ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Hari Paraak Column: ಭರತನು ತಂದದ್ದು ರಾಮನ ಪಾದುಕಗಳೆ ?

‘ರಾಮಾಯಣ’ ಸಿನೆಮಾ ನೋಡುತ್ತಿದ್ದಾಗ ಮನಸ್ಸು ಬೇಡವೆಂದರೂ ಈ ಹಿಂದೆ ಓದಿದ, ನೋಡಿದ, ರಾಮಾಯಣಗಳನ್ನು ಮೆಲುಕು ಹಾಕುತ್ತಿತ್ತು. ರಮಾನಂದ ಸಾಗರರ ರಾಮಾಯಣ ಧಾರಾವಾಹಿ, ವಾಲ್ಮೀಕಿ ರಾಮಾಯಣದಿಂದ ಅತ್ತಿತ್ತ ಚಲಿಸದೆ ರೂಪಿಸಿದ ಕೃತಿ. ಹೊಸ ರಾಮಾಯಾಣವಾದರೋ ಸಾಕಷ್ಟು ಸ್ವಾತಂತ್ರ್ಯ ಬಳಸಿಕೊಂಡ ಮರುಕೃತಿ. ಕತೆಗಾರರೂ ನಿರ್ದೇಶಕರೂ ತಮಗಿಷ್ಟವಾದ ಹಲವು ರಾಮಾಯಣಗಳಿಂದ ಹಲವು ಸಂಗತಿಗಳನ್ನು ಸೇರಿಸಿ ಒಂದು ಸಿನಿಮಾ ಹೆಣೆದಿದ್ದಾರೆ.

ಭರತನು ತಂದದ್ದು ರಾಮನ ಪಾದುಕಗಳೆ ?

-

ಹರೀಶ್‌ ಕೇರ
ಹರೀಶ್‌ ಕೇರ Nov 19, 2026 9:07 AM

ಕಾಡುದಾರಿ

ರಾಮಾಯಣ ಸಿನೆಮಾದ ದೃಶ್ಯವನ್ನು ನೋಡುವಾಗ, ರಾಮ ಧರಿಸಿದ ಪಾದುಕೆಗಳನ್ನೇ ಭರತ ಅಯೋಧ್ಯೆಗೆ ಕೊಂಡು ಹೋದಂತೆ ಭಾಸವಾಗುತ್ತದೆ. ಆದರೆ ವಾಲ್ಮೀಕಿ ರಾಮಾಯಣದಲ್ಲಿರುವ ಈ ಪಾದುಕಾ ಪ್ರದಾನ ಪ್ರಸಂಗದ ಹಿಂದೆ ಹೋದರೆ ಹಲವು ವಿಸ್ಮಯಕಾರಿ ಅಂಶಗಳು ನಮಗೆ ಗೊತ್ತಾಗು ತ್ತವೆ. ಭರತನ ಭ್ರಾತೃಪ್ರೇಮ, ರಾಮನ ಪಿತೃವಾಕ್ಯ ಪರಿಪಾಲನೆಯ ನಿಷ್ಠೆ, ದಶರಥನು ಅಶ್ವಪತಿಗಿತ್ತ ವಚನ, ಇತ್ಯಾದಿ.

‘ರಾಮಾಯಣ’ ಸಿನೆಮಾ ನೋಡುತ್ತಿದ್ದಾಗ ಮನಸ್ಸು ಬೇಡವೆಂದರೂ ಈ ಹಿಂದೆ ಓದಿದ, ನೋಡಿದ, ರಾಮಾಯಣಗಳನ್ನು ಮೆಲುಕು ಹಾಕುತ್ತಿತ್ತು. ರಮಾನಂದ ಸಾಗರರ ರಾಮಾಯಣ ಧಾರಾವಾಹಿ, ವಾಲ್ಮೀಕಿ ರಾಮಾಯಣದಿಂದ ಅತ್ತಿತ್ತ ಚಲಿಸದೆ ರೂಪಿಸಿದ ಕೃತಿ. ಹೊಸ ರಾಮಾಯಾಣವಾದರೋ ಸಾಕಷ್ಟು ಸ್ವಾತಂತ್ರ್ಯ ಬಳಸಿಕೊಂಡ ಮರುಕೃತಿ. ಕತೆಗಾರರೂ ನಿರ್ದೇಶಕರೂ ತಮಗಿಷ್ಟವಾದ ಹಲವು ರಾಮಾಯಣಗಳಿಂದ ಹಲವು ಸಂಗತಿಗಳನ್ನು ಸೇರಿಸಿ ಒಂದು ಸಿನಿಮಾ ಹೆಣೆದಿದ್ದಾರೆ.

ಅದು ಕೃತಿಕಾರನ ಸ್ವಾತಂತ್ರ್ಯ. ಅದೆಲ್ಲ ಸರಿ. ಒಂದು ಸಣ್ಣ ಸಂಗತಿ ಗಮನ ಸೆಳೆಯಿತು. ರಾಮ ಕಾಡಿಗೆ ಹೋದದ್ದನ್ನು ತಿಳಿದು, ವ್ಯಥಿತನಾಗಿ ಕಾಡಿಗೆ ಬರುವ ಭರತ, ರಾಮನನ್ನು ಮರಳಿ ಬರಲು ಒಪ್ಪಿಸಲು ವಿ-ಲನಾಗಿ, ಅವನ ಪಾದುಕೆಗಳನ್ನು ಪಡೆದು ಊರಿಗೆ ಮರಳುತ್ತಾನೆ. ಈ ಸನ್ನಿವೇಶ ಪೇಲವವಾಗಿ ನಿರೂಪಿತವಾಗಿದೆ, ಅದಿರಲಿ. ಭರತ ಪಾದುಕೆ ಪಡೆದು ಹೋದ ಬಳಿಕದ ದೃಶ್ಯಗಳಲ್ಲಿ ರಾಮನ ಕಾಲುಗಳಲ್ಲಿ ಪಾದುಕೆ ಕಾಣಿಸಲಿಲ್ಲ.

ಸೀತೆ, ಲಕ್ಷ್ಮಣರ ಕಾಲುಗಳಲ್ಲಿ ಇದ್ದವು. ಬಹುಶಃ, ರಾಮ ಧರಿಸಿದ್ದ ಪಾದುಕೆಗಳನ್ನು ಭರತ ಕೇಳಿ ಪಡೆದುಕೊಂಡು ಹೋದ ಎಂದು ಇದರ ಕತೆಗಾರರು ಭಾವಿಸಿದಂತೆ ಇದೆ. ಇದನ್ನು ನೋಡುತ್ತ ಇದ್ದಂತೆ ಹಿರಿಯ ತಾಳಮದ್ದಲೆ ಅರ್ಥಧಾರಿಯೊಬ್ಬರು ವೀರಮಣಿ ಪ್ರಸಂಗದಲ್ಲಿ ವೀರಮಣಿಯಾಗಿ (ಈ ಪ್ರಸಂಗ ಮೂಲ ರಾಮಾಯಣದ್ದಲ್ಲ, ಪ್ರಕ್ಷಿಪ್ತ) ಮಾಡುತ್ತಿದ್ದ ವಿನೋದ ನೆನಪಾಯಿತು. ರಾಮಭಕ್ತ ಆಂಜನೇಯನಿಗೂ ಶಿವಭಕ್ತ ವೀರಮಣಿಗೂ ನಡೆಯುವ ವಾಗ್ಯುದ್ಧ.

ಇದನ್ನೂ ಓದಿ: Hari Paraak Column: ಏಕಲವ್ಯ ದ್ರೋಣಾಚಾರ್ಯರಿಗೆ ಕೊಟ್ಟ ಗುರುದಕ್ಷಿಣೆ

‘ನಿನ್ನ ರಾಮನೂ ಮೊಂಡ. ಊರಿಗೆ ಬಾ ಎಂದು ಭರತ ಕೇಳಿದರೆ, ಬರುವುದಿಲ್ಲ ಎಂದು ಹಠ ಹಿಡಿದು ತಮ್ಮನಿಗೆ ನೋವುಂಟು ಮಾಡಿ ಸೇಡು ತೀರಿಸಿಕೊಂಡ. ಭರತನೂ ದಡ್ಡ. ಅಣ್ಣನ ಕಾಲುಗಳಲ್ಲಿದ್ದ ಪಾದುಕೆಗಳನ್ನು ಬಲವಂತವಾಗಿ ಪಡೆದುಕೊಂಡು ಹೋಗಿ, ಅಣ್ಣ ಹದಿನಾಲ್ಕು ವರ್ಷ ಬರಿಗಾಲಿನಲ್ಲಿ ಕಾಡಿನಲ್ಲಿ ಕಲ್ಲು ಮುಳ್ಳಿನಲ್ಲಿ ನಡೆಯುವಂತೆ ಮಾಡಿದ’ ಎಂದು ವೀರಮಣಿ ಟೀಕಿಸುತ್ತಾನೆ. ಇದೊಂದು ಲಘು ವಿನೋದದ ಮಾತು; ಇದನ್ನು ಆಂಜನೇಯನೂ ಗಂಭೀರವಾಗಿ ತೆಗೆದುಕೊಳ್ಳದೆ ಹಗುರವಾಗಿ ತಳ್ಳಿಹಾಕಿದರೆ ಆ ಪಾತ್ರಕ್ಕೆ ಘನತೆ. ಬಹಳ ಜನ ಹೀಗೇ ಭಾವಿಸಿರುವಂತೆ ಕಾಣಿಸುತ್ತದೆ.

ರಾಮ ಧರಿಸಿದ್ದ ಪಾದುಕೆಗಳನ್ನೇ ಭರತ ತೆಗೆದುಕೊಂಡು ಹೋದನೆಂದು ಪ್ರವಚನಕಾರರೂ ಹೇಳುವುದುಂಟು. ಆದರೆ ವಾಲ್ಮೀಕಿ ರಾಮಾಯಣವನ್ನು ಸೂಕ್ಷ್ಮವಾಗಿ ಓದಿದರೆ ಅಂಥ ಚಿತ್ರಣ ಇಲ್ಲ. ಆ ಪಾದುಕೆಗಳನ್ನೇ ಇಸಿದುಕೊಂಡರೆ ರಾಮ ಬರಿಗಾಲಿನಲ್ಲಿ ನಡೆಯಬೇಕಾದೀತು ಎಂಬ ಎಚ್ಚರ ಸೂಕ್ಷ್ಮಜ್ಞ ನಾದ ಭರತನಿಗೆ ಇದ್ದಿರಲಿಕ್ಕಿಲ್ಲ ಅನ್ನುವುದು ಹೇಗೆ. ಜೊತೆಗೆ ಪ್ರಾಜ್ಞರಾದ ಗುರು ವಸಿಷ್ಠರೂ, ಮೂವರು ಮಾತೆಯರೂ ಅಲ್ಲೇ ಇದ್ದರು. ಹಾಗೊಂದು ವೇಳೆ ಅವೇ ಪಾದುಕೆಗಳನ್ನು ಭರತ ಪಡೆದರೂ, ರಾಮ ಅಲ್ಲಿಂದ ಮುಂದೆ ಬೇರೆ ಪಾದುಕೆಗಳನ್ನು ಬಳಸಬಾರದು ಎಂದೇನೂ ಇಲ್ಲವಲ್ಲ. ನೀನು ಇನ್ನು ಮುಂದೆ ಪಾದುಕೆ ಬಳಸಬಾರದು ಎಂದೇನೂ ಭರತ ವಚನ ಪಡೆಯುವುದಿಲ್ಲ.

ಮೂಲ ರಾಮಾಯಣದಲ್ಲಿ ಈ ಸನ್ನಿವೇಶ ಹೇಗಿದೆ ಎಂದು ನೋಡೋಣ. ಊರಿಗೆ ಮರಳಿ ಬಾ ಎಂದು ಭರತ ಹಠ ಹಿಡಿಯುತ್ತಾನೆ. ನಾನು ವಚನಬದ್ಧ ಎಂದು ರಾಮ ಮರಳಲು ನಿರಾಕರಿಸು ತ್ತಾನೆ. ಈ ವಾಗ್ವಾದ ಕೊನೆಗಾಣುವುದಿಲ್ಲ ಎಂದು ತಿಳಿದಾಗ, ಗುರು ವಸಿಷ್ಠರೇ ಒಂದು ಪರಿಹಾರೋ ಪಾಯವನ್ನು ಸೂಚಿಸುತ್ತಾರೆ. ಅದರಂತೆ, ಭರತ ‘ಸುವರ್ಣಭೂಷಿತವಾದ ಪಾದುಕೆ’ಗಳನ್ನು ರಾಮನ ಮುಂದಿಡುತ್ತಾನೆ.

Hari P 19

‘ಅಧಿರೋಹಾರ್ಯ ಪಾದಾಭ್ಯಾಂ ಪಾದುಕೇ ಹೇಮಭೂಷಿತೇ’ ಅಂದರೆ, ಸುವರ್ಣಭೂಷಿತವಾದ ಈ ಪಾದುಕೆಗಳ ಮೇಲೆ ನಿನ್ನ ಪಾದಗಳನ್ನಿಡು. ಈ ಪಾದುಕೆಗಳೇ ಸಮಸ್ತಲೋಕದ ಯೋಗಕ್ಷೇಮ ಗಳನ್ನೂ ನಿರ್ವಹಿಸುತ್ತವೆ’ ಎಂದು ಹೇಳಿದ. ಆಗ ಶ್ರೀರಾಮ ಅವುಗಳ ಮೇಲೆ ನಿಂತು, ತೆಗೆದು ಭರತನಿಗೆ ಕೊಟ್ಟ. ತಾನು ಈ ಪಾದುಕೆಗಳನ್ನು ಸಿಂಹಾಸನದಲ್ಲಿಟ್ಟು, ನಿನ್ನ ಪ್ರತಿನಿಧಿಯಾಗಿ ಆಳುತ್ತೇನೆ ಎಂದು ಭರತ ಹೇಳಿದ.

ವಿದ್ವಾನ್ ಎನ್. ರಂಗನಾಥ ಶರ್ಮರು ಅನುವಾದಿಸಿದ ವಾಲ್ಮೀಕಿ ರಾಮಾಯಣದಲ್ಲಿ ಈ ಭಾಗದಲ್ಲಿ ಒಂದು ಸೊಗಸಾದ ಟಿಪ್ಪಣಿಯನ್ನು ಕೊಟ್ಟಿದ್ದು, ಅದರಿಂದ ಈ ಮೇಲಿನ ಅಂಶವನ್ನು ಎತ್ತಿಕೊಂಡಿ ದ್ದೇನೆ. ಅವರು ಬರೆದಿರುವುದು ಹೀಗೆ- ‘ಪಾದುಕೆಗಳ ಮೂಲಕ ಈ ಸಮಸ್ಯೆಯನ್ನು ಬಗೆಹರಿಸುವ ಉಪಾಯವನ್ನು ವಸಿಷ್ಠರು ಸೂಚಿಸಿದರು. ಅವರ ಮಾತಿನಂತೆ ಭರತನು ಪಾದುಕೆಗಳನ್ನು ಮುಂದಿಟ್ಟನೆಂದು ತಿಳಿಯಬೇಕು. ಮುಂದಿನ ಸರ್ಗದಲ್ಲಿ ಭರತನು ಭರದ್ವಾಜರೊಡನೆ ಮಾತನಾಡು ವಾಗ ಈ ಅಂಶವು ಸ್ಪಷ್ಟವಾಗಿದೆ’ ಎಂದು ಶರ್ಮರು ಬರೆಯುತ್ತಾರೆ.

ಮುಂದಿನ ಸರ್ಗದಲ್ಲಿ ಭರತ ಅಯೋಧ್ಯೆಗೆ ಹಿಂದಿರುಗುವಾಗ ಮಹರ್ಷಿ ಭರದ್ವಾಜರ ಆಶ್ರಮದ ಬಳಿ ಸಾಗಿ, ಅವರನ್ನು ಭೇಟಿಯಾಗಿ, ಅವರು ಕೇಳುವ ಪ್ರಶ್ನೆಗಳಿಗೆ ಹೀಗೆ ಉತ್ತರಿಸುತ್ತಾನೆ- ‘ತಾನು ಇಟ್ಟ ಹೆಜ್ಜೆಯಿಂದ ರಾಮನು ಹಿಂದಕ್ಕೆ ಸರಿಯಲಿಲ್ಲ. ಆಗ ಮಹಾಪ್ರಾಜ್ಞರಾದ ವಸಿಷ್ಠರು (ಮಧ್ಯಸ್ಥವಾದ ಒಂದು ಮಾರ್ಗವನ್ನು ಕಂಡುಹಿಡಿದು) ಯುಕ್ತಿಯುಕ್ತವಾದ ವಚನಗಳಿಂದ- ‘ಏತೇ ಪ್ರಯಚ್ಛ ಸಂಹೃಷ್ಟಃ ಪಾದುಕೇ ಹೇಮಭೂಷಿತೇ, ಅಯೋಧ್ಯಾಯಾಂ ಮಹಾಪ್ರಾಜ್ಞಯೋಗಕ್ಷೇಮಕರೇ ತವ’- ‘ಶ್ರೀರಾಮ ನೀನು ಎಲ್ಲವನ್ನೂ ಬಲ್ಲವನು.

ಸುವರ್ಣಭೂಷಿತವಾದ ನಿನ್ನ ಪಾದುಕೆಗಳನ್ನು ಸಂತೋಷದಿಂದ ಭರತನಿಗೆ ಕೊಡು. ಈ ಪಾದುಕೆ ಗಳೇ ಅಯೋಧ್ಯೆಯಲ್ಲಿ ನಿನ್ನ ರಾಜ್ಯದ ಯೋಗಕ್ಷೇಮಗಳನ್ನು ನಿರ್ವಹಿಸುತ್ತವೆ’ ಎಂದು ನುಡಿದರು. ಇದನ್ನು ಕೇಳಿದ ರಾಮನು- ‘ಏವಮುಕ್ತೋ ವಸಿಷ್ಠೇನ ರಾಘವಃ ಪ್ರಾಖ ಸ್ಥಿತಃ, ಪಾದುಕೇ ಅಽರುಹ್ಯೈತೇ ಮಮ ರಾಜ್ಯಾಯ ವೈ ದದೌ’- ಪ್ರಾಖನಾಗಿ ನಿಂತು ಈ ಪಾದುಕೆಗಳ ಮೇಲೆ ತನ್ನ ಪಾದಗಳನ್ನಿಟ್ಟು ರಾಜ್ಯವನ್ನು ನೋಡಿಕೊಳ್ಳಲೆಂದು ನನಗೆ ಕೊಟ್ಟನು. ಆ ಮಹಾತ್ಮನ ಅನುಜ್ಞೆ ಯನ್ನು ಪಡೆದು ನಾನು ಹಿಂದಿರುಗಿದೆನು- ಎಂದು ಭರತನು ಭರದ್ವಾಜರಿಗೆ ನಿವೇದಿಸಿಕೊಳ್ಳುತ್ತಾನೆ. ಇಲ್ಲಿ ಭರತನು ಮುಂದಿಟ್ಟ ಪಾದುಕೆಗಳನ್ನು ರಾಮನು ಮೆಟ್ಟಿ ಮರಳಿ ಕೊಟ್ಟ ಎಂದು ಸ್ಪಷ್ಟವಾಗಿ ಇದೆ. ಅಂದರೆ, ಕಾಡಿನಲ್ಲಿ ಕಲ್ಲುಮುಳ್ಳಿನಲ್ಲಿ ನಡೆಯಲು ರಾಮನು ಬಳಸಿದ ಪಾದುಕೆಗಳನ್ನಲ್ಲ ಭರತನು ಪಡೆದುದು. ಅವು ‘ಹೇಮಭೂಷಿತವಾದ’ ಪಾದುಕೆಗಳು ಹಾಗೂ ಭರತನು ಅಯೋಧ್ಯೆ ಯಿಂದ ತಂದದ್ದು.

ಯಾರಾದರೂ ಚಿನ್ನದ ಪಾದುಕೆ ಬಳಸಿ ಕಾಡುದಾರಿಯಲ್ಲಿ ನಡೆಯಲು ಸಾಧ್ಯವೇ. ನಾವು ಇಲ್ಲಿ ಇನ್ನೊಂದು ಊಹೆಯನ್ನೂ ಮಾಡಬಹುದು. ಸ್ವರ್ಣಪಾದುಕೆಗಳನ್ನು ಯಾರೂ ಸಾಮಾನ್ಯ ಸನ್ನಿವೇಶ ದಲ್ಲಿ ಧರಿಸುವುದಿಲ್ಲ. ಬಹುಶಃ ಇದು ಶ್ವೇತಚ್ಛತ್ರದಂತೆ, ಪಟ್ಟದ ಕತ್ತಿಯಂತೆ ರಾಜಲಾಂಛನ ಆಗಿರುವ ಸಾಧ್ಯತೆಯೇ ಹೆಚ್ಚು. ಅಭಿಷಿಕ್ತ ಸಾಮ್ರಾಟ ಸಿಂಹಾಸನ ಏರುವ ಸಂದರ್ಭದಲ್ಲಿ ಇದನ್ನು ಧರಿಸುತ್ತಿದ್ದಿರಬಹುದು. ಅದು ದಶರಥನಿಂದ ರಾಮನಿಗೆ ಬರಬೇಕಿದ್ದುದು. ಆದ್ದರಿಂದಲೇ ಆ ಪಾದುಕೆ ಅಲ್ಲಿದ್ದರೆ, ರಾಜನೇ ಇದ್ದಂತೆ ಅರ್ಥ. ಆ ಪಾದುಕೆಗಳಿಗೆ ಅಷ್ಟೊಂದು ಗೌರವ ದೊರಕಲು ಕಾರಣವೂ ಅದೇ.

ರಾಮನನ್ನು ಮರಳಿ ಕರೆತರುವ, ಹಾಗೆ ಕರೆತರುವಾಗ ಪಾದುಕೆ ತೊಡಿಸಿಯೇ ವೈಭವದಿಂದ ಕರೆದುಕೊಂಡು ಬರುವ ಉದ್ದೇಶದಿಂದಲೇ ಭರತ ಹೊರಟಿದ್ದಾಗಿದ್ದರಿಂದ, ಪಾದುಕೆಯನ್ನು ಜೊತೆಗೆ ತಂದಿದ್ದ ಎಂದು ಊಹಿಸಿಕೊಳ್ಳಬಹುದು. ಯಕ್ಷಗಾನ ತಾಳಮದ್ದಲೆಯಲ್ಲಿ ಈ ಪ್ರಸಂಗ ‘ಪಾದುಕಾ ಪ್ರದಾನ’ ಅಥವಾ ‘ಭರತಾಗಮನ’ ಎಂದೇ ಪ್ರಸಿದ್ಧ. ಶೇಣಿ ಗೋಪಾಲಕೃಷ್ಣ ಭಟ್, ಮಲ್ಪೆ ಶಂಕರನಾರಾಯಣ ಸಾಮಗ, ರಾಮದಾಸ ಸಾಮಗ, ಕುಂಬಳೆ ಸುಂದರ ರಾಯರಂಥ ದೊಡ್ಡ ಅರ್ಥಧಾರಿಗಳು ರಾಮ- ಭರತ ಪಾತ್ರಗಳನ್ನು ನಿರ್ವಹಿಸಿ ಇಡೀ ರಾಮಾಯಣವನ್ನು ಹೊಸ ಬೆಳಕಿನಲ್ಲಿ ಕಾಣಿಸಿದ ಉದಾಹರಣೆಗಳು ಉಂಟು. ಈಗಿನ ಹಲವು ಅರ್ಥಧಾರಿಗಳೂ ಈ ಪ್ರಸಂಗ ವನ್ನು ಸೊಗಸಾಗಿ ಚಂದಗಾಣಿಸುತ್ತಾರೆ.

ಈ ಪ್ರಸಂಗದಲ್ಲಿ ರಾಮ ಮರಳಿ ಅಯೋಧ್ಯೆಗೆ ಬರಬೇಕು ಎಂಬ ಭರತನ ವಾದ, ಅದಕ್ಕೆ ರಾಮನ ಪ್ರತ್ಯುತ್ತರ- ಇವೇ ಪ್ರಧಾನ. ಭಾವುಕತೆ, ಕರುಣ ರಸವೇ ಇಲ್ಲಿ ಭರತನಿಗೆ ನೆಲೆ. ದಶರಥ ಸತ್ತ ಸುದ್ದಿ ತಿಳಿಯುವ ಸನ್ನಿವೇಶ ಹೊರತುಪಡಿಸಿ ರಾಮ ಸಾಮಾನ್ಯವಾಗಿ ಸ್ಥಿತಪ್ರಜ್ಞನಾಗಿ ಕಾಣಿಸಿಕೊಳ್ಳುತ್ತಾನೆ. ನವಿರಾದ ಹಾಸ್ಯಕ್ಕೆ ಆಸ್ಪದ ನೀಡುವ ಕೆಲವು ಮಾತಿನ ಮಿಂಚುಗಳೂ ಇಲ್ಲಿ ಕಾಣಿಸಿಕೊಳ್ಳಬಹುದು.

ಉದಾಹರಣೆಗೆ, ತನ್ನ ಮಾತಿಗೆ ಅಣ್ಣ ಎಷ್ಟಕ್ಕೂ ಮಣಿಯುವುದಿಲ್ಲ ಎಂದು ತಿಳಿದಾಗ ಭರತ, ‘ಸರಿ ಹಾಗಿದ್ದರೆ. ನಾನು ಅಯೋಧ್ಯೆಯ ಸಿಂಹಾಸನವೇರಿದ ರಾಜನಾಗಿ ಆಜ್ಞಾಪಿಸುತ್ತಿದ್ದೇನೆ. ಊರಿಗೆ ಮರಳಿ ಸಿಂಹಾಸನವನ್ನೇರು’ ಎನ್ನುತ್ತಾನೆ. ಇದಕ್ಕೆ ರಾಮ ಏನೆನ್ನಬೇಕು? ಇಂಥ ಪ್ರಶ್ನೋತ್ತರವೇನೂ ವಾಲ್ಮೀಕಿ ರಾಮಾಯಣದಲ್ಲಿ ಇಲ್ಲ. ಆದರೆ ಪ್ರತ್ಯುತ್ಪನ್ನಮತಿಯಾದ ರಾಮನ ಪಾತ್ರಧಾರಿ, ‘ಇದಕ್ಕೆ ಊ ಸಿದ್ಧಾಂತ ಅಂತ ಹೆಸರು. ಊ ಅಕ್ಷರವನ್ನು ಯಾವ ಕಡೆಯಿಂದ ನೋಡಿದರೂ ಊ ಆಗಿಯೇ ಇರುತ್ತದೆ. ನಿನ್ನ ಮಾತಿನಂತೆಯೇ ನಾನೀಗ ಅಯೋಧ್ಯೆಯ ರಾಜನಾಗಿದ್ದೇನೆ. ರಾಜನಾಗಿ ನಾನೂ ಆಜ್ಞಾಪಿಸುತ್ತೇನೆ. ನೀನು ಸಿಂಹಾಸನವನ್ನೇರು!’ ಇದಕ್ಕೆ ಭರತ ಮತ್ತದೇ ವಾದ ಹೂಡುವಂತಿಲ್ಲ.

ಯಾಕೆಂದರೆ ಇದಕ್ಕೆ ಕೊನೆಯೆಂಬುದೇ ಇಲ್ಲ. ‘ಊ’ ಎಂಬ ಕನ್ನಡದ ಈ ಅಕ್ಷರ, ಸಿದ್ಧಾಂತವಾಗಿ, ಕನ್ನಡದ ರಾಮ- ಭರತರ ಮಾತಿನಲ್ಲಿ ಮಾತ್ರವೇ ಬರಲು ಸಾಧ್ಯ! ಈ ಒಟ್ಟೂ ಸನ್ನಿವೇಶದಲ್ಲಿ ವ್ಯಕ್ತವಾಗುವುದು ಭರತನ ಅಗಾಧವಾದ ಭ್ರಾತೃಪ್ರೇಮ ಹಾಗೂ ರಾಮನ ಪಿತೃವಾಕ್ಯ ಪರಿಪಾಲನೆ ಯ ಅಚಲ ನಿಷ್ಠೆ. ರಾಮಾಯಣವನ್ನು ಸೂಕ್ಷ್ಮವಾಗಿ ಓದಿದರೆ, ದಶರಥನ ನಂತರ ರಾಜನಾಗ ಬೇಕಿದ್ದವನು ರಾಮನಲ್ಲ, ಭರತ.

ರಾಮನೇ ಜ್ಯೇಷ್ಠ ಪುತ್ರನಾದರೂ, ಹಿಂದೊಮ್ಮೆ ಭರತನ ತಾಯಿ ಕೈಕೇಯಿಯ ತಂದೆ ಅಶ್ವಪತಿ ರಾಜನಿಗೆ ದಶರಥ ‘ನಿನ್ನ ಮಗಳ ಹೊಟ್ಟೆಯಲ್ಲಿ ಜನಿಸಿದ ಮಗನಿಗೇ ಪಟ್ಟ ಕಟ್ಟುತ್ತೇನೆ’ ಎಂದು ವಾಗ್ದಾನ ನೀಡಿದ್ದ. ಆದರೆ ಹಿರಿಯ ಮಗನಾದ ರಾಮನಲ್ಲಿ ಅಮಿತವಾದ ಪ್ರೇಮವನ್ನು ಹೊಂದಿದ್ದ ದಶರಥ, ಭರತ ಹೆಚ್ಚು ಕಾಲ ಅಯೋಧ್ಯೆಯಲ್ಲಿ ಇಲ್ಲದೇ ಇರುವಂತೆ ನೋಡಿಕೊಳ್ಳುತ್ತಾನೆ- ಅವನನ್ನು ಶತ್ರುಘ್ನನ ಸಮೇತ ಅಜ್ನ ಮನೆಗೆ, ಅಂದರೆ ಕೇಕಯ ದೇಶಕ್ಕೆ ಕಳಿಸುತ್ತಾನೆ.

ರಾಮನಿಗೆ ಪಟ್ಟಾಭಿಷೇಕ ಮಾಡುವ ಹಿಂದಿನ ದಿನ, ಮಗನನ್ನು ಏಕಾಂತದಲ್ಲಿ ಕರೆದು ದಶರಥ ಹೇಳುವುದು ಹೀಗೆ- ‘ವಿಪ್ರೋಷಿತಶ್ಚ ಭರತೋ ಯಾವದೇವ ಪುರಾದಿತಃ, ತಾವದೇವಾಭಿಷೇಕಸ್ತೇ ಪ್ರಾಪ್ತಕಾಲೋ ಮತೋ ಮಮ’ ಅಂದರೆ, ‘ಭರತನು ಈ ನಗರದಿಂದ ಪರಸ್ಥಳಕ್ಕೆ ಹೋಗಿದ್ದಾನೆ. ನಿನಗೆ ಪಟ್ಟಾಭಿಷೇಕ ಮಾಡಲು ಇದೇ ಸುಸಮಯ ಎಂದು ನನ್ನ ಅಭಿಪ್ರಾಯ. ನಿನ್ನ ತಮ್ಮನಾದ ಭರತನೇನೋ ಸಜ್ಜನರ ನಡತೆಯವನೇ. ಹಿರಿಯರಿಗೆ ವಿಧೇಯ, ಧರ್ಮಾತ್ಮ, ದಯಾವಂತ. ಆದರೂ, ಜನರ ಮನಸ್ಸು ಒಂದೇ ರೀತಿಯಾಗಿ ಇರುವುದಿಲ್ಲ’. ಆದರೆ ಇದೆಲ್ಲ ಭರತನಿಗೆ ತಿಳಿದಿರುವುದಿಲ್ಲ.

ಅವನಿಗೆ ಇದೆಲ್ಲ ತಿಳಿದಿರಬಹುದಾದದ್ದು, ರಾಮ ಕಾಡಿಗೆ ಹೋದ ನಂತರ ವಸಿಷ್ಠರು ಕರೆ ಕಳುಹಿಸಿ ಅವನನ್ನು ಅಯೋಧ್ಯೆಗೆ ಕರೆಸಿಕೊಂಡಾಗ. ತಾಯಿಯ ಮಾತು, ಅದಕ್ಕೆ ತಂದೆ ಕೊಟ್ಟ ವಚನ, ಅದರ ಹಿಂದಿನ ಕತೆ ಎಲ್ಲವೂ ವಸಿಷ್ಠರಿಂದ ಅವನಿಗೆ ತಿಳಿಯಿತು. ಆದರೆ ಅವನ ರಾಮಪ್ರೇಮದಲ್ಲಿ ಎಳ್ಳಷ್ಟೂ ಕುಂದುಂಟಾಗುವುದಿಲ್ಲ.

ದಶರಥನ ದೌರ್ಬಲ್ಯದ ಮೇಲೆ ಆಟವಾಡಿದ ತಾಯಿ ಕೈಕೇಯಿಯ ಮೇಲೆ ಆತ ಕ್ರೋಧದಿಂದ ರೇಗಾಡುತ್ತಾನೆಯೇ ಹೊರತು, ರಾಮನ ಬಗ್ಗೆ ಅವನಲ್ಲಿ ತಿಲದಷ್ಟೂ ಬೇರೆ ಭಾವನೆ ಉದಿಸುವುದಿಲ್ಲ. ಭರತನೇ ನಿಜವಾಗಿ ಪಟ್ಟ ಏರಬೇಕಾದವನು ಎಂಬುದು ರಾಮನಿಗೆ ಬಹುಶಃ ವಸಿಷ್ಠರಿಂದಲೇ, ನಂತರ ತಿಳಿಯುತ್ತದೆ. ಅದನ್ನು ಭರತನೊಂದಿಗಿನ ತನ್ನ ಸಂವಾದದಲ್ಲಿಯೂ ಅವನು ಪ್ರಸ್ತಾಪಿಸು ತ್ತಾನೆ. ‘ಉಪಪನ್ನಮಿದಂ ವಾಕ್ಯಂ ಯತ್ತ್ವಮೇವಮಭಾಷಥಾಃ, ಜಾತಃ ಪುತ್ರೋ ದಶರಥಾತ್ ಕೈಕೇಯ್ಯಾಂ ರಾಜಸತ್ತಮಾತ್’ ಎನ್ನುತ್ತಾನೆ.

‘ನಮ್ಮ ತಂದೆಯು ಹಿಂದೆ ನಿನ್ನ ತಾಯಿಯನ್ನು ಮದುವೆಯಾಗುವಾಗನಿನ್ನ ಅಜ್ಜನಾದ ಕೇಕಯ ರಾಜನಿಗೆ, ಆತನ ಮಗಳ ಹೊಟ್ಟೆಯಲ್ಲಿ ಹುಟ್ಟುವ ಮಗನಿಗೆ ರಾಜ್ಯವನ್ನು ಕೊಡುವೆನೆಂದು ಒಪ್ಪಿದ್ದನು’ ಎಂದರ್ಥ. ಇದನ್ನು ಕೇಳಿದ ಮೇಲೂ ಭರತನ ನಿಲುವು, ಮನೋಭಾವ ಬದಲಾಗುವು ದಿಲ್ಲ. ತಾನಾಗಿಯೇ ಕಾಲ ಬಳಿಗೆ ಬಂದ ಅಯೋಧ್ಯೆಯ ರಾಜಕಿರೀಟವನ್ನು ಅವನು ಪಕ್ಕಕ್ಕೆ ಸರಿಸುತ್ತಾನೆ. ಇದೇ ಅವನನ್ನು ಲಕ್ಷ್ಮಣನ ಸಮಕ್ಕೆ ಸಹೋದರಪ್ರೇಮಿಯಾಗಿಸಿದೆ.