ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಈ ಅಭಿವೃದ್ಧಿ ಯಾರಿಗಾಗಿ?

ಭಕ್ತರ ಸೌಲಭ್ಯ ಅಗತ್ಯವಿದ್ದರೂ, ಪ್ರಕೃತಿಯ ಸಮತೋಲನ ಕಾಪಾಡುವ ಜವಾಬ್ದಾರಿ ಅದಕ್ಕಿಂತಲೂ ಮುಖ್ಯವಾಗಬೇಕು. ಕುಕ್ಕೆ ಸುಬ್ರಮಣ್ಯ ಎಂಬುದು ಕೇವಲ ದೇವಾಲಯವಲ್ಲ - ಅದು ಪ್ರಕೃತಿ, ಭಕ್ತಿ ಮತ್ತು ಸಂಸ್ಕೃತಿಯ ಸಂಗಮ. ಅಲ್ಲಿನ ಕಾಡಿನ ನಿಶ್ಶಬ್ದ, ಕುಮಾರಧಾರೆ ನದಿಯ ತಣ್ಣನೆಯ ಹರಿವು, ಜನಜೀವನ ಇದೆ.

ಈ ಅಭಿವೃದ್ಧಿ ಯಾರಿಗಾಗಿ?

-

Profile
Ashok Nayak Jun 8, 2026 4:47 PM

ಪ್ರಸ್ತುತ

ನಿತಿನ್ ಮಲ್ಲಾರ

ಕುಕ್ಕೆ ಸುಬ್ರಮಣ್ಯ ಕ್ಷೇತ್ರದಂತಹ ಪವಿತ್ರ ಸ್ಥಳಗಳಲ್ಲಿ ಅಭಿವೃದ್ಧಿ ಎಂಬ ಹೆಸರಿನಲ್ಲಿ ನಡೆಯು ತ್ತಿರುವ ಅತಿಯಾದ ಕಾಂಕ್ರೀಟೀಕರಣ, ಆಧುನೀಕರಣ, ಕಟ್ಟಡಗಳ ನಿರ್ಮಾಣ ನಿಜಕ್ಕೂ ಆತಂಕ ಕಾರಿ ವಿಷಯವೇ ಆಗಿದೆ.

ಒಮ್ಮೆ ಪ್ರಕೃತಿಯ ಮಡಿಲಲ್ಲಿ ನೆಲೆಸಿದ್ದ, ಹಸಿರು ಕಾಡು, ನದಿ, ಮಲೆಗಳ ಮಧ್ಯೆ ದೇವರ ಸಾನ್ನಿಧ್ಯ ವನ್ನು ಮನಸಾರೆ ಅನುಭವಿಸಬಹುದಾಗಿದ್ದ ಈ ಕ್ಷೇತ್ರಗಳು ಇಂದು ನಿಧಾನವಾಗಿ ವಾಣಿಜ್ಯೀಕರಣ ಮತ್ತು ಅತಿಯಾದ ನಿರ್ಮಾಣಗಳ ಒತ್ತಡಕ್ಕೆ ಒಳಗಾಗುತ್ತಿರುವುದು ಬೇಸರ ಮೂಡಿಸುತ್ತದೆ.

ಭಕ್ತರ ಸೌಲಭ್ಯ ಅಗತ್ಯವಿದ್ದರೂ, ಪ್ರಕೃತಿಯ ಸಮತೋಲನ ಕಾಪಾಡುವ ಜವಾಬ್ದಾರಿ ಅದಕ್ಕಿಂತಲೂ ಮುಖ್ಯವಾಗಬೇಕು. ಕುಕ್ಕೆ ಸುಬ್ರಮಣ್ಯ ಎಂಬುದು ಕೇವಲ ದೇವಾಲಯವಲ್ಲ - ಅದು ಪ್ರಕೃತಿ, ಭಕ್ತಿ ಮತ್ತು ಸಂಸ್ಕೃತಿಯ ಸಂಗಮ. ಅಲ್ಲಿನ ಕಾಡಿನ ನಿಶ್ಶಬ್ದ, ಕುಮಾರಧಾರೆ ನದಿಯ ತಣ್ಣನೆಯ ಹರಿವು, ಜನಜೀವನ ಇದೆ. ಪಶ್ಚಿಮ ಘಟ್ಟಗಳ ಹಸಿರು ವಾತಾವರಣವೇ ಆ ಕ್ಷೇತ್ರದ ಆತ್ಮವಾಗಿದೆ. ಆ ಆತ್ಮವನ್ನು ಕಳೆದುಕೊಳ್ಳುವ ರೀತಿಯ ಅಭಿವೃದ್ಧಿ ದೀರ್ಘಕಾಲದಲ್ಲಿ ಕ್ಷೇತ್ರದ ವೈಶಿಷ್ಟ್ಯವನ್ನೇ ಮಸುಕಾಗಿಸಬಹುದು.

ಇದನ್ನೂ ಓದಿ: Kukke Subrahmanya Temple: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಿರುಷಷ್ಠಿ, ಅನ್ಯಧರ್ಮೀಯರಿಗೆ ಆಹ್ವಾನಕ್ಕೆ ವಿರೋಧ

ಕುಕ್ಕೆಯ ಪಕ್ಕದ ಪ್ರದೇಶಗಳಾದ ಐನೆಕಿದು, ಬಾಳುಗೋಡು, ಏನೆಕಲ್ಲು, ಕಜೆ, ಕೈಕಂಬ ಮೊದಲಾದ ಕಡೆಗಳಲ್ಲಿ ಯೋಜಿತ ರೀತಿಯಲ್ಲಿ ವಸತಿ, ವಾಹನ ನಿಲ್ದಾಣ, ವಾಣಿಜ್ಯ ಸಂಕೀರ್ಣಗಳು ಮತ್ತು ಪ್ರವಾಸೋದ್ಯಮ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿದ್ದರೆ, ಕ್ಷೇತ್ರದ ಮೇಲಿನ ಒತ್ತಡವೂ ಕಡಿಮೆಯಾಗುತ್ತಿತ್ತು ಮತ್ತು ಪರಿಸರವೂ ಉಳಿಯುತ್ತಿತ್ತು.

ಇದು ಕ್ಷೇತ್ರದ ಸಂರಕ್ಷಣೆ ಜೊತೆಗೆ ಸಮತೋಲನದ ಅಭಿವೃದ್ಧಿ ಎನ್ನುವ ದಾರಿಯಾಗಬಹುದಿತ್ತು. ಕುಕ್ಕೆ ಸುಬ್ರಹ್ಮಣ್ಯ ಮೊದಲು ನಾನಾ ಬಗೆಯ ಸರ್ಪಗಳ ತವರು. ಇಲ್ಲಿನ ಕನ್ನಡಿ ಹೊಳೆಯಂತೂ ಕನ್ನಡಿಯಂತೆ ಸ್ವಚ್ಛವಾಗಿತ್ತು. ಆದರೆ ಅಭಿವೃದ್ಧಿಯ ಹೊಳೆಯಿಂದಾಗಿ ಕನ್ನಡಿ ಹೊಳೆ ಕಲುಷಿತ ವಾಗಿದೆ. ಸರ್ಪಗಳು ಈಗ ಕಾಣಸಿಗಲಾರವು.

ಕುಕ್ಕೆಯಂತೆಯೇ ರಾಜ್ಯದಲ್ಲಿ ಇನ್ನೂ ಹಲವು ಕ್ಷೇತ್ರಗಳಿವೆ. ಇದರಲ್ಲಿ ಕೆಲವು ಖಾಸಗಿಯವರಿಗೆ ಸೇರಿವೆ. ಅಲ್ಲೂ ಅಭಿವೃದ್ಧಿಯ ಭರಾಟೆ ನಡೆದಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಬರುವ ಭಕ್ತರು ತಂಗಲು ವಸತಿಗೃಹಗಳು ಲೆಕ್ಕವಿಲ್ಲದಷ್ಟು ಹುಟ್ಟಿಕೊಳ್ಳುತ್ತಿವೆ. ಈ ಭಕ್ತರಿಗೆ ಊಟ ತಿಂಡಿ ನೀಡಲು ಹೋಟೆಲುಗಳು ಸೃಷ್ಟಿಯಾಗುತ್ತಿವೆ. ಆದರೆ ಈ ಹೊಟೆಲ್‌ಗಳಲ್ಲಿ ಅಲ್ಲಿನ ಸ್ಥಳೀಯ ಖಾದ್ಯ ವೈವಿಧ್ಯಗಳು ಸಿಗುವುದೇ ಅಲ್ಲ. ಮತ್ತದೇ ಬೆಂಗಳೂರಿನ ತಿಂಡಿಗಳು. ಉತ್ತರ ಭಾರತದ ರೋಟಿ, ನಾನ್, ಕುಲ್ಚಾಗಳು ಎಲ್ಲ ದಂಡಿಯಾಗಿ ಸಿಗುತ್ತವೆ.

ಹೀಗೆ ಆಧುನೀಕರಣಗೊಂಡಲ್ಲಿ ಸ್ಥಳೀಯರಿಗೆ ಕೆಲಸಗಳು ಸಿಕ್ಕಿದರೆ ಪರವಾಗಿಲ್ಲ. ಆದರೆ ಹಾಗಾಗು ವುದೇ ಇಲ್ಲ. ಸ್ಥಳೀಯರ ಬದಲು ಇಲ್ಲಿ ಬಿಹಾರಿಗಳು, ಉತ್ತರ ಪ್ರದೇಶದವರು ಬಂದು ನೆಲೆಸುತ್ತಾರೆ. ಪಾರ್ಕಿಂಗ್, ಶೌಚಗೃಹ ಕಾಯುವಿಕೆ ಮುಂತಾದ ಕಡೆಗಳಲ್ಲಿ ಈಗಾಗಲೇ ಉತ್ತರ ಭಾರತೀಯರು ಇದ್ದಾರೆ. ನಿಧಾನವಾಗಿ ಇವರು ಇನ್ನೂ ಹಲವರನ್ನು ಅಲ್ಲಿಂದ ಕರೆದುಕೊಂಡು ಬಂದು ಇಲ್ಲಿ ಕಾಲನಿಗಳನ್ನೇ ಸೃಷ್ಟಿಸುತ್ತಿದ್ದಾರೆ.

ಚಿಕ್ಕಮಗಳೂರು ಮುಂತಾದ ಕಡೆಗಳಲ್ಲಿ ಇವರ ಕಾಲನಿಗಳು ಈಗಾಗಲೇ ಇವೆ. ನಿಧಾನವಾಗಿ ಇವು ಸುಬ್ರಹ್ಮಣ್ಯ, ಧರ್ಮಸ್ಥಳ, ಹೊರನಾಡು, ಶೃಂಗೇರಿಗಳಲ್ಲೂ ಕಂಡುಬಂದರೆ ಆಶ್ಚರ‍್ಯವಿಲ್ಲ. ನಮ್ಮ ದೇಶದ ಸಂವಿಧಾನದ ಪ್ರಕಾರ ಯಾರೂ ಎಲ್ಲೂ ಕೆಲಸ ಮಾಡಬಹುದು. ಆದರೆ ಸ್ಥಳೀಯ ಜನಜೀವನ, ಬದುಕಿನ ವೈಖರಿ ಏರುಪೇರು ಆಗಬಾರದು. ಅಭಿವೃದ್ಧಿ ಅಗತ್ಯವೇ ಸರಿ, ಆದರೆ ಅದು ಪ್ರಕೃತಿಯನ್ನು ಅಳಿಸಿ ಮಾಡುವ ಅಭಿವೃದ್ಧಿಯಾಗಬಾರದು.