ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Srivathsa Joshi Column: ಪ್ರಾಣಿಗಳ ಮೇಲೆ ದಯೆ ಇರಲಿ, ಬಸ್ಸುಗಳ ಮೇಲೆ ಬರೆದದ್ದಿರಲಿ

“ಶಂ ನೋ ಅಸ್ತು ದ್ವಿಪದೇ| ಶಂ ಚತುಷ್ಪದೇ||" ಎನ್ನುವುದು ಕೃಷ್ಣ ಯಜುರ್ವೇದದ ತೈತ್ತಿರೀಯ ಸಂಹಿತೆ ಮತ್ತು ಋಗ್ವೇದದ ಕೆಲವು ಸೂಕ್ತಗಳಲ್ಲಿ ಕಂಡುಬರುವ ಒಂದು ಅತ್ಯಂತ ಪ್ರಾಚೀನ ವೈದಿಕ ಪ್ರಾರ್ಥನೆ. ಈ ಶಾಂತಿ ಮಂತ್ರವು ಕೇವಲ ಮನುಷ್ಯರ ಸ್ವಾರ್ಥಕ್ಕಾಗಿ ಹುಟ್ಟಿದ್ದಲ್ಲ, ಬದಲಾಗಿ ಇಡೀ ಪ್ರಕೃತಿ ಮತ್ತು ಸಮಸ್ತ ಜೀವಸಂಕುಲದ ಒಳಿತನ್ನು ಬಯಸುವ ಭಾರತೀಯ ಸಂಸ್ಕೃತಿಯ ‘ವಸುಧೈವ ಕುಟುಂಬಕಮ್ ತತ್ತ್ವದ ಪ್ರತೀಕವೇ ಆಗಿದೆ.

ಪ್ರಾಣಿಗಳ ಮೇಲೆ ದಯೆ ಇರಲಿ, ಬಸ್ಸುಗಳ ಮೇಲೆ ಬರೆದದ್ದಿರಲಿ

-

ತಿಳಿರುತೋರಣ

“ಅಹಿಂಸಾ ಸತ್ಯಮಕ್ರೋಧಸ್ತ್ಯಾಗಃ ಶಾಂತಿರಪೈಶುನಮ್| ದಯಾ ಭೂತೇಷ್ವಲೋಲುಪ್ತ್ವಂ ಮಾರ್ದವಂ ಹ್ರೀರಚಾಪಲಮ್" ಎಂದು ಸಾಕ್ಷಾತ್ ಭಗವಂತನ ಮುಖವಾಣಿಯಿಂದಲೇ ಬೋಧನೆ ಯಿರುವ ಸಂಸ್ಕೃತಿ ನಮ್ಮದು. ಭಗವದ್ಗೀತೆಯ 16ನೆಯ ಅಧ್ಯಾಯದ ಎರಡನೆಯ ಶ್ಲೋಕವಿದು. ಮನುಷ್ಯನಲ್ಲಿ ಇರಬೇಕಾದ ಶ್ರೇಷ್ಠ ದೈವೀ ಗುಣಗಳದೊಂದು ಉದ್ದದ ಪಟ್ಟಿ. ಅದರಲ್ಲಿ ಪ್ರಮುಖ ವಾಗಿ ಅಹಿಂಸೆಯೂ ಒಂದು.

ಅಹಿಂಸೆಯೆಂದರೆ ಭೌತಿಕ ರೀತಿಯಲ್ಲಷ್ಟೇ ಅಲ್ಲ, ಮಾತಿನಿಂದಾಗಲೀ ಮನಸ್ಸಿನಿಂದಾಗಲೀ ಯಾವುದೇ ಜೀವಿಗೂ ನೋವು ಅಥವಾ ಹಾನಿ ಮಾಡದಿರುವುದು. ಶ್ಲೋಕದ ಮೂರನೆಯ ಚರಣದಲ್ಲಿರುವ ‘ದಯಾ ಭೂತೇಷು’ ಪದಪುಂಜದ್ದೂ ಅಂಥದೇ ಪ್ರತಿಪಾದನೆ. ಸಕಲ ಜೀವರಾಶಿ ಗಳ ಮೇಲೆ ಕರುಣೆ ಮತ್ತು ಅನುಕಂಪ ತೋರುವುದು. ಭಗವದ್ಗೀತೆಯಲ್ಲದೆ ವೇದ ಪುರಾಣಗಳ ಸಾರಾಂಶವನ್ನು ಎತ್ತಿಕೊಂಡರೂ ಇದೇ ಮಾತು.

“ಶಂ ನೋ ಅಸ್ತು ದ್ವಿಪದೇ| ಶಂ ಚತುಷ್ಪದೇ||" ಎನ್ನುವುದು ಕೃಷ್ಣ ಯಜುರ್ವೇದದ ತೈತ್ತಿರೀಯ ಸಂಹಿತೆ ಮತ್ತು ಋಗ್ವೇದದ ಕೆಲವು ಸೂಕ್ತಗಳಲ್ಲಿ ಕಂಡುಬರುವ ಒಂದು ಅತ್ಯಂತ ಪ್ರಾಚೀನ ವೈದಿಕ ಪ್ರಾರ್ಥನೆ. ಈ ಶಾಂತಿ ಮಂತ್ರವು ಕೇವಲ ಮನುಷ್ಯರ ಸ್ವಾರ್ಥಕ್ಕಾಗಿ ಹುಟ್ಟಿದ್ದಲ್ಲ, ಬದಲಾಗಿ ಇಡೀ ಪ್ರಕೃತಿ ಮತ್ತು ಸಮಸ್ತ ಜೀವಸಂಕುಲದ ಒಳಿತನ್ನು ಬಯಸುವ ಭಾರತೀಯ ಸಂಸ್ಕೃತಿಯ ‘ವಸುಧೈವ ಕುಟುಂಬಕಮ್ ತತ್ತ್ವದ ಪ್ರತೀಕವೇ ಆಗಿದೆ. ಇದರಲ್ಲಿ ‘ಶಮ್’ (ಶಂ) ಎಂದರೆ ಸುಖ, ಶಾಂತಿ, ಮಂಗಳ ಮತ್ತು ಕಲ್ಯಾಣ. ಯಾವುದೇ ರೀತಿಯ ರೋಗ, ಭಯ ಅಥವಾ ದುಃಖವಿಲ್ಲದ ಸ್ಥಿತಿ. ‘ನಃ ಅಸ್ತು’ ಎಂದರೆ ಕೇವಲ ಪಠಿಸುವ ವ್ಯಕ್ತಿಗಷ್ಟೇ ಸೀಮಿತವಾಗದೆ ಇಡೀ ಜೀವಸಂಕುಲಕ್ಕೆ ಉಂಟಾಗಲಿ ಎಂದು. ‘ದ್ವಿಪದೇ’ ಎಂದರೆ ಎರಡು ಕಾಲುಗಳಿರುವ ಜೀವಿಗಳು: ಮನುಷ್ಯರು ಮತ್ತು ಪಕ್ಷಿಗಳು.

ಇದನ್ನೂ ಓದಿ:Srivathsa Joshi Column: ಬ್ಯಾಂಕ್‌ ಸೇವೆಯಿಂದ ನಿವೃತ್ತಿಯ ಬಳಿಕ ಅಕ್ಷರಕೃಷಿಯ ಪ್ರವೃತ್ತಿ

‘ಚತುಷ್ಪದೇ’ ಎಂದರೆ ನಾಲ್ಕು ಕಾಲುಗಳಿರುವ ಜೀವಿಗಳು: ಕೃಷಿ ಮತ್ತು ದೈನಂದಿನ ಜೀವನದಲ್ಲಿ ಮನುಷ್ಯನಿಗೆ ಆಧಾರವಾಗಿರುವ ಗೋವು, ಕತ್ತೆ, ಕುದುರೆ, ಪ್ರೀತಿಗೆಂದು ಸಾಕಿದ ನಾಯಿ, ಬೆಕ್ಕು, ಮಾತ್ರವಲ್ಲದೆ ಕಾಡಿನಲ್ಲಿರುವ ವನ್ಯಜೀವಿಗಳು. ಅವೆಲ್ಲವೂ ಸುಖವಾಗಿರಲಿ ಎಂಬ ಕರುಣೆಯ ಉದಾತ್ತ ಭಾವನೆ ಇಲ್ಲಿರುವುದು. ಪ್ರಾಚೀನ ಕಾಲದಲ್ಲಿ ಋಷಿಮುನಿಗಳು ಯಜ್ಞ-ಯಾಗಾದಿಗಳನ್ನು ಮಾಡುವಾಗ, ಆ ಯಜ್ಞದ ಫಲವು ಕೇವಲ ತಮಗೆ ಮಾತ್ರವಲ್ಲದೆ ತಮ್ಮ ಸುತ್ತಮುತ್ತಲಿನ ಪರಿಸರ ಮತ್ತು ಪ್ರಾಣಿಗಳಿಗೂ ಸಿಗಬೇಕೆಂದು ಪ್ರಾರ್ಥಿಸುತ್ತಿದ್ದರು.

ಮನುಷ್ಯನು ಸುಖವಾಗಿರಬೇಕಾದರೆ ಅವನ ಸುತ್ತಮುತ್ತಲಿನ ಪ್ರಾಣಿ-ಪಕ್ಷಿಗಳೂ ಸುಖವಾಗಿರಬೇಕು ಎಂಬ ಪರಿಸರ ಪ್ರಜ್ಞೆ ಅವರಲ್ಲಿರುತ್ತಿತ್ತು. ಮೂಕ ಪ್ರಾಣಿಗಳ ಬಗೆಗೂ ಪ್ರಾರ್ಥಿಸುವ ಮೂಲಕ ಸಕಲ ಜೀವಿ ಗಳಲ್ಲೂ ದೈವತ್ವವನ್ನು ಕಾಣುವ ಉದಾತ್ತ ಮನೋಭಾವವನ್ನು ಅವರು ಹೊಂದಿದ್ದರು. ಆದ್ದರಿಂದಲೇ “ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ| ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿದ್ ದುಃಖಭಾಗ್ಭವೇತ್||" (ಈ ಜಗತ್ತಿನ ಸಕಲ ಜೀವರಾಶಿಗಳು ಸುಖವಾಗಿರಲಿ. ಎಲ್ಲರೂ ರೋಗರುಜಿನಗಳಿಲ್ಲದೆ ಆರೋಗ್ಯವಾಗಿರಲಿ. ಎಲ್ಲರೂ ಮಂಗಳಕರವಾದುದನ್ನೇ ಕಾಣಲಿ.

ಯಾರಿಗೂ ಯಾವುದೇ ರೀತಿಯ ದುಃಖವುಂಟಾಗದಿರಲಿ) ರೀತಿಯ ಸೂಕ್ತಿಗಳು ಆ ಋಷಿಮುನಿಗಳ ಚಿಂತನೆಯ ಮೂಸೆಯಿಂದ ಹೊರಹೊಮ್ಮಿದವು. ಪ್ರಾಣಿದಯೆ, ಕರುಣೆ ಮತ್ತು ಅಹಿಂಸೆಯ ಮಹತ್ತ್ವ ವನ್ನು ಸಾರುವ ಹಲವಾರು ಪ್ರೇರಣಾದಾಯಿ ಕಥೆಗಳೂ ಭಾರತೀಯ ಪುರಾಣಗಳಲ್ಲಿವೆ. ಹಾಗೆ ನೋಡಿದರೆ ಇಡೀ ರಾಮಾಯಣಕ್ಕೆ ಮೂಲ ಕಾರಣವೇ ಕ್ರೌಂಚಪಕ್ಷಿ ಜೋಡಿಗೆ ಉಂಟಾಗಿದ್ದ ಹಿಂಸೆಯನ್ನು ಕಂಡು ಮರುಗಿದ ವಾಲ್ಮೀಕಿಯು ಶೋಕವನ್ನು ಶ್ಲೋಕವಾಗಿಸಿದ ರೀತಿ ಅಲ್ಲವೇ? ಮಹಾಭಾರತದಲ್ಲಿ ಬರುವ ಶಿಬಿ ಚಕ್ರವರ್ತಿಯ ಕಥೆಯಂತೂ ಪ್ರಾಣಿದಯೆಯ ಪರಾಕಾಷ್ಠೆಯೇ ಆಗಿದೆ. ಶಿಬಿ ಚಕ್ರವರ್ತಿ ಅತ್ಯಂತ ನ್ಯಾಯ-ನಿಷ್ಠೆಗಳಿಂದ ರಾಜ್ಯಭಾರ ಮಾಡುತ್ತಿದ್ದವನು.

KSRTC 62 ok

ಒಮ್ಮೆ ಒಂದು ಪಾರಿವಾಳವು ಗಿಡುಗವೊಂದರಿಂದ ಅಟ್ಟಿಸಿಕೊಂಡು ಪ್ರಾಣಭಯದಿಂದ ಓಡಿ ಬಂದು, ಶಿಬಿ ಚಕ್ರವರ್ತಿಯ ತೊಡೆಯ ಮೇಲೆ ಕುಳಿತು ಶರಣು ಕೋರುತ್ತದೆ. ಅಷ್ಟರಲ್ಲಿ ಅಲ್ಲಿಗೆ ಬಂದ ಗಿಡುಗವು “ಇದು ನನ್ನ ಸ್ವಾಭಾವಿಕ ಆಹಾರ, ಇದನ್ನು ನನಗೆ ಬಿಟ್ಟುಬಿಡು" ಎನ್ನುತ್ತದೆ. ಆಗ ಶಿಬಿ ಚಕ್ರವರ್ತಿಯು, “ಶರಣು ಬಂದವರನ್ನು ರಕ್ಷಿಸುವುದು ರಾಜಧರ್ಮ. ಆದ್ದರಿಂದ ಈ ಪಾರಿವಾಳವನ್ನು ಬಿಟ್ಟು ಬೇರೆ ಏನು ಬೇಕಾದರೂ ಕೇಳು, ಕೊಡುತ್ತೇನೆ" ಎನ್ನುತ್ತಾನೆ.

ಗಿಡುಗ ಒಂದು ವಿಚಿತ್ರ ಷರತ್ತನ್ನು ವಿಧಿಸುತ್ತದೆ- “ಪಾರಿವಾಳದ ತೂಕಕ್ಕೆ ಸಮಾನವಾದ ಮಾಂಸ ವನ್ನು ನಿನ್ನ ದೇಹದಿಂದಲೇ ಕತ್ತರಿಸಿ ತಕ್ಕಡಿಯಲ್ಲಿ ತೂಗಿ ನನಗೆ ಕೊಡಬೇಕು" ಎಂದು. ಶಿಬಿ ಚಕ್ರವರ್ತಿ ಸಂತೋಷ ದಿಂದ ಒಪ್ಪಿಕೊಳ್ಳುತ್ತಾನೆ. ತಕ್ಕಡಿಯ ಒಂದು ತಟ್ಟೆಯಲ್ಲಿ ಪಾರಿವಾಳವನ್ನು ಕೂರಿಸಲಾಗುತ್ತದೆ. ಮತ್ತೊಂದು ತಟ್ಟೆಗೆ ಶಿಬಿ ತನ್ನ ತೊಡೆಯಿಂದ ಮಾಂಸವನ್ನು ಕತ್ತರಿಸಿ ಹಾಕತೊಡಗುತ್ತಾನೆ. ಆದರೆ ಎಷ್ಟು ಮಾಂಸ ಹಾಕಿದರೂ ಪಾರಿವಾಳದ ತೂಕ ಮಾತ್ರ ಹೆಚ್ಚಾಗಿಯೇ ಇರುತ್ತದೆ, ತಕ್ಕಡಿ ಸಮವಾಗುವುದಿಲ್ಲ.

ಕೊನೆಗೆ ಶಿಬಿ ತಾನೇ ತಕ್ಕಡಿಯ ತಟ್ಟೆಯಲ್ಲಿ ಕುಳಿತುಕೊಳ್ಳುತ್ತಾನೆ. ಪಾರಿವಾಳದ ತೂಕ ಮತ್ತು ಶಿಬಿಯ ದೇಹದ ತೂಕ ಸಮವಾಗುತ್ತದೆ! ಕೂಡಲೇ ಪಾರಿವಾಳ ಮತ್ತು ಗಿಡುಗ ಮಾಯವಾಗಿ, ಅಲ್ಲಿ ಸಾಕ್ಷಾತ್ ಅಗ್ನಿದೇವ ಮತ್ತು ದೇವೇಂದ್ರ ಪ್ರತ್ಯಕ್ಷರಾಗುತ್ತಾರೆ. ಶಿಬಿಯ ತ್ಯಾಗ ಬುದ್ಧಿಯನ್ನು, ಸತ್ಯನಿಷ್ಠೆಯನ್ನು ಮೆಚ್ಚುತ್ತಾರೆ. ಶಿಬಿಯ ದೇಹಕ್ಕಾಗಿದ್ದ ಗಾಯಗಳನ್ನೆಲ್ಲ ಮಾಯ ಮಾಡಿ ಮೊದಲಿನಂತೆ ಆರೋಗ್ಯ ವಂತನನ್ನಾಗಿಸುತ್ತಾರೆ.

ಇನ್ನೊಂದು, ರಂತಿದೇವನ ಕಥೆ. ರಂತಿದೇವನೆಂಬ ರಾಜನು ತನ್ನ ರಾಜ್ಯವನ್ನೆಲ್ಲ ದಾನ ಮಾಡಿ, ಕುಟುಂಬದೊಂದಿಗೆ 48 ದಿನಗಳ ಕಾಲ ಅನ್ನ-ನೀರಿಲ್ಲದೆ ಉಪವಾಸವಿದ್ದನು. 49ನೇ ದಿನ ಅವನಿಗೆ ಸ್ವಲ್ಪ ತುಪ್ಪದ ಅನ್ನ ಮತ್ತು ನೀರು ಸಿಗುತ್ತದೆ. ಅವನು ಅದನ್ನು ಸೇವಿಸಲು ಮುಂದಾಗುವಷ್ಟರಲ್ಲಿ ಒಬ್ಬ ಬ್ರಾಹ್ಮಣ, ಅನಂತರ ಒಬ್ಬ ಶೂದ್ರ, ಆಮೇಲೆ ನಾಯಿಗಳ ಗುಂಪಿನೊಂದಿಗೆ ಒಬ್ಬ ಬೇಡ, ಮತ್ತು ಕೊನೆಯಲ್ಲಿ ಬಾಯಾರಿದ ಚಂಡಾಲನೊಬ್ಬ ಬಂದು ಆಹಾರ ಮತ್ತು ನೀರು ಕೇಳುತ್ತಾರೆ. ರಂತಿದೇವ ತಾನೇ ಹಸಿವಿನಿಂದ ಸಾಯುವ ಸ್ಥಿತಿಯಲ್ಲಿದ್ದರೂ ತನ್ನ ಪಾಲಿನ ಆಹಾರವನ್ನು ಅವರೆಲ್ಲರಿಗೆ, ಬೇಡನೊಂದಿಗೆ ಬಂದಿದ್ದ ನಾಯಿಗಳಿಗೂ, ಹಂಚಿಬಿಡುತ್ತಾನೆ!

ಸಕಲ ಜೀವಿಗಳಲ್ಲಿ ದೇವರನ್ನು ಕಾಣು ಎಂಬ ತತ್ತ್ವವನ್ನು ಅಕ್ಷರಶಃ ಪರಿಪಾಲಿಸುತ್ತಾನೆ. ನಾಯಿ ಯೆಂದಾಗ ನಮಗೆ ಯುಧಿಷ್ಠಿರನ ಕಥೆಯೂ ನೆನಪಾಗುತ್ತದೆ. ಪಾಂಡವರು ತಮ್ಮ ಕೊನೆಯ ದಿನಗಳಲ್ಲಿ ಸ್ವರ್ಗಾರೋಹಣಕ್ಕಾಗಿ ಹಿಮಾಲಯದ ಕಡೆಗೆ ಪ್ರಯಾಣ ಬೆಳೆಸುತ್ತಾರೆ. ದಾರಿಯಲ್ಲಿ ದ್ರೌಪದಿ ಮತ್ತು ನಾಲ್ವರು ಸಹೋದರರು ಕುಸಿದು ಬಿದ್ದರೂ, ಯುಧಿಷ್ಠಿರನು ತನ್ನೊಂದಿಗೆ ಮೊದಲಿನಿಂದಲೂ ನಡೆದುಬಂದ ಒಂದು ನಾಯಿಯೊಂದಿಗೆ ಮುಂದೆ ಸಾಗುತ್ತಾನೆ.

ಸ್ವರ್ಗದ ಬಾಗಿಲಲ್ಲಿ ಇಂದ್ರನು ಯುಧಿಷ್ಠಿರನನ್ನು ಮಾತ್ರ ಒಳಗೆ ಬರಲು ಆಹ್ವಾನಿಸಿ, ನಾಯಿಯನ್ನು ಬಿಟ್ಟುಬರಲು ಹೇಳುತ್ತಾನೆ. ಆದರೆ ತನ್ನನ್ನೇ ನಂಬಿ ಬಂದ ಮೂಕ ಪ್ರಾಣಿಯನ್ನು ಕೈಬಿಟ್ಟು ತಾನು ಸ್ವರ್ಗಕ್ಕೆ ಬರುವುದಿಲ್ಲ ಎಂದು ಯುಧಿಷ್ಠಿರನು ದೃಢವಾಗಿ ನಿರಾಕರಿಸುತ್ತಾನೆ. ಆಗ ಆ ನಾಯಿಯು ಯಮಧರ್ಮನ ರೂಪ ತಾಳಿ ಯುಧಿಷ್ಠಿರನ ಕರುಣೆಯನ್ನು ಮೆಚ್ಚಿ ಆಶೀರ್ವದಿಸುತ್ತದೆ.

ವಿಷ್ಣುಪುರಾಣದಲ್ಲಿ ಬರುವ ಜಡಭರತ ಮತ್ತು ಜಿಂಕೆಯ ಮರಿಯ ಕಥೆಯೂ ಇದೇ ತತ್ತ್ವದ್ದು. ರಾಜ ಜಡಭರತನು ರಾಜ್ಯವನ್ನು ತ್ಯಜಿಸಿ ಕಾಡಿನಲ್ಲಿ ತಪಸ್ಸು ಮಾಡುತ್ತಿರುತ್ತಾನೆ. ಒಂದು ದಿನ ನದಿಯ ದಡದಲ್ಲಿ ಗರ್ಭಿಣಿ ಜಿಂಕೆಯೊಂದು ಸಿಂಹದ ಗರ್ಜನೆಗೆ ಹೆದರಿ ನದಿಗೆ ಹಾರಿ ಮರಿಗೆ ಜನ್ಮ ನೀಡಿ ಪ್ರಾಣ ಬಿಡುತ್ತದೆ. ಅನಾಥವಾದ ಆ ಜಿಂಕೆಮರಿಯನ್ನು ಕಂಡು ಜಡಭರತನ ಹೃದಯ ಕರಗುತ್ತದೆ. ಅವನು ಆ ಮರಿಯನ್ನು ತನ್ನ ಆಶ್ರಮಕ್ಕೆ ತಂದು ಪ್ರೀತಿಯಿಂದ ಸಾಕುತ್ತಾನೆ. ಅದೇ ರೀತಿ ಗೌತಮ ಬುದ್ಧ ಸಿದ್ಧಾರ್ಥನು ರಾಜಕುಮಾರನಾಗಿದ್ದಾಗ, ಅವನ ಸೋದರ ಸಂಬಂಧಿ ದೇವದತ್ತನು ಬಾಣ ಬಿಟ್ಟು ಒಂದು ಹಂಸವನ್ನು ಗಾಯಗೊಳಿಸುತ್ತಾನೆ. ಅದು ಸಿದ್ಧಾರ್ಥನ ಪಾದಗಳ ಬಳಿ ಬೀಳುತ್ತದೆ.

ಸಿದ್ಧಾರ್ಥನು ಹಂಸದ ದೇಹದಿಂದ ಬಾಣವನ್ನು ತೆಗೆದು, ಔಷಧಿ ಹಚ್ಚಿ ಆರೈಕೆ ಮಾಡುತ್ತಾನೆ. ದೇವದತ್ತನು ಆ ಹಂಸ ತನಗೆ ಸೇರಬೇಕೆಂದು ವಾದಿಸಿದಾಗ, ಕೊಲ್ಲುವವನಿಗಿಂತ ಪ್ರಾಣ ಉಳಿಸು ವವನಿಗೆ ಆ ಜೀವಿಯ ಮೇಲೆ ಹೆಚ್ಚಿನ ಹಕ್ಕಿರುತ್ತದೆ ಎಂದು ಸಿದ್ಧಾರ್ಥನು ನ್ಯಾಯದ ತೀರ್ಪು ನೀಡುತ್ತಾನೆ. ಹೀಗೆ ಭಾರತೀಯ ಸಂಸ್ಕೃತಿಯು ಪ್ರಾಣಿದಯೆ ಹಾಗೂ ಅಹಿಂಸೆಯ ಉದಾತ್ತ ಆದರ್ಶಗಳಿಂದ ಸಮೃದ್ಧವಾಗಿದೆ. ಅದಕ್ಕೆ ಕಾರಣವೂ ಇದೆ.

ನಮ್ಮ ಪೂರ್ವಜರು ಪ್ರಾಣಿಗಳನ್ನು ಕೇವಲ ಜೀವಿಗಳೆಂದು ನೋಡದೆ, ಅವುಗಳಲ್ಲಿ ದೈವತ್ವವನ್ನು ಕಂಡವರು. ಅನಂತವಾದ ಈ ಬ್ರಹ್ಮಾಂಡದಲ್ಲಿ ಭೂಮಿಯು ಮನುಷ್ಯನೊಬ್ಬನದೇ ಸ್ವತ್ತಲ್ಲ; ಇಲ್ಲಿರುವ ಪ್ರತಿಯೊಂದು ಹುಲ್ಲುಕಡ್ಡಿ, ಹಾರಾಡುವ ಪಕ್ಷಿ, ಹರಿದಾಡುವ ಸರೀಸೃಪ ಹಾಗೂ ನಾಲ್ಕು ಕಾಲಿನ ಪ್ರಾಣಿಗಳಿಗೂ ಬದುಕುವ ಸಮಾನ ಹಕ್ಕಿದೆ; ಮನುಷ್ಯ ತನ್ನ ಬುದ್ಧಿಶಕ್ತಿಯಿಂದ ಶ್ರೇಷ್ಠ ನಾದರೂ, ಮಾತು ಬಾರದ ಮೂಕ ಪ್ರಾಣಿಗಳ ನೋವು, ಹಸಿವು ಮತ್ತು ಭಾವನೆಗಳಿಗೆ ಸ್ಪಂದಿಸಿದಾಗ ಮಾತ್ರ ಆತನ ಮಾನವೀಯತೆಗೆ ನಿಜವಾದ ಅರ್ಥ ಬರುತ್ತದೆ ಎಂದು ದೃಷ್ಟಾಂತಗಳ ಮೂಲಕ ಸಾರಿದವರು.

“ಅಷ್ಟಾದಶ ಪುರಾಣೇಷು ವ್ಯಾಸಸ್ಯ ವಚನದ್ವಯಮ್| ಪರೋಪಕಾರಃ ಪುಣ್ಯಾಯ ಪಾಪಾಯ ಪರಪೀಡನಮ್||" ಎಂಬ ಮಾತಿದೆ. ಹದಿನೆಂಟು ಪುರಾಣಗಳನ್ನು ಓದಬೇಕಿಲ್ಲ. ವೇದವ್ಯಾಸರು ತಿಳಿಸಿರುವ ಎರಡು ಅಂಶಗಳನ್ನು ಮನನ ಮಾಡಿಕೊಂಡರೆ ಸಾಕು: ಇತರರಿಗೆ ಉಪಕಾರ ಮಾಡುವುದೇ ಪುಣ್ಯ. ಇತರ ಜೀವಿಗಳಿಗೆ ಹಿಂಸೆ ನೀಡುವುದೇ ಪಾಪ. ನಮ್ಮ ಬಸವಣ್ಣನವರಂತೂ ಇದನ್ನು ಇನ್ನಷ್ಟು ಸರಳಗೊಳಿಸಿ “ದಯೆಯೇ ಧರ್ಮದ ಮೂಲವಯ್ಯ" ಎಂದಿದ್ದಾರೆ.

ಇವೆಲ್ಲ ನಮಗೆ ಗೊತ್ತೇ ಇಲ್ಲದ ಹೊಸ ವಿಚಾರಗಳೇನೂ ಅಲ್ಲ. ಭೂಮಿಯ ಮೇಲೆ ಮನುಷ್ಯನಷ್ಟೇ ಪ್ರಾಣಿಗಳಿಗೂ ಬದುಕುವ ಸಮಾನ ಹಕ್ಕಿದೆ; ಪ್ರಾಣಿಗಳಿಗೆ ಮಾತನಾಡಲು ಬರದಿದ್ದರೂ ಅವುಗಳಿಗೆ ನೋವು, ಹಸಿವು ಮತ್ತು ಪ್ರೀತಿಯ ಭಾವನೆಗಳಿರುತ್ತವೆ; ಆಹಾರ ಸರಪಳಿ ಮತ್ತು ಪರಿಸರದ ಸಮತೋಲನವನ್ನು ಕಾಪಾಡುವಲ್ಲಿ ವನ್ಯಜೀವಿಗಳು ಮತ್ತು ಸಾಕುಪ್ರಾಣಿಗಳ ಪಾತ್ರ ದೊಡ್ಡದಿದೆ; ಕೃಷಿ, ಸಾರಿಗೆ, ಮನೆಯ ರಕ್ಷಣೆ ಇತ್ಯಾದಿಗಷ್ಟೇ ಅಲ್ಲದೆ ಹೈನುಪದಾರ್ಥ ಮತ್ತಿತರ ಆಹಾರ ಉತ್ಪನ್ನಗಳ ತಯಾರಿಯಲ್ಲೂ ಪ್ರಾಣಿಗಳ ಮೇಲೆ ನಮ್ಮ ಅವಲಂಬನೆಯಿದೆ... ಇದೆಲ್ಲ ಗೊತ್ತಿದ್ದರೂ, ಆಧುನಿಕತೆಯ ಭರಾಟೆಯಲ್ಲಿ ನಾವೆಲ್ಲ ಸ್ವಾರ್ಥಿಗಳಾಗಿ ಪ್ರಾಣಿಗಳ ಮೇಲೆ ನಿರಂತರ ದೌರ್ಜನ್ಯ ಎಸಗುತ್ತಿದ್ದೇವೆ.

ಅರಣ್ಯನಾಶದಿಂದ ವನ್ಯಜೀವಿಗಳು ತಮ್ಮ ಆವಾಸಸ್ಥಾನಗಳನ್ನು ಕಳೆದುಕೊಂಡು ನಾಡಿಗೆ ಬರುತ್ತಿವೆ. ಬೇಟೆಯಾಡುವುದು, ಪ್ರಾಣಿಗಳನ್ನು ಹಿಂಸಿಸುವುದು, ವಾಹನಗಳ ಅತಿವೇಗದಿಂದ ಪ್ರಾಣಿಗಳನ್ನು ಬಲಿ ತೆಗೆದುಕೊಳ್ಳುವುದು ನಿತ್ಯದ ಘಟನೆಗಳಾಗಿವೆ. ಹಬ್ಬಗಳ ಸಂದರ್ಭದಲ್ಲಷ್ಟೇ ಅಲ್ಲ, ಪುಢಾರಿಗಳ ಚುನಾವಣೆ ಗೆಲುವುಗಳು, ನೆಚ್ಚಿನ ತಂಡಗಳ ಕ್ರೀಡಾ ಗೆಲುವುಗಳ ಸಂಭ್ರಮಾ ಚರಣೆಗೆಂದು ನಾವು ಸಿಡಿಸುವ ಪಟಾಕಿಗಳ ಭೀಕರ ಶಬ್ದಕ್ಕೆ ಮೂಕ ಪ್ರಾಣಿಗಳು ಬೆಚ್ಚಿಬೀಳುತ್ತ ವೆಂಬುದನ್ನೂ ನಾವು ಮರೆಯುತ್ತೇವೆ.

ಹೀಗೇಕೆ!? ಮೇಲಿನ ಎಲ್ಲ ವಿಚಾರಗಳು ನನ್ನ ತಲೆಯಲ್ಲಿ ಬಂದುಹೋದದ್ದು ಪ್ರಸಕ್ತ ರಜೆಯಲ್ಲಿ ಕರ್ನಾಟಕ ದಲ್ಲಿ ಅತ್ತಿಂದಿತ್ತ ಓಡಾಡುವಾಗ ಕ. ರಾ.ರ.ಸಾ.ನಿ ಬಸ್ಸುಗಳ ಹಿಂಬದಿ ಗಾಜಿನ ಮೇಲೆ ‘ಪ್ರಾಣಿಗಳ ಮೇಲೆ ದಯೆ ಇರಲಿ’ ಎಂಬ ಬರಹವನ್ನು ಓದಿದಾಗ. ಮೊದಮೊದಲಿಗೆ ಒಂದೆರಡು ಬಸ್ಸುಗಳ ಹಿಂಬದಿಯಲ್ಲಿ ಅದನ್ನು ಗಮನಿಸಿ ಬಸ್ಸಿನ ಚಾಲಕರು/ನಿರ್ವಾಹಕರು ಪ್ರಾಣಿದಯಾ ಪರರಿರಬೇಕು ಸ್ವಂತ ಖರ್ಚಿನಿಂದ ಬರೆಸಿದ್ದಾರೆ ಎಂದುಕೊಂಡೆ.

ಕ್ರಮೇಣ ಪ್ರತಿಯೊಂದು ಬಸ್ಸಿನ ಹಿಂಬದಿಯಲ್ಲೂ ಅದೇ ವಾಕ್ಯ ಕಂಡಾಗ ಆಶ್ಚರ್ಯವೇ ಆಯಿತು. ಕುತೂಹಲದಿಂದ ಗೂಗಲಿಸಿದಾಗ- ಕೇಂದ್ರ ಸರ್ಕಾರದ ಸೂಚನೆ ಹಾಗೂ ರಾಷ್ಟ್ರೀಯ ಹೆದ್ದಾರಿ ನಿಗಮದ ಸುತ್ತೋಲೆಯ ಪ್ರಕಾರ, ರಸ್ತೆ ಅಪಘಾತಗಳಲ್ಲಿ ಮೂಕಪ್ರಾಣಿಗಳು ವಾಹನಗಳಿಗೆ ಸಿಲುಕಿ ಸಾಯುವುದನ್ನು ತಡೆಯುವ ಉದ್ದೇಶದಿಂದ ‘ಪ್ರಾಣಿಗಳ ಮೇಲೆ ದಯೆ ಇರಲಿ’ ಎಂಬ ಘೋಷವಾಕ್ಯ ವನ್ನು ಸಾರ್ವಜನಿಕ ಸಾರಿಗೆ ವಾಹನಗಳ ಮೇಲೆ ಕಡ್ಡಾಯವಾಗಿ ಬರೆಯುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂತು.

ಇತ್ತೀಚೆಗೆ ಕರ್ನಾಟಕದಲ್ಲಿ ಬಸ್ ಪ್ರಯಾಣ ದರ ಏರಿಕೆಯಾದ ಸಂದರ್ಭದಲ್ಲಿ “ಪ್ರಾಣಿಗಳಲ್ಲ, ಪ್ರಯಾಣಿಕರ ಮೇಲೆ ದಯೆ ಇರಲಿ" ಎಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಂಗ್ಯಭರಿತ ಆಕ್ರೋಶ ವ್ಯಕ್ತವಾಗಿದೆಯೆಂದೂ ಗೊತ್ತಾಯಿತು. ನಿಜ ಹೇಳುತ್ತೇನೆ.

‘ಪ್ರಾಣಿಗಳ ಮೇಲೆ ದಯೆ ಇರಲಿ’ ಎಂಬ ವಾಕ್ಯವನ್ನು ಬಸ್ಸುಗಳ ಹಿಂಬದಿಯಲ್ಲಿ ಓದಿದಾಗ ನನ್ನ ತರ್ಲೆಬುದ್ಧಿಗೆ ವಕ್ರ ಆಲೋಚನೆಯೊಂದು ಒಂದೊಮ್ಮೆಗೆ ಬಂದದ್ದು ಹೌದು. ಬಸ್ಸುಗಳ ಹಿಂಬದಿ ಯಲ್ಲಿ ಬರೆದಿದ್ದಾರೆಂದ ಮೇಲೆ ಆ ಬಸ್ಸಿನ ಹಿಂದಿರುವ ವಾಹನದಲ್ಲಿರುವವರು, ಅಥವಾ ಬಸ್ಸಿನ ಹಿಂಬದಿಯನ್ನು ನೋಡುತ್ತಿರುವವರೇ ತಾನೆ ಅದನ್ನು ಓದುವವರು? ಹಾಗಾದರೆ ಬಸ್ಸಿನಲ್ಲಿರುವವರ ಬಗ್ಗೆ ಆ ವಾಕ್ಯ ಇರುವುದೇ? ಬಸ್‌ನಲ್ಲಿ ಪ್ರಯಾಣಿಸುತ್ತಿರುವವರನ್ನೇ ಪ್ರಾಣಿಗಳೆಂದಿದ್ದೇ? ದುಡ್ಡು ಕೊಟ್ಟು ಟಿಕೆಟ್ ಕೊಂಡು ಪಯಣಿಸಬೇಕಾದ ಬಡಪಾಯಿ ಗಂಡಸರನ್ನು ಪ್ರಾಣಿಗಳಿಗೆ ಸಮವಾಗಿಸಿದ್ದೇ? ಅಥವಾ ಉಚಿತ ಪ್ರಯಾಣದ ಖುಷಿಯಲ್ಲಿ ಕುರಿಮಂದೆಯಂತೆ ತುಂಬಿಕೊಳ್ಳುವ ಹೆಂಗಸರನ್ನೇ ಪ್ರಾಣಿಗಳೆಂದಿದ್ದೇ? ಅಥವಾ ಈಗ ಭಾರತದಲ್ಲೂ ಅಮೆರಿಕದಂತೆ ‘ಕಾರ್ ಕಾರ್ ಎಲ್ನೋಡಿ ಕಾರ್...’ ಆಗಿರುವುದರಿಂದ, ಒಂದೊಂದು ಮನೆಯಲ್ಲೂ ಕನಿಷ್ಠ ಎರಡು-ಮೂರು ಕಾರುಗಳಿರುವುದರಿಂದ, ಬಸ್ಸಿನಲ್ಲಿ ಪ್ರಯಾಣಿಸುವುದೆಂದರೆ ಅಂತಸ್ತು ಪ್ರತಿಷ್ಠೆಗೆ ಕಡಿಮೆ ಎಂಬ ಭಾವನೆ ಹುಟ್ಟಿಕೊಂಡು ಬಸ್ ಪ್ರಯಾಣಿಕರೆಂದರೆ ಪ್ರಾಣಿಗಳು ಎಂದಾಗಿರುವುದೇ? ಮತ್ತೆ ನೋಡಿದರೆ ಐರಾವತ, ಪಲ್ಲಕಿ ಮುಂತಾದ ಐಷಾರಾಮಿ ಬಸ್ಸುಗಳ ಹಿಂಬದಿಯಲ್ಲೂ ಅದೇ ಘೋಷವಾಕ್ಯ. ಅದಕ್ಕಿಂತಲೂ ವಿಚಿತ್ರವೆನಿಸಿದ್ದು ಕೆಲವು ಬಿಎಂಟಿಸಿ ಬಸ್ಸುಗಳ ಹಿಂಬದಿ ಗಾಜಿನ ಮೇಲೆ ‘ಪ್ರಾಣಿಗಳಿಗೆ ದಯೆ ಇರಲಿ’ ಎಂಬ ಬರಹ!

ಇದೊಳ್ಳೇ ಕಥೆ ಆಯ್ತಲ್ಲ. ದಯೆಯನ್ನು ರೂಢಿಸಿಕೊಳ್ಳುವಂತೆ ಪ್ರಾಣಿಗಳಿಗೆ ಆದೇಶಿಸಲಿಕ್ಕೆ ಅಥವಾ ಉಪದೇಶಿಸಲಿಕ್ಕೆ ನಾವ್ಯಾರು? ಬಸ್ಸಿನ ಗಾಜಿನ ಮೇಲೆ ಬರೆದಿದ್ದನ್ನು ಪ್ರಾಣಿಗಳು ಓದಬಲ್ಲವೇ? ಅರ್ಥ ಮಾಡಿಕೊಳ್ಳಬಲ್ಲವೇ? ಆ ಬೋರ್ಡ್ ಓದಿದ ಕ್ರೂರ ಪ್ರಾಣಿಗಳೆಲ್ಲ ದಯೆತೋರಿ ಸಾಧು ಪ್ರಾಣಿಗಳಾಗ ಬೇಕೆಂದೇ? ಇನ್ನೊಂದು ಸಾಧ್ಯತೆಯೂ ಇದೆ.

‘ಪ್ರಾಣಿಗಳಿಗೆ ದಯೆ ಇರಲಿ’ ಎಂದು ಬಸ್ಸಿನ ಗಾಜಿನ ಮೇಲೆ ಬರೆದರೆ ಬಸ್ಸಿನೊಳಗಿನವರೇ ಅದನ್ನು ಹೇಳುತ್ತಿದ್ದಾರೆ, ಬಸ್ಸಿನ ಹೊರಗಿರುವವರನ್ನೆಲ್ಲ ಅವರು ಪ್ರಾಣಿಗಳು ಎಂದು ಪರಿಗಣಿಸಿದಂತೆಯೂ ಆಗುತ್ತದೆ! ನೋಡಿ, ಭಾಷೆಯನ್ನು ಬಳುಕಿಸಿ ಭಾವವನ್ನೇ ಬದಲಿಸಿಬಿಡಬಹುದು! ಇರಲಿ. ಲೇವಡಿ, ಕುಹಕ ನನ್ನ ಉದ್ದೇಶವಲ್ಲ. ಹೀಗೂ ಒಂದು ಆಲೋಚನೆ ಬಂತೆನ್ನುವುದನ್ನು ಪ್ರಾಮಾಣಿಕವಾಗಿ ನಿವೇದಿಸಿದೆ ಅಷ್ಟೇ. ಆ ಕ್ಷಣಿಕ ಆಲೋಚನೆ ಮರೆಯಾದ ಮೇಲೆ ಮನಸ್ಸಿನಲ್ಲಿ ಆಳವಾಗಿ ರಿಂಗಣಿಸಿದ್ದು ನಿಜವಾದ ಪ್ರಾಣಿದಯಾಪರ ಚಿಂತನೆಗಳೇ. ಇತರ ಜೀವಿಗಳಿಗೆ ಉಪಕಾರ ಮಾಡುವುದೇ ಪುಣ್ಯ, ಅವುಗಳಿಗೆ ಹಿಂಸೆ ನೀಡುವುದೇ ಮಹಾಪಾಪ ಎಂಬ ಸತ್ಯವನ್ನು ಅರಿತು ನಾವು ಪ್ರಾಣಿಗಳ ರಕ್ಷಣೆಗೆ ಮುಂದಾಗಬೇಕು.

ಪ್ರಾಣಿದಯೆ ಎಂದರೆ ಕೇವಲ ದೊಡ್ಡ ಮಟ್ಟದ ಆಂದೋಲನಗಳಲ್ಲ; ಅದು ನಮ್ಮ ದೈನಂದಿನ ಸಣ್ಣಪುಟ್ಟ ನಡವಳಿಕೆಗಳಿಂದಲೇ ಪ್ರಾರಂಭವಾಗಬೇಕು. ಬಿರುಬೇಸಿಗೆಯ ದಿನಗಳಲ್ಲಿ ಮನೆಯ ತಾರಸಿಯ ಮೇಲೆ ಅಥವಾ ಅಂಗಳದಲ್ಲಿ ಪಕ್ಷಿಗಳು ಮತ್ತು ಬೀದಿ ಪ್ರಾಣಿಗಳಿಗಾಗಿ ಪಾತ್ರೆಯಲ್ಲಿ ಸ್ವಚ್ಛವಾದ ನೀರು ಮತ್ತು ಸ್ವಲ್ಪ ಆಹಾರವನ್ನು ಇಡುವಂಥ ಪುಟ್ಟದಾದ ಆದರೆ ಅತಿಶ್ರೇಷ್ಠ ಸೇವೆಯನ್ನು ನಾವೆಲ್ಲ ಮಾಡಬೇಕು.

ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಪ್ರಾಣಿಗಳು ಅಡ್ಡ ಬಂದರೆ ತಾಳ್ಮೆಯಿಂದ ವೇಗ ತಗ್ಗಿಸಿ ಅವುಗಳಿಗೆ ದಾರಿ ಬಿಡಬೇಕು. ಗಾಯಗೊಂಡ ಅಥವಾ ರೋಗಗ್ರಸ್ತ ಪ್ರಾಣಿಗಳು ಕಂಡುಬಂದಲ್ಲಿ ನಿರ್ಲಕ್ಷಿಸದೆ ಸ್ಥಳೀಯ ಪಶುವೈದ್ಯರು ಅಥವಾ ಪ್ರಾಣಿರಕ್ಷಣಾ ಸಂಸ್ಥೆಗಳಿಗೆ ತಲುಪಿಸುವ ಮಾನವೀಯತೆ ತೋರಬೇಕು. ಪ್ರಾಣಿಗಳಿಗೆ ಹಿಂಸೆ ನೀಡುವುದು ಶಿಕ್ಷಾರ್ಹ ಅಪರಾಧ ಎಂಬ ಕಾನೂನಿನ ಅರಿವನ್ನು ಸಮಾಜದಲ್ಲಿ ಮೂಡಿಸಬೇಕು.

“ಒಂದು ದೇಶದ ಹಿರಿಮೆ ಮತ್ತು ನೈತಿಕ ಪ್ರಗತಿಯನ್ನು ಅಲ್ಲಿನ ಪ್ರಾಣಿಗಳನ್ನು ಹೇಗೆ ನಡೆಸಿಕೊಳ್ಳ ಲಾಗುತ್ತದೆ ಎಂಬುದರ ಮೇಲೆ ಅಳೆಯಬಹುದು" ಎಂದಿದ್ದರು ಗಾಂಧೀಜಿ. ನಮ್ಮ ಭಾರತವು ಅಂಥದೊಂದು ಮಾನದಂಡದಿಂದಲೂ ವಿಶ್ವಗುರು ಎಂದು ಜಗಜ್ಜಾಹಿರಾಗಬೇಕು. ಬಸ್ಸುಗಳ ಬೆಂಬರಹವು ಪ್ರತಿಯೊಬ್ಬ ಪ್ರಜೆಯ ಹೃದಯದ ಮಿಡಿತವಾಗಬೇಕು. ಮನುಷ್ಯ ತನ್ನ ಅಹಂಕಾರ ವನ್ನು ತೊರೆದು, ಮೂಕ ಜೀವಿಗಳ ಕಣ್ಣೀರು ಒರೆಸುವ ಕರುಣಾಮಯಿಯಾದಾಗ ಮಾತ್ರ ಈ ಭೂಮಿಯು ನಿಜವಾದ ಸ್ವರ್ಗವಾಗಲು ಸಾಧ್ಯ. ಏನಂತೀರಿ ?