Janamejaya Umarji Column: ಕೆಂಪು ಕಾರಿಡಾರಿನ ಅಂತ್ಯ ಎಂದಿದ್ದೇಕೆ ಪ್ರಧಾನಿ ಮೋದಿ ?
ಭಾರತದ ಮಧ್ಯ ಮತ್ತು ಪೂರ್ವ ಭಾಗಗಳಲ್ಲಿ ಎಡಪಂಥೀಯ ಉಗ್ರವಾದದಿಂದ, ಮುಖ್ಯವಾಗಿ ನಕ್ಸಲ/ ಮಾವೋವಾದಿಗಳಿಂದ ಶೋಷಣೆಗೊಳಗಾದ ಜಿಲ್ಲೆಗಳ ದೊಡ್ಡ ಭಾಗವೇ ಕೆಂಪು ಕಾರಿಡಾರ್. ಛತ್ತೀಸ್‌ಗಢ, ಜಾರ್ಖಂಡ್, ಒಡಿಶಾ, ಬಿಹಾರ, ಆಂಧ್ರಪ್ರದೇಶ (ಆಖಂಡ), ಮಹಾ ರಾಷ್ಟ್ರ, ಪಶ್ಚಿಮ ಬಂಗಾಳ ಈ ರಾಜ್ಯಗಳ ಹಲವು ಜಿಲ್ಲೆಗಳು ಹಿಂದೆ ಈ ಕೆಂಪು ಕಾರಿಡಾರಿನ ಭಾಗವಾಗಿದ್ದವು.
-
ವಿಶ್ಲೇಷಣೆ
ಜನಮೇಜಯ ಉಮರ್ಜಿ
ಬಿಹಾರ ಚುನಾವಣೆಯ ಪಾಠ ಬಹಳ ಸ್ಪಷ್ಟ. ಕೆಂಪು ಕಾರಿಡಾರ್ ಈಗ ಭಾರತದಲ್ಲಿ ತನ್ನ ಅಂತಿಮ ಉಸಿರಿನಲ್ಲಿದೆ. ಹಲವು ದಶಕಗಳ ಕಾಲ ಕ್ರಾಂತಿ ಹೆಸರಿನಲ್ಲಿ ದಾರಿದ್ರ್ಯ, ಹಿಂಸೆ, ಭಯ ಮತ್ತು ಪ್ರತ್ಯೇಕತೆಯನ್ನು ಬೆಳೆಸಿದ ಎಡಪಂಥೀಯ ವ್ಯವಸ್ಥೆಯು ಜನರ ಜಾಗೃತಿ ಯಿಂದಾಗಿ ಬಿರುಕು ಬಿಟ್ಟಿದೆ. ಬಿಹಾರದಲ್ಲಿ ಜನರು ಅಭಿವೃದ್ಧಿಯನ್ನೇ ಆರಿಸಿಕೊಂಡರು, ತುಷ್ಟೀಕರಣಕ್ಕೆ ‘ಇಲ್ಲ’ ಎಂದರು.
ಇತ್ತೀಚೆಗಷ್ಟೇ ಬಿಹಾರ ವಿಧಾನಸಭಾ ಚುನಾವಣೆ ಮುಗಿದಿದೆ. ಅದರ ಫಲಿತಾಂಶವು ಹಲವು ಅಚ್ಚರಿಗಳಿಗೆ ಸಾಕ್ಷಿಯಾಗಿದೆ. ಗೆದ್ದವರು ಮತ್ತು ಸೋತವರು ಅವರವರದೇ ರೀತಿಯಲ್ಲಿ ಅದನ್ನು ವಿಶ್ಲೇಷಣೆ ಮಾಡಿಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಂತೂ ಫಲಿತಾಂಶಕ್ಕಿಂತ ಅದು ತರುವ ಪರಿಣಾಮಗಳ ಕುರಿತೇ ಹೆಚ್ಚು ಚರ್ಚೆ ನಡೆದಿದೆ.
“ಮತಗಳವಿನ ಆರೋಪಕ್ಕೆ ಜನರಿಂದ ಉತ್ತರ ದೊರೆತಿದೆ. ‘ಮತಾಧಿಕಾರ ಯಾತ್ರೆ’ ಯಶಸ್ಸು ಕಂಡಿಲ್ಲ. ಮಹಿಳಾ ಮತ್ತು ಯುವ ಮತದಾರರ ಮೇಲೆ ‘ನಿಮೋ’ ಎಫೆಕ್ಟ್ ಕೆಲಸ ಮಾಡಿದೆ. ಡಬಲ್ ಎಂಜಿನ್ ಸರಕಾರಕ್ಕೆ ಜನ ಜೈ ಎಂದಿದ್ದಾರೆ" ಎಂಬೆಲ್ಲ ವಿಶ್ಲೇಷಣೆಗಳು ಎನ್‌ಡಿಎ ಒಕ್ಕೂಟದ ಕಡೆಯಿಂದ ಬರುತ್ತಿವೆ.
“ಇದು ಹತ್ತು ಸಾವಿರ ರುಪಾಯಿ ಕೊಟ್ಟ ಗೆಲುವು" ಎಂಬ ಟೀಕೆಗಳು ಮಹಾಘಟಬಂಧನದ ಕಡೆಯಿಂದ ಬರುತ್ತಿವೆ. ಇವೆಲ್ಲದರ ನಡುವೆ ಮಾನ್ಯ ಪ್ರಧಾನ ಮಂತ್ರಿಗಳು ವಿಜಯೋತ್ಸವ ದಲ್ಲಿ ಆಡಿದ ಒಂದು ಮಾತು ದೇಶದ ಗಮನ ಸೆಳೆದಿದೆ. “ಬಿಹಾರದ ಗೆಲುವು ಕೆಂಪು ಕಾರಿಡಾರಿಗೆ ಅಂತ್ಯ ಹಾಡಿದೆ" ಎಂಬ ಪ್ರಧಾನಿಗಳ ಮಾತು ಆಶ್ಚರ್ಯ ಎನಿಸಿದರೂ ಸತ್ಯವಾಗಿದೆ.
ಇದನ್ನೂ ಓದಿ: Janamejaya Umarji Column: ಸಿದ್ಧಾಂತದ ಹೇರಿಕೆಗೆ ಸರಕಾರಿ ಯಂತ್ರದ ದುರ್ಬಳಕೆ
ಕೇರಳ, ಬಂಗಾಳ, ಛತ್ತೀಸ್‌ಗಢ, ತ್ರಿಪುರಾಗಳಲ್ಲಿ ಈ ಮಾತು ಹೇಳಿದರೆ ಹೌದು ಎನ್ನಬಹುದು. ಅಲ್ಲಿ ಮಾವೋವಾದಿಗಳಿದ್ದಾರೆ, ನಕ್ಸಲರಿದ್ದಾರೆ, ಅವರು ಬಲವಾಗಿದ್ದಾರೆ. ಬಿಹಾರದಲ್ಲಿ ಏನು? ಎಂದು ಕುತೂಹಲ ಮೂಡಬಹುದು. ಕಮ್ಯುನಿಸ್ಟರಿಗೆ ದೇಶ, ರಾಜ್ಯ, ಲಿಂಗ, ವರ್ಗ ಕೊನೆಗೆ ಪಕ್ಷಗಳ ಹಂಗೂ ಇಲ್ಲ; ಒಟ್ಟಿನಲ್ಲಿ ಪ್ರತ್ಯಕ್ಷವೋ ಪರೋಕ್ಷವೋ ಅವರ ಸಿದ್ಧಾಂತ ಆಳಿದರೆ ಆಯಿತು.
ಭಾರತದ ಮಧ್ಯ ಮತ್ತು ಪೂರ್ವ ಭಾಗಗಳಲ್ಲಿ ಎಡಪಂಥೀಯ ಉಗ್ರವಾದದಿಂದ, ಮುಖ್ಯ ವಾಗಿ ನಕ್ಸಲ್/ ಮಾವೋವಾದಿಗಳಿಂದ ಶೋಷಣೆಗೊಳಗಾದ ಜಿಲ್ಲೆಗಳ ದೊಡ್ಡ ಭಾಗವೇ ಕೆಂಪು ಕಾರಿಡಾರ್. ಛತ್ತೀಸ್‌ಗಢ, ಜಾರ್ಖಂಡ್, ಒಡಿಶಾ, ಬಿಹಾರ, ಆಂಧ್ರಪ್ರದೇಶ (ಆಖಂಡ), ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಈ ರಾಜ್ಯಗಳ ಹಲವು ಜಿಲ್ಲೆಗಳು ಹಿಂದೆ ಈ ಕೆಂಪು ಕಾರಿಡಾರಿನ ಭಾಗವಾಗಿದ್ದವು.
ಬಡತನ, ಸರಕಾರದ ನಿರ್ಲಕ್ಷ್ಯ, ಬುಡಕಟ್ಟು ಪ್ರದೇಶಗಳಲ್ಲಿ ಕಾಣದ ಅಭಿವೃದ್ಧಿ, ಕಾನೂನು ಸುವ್ಯವಸ್ಥೆಯ ಕೊರತೆ ಇವೆಲ್ಲವುಗಳನ್ನು ಬಂಡವಾಳ ಮಾಡಿಕೊಂಡು, ಕಾನೂನು ಕೈಗೆತ್ತಿ ಕೊಳುವಂತೆ ಜನರನ್ನು ಪ್ರೇರೇಪಿಸುವ ಚಳವಳಿ ಇಲ್ಲಿ ಜೋರಾಗಿ ಇತ್ತು. ಹಲವು ದಶಕ ಗಳಿಂದ ಕೆಂಪು ಕಾರಿಡಾರ್ ಎಡಪಂಥೀಯ ಸಿದ್ಧಾಂತಕ್ಕೆ ಸಹಾನುಭೂತಿಯ ರಾಜಕೀಯ ಸಂಸ್ಕೃತಿಯನ್ನು ಸೃಷ್ಟಿಸಿತ್ತು, ಇದು ಮತದಾನದ ಮಾದರಿಗಳ ಮೇಲೆ ಪ್ರಭಾವ ಬೀರು ತ್ತಿತ್ತು.
ಕೆಂಪು ಕಾರಿಡಾರ್ ಹಿಂಸಾಪೀಡಿತ ವಲಯಗಳಲ್ಲಿ ಒಂದಾಗಿತ್ತು. ಸ್ಥಳೀಯ ಚುನಾವಣೆ ಗಳು, ಅಭ್ಯರ್ಥಿ ಆಯ್ಕೆ, ಮತದಾನದ ಮಾದರಿಗಳು, ಗ್ರಾಮ ಮಟ್ಟದ ಆಡಳಿತಾತ್ಮಕ ನಿಯಂತ್ರಣ ಎಲ್ಲವೂ ಇತ್ತು. ಈ ಹಿಡಿತವು ಸಹಜವಾಗಿಯೇ ಬಿಜೆಪಿ ವಿರೋಧಿ ಸೈದ್ಧಾಂತಿಕ ವಾತಾವರಣವನ್ನು ಸೃಷ್ಟಿಸಿತ್ತು.
ಏಕೆಂದರೆ ಮಾವೋವಾದಿಗಳು ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು ತಮ್ಮ ಸೈದ್ಧಾಂತಿಕ ಶತ್ರುಗಳು ಎಂದು ಪರಿಗಣಿಸಿವೆ. ಕಳೆದ 20-25 ವರ್ಷಗಳಲ್ಲಿ ಕೆಂಪು ಚಳವಳಿ ಜನರ ನಂಬಿಕೆ ಕಳೆದುಕೊಳ್ಳುತ್ತಾ ಬಂದಿದೆ. ಒಂದೊಂದೇ ಜಿಲ್ಲೆಗಳು ಕೆಂಪು ಕಾರಿಡಾರಿನಿಂದ ಹೊರ ಬಂದು ಅಭಿವೃದ್ಧಿಯ ಹೆದ್ದಾರಿ ಹಿಡಿಯಹತ್ತಿವೆ. ಮೋದಿ ಸರಕಾರವು ತನ್ನ ಪ್ರಸಕ್ತ ಅವಧಿ ಯಲ್ಲಿ ಕೆಂಪು ಉಗ್ರವಾದವನ್ನು ಶೂನ್ಯ ಗೊಳಿಸುವ ಗುರಿ ಹೊಂದಿದೆ.
ಬಿಹಾರದಲ್ಲಿ ಅದರ ದಕ್ಷಿಣ ಭಾಗವು ಕೆಂಪು ಉಗ್ರವಾದದಿಂದ ಹೆಚ್ಚು ಪೀಡಿತವಾಗಿತ್ತು. ಗಯಾ, ಅರವಲ, ಔರಂಗಾಬಾದ್, ಕಯಮೂರು, ಭೋಜಪುರ ಮುಂತಾದ ಜಿಲ್ಲೆಗಳಲ್ಲಿ ಅದರ ಪ್ರಭಾವ ದಟ್ಟವಾಗಿತ್ತು. ಬಿಹಾರದ ಜಾತಿ ಸಮೀಕರಣ ವಿಚಿತ್ರವಾಗಿದೆ. ಸಣ್ಣ ಪುಟ್ಟ ಜನಸಂಖ್ಯೆಯ ಬಹಳ ಜಾತಿಗಳಿವೆ.
ಇಲ್ಲಿನ ಜಾತಿ ಜಗಳಗಳನ್ನು ವರ್ಗ ಸಂಘರ್ಷವಾಗಿ ಒಂದು ಕಡೆ ಕಮ್ಯುನಿಸ್ಟರು ಒಡೆಯು ತ್ತಿದ್ದರೆ, ಇನ್ನೊಂದು ಕಡೆ ಮುಸ್ಲಿಂ-ಯಾದವ ಸಮೀಕರಣ ಜೋರಾಗಿ ಇತ್ತು. 1980-2005ರ ಅವಧಿಯಲ್ಲಿ, ರಸ್ತೆಗಳಿಲ್ಲ, ಶಾಲೆಗಳಿಲ್ಲ, ಆಸ್ಪತ್ರೆಗಳಿಲ್ಲ ಎಂಬುದಕ್ಕಿಂತ ಜಾತಿಗಳ ನಡು ವಿನ ಜಗಳ, ದುರ್ಬಲ ಕಾನೂನು ಮತ್ತು ಸುವ್ಯವಸ್ಥೆಯ ಶೂನ್ಯವನ್ನು ನಕ್ಸಲರು ಆವರಿಸಿ ದರು.
ವಾಸ್ತವದಲ್ಲಿ ಸಮಾನಾಂತರ ವ್ಯವಸ್ಥೆ ಇವರದೇ ಇರುತ್ತಿತ್ತು. ಬಿಹಾರದಲ್ಲಿನ ‘ಜಂಗಲ್ ರಾಜ್’ಗೆ ಇವರ ಕೊಡುಗೆಯೂ ಇದೆ. 2020ರ ಚುನಾವಣೆಯಲ್ಲಿ ‘ಸಿಪಿಐ-ಎಂಲ್’ ಗೆದ್ದುದು ೧೨ ಸ್ಥಾನಗಳು, ಅದು ಹಿಂದೆಂದೂ ಆಗಿರದ ಬೃಹತ್ ಗೆಲುವಾಗಿತ್ತು. ಸಮಾಜವಾದದ ಹೆಸರಿನ ಮತಗಳು ಬಿಜೆಪಿ ವಿರೋಧಿಯಾಗಿ ಬರುತ್ತಿದ್ದುದು ಈವರೆಗಿನ ವಾಸ್ತವವಾಗಿತ್ತು. ಅದು ‘ಇಂಡಿಯ’ ಮೈತ್ರಿಕೂಟಕ್ಕೆ ಲಾಭ.
ಅವಧಿ ಮೀರಿಯೂ ಕಲಿಕೆಯಲ್ಲಿರುವ ಜೆಎನ್‌ಯು, ಪಟನಾ ವಿಶ್ವವಿದ್ಯಾಲಯದ ಎಡ ವಿದ್ಯಾರ್ಥಿಗಳ ದಂಡು ಚುಣಾವಣೆಯಲ್ಲಿ ಬೆವರು ಹರಿಸುತ್ತಿತ್ತು. ಖಟಾಖಟ್ ಗ್ಯಾರಂಟಿ ಘೋಷಣೆಯ ಮೂಲಕ ಕೆಂಪು ಗುಂಪು ಚುಣಾವಣೆಗೆ ತಯಾರಾಗಿತ್ತು ಜತೆಗೆ ‘ಎಂ-ವೈ’ ಘಟಬಂಧನದಲ್ಲಿ ಗೆಲುವಿನ ಹುಮ್ಮಸ್ಸು ತಂದಿತ್ತು.
ಜಂಗಲ್ ರಾಜ್‌ನ ಹಿಂದಿನ ಆಡಳಿತವೂ ನೆನಪಾಯಿತು. ಜನರು ಜಾಗೃತರಾದರು. ಈ ಬಾರಿಯ ಚುಣಾವಣೆಯು ತುಷ್ಟೀಕರಣದ ಸೆಕ್ಯುಲರಿಸಮ್ಮಿನ ಮೇಲೆ ಜಾತಿಗಳನ್ನು ಜೋಡಿ ಸುವ ಹಿಂದೂ ಸಮಾಜವಾದದ ಗೆಲುವೆಂದೇ ಹೇಳಬಹುದು.
ಕಮ್ಯುನಿಸ್ಟ್ ನಾಟಕಕ್ಕೆ ಜನ ಸ್ಪಷ್ಟವಾಗಿ ‘ಇಲ್ಲ’ ಎಂದರು. ಮಾವೋವಾದಿಗಳ ಪೀಡಿತ ಜಿಲ್ಲೆಗಳಲ್ಲೂ ಎನ್ ಡಿಎಗೆ ದಂಡಿಯಾಗಿ ವೋಟುಗಳು ಬಂದಿವೆ. ಜನ ಅಭಿವೃದ್ಧಿಗೆ ಮತ ಹಾಕಿದ್ದಾರೆ. ಈ ಫಲಿತಾಂಶವು ನೇರವಾಗಿ ಸೋತವರಿಗಿಂತ ಎಡಪಂಥೀಯರಿಗೆ ಕಸಿವಿಸಿ ತಂದಿದೆ. ಹೀಗಾಗಿ ಫಲಿತಾಂಶ ವಿಶ್ಲೇಷಣೆ, ಮತ ಚೋರಿ ಆಂದೋಲನ, ಚುನಾವಣಾ ಆಯೋಗದ ಮೇಲೆ ಗೂಬೆ ಕೂರಿಸುವುದು, ಎಸ್‌ಐಆರ್ ವಿರೋಧಗಳಲ್ಲಿ ಕಮ್ಯುನಿಸ್ಟರೇ ಮುಂಚೂಣಿಯಲ್ಲಿದ್ದಾರೆ.
ರಾಜ್ಯದ ಮೇಲೆ ಇದರ ಪರಿಣಾಮ ಏನಾಗಬಹುದು ಎಂಬ ಕುತೂಹಲವಂತೂ ಇದೆ. ಇಲ್ಲಿನ ಕಮ್ಯುನಿಸ್ಟರು ಸಾಮಾಜಿಕ ಜಾಲತಾಣಗಳಲ್ಲಿ, ವೇದಿಕೆಗಳಲ್ಲಿ ಸಾಂತ್ವನ ಹೇಳಿ ಕೊಳ್ಳುತ್ತಿದ್ದಾರೆ. ಈ ಚುನಾವಣಾ ಫಲಿತಾಂಶವನ್ನು, ಪ್ರಭಾವಿ ಮಾಜಿ ಪತ್ರಕರ್ತರೊಬ್ಬರು ಬಹಳ ತಲೆಗೆ ಹಚ್ಚಿಕೊಂಡಂತೆ ಕಾಣುತ್ತಿದೆ. ಅದು ಅವಶ್ಯವೂ ಆಗಿದೆ.
ಏಕೆಂದರೆ, ಕರ್ನಾಟಕದ ಮುಖ್ಯಮಂತ್ರಿಗಳನ್ನು ಇದೇ ಬಿಹಾರ ಚುನಾವಣೆ ಹಿಂದೆ ಮುಂದೆ ದೇಶದ ಅಹಿಂದ ನಾಯಕರಾಗಿ ಬಿಂಬಿಸಲು ‘ಇಂಡಿಯ’ ಕೂಟ ಪ್ರಯತ್ನಪಟ್ಟಿದೆ. ಬಿಹಾರದ ಫಲಿತಾಂಶವು ನವೆಂಬರ್ ಕ್ರಾಂತಿಯನ್ನು ಇಲ್ಲವಾಗಿಸಿದೆ ಎಂದು ಒಂದು ಬಣ ಹೇಳುತ್ತಿದ್ದರೆ, ‘ಹಿಂದುತ್ವದ ಬಗ್ಗೆ ಎಚ್ಚರಗೊಳ್ಳದಿದ್ದರೆ ಎಲ್ಲ ಕಡೆ ಇದೇ ಗತಿ.
ಮಾತು ಕೊಟ್ಟಂತೆ ಅಧಿಕಾರ ಬಿಟ್ಟುಕೊಡಿ’ ಎಂದು ಇನ್ನೊಂದು ಬಣ ಹಟ ಹಿಡಿದಿದೆ. ಬಿಹಾರದ ಸೋಲಿಗೆ ಪ್ರತಿಕ್ರಿಯೆ ನೀಡಿದ ಪ್ರಭಾವಿ ಮಂತ್ರಿಗಳು, ‘ಕರ್ನಾಟಕದಲ್ಲಿ ಹಾಗಾ ಗಲು ಸಾಧ್ಯವಿಲ್ಲ; ಏಕೆಂದರೆ ಇಲ್ಲಿ ಅಹಿಂದ ಕೋಟೆ ಭದ್ರವಾಗಿದೆ’ ಎಂಬ ಸಂದೇಶ ವನ್ನು ಪದೇ ಪದೆ ನೀಡುತ್ತಿದ್ದಾರೆ.
ಕರ್ನಾಟಕದಲ್ಲಿ ಕಮ್ಯುನಿಸ್ಟರ ಕೈಲಾಡುವ ಸರಕಾರವಿದೆ ಮತ್ತು ಅವಧಿಪೂರ್ಣವೂ ಇದುವೇ ಇರಬೇಕಾಗಿದೆ. ಕಮ್ಯುನಿಸ್ಟರ ಪ್ರಭಾವಕ್ಕೆ ಉದಾಹರಣೆ ನೀಡಬಹುದು ಎಂದಾ ದರೆ, ಇತ್ತೀಚೆಗೆ ಮಂತ್ರಿಯೊಬ್ಬರು ಆರ್‌ಎಸ್‌ಎಸ್ ನಿಷೇಧಿಸಲು ಪತ್ರ ಬರೆಯುತ್ತಾರೆ. ತಕ್ಷಣ ಅದನ್ನು ಸರಕಾರ ಜಾರಿಗೊಳಿಸುತ್ತದೆ. ಅದಕ್ಕೆ ನ್ಯಾಯಾಲಯ ನಂತರ ತಡೆ ನೀಡುತ್ತದೆ.
ಅಷ್ಟರವರೆಗೆ ಕಮ್ಯುನಿಸ್ಟರದು ನಡೆಯುತ್ತದೆ. ಬುರುಡೆ ಹಿಡಿದುಕೊಂಡು ಒಬ್ಬ ಬರುತ್ತಾನೆ, ಆತನ ಪೂರ್ವಾಪರ ವಿಚಾರಿಸದೇ ‘ಎಸ್‌ಐಟಿ’ಯ ರಚನೆಯಾಗುತ್ತದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಈ ಮೊದಲು ಏನು ನಡೆದಿತ್ತು ಎಂಬ ಗೋಜಿಗೆ ಹೋಗದೆ ಇದು ರಚನೆಯಾಗುತ್ತದೆ. ತಂಡದಲ್ಲಿ ಯಾರಿರಬೇಕು ಎನ್ನುವಷ್ಟರ ಮಟ್ಟಿಗೆ ಕಮ್ಯುನಿಸ್ಟರದು ನಡೆಯುತ್ತದೆ. ಈಗ ಮಧ್ಯಂತರ ವರದಿ ಸಲ್ಲಿಕೆಯಾಗಿದೆ. ಇನ್ನೊಂದು ಕನೇರಿ ಸ್ವಾಮಿಗಳ ಪ್ರಕರಣ.
ಎಂಟು ಜನ ಕಮ್ಯುನಿಸ್ಟರು ನೀಡುವ ಮನವಿಯ ಮೇರೆಗೆ ಜಿಲ್ಲಾಡಳಿತವು ಕಾಗದ ಪತ್ರಗಳನ್ನು ಸಿದ್ಧಪಡಿಸಿಕೊಂಡು ತಕ್ಷಣ ನಿರ್ಬಂಧವನ್ನು ನಿಶ್ಚಯಿಸುತ್ತದೆ. ಈ ಘಟನೆ ಗಳನ್ನು ನೋಡಿದಾಗ ಕರ್ನಾಟಕದಲ್ಲಿ ರೆಡ್ ಕಾರಿಡಾರಿನದ್ದೇ ಕಾರುಬಾರು ಎನಿಸದೇ ಇರದು.
ಬಿಹಾರ ಚುನಾವಣೆಯ ಪಾಠ ಬಹಳ ಸ್ಪಷ್ಟ. ಕೆಂಪು ಕಾರಿಡಾರ್ ಈಗ ಭಾರತದಲ್ಲಿ ತನ್ನ ಅಂತಿಮ ಉಸಿರಿನಲ್ಲಿದೆ. ಹಲವು ದಶಕಗಳ ಕಾಲ ಕ್ರಾಂತಿ ಹೆಸರಿನಲ್ಲಿ ದಾರಿದ್ರ್ಯ, ಹಿಂಸೆ, ಭಯ ಮತ್ತು ಪ್ರತ್ಯೇಕತೆಯನ್ನು ಬೆಳೆಸಿದ ಎಡಪಂಥೀಯ ವ್ಯವಸ್ಥೆಯು ಜನರ ಜಾಗೃತಿ ಯಿಂದಾಗಿ ಬಿರುಕು ಬಿಟ್ಟಿದೆ.
ಬಿಹಾರದಲ್ಲಿ ಜನರು ಅಭಿವೃದ್ಧಿಯನ್ನೇ ಆರಿಸಿಕೊಂಡರು, ತುಷ್ಟೀಕರಣಕ್ಕೆ ‘ಇಲ್ಲ’ ಎಂದರು, ಜಾತಿ-ವರ್ಗ- ವೋಟು ಬ್ಯಾಂಕ್‌ಗಳ ಮೇಲೆ ನಿಂತಿದ್ದ ಕಮ್ಯುನಿಸ್ಟ್ -ಸೆಕ್ಯುಲರ್ ರಾಜಕಾರಣವನ್ನು ನಿರಾಕರಿಸಿದರು. ಪ್ರಧಾನಿಯವರು ಹೇಳಿದ “ಬಿಹಾರದ ಗೆಲುವು ಕೆಂಪು ಕಾರಿಡಾರಿನ ಅಂತ್ಯ" ಎಂಬ ವಾಕ್ಯವು ತಾತ್ವಿಕವಾಗಿ ನಿಖರವಾಗಿದೆ: ಅದು ಕೇವಲ ಚುನಾ ವಣಾ ಫಲಿತಾಂಶವಲ್ಲ, ಜತೆಗೆ ಒಂದು ಸೈದ್ಧಾಂತಿಕ ಸೋಲಿನ ಘೋಷಣೆ.
ಕರ್ನಾಟಕದಲ್ಲಿ ಕೆಂಪು ಕಾರಿಡಾರಿನಂಥ ಗಂಭೀರ ವ್ಯವಸ್ಥೆ ಇಲ್ಲದಿದ್ದರೂ, ಕಮ್ಯುನಿಸ್ಟರಿಗೆ ಇನ್ನೂ ಹುಲ್ಲುಗಾವಲಾಗಿ ಇದು ಉಳಿದಿದೆ. ಇದು ಇಲ್ಲಿಗೇ ಮುಗಿಯುವುದಿಲ್ಲ, ಇನ್ನೂ ನಾಲ್ಕು ರಾಜ್ಯಗಳ ಚುನಾವಣೆ ಬಂದಿದೆ. ಅಲ್ಲಿ ಮತ್ತೆ ಬೇರೆ ಬಣ್ಣವನ್ನು ಅದು ಪಡೆದು ಕೊಳ್ಳಬಹುದು.
ಜನತೆಯ ಜಾಗೃತಿ, ಬಿಹಾರದಲ್ಲಿ ಬದಲಾವಣೆಯನ್ನು ತಂದದ್ದು- ಕರ್ನಾಟಕದ ಭವಿಷ್ಯವನ್ನೂ ಅದೇ ರಕ್ಷಿಸಬಲ್ಲದು.
(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)