Vishweshwar Bhat Column: ಎಲ್ಲರ ಸಲಹೆಗಳನ್ನು ಪರಿಗಣಿಸುವುದು, ಸ್ವೀಕರಿಸುವುದು ಜಾಣತನ
ನೀನು ಮೋಸವನ್ನೇ ಪ್ರೀತಿಯೆಂದು ಭಾವಿಸುತ್ತೀಯಾ ಎಂದಾದರೆ ಪದೇ ಪದೆ ಮೋಸ ಹೋಗುತ್ತೀಯಾ. ಇವೆರಡರ ವ್ಯತ್ಯಾಸವನ್ನು ಎಲ್ಲಿತನಕ ನೀನು ಗುರುತಿಸುವುದಿಲ್ಲವೋ, ಅಲ್ಲಿ ತನಕ ನೀನು ಪ್ರೀತಿಸುತ್ತಾ ಮೋಸ ಹೋಗು
Ashok Nayak
January 12, 2025
ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್
ಕೆಲವರಿಗೆ, ತಮ್ಮ ಕೆಲಸದಲ್ಲಿ ಬೇರೆಯವರು ಒಂದು ಸಣ್ಣ ಸಲಹೆ-ಸೂಚನೆ ವ್ಯಕ್ತಪಡಿಸುವುದು ಸಹಇಷ್ಟವಾಗುವುದಿಲ್ಲ. ಅದರಲ್ಲೂ ಬೇರೆಯವರು ತಮ್ಮ ಕೆಲಸವನ್ನು ತಿದ್ದಿದರೆ ಅದನ್ನು ಸುತರಾಂ ತಳ್ಳಿ ಹಾಕುತ್ತಾರೆ.ಅವರಿಗೆ ತಾವು ಹೇಳಿದ್ದೇ ವೇದವಾಕ್ಯ, ತಾವು ಮಾಡಿದ್ದೇ ಸರ್ವಶ್ರೇಷ್ಠ. “ನನಗೆ ಹೇಳಲು ಅವನಾರು? ನನ್ನಸ್ಥಾನಮಾನವೇನು, ಅವನದ್ದೇನು? ನನಗೆ ಸಲಹೆ ಕೊಡುವಷ್ಟು ಅವನಿಗೆ ಧಿಮಾಕಾ?" ಎಂಬ ಅಹಂಕಾರದ ಮಾತುಗಳನ್ನು ಹೇಳಿ ಬೇರೆಯವರ ಅಭಿಪ್ರಾಯಗಳನ್ನು ಹೊಸಕಿ ಹಾಕುತ್ತಾರೆ.
ಬೇರೆಯವರ ಅನಿಸಿಕೆ, ಸಲಹೆಗಳನ್ನು ಪಡೆಯುವುದೆಂದರೆ ಅದು ತಮಗೆ ಅವಮಾನ ಎಂದು ಇಂಥವರು ಭಾವಿಸು ತ್ತಾರೆ. ಬೇರೆಯವರ ಅನಿಸಿಕೆಗಳನ್ನು ಕೇಳಿ ಅವನ್ನು ಅಳವಡಿಸಿಕೊಂಡರೆ, ತಾವು ಮಾಡುವ ಕೆಲಸದಲ್ಲಿ ಇನ್ನಷ್ಟು ಸುಧಾರಣೆ ತರಬಹುದು ಎಂಬುದನ್ನು ಒಪ್ಪುವುದಿಲ್ಲ. ಅವರಿಗೆ ‘ತಮಗಿಂತ ಹಿರಿಯರಿಲ್ಲ’ ಎಂಬ ಅಹಂ.
ಒಬ್ಬರು ಹಿರಿಯ ಪತ್ರಕರ್ತರಿದ್ದರು. ಅವರ ಕಾಪಿಯನ್ನು ಯಾರೂ ತಿದ್ದುವಂತಿರಲಿಲ್ಲ. ಅವರಿಗೆ ಸಮಾಜದಲ್ಲಿ ತಕ್ಕಮಟ್ಟಿಗಿನ ಗೌರವವೂ ಇತ್ತು. ಮಂತ್ರಿಗಳು, ರಾಜಕಾರಣಿಗಳ ಜತೆ ಸಖ್ಯವಿತ್ತು. “ದಿನ ಬೆಳಗಾದರೆ ಮಂತ್ರಿ, ಮುಖ್ಯ ಮಂತ್ರಿಯವರನ್ನು ಭೇಟಿ ಮಾಡ್ತೇನೆ, ಅವರು ನನ್ನ ವರದಿಯನ್ನು ಪ್ರಶಂಸೆ ಮಾಡ್ತಾರೆ. ಹೀಗಿರುವಾಗ ಡೆಸ್ಕ್‌ನಲ್ಲಿ ರುವ ಉಪಸಂಪಾದಕರು ನನ್ನ ಕಾಪಿಯನ್ನು ತಿದ್ದುತ್ತಾರೆ. ಅವರಿಗೆ ಆ ಯೋಗ್ಯತೆ ಇದೆಯಾ?" ಎಂದು ಜಂಭದಿಂದ ಪ್ರಶ್ನಿಸುತ್ತಿದ್ದರು. ತಮ್ಮದೇ ಉತ್ಕೃಷ್ಟ, ಸರ್ವಶ್ರೇಷ್ಠ ಎಂದು ಭಾವಿಸುವುದು ತಪ್ಪಲ್ಲ, ಅದು ಉತ್ಕೃಷ್ಟ ಅಥವಾ ಸರ್ವಶ್ರೇಷ್ಠವಾಗಿದ್ದಾಗ. ಆದರೆ ಬೇರೆಯವರು ನಮ್ಮ ಕೃತಿಯನ್ನು ನೋಡಿ ಸಲಹೆ ಸೂಚನೆ ನೀಡಿದಾಗ, ಅದನ್ನು ಸ್ವೀಕರಿಸುವುದು ಅಥವಾ ಅಳವಡಿಸಿಕೊಳ್ಳುವುದು ಜಾಣತನ. ‘ನನಗೆ ಸಲಹೆ, ಸೂಚನೆ ನೀಡಲು ಇವನ್ಯಾರು? ನನಗೇ ಬುದ್ಧಿ ಹೇಳುವಷ್ಟು ಬೆಳೆದು ಬಿಟ್ಟನಾ?’ ಎಂದು ಯೋಚಿಸುವುದು ನಮ್ಮ ಸಣ್ಣತನವಾದೀತು. ಬೇರೆಯ ವರಿಗೂ ಬುದ್ಧಿಯಿದೆ, ಅವರಿಗೂ ಜೀವನ ಅನುಭವವಿದೆ, ಅವರಲ್ಲೂ ಒಳ್ಳೆಯ ಐಡಿಯಾಗಳಿರಬಹುದು. ಅದನ್ನೂ ಸ್ವೀಕರಿಸೋಣ ಎಂದು ಭಾವಿಸುವುದರಿಂದ ನಮಗೇ ಒಳ್ಳೆಯದಾಗುತ್ತದೆ.
ಅಷ್ಟಕ್ಕೂ, ಉತ್ತಮ ಸಲಹೆಗಳೆಂದರೆ ಜೀವನಾನುಭಗಳ ಫಲ, ಸಾರ ತಾನೆ? ಅದನ್ನು ಬಿಟ್ಟು, ‘ನಾನೇಕೆ ಬೇರೆಯವರ ಸಲಹೆ ಪಡೆಯಬೇಕು, ಅಂಥ ಬೌದ್ಧಿಕ ದಾರಿದ್ರ್ಯ ನನಗಿದೆಯೇ?’ ಎಂದು ಭಾವಿಸುವುದು ನಮ್ಮ ಸಂಕುಚಿತ ಮನೋ ಭಾವವನ್ನು ತೋರಿಸುತ್ತದೆ. ಉತ್ತಮ ಬರಹಗಾರನಾದವನು, ಕಾದಂಬರಿಕಾರನಾದವನು ಮುದ್ರಣಕ್ಕೆ ಕಳಿಸುವ ಮುನ್ನ, ತಾನು ಬರೆದಿದ್ದನ್ನು ನಾಲ್ಕಾರು ಮಂದಿಗೆ ತೋರಿಸಿ ಅವರ ಸಲಹೆ ಪಡೆಯುತ್ತಾನೆ. ಆ ಸಲಹೆ ಯನ್ನು ಜಾರಿಗೊಳಿಸುತ್ತಾನೆ.
ಇದರಿಂದ ಆ ಕೃತಿಯ ಮೆರುಗು ಹೆಚ್ಚಾಗುತ್ತದೆ. ಪ್ರಸಿದ್ಧ ಪತ್ರಕರ್ತರು, ಸಂಪಾದಕರು ತಾವು ಬರೆದಿದ್ದನ್ನುನೇರವಾಗಿ ಪ್ರಿಂಟ್‌ಗೆ ಕಳಿಸುವುದಿಲ್ಲ. ತಮ್ಮ ಸಹೋದ್ಯೋಗಿಗಳಿಗೆ ತೋರಿಸಿ ಅವರ ಸಲಹೆ ಪಡೆಯುತ್ತಾರೆ. ಅವರಿಗೆ ತಮ್ಮ ಕಾಪಿಯನ್ನು ಎಡಿಟ್ ಮಾಡುವಂತೆ ಸೂಚಿಸುತ್ತಾರೆ. ‘ನಾನು ಬರೆದಿದ್ದನ್ನು ಎಡಿಟ್ ಮಾಡಲು ಅವನ್ಯಾರು?’ ಎಂದು ಭಾವಿಸುವುದಿಲ್ಲ. ಅಷ್ಟಕ್ಕೂ ಐಡಿಯಾಗಳು ನಮ್ಮದೊಂದೇ ಸ್ವತ್ತಲ್ಲ, ಅವು ಎಲ್ಲಿಂದ ಬೇಕಾದರೂ ಬರಬಹುದು.
ಯೋಗಿ ಪರಿಚಯಿಸಿದ ಯೋಗಿ!ನನಗೆ ಹೇಮಿನ್ ಸುನಿಮ್ ಅವರ ಬಗ್ಗೆ ಮೊದಲ ಸಲ ಹೇಳಿದವರು ಯೋಗಿ ದುರ್ಲಭಜೀ. ಅಲ್ಲಿಯವರೆಗೆ ನಾನುಅವರ ಬಗ್ಗೆ ಕೇಳಿಯೇ ಇರಲಿಲ್ಲ. ಒಂದು ದಿನ ಯೋಗಿಯವರು ‘ನೀವು ಹೇಮಿನ್ ಸುನಿಮ್ ಕೃತಿಗಳನ್ನು ಓದಿ ದ್ದೀರಾ?’ ಎಂದು ಕೇಳಿದರು. ‘ಅವರ ಕೃತಿಗಳನ್ನೂ ಓದಿಲ್ಲ. ಅವರ ಹೆಸರನ್ನೂ ಕೇಳಿಲ್ಲ’ ಎಂದೆ. ‘ನನಗೆ ಆಶ್ಚರ್ಯವಾಗುತ್ತಿದೆ’ ಎಂದರು ಯೋಗಿಜೀ. ನನಗೆ ಒಂಥರಾ ಮುಜುಗರವಾಯಿತು.
ಒಂದು ದಿನದ ನಂತರ, ಕೊರಿಯರ್‌ನಲ್ಲಿ ಪುಸ್ತಕ ಬಂತು. ಯೋಗಿಜೀಯವರು ಹೇಮಿನ್ ಸುನಿಮ್ ಬರೆದ TheThings You Can See Only When You Slow Down ಎಂಬ ಪುಸ್ತಕ ಕಳಿಸಿಕೊಟ್ಟಿದ್ದರು. ಅಂದ ಹಾಗೆ, ಈ ಕೃತಿಯ ಸುಮಾರು 30 ಲಕ್ಷ ಪ್ರತಿಗಳು ಮಾರಾಟವಾಗಿವೆ. ನಾನು ಎರಡು ರಾತ್ರಿ ಕುಳಿತು ಈ ಪುಸ್ತಕವನ್ನು ಓದಿ ಮುಗಿಸಿದೆ. ಇದು ಎಷ್ಟು ಸೊಗಸಾದ ಕೃತಿಯೆಂದರೆ, ಯೋಗಿಜೀ ಅವರಿಗೆ ದುಂಬಾಲು ಬಿದ್ದು ಮೂಲಪ್ರಕಾಶಕರನ್ನು ಸಂಪರ್ಕಿಸಿ ಅನುವಾದದ ಹಕ್ಕನ್ನು ಪಡೆದೆ.
ಈ ಪುಸ್ತಕದ ಸಾರಾಂಶವನ್ನು ಒಂದೇ ಸಾಲಿನಲ್ಲಿ ಹೇಳುವುದಾದರೆ, ಈ ಜಂಜಡದ, ಒತ್ತಡದ, ತಾಪತ್ರಯದ ಜಗತ್ತಿನಲ್ಲಿ ಶಾಂತವಾಗಿ ಯೋಚಿಸುವುದು ಹೇಗೆ, ನೆಮ್ಮದಿಯಿಂದ ಬದುಕುವುದು ಹೇಗೆ ಎಂಬುದನ್ನು ಸುನಿಮ್ ಅತ್ಯಂತ ಸ್ವಾರಸ್ಯವಾಗಿ ಹೇಳಿದ್ದಾರೆ. ಒಂಥರಾ ಕತೆಯಂತೆ ಓದಿಸಿಕೊಂಡು ಹೋಗುತ್ತದೆ. ಅಂದ ಹಾಗೆ, ಹೇಮಿನ್ ಸುನಿಮ್ ಅವರು ಮೂಲತಃ ದಕ್ಷಿಣ ಕೊರಿಯಾದವರು. ಇವರನ್ನು ಆ ದೇಶದಲ್ಲಿ ಅತ್ಯಂತ ಪ್ರಭಾವಿ ‘ಝೆನ್ ಬುದ್ಧಿಸ್ಟ್’ ಎಂದು ಪರಿಗಣಿಸಲಾಗಿದೆ. ಸುನಿಮ್ ಅವರು ಸಿನಿಮಾ ಅಧ್ಯಯನಕ್ಕೆಂದು ಅಮೆರಿಕಕ್ಕೆ ತೆರಳಿದರು. ಆದರೆಹಿಂದಿರುಗುವಾಗ ಝೆನ್ ಧರ್ಮಗುರುವಾಗಿದ್ದರು. ಅಲ್ಲಿ ಇವರು ಯುಸಿ ಬರ್ಕ್‌ಲಿ, ಹಾರ್ವರ್ಡ್ ಹಾಗೂ ಪ್ರಿನ್ಸ್‌ಟನ್ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ, ನಂತರ ಮೆಸಾಚುಸೆಟ್ಸ್ ನ ಹ್ಯಾಂಪ್‌ಷೈರ್ ಕಾಲೇಜಿನಲ್ಲಿ ಬೌದ್ಧಧರ್ಮ ಪ್ರಾಧ್ಯಾಪಕರಾಗಿ ಕೆಲಸಕ್ಕೆ ಸೇರಿಕೊಂಡರು. ಜಗತ್ತಿನಾದ್ಯಂತ ಸಂಚರಿಸುತ್ತಾ ‘ನೆಮ್ಮದಿಯ ಬದುಕು ಸಾಗಿಸುವ ವಿಧಾನ’ದ ಬಗ್ಗೆ ಉಪನ್ಯಾಸ ಮಾಡಿದ್ದು ಇವರ ಹೆಗ್ಗಳಿಕೆ. ಸುನಿಮ್ ಅವರನ್ನು ‘ದಕ್ಷಿಣ ಏಷ್ಯಾದ ಪ್ರಭಾವಿ ವ್ಯಕ್ತಿ’ ಎಂದು ಪರಿಗಣಿಸಲಾಗಿದೆ.
‘ನಾವು ನಮ್ಮ ಮನಸ್ಸಿನ ಕಿಟಕಿಯ ಮೂಲಕ ಜಗತ್ತನ್ನು ನೋಡುತ್ತೇವೆ. ನಮ್ಮ ಮನಸ್ಸು ಗಲಿಬಿಲಿಯಾಗಿದ್ದರೆ, ಜಗತ್ತೂ ಹಾಗೇ ಕಾಣುತ್ತದೆ. ನಮ್ಮ ಮನಸ್ಸು ಶಾಂತವಾಗಿದ್ದರೆ, ಜಗತ್ತೂ ಶಾಂತವಾಗಿಯೇ ತೋರುತ್ತದೆ. ಈ ಜಗತ್ತನ್ನು ಬದಲಾಯಿಸುವ ಮುನ್ನ ನಮ್ಮ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಸಹ ಅಷ್ಟೇ ಮುಖ್ಯ’ ಎಂದು ಹೇಮಿನ್ ಸುನಿಮ್ ಹೇಳುತ್ತಾರೆ. ‘ದೊಡ್ಡ ನಗರದ ಲೋಕಲ್ ಅಥವಾ ಮೆಟ್ರೋ ಟ್ರೇನಿನಲ್ಲಿ ನಾನು ಹೇಗೋ ತೂರಿಕೊಂಡು ಆ ಜನಜಂಗುಳಿಯಲ್ಲಿ ನಿಂತುಕೊಳ್ಳಲು ಹೇಗೋ ಜಾಗ ಸಂಪಾದಿಸಿಕೊಳ್ಳುತ್ತೇನೆ. ನನ್ನ ಸುತ್ತ ಜನರೂ ನನ್ನ ಹಾಗೇ ನಿಂತಿರುತ್ತಾರೆ. ಒಂದೋ ನಾನು ಆ ಸ್ಥಿತಿಯನ್ನು ಆನಂದಿಸಬೇಕು, ಇಲ್ಲವೇ ಸಿಡಿಮಿಡಿ ಗೊಳ್ಳಬೇಕು.
ನನ್ನ ಸುತ್ತಮುತ್ತ ನಿಂತಿರುವವರಿಗೂ ಇದೇ ಆಯ್ಕೆ. ಆದರೆ ಸನ್ನಿವೇಶ ಒಂದೇ ಆದರೂ, ಒಬ್ಬೊಬ್ಬರು ಒಂದೊಂದು ರೀತಿ ಪ್ರತಿಕ್ರಿಯಿಸುತ್ತಾರೆ. ಈ ಸನ್ನಿವೇಶವನ್ನು ಇನ್ನೂ ಸೂಕ್ಷ್ಮವಾಗಿ ಅವಲೋಕಿಸಿದರೆ ಗೊತ್ತಾಗುವುದೇನೆಂದರೆ, ನಮಗೆ ತೊಂದರೆ ಕೊಡುತ್ತಿರುವುದು ಆ ಪರಿಸ್ಥಿತಿ ಅಲ್ಲ, ನಾವು ಅದನ್ನು ಹೇಗೆ ನೋಡುತ್ತಿದ್ದೇವೆಂಬ ನಮ್ಮ ದೃಷ್ಟಿ ಕೋನ’ ಅಂತಾರೆ ಸುನಿಮ್. ‘ಯಾರೂ ಮೂಲತಃ ಒಳ್ಳೆಯವರೂ ಅಲ್ಲ, ಕೆಟ್ಟವರೂ ಅಲ್ಲ.
ನಾವು ಯಾವ ಪರಿಸ್ಥಿತಿಯಲ್ಲಿ ಸಿಲುಕಿ ಹೇಗೆ ವರ್ತಿಸುತ್ತೇವೆ ಎಂಬುದನ್ನು ಆಧರಿಸಿ ನಮ್ಮ ಒಳ್ಳೆಯತನ ಹಾಗೂ ಕೆಟ್ಟತನ ನಿರ್ಧಾರವಾಗುತ್ತದೆ. ನನ್ನ ಮೇಲೆ ಕಾರು ಹತ್ತಿಸಿದವನು ಕಳ್ಳನೇ ಆಗಿರಬಹುದು, ಆದರೆ ಆತ ಕಾರು ನಿಲ್ಲಿಸಿ ಆಸ್ಪತ್ರೆಗೆ ಸೇರಿಸಿದರೆ ಆತ ಪುಣ್ಯಾತ್ಮನೇ. ಅದೇ ನನ್ನ ಮೇಲೆ ಕಾರು ಹತ್ತಿಸಿದವನು ನೊಬೆಲ್ ಪ್ರಶಸ್ತಿ ಪುರಸ್ಕೃತನೇ ಆಗಿರಬಹುದು, ಆತ ಹಾಗೇ ಓಡಿಹೋದರೆ ಆತ ದುರಾತ್ಮನೇ’ ಅಂತಾರೆ ಸುನಿಮ್. ಯೋಗಿ ದುರ್ಲಭಜೀ ಬೆಳಗ್ಗೆ ಒಂದು ಸಂದೇಶ ಕಳಿಸಿದ್ದರು. ‘ನಮ್ಮನ್ನು ಯಾರಾದರೂ ಇಷ್ಟಪಡದಿದ್ದರೆ, ಅದು ನಮ್ಮ ಸಮಸ್ಯೆ ಅಲ್ಲ, ಅದು ಅವರ ಸಮಸ್ಯೆ. ಅದಕ್ಕೆ ನಾವು ತಲೆಕೆಡಿಸಿಕೊಳ್ಳಬಾರದು. ಗೊತ್ತಿರಲಿ, ಎಲ್ಲರೂ ನಮ್ಮನ್ನು ಇಷ್ಟಪಡುವುದಿಲ್ಲ. ಈ ಸಂಗತಿ ನಮ್ಮನ್ನು ವಿಪರೀತ ಕಾಡಿದರೆ ಅದೇ ನಮ್ಮ ಸಮಸ್ಯೆ’ ಎಂದು ಬರೆದಿದ್ದರು.
‘ಈ ಸಂದೇಶ ಹೇಮಿನ್ ಸುನಿಮ್ ಅವರದು’ ಎಂದು ಯೋಗಿ ಅಂದಿನ ಸಂದೇಶವನ್ನು ಕೊನೆಗೊಳಿಸಿದರು. ನಮ್ಮ ದೈನಂದಿನ ಬದುಕಿನ ಪ್ರಸಂಗಗಳನ್ನೇ, ಉದಾಹರಣೆಗಳನ್ನೇ ಹೇಳುತ್ತಾ ಮನಸ್ಸಿಗೆ ಒಂದಷ್ಟು ಸಾಂತ್ವನ ನೀಡುವ ಸುನಿಮ್ ಅವರ ಮಾತುಗಳು ಚೇತೋಹಾರಿ. ‘ದಾರಿದೀಪೋಕ್ತಿ’ಯಂಥ ಸುನಿಮ್ ಅವರ ಅನುಭವದ ನುಡಿಗಳು ಮಜಾ ಕೊಡುತ್ತವೆ. ಅವುಗಳ ಒಂದಿಷ್ಟು ಸ್ಯಾಂಪಲ್ ಇಲ್ಲಿವೆ ನೋಡಿ: ಚುನಾವಣೆಯಲ್ಲಿ ಗೆದ್ದ ನಂತರ ರಾಜಕಾರಣಿ ಯೊಬ್ಬ ಹೇಗೆ ವರ್ತಿಸಬಹುದು ಎಂದು ಊಹಿಸುವುದರ ಬದಲು, ಈಗ ಆತ ಹೇಗಿದ್ದಾನೆ, ಹಿಂದೆ ಯಾವ ರೀತಿ ಇದ್ದ ಎಂಬುದನ್ನು ತಿಳಿದುಕೊಳ್ಳಿ.
ಗೆದ್ದ ನಂತರ ನಾನು ಬದಲಾಗಲಿದ್ದೇನೆಂಬ ವ್ಯಕ್ತಿ ಬದಲಾಗುವುದಿಲ್ಲ. ಇಷ್ಟು ವರ್ಷ ಹೇಗೆ ಬದುಕಿದ್ದನೋ ಅದೇ ರೀತಿ ಮುಂದೆಯೂ ಆತ ಬದುಕುತ್ತಾನೆ. ಗೆದ್ದ ನಂತರ ಬದಲಾಗುವೆ ಎಂಬ ಮಾತುಗಳಿಗೆ ಮರುಳಾಗಬಾರದು.ಯಾರನ್ನೇ ಆಗಲಿ, ಮೊದಲ ಸಲ ಭೇಟಿಯಾದಾಗ ಅತೀವ ಒಳ್ಳೆಯವನಂತೆ, ದಯಾಳುವಿನಂತೆ ವರ್ತಿಸುತ್ತಾನೆ.ಪ್ರಶ್ನೆಯೆಂದರೆ ಅವರ ಒಳ್ಳೆಯತನ, ದಯಾಪರತೆ ಎಷ್ಟು ದಿನ ಮುಂದುವರಿಯುತ್ತದೆ ಎಂಬುದು. ಮೊದಲ ಸಲ ಬಹಳ ಚೆನ್ನಾಗಿ ವರ್ತಿಸಿದವರು ಯಾವತ್ತೂ ಹಾಗೆಯೇ ಇರುತ್ತಾರೆ ಎಂದು ತಿಳಿದು ಮೋಸ ಹೋಗಬಾರದು.
ನಮಗೆ ಏನೋ ಲಾಭವಾಗುತ್ತದೆ ಅಥವಾ ಏನೋ ಸಿಗುತ್ತದೆಂದು ತಿಳಿದು ಉಪಕಾರ ಮಾಡುವುದೆಂದರೆ ಅದುಉಪಕಾರವಲ್ಲ, ವ್ಯವಹಾರ. ಏನೂ ಅಪೇಕ್ಷಿಸದೇ ಸಹಾಯ ಮಾಡುವುದು ನಿಜವಾದ ಉಪಕಾರ. ಕೊಟ್ಟದ್ದನ್ನು ಮರೆಯುವುದು ನಿಜವಾದ ದಾನ. ಉಳಿದವುಗಳೆಲ್ಲ ಪಕ್ಕಾ ದಂಧೆ. ಆತ ಆಕೆಯ ಹಿಂದೆ ಏನೇನೋ ದೂರು ಹೇಳುತ್ತಾನೆ. ಆದರೆ ಆಕೆಗೆ ಇದೇನೂ ಗೊತ್ತಿಲ್ಲ. ಅವನ ಬಳಿ ಒಳ್ಳೆಯ ಮಾತುಗಳನ್ನೇ ಹೇಳುತ್ತಾಳೆ. ಬಹಳ ಒಳ್ಳೆಯ ಪ್ರತೀಕಾರ ಎಂದರೆ ಪ್ರೀತಿ.
ನಾನು ಒಳಗೆ ತೆಗೆದುಕೊಳ್ಳುವ ಗಾಳಿ ನನ್ನ ದೇಹವನ್ನು ಹೊಕ್ಕು ನನ್ನ ದೇಹದ ಭಾಗವೇ ಆಗುತ್ತದೆ. ನಾನು ಹೊರಗೆಬಿಡುವ ಗಾಳಿ ಬೇರೆಯವರ ದೇಹದೊಳಗೆ ಹೊಕ್ಕು ಅವರ ದೇಹದ ಭಾಗವಾಗುತ್ತದೆ. ಗಾಳಿಯ ಈ ಚಲನೆಯನ್ನೇಗಮನಿಸಿದರೆ ನಾವೆಲ್ಲ ಒಬ್ಬರಿಗೊಬ್ಬರು ಕನೆಕ್ಟ್ ಆಗಿದ್ದೇವೆಂಬುದು ಗೊತ್ತಾಗುತ್ತದೆ. ಕೇವಲ ಸಾಂಕೇತಿಕವಾಗಷ್ಟೇ ಅಲ್ಲ, ಅಕ್ಷರಶಃ! ಲಂಚ್ ಬಾಕ್ಸಿನಲ್ಲಿಟ್ಟ ಸೇಬು ಹಣ್ಣನ್ನು ನೋಡಿದೆ. ಅದು ಅಲ್ಲಿಗೆ ಬಂದು ಕುಳಿತಿದ್ದಾದರೂ ಹೇಗೆ? ಆಗ ನನ್ನ ಕಣ್ಣೆದುರಿಗೆ, ಸೇಬಿನ ಮರ, ಸೂರ್ಯನ ಕಿರಣ, ಮೋಡ, ಮಳೆ, ಭೂಮಿ, ಗಾಳಿ, ರೈತನ ಬೆವರು… ಇವೆಲ್ಲ ಬಂದವು. ಇವೆಲ್ಲ ಆ ಸೇಬಿನಲ್ಲಿದೆಯೆಂದು ಅನಿಸಿತು.
ಡೆಲಿವರಿ ಟ್ರಕ್, ಪೆಟ್ರೋಲ್, ಮಾರ್ಕೆಟ್, ಹಣ, ಕ್ಯಾಶಿಯರ್‌ನ ನಗು ಎಲ್ಲವೂ ಸೇಬು ಹಣ್ಣಿನೊಳಗಿದೆಯೆಂದು ಅನಿಸಿತು. ರೆಫ್ರಿಜರೇಟರ್, ಚಾಕು, ಕಟಿಂಗ್ ಬೋರ್ಡ್, ತಾಯಿಯ ಪ್ರೀತಿ ಎಲ್ಲವೂ ಅದರೊಳಗಿದೆಯೆಂದು ಅನಿಸಿತು. ಈ ಪ್ರಪಂಚದಲ್ಲಿರುವ ಪ್ರತಿ ವಸ್ತುವೂ ಮತ್ತೊಂದನ್ನು ಅವಲಂಬಿಸಿದೆ. ನಮ್ಮೊಳಗೆ ಏನಿದೆ ಎಂಬುದನ್ನು ಒಂದು ಕ್ಷಣ ಯೋಚಿಸಿ. ನನಗನಿಸುತ್ತದೆ ನಮ್ಮೊಳಗೆ ಇಡೀ ಬ್ರಹ್ಮಾಂಡವೇ ಅಡಗಿದೆ.
ಜೀವನವೆಂಬುದು ಪಿಜ್ಜಾದ ಒಂದು ತುಂಡು ಇದ್ದಂತೆ. ಜಾಹೀರಾತಿನಲ್ಲಿ ಪಿಜ್ಜಾವನ್ನು ನೋಡಿದರೆ, ಬಾಯಲ್ಲಿ ನೀರು ಬರುತ್ತದೆ. ಆದರೆ ಅದನ್ನು ತಿನ್ನುವಾಗ ನಾವು ಊಹಿಸಿದಷ್ಟು ಅದು ರುಚಿಯಾಗಿರುವುದಿಲ್ಲ. ಬೇರೆಯವರ ಜೀವನ ನೋಡಿ ಕರುಬುವಾಗ, ಜಾಹೀರಾತಿನಲ್ಲಿರುವ ಪಿಜ್ಜಾವನ್ನು ಕಲ್ಪಿಸಿಕೊಳ್ಳಿ. ಅದು ಇರುವುದಕ್ಕಿಂತ ಚೆನ್ನಾಗಿ ಕಾಣುತ್ತದೆ.
ಓಶೋ ಉತ್ತರಿಸಿದ ಪರಿ!ಓಶೋ ರಜನೀಶ್ ಬಳಿ ಮಹಿಳೆಯೊಬ್ಬಳು ಕೇಳುತ್ತಾಳೆ- ‘ಎಲ್ಲರೂ ಪ್ರೀತಿಸುತ್ತೇನೆ ಎಂದು ಮೋಸ ಮಾಡುತ್ತಾರಲ್ಲ.ಏಕೆ?’. ಇದಕ್ಕೆ ಓಶೋ ಹೇಳಿದ ಉತ್ತರ ಕೇಳಿ- ‘ಯಾರನ್ನಾದರೂ ಮೋಸ ಮಾಡಬೇಕು ಅಂದೆನಿಸಿದರೆ ಪ್ರೀತಿಸುವಂತೆನಟಿಸುವುದರ ಹೊರತಾಗಿ ಬೇರ‍್ಯಾವ ಸುಲಭ ಉಪಾಯವೂ ಇಲ್ಲ. ಪ್ರೀತಿ, ಸ್ನೇಹದಿಂದ ಯಾರನ್ನಾದರೂ ಮೋಸ ಮಾಡಬಹುದು. ಮೋಸದ ಆಪ್ತ ಸಂಗಾತಿ ಪ್ರೀತಿ, ಸ್ನೇಹ. ಅದು ಅಕ್ಕಪಕ್ಕದಲ್ಲಿ ಇವೆರಡನ್ನು ಇರಿಸಿಕೊಂಡೇ ತನ್ನ ಕೆಲಸ-ಕಾರ್ಯವನ್ನು ಸಾಧಿಸಿಕೊಳ್ಳುತ್ತದೆ. ಎಲ್ಲ ಮೋಸದಲ್ಲೂ ಪ್ರೀತಿ, ಸಲುಗೆ, ಸ್ನೇಹವಿರುತ್ತದೆ. ಆದರೆ ಪ್ರೀತಿಯಲ್ಲಿ ಮೋಸವಿರುವುದಿಲ್ಲ.
ನೀನು ಮೋಸವನ್ನೇ ಪ್ರೀತಿಯೆಂದು ಭಾವಿಸುತ್ತೀಯಾ ಎಂದಾದರೆ ಪದೇ ಪದೆ ಮೋಸ ಹೋಗುತ್ತೀಯಾ. ಇವೆರಡರವ್ಯತ್ಯಾಸವನ್ನು ಎಲ್ಲಿತನಕ ನೀನು ಗುರುತಿಸುವುದಿಲ್ಲವೋ, ಅಲ್ಲಿ ತನಕ ನೀನು ಪ್ರೀತಿಸುತ್ತಾ ಮೋಸ ಹೋಗು ತ್ತೀಯಾ’. ಸ್ನೇಹಿತರ ಹೊಂಚೂ ಇದೇ ಆಗಿರುತ್ತದೆ. ಅವರಿಗೆ ತಾನು ನಿಜವಾದ ಸ್ನೇಹಿತ, ಕೊರಳ ಗೆಳೆಯ, ಅಣ್ಣ, ಬ್ರದರ್, ಜಿಗ್ರಿ ದೋಸ್ತ್, ಖಾಸಾ ಖಾಸಾ ಸ್ನೇಹಿತ ಎಂಬುದನ್ನು ನಿಮಗೆ ಮನವರಿಕೆ ಮಾಡಿಕೊಡದೇ ಮೋಸ ಮಾಡಲು ಆಗುವುದಿಲ್ಲ. ಅಲ್ಲಿ ತನಕ ಅವನು ಮುಖವಾಡಕ್ಕೆ ತೊಡಗಿಸಿದ ಬಂಡವಾಳಕ್ಕೆ returns ಬರುವುದಿಲ್ಲ. ನೀವು ಸಂಪೂರ್ಣವಾಗಿ ಅವನನ್ನು ಸ್ನೇಹಿತನೆಂದು ಪರಿಗಣಿಸಿದ ಬಳಿಕ, ಒಳಗೆ ಬಿಟ್ಟುಕೊಂಡ ಬಳಿಕ, ನಿಮ್ಮನ್ನು ಕುಯ್ಯುವ ಅವಕಾಶಕ್ಕಾಗಿ ಕಾಯುತ್ತಿರುತ್ತಾನೆ.
ಅಷ್ಟರಲ್ಲಿ ನಿಮ್ಮಿಂದ ಪಡೆಯುವ ಸಹಾಯ ಪಡೆದಿರುತ್ತಾನೆ. ಲಾಭ ಮಾಡಿಕೊಂಡಿರುತ್ತಾನೆ. ಅದೇ ಸಂದರ್ಭದಲ್ಲಿ ನೀವು ಅಧಿಕಾರ ಕಳೆದುಕೊಂಡರೆ ಅವನಾದರೂ ಏನು ಮಾಡಬೇಕು ಹೇಳಿ? ಇಲ್ಲಿ ‘ಸ್ನೇಹಿತ’ ಎಂದು ಪರಿಗಣಿಸಿದ ನಿಮ್ಮ ಸ್ನೇಹಿತನದೇನು ತಪ್ಪು?
ಮಂಗ್ಯಾ ಆದವರು ನೀವು! ಅವನು ನಿಮ್ಮನ್ನು ಮಂಗ್ಯಾ ಮಾಡಿರಬಹುದು. ಅವನ ಕೆಲಸವೇ ಅದು. ನೀವೇಕೆ ಆದಿರಿ? ಹಾಗೆ ಆಗಿ ಎಂದು ಅವನೇನು ಹೇಳಿದನಾ? ಆದ್ದರಿಂದ ‘ಸ್ನೇಹಿತ’ ಎಂದು ಕರೆಸಿಕೊಂಡವರು ಕುಯ್ಯುತ್ತಾರೆ. ನಿಜವಾದ ಸ್ನೇಹಿತರು ಕಾಪಾಡುತ್ತಾರೆ. ಯಾರು ಬೇಕಾದರೂ ಸ್ನೇಹಿತರಾಗಬಹುದು. ಆದರೆ ಕಾಪಾಡುವವರು, ಕಾಪಾಡಬೇಕೆಂಬ ಉತ್ಕಟ ಹಂಬಲವಿದ್ದವರು ಮಾತ್ರ ‘ನಿಜವಾದ ಸ್ನೇಹಿತ’ರಾಗುತ್ತಾರೆ. ಉಳಿದಂತೆ ಸ್ನೇಹದ ಸೋಗಿನಲ್ಲಿ ಒಡನಾಡುವವರು ಗೆಳೆತನವನ್ನು en-cash ಮಾಡಿಕೊಳ್ಳುವುದು ಹೇಗೆ ಎಂದು ಸದಾ ಯೋಚಿಸು ತ್ತಿರುತ್ತಾರೆ. ಇಂಥವರನ್ನು ಪ್ರಾಣ ಸ್ನೇಹಿತರು ಎಂದು ಯಾರು ಭಾವಿಸುತ್ತಾರೋ ಅವರು ಡಬ್ಬು ಬೀಳುತ್ತಾರೆ.
ಅನೇಕರು ಇಂಥ ಸ್ನೇಹಿತರ ನಿಜಬಣ್ಣ ಬಯಲಾದಾಗ ಬೇಸರಿಸಿಕೊಳ್ಳುತ್ತಾರೆ. ಆಗಲೂ ನೀವು ಮಾಡುವ ತಪ್ಪೇ ನೆಂದರೆ ಅವರನ್ನು ಸ್ನೇಹಿತರೆಂದು ಭಾವಿಸುವುದು! ಸಣ್ಣ ಕತೆಗಳು ಒಂದು ವಾಕ್ಯಕ್ಕೆ, ಒಂದು ಪ್ರಸಂಗಕ್ಕೆ ಒಂದು ಕಾದಂಬರಿಯಾಗುವ ಅವಕಾಶ ಮತ್ತು ಸಾಮರ್ಥ್ಯವಿರುವುದು ಸಣ್ಣಕತೆಗಳಿಗೆ ಮಾತ್ರ. ಸಣ್ಣಕತೆಗಳೆಂದರೆ ಎಂದೂ ತೀರದ ನೆನಪಿನಂತೆ, ಮಳೆಯ ಕೊನೆ ಹನಿಯಂತೆ, ಸದಾ ಮನಸ್ಸಿನಲ್ಲಿ ತೊಟ್ಟಿಕ್ಕುತ್ತಿರುತ್ತವೆ. ಅಂಥಕೆಲವು ಹನಿಗಳು…
ಆತ ತನ್ನ ದೇಹವನ್ನು ಬೇರೆಯವಳ ಜತೆ ಹಂಚಿಕೊಂಡ.
ಆಕೆ ಹೃದಯವನ್ನು ಬೇರೆಯವನ ಜತೆ ಹಂಚಿಕೊಂಡಳು.
ಆ ವೃದ್ಧ ದಂಪತಿಗಳು ‘ಯಾರದ್ದು ದ್ರೋಹ’ ಎಂಬ ಬಗ್ಗೆ
ಈಗಲೂ ಜಗಳವಾಡುತ್ತಾರೆ.
ಮಲಗಿದೆ. ನಿದ್ದೆಯಲ್ಲಿ ಎಲ್ಲೆಲ್ಲೋ ಹೋಗಿಪುನಃ ಅಲ್ಲಿಯೇ ಎದ್ದೆ.
ತಂದೆಯವರ ಆರೋಗ್ಯ ತೀವ್ರ ಹದಗೆಟ್ಟಿತು.‘ವಕೀಲರನ್ನು ಕರೆಯಿಸಿ’ ಎಂದರು.
‘ಒಂದು ವಾಕ್ಯದಲ್ಲಿ ಜೀವನ ಅಂದ್ರೆ ಏನು? ಅಂತ ಬರೆಯಿರಿ’ಎಂದರು ಮೇಷ್ಟ್ರುಆತ ಬರೆದ- ‘ಜೀವನ ಅಂದ್ರೆ ಒಂದು ವಾಕ್ಯ’
ಎಷ್ಟೋ ವರ್ಷಗಳ ನಂತರ ಅವಳ -ನ್ ಬಂತು.ಮಾತಾಡುವ ಮುನ್ನವೇ ಕಟ್ ಆಯಿತು.ನಂತರ ಲೈನ್ ಸಿಗಲೇ ಇಲ್ಲ.ಕೈಗೆ ಸಿಗದಿರುವುದು ನಕ್ಷತ್ರವೊಂದೇ ಅಲ್ಲ ಎಂದೆನಿಸಿತು.
‘ಅವರು ನಮ್ಮ ಸಂಬಂಧಿಕರು. ನೀನು ಅವರೊಂದಿಗೆ ಉತ್ತಮಬಾಂಧವ್ಯ ಹೊಂದಿರಬೇಕು. ಸದಾ ಸಂಪರ್ಕದಲ್ಲಿ ಇರಬೇಕುಇಲ್ಲದಿದ್ದರೆ ಅವರು ನಿನ್ನ ಬಗ್ಗೆ ಕಾಳಜಿ ವಹಿಸುವುದಿಲ್ಲ’ ಎಂದುತಾಯಿ ಉಪದೇಶ ಮಾಡಿದಳು.ಆದರೆ ನಾನು ಆ ಮಾತನ್ನು ಕಿವಿ ಮೇಲೆ ಹಾಕಿಕೊಳ್ಳಲಿಲ್ಲ.ಅಂದಿನಿಂದ ನಾನು ನೆಮ್ಮದಿಯಿಂದ ಬಾಳಲಾರಂಭಿಸಿದೆ.
ತಂದೆಗೆ ನಾಯಿ ಅಂದ್ರೆ ಇಷ್ಟ.ತಾಯಿಗೆ ಬೆಕ್ಕು ಇಷ್ಟ.ನಾಯಿ-ಬೆಕ್ಕು ಸದಾ ಕಿತ್ತಾಡುತ್ತಿದ್ದವು.ನಾವೆಲ್ಲರೂ ಸಂತಸದಿಂದ ಇರಬೇಕಾದರೆ, ತಂದೆ-ತಾಯಿಜತೆ ನಾಯಿ, ಬೆಕ್ಕನ್ನು ಇಷ್ಟಪಡಬೇಕೆಂದು ನಿರ್ಧರಿಸಿದೆ.
ಇದನ್ನೂ ಓದಿ: @vishweshwarbhat