Vishweshwar Bhat Column: ʼಬ್ಲೂಬುಕ್ʼ ಎಂದರೇನು?
ಇತ್ತೀಚೆಗೆ ಹಿರಿಯ ಐಪಿಎಸ್ ಅಧಿಕಾರಿ ವೇಣು ಬನ್ಸಾಲ್ ಅವರು ‘ಬ್ಲೂ ಬುಕ್’ ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕೆ ಅವರನ್ನು ರಾಷ್ಟ್ರಪತಿ ಭವನದ ಭದ್ರತಾ ಹೊಣೆಗಾರಿಕೆಯಿಂದ ಮುಕ್ತಗೊಳಿಸ ಲಾಗಿದೆ ಎಂಬ ಸುದ್ದಿಯನ್ನು ಪತ್ರಿಕೆಗಳಲ್ಲಿ ಓದಿರಬಹುದು. ಹಾಗಾದರೆ ‘ಬ್ಲೂ ಬುಕ್’ ಅಂದರೆ ಏನು? ಇದು ಭಾರತದ ರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ದೇಶದ ಅತ್ಯುನ್ನತ ಗಣ್ಯರ (ವಿವಿಐಪಿ) ಭದ್ರತೆ ಮತ್ತು ಪ್ರೊಟೋಕಾಲ್ ಅನ್ನು ನಿರ್ವಹಿಸುವ ಅತ್ಯಂತ ರಹಸ್ಯಮಯ ಹಾಗೂ ಪ್ರಮುಖ ಕೈಪಿಡಿ
-
ಸಂಪಾದಕರ ಸದ್ಯಶೋಧನೆ
ಇತ್ತೀಚೆಗೆ ಹಿರಿಯ ಐಪಿಎಸ್ ಅಧಿಕಾರಿ ವೇಣು ಬನ್ಸಾಲ್ ಅವರು ‘ಬ್ಲೂ ಬುಕ್’ ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕೆ ಅವರನ್ನು ರಾಷ್ಟ್ರಪತಿ ಭವನದ ಭದ್ರತಾ ಹೊಣೆಗಾರಿಕೆಯಿಂದ ಮುಕ್ತಗೊಳಿಸ ಲಾಗಿದೆ ಎಂಬ ಸುದ್ದಿಯನ್ನು ಪತ್ರಿಕೆಗಳಲ್ಲಿ ಓದಿರಬಹುದು. ಹಾಗಾದರೆ ‘ಬ್ಲೂ ಬುಕ್’ ಅಂದರೆ ಏನು? ಇದು ಭಾರತದ ರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ದೇಶದ ಅತ್ಯುನ್ನತ ಗಣ್ಯರ (ವಿವಿಐಪಿ) ಭದ್ರತೆ ಮತ್ತು ಪ್ರೊಟೋಕಾಲ್ ಅನ್ನು ನಿರ್ವಹಿಸುವ ಅತ್ಯಂತ ರಹಸ್ಯಮಯ ಹಾಗೂ ಪ್ರಮುಖ ಕೈಪಿಡಿ. ಭಾರತ ಸರಕಾರದ ಗೃಹ ಸಚಿವಾಲಯ ಮತ್ತು ವಿಶೇಷ ರಕ್ಷಣೆ ಪಡೆ (ಎಸ್ಪಿಜಿ) ಇದನ್ನು ರೂಪಿಸಿದ್ದು, ಪ್ರಧಾನಿಯವರ ಪ್ರತಿಯೊಂದು ಪ್ರವಾಸ, ಕಾರ್ಯಕ್ರಮ ಹಾಗೂ ಸಾರ್ವಜನಿಕ ಭೇಟಿಗಳ ಸಮಯದಲ್ಲಿ ಅನುಸರಿಸಬೇಕಾದ ಭದ್ರತಾ ನಿಯಮಗಳನ್ನು ಇದು ಸಮಗ್ರವಾಗಿ ವಿವರಿಸುತ್ತದೆ.
‘ಬ್ಲೂ ಬುಕ್’ ಎಂಬುದು ಕೇವಲ ಶಿಷ್ಟಾಚಾರದ (ಪ್ರೊಟೋಕಾಲ್) ಪುಸ್ತಕವಲ್ಲ. ಬದಲಿಗೆ ಇದು ಸಂಪೂರ್ಣ ಭದ್ರತಾ ಮಾರ್ಗದರ್ಶಿ (Security Manual). ಭಾರತದ ಪ್ರಧಾನ ಮಂತ್ರಿಯವರ ಜೀವಕ್ಕೆ ಇರುವ ಬೆದರಿಕೆಗಳನ್ನು ವಿಶ್ಲೇಷಿಸಿ, ಅವರ ಭದ್ರತೆಗೆ ಯಾವುದೇ ಭಂಗ ಬರದಂತೆ ತಡೆಯಲು ಈ ಪುಸ್ತಕದಲ್ಲಿ ಅತ್ಯಂತ ಕಟ್ಟುನಿಟ್ಟಾದ ನಿಯಮಗಳನ್ನು ಉಲ್ಲೇಖಿಸಲಾಗಿದೆ. ಪ್ರಧಾನ ಮಂತ್ರಿ ಯವರು ದೇಶದ ಯಾವುದೇ ರಾಜ್ಯಕ್ಕೆ ಅಥವಾ ವಿದೇಶಕ್ಕೆ ಪ್ರಯಾಣಿಸುವಾಗ, ಆಯಾ ಪ್ರದೇಶದ ಪೊಲೀಸ್ ಇಲಾಖೆ, ಸ್ಥಳೀಯ ಆಡಳಿತ ಮತ್ತು ಭದ್ರತಾ ಸಂಸ್ಥೆಗಳು ಹೇಗೆ ನಡೆದುಕೊಳ್ಳಬೇಕು, ಯಾವ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಬ್ಲೂ ಬುಕ್ ಸ್ಪಷ್ಟವಾಗಿ ನಿರ್ದೇಶಿಸುತ್ತದೆ.
ಇದನ್ನೂ ಓದಿ: Vishweshwar Bhat Column: ಸಿ.ಪಿ.ಎನ್. ಸಿಂಗ್ ನೆನಪು
ಬ್ಲೂ ಬುಕ್‌ನಲ್ಲಿ ಪ್ರಧಾನ ಮಂತ್ರಿಯವರ ಪ್ರತಿಯೊಂದು ಚಲನವಲನಕ್ಕೂ ಸಂಬಂಧಿಸಿದಂತೆ ಕಟ್ಟುನಿಟ್ಟಾದ ಮಾರ್ಗಸೂಚಿಗಳಿವೆ. ಪ್ರಧಾನಮಂತ್ರಿಯವರು ಯಾವುದೇ ಸ್ಥಳಕ್ಕೆ ಭೇಟಿ ನೀಡುವ ಕನಿಷ್ಠ 3 ರಿಂದ 7 ದಿನಗಳ ಮೊದಲು ಎಎಸ್‌ಎಲ್ (Advance Security Liaison) ಪ್ರಕ್ರಿಯೆ ನಡೆಯುತ್ತದೆ. ಎಸ್ಪಿಜಿ ಅಧಿಕಾರಿಗಳು, ರಾಜ್ಯ ಪೊಲೀಸ್ ಉನ್ನತಾಧಿಕಾರಿಗಳು, ಜಿಲ್ಲಾಧಿಕಾರಿಗಳು ಮತ್ತು ಗುಪ್ತಚರ ಇಲಾಖೆಯ (ಐಬಿ) ಅಧಿಕಾರಿಗಳು ಒಟ್ಟಾಗಿ ಈ ಸಭೆಯನ್ನು ನಡೆಸುತ್ತಾರೆ.
ಪ್ರಧಾನಿ ಭೇಟಿ ನೀಡುವ ಸ್ಥಳ, ತಂಗುವ ಜಾಗ, ಸಭಾಂಗಣ ಮತ್ತು ಪ್ರಯಾಣಿಸುವ ಮಾರ್ಗಗಳ ಪ್ರತಿಯೊಂದು ಅಂಗುಲವನ್ನೂ ತಪಾಸಣೆ ಮಾಡಲಾಗುತ್ತದೆ. ತುರ್ತು ಸಂದರ್ಭದಲ್ಲಿ ಬಳಸಲು ಪರ್ಯಾಯ ಮಾರ್ಗಗಳು ಮತ್ತು ಹತ್ತಿರದ ಹೆಲಿಪ್ಯಾಡ್‌ಗಳನ್ನು ಗುರುತಿಸಲಾಗುತ್ತದೆ. ಪ್ರಧಾನ ಮಂತ್ರಿಯವರ ಪ್ರತ್ಯಕ್ಷ ರಕ್ಷಣೆಯನ್ನು ಎಸ್ಪಿಜಿ ನೋಡಿಕೊಂಡರೂ, ಸಂಚಾರ ನಿರ್ವಹಣೆ, ಮಾರ್ಗ ಭದ್ರತೆ ಮತ್ತು ಸಾರ್ವಜನಿಕ ನಿಯಂತ್ರಣದ ಸಂಪೂರ್ಣ ಜವಾಬ್ದಾರಿ ಆಯಾ ರಾಜ್ಯ ಪೊಲೀಸರದ್ದಾ ಗಿರುತ್ತದೆ.
ಬ್ಲೂ ಬುಕ್ ಪ್ರಕಾರ, ಪ್ರಧಾನಿ ಪ್ರಯಾಣಿಸುವ ರಸ್ತೆಯ ಇಕ್ಕೆಲಗಳಲ್ಲಿ ಕಟ್ಟುನಿಟ್ಟಿನ ಭದ್ರತೆ ಇರಬೇಕು. ಪ್ರಧಾನಿಯವರ ಕಾರವಾನ್ (ಮೋಟರ್‌ಕೇಡ್) ಸಾಗುವಾಗ ರಸ್ತೆಯಲ್ಲಿ ಯಾವುದೇ ಪ್ರತಿಭಟನೆ ಅಥವಾ ಅಡೆತಡೆಗಳು ಬಾರದಂತೆ ನೋಡಿಕೊಳ್ಳುವುದು ರಾಜ್ಯ ಪೊಲೀಸರ ಪ್ರಾಥಮಿಕ ಕರ್ತವ್ಯ. ಹವಾಮಾನ ವೈಪರೀತ್ಯ ಅಥವಾ ಭದ್ರತಾ ಬೆದರಿಕೆಯಿಂದಾಗಿ ನಿಗದಿತ ಯೋಜನೆ ಬದಲಾದರೆ ಏನು ಮಾಡಬೇಕು ಎಂಬುದನ್ನು ಬ್ಲೂ ಬುಕ್ ಮುಂಚಿತವಾಗಿಯೇ ತೀರ್ಮಾನಿಸು ತ್ತದೆ.
ಉದಾಹರಣೆಗೆ, ಹೆಲಿಕಾಪ್ಟರ್ ಮೂಲಕ ಪ್ರಯಾಣಿಸಲು ಸಾಧ್ಯವಾಗದಿದ್ದರೆ, ರಸ್ತೆ ಮಾರ್ಗದ ಮೂಲಕ ಕರೆದೊಯ್ಯಲು ‘ಪ್ಲಾನ್ ಬಿ’ ಸಿದ್ಧವಿರಬೇಕು. ಈ ಪರ್ಯಾಯ ರಸ್ತೆ ಮಾರ್ಗದಲ್ಲೂ ಸಹ ನಿಗದಿತ ಭದ್ರತೆ ಮತ್ತು ಪೊಲೀಸ್ ಸಿಬ್ಬಂದಿಯನ್ನು ಮುಂಚಿತವಾಗಿಯೇ ನಿಯೋಜಿಸಲಾಗಿರುತ್ತದೆ.
ಪ್ರಧಾನಿಯವರ ಕಾನ್ವಾಯ್‌ನಲ್ಲಿ ಸದಾ ಅತ್ಯಾಧುನಿಕ ಜೀವನ ರಕ್ಷಕ ವ್ಯವಸ್ಥೆ ಹೊಂದಿರುವ ಆಂಬ್ಯುಲೆ ಮತ್ತು ಪ್ರಧಾನಿಯವರ ರಕ್ತದ ಗ್ರೂಪ್ ಹೊಂದಿರುವ ರಕ್ತದ ಸಂಗ್ರಹ ಇರುತ್ತವೆ. ಭೇಟಿ ನೀಡುವ ಸ್ಥಳದ ಸಮೀಪದ ಪ್ರಮುಖ ಆಸ್ಪತ್ರೆಯಲ್ಲಿ ‘ಗ್ರೀನ್ ಕಾರಿಡಾರ್’ ಮತ್ತು ಪ್ರತ್ಯೇಕ ಐಸಿಯು ಹಾಸಿಗೆಯನ್ನು ಕಾಯ್ದಿರಿಸಲಾಗಿರುತ್ತದೆ.
1984ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ, ಪ್ರಧಾನ ಮಂತ್ರಿಯವರ ಭದ್ರತೆಗಾಗಿ ವಿಶೇಷ ರಕ್ಷಣೆ ಪಡೆಯನ್ನು 1985ರಲ್ಲಿ ಸ್ಥಾಪಿಸಲಾಯಿತು. ಎಸ್ಪಿಜಿ ಕಾಯ್ದೆಯಡಿ, ಪ್ರಧಾನ ಮಂತ್ರಿಯವರ ರಕ್ಷಣೆ ಅತ್ಯುನ್ನತ ಆದ್ಯತೆಯಾಗಿದೆ. ಎಸ್ಪಿಜಿ ಅಧಿಕಾರಿಗಳು ಬ್ಲೂ ಬುಕ್ ನಲ್ಲಿರುವ ಪ್ರತಿಯೊಂದು ಸಾಲನ್ನು ಅಕ್ಷರಶಃ ಪಾಲಿಸುತ್ತಾರೆ. ಪ್ರಧಾನಿಯವರ ಸುತ್ತಲೂ ಇರುವ ‘ಕ್ಲೋಸ್ ಪ್ರೊಟೆಕ್ಷನ್ ಟೀಮ’ನಿಂದ ಹಿಡಿದು, ದೂರದಲ್ಲಿರುವ ಸ್ನೈಪರ್‌ಗಳವರೆಗೆ ಎಲ್ಲರ ಕಾರ್ಯ ವೈಖರಿಯನ್ನು ಬ್ಲೂ ಬುಕ್ ನಿರ್ದೇಶಿಸುತ್ತದೆ