ವರಮಹಾಲಕ್ಷ್ಮಿ ಹಬ್ಬದಂದೇ ʻಟಾಕ್ಸಿಕ್ʼ ಅಡ್ವಾನ್ಸ್ ಬುಕಿಂಗ್ ಶುರು; 12 ಸಾವಿರ ಸ್ಕ್ರೀನ್‌ಗಳಲ್ಲಿ ʻರಾಕಿ ಭಾಯ್ʼ ಯಶ್ ಹವಾ!
Toxic: A Fairy Tale for Grown-ups: ಯಶ್ ನಟನೆಯ ʻಟಾಕ್ಸಿಕ್ʼ ಚಿತ್ರದ ಮುಂಗಡ ಬುಕಿಂಗ್ ವರಮಹಾಲಕ್ಷ್ಮಿ ಹಬ್ಬದಂದು ಅಧಿಕೃತವಾಗಿ ಶುರುವಾಗಲಿದೆ. ಈ ಸಿನಿಮಾವು ಆಗಸ್ಟ್ 26 ರಂದು ವಿಶ್ವಾದ್ಯಂತ 12 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.
-
ʻರಾಕಿಂಗ್ ಸ್ಟಾರ್ʼ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಆಗಸ್ಟ್ 26 ರಂದು ಜಾಗತಿಕ ಮಟ್ಟದಲ್ಲಿ ತೆರೆಕಾಣಲಿರುವ ಈ ಚಿತ್ರದ ಮುಂಗಡ ಟಿಕೆಟ್ ಬುಕಿಂಗ್ ಪ್ರಕ್ರಿಯೆಯು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆಗಸ್ಟ್ 21 ರಿಂದಲೇ ಅಧಿಕೃತವಾಗಿ ಶುರುವಾಗಲಿದೆ. ಸಿನಿಮಾ ಬಿಡುಗಡೆಗೆ ಐದು ದಿನಗಳ ಮೊದಲೇ ಟಿಕೆಟ್ ಕಾಯ್ದಿರಿಸಲು ಅವಕಾಶ ಕಲ್ಪಿಸಿರುವುದು ಅಭಿಮಾನಿಗಳಲ್ಲಿ ಭಾರಿ ಉತ್ಸಾಹ ತಂದಿದೆ.
12 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್
'ಕೆಜಿಎಫ್: ಚಾಪ್ಟರ್ 2' ನ ಅಭೂತಪೂರ್ವ ಯಶಸ್ಸಿನ ಬಳಿಕ ಬರುತ್ತಿರುವ ಯಶ್ ನಟನೆಯ ಸಿನಿಮಾ ಇದಾಗಿರುವುದರಿಂದ ವಿಶ್ವದಾದ್ಯಂತ ಅಪಾರ ನಿರೀಕ್ಷೆ ಸೃಷ್ಟಿಯಾಗಿದೆ. ಮೂಲಗಳ ಪ್ರಕಾರ, 'ಟಾಕ್ಸಿಕ್' ಸಿನಿಮಾವನ್ನು ವಿಶ್ವಾದ್ಯಂತ ಬರೋಬ್ಬರಿ 12 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಅದ್ಧೂರಿಯಾಗಿ ತೆರೆಗೆ ತರಲು ಸಿದ್ಧತೆ ನಡೆಸಲಾಗಿದೆ. ಚಿತ್ರಕ್ಕೆ ದೊರಕುತ್ತಿರುವ ಭರ್ಜರಿ ಬೇಡಿಕೆಯಿಂದಾಗಿ ಅಂತಿಮವಾಗಿ ಈ ಪರದೆಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಸಾರ್ವಕಾಲಿಕ ದಾಖಲೆಯ ಓಪನಿಂಗ್ ಪಡೆಯುವ ಲಕ್ಷಣಗಳು ಗೋಚರಿಸುತ್ತಿವೆ.
ವಿತರಣೆ ಮಾಡುತ್ತಿರುವುದು ಯಾರು?
ವೆಂಕಟ್ ಕೆ. ನಾರಾಯಣ ಅವರ 'ಕೆವಿಎನ್ ಪ್ರೊಡಕ್ಷನ್ಸ್' ಮತ್ತು ಯಶ್ ಅವರ 'ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್' ಜಂಟಿಯಾಗಿ ಈ ಬಿಗ್ ಬಜೆಟ್ ಚಿತ್ರವನ್ನು ನಿರ್ಮಿಸಿವೆ. ಕರ್ನಾಟಕದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ವಿತರಣೆ ಮಾಡಲಿವೆ.
ಆಂಧ್ರ ಮತ್ತು ತೆಲಂಗಾಣದಲ್ಲಿ ದಿಲ್ ರಾಜು ಅವರ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್, ಉತ್ತರ ಭಾರತ ಹಾಗೂ ನೇಪಾಳದಲ್ಲಿ ಎಎ ಫಿಲ್ಮ್ಸ್, ಕೇರಳದಲ್ಲಿ ಪನೋರಮಾ ಫಿಲ್ಮ್ಸ್ ಮತ್ತು ತಮಿಳುನಾಡಿನಲ್ಲಿ ಥಿಂಕ್ ಸ್ಟುಡಿಯೋಸ್ ಹಾಗೂ ಟ್ರೈಡೆಂಟ್ ಆರ್ಟ್ಸ್ ಮೂಲಕ ಚಿತ್ರ ವಿತರಣೆಯಾಗಲಿದೆ. ವಿದೇಶಿ ಹಕ್ಕುಗಳನ್ನು ಫಾರ್ಸ್ ಫಿಲ್ಮ್ ಪಡೆದಿದ್ದು, ಜಾಗತಿಕ ಮಟ್ಟದ ಇಂಗ್ಲಿಷ್ ಆವೃತ್ತಿಯ ಬಿಡುಗಡೆಗೆ ಖ್ಯಾತ 'ಲಯನ್ಸ್‌ಗೇಟ್' ಸಂಸ್ಥೆಯೊಂದಿಗೆ ಕೈಜೋಡಿಸಲಾಗಿದೆ. 'ಟಾಕ್ಸಿಕ್' ಸಿನಿಮಾವು ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲದಲ್ಲಿ ಜಾಗತಿಕ ಮಟ್ಟದಲ್ಲಿ ಅಬ್ಬರಿಸಲಿದೆ.
ದೊಡ್ಡ ತಾರಾಬಳಗ
ಗೀತು ಮೋಹನ್‌ದಾಸ್ ನಿರ್ದೇಶನದ ಈ ಹೈ-ವೋಲ್ಟೇಜ್ ಗ್ಯಾಂಗ್‌ಸ್ಟರ್ ಕಥಾಹಂದರದಲ್ಲಿ ಬಹುಭಾಷಾ ತಾರಾಗಣವೇ ಸಾಥ್ ನೀಡಿದೆ. ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ, ಅಕ್ಷಯ್ ಒಬೆರಾಯ್ ಹಾಗೂ ಸುದೇವ್ ನಾಯರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ರಾಜೀವ್ ರವಿ ಛಾಯಾಗ್ರಹಣವಿದ್ದು, ವಿಶಾಲ್ ಮಿಶ್ರಾ ಅವರ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ರವಿ ಬಸ್ರೂರು ಹಿನ್ನೆಲೆ ಸಂಗೀತ ನೀಡಿದ್ದಾರೆ.