Inner Reservation: ಸಿದ್ದು ಬಿಟ್ಟರೆ ಅನ್ಯರಿಂದ ʼಒಳಮೀಸಲಿಗೆ ಪರಿಹಾರʼ ಸಾಧ್ಯವಿರಲಿಲ್ಲ
ನಾನು ಗಮನಿಸಿದಂತೆ ಸಿದ್ದರಾಮಯ್ಯಅವರು, ಒಳಮೀಸಲಾತಿ ವಿವಾದವನ್ನು ಸರಕಾರದ ಯಾವುದೇ ಒಂದು ಸಾಮಾನ್ಯ ಸಮಸ್ಯೆಯಂತಾಗಲಿ, ಕಾರ್ಯಕ್ರಮದಂತಾಗಲಿ ನೋಡಲಿಲ್ಲ. ಬದಲಾಗಿ ತಮ್ಮ ಆಡಳಿತ ಅವಧಿಯಲ್ಲಿ ಸಾಮಾಜಿಕ ಬದ್ಧತೆ ಪ್ರದರ್ಶಿಸಲು ಹಾಗೂ ಸಾಮಾಜಿಕ ನ್ಯಾಯದ ಅನುಷ್ಠಾನಕ್ಕೆ ಸಿಕ್ಕಬಹುದಾದ ದೊಡ್ಡ ಅವಕಾಶ ಎನ್ನುವಂತೆ ಸ್ವೀಕರಿಸಿದ್ದರು.
-
ಎ.ಎಸ್.ಪೊನ್ನಣ್ಣ, ಶಾಸಕರು, ವಿರಾಜಪೇಟೆ
ಸಾಮಾನ್ಯರು ಹಾಗೂ ಸಾಮಾನ್ಯ ವರ್ಗದವರು ಅಂದುಕೊಂಡಂತೆ ಒಳಮೀಸಲಾತಿ ಎಂದರೆ ಅದೇನು ದಲಿತರು ಸರಕಾರದ ಸೌಲಭ್ಯಕ್ಕಾಗಿ ಸಲ್ಲಿಸಿದ್ದ ಬರೀ ಹಕ್ಕೊತ್ತಾಯವಲ್ಲ. ಅದೊಂದು ದಲಿತರ ಒಳಗೇ ಉರಿಯುತ್ತಿದ್ದ ನಾಲ್ಕು ದಶಕಗಳ ಹಳೆಯ ಜ್ವಾಲೆ. ಸಮಾಜದ ಮುಖ್ಯ ವಾಹಿನಿಯಿಂದ ದೂರ ಉಳಿದಿದ್ದ ಪರಿಶಿಷ್ಟರಿಗೆ ಸಂವಿಧಾನ ಬದ್ಧವಾಗಿ ಮೀಸಲಾತಿ ಸೌಲಭ್ಯವಿದೆ. ಆದರೂ ಒಳಮೀಸಲಾತಿ ಎಂಬ ವಿಚಾರ ವಿವಾದಕ್ಕೆ ತಿರುಗಿ ಅನೇಕ ವರ್ಷಗಳಿಂದ ಆ ಸಮಾಜದ ಒಳಗೇ ಹೊತ್ತಿ ಉರಿಯುತ್ತಾ ಬಂದಿತ್ತು ಎನ್ನುವುದು ಬಹುಶಃ ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಪರಿಶಿಷ್ಟರ ಆಂತರ್ಯದ ಕೆಂಡದಂತೆ ಕಾರುತ್ತಿದ್ದ ಇಷ್ಟು ದೀರ್ಘಕಾಲದ ಈ ವಿವಾದವನ್ನು ಇಷ್ಟು ಪರಿಣಾಮಕಾರಿಯಾಗಿ, ಕಾನೂನಾತ್ಮಕವಾಗಿ ಪರಿಹಾರ ಮಾಡಬಹುದು ಎನ್ನುವುದು ಗೊತ್ತಾಗಿದ್ದು ಇತ್ತೀಚೆಗೆ.
ಅದೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರಂತರವಾಗಿ ನಡೆಸುತ್ತಿದ್ದ ಒಳಮೀಸ ಲಾತಿ ಕುರಿತ ಸಭೆಗಳಿಗೆ ನನ್ನನ್ನು ಕರೆದಿದ್ದಾಗ, ಆ ಸಭೆಗಳಲ್ಲಿ ಎದುರಾಗಬಹುದಾಗಿದ್ದ ಕಾನೂನು ತೊಡಕುಗಳಿಗೆ ಸೂಕ್ತ ಸಲಹೆಗಳನ್ನು ಕೇಳಿದಾಗ.
ಹೀಗೆ ಸಿದ್ದರಾಮಯ್ಯ ಅವರ ಸುದೀರ್ಘ ಕಾಲದ ಸಭೆಗಳನ್ನು ಗಮನಿಸಿದಾಗ, ಅವರು ಕೈಗೊಳ್ಳುತ್ತಿದ್ದ ನಿರ್ಧಾರಗಳು, ಅವುಗಳನ್ನು ಕಾನೂನಾತ್ಮಕವಾಗಿ ವಿಮರ್ಶೆ ಮಾಡುತ್ತಿದ್ದ ರೀತಿಯನ್ನು ಗಮನಿಸಿದಾಗ, ನನಗೆ ಗೊತ್ತಾಗಿದ್ದು ಏನೆಂದರೆ, ಇಂಥ ಐತಿಹಾಸಿಕ ಅಸಮಾಧಾನದ ಅಗ್ನಿಯನ್ನು, ಸಿದ್ದರಾಮಯ್ಯ ಅಲ್ಲದೆ ಬೇರೆ ಯಾರಿಂದಲೂ ಆರಿಸಲು ಸಾಧ್ಯವಾಗುತ್ತಿರಲಿಲ್ಲ ಎನ್ನುವುದು.
ಇದನ್ನೂ ಓದಿ: Inner Reservation: ನೆರೆ ರಾಜ್ಯದಲ್ಲಿ ಒಳ ಮೀಸಲು ಜಾರಿ, ರಾಜ್ಯದಲ್ಲೂ ಹೆಚ್ಚಿದ ಒತ್ತಡ
ಇದು ಅತಿಶಯೋಕ್ತಿಯಾದರೂ ವಾಸ್ತವ. ನಾಲ್ಕು ದಶಕಗಳ ಈ ಒಳ ಕಗ್ಗಂಟನ್ನು ಈತನಕ ರಾಜ್ಯವನ್ನು ಆಳಿ ಹೋಗಿರುವ ಯಾವ ಒಬ್ಬ ನಾಯಕರೂ ಬಿಡಿಸಲಿಲ್ಲ. ಅವರಿಗೆ ಅದು ಸಾಧ್ಯವೂ ಆಗಿರಲಿಲ್ಲ. ಹೀಗಿರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತ್ಯಂತ ಸುಲಭ ಹಾಗೂ ಸರಳ ವಿಧಾನದಲ್ಲಿ ಒಳಮೀಸಲಾತಿ ಹಂಚಿಕೆ ಮಾಡಿ ಯಾರಿಂದಲೂ ಆಗದಿರುವುದನ್ನು ಸಾಧಿಸಿ ತೋರಿಸಿದ್ದಾರೆ. ಅದಕ್ಕೊಂದು ಕಾಯ್ದೆ ರೂಪವನ್ನೂ ನೀಡಿ ಸಂವಿಧಾನಬದ್ಧಗೊಳಿಸುವ ಪ್ರಯತ್ನದಲ್ಲೂ ಯಶಸ್ವಿಯಾಗಿ ದೇಶದ ಮಾದರಿ ಮುಖ್ಯ ಮಂತ್ರಿ ಎನಿಸಿಕೊಂಡಿದ್ದಾರೆ.
ಹೀಗಾಗಿ ಕಳೆದ ಅನೇಕ ಸರಕಾರಗಳಿಗೆ, ಅದರಲ್ಲೂ ಈಗಿನ ಕಾಂಗ್ರೆಸ್ ಸರಕಾರಕ್ಕೆ ಕಳೆದೆರಡು ವರ್ಷಗಳಿಂದ ದೊಡ್ಡ ತಲೆನೋವಾಗಿದ್ದ ಈ ಒಳಮೀಸಲಾತಿ ವಿವಾದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲದೆ ಬೇರೆ ಯಾರಿಂದಲೂ ಪರಿಹಾರ ಸಿಗುತ್ತಿರಲಿಲ್ಲ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ.
ನಾನು ಗಮನಿಸಿದಂತೆ ಸಿದ್ದರಾಮಯ್ಯಅವರು, ಒಳಮೀಸಲಾತಿ ವಿವಾದವನ್ನು ಸರಕಾರದ ಯಾವುದೇ ಒಂದು ಸಾಮಾನ್ಯ ಸಮಸ್ಯೆಯಂತಾಗಲಿ, ಕಾರ್ಯಕ್ರಮದಂತಾಗಲಿ ನೋಡ ಲಿಲ್ಲ. ಬದಲಾಗಿ ತಮ್ಮ ಆಡಳಿತ ಅವಧಿಯಲ್ಲಿ ಸಾಮಾಜಿಕ ಬದ್ಧತೆ ಪ್ರದರ್ಶಿಸಲು ಹಾಗೂ ಸಾಮಾಜಿಕ ನ್ಯಾಯದ ಅನುಷ್ಠಾನಕ್ಕೆ ಸಿಕ್ಕಬಹುದಾದ ದೊಡ್ಡ ಅವಕಾಶ ಎನ್ನುವಂತೆ ಸ್ವೀಕರಿಸಿದ್ದರು.
ಇದನ್ನೂ ಓದಿ: Protest for Inner Reservation: ಒಳಮೀಸಲಾತಿಗೆ ಆಗ್ರಹಿಸಿ ಮಾದಿಗ ಸಮುದಾಯ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಅಷ್ಟೇ ಏಕೆ? ಪರಿಶಿಷ್ಟರ ಮೀಸಲಾತಿ ಸೌಲಭ್ಯದಿಂದ ವಂಚಿತರಾಗಿದ್ದು ಅವರಿಗೆ ನ್ಯಾಯ ಕೊಡಿಸ ಲೇಬೇಕೆಂದು ಶಪಥಗೈದವರಂತೆ ಹೋರಾಡಿದ್ದರು. ಈ ಮಾರ್ಗದಲ್ಲಿ ಎದುರಾದ ಅನೇಕ ಸವಾಲುಗಳನ್ನು ಎದುರಿಸಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಇನ್ನು ಒಳಮೀಸ ಲಾತಿ ಹೋರಾಟದ ಹಾದಿ ನೋಡುವುದಾದರೆ 2005ರಲ್ಲಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಅವರ ನೇತೃತ್ವದ ಆಯೋಗ ರಚಿಸಲಾಗಿತ್ತು. ಅನಂತರ 2012ರಲ್ಲಿ ಡಿ.ವಿ. ಸದಾನಂದ ಗೌಡರ ನೇತೃತ್ವದ ಬಿಜೆಪಿ ಸರಕಾರ, ನ್ಯಾ.ಎ.ಜೆ.ಸದಾಶಿವ ಅವರಿಂದ ವರದಿ ಸ್ವೀಕರಿಸಿತ್ತು. ಆದರೆ ವರದಿಯಲ್ಲಿದ್ದ ಶಿಫಾರಸುಗಳನ್ನು ಜಾರಿಗೊಳಿಸುವ ಬದ್ಧತೆಯನ್ನೇ ತೋರಿಸಲಿಲ್ಲ. ನಂತರ ಬಂದ ಕಾಂಗ್ರೆಸ್ ಸರಕಾರದಲ್ಲಿ ವಿವಾದವನ್ನು ಬಗೆಹರಿಸಲು ಯತ್ನಿಸಿತ್ತಾದರೂ ಯಶಸ್ಸು ಆಗಿರಲಿಲ್ಲ.
ಇದಾದ ನಂತರ ಅಧಿಕಾರ ಹಿಡಿದ ಬಿಜೆಪಿ ಸರಕಾರವಾದರೂ ಒಳಮೀಸಲಾತಿಯನ್ನು ಜಾರಿಗೊಳಿಸಬಹುದಿತ್ತಲ್ಲವೇ? ಅದೂ ಮಾಡಲಿಲ್ಲ. ಅಂದಿನ ಬಿಜೆಪಿ ಸರಕಾರ ಒಳಮೀಸ ಲಾತಿಗೆ ಆಧಾರವಾಗಿದ್ದ ನ್ಯಾ.ಸದಾಶಿವ ಆಯೋಗ ವರದಿಯನ್ನೇ ತಿರಸ್ಕರಿಸಿ ಬಿಟ್ಟಿತ್ತು. ಬದಲಾಗಿ ಪರಿಶಿಷ್ಟಜಾತಿ ಮೀಸಲಾತಿ ಪ್ರಮಾಣವನ್ನು ಶೇ.15ರಿಂದ ಶೇ.17ಕ್ಕೆ ಏರಿಸಿದ್ದೇವೆ ಎಂದು ವಿಚಿತ್ರ ಸಮರ್ಥನೆ ನೀಡಿತ್ತು. ಆದರೆ ಅದಕ್ಕೆ ಕೇಂದ್ರ ಸರಕಾರದ ಒಪ್ಪಿಗೆ ಸಿಗಲಿಲ್ಲ.
ಆಗಲೇ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ಅಂಶವನ್ನು ಸೇರಿಸಿ, ಇದನ್ನು ಜಾರಿಗೆ ಮುಂದಾಗಿತ್ತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ಕೆಲವೇ ದಿನಗಳ ಒಳಮೀಸಲಾತಿ ಭರವಸೆ ಈಡೇರಿಕೆಗೆ ಪ್ರಯತ್ನ ಆರಂಭಿಸಿದ್ದರು. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರು ಅನೇಕ ಸಭೆ, ಸಮಾಲೋಚನೆಗಳು ಹಾಗೂ ಕೇಂದ್ರ ಸರಕಾರದ ಜೊತೆ ಪತ್ರದ ವ್ಯವಹಾರಗಳನ್ನು ನಡೆಸಿ ನಿರಂತರ ಪ್ರಯತ್ನದಲ್ಲಿ ತೊಡಗಿದ್ದರು. ಈ ಮಧ್ಯೆ, 2024ರ ಆಗಸ್ಟ್‌ನಲ್ಲಿ ಸುಪ್ರೀಂಕೋರ್ಟ್‌ನ ಸಂವಿಧಾನ ಪೀಠ, ಒಳಮೀ ಸಲು ನೀಡುವ ಸಂಬಂಧ ರಾಜ್ಯ ಸರಕಾರಗಳ ಅಧಿಕಾರ ಮತ್ತು ಜವಾಬ್ದಾರಿಯ ಮೇಲೆ ಬೆಳಕು ಚೆಲ್ಲುವ ಮಹತ್ವದ ತೀರ್ಪು ನೀಡಿದ್ದು ರಾಜ್ಯ ಸರಕಾರದ ಪ್ರಯತ್ನಕ್ಕೆ ಪುಷ್ಟಿ ಸಿಕ್ಕಿದಂತಾಯಿತು.
ಇದನ್ನೂ ಓದಿ: Inner Reservation: ಮಾದಿಗರ ಒಳಮೀಸಲಾತಿ ಜಾರಿಗಾಗಿ ಫೆಬ್ರವರಿಯಲ್ಲಿ ಬೃಹತ್ ಜಾಗೃತಿ ಸಮಾವೇಶ
ಹೀಗಾಗಿ ಸಿದ್ದರಾಮಯ್ಯ ಅವರು ನ್ಯಾ.ನಾಗಮೋಹನ್ ದಾಸ್ ಅವರ ಆಯೋಗ ರಚಿಸಿ ಅವರಿಂದ ಸುಪ್ರೀಂಕೋರ್ಟ್ ಆದೇಶದಂತೆ ಸಮಗ್ರ ಮಾಹಿತಿ ಇರುವ ವೈಜ್ಞಾನಿಕ ವರದಿ ಪಡೆದು ಶೇ.17ರಂತೆ ಒಳಮೀಸಲಾತಿ ಕಲ್ಪಿಸಲು ನಿರ್ಧರಿಸಿದ್ದರು. ಈ ಮಧ್ಯೆ, ಖಾಲಿ ಇರುವ 56 ಸಾವಿರ ಹುದ್ದೆಗಳ ಭರ್ತಿಗಾಗಿ ನಡೆದ ನಿರುದ್ಯೋಗಿಗಳ ಹೋರಾಟ ಮತ್ತು ಹೈ ತೀರ್ಪು ಒಳಮೀಸಲಾತಿ ಜಾರಿಗೆ ಕೊಂಚ ಹಿನ್ನಡೆಯಾಗಿತ್ತಾದರೂ ನಂತರದಲ್ಲಿ ಸಿದ್ದರಾಮಯ್ಯ ಅವರ ಸಾಮಾಜಿಕ ನ್ಯಾಯದಸೂತ್ರದ ಪರಿಣಾಮ ಶೇ.15ರಲ್ಲಿ ಒಳ ಮೀಸಲಾತಿ ಹಂಚಿಕೆ ಯ ಮಹತ್ವದ ತೀರ್ಮಾನ ಪ್ರಕಟವಾಯಿತು.
ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರಿಗೆ ಸರಕಾರದ ಒಳಗೆ ಹಾಗೂ ಹೊರಗೆ ಸಾಕಷ್ಟು ಪರ, ವಿರೋಧಗಳು ಎದುರಾಗಿದ್ದರೂ ಇದೆಲ್ಲವನ್ನೂ ಸಾಧಿಸಲು ಸಿದ್ದರಾಮಯ್ಯ ಅವರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪೂರ್ಣ ಸಹಕಾರ ನೀಡಿದ್ದರು.
ಜತೆಗೆ ಎಲ್ಲಾ ಮಂತ್ರಿಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಳಮೀಸಲಾತಿ ಹಂಚಿಕೆ ಸರ್ವಾನುಮತದ ನಿರ್ಣಯವಾಗುವಂತೆ ಮಾಡಿದ್ದಾಗ ನಿಜಕ್ಕೂ ಸಿದ್ದರಾಮಯ್ಯ ಅವರಲ್ಲಿದ್ದ ರಾಜಕೀಯ ಮುತ್ಸದ್ದಿತನ ಎದ್ದು ಕಾಣಿಸಿತ್ತು. ಹೀಗಾಗಿ ಎಡಗೈ ಮತ್ತು ಬಲಗೈ ಸಮುದಾಯಕ್ಕೆ ತಲಾ ಶೇ.5.25ರಷ್ಟು ಹಾಗೂ ಸ್ಪೃಶ್ಯ ಹಾಗೂ ಅಲೆಮಾರಿ ಸಮುದಾಯಕ್ಕೆ ಶೇ.4ರಷ್ಟು ಮೀಸಲಾತಿ ನೀಡಿ ಪರಿಶಿಷ್ಟರ ಒಳಗಿನ ಐತಿಹಾಸಿಕ ಹೋರಾಟಕ್ಕೆ ಒಂದು ಅಂತ್ಯ ಹಾಡುವಲ್ಲಿ ಸಿದ್ದರಾಮಯ್ಯ ಅವರು ನಿಜವಾದ ನೊಂದ ಸಮಾಜದ ನ್ಯಾಯ ವಿತರಕರಾದರು.
ಜೊತೆಗೆ ನೇಮಕಕ್ಕೆ ಸಂಬಂಧಿಸಿದ ರೋಸ್ಟರ್ ಬಿಂದು ಸಮಸ್ಯೆಗೂ ವೈಜ್ಞಾನಿಕ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ಒಟ್ಟಾರೆ ಒಳಮೀಸಲಾತಿ ವಿಚಾರದಲ್ಲಿ ಸಿದ್ದರಾಮಯ್ಯ ಅವರು ಸದಾ ಕೋಮು ಗೊಂದಲ ಕಾವು ಪಡೆಯುತ್ತಿದ್ದ ಒಳಮೀಸಲಾತಿ ಹೋರಾಟದ ಕಿಡಿಯನ್ನು ಇಷ್ಟು ಸುಲಭವಾಗಿ ಬಗೆಹರಿಸುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ. ಆದ್ದರಿಂದ ಈ ವಿವಾದವನ್ನು ಬಹುಶಃ ಸಿದ್ದರಾಮಯ್ಯ ಅವರಲ್ಲದೇ ಬೇರೆ ಯಾರಿಂದಲೂ ಬಗೆಹರಿಸಲು ಸಾಧ್ಯವಾಗುತ್ತಿರಲಿಲ್ಲ.
ಈ ಸ್ಥಾನದಲ್ಲಿ ಬೇರೆ ಯಾವುದೇ ನಾಯಕರಿದ್ದರೂ ಪರಿಸ್ಥಿತಿ ಬೇರೆಯೇ ಆಗಿರುತ್ತಿತ್ತೇನೋ? ಏಕೆಂದರೆ, ಒಳಮೀಸಲಾತಿ ಹೋರಾಟಗಳನ್ನು ಸಾಕಷ್ಟು ಧೀಮಂತ, ದಿಗ್ಗಜರು, ಮುಖ್ಯಮಂತ್ರಿಗಳು, ನಾಯಕರು ನೋಡಿಕೊಂಡೇ ಸಾಗಿ ಹೋಗಿದ್ದಾರೆ.
ಆದರೆ ಇಷ್ಟು ಪ್ರಯತ್ನ ಮಾಡಲಿಲ್ಲ. ಮಾಡಿದ್ದ ಪ್ರಯತ್ನಕ್ಕೆ ಯಶಸ್ಸೂ ಸಿಗಲಿಲ್ಲ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳಮೀಸಲಾತಿ ಹಂಚಿಕೆಯ ವಿಚಾರದಲ್ಲಿ ಬರೀ ರಾಜ್ಯಕ್ಕೆ ಮಾತ್ರವಲ್ಲ. ಇಡೀ ದೇಶಕ್ಕೇ ಮಾದರಿ ಎಂದರೆ ತಪ್ಪಾಗಲಾರದು.