Shishir Hegde Column: ಉತ್ತರಗಳಿಗಿಂತ ಪ್ರಶ್ನೆಗಳೇ ನಮ್ಮ ಬಂಡವಾಳ ಬಿಚ್ಚಿಡುತ್ತವೆ
ಇನ್ನು ಕೆಲವರ ಮಾತು ಮುಂದುವರಿದು ವಿಷಯಾಂತರವಾಗಿ ಪ್ರಸ್ತುತ ರಾಜಕೀಯ ವಿಷಯದ ಚರ್ಚೆ ಯೂ ಆರಂಭವಾಗಿತ್ತು. ಸಾವಿನ ದುಃಖ ಮನೆಯನ್ನು, ಎಲ್ಲರನ್ನೂ ಅಷ್ಟೇ ಪ್ರಮಾಣದಲ್ಲಿ ಆವರಿಸಿದ್ದರೂ, ಅಲ್ಲಿ ನೆರೆದಿದ್ದವರ ತಲೆಯಲ್ಲಿ ಭಿನ್ನ ಕುತೂಹಲ, ಪ್ರಶ್ನೆ, ಆತಂಕ, ಕಳವಳ, ಲೋಕಗಳು. ನಾನು ಕೂಡ ದುಃಖದಲ್ಲಿಯೇ ಇದ್ದೆ. ಆದರೆ ಇದೆಲ್ಲವನ್ನು ಗ್ರಹಿಸದೇ ಇರಲು ಸಾಧ್ಯ ವಾಗಲಿಲ್ಲ. ಅಲ್ಲಿ ನಮ್ಮೆಲ್ಲರ ಎದುರಿಗಿನ ಸನ್ನಿವೇಶ ಒಂದೇ ಆಗಿತ್ತು
-
ಶಿಶಿರಕಾಲ
ಬೆಳ್ಬೆಳಿಗ್ಗೆ ಗಡಿಬಿಡಿಯಲ್ಲಿ ನಾನು ಅವರ ಮನೆಗೆ ಹೋಗುವಾಗ ಅದಾಗಲೇ ಹತ್ತಾರು ಜನರು ಅಲ್ಲಿ ಸೇರಿದ್ದರು. ಪರಿಚಿತರೊಬ್ಬರ ಸಾವು ನಮ್ಮೆಲ್ಲರ ದುಃಖ, ಆಘಾತಕ್ಕೆ ಕಾರಣವಾಗಿತ್ತು. ಅಲ್ಲಿ ನೆರೆಯುತ್ತಿದ್ದ ಎಲ್ಲರ ಮುಖ, ಮಾತಿನಲ್ಲಿ ಇದ್ದದ್ದು ಸಂತಾಪ ಮಾತ್ರ. ಜನರು ಪರಸ್ಪರ ಮುಖ ನೋಡಿಕೊಂಡು, ಚಿಕ್ಕದೊಂದು ಪರಿಚಿತ ಮಂದಹಾಸವನ್ನು ತುಟಿ ಬಿರಿಯದೆ ವಿಚಿತ್ರವಾಗಿ ಬೀರಿ ಮೌನವಾಗುತ್ತಿದ್ದುದು ಸಾಮಾನ್ಯವಾಗಿತ್ತು.
ಸಾವಿನ (ಸಂಭವಿಸಿದ) ಮನೆಯಲ್ಲಿ ಸೇರುವ ಜನರಿಗೆ ಅಲ್ಲಿ ಹೇಗೆ ವ್ಯವಹರಿಸಬೇಕು, ಪ್ರತಿಕ್ರಿಯಿಸ ಬೇಕು ಎನ್ನುವ ಅವರವರದೇ ಗೊಂದಲಗಳಿರುತ್ತವೆ. ಕೆಲವರು ಆ ಮನೆಯವರ ಪಕ್ಕದಲ್ಲಿ ಮೌನವಾಗಿ ಕೂತಿದ್ದರೆ ಉಳಿದವರು- ಅಷ್ಟಷ್ಟು ದೂರದಲ್ಲಿ, ಗುಂಪುಗಳಾಗಿ- ಮಾತಿನ ನಡುಗಡ್ಡೆ ಗಳಾಗಿ ಮೆಲುದನಿಯಲ್ಲಿ ಮಾತನಾಡಿಕೊಳ್ಳುತ್ತಿದ್ದರು.
ಏನಾಯ್ತಂತೆ? ಎಷ್ಟು ಗಂಟೆಗೆ ಆದದ್ದಂತೆ? ಆರೋಗ್ಯ ಸಮಸ್ಯೆ ಬಹಳ ಸಮಯದಿಂದ ಇತ್ತಂತೆ ಹೌದಾ? ನಿನ್ನೆ ಸಂಜೆ ಅವರ ಜೊತೆ ಮಾತನಾಡಿದ್ದೆ- ಕೊನೆಯದಾಗಿ ಮಾತನಾಡಿದವರು ಯಾರಂತೆ? ಇಂತಹ ಪ್ರಶ್ನೆಗಳೆಲ್ಲ ಅಲ್ಲಿ ಅಪ್ರಸ್ತುತವಾಗಿರಲಿಲ್ಲ. ಅವರು ಸಾವನ್ನು, ಸನ್ನಿವೇಶ ವನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಲು ಪ್ರಶ್ನೆ ಕೇಳುತ್ತಿದ್ದರು. ಮುಂದೆ ಕುಟುಂಬದ ಕಥೆ ಏನಂತೆ? ಬದುಕು ಹೇಗಂತೆ? ಮನೆ ಯಾರ ಹೆಸರಲ್ಲಿದೆಯಂತೆ? ಮನೆಯ ಲೋನ್ ತೀರಿದೆಯಾ? ಸಾಲ ವಿದೆಯಾ? ಸೇವಿಂಗ್ಸ್ ಯಾವ ಪ್ರಶ್ನೆಯೂ ಅವರವರ ಮಟ್ಟಿಗೆ ಅಲ್ಲಿ ಅಸಂವೇದಿಯಾಗಿರಲಿಲ್ಲ.
ಇದನ್ನೂ ಓದಿ: Shishir Hegde Column: ಕ್ಷಣದಲ್ಲಿ 'ಸಿಂಡ್ರೆಲ್ಲಾ' ರಾಣಿಯಾಗುವ ಸಂಚಲನಗಳು
ಯಾರೋ ಒಬ್ಬರು- ‘ನಮ್ಮ ಸಂಬಂಧಿಕರೊಬ್ಬರಿಗೆ ಕೂಡ ಹೀಗೆಯೇ ಆಗಿತ್ತು’ ಎಂದು ಸಾವನ್ನೂ ಹೋಲಿಸಿಕೊಳ್ಳುತ್ತಿದ್ದರು. ಪ್ರತೀ ಗುಂಪಿನಲ್ಲೂ ಬೇರೆಯದೇ ಪ್ರಶ್ನೋತ್ತರಗಳು. ಎಲ್ಲವೂ ಕಾಳಜಿಯ ರೂಪಕಗಳು. ಅಲ್ಲಿ ಒಬ್ಬರಿಗೆ ಬೆಳಿಗ್ಗೆ ಚಹಾ ಕುಡಿಯದಿದ್ದರೆ ತಲೆ ನೋವು ಬರುತ್ತದೆ ಎನ್ನುವ ಚಿಂತೆಯೂ ಇತ್ತು.
ಇನ್ನು ಕೆಲವರ ಮಾತು ಮುಂದುವರಿದು ವಿಷಯಾಂತರವಾಗಿ ಪ್ರಸ್ತುತ ರಾಜಕೀಯ ವಿಷಯದ ಚರ್ಚೆಯೂ ಆರಂಭವಾಗಿತ್ತು. ಸಾವಿನ ದುಃಖ ಮನೆಯನ್ನು, ಎಲ್ಲರನ್ನೂ ಅಷ್ಟೇ ಪ್ರಮಾಣದಲ್ಲಿ ಆವರಿಸಿದ್ದರೂ, ಅಲ್ಲಿ ನೆರೆದಿದ್ದವರ ತಲೆಯಲ್ಲಿ ಭಿನ್ನ ಕುತೂಹಲ, ಪ್ರಶ್ನೆ, ಆತಂಕ, ಕಳವಳ, ಲೋಕಗಳು. ನಾನು ಕೂಡ ದುಃಖದಲ್ಲಿಯೇ ಇದ್ದೆ. ಆದರೆ ಇದೆಲ್ಲವನ್ನು ಗ್ರಹಿಸದೇ ಇರಲು ಸಾಧ್ಯ ವಾಗಲಿಲ್ಲ. ಅಲ್ಲಿ ನಮ್ಮೆಲ್ಲರ ಎದುರಿಗಿನ ಸನ್ನಿವೇಶ ಒಂದೇ ಆಗಿತ್ತು. ಆದರೆ ಯಾವುದು ಅವರವರಿಗೆ ಹೆಚ್ಚು ಮುಖ್ಯವೋ ಅದನ್ನೇ ಅವರು ಗಮನಿಸುತ್ತಿದ್ದರು, ಚರ್ಚಿಸುತ್ತಿದ್ದರು, ಚಿಂತಿಸುತ್ತಿದ್ದರು.
ಒಬ್ಬ ಹಿರಿಯರಿಗೆ ಅಂತ್ಯಸಂಸ್ಕಾರ ಮಾಡುವ ಜವಾಬ್ದಾರಿ. ಭಟ್ಟರಿಗೆ ಹೇಳಿಯಾಯ್ತಾ? ಎಷ್ಟು ಹೊತ್ತಿಗೆ ಬರುತ್ತಾರಂತೆ? ಮುಂದಿನ ವ್ಯವಸ್ಥೆ ಹೇಗೆ? ಅವರದು ಬೇರೆಯದೇ ಚಿಂತೆ, ಪ್ರಶ್ನೆಗಳು. ಕೆಲ ಸಮಯದ ಹಿಂದಿನ ಮಾತು. ನಾನು ಮತ್ತು ಸೋದರ ಸಂಬಂಧಿ ಸೇರಿ ನೆಂಟರ ಮನೆಯ ಮದುವೆಗೆ ಹೋಗುವವ ರಿದ್ದೆವು. ಅವನು ಆಗ ತಾನೇ ಬೆಂಗಳೂರಿನಲ್ಲಿ ಓದು ಮುಗಿಸಿ, ಎರಡು ವಾರದ ಹಿಂದೆ ಹೊಸ ಕೆಲಸಕ್ಕೆ ಸೇರಿದ್ದ. ಊರಿಗೆ ಬಂದಿದ್ದ.
ನನಗೊಂದು ಜೊತೆಯಾಯ್ತು ಎಂದುಕೊಂಡರೆ- ಆ ದಿನ ಇದ್ದಕಿದ್ದಂತೆ ‘ಅಣ್ಣಾ, ನಾನು ಆ ಮದುವೆಗೆ ಬರುವುದಿಲ್ಲ, ನೀನು ಹೋಗಿ ಬಾ’ ಎಂದ! ಮೊದಲು ತಮಾಷೆಯೆಂದುಕೊಂಡರೆ ಅವನು ಬಹಳ ಸೀರಿಯಸ್! ‘ಇವತ್ತು ಬೆಳಿಗ್ಗೆಯವರೆಗೆ ಸರಿಯಿದ್ದೆಯಲ್ಲ ಮಾರಾಯಾ, ಈಗ ಏನಾಯ್ತು ನಿಂಗೆ? ನಿಂಗೂ ಮದುವೆಯಾಗಬೇಕಾ?’ ಕಾಲೆಳೆದೆ.
‘ಅಣ್ಣಾ, ಇವತ್ತು ಎದ್ದವನು ಯೋಚಿಸುತ್ತಿದ್ದೆ. ಮದುವೆಯಲ್ಲಿ ನೂರಾರು ನೆಂಟರು ಬರುತ್ತಾರೆ. ಬಹುತೇಕರು ನನ್ನನ್ನು ಎಷ್ಟೋ ವರ್ಷದಿಂದ ನೋಡಿಲ್ಲ. ಬಂದವರು ಸುಮ್ಮನಿದುರುವುದಿಲ್ಲ. ಬೇಡದ ಪ್ರಶ್ನೆಗಳನ್ನೆಲ್ಲ ಕೇಳುತ್ತಾರೆ. ಕಿರಿಕಿರಿ. ನೀನು ಹೋಗಿ ಬಾ. ಬೇಕಾದರೆ ನಾನು ಡ್ರಾಪ್- ಪಿಕಪ್ ಮಾಡುತ್ತೇನೆ’. ಅರೆ ಇಸ್ಕಿ, ಒಬ್ಬನೇ ಹೋಗಲು ನನಗೂ ಮನಸ್ಸಿರಲಿಲ್ಲ. ‘ಸುಮ್ನೆ ಬಾರೋ. ವರ್ಷ ಗಳ ನಂತರ ಅದೆಷ್ಟೋ ನೆಂಟರನ್ನು ಭೇಟಿಯಾಗಬಹುದು’. ಅಂತೂ ಅವನನ್ನು ಒತ್ತಾಯಿಸಿ ಕರೆದುಕೊಂಡು ಹೋದದ್ದಾಯ್ತು!
ನೀವು ನಂಬುತ್ತೀರೋ ಇಲ್ಲವೋ. ಸಿಕ್ಕಿದ ಮೊದಲ ನೆಂಟರಿಂದ ಕೊನೆಯ ನೆಂಟರವರೆಗೆ ಅವನನ್ನು ಪ್ರಶ್ನಿಸದವರೇ ಇರಲಿಲ್ಲ. ನಾನು ಯಾವ ಪ್ರಶ್ನೆಯನ್ನು ಕೇಳುವುದು ಅಸಾಧ್ಯವೆಂದುಕೊಂಡಿದ್ದೆನೋ ಅವೆಲ್ಲವೂ ಅವನಿಗೆ ಪ್ರಶ್ನೆಗಳಾಗಿ ಬರುತ್ತಿದ್ದವು. ಇಡೀ ಮದುವೆಯಲ್ಲಿ ಸಿಕ್ಕವರದ್ದೆಲ್ಲ ಪ್ರಶ್ನೆಗಳ ಸುರಿಮಳೆ.
ಮೊದಲೊಂದಿಷ್ಟು ಪ್ರಶ್ನೆ ನನಗೆ, ನಂತರ ಹೆಚ್ಚಿನದು ಅವನಿಗೆ. ಕೆಲಸ ಶುರು ಮಾಡಿದಿಯಂತಲ್ಲ, ಯಾವ ಕಂಪನಿ?, ನೌಕರರನ್ನು ಐಟಿ ಕಂಪನಿಯಿಂದ ತೆಗೆದು ಹಾಕುತ್ತಿದ್ದರಂತಲ್ಲ? ನಿಮ್ಮ ಕಂಪನಿಯಲ್ಲಿ ಸ್ಟಾರ್ಟಿಂಗ್ ಪ್ಯಾಕೇಜ್ ಎಷ್ಟು?. ಪ್ರತೀ ಪ್ರಶ್ನೆ ಕೇಳಿದಾಗಲೂ ಅವನು ನನ್ನ ಮುಖವನ್ನೇ ನೋಡುತ್ತಿದ್ದ. ನೆಂಟರ ಗುಂಪಿನಿಂದ ಗುಂಪಿಗೆ ದಾಟುತ್ತಾ ಹೋದ ಹಾಗೆ ಪ್ರಶ್ನೆಗಳೂ ಬದಲಾಗುತ್ತಲೇ ಇದ್ದುವು.
‘ಇನ್ನೇನು ಕೆಲಸ ಆಯ್ತಲ್ಲ, ಯಾರನ್ನೂ ಹುಡುಕಿಕೊಂಡಿಲ್ಲವಾ?’ ಎಂದು ನಾನೂ ಅವರ ಜೊತೆ ಸೇರಿ ಒಂದು ಪ್ರಶ್ನೆ ಕೇಳಿದ್ದೂ ಆಯಿತು. ಕನಿಷ್ಠ ಏಳೆಂಟು ನೆಂಟರು ಅವನನ್ನು ಪ್ರಶ್ನೆಗಳಿಂದಲೇ ಜನ್ಮ ಜಾಲಾಡಿ ಬಿಟ್ಟಿದ್ದರು! ಅವನು ಹಾಗೆ ಹೇಳಿದ್ದಕ್ಕೋ ಏನೋ, ನನಗೂ ಪ್ರಶ್ನೆಗಳು ಎದುರಾ ದಂತೆಲ್ಲ, ಅಬ್ಬಾ ಪ್ರಶ್ನೆಗಳ ಇಷ್ಟೆ ವೈವಿಧ್ಯ ಎಂದು ಆಶ್ಚರ್ಯವಾಗುತ್ತಾ ಹೋಯಿತು. ಮದುವೆ ಮುಗಿಸಿ, ಕಾರಿನ ಬಾಗಿಲು ಹಾಕಿಕೊಂಡಾಗ ಕಾರಿನ ಸದ್ದು ವಿಚಿತ್ರವಾಗಿ ಹಾಯೆನಿಸಿತು.
ಎಸಿ ಗಾಳಿ ಬೇರೆಯದೇ ರೀತಿಯ ಹಿತವೆನಿಸಿದ್ದು ಸುಳ್ಳಲ್ಲ! ಅವರೆಲ್ಲಾ ಕೇಳಿದ ಪ್ರಶ್ನೆ ಕಾಳಜಿಗೆ ಎನ್ನುವುದು ಸುಳ್ಳಲ್ಲ. ಆದರೆ ಇವನಿಗೆ ಮಾತ್ರ ವಾರ್ಷಿಕ ಪರೀಕ್ಷೆ ಬರೆದು ಬಂದ ಹಾಗಿತ್ತು. ಎರಡು ಮೂರು ನಿಮಿಷ ನಾವಿಬ್ಬರೂ ಮಾತನಾಡಿಕೊಳ್ಳಲಿಲ್ಲ. ಆಮೇಲೆ ಇಬ್ಬರೂ ಹೊಟ್ಟೆ ತುಂಬಾ ನಗೆಯಾಡಿ ಮೌನ ಮುರಿದದ್ದು! ಮದುವೆಗೋ- ಮಸಣಕೋ, ಸನ್ನಿವೇಶ ಅದೆಷ್ಟೇ ಖುಷಿಯದಿರಲಿ, ದುಃಖದ್ದಿರಲಿ- ನಾವೆಲ್ಲರೂ ನಮ್ಮದೇ ಹಲವು ಪ್ರಶ್ನೆಪತ್ರಿಕೆಗಳನ್ನು ಎಡೆಯೂ ಹೊತ್ತು ತಿರುಗುತ್ತೇವೆ.
ಕೆಲವರು ಪ್ರಶ್ನೆಯನ್ನು ನಿಜವಾದ ಕುತೂಹಲದಿಂದ, ಕಾಳಜಿಯಿಂದ ಕೇಳುತ್ತಾರೆ. ಇನ್ನು ಕೆಲವರಿಗೆ ಮಾತಿನ ನಡುವೆ ಏರ್ಪಡುವ ಮೌನ ಅಸಹನೀಯ. ಬಿಟ್ಟ ಸ್ಥಳ ತುಂಬುವಂತೆ ಮಾತು ಖಾಲಿ ಯಿದ್ದಾಗಲೆಲ್ಲ ಏನೋ ಒಂದು ಪ್ರಶ್ನೆ ಎತ್ತುತ್ತಾರೆ. ಕೆಲವರಿಗೆ ಒಂದಿಷ್ಟು ಪ್ರಶ್ನೆಗಳು ಅಭ್ಯಾಸವಾಗಿ ಬಿಟ್ಟಿರುತ್ತವೆ.
ಎಲ್ಲಿಗೇ ಹೋದರೂ, ಸನ್ನಿವೇಶ ಅದೆಂತಹುದೇ ಇದ್ದರೂ- ಅವರದು ಅದೇ ಪ್ರಶ್ನೆಯ ಸೆಟ್. ಅವರ ಪ್ರಶ್ನೆ ಪತ್ರಿಕೆ ಸೋರಿಕೆಯಾಗುವ ಭಯವೇ ಇಲ್ಲ, ಅವರು ಬಂದ ಕೂಡಲೇ ಇದನ್ನೇ ಕೇಳುವುದು ಎಂದು ಎಲ್ಲರಿಗೂ ಗೊತ್ತಿರುತ್ತದೆ! ಕೆಲವು ಪ್ರಶ್ನೆಗಳು ತೀರಾ ಮುಗ್ಧ, ಅಯಾಚಿತ, ಅಭ್ಯಾಸ ಬಲ. ನಮ್ಮ ಕಡೆ ಯಾರನ್ನೇ ಭೇಟಿಯಾದಾಗ ‘ಆರಾಮಾ? ಹೇಗಿದ್ದೀರಿ?’ ಎಂದು ಕುಶಲೋಪರಿ ವಿಚಾರಿಸುವುದು ರೂಢಿ. ಯಾರು ಎಲ್ಲಿಯೇ ಸಿಕ್ಕರೂ ‘ಆರಾಮಿದ್ದೀರಾ?’ ಹೆಚ್ಚು ಕಡಿಮೆ ‘ನಮಸ್ಕಾರ’ ಎಂಬ ಸರಿಸಮಾನ ಯೋಗ್ಯತೆ ನಮ್ಮಲ್ಲಿ ‘ಆರಾಮಾ?’ ಎಂಬ ಶಬ್ದಕ್ಕಿದೆ.
ಒಂದು ಮಜವೇನೆಂದರೆ- ನಮ್ಮ ಕಡೆ ಎಲ್ಲರಂತೆ ಡಾಕ್ಟರುಗಳು ಕೂಡ ಒಳ ಹೊಕ್ಕ ರೋಗಿಯನ್ನು ಮಾತನಾಡಿಸುತ್ತಾ ‘ಆರಾಮಾ?’ ಎಂದೇ ಕೇಳುತ್ತಾರೆ! ಒಮ್ಮೆ ಪರಿಚಯದ ಡಾಕ್ಟರ್ ಹಾಗೆ ಕೇಳಿದ್ದಕ್ಕೆ- ಅವರಲ್ಲಿ ತಮಾಷೆ ಮಾಡಿದ್ದೆ. ಡಾಕ್ಟರಲ್ಲಿ ಆರಾಮಿದ್ದವರು ಬರುವವರು ಎಂದರೆ ಮೆಡಿಕಲ್ ರೆಪ್ರೆಸೆಂಟೇಟಿವ್ ಮಾತ್ರ! ಇತ್ತೀಚೆಗಷ್ಟೇ ಅವರನ್ನು ಭೇಟಿಯಾದಾಗ, ‘ಆರಾಮಾ?’ ಎಂದೇ ಮಾತನಾಡಿಸಿದರು.
ಮತ್ತು ತಕ್ಷಣ ನೆನಪು ಮಾಡಿಕೊಂಡು ನಕ್ಕರು. ‘ನೀನು ನನ್ನನ್ನು ಮಾತನಾಡಿಸಲಿಕ್ಕೆ ಬಂದದ್ದರಿಂದ ಹಾಗೆ ಕೇಳಿದೆ ಮಾರಾಯಾ’ ಎಂದು ಹಾಸ್ಯ ಮಾಡಿದರು. ಕೆಲವೊಮ್ಮೆ ನಾವು ಎತ್ತಿದ ಪ್ರಶ್ನೆ, ಮಾಡಿದ ಚಿಕ್ಕ ತಮಾಷೆ ಯಾರನ್ನೋ ವಿಚಿತ್ರವಾಗಿ ಕಾಡಿರುತ್ತದೆ. ‘ನಿನ್ನ ತಮಾಷೆಯಿಂದ ನಾನು ಒಂದಿಷ್ಟು ಸಮಯ ತಲೆ ಕೆಡಿಸಿಕೊಂಡುಬಿಟ್ಟಿದ್ದೆ, ಕಾನ್ಷಿಯಸ್ ಆಗಿ ಹೋಗಿದ್ದೆ. ಆಮೇಲೊಂದಿಷ್ಟು ದಿನ, ಪರಿಚಯದವರು ಆಸ್ಪತ್ರೆಗೆ ಬಂದಾಗ ಹೇಗೆ ಮಾತನಾಡಿಸಬೇಕು ಎಂದೇ ಗೊಂದಲವಾಗುತ್ತಿತ್ತು. ಅಭ್ಯಾಸಬಲ. ನಮಸ್ಕಾರ ಎಂದಷ್ಟೇ ಹೇಳುವುದನ್ನು ಕಷ್ಟಪಟ್ಟು ಅಭ್ಯಾಸ ಮಾಡಿಕೊಂಡೆ. ಈಗ ಬಂದವರು ಮಾತ್ರ, ನಿನ್ನ ಹಾಗೆ ಡಾಕ್ಟ್ರೆ, ಆರಾಮಾ’ ಎಂದು ಕೇಳುತ್ತಾರೆ.
ಆರಾಮಿಲ್ಲದಿದ್ದರೆ ಡಾಕ್ಟ್ರು ಮನೆಯಲ್ಲಿ ಮಲಗಿರಲ್ಲವೇ?’ ಪ್ರಶ್ನೆ ಕೇಳುವುದು ನಾವೆಲ್ಲರೂ ಮಾಡುವ ಅತಿ ಸಾಮಾನ್ಯ ಕೆಲಸ. ನಿತ್ಯ ನಾವೆಲ್ಲರೂ ಅದೆಷ್ಟು ಪ್ರಶ್ನೆ ಕೇಳುತ್ತೇವೆ ಅಲ್ಲವೇ? ಒಂದೋ ಪ್ರಶ್ನೆ ಕೇಳಿರುತ್ತೇವೆ, ಇಲ್ಲವೇ ಪ್ರಶ್ನೆಗೆ ಉತ್ತರ ಕೊಡುತ್ತೇವೆ. ಹಾಗೆ ಎಲ್ಲಾ ಹೆಚ್ಚಿನ ಮಾತುಕತೆಗಳೂ ಪ್ರಶ್ನೆ- ಉತ್ತರಗಳೇ. ಮಗು ಜಗತ್ತನ್ನು ತಿಳಿಯಲು ಪ್ರಶ್ನೆ ಮಾಡುತ್ತದೆ, ವಿಜ್ಞಾನಿ ಜಗತ್ತು ಅರ್ಥವಾಗದಿದ್ದಕ್ಕೆ ಪ್ರಶ್ನೆ ಮಾಡುತ್ತಾನೆ, ತತ್ವಜ್ಞಾನಿ ಅರ್ಥವಾಗಿದ್ದು ತಪ್ಪಿರಬಹುದೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಲು ಪ್ರಶ್ನೆ ಕೇಳುತ್ತಾನೆ.
ತಿಳಿಯಲು, ಅನಿಶ್ಚಿತತೆ ಪರಿಹರಿಸಿಕೊಳ್ಳಲು, ಸಂಬಂಧ ಕಾರಣಕ್ಕೆ, ಕೆಲವೊಮ್ಮೆ ಮಾತುಕತೆಯಲ್ಲಿ ಭಾಗಿಯಾಗಿದ್ದೇನೆ ಎಂದು ಸೂಚಿಸಲು, ಹೀಗೆ ನೂರೆಂಟು ಕಾರಣಗಳಿಂದ ಪ್ರಶ್ನೆ ಕೇಳುತ್ತೇವೆ. ಆದರೆ ಈ ಪ್ರಶ್ನೆಗಳ ಪೀಕಲಾಟವೇನೆಂದರೆ- ನಮಗೆ ಎದುರಾಗುವ ಪ್ರಶ್ನೆಗಳೆಲ್ಲವೂ ಕುತೂಹಲದಿಂದಲೇ ಹುಟ್ಟಿದ ವಲ್ಲ. ಆತಂಕ, ಹೋಲಿಕೆ, ಅಸೂಯೆ ಹೀಗೆ ಅಸಂಖ್ಯ ಅನ್ಯ ಕಾರಣಗಳೂ ಇಲ್ಲವೆಂದಲ್ಲ.
ಇಲ್ಲಿಯೇ ನಮಗೆಲ್ಲರಿಗೂ ಕಷ್ಟವಾಗುವುದು. ಪ್ರಶ್ನೆಯ ಹಿಂದಿನ ಮರ್ಮ, ಉದ್ದೇಶ, ವ್ಯಾಪ್ತಿ ಮತ್ತು ಮಿತಿಯನ್ನು ಗ್ರಹಿಸುವುದು. ಉದಾಹರಣೆಗೆ- ಅಪರೂಪಕ್ಕೆ ಸಿಕ್ಕ ನೆಂಟರು, ಉದ್ಯೋಗ ಎಲ್ಲಿ, ಮನೆ ತಗೊಂಡ್ಯಾ? ಎಷ್ಟು ಬೆಡ್ ರೂಮು? ಅಲ್ಲಿಯ ರಿಯಲ್ ಎಸ್ಟೇಟ್ ಹೇಗೆ? ಎಷ್ಟು ದುಡ್ಡು? ಹೆಂಡತಿ ಕೆಲಸಕ್ಕೆ ಹೋಗುತ್ತಾಳಾ? ಮಗು ಓದಿನಲ್ಲಿ ಹೇಗೆ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದಾಗ ತೀರಾ ಬುಡಕ್ಕೆ ಕೈ ಹಾಕಿದಂತೆನಿಸುವುದು ನಿಜ.
ಮೇಲ್ನೋಟಕ್ಕೆ ಪ್ರಶ್ನೆಗಳು ಯಾಕೋ ವ್ಯಾಪ್ತಿ ಮೀರುತ್ತಿಲ್ಲವೇ ಎಂದೆನಿಸುತ್ತದೆ. ಆದರೆ ಆ ವ್ಯಕ್ತಿ ಕೇಳುವ ಪ್ರಶ್ನೆಗಳಿಗೆ ಕಾರಣವಿದೆ. ಅವರಿಗೆ ನಮ್ಮ ಬದುಕನ್ನು ಸರಿಯಾಗಿ ಕಲ್ಪಿಸಿಕೊಳ್ಳಲು ಈ ಪ್ರಶ್ನೆಗಳಿಗೆ ಉತ್ತರ ಬೇಕಿರುತ್ತದೆ. ಕೆಲವರ ಕುತೂಹಲದ ಭರಾಟೆಯಲ್ಲಿ ಪ್ರಶ್ನೆಗಳು ಹೇಗೆ ಹೇಗೋ ಬಂದುಬಿಡುತ್ತವೆ. ಕೆಲವರಿಗೆ ಉದ್ಯೋಗ ಭದ್ರತೆಯೇ ದೊಡ್ಡದು. ಇನ್ನು ಕೆಲವರಿಗೆ ಆರೋಗ್ಯ, ಮಕ್ಕಳ ಶಿಕ್ಷಣ, ಹಣ ಇತ್ಯಾದಿ. ಕಾರಣ- ಅವರವರ ಬದುಕಿನೆಡೆಗಿನ ನೋಟ, ಭಾವ ಭಿನ್ನ. ಪ್ರಶ್ನೆ ಉತ್ತರಕ್ಕೆ ಯೋಚನೆ ನಿಲ್ಲದು.
ಎಲ್ಲರೂ ಅಷ್ಟೇ- ವಿಷಯ ತಿಳಿದುಕೊಂಡ ನಂತರ ಹೋಲಿಕೆ ಮಾಡಿಕೊಳ್ಳಬೇಕು. ಇಂತಲ್ಲಿ ವೃತ್ತಿ, ಇಂತಲ್ಲಿ ಸೈಟು, ಮನೆ ಇತ್ಯಾದಿ ತಿಳಿದ ನಂತರ ಅವರ ಇನ್ಯಾರೋ ನೆಂಟರು, ಪರಿಚಯದವರ ಜೊತೆ ಹೋಲಿಕೆ ಮಾಡುವುದು ಕೂಡ ಅಷ್ಟೇ ಸಹಜ. ಸಾವಿನ ಮನೆಯಲ್ಲಿ ಇನ್ಯಾರೋ ನೆಂಟರ ಹೋಲಿಕೆಯಾಗುವ ಸಾವನ್ನು ನೆನಪಿಸಿಕೊಂಡಂತೆ. ಹೋಲಿಕೆಗಳ ಮೂಲಕ ಜಗತ್ತನ್ನು ಅರ್ಥೈಸಿಕೊಳ್ಳುವ ರೀತಿ ಅದು.
ಹೆಚ್ಚಿನ ಸಂದರ್ಭದಲ್ಲಿ ಪ್ರಶ್ನೆಯೊಂದನ್ನು ಅರ್ಥಮಾಡಿಕೊಳ್ಳುವುದಕ್ಕಿಂತ ಪ್ರಶ್ನೆಗಳನ್ನು ಸಮಗ್ರ ಅರ್ಥಮಾಡಿಕೊಳ್ಳುವುದು ಮಹತ್ವ ಪಡೆಯುತ್ತದೆ. ಪ್ರಶ್ನೆ ಕೇಳುವುದು ಒಂದು ಕಲೆ ಎನ್ನುವುದು ಸುಳ್ಳಲ್ಲ. ಕಲೆ ಎಂದರೆ ನೀವು ಪ್ರಶ್ನೆಯನ್ನು ಯಾವ ಯಾವ ಶಬ್ದವಿಟ್ಟು, ಜೋಡಿಸಿ, ರೂಪಿಸುತ್ತೀರಿ ಎಂಬ ಜಾಣ್ಮೆ ಅಲ್ಲ. ಆ ಜಾಣ್ಮೆಯಷ್ಟೇ ಇದ್ದರೆ- ಆ ವ್ಯಕ್ತಿ ಎಷ್ಟು ನಯವಾಗಿ, ಚಂದಕ್ಕೆ ಎಲ್ಲವನ್ನೂ ಕೆದಕಿ ಕೇಳುತ್ತಿದ್ದಾರೆ ಇಂದು ಎದುರಿನವರಿಗೆ ಗೊತ್ತಾಗಿಬಿಡುತ್ತದೆ.
ಎದುರಿನ ವ್ಯಕ್ತಿಯ ಸ್ಥಿತಿ, ಸಮಯ ಮತ್ತು ಸಂದರ್ಭ ಅರ್ಥಮಾಡಿಕೊಳ್ಳದ ಪ್ರಶ್ನೆಗಳು ಅಪ್ರಸ್ತುತ ವಾಗಿ ಎದುರಿನವರನ್ನು (ಹೇಗೆ ನಮಗೋ, ಹಾಗೆ ಎದುರಿನವರಿಗೆ) ಕೆಣಕುತ್ತದೆ. ಯಾಕಿನ್ನೂ ಮಕ್ಕಳನ್ನು ಮಾಡಿಕೊಂಡಿಲ್ಲ? ಉದ್ಯೋಗ ಬಡ್ತಿ ಆಯ್ತಾ? ಅಷ್ಟೊಳ್ಳೆ ಕೆಲಸ ಏಕೆ ಬಿಟ್ಟೆ? ನಿಜವಾಗಿಯೂ ನೀನು ಅದನ್ನೆ ನಂಬುತ್ತೀಯಾ? ಜನರು ಏನಂದುಕೊಳ್ಳಬಹುದು? ಇಂತಹ ಪ್ರಶ್ನೆಗಳಿಗೆ ಉತ್ತರಿಸುವುದು ಯಾರಿಗೆ ಸುಲಭ? ಅದೆಷ್ಟೋ ಮನೆಯಲ್ಲಿ ಮದುವೆ ಮುಂಜಿಗಳಲ್ಲಿ, ಸಾವು ಸಂಭವಿಸಿದ ಸಮಯದಲ್ಲಿ ಒಬ್ಬರು ಇನ್ನೊಬ್ಬರಿಗೆ ಕೇಳುವ ಚಿಕ್ಕ ಪ್ರಶ್ನೆ ಅಪ್ರಸ್ತುತವಾಗಿ ವಿಕೋಪಕ್ಕೆ ತಿರುಗಿಬಿಡುತ್ತದೆ.
ತೀವ್ರ ಪರಿಸ್ಥಿತಿಯಲ್ಲಿ ಯಾರೋ ಕೇಳಿದ ಪ್ರಶ್ನೆ ಸಂಬಂಧವನ್ನೇ ಹಳಸಿ ಹಾಳುಮಾಡಿ ಬಿಟ್ಟಿರುತ್ತದೆ. ಅದು ಮತ್ತೆಂದೂ ಕೂಡುವುದೇ ಇಲ್ಲ. ತತ್ವಜ್ಞಾನ ಹುಟ್ಟಿದ್ದು, ಭಗವದ್ಗೀತೆ, ಅಷ್ಟಾವಕ್ರಗೀತೆಗಳೆಲ್ಲ ಹುಟ್ಟಿದ್ದು ಸಮಂಜಸ ಪ್ರಶ್ನೆಯಿಂದಲೇ ಎನ್ನುವುದು ಹೌದು. ಆದರೆ ಕೊಡುವ ಉತ್ತರಕ್ಕಿಂತ ಕೇಳಿದ ಪ್ರಶ್ನೆಗಳು ಸಂಬಂಧವನ್ನು ಹದಗೆಡಿಸಿದ್ದೇ ಜಾಸ್ತಿ. ಇತಿಹಾಸದುದ್ದಕ್ಕೂ.
ನಾವು ಉತ್ತರದಿಂದ ಜನರ ತೂಕವನ್ನು ಅಳೆಯುತ್ತೇವೆ ಅಂದುಕೊಂಡಿದ್ದೇವೆ. ಆದರೆ ಮಾತುಕತೆ ಯಲ್ಲ, ಸಂಹವನದ ವಿಷಯದಲ್ಲಿ ಪ್ರಶ್ನೆಗಳ ಮಹತ್ವ ಉತ್ತರಗಳಿಗೆ ಮಿಗಿಲಿನದ್ದು. ಸರಿಯಾದ ಪ್ರಶ್ನೆ ಎದುರಿಗಿ ನವನಿಗೆ ಮಾತನಾಡಲು ಅವಕಾಶ ಕಲ್ಪಿಸಬಹುದು, ಒಂದೇ ಪ್ರಶ್ನೆ ತಪ್ಪಾಗಿದ್ದಲ್ಲಿ ಮಾತುಕತೆಯೇ ಅಪೂರ್ಣ ನಿಂತುಹೋಗಬಹುದು.
ನಾವೆಲ್ಲರೂ ಅಷ್ಟೇ, ನಾವು ಕೊಡಬೇಕಾದ ಉತ್ತರಗಳತ್ತ ಹೆಚ್ಚು ಗಮನ ಹರಿಸುತ್ತೇವೆ. ಕಾರಣ ಪ್ರಶ್ನೆಗೆ ಉತ್ತರಿಸುವುದು ನಮ್ಮೆಲ್ಲರ ಪ್ರಕಾರ ಒಂದು ‘ಕ್ರಿಯೆ’. ಆದರೆ ನಾವು ಅದನ್ನು ಕರೆಯುವುದು ‘ಪ್ರತಿಕ್ರಿಯೆ’ ಎಂದು. ನಾವೆಂದೂ ಪ್ರಶ್ನೆಯನ್ನು ಕ್ರಿಯೆ ಎಂದು ಪರಿಗಣಿಸುವುದೇ ಇಲ್ಲ. ಪ್ರಶ್ನೆಗೆ ಕ್ರಿಯಾ ಮಹತ್ವ ಸಹಜವಾಗಿ ಕಡಿಮೆ. ಆದರೆ ಯಾವುದೇ ಉದ್ಯೋಗದಲ್ಲಿ, ಕಾರ್ಪೊರೇಟ್ ಉನ್ನತ ಹುದ್ದೆಗಳಲ್ಲಿ ಇರಲೇಬೇಕಾದ ಮೊದಲ ಮತ್ತು ಏಕೈಕ ಜ್ಞಾನ- ಯಾವ ಪ್ರಶ್ನೆ ಎಲ್ಲಿ ಮತ್ತು ಹೇಗೆ ಕೇಳಬೇಕು ಎನ್ನುವುದು.
ನಾವು ಕೇಳುವ ಪ್ರಶ್ನೆಗಳಿಂದಲೇ ನಮ್ಮ ಕೆಳಗೆ ಕೆಲಸ ಮಾಡುವವರು ನಮ್ಮನ್ನು ತೂಗುವುದು, ಅಳೆಯುವುದು. ಅಂತೆಯೇ ಸರಿಯಾದ ಪ್ರಶ್ನೆ ಇಡೀ ಸಂಸ್ಥೆಯ, ಕಚೇರಿಯ ಕೆಲಸವನ್ನು ನಿರ್ದೇಶಿಸ ಬಲ್ಲದು ಎನ್ನುವುದು ಅಷ್ಟೇ ಸತ್ಯ. ಕಂಪನಿಯ ಸಿಇಒ ತನ್ನ ಕೆಳಗಿನವರನ್ನು ಯಾವ ಪ್ರಶ್ನೆ ಕೇಳುತ್ತಾನೆ, ಹೇಗೆ ಕೇಳುತ್ತಾನೆ ಎಂಬುದರ ಮೇಲೆಯೇ ಇಡೀ ಕಂಪನಿ ನಿಂತಿರುತ್ತದೆ.
ಸತ್ಯಾ ನಾಡೆಲ್ಲಾನಿಂದ ನರೇಂದ್ರ ಮೋದಿಯವರೆಗೆ- ಎಲ್ಲಾ ಸಮರ್ಥ ನಾಯಕರ - ಕ್ಯಾಮರಾದ ಆಚೆ ದಿನದ ಅತಿ ಹೆಚ್ಚು ಸಮಯ ಪ್ರಶ್ನೆ ಕೇಳುವುದರ ಕಳೆಯುತ್ತಾರೆ. ಆರ್ ಗಣೇಶರ ಅಷ್ಟಾವಧಾನ, ಶತಾವಧಾನವನ್ನು ನೀವು ನೋಡಿದ್ದರೆ ಅಬ್ಬ ಅಪ್ರಸ್ತುತ ಪ್ರಸಂಗಿ ಎಂದಿರುತ್ತಾನೆ. ಅವನ ಕೆಲಸ ಅಲ್ಲಿ ಬಹಳ ಮಹತ್ವದ್ದು.
ಪ್ರಸ್ತುತವಲ್ಲದ ಪ್ರಶ್ನೆಯನ್ನು ಅವಧಾನಿಗಳಲ್ಲಿ ಎತ್ತುವುದು, ವಿಚಾರಗಳ ದಿಕ್ಕು ತಪ್ಪಿಸುವುದು. ನಮಗೆಲ್ಲರಿಗೂ ಒಬ್ಬರಾದರೂ ಅಂತಹ ನೆಂಟರಿರುತ್ತಾರೆ. ಅವರು ಜೀವಮಾನವಿಡೀ ಅಪ್ರಸ್ತುತ ಪ್ರಸಂಗಿಗಳೇ ಆಗಿರುತ್ತಾರೆ. ಅವರು ಅಧಿಕಪ್ರಸಂಗಿಗಳಲ್ಲ- ಅಪ್ರಸ್ತುತ ಪ್ರಸಂಗಿಗಳು. ಅವರ ಪ್ರಶ್ನೆಯ ತಲೆ ಬುಡ ಅರ್ಥವಾಗುವುದಿಲ್ಲ. ಉದ್ದೇಶವೇ ಗೊಂದಲಮಯ.
ಒಟ್ಟಾರೆ ಪ್ರಶ್ನೆ ಕೇಳಬೇಕು, ಪ್ರಶ್ನೆಗಳ ಮೂಲಕ ಅಲ್ಲಿ ಪ್ರಸ್ತುತವಾಗಬೇಕು. ಅಂಥವರು ಉದ್ಯೋಗ ದಲ್ಲಿ, ಕಾರ್ಪೊರೇಟ್ ಕಂಪನಿಗಳಲ್ಲಿ ಕುಳಿತಲ್ಲಿಯೇ ಕಳೆಯಬೇಕಾಗುತ್ತದೆ. ಪ್ರಶ್ನೆಯನ್ನು ಕೇಳುವುದರ ಜೊತೆಯಲ್ಲಿ ಅದರ ಉದ್ದೇಶವನ್ನು ಅರ್ಥಮಾಡಿಸುವುದು ಕೂಡ ಪ್ರಶ್ನೆ ಕೇಳುವವನ ಜವಾಬ್ದಾರಿಯೇ. ಉದ್ದೇಶ ಸ್ಪಷ್ಟವಾದಷ್ಟು ಸಂವಹನ ಸುಲಭ. ವಿಶೇಷವಾಗಿ ಕುಟುಂಬದಲ್ಲಿ, ಅತ್ತೆ ಸೊಸೆಯರ ನಡುವೆ, ಹದಿಹರೆಯದ ಮಕ್ಕಳ ಜೊತೆ ವ್ಯವಹರಿಸುವಾಗ ಉದ್ದೇಶ ಸ್ಪಷ್ಟತೆ ಬಹಳ ಮುಖ್ಯ.
ನಮ್ಮವರೇ ಅಲ್ಲವೇ? ನಾನೇನೆಂದು ಅವರಿಗೆ ಗೊತ್ತಿಲ್ಲವೇ? ಅರ್ಥಮಾಡಿಕೊಳ್ಳುತ್ತಾರೆ ಎನ್ನುವುದು ತಾತ್ಸಾರದ ಬದುಕು. ಇಂತಹ ಹುಸಿ ನಂಬಿಕೆಗಳಿಂದ ಸಂಬಂಧಗಳಲ್ಲಿ ಕಷ್ಟಗಳೇ ಜಾಸ್ತಿ. ಹೇಗೆ ಪ್ರಶ್ನಿಸಿದರೂ, ವ್ಯವಹರಿಸಿದರೂ ಸರಿಯಾಗಿ ಅರ್ಥ ಮಾಡಿಕೊಳ್ಳುವುದೇ ಪ್ರೀತಿಯ ಮಾಪಕ ಎಂದು ನಂಬಿಕೊಂಡಿದ್ದೇವೆ. ದಿನವಿಡೀ ಸಾವಿರ ಪ್ರಶ್ನೆಗಳು ಎದುರಾಗುತ್ತವೆ.
ಕೆಲವೇ ಕೆಲವು ಹೊರಗಿನವರಿಂದ, ಇನ್ನೆಷ್ಟೋ ನಮ್ಮೊಳಗೇ ಹುಟ್ಟಿದವು. ನಮ್ಮೆಲ್ಲರೊಳಗೂ ಒಬ್ಬ ಅಪ್ರಸ್ತುತ ಪ್ರಸಂಗಿ ಇದ್ದೇ ಇzನೆ. ನಾವು ಕೇಳುವ ಪ್ರಶ್ನೆಗಳೇ ನಮ್ಮ ವ್ಯಕ್ತಿತ್ವ. ಸರಿಯಾದ ಪ್ರಶ್ನೆ ಕೇಳುವವನು ಮಾತ್ರ ಕೇಳುಗನಾಗಬಲ್ಲ, ಕೇಳಬಲ್ಲ, ಮಾತುಗಾರನಾಗಬಲ್ಲ. ಹಾಗಂತ ಎದುರಾಗುವ ಎಲ್ಲಾ ಕುತೂಹಲಗಳನ್ನೂ ಪ್ರಶ್ನೆಯನ್ನಾಗಿಸಲೇಬೇಕೆಂದಿಲ್ಲ. ಅಂತೆಯೇ ಎದುರಾಗುವ ಎಲ್ಲಾ ಪ್ರಶ್ನೆಗಳಿಗೂ ನಾವು ಉತ್ತರಿಸಬೇಕೆಂದಿಲ್ಲ. ಬಹುಪಾಲು ಪ್ರಶ್ನೆಗಳು ಅಸಲಿಗೆ ಪ್ರಶ್ನೆಗಳೇ ಆಗಿರುವು ದಿಲ್ಲ.
ಉತ್ತರ ಬಯಸದ ಪ್ರಶ್ನೆಗಳು ಬೀದಿ ನಾಯಿಯಂತೆ. ಹೊರಗಡೆ ಒಂದು ಬಿಸ್ಕೆಟ್ ಹಾಕಬೇಕೆ ವಿನಃ ಮನೆಯ ಸೋಫಾ ಮೇಲೆ ತಂದು ಕುಳ್ಳಿರಿಸಿಕೊಳ್ಳುವಂತಿಲ್ಲ. ನಮ್ಮ ಪ್ರಶ್ನೆಗಳು ಜಗತ್ತನ್ನು ನಮ್ಮ ಮುಂದೆ ತೆರೆದಿಡುತ್ತದೆ. ನಾವು ಕೇಳುವ, ಹಿಂಬಾಲಿಸುವ ಪ್ರಶ್ನೆಗಳು ಜಗತ್ತಿನೆಡೆಗಿನ ನಮ್ಮ ನೋಟವನ್ನು ನಿರ್ದೇಶಿಸುತ್ತವೆ.
ನಾವು ಅದೇ ಸಮಯದಲ್ಲಿ ನಾವೆಲ್ಲರೂ ನಮ್ಮೊಳಗೆ ಸೃಷ್ಟಿಸಿಕೊಂಡು ಬದುಕುತ್ತಿರುವ ಜಗತ್ತು ಯಾವುದು ಎನ್ನುವುದನ್ನೂ ಪರರಿಗೆ ಹೇಳುತ್ತಿರುತ್ತದೆ. ಬಿಡಿ- ಸುಮ್ನೆ ಜಾಸ್ತಿ ಯೋಚಿಸಬೇಡಿ.