Roopa Gururaj Column: ವಿಕ್ರಮ ಬೇತಾಳ 14: ವಿದ್ವತ್ತಿನ ಅಹಂಕಾರ ಮತ್ತು ಲೌಕಿಕ ವಾಸ್ತವದ ಪ್ರಜ್ಞೆ
ವಾರಣಾಸಿಯ ನಾಲ್ವರು ಯುವಕರು ವಿದ್ಯಾಭ್ಯಾಸಕ್ಕಾಗಿ ಗುರುಕುಲಕ್ಕೆ ಸೇರುತ್ತಾರೆ. ಅವರಲ್ಲಿ ಮೊದಲ ಮೂವರು ಕಠಿಣ ಶ್ರಮಪಟ್ಟು ಗಹನವಾದ ಮಂತ್ರಶಾಸ್ತ್ರ ಹಾಗೂ ಗೂಢವಿದ್ಯೆಗಳನ್ನು ಕರಗತ ಮಾಡಿಕೊಳ್ಳುತ್ತಾರೆ. ಆದರೆ ನಾಲ್ಕನೆಯವನಿಗೆ ಅಂತಹ ಯಾವುದೇ ಜಟಿಲ ಮಂತ್ರಗಳು ಒಲಿಯುವು ದಿಲ್ಲ; ಆತನಿಗೆ ಇದ್ದದ್ದು ಕೇವಲ ಪ್ರಾಪಂಚಿಕ ಜ್ಞಾನ ಮತ್ತು ಬದುಕಿನ ವಾಸ್ತವ ಪ್ರಜ್ಞೆ ಮಾತ್ರ.
-
ಒಂದೊಳ್ಳೆ ಮಾತು
ಶಾಸ್ತ್ರಗಳನ್ನು ಓದಿ ಪಾಂಡಿತ್ಯ ಗಳಿಸುವುದು ದೊಡ್ಡದಲ್ಲ; ಆ ಜ್ಞಾನವನ್ನು ಎಲ್ಲಿ, ಹೇಗೆ ಮತ್ತು ಯಾವಾಗ ಬಳಸಬೇಕೆಂಬ ವಿವೇಕ ಇರುವುದು ಎಲ್ಲಕ್ಕಿಂತ ಮುಖ್ಯ. ‘ಕಥಾಸರಿತ್ಸಾಗರ’ದ ಬೇತಾಳ ಪಂಚವಿಂಶತಿಯ 14ನೇಯ ಕಥೆ ಅತಿಯಾದ ಪಾಂಡಿತ್ಯದ ಅಹಂಕಾರ ಮತ್ತು ವಿವೇಕಹೀನತೆಯ ಅಪಾಯವನ್ನು ಮಾರ್ಮಿಕವಾಗಿ ತೆರೆದಿಡುತ್ತದೆ.
ವಾರಣಾಸಿಯ ನಾಲ್ವರು ಯುವಕರು ವಿದ್ಯಾಭ್ಯಾಸಕ್ಕಾಗಿ ಗುರುಕುಲಕ್ಕೆ ಸೇರುತ್ತಾರೆ. ಅವರಲ್ಲಿ ಮೊದಲ ಮೂವರು ಕಠಿಣ ಶ್ರಮಪಟ್ಟು ಗಹನವಾದ ಮಂತ್ರಶಾಸ್ತ್ರ ಹಾಗೂ ಗೂಢವಿದ್ಯೆಗಳನ್ನು ಕರಗತ ಮಾಡಿಕೊಳ್ಳುತ್ತಾರೆ. ಆದರೆ ನಾಲ್ಕನೆಯವನಿಗೆ ಅಂತಹ ಯಾವುದೇ ಜಟಿಲ ಮಂತ್ರಗಳು ಒಲಿಯುವುದಿಲ್ಲ; ಆತನಿಗೆ ಇದ್ದದ್ದು ಕೇವಲ ಪ್ರಾಪಂಚಿಕ ಜ್ಞಾನ ಮತ್ತು ಬದುಕಿನ ವಾಸ್ತವ ಪ್ರಜ್ಞೆ ಮಾತ್ರ.
ವಿದ್ಯಾಭ್ಯಾಸ ಮುಗಿಸಿ ರಾಜನಿಂದ ಸನ್ಮಾನ ಪಡೆಯಲು ನಾಲ್ವರೂ ರಾಜಧಾನಿಯ ಕಡೆಗೆ ಹೊರಡುತ್ತಾರೆ. ದಾರಿಯಲ್ಲಿ ದಟ್ಟವಾದ ಅರಣ್ಯವನ್ನು ದಾಟುತ್ತಿದ್ದಾಗ, ನೆಲದ ಮೇಲೆ ಬಿದ್ದಿದ್ದ ಪ್ರಾಣಿಯೊಂದರ ಒಣಗಿದ ಮೂಳೆಗಳ ರಾಶಿ ಅವರ ಕಣ್ಣಿಗೆ ಬೀಳುತ್ತದೆ. ತಕ್ಷಣವೇ ಮೊದಲ ಮೂವರಲ್ಲಿ ತಮ್ಮ ವಿದ್ಯೆಯ ಬಡಾಯಿ ಪ್ರದರ್ಶಿಸುವ ಹಪಹಪಿ ಶುರುವಾಗುತ್ತದೆ. ಮೊದಲನೆ ಯವನು, ನನ್ನ ಮಂತ್ರಶಕ್ತಿಯಿಂದ ಈ ಎಲ್ಲ ಮೂಳೆಗಳನ್ನು ಸರಿಯಾಗಿ ಜೋಡಿಸಿ ಅಸ್ಥಿಪಂಜರ ಸೃಷ್ಟಿಸುತ್ತೇನೆ ಎನ್ನುತ್ತಾನೆ.
ಇದನ್ನೂ ಓದಿ: Roopa Gururaj Column: ವಿಕ್ರಮ ಬೇತಾಳ 13: ಚಂದ್ರಪ್ರಭೆಯ ಪ್ರೇಮದ ಭ್ರಮೆ
ಎರಡನೆಯವನು, ನನ್ನ ವಿದ್ಯೆಯಿಂದ ಅದಕ್ಕೆ ಚರ್ಮ, ಮಾಂಸ, ನರ ಮತ್ತು ರಕ್ತ ತುಂಬಿ ಶರೀರ ರೂಪಿಸುತ್ತೇನೆ ಎಂದು ಬೀಗುತ್ತಾನೆ. ಮೂರನೆಯವನು, ನನ್ನ ಸಂಜೀವಿನಿ ಮಂತ್ರದಿಂದ ಅದಕ್ಕೆ ಉಸಿರು ತುಂಬಿ ಜೀವಂತವಾಗಿ ಎದ್ದು ನಿಲ್ಲುವಂತೆ ಮಾಡುತ್ತೇನೆ ಎಂದು ಹೆಮ್ಮೆಯಿಂದ ನುಡಿಯು ತ್ತಾನೆ. ಆಗ ಸಾಮಾನ್ಯ ಜ್ಞಾನವಂತನಾದ ನಾಲ್ಕನೆಯ ಯುವಕ ಆ ಮೂಳೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಸ್ನೇಹಿತರೇ, ಈ ಮೂಳೆಗಳು ಕ್ರೂರ ಸಿಂಹದ್ದು!
ನಿಮ್ಮ ವಿದ್ಯೆಯ ಪ್ರದರ್ಶನಕ್ಕಾಗಿ ಅದಕ್ಕೆ ಜೀವ ತಂದರೆ, ಅದು ಎದ್ದು ನಿಂತ ಕ್ಷಣವೇ ನಮ್ಮನ್ನೆಲ್ಲ ಕೊಂದು ತಿಂದುಬಿಡುತ್ತದೆ, ದುಡುಕಬೇಡಿ ಎಂದು ಕೈಮುಗಿದು ಎಚ್ಚರಿಸುತ್ತಾನೆ. ಆದರೆ ಅಹಂಕಾರದ ಅಮಲಿನಲ್ಲಿದ್ದ ಆ ಮೂವರು ವಿದ್ವಾಂಸರು, ನಮ್ಮ ಅಪೂರ್ವ ವಿದ್ಯೆಯನ್ನು ಕಂಡು ಹೊಟ್ಟೆಕಿಚ್ಚು ಪಡಬೇಡ ಮೂರ್ಖನೇ! ನಿನ್ನಂತಹ ಸಾಮಾನ್ಯನ ಮಾತನ್ನು ನಾವು ಕೇಳಬೇಕೇ? ಎಂದು ಆತನನ್ನು ಗೇಲಿ ಮಾಡುತ್ತಾರೆ.
ವಿಧಿಯಿಲ್ಲದೆ ಆ ನಾಲ್ಕನೆಯವನು, ಸರಿ, ನಿಮ್ಮ ಪ್ರದರ್ಶನ ಮುಗಿಯುವವರೆಗೆ ನಾನು ಮರ ಹತ್ತಿ ಕುಳಿತು ಕೊಳ್ಳುತ್ತೇನೆ ಎಂದು ಪಕ್ಕದಲ್ಲಿದ್ದ ಎತ್ತರದ ಮರವನ್ನೇರಿ ಕುಳಿತುಕೊಳ್ಳುತ್ತಾನೆ. ಮೊದಲನೆಯವನು ಮೂಳೆ ಜೋಡಿಸಿದ, ಎರಡನೆಯವನು ಮಾಂಸ-ರಕ್ತ ತುಂಬಿದ; ಅದು ಭೀಕರ ಸಿಂಹದ ಆಕಾರ ತಳೆಯಿತು. ಮೂರನೆಯವನು ಅಹಂಕಾರದಿಂದ ಮಂತ್ರೋಚ್ಛಾರಣೆ ಮಾಡಿ ಜೀವ ತುಂಬಿದನು!
ಕಣ್ಣು ತೆರೆದ ಹಸಿದ ಸಿಂಹವು ಘರ್ಜಿಸುತ್ತಾ ಎದ್ದು, ಕಣ್ಣೆದುರೇ ನಿಂತಿದ್ದ ಆ ಮೂವರ ಮೇಲೂ ಎರಗಿ ಕ್ಷಣಮಾತ್ರದಲ್ಲಿ ಅವರ ರಕ್ತ-ಮಾಂಸಗಳನ್ನು ತಿಂದು ಮುಗಿಸಿತು. ಅಹಂಕಾರಿಗಳ ಸರ್ವನಾಶ ವನ್ನು ಕಣ್ಣಾರೆ ಕಂಡ ನಾಲ್ಕನೆಯವನು, ಸಿಂಹ ಹೊರಟುಹೋದ ನಂತರ ಸುರಕ್ಷಿತವಾಗಿ ಮರದಿಂದಿಳಿದು ಮನೆಗೆ ಮರಳಿದನು.
ಕಥೆಯನ್ನು ಮುಗಿಸಿದ ಬೇತಾಳನು ವಿಕ್ರಮಾದಿತ್ಯನಿಗೆ ಕಠಿಣ ಪ್ರಶ್ನೆಯೊಡ್ಡುತ್ತಾನೆ: ಹೇ ರಾಜಾ, ಆ ಮೂವರು ವಿದ್ವಾಂಸರ ಅಕಾಲಿಕ ಸಾವಿಗೆ ಯಾರು ಹೊಣೆ? ಮೂಳೆ ಜೋಡಿಸಿದವನೋ? ಮಾಂಸ ತುಂಬಿದವನೋ? ಜೀವ ಕೊಟ್ಟವನೋ? ಅಥವಾ ಮರ ಹತ್ತಿ ತನ್ನ ಪ್ರಾಣ ಉಳಿಸಿಕೊಂಡವನೋ? ವಿಕ್ರಮಾದಿತ್ಯನು ಉತ್ತರಿಸುತ್ತಾನೆ: ಆ ಸಾವಿಗೆ ಪ್ರಮುಖ ಹೊಣೆಗಾರ ಜೀವಕೊಟ್ಟ ಮೂರನೆ ಯವನೇ!
ಮೊದಲ ಇಬ್ಬರು ಕೇವಲ ಜಡ ಶರೀರವನ್ನು ನಿರ್ಮಿಸಿದರು; ಜಡ ಶರೀರದಿಂದ ಯಾರಿಗೂ ಪ್ರಾಣಾಪಾಯ ವಿರಲಿಲ್ಲ. ಆದರೆ, ಅದು ಕ್ರೂರ ಪ್ರಾಣಿಯೆಂದು ಕಣ್ಣೆದುರೇ ಕಾಣುತ್ತಿದ್ದರೂ, ಮಿತ್ರನ ಎಚ್ಚರಿಕೆಯನ್ನು ಧಿಕ್ಕರಿಸಿ ಕೇವಲ ತನ್ನ ಅಹಂಕಾರ ತೃಪ್ತಿಗಾಗಿ ಅದಕ್ಕೆ ಉಸಿರು ತುಂಬಿದ ಮೂರನೆಯವನೇ ಈ ಸರ್ವನಾಶದ ಮೂಲ ಕಾರಣ. ಅರಿವಿದ್ದೂ ವಿನಾಶಕಾರಿ ಶಕ್ತಿಯನ್ನು ಜಾಗೃ ತಗೊಳಿಸುವುದು ಅಕ್ಷಮ್ಯ ಅಪರಾಧ. ಕೇವಲ ಪದವಿಗಳು, ತಾಂತ್ರಿಕ ಜ್ಞಾನ ಅಥವಾ ಅಧಿಕಾರ ವಿದ್ದ ತಕ್ಷಣ ಮನುಷ್ಯ ಶ್ರೇಷ್ಠನಾಗುವುದಿಲ್ಲ. ತಾನು ಮಾಡುತ್ತಿರುವ ಕೆಲಸದ ಪರಿಣಾಮವೇನು ಎಂಬುದನ್ನು ಯೋಚಿಸುವ ಪ್ರಜ್ಞೆ ಇರಬೇಕು.
ವಿವೇಕವಿಲ್ಲದ ಜ್ಞಾನವು ತನ್ನನ್ನಷ್ಟೇ ಅಲ್ಲ, ಸುತ್ತಮುತ್ತಲಿನ ಎಲ್ಲರನ್ನೂ ಸುಟ್ಟುಹಾಕುವ ಬೆಂಕಿಯಂತೆ. ಎಷ್ಟೇ ವಿದ್ಯಾವಂತರಾಗಿದ್ದರೂ ವಾಸ್ತವ ಪ್ರಜ್ಞೆಯನ್ನು ಕಳೆದುಕೊಳ್ಳಬಾರದು. ಇನ್ನೊಬ್ಬರ ಹಿತವಚನವನ್ನು ಅಹಂಕಾರದಿಂದ ತಿರಸ್ಕರಿಸುವ ಗುಣವೇ ವಿನಾಶದ ಮೊದಲ ಮೆಟ್ಟಿಲು. ಜ್ಞಾನಕ್ಕೆ ವಿನಯ ಮತ್ತು ವಿವೇಕದ ಸ್ಪರ್ಶವಿದ್ದಾಗ ಮಾತ್ರ ಅದು ನಮ್ಮ ರಕ್ಷಣೆ ಮಾಡುತ್ತದೆ. ಇಲ್ಲವಾದರೆ ಅದು ಸ್ವಯಂಕೃತ ಅಪರಾಧವಾಗಿ ನಮ್ಮನ್ನೇ ಬಲಿ ತೆಗೆದುಕೊಳ್ಳುತ್ತದೆ.