ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dr Vijay Darda Column: ರಷ್ಯಾದ ‘ಪ್ರಳಯ ವಿಮಾನ’ ಇರಾನ್‌ನಲ್ಲಿ ಲ್ಯಾಂಡ್ ಆಗಿದ್ದೇಕೆ?

‘ಡೂಮ್ಸ್‌ಡೇ ಪ್ಲೇನ್’ ಎಂಬುದು ಆಗಸದಲ್ಲೇ ಕಾರ್ಯನಿರ್ವಹಿಸುವ ಅತ್ಯಾಧುನಿಕ ಕಮಾಂಡ್ ಸೆಂಟರ್ ಇದ್ದಂತೆ. ಅಣ್ವಸ್ತ್ರ ದಾಳಿ ನಡೆದಾಗ ಅಥವಾ ತೀವ್ರತರ ರಾಷ್ಟ್ರೀಯ ತುರ್ತುಸ್ಥಿತಿ ಎದುರಾದಾಗ ಇದನ್ನು ಬಳಸಲಾಗುತ್ತದೆ. ಅಣ್ವಸ್ತ್ರ ದಾಳಿ ನಡೆದರೆ ದೇಶದ ಹಿರಿಯ ನಾಯಕರನ್ನು ಹಾಗೂ ಅತ್ಯುನ್ನತ ಅಧಿಕಾರಿಗಳನ್ನು ಈ ವಿಮಾನದಲ್ಲಿ ಕೂರಿಸಿಕೊಂಡು ಆಗಸಕ್ಕೆ ಕೊಂಡೊಯ್ಯ ಲಾಗುತ್ತದೆ. ಅವರು ಅಲ್ಲಿಂದಲೇ ರಾಜಕೀಯ ಹಾಗೂ ಮಿಲಿಟರಿ ಕಾರ್ಯಾಚರಣೆಗಳನ್ನು ನಿರ್ದೇಶಿಸುತ್ತಾರೆ.

ರಷ್ಯಾದ ‘ಪ್ರಳಯ ವಿಮಾನ’ ಇರಾನ್‌ನಲ್ಲಿ ಲ್ಯಾಂಡ್ ಆಗಿದ್ದೇಕೆ?

-

ಸಂಗತ

ಶತಾಯಗತಾಯ ಇರಾನ್ ದೇಶವನ್ನು ಮಂಡಿಯೂರಿಸಲೇಬೇಕು ಎಂದು ನಿರ್ಧರಿಸಿರುವ ಅಮೆರಿಕ, ಆ ನಿಟ್ಟಿನಲ್ಲಿ ತನ್ನ ಪ್ರಯತ್ನವನ್ನು ಯಾವುದೇ ಕಾರಣಕ್ಕೂ ನಿಲ್ಲಿಸದೆ ಇರಲು ನಿರ್ಧರಿಸಿದಂತಿದೆ. ಹೀಗಾಗಿ ವಾಯುದಾಳಿ ಮುಂದುವರೆದಿದೆ. ಬಾಂಬ್‌ಗಳು ಸ್ಫೋಟಿಸುತ್ತಿವೆ. ಇರಾನ್ ತನ್ನ ಕೈಲಾದಷ್ಟು ಪ್ರತಿದಾಳಿ ನಡೆಸುತ್ತಿದೆ. ಈ ಸಂಘರ್ಷದ ನಡುವೆಯೇ ರಷ್ಯಾದ ಅತಿ ಭಯಂಕರ ವಿಮಾನವೊಂದು ಇರಾನ್‌ನ ನೆಲದ ಮೇಲೆ ಬಂದು ಲ್ಯಾಂಡ್ ಆಗಿರುವುದು ಜಗತ್ತಿನಾದ್ಯಂತ ವಿಚಿತ್ರ ಕುತೂಹಲಕ್ಕೆ ಕಾರಣವಾಗಿದೆ. ಆ ವಿಮಾನದ ಹೆಸರು ‘ಡೂಮ್ಸ್‌ಡೇ ಪ್ಲೇನ್’.

ಅರ್ಥಾತ್ ಪ್ರಳಯ ವಿಮಾನ ಅಥವಾ ವಿನಾಶದ ವಿಮಾನ. ಅದರ ಹೆಸರಿನಲ್ಲೇ ಭಯಾನಕ ಧ್ವನಿಯಿದೆ. ಪ್ರಳಯದಷ್ಟು ಭಯಾನಕ ವಿನಾಶವನ್ನು ತಂದೊಡ್ಡುವ ವಿಮಾನವದು. ತೀರಾ ಅನಿವಾರ್ಯ ಸನ್ನಿವೇಶಕ್ಕೆಂದೇ ಈ ವಿಮಾನವನ್ನು ತಯಾರಿಸಲಾಗಿದೆ. ಟೆಹರಾನ್‌ನಲ್ಲಿ ಇದು ಬಂದಿಳಿದಿರುವುದರ ಔಚಿತ್ಯವನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಮೊದಲು ‘ವಿನಾಶದ ವಿಮಾನ’ ಅಂದರೇನು ಎಂಬುದನ್ನು ತಿಳಿದುಕೊಳ್ಳಬೇಕು. ಅಧಿಕೃತವಾಗಿ ಅಮೆರಿಕ, ರಷ್ಯಾ ಮತ್ತು ಚೀನಾ ಬಳಿ ಮಾತ್ರ ಈ ರೀತಿಯ ವಿಮಾನ ಇದೆ ಎಂದು ಹೇಳಲಾಗುತ್ತದೆ. ಅನಧಿಕೃತವಾಗಿ ಬೇರೆ ದೇಶಗಳ ಬಳಿಯೂ ಇದ್ದಿರಬಹುದು. ಆದರೆ ಬೇರಾವ ದೇಶವೂ ತನ್ನ ಬಳಿ ಇಂತಹದ್ದೊಂದು ವಿಮಾನವಿದೆ ಎಂಬುದನ್ನು ಹೇಳಿಕೊಂಡಿಲ್ಲ.

‘ಡೂಮ್ಸ್‌ಡೇ ಪ್ಲೇನ್’ ಎಂಬುದು ಆಗಸದಲ್ಲೇ ಕಾರ್ಯನಿರ್ವಹಿಸುವ ಅತ್ಯಾಧುನಿಕ ಕಮಾಂಡ್ ಸೆಂಟರ್ ಇದ್ದಂತೆ. ಅಣ್ವಸ್ತ್ರ ದಾಳಿ ನಡೆದಾಗ ಅಥವಾ ತೀವ್ರತರ ರಾಷ್ಟ್ರೀಯ ತುರ್ತುಸ್ಥಿತಿ ಎದುರಾದಾಗ ಇದನ್ನು ಬಳಸಲಾಗುತ್ತದೆ. ಅಣ್ವಸ್ತ್ರ ದಾಳಿ ನಡೆದರೆ ದೇಶದ ಹಿರಿಯ ನಾಯಕರನ್ನು ಹಾಗೂ ಅತ್ಯುನ್ನತ ಅಧಿಕಾರಿಗಳನ್ನು ಈ ವಿಮಾನದಲ್ಲಿ ಕೂರಿಸಿಕೊಂಡು ಆಗಸಕ್ಕೆ ಕೊಂಡೊಯ್ಯ ಲಾಗುತ್ತದೆ. ಅವರು ಅಲ್ಲಿಂದಲೇ ರಾಜಕೀಯ ಹಾಗೂ ಮಿಲಿಟರಿ ಕಾರ್ಯಾಚರಣೆಗಳನ್ನು ನಿರ್ದೇಶಿಸುತ್ತಾರೆ.

ಇದನ್ನೂ ಓದಿ: Dr Vijay Darda Column: ಬಿಲಾವಲ್‌ʼಗೆ ಏಕೆ ಚಡಪಡಿಕೆ? ಹಳೆಯದು ಮರೆತುಹೋಯ್ತೆ ?

ಈ ವಿಮಾನಗಳನ್ನು ಅಣ್ವಸ್ತ್ರ ದಾಳಿಗೂ ಜಗ್ಗದಂತೆ ಹಾಗೂ ಅತ್ಯಂತ ಪ್ರತಿಕೂಲ ಸನ್ನಿವೇಶದಲ್ಲೂ ಕಾರ್ಯ ನಿರ್ವಹಿಸುವಂತೆ ವಿನ್ಯಾಸ ಮಾಡಲಾಗಿದೆ. ಸಾಮಾನ್ಯ ಸನ್ನಿವೇಶದಲ್ಲಿ ಈ ವಿಮಾನ 7000 ಕಿ.ಮೀ. ದೂರ ಪ್ರಯಾಣ ಮಾಡಬಲ್ಲದು. ಆದರೆ ಆಗಸದಲ್ಲೇ ಇದಕ್ಕೆ ಇಂಧನ ತುಂಬಿಸಲು ಸಾಧ್ಯವಿರುವುದರಿಂದ ಇನ್ನೂ ಸಾಕಷ್ಟು ದೂರ ಪ್ರಯಾಣಿಸುವ ಹಾಗೂ ದೀರ್ಘಕಾಲ ಆಗಸದಲ್ಲೇ ಹಾರಾಡುವ ಸಾಮರ್ಥ್ಯವನ್ನು ಇದು ಹೊಂದಿದೆ. ಈ ಎಲ್ಲ ಕಾರಣಗಳಿಂದ ರಷ್ಯಾದ ಪ್ರಳಯ ವಿಮಾನ ಇರಾನ್‌ನಲ್ಲಿ ಇಳಿದಿರುವುದು ಏಕೆ ಎಂಬುದು ಜಾಗತಿಕ ಕುತೂಹಲಕ್ಕೆ ಕಾರಣವಾಗಿದೆ. ಜುಲೈ 13ರಂದು ರಷ್ಯಾದ ಡೂಮ್ಸ್‌ಡೇ ಪ್ಲೇನ್ ಟೆಹರಾನ್‌ನ ಇಮಾಮ್ ಖಮೇನಿ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಅಲ್ಲಿ ಸಾಕಷ್ಟು ಸಮಯ ಇದ್ದ ನಂತರ ಚೀನಾದ ರಾಜಧಾನಿ ಬೀಜಿಂಗ್‌ಗೆ ತೆರಳಿದೆ.

ರಷ್ಯಾದಲ್ಲಿ ಈ ವಿಮಾನವನ್ನು ‘ಹಾರಾಡುವ ಕ್ರೆಮ್ಲಿನ್’ ಎಂದೂ ಕರೆಯುತ್ತಾರೆ. ಏಕೆ ಈ ವಿಮಾನ ಟೆಹರಾನ್‌ಗೆ ಪ್ರಯಾಣಿಸಿದೆ? ಅತ್ಯುನ್ನತ ಮಟ್ಟದ ಭದ್ರತಾ ಅಗತ್ಯಗಳಿಗಾಗಿ ಇದನ್ನು ರಷ್ಯಾ ಕಳುಹಿಸಿತ್ತೇ? ಈ ಪ್ರಶ್ನೆಗಳು ಸಕಾರಣವಾಗಿಯೇ ಕೇಳಿಬರುತ್ತಿವೆ. ರಷ್ಯಾದ ಈ ವಿಮಾನದಲ್ಲಿ ಉತ್ಕೃಷ್ಟ ಮಟ್ಟದ ಎನ್‌ಕ್ರಿಪ್ಟೆಡ್ ಸ್ಯಾಟಲೈಟ್ ಕಮ್ಯುನಿಕೇಷನ್ಸ್ ಸಿಸ್ಟಮ್ ಇದೆ. ಜೊತೆಗೆ, ಅತ್ಯಂತ ಸುಧಾರಿತ ಎಲೆಕ್ಟ್ರೋಮ್ಯಾಗ್ನೆಟಿಕ್ ಶೀಲ್ಡಿಂಗ್ ಸಾಮರ್ಥ್ಯವನ್ನು ಇದು ಹೊಂದಿದೆ.

ಹೀಗಾಗಿ ಎಂತಹುದೇ ಸನ್ನಿವೇಶದಲ್ಲೂ ಈ ವಿಮಾನದ ಜೊತೆಗೆ ನಡೆಸುವ ಸಂವಹನವು ಬೇರಾರಿಗೂ ತಿಳಿಯುವುದಿಲ್ಲ. ಮಿಲಿಟರಿಯಲ್ಲಿ ಬಳಸುವ ಸಾಂಪ್ರದಾಯಿಕ ಎಲೆಕ್ಟ್ರಾನಿಕ್ ಗುಪ್ತಚರ ಉಪಕರಣಗಳು ಹಾಗೂ ಇನ್ನಿತರ ವಿಚಕ್ಷಣ ವ್ಯವಸ್ಥೆಗಳು ಈ ವಿಮಾನದ ಸಂವಹನ ವ್ಯವಸ್ಥೆಯನ್ನು ಭೇದಿಸಲು ಸಾಧ್ಯವಿಲ್ಲ. ಇದು ರಷ್ಯಾ ವಿಮಾನವು ಟೆಹರಾನ್‌ಗೆ ತೆರಳಿದ್ದರ ಕುರಿತು ಇನ್ನಷ್ಟು ಊಹಾಪೋಹಗಳು ಹುಟ್ಟುವಂತೆ ಮಾಡುತ್ತದೆ.

Screenshot_9 ಒಕ

ತನ್ನ ಡೂಮ್ಸ್‌ಡೇ ವಿಮಾನವನ್ನು ಟೆಹರಾನ್‌ಗೆ ಕಳುಹಿಸಿ, ಅಲ್ಲಿನ ನಾಯಕತ್ವದ ಜೊತೆಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ರಹಸ್ಯ ಸಂವಹನ ನಡೆಸಿದ್ದಾರೆಯೇ? ಅಥವಾ ಇರಾನ್‌ನ ಅತ್ಯಂತ ಪ್ರಮುಖ ವ್ಯಕ್ತಿಯೊಬ್ಬರನ್ನು ದೇಶದಿಂದ ಹೊರಗೆ ರಹಸ್ಯವಾಗಿ ಕರೆದೊಯ್ಯುವುದಕ್ಕೆ ಈ ವಿಮಾನ ಬಳಕೆಯಾಯಿತೇ? ಅಮೆರಿಕದ ದಾಳಿಯಲ್ಲಿ ಗಾಯಗೊಂಡಿರುವ ಇರಾನ್‌ನ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿಯನ್ನು ಭದ್ರತಾ ಕಾರಣಗಳಿಗಾಗಿ ರಷ್ಯಾಕ್ಕೆ ಸ್ಥಳಾಂತರ ಮಾಡಲಾಗಿದೆ ಎಂಬ ವದಂತಿಗಳಿಗೆ ಈ ಬೆಳವಣಿಗೆಗಳು ಪುಷ್ಟಿ ನೀಡುತ್ತಿವೆ. ಹಾಗಂತ ಈ ವದಂತಿಗೂ ಪ್ರಳಯ ಕಾಲದ ವಿಮಾನಕ್ಕೂ ಸಂಬಂಧವಿದೆಯೇ ಎಂಬುದು ಇನ್ನೂ ಸ್ಪಷ್ಟವಿಲ್ಲ.

ಸದ್ಯಕ್ಕೆ ಇವೆಲ್ಲವೂ ಊಹಾಪೋಹವೇ. ಖಚಿತ ಉತ್ತರಗಳು ಯಾರಿಗೂ ಸಿಗುತ್ತಿಲ್ಲ. ಆದರೂ, ಕೆಲ ಸಂಗತಿಗಳನ್ನು ಕಡೆಗಣಿಸುವುದು ಕಷ್ಟವಾಗುತ್ತದೆ. ಟೆಹರಾನ್‌ಗೆ ಡೂಮ್ಸ್‌ಡೇ ವಿಮಾನವನ್ನು ಕಳುಹಿಸುವ ಮೂಲಕ ರಷ್ಯಾ ಸರ್ಕಾರವು ತಾನು ಇರಾನ್ ಜೊತೆಗೆ ದೃಢವಾಗಿ ನಿಂತಿದ್ದೇನೆ ಎಂಬ ಸಂದೇಶವನ್ನು ಜಗತ್ತಿಗೆ ರವಾನಿಸಿದೆಯೇ?

ಕಳೆದ ವರ್ಷ ರಷ್ಯಾ ಮತ್ತು ಇರಾನ್ ದೇಶಗಳು 20 ವರ್ಷಗಳ ಸಮಗ್ರ ವ್ಯೂಹಾತ್ಮಕ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿವೆ. ಬಳಿಕ ಎರಡೂ ದೇಶಗಳು ಗುಪ್ತಚರ ಮಾಹಿತಿ ವಿನಿಮಯ ಮಾಡಿಕೊಳ್ಳು ತ್ತಿವೆ. ಉಪಗ್ರಹ ಚಿತ್ರಗಳು, ಆಪರೇಷನಲ್ ಡೇಟಾ ಮತ್ತು ಇನ್ನಿತರ ಸೂಕ್ಷ್ಮ ಮಾಹಿತಿಗಳನ್ನು ಕೂಡ ಪರಸ್ಪರರ ನಡುವೆ ಹಂಚಿಕೊಳ್ಳುತ್ತಿವೆ.

ಇರಾನ್‌ಗೆ ಇಷ್ಟರಲ್ಲೇ ರಷ್ಯಾದ ಅತ್ಯಾಧುನಿಕ ಮಿಲಿಟರಿ ಸಲಕರಣೆಗಳು ಬರುವುದಿದೆ. ಅದರಲ್ಲಿ ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಹಾಗೂ ಸುಧಾರಿತ ಯುದ್ಧ ವಿಮಾನಗಳು ಕೂಡ ಸೇರಿವೆ. ಅವುಗಳ ಪೈಕಿ ಈಗಾಗಲೇ ಕೆಲವು ಸಲಕರಣೆಗಳು ಇರಾನ್‌ಗೆ ರವಾನೆಯಾಗಿದ್ದರೂ ಆಗಿರಬಹುದು. ಒಪ್ಪಂದದ ಪ್ರಕಾರ, ಇರಾನ್ ಮೇಲೆ ಯಾವುದಾದರೂ ದೇಶ ಸಮರ ಸಾರಿದರೆ ರಷ್ಯಾ ಸೇನೆ ಇರಾನ್‌ನ ಬೆಂಬಲಕ್ಕೆ ಧಾವಿಸಬೇಕು ಎಂದೇನೂ ಇಲ್ಲ. ಆದರೆ, ಇರಾನ್‌ನ ನೆರವಿಗೆ ರಷ್ಯಾ ಧಾವಿಸುವುದನ್ನು ತಪ್ಪಿಸುವ ಅಂಶಗಳೂ ಒಪ್ಪಂದದಲ್ಲಿ ಇಲ್ಲ.

ಇದು ಇನ್ನೊಂದು ಪ್ರಶ್ನೆಯನ್ನು ಹುಟ್ಟುಹಾಕುತ್ತದೆ: ಸದ್ಯದಲ್ಲೇ ಇರಾನ್‌ನ ನೆರವಿಗೆ ರಷ್ಯಾ ನೇರವಾಗಿ ಧಾವಿಸಿ ಯುದ್ಧದಲ್ಲಿ ಭಾಗಿಯಾಗಲಿದೆಯೇ? ನನ್ನ ಪ್ರಕಾರ ಅಂತಹ ಸಾಧ್ಯತೆಗಳು ಕಡಿಮೆ. ಏಕೆಂದರೆ, ತನಗೆ ನೇರವಾಗಿ ಸಂಬಂಧವಿಲ್ಲದ ಮಿಲಿಟರಿ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವುದರಿಂದ ರಷ್ಯಾಕ್ಕೆ ಇರುವ ಲಾಭಗಳು ಕಡಿಮೆ. ಆದರೆ, ರಷ್ಯಾದ ಅಧ್ಯಕ್ಷ ಪುಟಿನ್ ಅವರು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್‌ಸ್ಕಿ ನಡೆಯ ಮೇಲೆ ತೀವ್ರ ನಿಗಾ ಇರಿಸಿದ್ದಾರೆ.

ಇತ್ತೀಚಿನ ತಿಂಗಳುಗಳಲ್ಲಿ ಜೆಲೆನ್‌ಸ್ಕಿ ಕೊಲ್ಲಿ ರಾಷ್ಟ್ರಗಳಿಗೆ ಸಾಕಷ್ಟು ಸಲ ಹೋಗಿ ಬಂದಿದ್ದಾರೆ. ಸೌದಿ ಅರೇಬಿಯಾ ಮತ್ತು ಕತಾರ್‌ನಂತಹ ದೇಶಗಳ ಜೊತೆಗೆ ರಕ್ಷಣಾ ಸಹಕಾರ ಒಪ್ಪಂದಗಳನ್ನೂ ಮಾಡಿಕೊಂಡಿದ್ದರೆ. ಹೀಗಾಗಿ ಅಮೆರಿಕಕ್ಕೆ ಮಾತ್ರವಲ್ಲ, ಕೊಲ್ಲಿ ರಾಷ್ಟ್ರಗಳಿಗೂ ಇರಾನ್ ಮೂಲಕ ಕಠಿಣ ಸಂದೇಶ ರವಾನಿಸುವ ಅನಿವಾರ್ಯತೆ ರಷ್ಯಾಕ್ಕಿದೆ. ಬಹುಶಃ ಅದೇ ಕೆಲಸವನ್ನು ಈಗ ಮಾಡುತ್ತಿದೆ!

ಚೀನಾದ ಮೋಸದ ನಡೆ

ಇನ್ನೊಂದು ಬಹಳ ಮುಖ್ಯವಾದ ಪ್ರಶ್ನೆಗೆ ಈಗಲೂ ಉತ್ತರ ಸಿಕ್ಕಿಲ್ಲ. ರಷ್ಯಾದ ಪ್ರಳಯ ವಿಮಾನ ಟೆಹರಾನ್‌ನಲ್ಲಿ ತನ್ನ ಕೆಲಸವನ್ನು ಮುಗಿಸಿದ್ದರೆ, ಬಳಿಕ ಅದು ಬೀಜಿಂಗ್‌ಗೆ ಏಕೆ ಹೋಯಿತು? ಟೆಹರಾನ್‌ನಿಂದ ಮಾಸ್ಕೋಗೆ ಏಕೆ ವಾಪಸ್ ಹೋಗಲಿಲ್ಲ? ಅದು ಟೆಹರಾನ್‌ನಿಂದ ನಿರ್ದಿಷ್ಟ ವ್ಯಕ್ತಿಯನ್ನು ಚೀನಾದ ರಾಜಧಾನಿಗೆ ಕರೆದೊಯ್ಯಿತೆ? ಹೌದಾದರೆ, ಆ ವ್ಯಕ್ತಿ ಯಾರು? ಇಲ್ಲ ಅಂತಾದರೆ, ವಿಮಾನವು ಬೀಜಿಂಗ್‌ಗೆ ಹೋಗಿದ್ದಾದರೂ ಏಕೆ? ಟೆಹರಾನ್ ಮತ್ತು ಮಾಸ್ಕೋ ನಡುವಿನ ದೂರ ಹೆಚ್ಚೆಂದರೆ 2500 ಕಿಲೋ ಮೀಟರ್. ಆದರೂ ನೇರವಾದ ದಾರಿಯಲ್ಲಿ ಮಾಸ್ಕೋ ಗೆ ತೆರಳುವುದನ್ನು ಬಿಟ್ಟು ಆ ವಿಮಾನವು ಬೀಜಿಂಗ್‌ಗೆ ತೆರಳಿ, ನಂತರ ಅಲ್ಲಿಂದ ರಷ್ಯಾಗೆ ಮರಳಿದೆ. ಅಂದರೆ ಹೆಚ್ಚುಕಮ್ಮಿ 11500 ಕಿ.ಮೀ. ಪ್ರಯಾಣಿಸಿದೆ. ಅಂದರೆ, ತೆರೆಯ ಮರೆಯಲ್ಲಿ ಏನೋ ಮಹತ್ವದ ಬೆಳವಣಿಗೆ ನಡೆಯುತ್ತಿದೆ ಎಂದರ್ಥ. ಅಷ್ಟೇ ಕುತೂಹಲ ಮೂಡಿಸುವ ಇನ್ನೊಂದು ಬೆಳವಣಿಗೆಯೆಂದರೆ ಅಮೆರಿಕದ ಮೌನ.

ಅದು ಇನ್ನೊಂದು ಪ್ರಶ್ನೆ ನಮ್ಮ ಮನದಲ್ಲಿ ಏಳುವಂತೆ ಮಾಡುತ್ತದೆ: ರಷ್ಯಾದ ವಿಮಾನ ಟೆಹರಾನ್‌ ಗೆ ಹೋಗಿ, ಅಲ್ಲಿಂದ ಬೀಜಿಂಗ್‌ಗೆ ತೆರಳಿ, ಬಳಿಕ ಮಾಸ್ಕೋಗೆ ಬಂದು ತಲುಪಿರುವುದರ ಉದ್ದೇಶ ಅಮೆರಿಕದ ಗುಪ್ತಚರ ಸಂಸ್ಥೆಗಳ ನಿಲುಕಿಗೂ ಮೀರಿದ್ದಾಗಿದೆಯೇ? ಅಮೆರಿಕಕ್ಕೆ ಖಚಿತವಾದ ಮಾಹಿತಿಯೇನಾದರೂ ಸಿಕ್ಕಿದ್ದರೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಲ್ಲಿಯವರೆಗೆ ಸುಮ್ಮನಿರುತ್ತಲೇ ಇರಲಿಲ್ಲ. ರಾಜತಾಂತ್ರಿಕ ವ್ಯವಹಾರಗಳಲ್ಲಿ ಸಂಯಮದಿಂದ ವರ್ತಿಸುವುದು ಅಥವಾ ವ್ಯೂಹಾತ್ಮಕ ಜಾಲಗಳನ್ನು ಹೆಣೆಯುವುದು ಟ್ರಂಪ್ ಸ್ವಭಾವವಲ್ಲ. ಮನಸ್ಸಿಗೆ ತೋಚಿದ್ದನ್ನು ಅವರು ಮುಕ್ತವಾಗಿ ಹೇಳಿಬಿಡುತ್ತಾರೆ. ಜಾಣತನದ ಭಾಷೆಯಲ್ಲಿ ತನ್ನ ಅಭಿಪ್ರಾಯಗಳನ್ನು ಬಚ್ಚಿಡುವುದೆಲ್ಲ ಆ ಮನುಷ್ಯನಿಗೆ ಗೊತ್ತಿಲ್ಲ. ಆದರೆ ವ್ಲಾದಿಮಿರ್ ಪುಟಿನ್ ಹಾಗೂ ಕ್ಸಿ ಜಿನ್‌ಪಿಂಗ್ ಹಾಗಲ್ಲ. ಅವರಿಬ್ಬರೂ ಮಾತನಾಡುವುದೇ ಇಲ್ಲ!

ಸೋನಮ್ ವಾಂಗ್ಚುಕ್

ಸುಸ್ಥಿರ ಪರಿಸರ ಮತ್ತು ಶಿಕ್ಷಣಕ್ಕೆ ಸೋನಮ್ ವಾಂಗ್ಚುಕ್ ನೀಡಿರುವಷ್ಟು ದೊಡ್ಡ ಕೊಡುಗೆಯನ್ನು ನೀಡಿದ ವ್ಯಕ್ತಿಗಳು ನಮ್ಮ ದೇಶದಲ್ಲಿ ಬಹಳ ಕಡಿಮೆಯಿದ್ದಾರೆ. ಲಡಾಖ್‌ನ ಸೂಕ್ಷ್ಮ ಪರಿಸರ ವ್ಯವಸ್ಥೆಗೆ ಹವಾಮಾನ ಬದಲಾವಣೆಯಿಂದ ಉಂಟಾದ ಹಾನಿಗೆ ಪ್ರಾಯೋಗಿಕ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ವಾಂಗ್ಚುಕ್ ಮಾಡಿದ ಕೆಲಸಗಳು ನಿಜಕ್ಕೂ ಅದ್ಭುತ. ತನ್ನ ಪ್ರಯೋಗ ಮತ್ತು ಪರಿಹಾರೋಪಾಯಗಳ ಮೂಲಕ ಅವರು ಲಡಾಖ್‌ನ ಸ್ಥಳೀಯ ಜನಸಮುದಾಯಗಳು ಹವಾಮಾನ ಬದಲಾವಣೆಯ ಸವಾಲುಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ. ಅನೇಕ ರೀತಿಯಲ್ಲಿ ಅವರ ಕಾರ್ಯಗಳು ಈ ದೇಶದ ಆಸ್ತಿಯಿದ್ದಂತೆ.

ಆ ಕಾರಣಕ್ಕಾಗಿಯೇ, ಅವರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತಾಗ, ‘ಇಂತಹ ವ್ಯಕ್ತಿಯೊಬ್ಬರು ತನ್ನ ನೈತಿಕ ಸ್ಥೆ ರ್ಯ ಮತ್ತು ಸಾರ್ವಜನಿಕ ಜನಬೆಂಬಲವನ್ನು ರಾಜಕೀಯ ಸಮರಕ್ಕೆ ದಾಳವಾಗುವಂತಹ ಉದ್ದೇಶಕ್ಕೆ ಬಳಸಬೇಕೆ?’ ಎಂಬ ಪ್ರಶ್ನೆ ನನ್ನ ಮನದಲ್ಲಿ ಮೂಡಿತ್ತು. ಅಣ್ಣಾ ಹಜಾರೆ ಕೂಡ ಉಪವಾಸ ಸತ್ಯಾಗ್ರಹ ನಡೆಸಿದ್ದು ನಿಮಗೆಲ್ಲರಿಗೂ ನೆನಪಿದೆ. ದೇಶದ ಒಳಿತಿಗಾಗಿಯೇ ಅವರು ಉಪವಾಸ ಆರಂಭಿಸಿದ್ದರು. ಆದರೆ, ತನ್ನ ಆಂದೋಲವನ್ನು ರಾಜಕೀಯ ಶಕ್ತಿಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಆರಂಭಿಸಿರುವುದು ಗೊತ್ತಾದ ತಕ್ಷಣವೇ ಅವರು ಪ್ರಜ್ಞಾ ಪೂರ್ವಕವಾಗಿ ಅದರಿಂದ ದೂರ ಉಳಿದುಕೊಂಡರು. ನನಗೆ ಅನ್ನಿಸುವುದು ಏನೆಂದರೆ, ಸೋನಮ್ ವಾಂಗ್ಚುಕ್ ಅವರ ಸೇವೆ ಪರಿಸರ ಸಂರಕ್ಷಣೆ ಹಾಗೂ ಶೈಕ್ಷಣಿಕ ನಾವೀನ್ಯತೆಗೆ ಹೆಚ್ಚು ಅಗತ್ಯವಿದೆ.

ಅವರು ಆರೋಗ್ಯವಾಗಿರಬೇಕು. ಕ್ರಿಯಾಶೀಲರಾಗಿರಬೇಕು. ಅವರ ಚೈತನ್ಯ ಕ್ಷೀಣಿಸಬಾರದು. ಕ್ಷುಲ್ಲಕ ರಾಜಕೀಯ ದಾಳಗಳಿಗೆ ಸಿಲುಕದೆ ಅವರು ಸ್ವತಂತ್ರರಾಗಿ ಉಳಿಯಬೇಕು. ಆಗ ಅವರಿಂದ ಈ ದೇಶಕ್ಕೆ ಇನ್ನಷ್ಟು ಒಳಿತಾಗಲಿದೆ.