Raghav Sharma Nidle Column: ಮೇಕೆದಾಟು ತೀರ್ಪಿನ ಬಗ್ಗೆ ಸಂಭ್ರಮ ಪಡುವಂಥದ್ದೇನಿದೆ ?
ಇದು ಭಾರಿ ಸಂಭ್ರಮಪಡುವಂಥ ವಿಚಾರವೇನಲ್ಲ. ಏಕೆಂದರೆ, ಮೇಕೆದಾಟು ಯೋಜನೆಗೆ ಸುಪ್ರೀಂಕೋರ್ಟ್‌ನಿಂದಾಗಲೀ ಅಥವಾ ಕೇಂದ್ರ ಸರಕಾರದಿಂದಾಗಲೀ ಅಂತಿಮ ಅನುಮೋದನೆ ಯೇನೂ ಸಿಕ್ಕಿಲ್ಲ. ಯೋಜನೆ ಕುರಿತು ಡಿಪಿಆರ್ ಸಿದ್ಧಪಡಿಸಲು ಕೇಂದ್ರ ಜಲ ಆಯೋಗ 2018ರ ನವೆಂಬರ್ ತಿಂಗಳಲ್ಲಿ ನೀಡಿದ್ದ ಅನುಮತಿಯನ್ನು ಪುರಸ್ಕರಿಸಿ, ತಮಿಳುನಾಡಿನ ತಕರಾರು ಅರ್ಜಿಯನ್ನು ಅವರು ವಜಾಗೊಳಿಸಿದ್ದಾರೆ.
-
ಜನಪಥ
ರಾಜ್ಯದ ಹೊಸ ಸಮಗ್ರ ಯೋಜನಾ ವರದಿಗೆ ತಮಿಳುನಾಡು ಆಕ್ಷೇಪ ತೆಗೆಯುವು ದರಲ್ಲಿ ಅನುಮಾನವಿಲ್ಲ. ಮುಂದಿನ ಹಂತಗಳಲ್ಲೂ ಕಾನೂನಾತ್ಮಕ ಅಡೆತಡೆ ಗಳನ್ನು ಕರ್ನಾಟಕ ಎದುರಿಸುವುದು ಖಚಿತ. ಹೀಗಾಗಿ, ಸದ್ಯದ ಭವಿಷ್ಯದಲ್ಲಿ ಮೇಕೆ ದಾಟು ಜಲಾಶಯ ನಿರ್ಮಾಣ ಕಾಮಗಾರಿ ಆರಂಭವಾಗಿಯೇ ಬಿಡುತ್ತದೆ ಎಂದು ಭಾವಿಸುವುದು ಮೂರ್ಖತನವಾದೀತು.
ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾದ ಬಿ.ಆರ್. ಗವಾಯಿ ಅವರು ತಮ್ಮ ಅಧಿಕಾರಾವಧಿಯ ಕೊನೆಯ ದಿನಗಳಲ್ಲಿ ಕರ್ನಾಟಕದ ಮಟ್ಟಿ ಗೊಂದು ಸಣ್ಣ ಅನುಕೂಲ ಮಾಡಿಕೊಟ್ಟಿದ್ದಾರೆ. ರಾಜ್ಯದ ಉದ್ದೇಶಿತ ಮೇಕೆದಾಟು ಜಲಾಶಯ ನಿರ್ಮಾಣ ಯೋಜನೆಗೆ ಸಂಬಂಧಿಸಿ 7 ವರ್ಷಗಳಿಂದ ಬಾಧಿಸುತ್ತಿದ್ದ ಕಾನೂನಾತ್ಮಕ ಅಡೆತಡೆಯೊಂದನ್ನು ಅವರು ನಿವಾರಣೆ ಮಾಡಿದ್ದಾರೆ. ಕೇಂದ್ರ ಜಲ ಆಯೋಗಕ್ಕೆ ಮೇಕೆದಾಟು ಯೋಜನೆಯ ಸಮಗ್ರ ಯೋಜನಾ ವರದಿಯ (ಡಿಪಿಆರ್) ಸಲ್ಲಿಕೆಗೆ ಕರ್ನಾಟಕಕ್ಕಿದ್ದ ಸಮಸ್ಯೆಯನ್ನು ಅವರು ಪರಿಹರಿಸಿದ್ದಾರೆ.
ಹಾಗಂತ, ಇದು ಭಾರಿ ಸಂಭ್ರಮಪಡುವಂಥ ವಿಚಾರವೇನಲ್ಲ. ಏಕೆಂದರೆ, ಮೇಕೆದಾಟು ಯೋಜನೆಗೆ ಸುಪ್ರೀಂಕೋರ್ಟ್‌ನಿಂದಾಗಲೀ ಅಥವಾ ಕೇಂದ್ರ ಸರಕಾರದಿಂದಾಗಲೀ ಅಂತಿಮ ಅನುಮೋದನೆಯೇನೂ ಸಿಕ್ಕಿಲ್ಲ. ಯೋಜನೆ ಕುರಿತು ಡಿಪಿಆರ್ ಸಿದ್ಧಪಡಿಸಲು ಕೇಂದ್ರ ಜಲ ಆಯೋಗ 2018ರ ನವೆಂಬರ್ ತಿಂಗಳಲ್ಲಿ ನೀಡಿದ್ದ ಅನುಮತಿಯನ್ನು ಪುರಸ್ಕರಿಸಿ, ತಮಿಳುನಾಡಿನ ತಕರಾರು ಅರ್ಜಿಯನ್ನು ಅವರು ವಜಾಗೊಳಿಸಿದ್ದಾರೆ.
ಇದನ್ನೂ ಓದಿ: Raghava Sharma Nidle Column: ರಷ್ಯನ್ ಇಂಕ್, ವೋಟ್ ಚೋರಿ, ಓವೈಸಿ ರಾಜಕೀಯ ಪ್ರಾಬಲ್ಯ
ಡಿಪಿಆರ್ ಸಲ್ಲಿಕೆಗೆ ಕರ್ನಾಟಕಕ್ಕೆ ನೀಡಿದ ಅನುಮತಿಯನ್ನು ಈ ಹಂತದಲ್ಲಿ ರದ್ದುಪಡಿಸಿ ದರೆ ಅದು ತರಾತುರಿಯ ನಿರ್ಧಾರವಾದೀತು. ಆದರೆ, ಯೋಜನೆಯ ಡಿಪಿಆರ್ ಕುರಿತು ಏನೇ ಆಕ್ಷೇಪಣೆಗಳಿದ್ದರೂ, ಅದನ್ನು ಕಾನೂನಾತ್ಮಕವಾಗಿ ತಮಿಳುನಾಡು ಪ್ರಶ್ನಿಸಬಹುದು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಕರ್ನಾಟಕ ಈ ಹಿಂದೆ ತನ್ನ ಡಿಪಿಆರ್ ಅನ್ನು ಕೇಂದ್ರ ಜಲ ಆಯೋಗಕ್ಕೆ (ಸಿಡಬ್ಲ್ಯುಸಿ) ಸಲ್ಲಿಸಿದ್ದರೂ, ಅದನ್ನು ತಮಿಳುನಾಡು ಪ್ರಶ್ನಿಸಿದ್ದ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದ್ದುದರಿಂದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಅಥವಾ ಜಲ ಆಯೋಗಕ್ಕೆ ಡಿಪಿಆರ್ ಕುರಿತು ತೀರ್ಮಾನಗಳನ್ನು ತೆಗೆದು ಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಸುಪ್ರೀಂಕೋರ್ಟ್‌ನ ಈ ತೀರ್ಪಿನಿಂದ ಸಿಡಬ್ಲ್ಯುಸಿ ಮತ್ತು ಸಿಡಬ್ಲ್ಯುಎಂಎ ಮೇಕೆದಾಟು ವಿಷಯದಲ್ಲಿ ಕಾರ್ಯೋನ್ಮುಖವಾಗುವುದು ಅನಿವಾರ್ಯವಾಗಿದೆ.
ರಾಜ್ಯ ಸರಕಾರ ಕೂಡ ಕೆಲವೇ ದಿನಗಳಲ್ಲಿ ತನ್ನ ಪರಿಷ್ಕೃತ ಡಿಪಿಆರ್ ಅನ್ನು ಕೇಂದ್ರ ಜಲಶಕ್ತಿ ಆಯೋಗಕ್ಕೆ ಸಲ್ಲಿಸುವುದಾಗಿ ಹೇಳಿದೆ. ರಾಜ್ಯದ ಹೊಸ ಡಿಪಿಆರ್‌ಗೆ ತಮಿಳುನಾಡು ಆಕ್ಷೇಪ ತೆಗೆಯುವುದರಲ್ಲಿ ಅನುಮಾನವಿಲ್ಲ. ಮುಂದಿನ ಹಂತಗಳಲ್ಲೂ ಕಾನೂನಾತ್ಮಕ ಅಡೆತಡೆಗಳನ್ನು ಕರ್ನಾಟಕ ಎದುರಿಸುವುದು ಖಚಿತ.
ಹೀಗಾಗಿ, ಸದ್ಯದ ಭವಿಷ್ಯದಲ್ಲಿ ಮೇಕೆದಾಟು ಜಲಾಶಯ ನಿರ್ಮಾಣ ಕಾಮಗಾರಿ ಆರಂಭ ವಾಗಿಯೇ ಬಿಡುತ್ತದೆ ಎಂದು ಭಾವಿಸುವುದು ಮೂರ್ಖತನವಾದೀತು.
ಭೌಗೋಳಿಕವಾಗಿ ಕಾವೇರಿ ನದಿ ನೀರನ್ನು ಬಳಸುವ ಮೇಲ್ಭಾಗದ ರಾಜ್ಯ ಕರ್ನಾಟಕ. ತಮಿಳುನಾಡಿಗೆ ಕಾವೇರಿಯ ಪಾಲನ್ನು ಹರಿಸಿ, ಉಳಿದ ಹೆಚ್ಚುವರಿ ನೀರನ್ನು ಮೇಕೆದಾಟು ಜಲಾಶಯದಲ್ಲಿ ಸಂಗ್ರಹಿಸಿಟ್ಟುಕೊಳ್ಳುವುದು ರಾಜ್ಯದ ಉದ್ದೇಶ. ಜೂನ್-ಜುಲೈ ತಿಂಗಳಲ್ಲಿ ತಮಿಳುನಾಡಿಗೆ ಹೋಗುವ ಅನಿಯಂತ್ರಿತ ಹರಿವನ್ನು ಮೇಕೆದಾಟುವಿನಲ್ಲಿ ತಡೆ ಹಿಡಿದು, ಜಲಬಾಧೆ ಎದುರಾಗುವ ಜಲವರ್ಷವೊಂದರ ಮೇ-ಜೂನ್ ತಿಂಗಳಲ್ಲಿ ಅದನ್ನು ಬಳಸಬಹುದು.
ಆಗ ತಮಿಳುನಾಡಿಗೂ ಅದರ ಪಾಲಿನ ಹರಿವನ್ನು ಮೇ-ಜೂನ್ ನಲ್ಲಿ ಖಚಿತಪಡಿಸ ಬಹುದು. ಮೇಕೆದಾಟುವಿನಲ್ಲಿ ಕನಿಷ್ಠ 10 ಟಿಎಂಸಿ ಹೆಚ್ಚುವರಿ ನೀರು ಸಂಗ್ರಹವಾದರೂ, ಮೇ-ಜೂನ್ ತಿಂಗಳ ಜಲಸಂಕಟದಿಂದ ತಪ್ಪಿಸಿಕೊಳ್ಳಬಹುದು ಎಂದು ಯೋಚಿಸಿರುವ ರಾಜ್ಯ ಸರಕಾರ, ಅಲ್ಲಿ 500 ಮೆಗಾವ್ಯಾಟ್ ಜಲವಿದ್ಯುತ್ ಉತ್ಪಾದನೆ ಮಾಡುವ ಮಹತ್ವದ ಉದ್ದೇಶವನ್ನೂ ಹೊಂದಿದೆ.
ಈ ಅಂಶಗಳನ್ನೊಳಗೊಂಡ ಡಿಪಿಆರ್ ಅನ್ನು 2018ರಲ್ಲಿ ಕರ್ನಾಟಕವು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಿತ್ತು ಮತ್ತು ಆಯೋಗ ಇದನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾ ರದ ಮುಂದಿಟ್ಟಿತ್ತು. ನಂತರ ಪ್ರಾಧಿಕಾರವು 11 ಸದಸ್ಯರ ಸ್ಕ್ರೀನಿಂಗ್ ಕಮಿಟಿಗೆ (ತಜ್ಞರ ಪರಿಶೀಲನಾ ಸಮಿತಿ) ಯೋಜನೆ ಕುರಿತು ಅಭಿಪ್ರಾಯ ಸಲ್ಲಿಸುವಂತೆ ನಿರ್ದೇಶನ ನೀಡಿತ್ತು.
ಕೇಂದ್ರ ಜಲ ಆಯೋಗದ ಮುಖ್ಯ ಎಂಜಿನಿಯರ್ ಸಿ.ಕೆ.ಎಲ್.ದಾಸ್ ನೇತೃತ್ವದ ಸಮಿತಿಯು, ತಮಿಳುನಾಡಿನ ಆಕ್ಷೇಪಣೆಗಳ ಹೊರತಾಗಿಯೂ ಕರ್ನಾಟಕದ ಮೇಕೆದಾಟು ಯೋಜನೆಗೆ ಅನುಮತಿ ನೀಡಿದ ತನ್ನ ಅಧ್ಯಯನಾ ವರದಿಯನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಸಲ್ಲಿಸಿತು. ಈ ವರದಿಯನ್ನು ಪರಿಗಣಿಸಿಯೇ ಸಮಗ್ರ ಯೋಜನಾ ವರದಿ ಸಲ್ಲಿಸಲು ಕರ್ನಾಟಕಕ್ಕೆ ಕೇಂದ್ರ ಜಲ ಆಯೋಗ 2018ರ ನವೆಂಬರ್‌ನಲ್ಲಿ ಅನುಮತಿ ನೀಡಿತ್ತು. ಈ ಅನುಮತಿಯನ್ನು ತಮಿಳುನಾಡು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ರಿಂದ, ಮೇಕೆದಾಟು ಸಂಬಂಧಿತ ಕರ್ನಾಟಕದ ಪ್ರಸ್ತಾವನೆಗಳು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಜಲ ಆಯೋಗದ ಧೂಳು ತಿನ್ನುತ್ತಿದ್ದವು.
ಕಾವೇರಿಯ ಅನಿಯಂತ್ರಿತ ನೀರಿನ ಹರಿವನ್ನು ತನ್ನದಾಗಿಸಿಕೊಳ್ಳುವ ಹಕ್ಕು ನಮಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ, ಕರ್ನಾಟಕ ಈಗಾಗಲೇ ಕೃಷ್ಣರಾಜಸಾಗರ ಸೇರಿ ವಿವಿಧ ಅಣೆಕಟ್ಟುಗಳನ್ನು ನಿರ್ಮಾಣ ಮಾಡಿದೆ. ಪ್ರಸ್ತಾವಿತ ಮೇಕೆದಾಟು ಜಲಾಶಯ ನಿರ್ಮಾಣ ವಾದರೆ, ಅನಿಯಂತ್ರಿತ ನೀರಿನ ಹರಿವನ್ನು ಪಡೆಯುವ ತಮಿಳುನಾಡಿನ ಹಕ್ಕಿನ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಹೀಗಾಗಿ, ಮೇಕೆದಾಟು ಆಣೆಕಟ್ಟು ನಿರ್ಮಾಣ ಮಾಡುವ ಹಕ್ಕು ಕರ್ನಾಟಕಕ್ಕಿಲ್ಲ.
ತನ್ನ ಅರ್ಹ ಪ್ರಮಾಣಕ್ಕಿಂತ ಹೆಚ್ಚಿನ ನೀರನ್ನು ಬಳಸುವ ಕೆಟ್ಟ ಚಾಳಿ ಕರ್ನಾಟಕಕ್ಕಿದೆ ಎನ್ನುವುದು ತಮಿಳುನಾಡಿನ ಆಕ್ಷೇಪ. ಇದಕ್ಕೆ ಪ್ರತಿಯಾಗಿ, ತನ್ನ ಪಾಲಿನಲ್ಲಿ ಹಂಚಿಕೆ ಯಾದ ನೀರನ್ನು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವ ಹಕ್ಕನ್ನು ಕರ್ನಾಟಕ ಹೊಂದಿದೆ. ಮೇಕೆದಾಟು ಅಣೆಕಟ್ಟು ನಿರ್ಮಾಣ, ತಮಿಳುನಾಡು ಮತ್ತು ಪುದುಚೇರಿಗೆ ಸಾಗುವ ನೀರಿನ ಅನಿಯಂತ್ರಿತ ಹರಿವಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕರ್ನಾಟಕ ವಿವರಣೆ ನೀಡುತ್ತಾ ಬಂದಿದೆ.
ಮಳೆಗಾಲದಲ್ಲಿ ಸಮುದ್ರದ ಪಾಲಾಗುವ ಅಂದಾಜು ೬೫-೬೭ ಟಿಎಂಸಿ ಹೆಚ್ಚುವರಿ ನೀರನ್ನು ಮೇಕೆದಾಟು ಜಲಾಶಯದಲ್ಲಿ ಸಂಗ್ರಹಿಸಿ, ಅದನ್ನು ಕುಡಿಯಲು ಮತ್ತು ಜಲವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳಬೇಕು ಎಂದುಕೊಂಡಿರುವ ಕರ್ನಾಟಕ, ಈ ಸಂಗ್ರಹ ಪ್ರಮಾಣದಲ್ಲಿ ಅರ್ಧಾಂಶ ಕಡಿಮೆ ಮಾಡಿದರೆ (೬೫ರ ಬದಲು ೩೦-೩೫ ಟಿಎಂಸಿ) ಕೇಂದ್ರ ಸರಕಾರ ಮತ್ತು ನ್ಯಾಯಾಲಯಗಳ ಮನವೊಲಿಸಬಹುದು.
೬೫ ಟಿಎಂಸಿಗೇ ಪಟ್ಟು ಹಿಡಿದರೆ ನ್ಯಾಯಮೂರ್ತಿಗಳು ಒಪ್ಪುವ ಸಾಧ್ಯತೆ ಕಡಿಮೆ. ಅಂಥಾ ಸಂದರ್ಭದಲ್ಲಿ ಈ ವ್ಯಾಜ್ಯಗಳನ್ನು ಪರಿಹರಿಸಲು ಮತ್ತೆ ನ್ಯಾಯಾಧೀಕರಣದ ಮುಂದೆ ಹೋಗಿ ಎನ್ನುವ ಅಪಾಯವೂ ಇದೆ ಎಂಬುದು ಕಾನೂನು ಪಂಡಿತರ ಆತಂಕ.
ಹೀಗಾಗಿ, ಮೇಕೆದಾಟು ವಿಷಯದಲ್ಲಿ ಅತಿಯಾಗಿ ಸಂಭ್ರಮ ಪಡುವ ಬದಲು ಮುಂದೆರ ಗುವ ಕಠಿಣ ಸವಾಲುಗಳನ್ನು ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ಸರಕಾರ ಗಂಭೀರ ಚಿಂತನೆ ನಡೆಸಬೇಕಿದೆ. ಕಾಂಗ್ರೆಸ್-ಬಿಜೆಪಿ ಪಕ್ಷಗಳು ರಾಜಕಾರಣದ ಲಾಭ-ನಷ್ಟಗಳನ್ನು ಬದಿಗಿಟ್ಟು ವಾಸ್ತವಿಕತೆಯ ನೆಲೆಯಲ್ಲಿ ಜಲ ಬಿಕ್ಕಟ್ಟುಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕು ಮತ್ತು ದಿಲ್ಲಿ ದೊರೆಗಳ ಮುಂದೆ ನಡುಗಿಕೊಂಡು ಕೈ ಕಟ್ಟಿ ನಿಲ್ಲುವ ಬದಲು, ತಮ್ಮನ್ನು ಆಯ್ಕೆ ಮಾಡಿದ ಜನರ ಪರವಾಗಿ, ಜಲ-ಹಕ್ಕಿನ ಪ್ರತಿಪಾದನೆಯನ್ನು ಬಲವಾಗಿ ಮಾಡ ಬೇಕು.
ತಮಿಳುನಾಡಿನ ಅರ್ಜಿ ವಜಾಗೊಳಿಸಿದ ತೀರ್ಪಿನಲ್ಲಿ ನಿವೃತ್ತ ಸಿಜೆಐ ಬಿ.ಆರ್. ಗವಾಯಿ ದಾಖಲಿಸಿದ ಕೆಲ ಅಂಶಗಳು ಗಮನ ಸೆಳೆದಿವೆ. ನೀರು ಹಂಚಿಕೆ, ಜಲಾಶಯ ನಿರ್ಮಾಣ ಸೇರಿದಂತೆ ಇಂಥ ತಾಂತ್ರಿಕ ವಿಚಾರಗಳಲ್ಲಿ ನ್ಯಾಯಮೂರ್ತಿಗಳಿಗಿಂತ ವಿಷಯ ತಜ್ಞರು ನೀಡುವ ಅಭಿಪ್ರಾಯಗಳೇ ಮುಖ್ಯ.
ವಾಸ್ತವಾಂಶಗಳನ್ನು ಆಳವಾಗಿ ತಿಳಿದುಕೊಂಡಿರುವ ಅವರು ಸಲಹೆ ನೀಡುವುದೇ ನಿರ್ಣಾಯಕ ಎಂದ ಜಸ್ಟಿಸ್ ಗವಾಯಿ, ಮೇಕೆದಾಟು ಜಲಾಶಯ ನಿರ್ಮಾಣದ ಬಗ್ಗೆಯೂ ಜಲ ಆಯೋಗ, ನೀರು ನಿರ್ವಹಣಾ ಪ್ರಾಧಿಕಾರ, ಕಾವೇರಿ ನೀರು ನಿಯಂತ್ರಣ ಸಮಿತಿಯ (ಸಿಡಬ್ಲ್ಯುಆರ್‌ಸಿ) ತಜ್ಞರೇ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಕರ್ನಾಟಕ ಸಲ್ಲಿಸಲಿರುವ ಡಿಪಿಆರ್ ಅನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಅನುಮೋದಿಸಿದರೆ ಮಾತ್ರ ಕೇಂದ್ರ ಜಲ ಆಯೋಗ ಪರಿಗಣಿಸಿ ಮುಂದಿನ ಕ್ರಮಕ್ಕೆ ಶಿಫಾರಸು ಮಾಡಲಿದೆ. 2018ರ ನವೆಂಬರ್ 22ರ ಪತ್ರದಲ್ಲೂ ನೀರು ನಿರ್ವಹಣಾ ಪ್ರಾಧಿಕಾರದ ಪೂರ್ವಾನುಮೋದನೆ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿರು ವುದನ್ನು ಗಮನಿಸಬಹುದು.
ಸುಪ್ರೀಂಕೋರ್ಟ್ ತೀರ್ಪಿನಿಂದ ಆಗಿರುವ ಅನುಕೂಲವೆಂದರೆ - ಮೇಕೆದಾಟು ಕೇಸ್ ನ್ಯಾಯಾಲಯದಲ್ಲಿದೆ ಎಂಬ ಕುಂಟು ನೆಪವನ್ನು ಕೇಂದ್ರ ಸರಕಾರ ಇನ್ನು ಹೇಳುವಂತಿಲ್ಲ. ಪ್ರಕರಣವು ನ್ಯಾಯಾಲಯದ ಮುಂದಿದ್ದಾಗ ನಾವು ತೀರ್ಮಾನ ಮಾಡಲು ಬರುವುದಿಲ್ಲ ಎನ್ನುತ್ತಲೇ ಈವರೆಗೆ ಬೀಸುವ ದೊಣ್ಣೆಗಳಿಂದ ತಪ್ಪಿಸಿಕೊಳ್ಳುತ್ತಿದ್ದ ಕೇಂದ್ರ ಸರಕಾರ, ಕರ್ನಾಟಕದ ಡಿಪಿಆರ್ ಮೇಲೆ ತ್ವರಿತಗತಿಯಲ್ಲಿ ತೀರ್ಮಾನ ತೆಗೆದುಕೊಳ್ಳಿ ಎಂದು ಜಲ ಆಯೋಗ ಮತ್ತು ನೀರು ನಿರ್ವಹಣಾ ಪ್ರಾಧಿಕಾರಗಳಿಗೆ ಇನ್ನಾದರೂ ಸೂಚನೆ ನೀಡಬೇಕು.
ಇದಕ್ಕಾಗಿ, ಯಾವುದೇ ವಿಳಂಬ ಮಾಡದೆ ರಾಜ್ಯ ಸರಕಾರವು ಡಿಪಿಆರ್ ಅನ್ನು ಕೇಂದ್ರ ಜಲಶಕ್ತಿ ಇಲಾಖೆಗೆ ಸಲ್ಲಿಸಬೇಕು. 2024ರ ಫೆಬ್ರವರಿ ೧ರಂದು ಕಾವೇರಿ ಪ್ರಾಧಿಕಾರದ ಸಭೆ ಯಲ್ಲಿ ಪುದುಚೇರಿ ಸರಕಾರದ ಅಧಿಕಾರಿಗಳು, ‘ಮೇಕೆದಾಟು ವಿಷಯದಲ್ಲಿ ತಾಂತ್ರಿಕ ಪರಿಶೀಲನೆ ನಡೆಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಮರ್ಥ ಸಂಸ್ಥೆಯಲ್ಲ.
ಇದಕ್ಕೆ ಕೇಂದ್ರ ಜಲ ಆಯೋಗ ಸಕ್ಷಮ ಪ್ರಾಧಿಕಾರವಾಗಿದ್ದು, ಹೆಚ್ಚಿನ ಪರಾಮರ್ಶೆ ನಡೆಸ ಬಹುದು’ ಎಂದು ಆಕ್ಷೇಪಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಹೀಗಾಗಿ, ಭವಿಷ್ಯದಲ್ಲಿ ಮೇಕೆದಾಟು ಡಿಪಿಆರ್ ವಿಚಾರವು ಪ್ರಾಧಿಕಾರದ ಸಭೆ ಮುಂದೆ ಬಂದಾಗ ಪುದುಚೇರಿ ಇಂಥದ್ದೇ ಕ್ಯಾತೆ ತೆಗೆಯಬಹುದು ಮತ್ತು ಇದರ ಹಿಂದೆ ತಮಿಳುನಾಡು ಕೈವಾಡವಿದ್ದೇ ಇರುತ್ತದೆ. ಮೇಕೆದಾಟು ಬಗ್ಗೆ ಚರ್ಚೆ ಮಾಡಬೇಕು ಎಂಬ ಅಜೆಂಡಾ ಸಿದ್ಧಪಡಿಸಿಕೊಂಡು ನೀರು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಬಂದಿದ್ದ ಈ ಹಿಂದಿನ ನಾಲ್ಕೈದು ಸಂದರ್ಭಗಳಲ್ಲಿ, ಈ ಕುರಿತ ಚರ್ಚೆಗೆ ನಮ್ಮ ಸಮ್ಮತಿ ಇಲ್ಲ ಎಂದು ತಮಿಳುನಾಡು, ಕೇರಳ, ಪುದುಚೇರಿ ರಾಜ್ಯಗಳು ವಿರೋಧ ಹೊರಹಾಕಿದ್ದವು.
ಈ ಕಾರಣದಿಂದಲೇ, ಮೇಕೆದಾಟು ವಿಷಯದಲ್ಲಿ ನಾಲ್ಕೂ ರಾಜ್ಯಗಳೊಂದಿಗೆ ಚರ್ಚೆ-ಸಮಾಲೋಚನೆ ನಡೆಸಲು ಪ್ರಾಧಿಕಾರಕ್ಕೆ ಇದುವರೆಗೆ ಸಾಧ್ಯವೇ ಆಗಿಲ್ಲ. ಡಿಪಿಆರ್ ಸಲ್ಲಿಕೆಗೆ ಜಲ ಆಯೋಗ ನೀಡಿದ್ದ ಅನುಮತಿಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿದ್ದರೂ, ತಮಿಳು ನಾಡಿನ ಮತ್ತು ಪುದುಚೇರಿಯ ವರ್ತನೆಗಳಲ್ಲಿ ಬದಲಾವಣೆ ನಿರೀಕ್ಷಿಸಲು ಸಾಧ್ಯವಿಲ್ಲ.
ಹಿಂದಿನ ಪ್ರಾಧಿಕಾರದ ಸಭೆಗಳಲ್ಲಿ ಹೇಗೆ ಅಡಚಣೆ ಉಂಟು ಮಾಡಿದ್ದವೋ ಅದೇ ರೀತಿಯಲ್ಲಿ ಅವು ಮತ್ತೆ ವಿರೋಧ ಒಡ್ಡಲಿವೆ. ಅಲ್ಲದೆ, ರಾಜ್ಯದ ಡಿಪಿಆರ್‌ಗೆ ಆಕ್ಷೇಪಣೆ ತೆಗೆದು ತಮಿಳುನಾಡು ರಾಜ್ಯವು ಸುಪ್ರೀಂಕೋರ್ಟ್ ಮೆಟ್ಟಿಲೇರುವುದೂ ನಿಶ್ಚಿತ. ಜಲ ಸಂಬಂಧಿ ಬಿಕ್ಕಟ್ಟುಗಳನ್ನು ತೀರ್ಮಾನ ಮಾಡಲು ನಾವು ಜಲ-ವಿಷಯ ತಜ್ಞರಲ್ಲ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಹೇಳುತ್ತಿರುವುದರಿಂದ, ಈ ವ್ಯಾಜ್ಯ ಇತ್ಯರ್ಥ ವಾಗುವುದು ಎಲ್ಲಿ ಎಂಬ ಪ್ರಶ್ನೆ ಎದುರಾಗುತ್ತದೆ.
ಕೇಂದ್ರ ಸರಕಾರದ ಅಂಗಳದಲ್ಲಿನ ತೀರ್ಮಾನಕ್ಕೆ ಉಳಿದ ಕಣಿವೆ ರಾಜ್ಯಗಳು ಒಪ್ಪುವುದಿಲ್ಲ ಮತ್ತು ಒಂದು ರಾಜ್ಯದ ಪರ ತೀರ್ಮಾನ ನೀಡುವ ಅಪಾಯಕಾರಿ ಸಾಹಸಕ್ಕೆ ಕೈ ಹಾಕಲು ಕೇಂದ್ರವೂ ಬಯಸುವುದಿಲ್ಲ. ಹೀಗಾಗಿ, ರಾಜ್ಯಗಳು ಮೇಕೆದಾಟು ವ್ಯಾಜ್ಯವನ್ನು ಹೊ ತ್ತುಕೊಂಡು ಮತ್ತದೇ ಜಲ ನ್ಯಾಯಾಧೀಕರಣದತ್ತ ಮುಖ ಮಾಡಬೇಕಾಗಿ ಬಂದರೂ ಅಚ್ಚರಿ ಇಲ್ಲ.