ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishweshwar Bhat Column: ವೈಟ್ ಹೌಸ್ ಕರೆಸ್ಪಾಂಡೆಂಟ್ಸ್

ಅಮೆರಿಕ ಸಂವಿಧಾನದ ಮೊದಲ ತಿದ್ದುಪಡಿಯು ಒದಗಿಸಿರುವ ಮಾಧ್ಯಮ ಸ್ವಾತಂತ್ರ್ಯದ ಪ್ರಮುಖ ಕಾವಲುಗಾರರಾಗಿರುವ ಈ ವರದಿಗಾರರು, ಅಧ್ಯಕ್ಷೀಯ ಆಡಳಿತ ಮತ್ತು ಸಾರ್ವಜನಿಕರ ನಡುವೆ ಮಹತ್ವದ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಾರೆ. ಸರಕಾರವು ಕೈಗೊಳ್ಳುವ ನಿರ್ಧಾರಗಳ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದು ಇವರ ಮುಖ್ಯ ಜವಾಬ್ದಾರಿ.

Vishweshwar Bhat Column: ವೈಟ್ ಹೌಸ್ ಕರೆಸ್ಪಾಂಡೆಂಟ್ಸ್

-

ಸಂಪಾದಕರ ಸದ್ಯಶೋಧನೆ

ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ (White House Correspondents) ಎಂದರೆ ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಹಾಗೂ ಕಾರ್ಯಾಲಯವಾದ ಶ್ವೇತಭವನದ ದೈನಂದಿನ ವಿದ್ಯಮಾನಗಳು, ಆಡಳಿತಾತ್ಮಕ ನೀತಿಗಳು ಮತ್ತು ನಿರ್ಧಾರಗಳನ್ನು ವರದಿ ಮಾಡಲು ನಿಯೋಜಿತರಾಗಿರುವ ಪತ್ರಕರ್ತರ ವಿಶೇಷ ವೃಂದ. ಪ್ರಪಂಚದ ಅತ್ಯಂತ ಪ್ರಭಾವಶಾಲಿ ರಾಜಕೀಯ ಕೇಂದ್ರಗಳಲ್ಲಿ ಒಂದಾದ ಶ್ವೇತಭವನವನ್ನು ನಿಕಟವಾಗಿ ಗಮನಿಸುವ ಈ ಪತ್ರಕರ್ತರು, ವಿಶ್ವದ ಪ್ರಮುಖ ಪತ್ರಿಕೆಗಳು, ಟೆವಿ ಚಾನೆಲ್‌ಗಳು, ರೇಡಿಯೋ ಹಾಗೂ ಡಿಜಿಟಲ್ ಮಾಧ್ಯಮ ಸಂಸ್ಥೆಗಳನ್ನು ಪ್ರತಿನಿಧಿಸುತ್ತಾರೆ.

ಅಮೆರಿಕ ಸಂವಿಧಾನದ ಮೊದಲ ತಿದ್ದುಪಡಿಯು ಒದಗಿಸಿರುವ ಮಾಧ್ಯಮ ಸ್ವಾತಂತ್ರ್ಯದ ಪ್ರಮುಖ ಕಾವಲುಗಾರರಾಗಿರುವ ಈ ವರದಿಗಾರರು, ಅಧ್ಯಕ್ಷೀಯ ಆಡಳಿತ ಮತ್ತು ಸಾರ್ವಜನಿಕರ ನಡುವೆ ಮಹತ್ವದ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಾರೆ. ಸರಕಾರವು ಕೈಗೊಳ್ಳುವ ನಿರ್ಧಾರಗಳ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದು ಇವರ ಮುಖ್ಯ ಜವಾಬ್ದಾರಿ.

ಶ್ವೇತಭವನದ ವರದಿಗಾರಿಕೆಯ ಇತಿಹಾಸವು ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಿಂದಲೇ ಆರಂಭವಾಗುತ್ತದೆ. ಆರಂಭದಲ್ಲಿ ಪತ್ರಕರ್ತರಿಗೆ ಶ್ವೇತಭವನದ ಒಳಗೆ ಪ್ರವೇಶಿಸಲು ನಿಗದಿತ ಕೋಣೆಗಳಾಗಲೀ ಅಥವಾ ಸಂಘಟಿತ ವ್ಯವಸ್ಥೆಯಾಗಲೀ ಇರಲಿಲ್ಲ. ಬದಲಿಗೆ, ಅವರು ಹೊರಗಿನ ಗೇಟ್ ಗಳ ಬಳಿ ನಿಂತು ಸಂದರ್ಶಕರನ್ನು ಅಥವಾ ಅಧಿಕಾರಿಗಳನ್ನು ಭೇಟಿಯಾಗಿ ಮಾಹಿತಿ ಸಂಗ್ರಹಿಸುತ್ತಿದ್ದರು.

ಇದನ್ನೂ ಓದಿ: Vishweshwar Bhat Column: ಟೈಮ್‌ ಮ್ಯಾಗಜಿನ್‌ ಮುಖಪುಟ

1914ರಲ್ಲಿ ಅಧ್ಯಕ್ಷ ವುಡ್ರೋ ವಿಲ್ಸನ್ ಅಧಿಕಾರಾವಧಿಯಲ್ಲಿ, ಪತ್ರಕರ್ತರು ತಮ್ಮ ಹಕ್ಕುಗಳನ್ನು ಸಂರಕ್ಷಿಸಿ ಕೊಳ್ಳಲು ಮತ್ತು ಶ್ವೇತಭವನದೊಳಗೆ ಸುಲಭ ಪ್ರವೇಶ ಪಡೆಯಲು ಸಂಘಟಿತರಾಗುವ ಅಗತ್ಯವನ್ನು ಮನಗಂಡರು. ಈ ಹಿನ್ನೆಲೆಯಲ್ಲಿ ‘ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಅಸೋಸಿಯೇಷನ್’ (WHCA) ಎಂಬ ಸ್ವತಂತ್ರ ಸಂಘಟನೆಯನ್ನು ಸ್ಥಾಪಿಸಲಾಯಿತು.‌

ಅಂದಿನಿಂದ ಇಂದಿನವರೆಗೆ ಈ ಸಂಘವು ಪತ್ರಕರ್ತರ ಹಿತಾಸಕ್ತಿ, ವರದಿಗಾರಿಕೆಯ ಸ್ವಾಯತ್ತತೆ ಹಾಗೂ ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸುತ್ತಾ ಬಂದಿದೆ. ಶ್ವೇತಭವನದ ವರದಿಗಾರರು ಕಾರ್ಯನಿರ್ವಹಿಸುವ ಪ್ರಮುಖ ಸ್ಥಳವೆಂದರೆ ‘ಜೇಮ್ಸ್ ಎಸ್. ಬ್ರಾಡಿ ಪ್ರೆಸ್ ಬ್ರೀಫಿಂಗ್ ರೂಮ್’. ವಿಶೇಷವೆಂದರೆ, ಈ ಆಧುನಿಕ ಪತ್ರಿಕಾಗೋಷ್ಠಿ ಕೊಠಡಿಯನ್ನು ಈ ಹಿಂದೆ ಅಧ್ಯಕ್ಷ‌ ಫ್ರಾಂಕ್ಲಿನ್ ಡಿ. ರೂಸ್‌ವೆಲ್ಟ್ ಅವರ ಈಜುಕೊಳ‌ ವಾಗಿದ್ದ ಸ್ಥಳದ ಮೇಲೆ ನಿರ್ಮಿಸಲಾಗಿದೆ. ಈ ಸಭಾಂಗಣದಲ್ಲಿ ಕೇವಲ 49 ಆಸನಗಳಿದ್ದು, ಯಾವ ಸುದ್ದಿ ಸಂಸ್ಥೆಯ ಪ್ರತಿನಿಧಿ ಎಲ್ಲಿ ಕುಳಿತುಕೊಳ್ಳಬೇಕು ಎಂಬುದನ್ನು ಶ್ವೇತಭವನದ ಸಿಬ್ಬಂದಿಯಲ್ಲ, ಬದಲಾಗಿ WHCA ಸಂಘಟನೆಯೇ ನಿರ್ಧರಿಸುತ್ತದೆ.

ಪ್ರಮುಖ ಟಿವಿ ನೆಟ್ವರ್ಕ್‌ಗಳು ಮತ್ತು ಪ್ರಸಿದ್ಧ ಪತ್ರಿಕೆಗಳ ವರದಿಗಾರರಿಗೆ ಮುಂಭಾಗದ ಸಾಲುಗಳಲ್ಲಿ ಆಸನಗಳನ್ನು ನಿಗದಿಪಡಿಸಲಾಗುತ್ತದೆ. ಈ ವರದಿಗಾರರ ದಿನನಿತ್ಯದ ಕಾಯಕವು ಅತ್ಯಂತ ವೇಗದ ಮತ್ತು ಒತ್ತಡದ ವಾತಾವರಣದಿಂದ ಕೂಡಿರುತ್ತದೆ. ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ನಡೆಸುವ ದೈನಂದಿನ ಪತ್ರಿಕಾಗೋಷ್ಠಿಗಳಲ್ಲಿ ಭಾಗವಹಿಸುವುದು ಇವರ ದಿನಚರಿಯ ಪ್ರಮುಖ ಭಾಗ. ಈ ಗೋಷ್ಠಿಗಳಲ್ಲಿ ದೇಶೀಯ ಮತ್ತು ವಿದೇಶಾಂಗ ನೀತಿಗಳು, ಆರ್ಥಿಕ ಬೆಳವಣಿಗೆಗಳು, ಯುದ್ಧ ಅಥವಾ ಬಿಕ್ಕಟ್ಟುಗಳ ಕುರಿತು ಪತ್ರಕರ್ತರು ನೇರ, ಚುರುಕಾದ ಹಾಗೂ ಕಠಿಣ ಪ್ರಶ್ನೆಗಳನ್ನು ಕೇಳುತ್ತಾರೆ.

ಇದರೊಂದಿಗೆ ಅಧ್ಯಕ್ಷರ ಓವಲ್ ಆಫೀಸ್ ಸಭೆಗಳು, ಬಿಲ್ ಸಹಿ ಮಾಡುವ ಸಮಾರಂಭಗಳು ಹಾಗೂ ಶ್ವೇತಭವನಕ್ಕೆ ಭೇಟಿ ನೀಡುವ ವಿದೇಶಿ ಗಣ್ಯರ ಆಗಮನದ ಸಂದರ್ಭಗಳಲ್ಲಿಯೂ ಹಾಜರಿದ್ದು ತಕ್ಷಣದ ವಿದ್ಯಮಾನಗಳನ್ನು ದಾಖಲಿಸುವುದು ಇವರ ಪ್ರಮುಖ ಕರ್ತವ್ಯವಾಗಿದೆ.

ಶ್ವೇತಭವನದಲ್ಲಿ ಸ್ಥಳಾವಕಾಶದ ಮಿತಿಯಿರುವುದರಿಂದ ಎಲ್ಲ ಪತ್ರಕರ್ತರು ಅಧ್ಯಕ್ಷರ ಪ್ರತಿ ಯೊಂದು ಕಾರ್ಯಕ್ರಮಕ್ಕೂ ನೇರವಾಗಿ ಹಾಜರಾಗಲು ಸಾಧ್ಯವಾಗುವುದಿಲ್ಲ. ಈ ಸಮಸ್ಯೆಯನ್ನು ನಿವಾರಿಸಲು ‘ಪ್ರೆಸ್ ಪೂಲ’ ಎಂಬ ವಿಶೇಷ ಹಾಗೂ ದಕ್ಷ ವ್ಯವಸ್ಥೆಯನ್ನು ರೂಪಿಸಲಾಗಿದೆ. ಈ ವ್ಯವಸ್ಥೆಯಡಿ ಒಂದು ಸಣ್ಣ ಪತ್ರಕರ್ತರ ತಂಡವು (ಮುದ್ರಣ, ಟಿವಿ, ರೇಡಿಯೋ ಮತ್ತು ಛಾಯಾಗ್ರಾಹಕರನ್ನು ಒಳಗೊಂಡಂತೆ) ಇಡೀ ಮಾಧ್ಯಮ ವೃಂದದ ಪರವಾಗಿ ಅಧ್ಯಕ್ಷರನ್ನು ನಿಕಟವಾಗಿ ಹಿಂಬಾಲಿಸುತ್ತದೆ.

ಅಧ್ಯಕ್ಷರು ಎಲ್ಲಿಗೇ ಹೋದರೂ, ಅವರ ಏರ್ ಫೋರ್ಸ್ ಒನ್ ವಿಮಾನದ ಪ್ರಯಾಣದಲ್ಲೂ ಈ ಪೂಲ್ ವರದಿಗಾರರು ಜತೆಯಲ್ಲಿರುತ್ತಾರೆ. ಅಲ್ಲಿ ನಡೆಯುವ ಪ್ರತಿಯೊಂದು ಮಾತುಕತೆ ಮತ್ತು ಘಟನೆಯ ವಿವರವಾದ ವರದಿಯನ್ನು ಬರೆದು, ಅವರು ಕ್ಷಣಮಾತ್ರದಲ್ಲಿ ಉಳಿದ ಎಲ್ಲ ಸದಸ್ಯ ಸಂಸ್ಥೆಗಳಿಗೂ ಹಂಚಿಕೊಳ್ಳುತ್ತಾರೆ.