Vishweshwar Bhat Column: ಅಂದು ಜತ್ತಿ ಹಾಗೆ ಯೋಚಿಸಿದ್ದರಾ ?
ಒಂಬತ್ತು ರಾಜ್ಯ ಸರಕಾರಗಳನ್ನು ವಿಸರ್ಜಿಸುವ ಕೇಂದ್ರ ಸಚಿವ ಸಂಪುಟದ ಶಿಫಾರಸನ್ನು ಅಂದಿನ ಹಂಗಾಮಿ ರಾಷ್ಟ್ರಪತಿ ಬಿ.ಡಿ.ಜತ್ತಿ ಅವರಿಗೆ ಕಳಿಸಿಕೊಡಲಾಯಿತು. ಒಂದು ಸಲವಲ್ಲ, ಎರಡು ಸಲ ಕಳಿಸಿಕೊಡಲಾಯಿತು. ಈ ವಿಷಯವಾಗಿ ನಿರ್ಧಾರ ತೆಗೆದುಕೊಳ್ಳಲು ತಮಗೆ ಕಾಲಾವಕಾಶ ಬೇಕೆಂದು ಜತ್ತಿಯವರು ಹೇಳಿ ಮುಂದೂಡಿದರು. ಜತ್ತಿಯವರ ಈ ನಿರ್ಧಾರದಿಂದ ಸರಕಾರ ತುಸು ಕಳವಳಕ್ಕೊಳ ಗಾಯಿತು.


ಸಂಪಾದಕರ ಸದ್ಯಶೋಧನೆ
ವಿಶ್ವೇಶ್ವರ ಭಟ್
ಮೊರಾರ್ಜಿ ದೇಸಾಯಿ ನೇತೃತ್ವದ ಜನತಾ ಪಕ್ಷದ ಸರಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಗೃಹ ಸಚಿವ ಚರಣ್ ಸಿಂಗ್ ಸಲಹೆ ಮೇರೆಗೆ, ಕಾಂಗ್ರೆಸ್ ಅಧಿಕಾರದಲ್ಲಿರುವ ಒಂಬತ್ತು ರಾಜ್ಯ ಸರಕಾರಗಳನ್ನು ವಜಾಗೊಳಿಸಲು ನಿರ್ಧರಿಸಲಾಯಿತು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಧೂಳೀಪಟವಾಗಿರುವ ಹಿನ್ನೆಲೆಯಲ್ಲಿ ಈ ರಾಜ್ಯ ಸರಕಾರಗಳು ಸಹ ಜನರ ವಿಶ್ವಾಸವನ್ನು ಕಳೆದುಕೊಂಡಿವೆ ಎಂದು ಚರಣ್ ಸಿಂಗ್ ವಾದ ಮಂಡಿಸಿದರು.
ಒಂಬತ್ತು ರಾಜ್ಯ ಸರಕಾರಗಳನ್ನು ವಿಸರ್ಜಿಸುವ ಕೇಂದ್ರ ಸಚಿವ ಸಂಪುಟದ ಶಿಫಾರಸನ್ನು ಅಂದಿನ ಹಂಗಾಮಿ ರಾಷ್ಟ್ರಪತಿ ಬಿ.ಡಿ.ಜತ್ತಿ ಅವರಿಗೆ ಕಳಿಸಿಕೊಡಲಾಯಿತು. ಒಂದು ಸಲವಲ್ಲ, ಎರಡು ಸಲ ಕಳಿಸಿಕೊಡಲಾಯಿತು. ಈ ವಿಷಯವಾಗಿ ನಿರ್ಧಾರ ತೆಗೆದುಕೊಳ್ಳಲು ತಮಗೆ ಕಾಲಾವಕಾಶ ಬೇಕೆಂದು ಜತ್ತಿಯವರು ಹೇಳಿ ಮುಂದೂಡಿದರು. ಜತ್ತಿಯವರ ಈ ನಿರ್ಧಾರದಿಂದ ಸರಕಾರ ತುಸು ಕಳವಳಕ್ಕೊಳಗಾಯಿತು. ಜತ್ತಿಯವರು ಹಂಗಾಮಿ ರಾಷ್ಟ್ರಪತಿಯಾಗಿದ್ದರು. ಅವರು ಉದ್ದೇಶ ಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ ಎಂಬುದು ಗೊತ್ತಿತ್ತು. ಅವರ ವಿಳಂಬ ನೀತಿಯಿಂದ ಸಾಂವಿಧಾನಿಕ ಬಿಕ್ಕಟ್ಟು ತಲೆದೋರಬಹುದು ಎಂದು ಕೇಂದ್ರ ಸಚಿವ ಸಂಪುಟ ಭಾವಿಸಿತು. ಈ ಬಗ್ಗೆ ಚರ್ಚಿಸಲು ಕ್ಯಾಬಿನೆಟ್ ಸಭೆಯನ್ನು ಪ್ರಧಾನಿ ಮೊರಾರ್ಜಿ (1977ರ ಏಪ್ರಿಲ್ 30) ಕರೆದರು. ಸಚಿವರ ಮುಖದಲ್ಲಿ ಆತಂಕವಿತ್ತು.
ಇದನ್ನೂ ಓದಿ: Vishweshwar Bhat Column: ಒಂದು ನಾಯಿಯ ಕಥೆಯಿದು !
ಹಂಗಾಮಿ ರಾಷ್ಟ್ರಪತಿ ಏನು ಮಾಡಬಹುದು ಎಂಬ ಬಗ್ಗೆ ಅವರು ಪರಸ್ಪರ ಚರ್ಚೆಯಲ್ಲಿ ತೊಡಗಿ ದ್ದರು. ಜತ್ತಿಯವರು ಇಂದಿರಾ ಅವರ ನಿಷ್ಠರು ಮತ್ತು ಅವರ ಕೃಪೆಯಿಂದಲೇ ಈ ಸ್ಥಾನಕ್ಕೆ ಬಂದ ವರು ಎಂಬುದು ಎಲ್ಲರಿಗೂ ಗೊತ್ತಿತ್ತು. ‘ಸಶಸಪಡೆಗಳ ಮಹಾ ದಂಡನಾಯಕರಾಗಿ (ಸುಪ್ರೀಂ ಕಮಾಂಡರ್) ಜತ್ತಿಯವರು ಸೇನೆಯನ್ನು ದಿಲ್ಲಿಗೆ ಕರೆಯಿಸಿ, ಹೊಸ ಸರಕಾರವನ್ನು ಕಿತ್ತೆಸೆಯುವ ಸಾಧ್ಯತೆ ಇದೆಯಾ?’ ಎಂಬ ಬಗ್ಗೆ ಗುಸುಗುಸು ಚರ್ಚೆಗಳಾದವು.
ಒಂದು ವೇಳೆ ಚುನಾವಣೆಯಲ್ಲಿ ಸೋತರೆ, ನಿಮ್ಮ ರಕ್ಷಣೆಗಾಗಿ ತಾವು ಸೇನೆಯನ್ನು ದಿಲ್ಲಿಗೆ ಕರೆಯಿ ಸುವುದಾಗಿ ಸ್ವತಃ ಸೇನಾ ಮುಖ್ಯಸ್ಥರು ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಹೇಳಿದ್ದರೆಂದು, ಲೋಕ ಸಭಾ ಚುನಾವಣೆಗೆ ಕೆಲ ದಿನಗಳ ಮೊದಲು ಅಧಿಕಾರದ ಮೊಗಸಾಲೆಯಲ್ಲಿ ಅಲ್ಲಲ್ಲಿ ಕೇಳಿ ಬಂದಿತ್ತು. ಆಗ ಇಂದಿರಾ ಗಾಂಧಿಯವರು, ‘ನನ್ನ ಬಗ್ಗೆ ಏನೂ ಚಿಂತಿಸುವ ಅಗತ್ಯವಿಲ್ಲ.
ಆದರೆ ನನ್ನ ಮಕ್ಕಳ ಯೋಗಕ್ಷೇಮವನ್ನು ನೋಡಿಕೊಳ್ಳಿ’ ಎಂದು ಹೇಳಿದ್ದಾಗಿಯೂ ಕೇಳಿಬಂದಿತ್ತು. ರಿಸರ್ಚ್ ಮತ್ತು ಅನಾಲಿಸಿಸ್ ವಿಂಗ್ ಮುಖ್ಯಸ್ಥ ಆರ್.ಎನ್.ಕಾವ್ ಕೂಡ ಇಂಥದೇ ಭರವಸೆಯ ಮಾತುಗಳನ್ನು ಇಂದಿರಾಗೆ ಹೇಳಿದ್ದರಂತೆ. ‘ನಿಮ್ಮ ಸೋಲಿನಿಂದ ದಿಲ್ಲಿಯಲ್ಲಿ ಹಿಂಸಾಚಾರವಾದರೆ, ನಾನು ಅರೆ ಸೇನಾಪಡೆಯನ್ನು ತಕ್ಷಣ ಕರೆಯಿಸುತ್ತೇನೆ’ ಎಂದು ಹೇಳಿದ್ದರಂತೆ.
ಆದರೆ ರಕ್ಷಣಾ ಸಚಿವ ಜಗಜೀವನ್ ರಾಮ್, ಆ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದರು. ‘ಯಾವ ಕಾರಣಕ್ಕೂ ಸಶಸ ಸೇನಾಪಡೆ ಹಾಗೆ ಮಾಡುವುದಿಲ್ಲ. ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಅಂದಿನ ರಕ್ಷಣಾ ಸಚಿವ ಬನ್ಸಿಲಾಲ್ ಸೇನಾ ಮುಖ್ಯಸ್ಥರನ್ನು ಭೇಟಿ ಮಾಡಿ, ತುರ್ತುಪರಿಸ್ಥಿತಿಯನ್ನು ಸಮ್ಮತಿ ಸುವಂತೆ ಕೋರಿದ್ದರು.
ಆದರೆ ಸೇನಾಪಡೆ ಮುಖ್ಯಸ್ಥ ಜನರಲ್ ತಾಪೀಶ್ವರ್ ನಾರಾಯಣ್ ರೈನಾ ನಿರಾಕರಿಸಿದ್ದರು. ಜನರಲ್ ರೈನಾ ಭಾರತೀಯ ಸೇನೆಯ ಅತ್ಯಂತ ವಿಶ್ವಾಸಾರ್ಹ ಅಧಿಕಾರಿ ಮತ್ತು ಭಾರತೀಯ ಸೇನೆ ವೃತ್ತಿಪರ ಪಡೆಯಾಗಿದ್ದು, ನಾವು ಯಾವತ್ತೂ ಅದನ್ನು ಸಂದೇಹದಿಂದ ನೋಡಬಾರದು’ ಎಂದು ಜಗಜೀ ವನ್ ರಾಮ್ ಹೇಳಿದರು. ಆದರೂ ಅವರ ಮಾತಿನಿಂದ ಎಲ್ಲ ಮಂತ್ರಿಗಳಿಗೆ ಸಂಪೂರ್ಣ ಸಮಾಧಾನ ವಾಗಿರಲಿಲ್ಲ. ಅದೇ ದಿನ ರಾತ್ರಿ ಜಾರ್ಜ್ ಫರ್ನಾಂಡಿಸ್ ಅವರಿಗೆ ಇಂಟೆಲಿಜೆನ್ಸ್ ಆಫೀಸರ್ ನಗರಕರ್ ಫೋನ್ ಮಾಡಿ, ‘ಏನೋ ನಡೆಯುತ್ತಿದೆ, ಯಾವುದಕ್ಕೂ ಎಚ್ಚರದಿಂದ ಇರುವುದು ವಾಸಿ’ ಎಂದು
ಹೇಳಿದರು.
ಐಬಿ ಅಧಿಕಾರಿಗಳು ಕಾಂಗ್ರೆಸ್ ನಾಯಕರ ಟೆಲಿಫೋನ್ ಕರೆ ಮತ್ತು ಚಟುವಟಿಕೆಗಳ ಮೇಲೆ ನಿಗಾ ಇಟ್ಟಿದ್ದರು. ಅದಾಗಿ ಕೆಲ ಸಮಯದ ಬಳಿಕ, ಮಧು ಲಿಮಯೆ ಸಹ ಫೋನ್ ಮಾಡಿ ಇದೇ ಆತಂಕ ವನ್ನು ವ್ಯಕ್ತಪಡಿಸಿದ್ದರು.