್ಯನನ್ನು ಆತನ ಮಾತು ಅಥವಾ ಬಾಹ್ಯ ವೈಭವದಿಂದ ಅಳೆಯದೆ, ಆತನ ನಡತೆ, ಉದ್ದೇಶ ಮತ್ತು ಪ್ರಾಮಾಣಿಕತೆಯಿಂದ ಪರೀಕ್ಷಿಸಬೇಕು. ಕಣ್ಣಿಗೆ ಕಾಣುವ ಹೊಳಪಿಗೆ ಮರುಳಾಗದೆ, ಎಚ್ಚರಿಕೆಯ ವಿವೇಕದಿಂದ ಬದುಕು ನಡೆಸುವುದೇ ನಿಜವಾದ ರಕ್ಷಣೆ.