ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

R T Vittalmurthy Column: ರಾಹುಲ್‌ ಕಿವಿಗೆ ಸಿದ್ದು ವಾರ್ನಿಂಗ್‌ ಮೆಸೇಜು

ನಿಗಮ-ಮಂಡಳಿಗಳ ನೇಮಕಾತಿ ಕಾರ್ಯ ತ್ವರಿತವಾಗಿ ಆಗಬೇಕು ಎಂಬುದು ಸಿದ್ದರಾಮಯ್ಯ ಅವರ ಬೇಡಿಕೆ. ‌ಹೀಗೆ ತಮ್ಮ ಬೇಡಿಕೆಗಳನ್ನು ರಾಹುಲ್ ಗಾಂಧಿ ಅವರ ಮುಂದಿಡಲಿರುವ ಸಿದ್ದರಾಮಯ್ಯ ಅವರು, ಪಕ್ಷದಲ್ಲಿ ನನ್ನ ಮಾತಿಗೆ ಮನ್ನಣೆ ದೊರೆಯದಿದ್ದರೆ ನನ್ನ ದಾರಿ ನನಗೆ ಅಂತ ರಾಹುಲ್ ಗಾಂಧಿಯವರಿಗೆ ಸ್ಪಷ್ಟವಾಗಿ ಹೇಳಲಿದ್ದಾರೆ.

R T Vittalmurthy Column: ರಾಹುಲ್‌ ಕಿವಿಗೆ ಸಿದ್ದು ವಾರ್ನಿಂಗ್‌ ಮೆಸೇಜು

-

ಮೂರ್ತಿಪೂಜೆ

ಕಳೆದ ವಾರ ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದ್ದಾರೆ. ಈ ಭೇಟಿ ಸಂದರ್ಭದಲ್ಲಿ ರಾಜ್ಯ ರಾಜಕಾರಣದ ಬೆಳವಣಿಗೆಗಳ ಬಗ್ಗೆ ವಿವರವಾಗಿ ಚರ್ಚಿಸಿದ್ದಾರೆ. ಅಂದ ಹಾಗೆ ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್ ಜತೆ ಮೈತ್ರಿ ಸಾಧಿತವಾದಾಗ ಯಡಿಯೂರಪ್ಪ ಅವರ ಪಾಳಯ ಕಸಿವಿಸಿಗೊಂಡಿತ್ತು.

ಕಾರಣ? ಅಷ್ಟೊತ್ತಿಗಾಗಲೇ ಕಾಂಗ್ರೆಸ್ ಪಾಳಯದಲ್ಲಿ ಸಿದ್ದು-ಡಿಕೆಶಿ ಮಧ್ಯೆ ಅಧಿಕಾರ ಹಂಚಿಕೆಯ ಸಂಘರ್ಷ ಶುರುವಾಗಿತ್ತಲ್ಲ? ಈ ಸಂಘರ್ಷ ಮುಂದಿನ ದಿನಗಳಲ್ಲಿ ತಾರಕಕ್ಕೇರಲಿದೆ ಮತ್ತು ಅದರ -ಲವಾಗಿ ಕಾಂಗ್ರೆಸ್ ಶಕ್ತಿ ಉಡುಗಲಿದೆ. ಹೀಗಾಗಿ 2028ರ ವಿಧಾನಸಭೆ ಚುನಾವಣೆಯ ಹೊತ್ತಿಗೆ ರಾಜ್ಯದ ಮತದಾರರು ಬಿಜೆಪಿಯ ಕಡೆ ವಾಲಿರುತ್ತಾರೆ. ಮತ್ತದರ ಫಲವಾಗಿ ಬಿಜೆಪಿ ಸ್ವಯಂಬಲದ ಮೇಲೆ ಅಧಿಕಾರ ಹಿಡಿಯುತ್ತದೆ ಎಂಬುದು ಯಡಿಯೂರಪ್ಪ ಪಾಳಯದ ಲೆಕ್ಕಾಚಾರವಾಗಿತ್ತು. ಲೋಕಸಭಾ ಚುನಾವಣೆ ಮುಗಿದು ಎರಡು ವರ್ಷ ಕಳೆದ ನಂತರವೂ ಯಡಿಯೂರಪ್ಪ ಅವರ ಪಾಳಯದಲ್ಲಿ ಇದೇ ಲೆಕ್ಕಾಚಾರ ನಡೆಯುತ್ತಿತ್ತು. ಆದರೆ ಅದೇನೇ ಲೆಕ್ಕಾಚಾರ ಮಾಡಿದರೂ ಬಿಜೆಪಿ ವರಿಷ್ಠರಾದ ಮೋದಿ-ಅಮಿತ್ ಶಾ ಜೋಡಿಗೆ ಜೆಡಿಎಸ್ ಜತೆಗಿನ ಮೈತ್ರಿಯನ್ನು ಕಡಿದುಕೊಳ್ಳಲು ಇಷ್ಟವಿಲ್ಲ. ಕಾರಣ? ಭವಿಷ್ಯದಲ್ಲಿ ಪ್ರಬಲ ಒಕ್ಕಲಿಗ ಮತ ಬ್ಯಾಂಕ್ ಬಿಜೆಪಿಯ ಜತೆ ಖಾಯಮ್ಮಾಗಿರಬೇಕು ಮತ್ತು ಅದು ಖಾಯಂ ಆಗಿರಬೇಕು ಎಂದರೆ ಆ ಸಮುದಾಯಕ್ಕೆ ಇವತ್ತಿಗೂ ಪ್ರಾಮಿನೆಂಟ್ ಅಗಿರುವ ಜೆಡಿಎಸ್ ಜತೆಗಿನ ಸಖ್ಯವನ್ನು ಉಳಿಸಿಕೊಳ್ಳಬೇಕು ಎಂಬುದು ಮೋದಿ-ಅಮಿತ್ ಶಾ ಜೋಡಿಯ ಲೆಕ್ಕಾಚಾರ. ಹೀಗಾಗಿ ಕರ್ನಾಟಕದಲ್ಲಿ ತಕ್ಷಣ ವಿಧಾನಸಭೆ ಚುನಾವಣೆ ನಡೆದರೂ ಬಿಜೆಪಿ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರುತ್ತದೆ ಎಂಬ ಸರ್ವೇ ರಿಪೋರ್ಟುಗಳನ್ನು ಈ ಜೋಡಿ ಪರಿಗಣಿಸುತ್ತಿಲ್ಲ. ಇದರಷ್ಟೇ ಮುಖ್ಯವಾಗಿ ಬಿಜೆಪಿಯಲ್ಲಿರುವ ವಿಜಯೇಂದ್ರ ವಿರೋಧಿ ಪಾಳಯಕ್ಕೆ ಪಕ್ಷ ಏಕಪಕ್ಷೀಯ ನೆಲೆಯ ಮೇಲೆ ನಿಲ್ಲುವುದು ಇಷ್ಟವಿಲ್ಲ. ಅರ್ಥಾತ್, ವಿಜಯೇಂದ್ರ ಅವರ ನೇತೃತ್ವದಲ್ಲಿ ಪಕ್ಷ ಇಂಡಿಪೆಂಡೆಂಟ್ ಅಗಿ ಚುನಾವಣೆಗೆ ಹೋಗುವುದು ಇಷ್ಡವಿಲ್ಲ. ಯಾಕೆಂದರೆ ಇವತ್ತಿನ ರಾಜಕೀಯ ಸನ್ನಿವೇಶ ಹೇಗಿದೆ ಎಂದರೆ ಕಾಂಗ್ರೆಸ್ ಅದೇನೇ ಸರ್ಕಸ್ಸು ಮಾಡಿದರೂ 2023ರ ಯಶಸ್ಸು ಅದಕ್ಕೆ ದಕ್ಕುವುದು ಕಷ್ಟ.

ಇದನ್ನೂ ಓದಿ: R T Vittalmurthy Column: ಅಮಿತ್‌ ಶಾ ಲೋಕಲ್‌ ರಿಪೋರ್ಟ್‌ ನಂಬಲ್ಲ

ಯಾಕೆಂದರೆ ಅಹಿಂದ ವರ್ಗಗಳ ಐಕಾನ್ ಅನ್ನಿಸಿಕೊಂಡಿದ್ದ ಸಿದ್ದರಾಮಯ್ಯ ಸಿಎಂ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಇವತ್ತು ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಅದೆಷ್ಟೇ ಅಚ್ಚಾ ಅಚ್ಚಾ ಮಾಡಿಟ್ಟುಕೊಳ್ಳಲು ಪ್ರಯತ್ನಿಸಿದರೂ ಅಹಿಂದ ವರ್ಗಗಳು ಪರ್ಯಾಯ ಶಕ್ತಿಯ ಕಡೆ ನೋಡುತ್ತಿವೆ ಎಂಬುದು ನಿಜ. ಇಂತಹ ಸಂದರ್ಭದಲ್ಲಿ ಪಕ್ಷ ಸ್ವಯಂ ಬಲದ ಮೇಲೆ ಫೀಲ್ಡಿಗಿಳಿದರೆ ಕನಿಷ್ಠ ನೂರು ಸ್ಥಾನಗಳನ್ನು ಗೆಲ್ಲುವುದು ಗ್ಯಾರಂಟಿ. ಹಾಗೇನಾದರೂ ಆದರೆ ಆಪರೇಷನ್ ಕಮಲ ಕಾರ್ಯಾಚರಣೆಯಲ್ಲಿ ಪಳಗಿರುವ ವಿಜಯೇಂದ್ರ ಅವರಿಗೆ 114ರ ಮ್ಯಾಜಿಕ್ ನಂಬರ್ ಗಳಿಸುವುದು ಕಷ್ಟವಲ್ಲ. ಹೀಗಾಗಿ ಏನೇ ಆಗಲಿ, ಜೆಡಿಎಸ್ ಜತೆಗಿನ ಸಖ್ಯ ಮುಂದುವರಿಯಲಿ, ವಿಜಯೇಂದ್ರ ಅವರಿಗೆ ಚೆಕ್‌ಮೇಟ್ ಇರಲಿ ಎಂಬುದು ಅವರ ವಿರೋಧಿಗಳ ಲೆಕ್ಕಾಚಾರ. ಅಂದ ಹಾಗೆ ಈ ಟೀಮಿನಲ್ಲಿ ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಹಲವು ನಾಯಕರಿರುವು ದರಿಂದ ಟಾಪ್ ಲೆವೆಲ್ಲಿನಲ್ಲಿ ಅದರ ಮಾತು ಇವತ್ತಿಗೂ ನಡೆಯುತ್ತಿದೆ. ಇಲ್ಲದಿದ್ದರೆ ಈ ಕ್ಷಣಕ್ಕೂ ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಎಂಬ ಪ್ರಯತ್ನ ಮುಂದುವರಿಯುತ್ತಿರಲಿಲ್ಲ. ಇದು ಮನವರಿಕೆ ಅಗಿರುವುದರಿಂದಲೇ ಯಡಿಯೂರಪ್ಪ ಕಳೆದ ವಾರ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿದ್ದಾರೆ.

ಮೂಲಗಳ ಪ್ರಕಾರ,ಕುಮಾರಸ್ವಾಮಿಯವರ ನೇತೃತ್ವದಲ್ಲಿ ಒಕ್ಕಲಿಗ ಮತ ಬ್ಯಾಂಕು, ವಿಜಯೇಂದ್ರ ಅವರ ನೇತೃತ್ವದಲ್ಲಿ ಲಿಂಗಾಯತ ಮತ ಬ್ಯಾಂಕು ಕನ್‌ಸಾಲಿಡೇಟ್ ಆಗುವುದರಿಂದ ಮತ್ತು ಕಾಂಗ್ರೆಸ್ ಹಿಂದಿದ್ದ ಅಹಿಂದ ಮತ ಬ್ಯಾಂಕ್‌ಗೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಪರ್ಯಾಯ ಅನ್ನಿಸುವುದರಿಂದ ನಾವು ಗೆಲ್ಲುವುದು ಸುಲಭ.

ಹೀಗಾಗಿ ‘ಇದುವರೆಗೆ ಏನೇನು ನಡೆದಿದೆಯೋ ಅದನ್ನೆಲ್ಲ ಮರೆತು ಒಗ್ಗೂಡಿ ಹೋಗೋಣ ಸಾರ್’ ಅಂತ ಯಡಿಯೂರಪ್ಪನವರು ವಿವರಿಸಿದ್ದು, ಈ ಮಾತಿಗೆ ದೇವೇಗೌಡರು ಸಹಮತ ವ್ಯಕ್ತಪಡಿಸಿ ದ್ದಾರೆ. ಯಾವಾಗ ಈ ಬೆಳವಣಿಗೆ ನಡೆಯಿತೋ, ಇದಾದ ನಂತರ ರಾಜ್ಯ ಬಿಜೆಪಿ ಪಾಳಯದಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದೆ.

RTV 0211

ವಿಜಯೇಂದ್ರ ಪಾಳಯದ ಬಾಂಬು

BY Vijayendra (24)

ಅಂದ ಹಾಗೆ ಮಾಜಿ ಸಿಎಂ ಯಡಿಯೂರಪ್ಪ ಅವರು ದೇವೇಗೌಡರನ್ನು ಭೇಟಿ ಮಾಡಿ ಬಂದರಲ್ಲ, ಅದೇ ದಿನ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಕ್ಯಾಂಪಿನಿಂದ ಒಂದು ಬಾಂಬು ಸಿಡಿಯಿತು. ಅದರ ಪ್ರಕಾರ, ರಾಜ್ಯದಲ್ಲಿ ಪಕ್ಷಕ್ಕೆ ವರಿಷ್ಠರು ಸರ್ಜರಿ ನಡೆಸಲಿದ್ದು, ಆ ಮೂಲಕ ವಿಧಾನಸಭೆಯ ಪ್ರತಿಪಕ್ಷ ನಾಯಕನ ಸ್ಥಾನದಿಂದ ಆರ್. ಅಶೋಕ ಪದಚ್ಯುತರಾಗಲಿದ್ದಾರೆ.

ಹೀಗೆ ಅಶೋಕ ಅವರು ತೆರವು ಮಾಡಲಿರುವ ಜಾಗಕ್ಕೆ ಹಿಂದುಳಿದ ಸಮುದಾಯದ ವಿ.ಸುನೀಲ್‌ ಕುಮಾರ್ ಬರುವುದು ಬಹುತೇಕ ಖಚಿತ. ಅದೇ ಕಾಲಕ್ಕೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ವಿಜಯೇಂದ್ರ ಅವರೇ ಮುಂದುವರಿಯಲಿದ್ದು, ಮುಂದಿನ ವಿಧಾನಸಭಾ ಚುನಾವಣೆಯನ್ನು ಪಕ್ಷ ಅವರ ನೇತೃತ್ವದಲ್ಲಿ ಎದುರಿಸಲಿ ಅಂತ ವರಿಷ್ಠರು ತೀರ್ಮಾನಿಸಿದ್ದಾರೆ. ಈ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬಿನ್ ಅವರಿಂದ ಸೂಚನೆ ಬಂದಿದ್ದು, ಇದರ ರಿಣಾಮವಾಗಿ ರಾಜ್ಯ ಬಿಜೆಪಿಯ ಗೊಂದಲಗಳಿಗೆ ತೆರೆ ಬೀಳುವುದು ನಿಶ್ಚಿತವಾಗಿದೆ. ಹೀಗೆ ಯಾವಾಗ ವಿಜಯೇಂದ್ರ ಪಾಳಯದ ಬಾಂಬು ಸಿಡಿಯಿತೋ, ಅಗ ಪ್ರತಿಪಕ್ಷ ನಾಯಕ ಆರ್.ಅಶೋಕ ಅವರ ಕ್ಯಾಂಪಿನಿಂದಲೂ ಒಂದು ಸ್ಮೆಲ್ ಬಾಂಬು ಸಿಡಿದಿದೆ.

ಬೆಲ್ಲದ್‌ಗೆ ಬೆಲ್ಲ ಗ್ಯಾರಂಟಿ

Aravind Bellad

ಹೀಗೆ ಸಿಡಿದ ಅಶೋಕ ಕ್ಯಾಂಪಿನ ಸ್ಮೆಲ್ ಬಾಂಬು ವಿಜಯೇಂದ್ರ ಕ್ಯಾಂಪಿಗೆ ಠಕ್ಕರ್ ಕೊಡುವಂತಿದೆ ಎಂಬುದು ವಿಶೇಷ. ಆದರ ಪ್ರಕಾರ, ರಾಜ್ಯ ಬಿಜೆಪಿಗೆ ಮೇಜರ್ ಸರ್ಜರಿ ನಡೆಸಲು ವರಿಷ್ಠರು ನಿರ್ಧರಿಸಿದ್ದು, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಪದಚ್ಯುತರಾಗಲಿದ್ದಾರೆ. ಹೀಗೆ ವಿಜಯೇಂದ್ರ ಅವರು ತೆರವು ಮಾಡುವ ಜಾಗಕ್ಕೆ ಲಿಂಗಾಯತ ಸಮುದಾಯದ ಪ್ರಮುಖರಾದ ಅರವಿಂದ ಬೆಲ್ಲದ್ ಬಂದು ಕೂರುವುದು ನಿಶ್ಚಿತ. ಅಲ್ಲಿಗೆ ಉತ್ತರ ಕರ್ನಾಟಕ ಭಾಗದವರೊಬ್ಬರು ಪಕ್ಷದ ರಾಜ್ಯಾಧ್ಯಕ್ಷರಾದರೆ, ಹಳೇ ಮೈಸೂರು ಭಾಗದ ನಾಯಕ ಆರ್.ಅಶೋಕ ವಿಧಾನಸಭೆಯ ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂಬುದು ಈ ಕ್ಯಾಂಪ್ ಸಿಡಿಸಿದ ಬಾಂಬಿನ ಸ್ಮೆಲ್ಲು.

ಅಂದ ಹಾಗೆ ವಿಜಯೇಂದ್ರ ಮತ್ತು ಅಶೋಕ ಕ್ಯಾಂಪಿನಿಂದ ಸಿಡಿದ ಬಾಂಬುಗಳ ಪೈಕಿ ಯಾವ ಬಾಂಬು ವರ್ಕ್‌ಔಟ್ ಆಗುತ್ತದೋ ಗೊತ್ತಿಲ್ಲ. ಆದರೆ ಈ ಬಾಂಬುಗಳ ಸದ್ದು ಬಿಜೆಪಿ ಪಾಳಯದ ಕೌತುಕಕ್ಕೆ ಕಾರಣವಾಗಿರುವುದು ಮಾತ್ರ ನಿಜ.

ರಾಹುಲ್ ಗೆ ಸಿದ್ದು ವಾರ್ನಿಂಗ್ ಮೆಸೇಜು?

ಈ ಮಧ್ಯೆ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ದಿಲ್ಲಿಗೆ ಹೋಗಿರುವ ಸಿದ್ಧರಾಮಯ್ಯ ಅವರು ಹಲವು ಬೇಡಿಕೆಗಳನ್ನು ಮುಂದಿಡಲಿದ್ದಾರೆ. ಮೊದಲನೆಯದಾಗಿ, ಸ್ಟಿಂಗ್ ಅಪರೇಷನ್ ಪ್ರಕರಣಕ್ಕೆ ತೇಪೆ ಹಾಕುವ ಬದಲು ಇದರ ರೂವಾರಿಯನ್ನು ಪತ್ತೆ ಹಚ್ಚಬೇಕು ಎಂಬುದು. ತಮಗಿರುವ ಮಾಹಿತಿಯ ಪ್ರಕಾರ, ಸ್ಟಿಂಗ್ ಅಪರೇಷನ್ ನಡೆದಿರುವ ದಿನ ಇಬ್ಬರು ವ್ಯಕ್ತಿಗಳ ಭೇಟಿ ನಡೆದಿದೆ. ಈ ಭೇಟಿಯ ಸಂದರ್ಭದಲ್ಲಿ ನಾನು ಮಾತ್ರವಲ್ಲದೆ ಇನ್ನೂ ಐದಾರು ಮಂದಿಯ ವಿರುದ್ಧ ಸ್ಟಿಂಗ್ ಆಪರೇಷನ್ ನಡೆಸುವ ಬಗ್ಗೆ ಚರ್ಚೆಯಾಗಿದೆ. ಇವತ್ತು ಪತ್ತೆ ಆಗಬೇಕಿರುವುದು ಈ ಜಾಲ, ಮತ್ತದರ ರೂವಾರಿಯೇ ಹೊರತು ಬೇರೇನಲ್ಲ ಎಂಬುದು ಸಿದ್ಧರಾಮಯ್ಯ ಅವರ ಮೊದಲ ಬೇಡಿಕೆ.

ಇನ್ನು ಏಕಪಕ್ಷೀಯವಾಗಿ ನಡೆಯುತ್ತಿರುವ ಸರಕಾರವನ್ನು ನಿಯಂತ್ರಣಕ್ಕೆ ತರಬೇಕು. ಯಾಕೆಂದರೆ ಇವತ್ತು ರಾಜ್ಯದಲ್ಲಿ ಪಕ್ಷದ ಶಕ್ತಿಯನ್ನು ಹೆಚ್ಚಿಸುವ ಧಾಟಿಯಲ್ಲಿ ಸರಕಾರ ನಡೆಯಬೇಕು. ಅರ್ಥಾತ್, ಸರಕಾರದ ಮಟ್ಟದಲ್ಲಿ ಒಂದು ತೀರ್ಮಾನವಾಗುವ ಮುನ್ನ ಪಕ್ಷದ ಒಪ್ಪಿಗೆ ಇರಬೇಕು. ಆದರೆ ಇವತ್ತು ಏಕಕ್ಷೀಯವಾಗಿ ತೀರ್ಮಾನಗಳಾಗುತ್ತಿವೆ. ಸಿಂಗಲ್ ಆರ್ಡರುಗಳು ಹೊರಬೀಳುತ್ತಿವೆ. ಇದು ಸರಿಯಲ್ಲ. ಹೀಗಾಗಿ ಪಕ್ಷ ಮತ್ತು ಸರಕಾರದ ನಡುವೆ ಹೊಂದಾಣಿಕೆ ಸಾಧಿಸಲು ಸಮನ್ವಯ ಸಮಿತಿ ರಚನೆಯಾಗಬೇಕು ಎಂಬುದು ಸಿದ್ದರಾಮಯ್ಯ ಅವರ ಎರಡನೇ ಡಿಮ್ಯಾಂಡು. ಉಳಿದಂತೆ ಸಂಪುಟ ವಿಸ್ತರಣೆ ಮಾಡಿ ಬಸವರಾಜ ಶಿವಣ್ಣನವರ್, ಅನ್ನಪೂರ್ಣ ತುಕಾರಾಂ ಅವರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳಬೇಕು, ನಿಗಮ-ಮಂಡಳಿಗಳ ನೇಮಕಾತಿ ಕಾರ್ಯ ತ್ವರಿತವಾಗಿ ಆಗಬೇಕು ಎಂಬುದು ಸಿದ್ದರಾಮಯ್ಯ ಅವರ ಬೇಡಿಕೆ. ‌ಹೀಗೆ ತಮ್ಮ ಬೇಡಿಕೆಗಳನ್ನು ರಾಹುಲ್ ಗಾಂಧಿ ಅವರ ಮುಂದಿಡಲಿರುವ ಸಿದ್ದರಾಮಯ್ಯ ಅವರು, ಪಕ್ಷದಲ್ಲಿ ನನ್ನ ಮಾತಿಗೆ ಮನ್ನಣೆ ದೊರೆಯದಿದ್ದರೆ ನನ್ನ ದಾರಿ ನನಗೆ ಅಂತ ರಾಹುಲ್ ಗಾಂಧಿಯವರಿಗೆ ಸ್ಪಷ್ಟವಾಗಿ ಹೇಳಲಿದ್ದಾರೆ.

ಮಹದೇವಪ್ಪ-ಸಿದ್ದುಗೆ ಯತೀಂದ್ರ ಫೆವಿಕಾಲ್? ‌

Yathindra siddaramaiah

ಇನ್ನು ಕಳೆದ ನಾಲ್ಕು ತಿಂಗಳಿನಿಂದ ತಂದೆ ಸಿದ್ದರಾಮಯ್ಯ ಅವರಿಂದ ದೂರ ನಿಂತಿರುವ ಡಾ.ಎಚ್.ಸಿ.ಮಹದೇವಪ್ಪ ಅವರ ಜತೆ ಸಚಿವ ಯತೀಂದ್ರ ಸಂಧಾನಸಭೆ ನಡೆಸಿದ್ದಾರೆ. ವಿಧಾನ ಪರಿಷತ್ ಸದಸ್ಯ ವೇಣುಗೋಪಾಲ್ ಅವರ ಜತೆ ಸೇರಿ ಶನಿವಾರ ಮೈಸೂರಿನ ಮೆಟ್ರೋಪೋಲ್ ಹೋಟೆಲಿನಲ್ಲಿ ಮಹದೇವಪ್ಪ ಅವರ ಜತೆ ಚರ್ಚಿಸಿದ ಯತೀಂದ್ರ ಅವರು ‘ನೀವು-ತಂದೆಯವರು ಒಟ್ಟಿಗಿದ್ದರೆ ಅಹಿಂದ. ಇಲ್ಲದಿದ್ದರೆ ಕಷ್ಟ.

ಹೀಗಾಗಿ ಮುನಿಸು ಮರೆತು ನೀವು ಮತ್ತು ಸಿದ್ದರಾಮಯ್ಯ ಅವರು ಒಂದಾಗಬೇಕು’ ಅಂತ ಮನವಿ ಮಾಡಿಕೊಂಡರಂತೆ. ಯಾವಾಗ ಯತೀಂದ್ರ ಅವರು ಈ ಮಾತು ಹೇಳಿದರೋ? ಆಗ ನೇರವಾಗಿ ವಿಷಯಕ್ಕೆ ಬಂದ ಮಹದೇವಪ್ಪನವರು ‘ಅಲ್ರೀ ಯತೀಂದ್ರ, ನಾನೇನಾದರೂ ನಿಮ್ಮ ತಂದೆಯವರ ವಿರುದ್ದ ಹೇಳಿಕೆ ಕೊಟ್ಟಿದ್ದೇನಾ? ಮಂತ್ರಿ ಮಾಡಿಸಿ ಎಂದಿದ್ದೇನಾ?ಇಲ್ಲವಲ್ಲ?’ ಎಂದಿದ್ದಾರೆ.

ಹಾಗೆಯೇ ಮುಂದುವರಿದು, ‘ನಾನು ಇವತ್ತು ದಲಿತ ಶಕ್ತಿಯನ್ನು ಬಲಪಡಿಸಲು, ಸಂವಿಧಾನಕ್ಕೆ ಶಕ್ತಿ ತರಲು ಪ್ರಯತ್ನಿಸುತ್ತಿದ್ದೇನೆ. ಹಾಗೆಂದ ಮಾತ್ರಕ್ಕೆ ಅದೇನು ನಿಮ್ಮ ತಂದೆಯವರ ವಿರುದ್ಧದ ಶಕ್ತಿ ಪ್ರದರ್ಶನ ಅಂತಲಾ ಅರ್ಥ? ಹಾಗೆ ಶಕ್ತಿ ಪ್ರದರ್ಶನ ಮಾಡಿ ನನಗೆ ಆಗಬೇಕಾಗಿದ್ದೇನು? ಇನ್ನು ಮಂತ್ರಿ ಮಂಡಲ ರಚನೆಯ ಸಂದರ್ಭದಲ್ಲಿ ನನ್ನ ಹೆಸರು ಇಲ್ಲ ಎಂಬ ಕಾರಣಕ್ಕಾಗಿ ಜನ ದೊಡ್ಡಮಟ್ಟದಲ್ಲಿ ಪ್ರತಿಭಟಿಸಿzರೆ. ಆ ಸಂದರ್ಭದಲ್ಲಿ ಅವರು ಪ್ರತಿಕ್ರಿಯಿಸುವ ಧಾಟಿ ನಿಮ್ಮ ತಂದೆಯವರಿಗೆ ಇಷ್ಟವಾಗದೆ ಇರಬಹುದು. ಹಾಗಂತ ಅದನ್ನೆಲ್ಲ ನಾನು ಹೇಳಿ ಮಾಡಿಸಿದ್ದೇನೆ ಅಂದುಕೊಂಡರೆ ಹೇಗೆ? ಆದರೆ ವಸ್ತುಸ್ಥಿತಿ ಹೀಗಿದ್ದರೂ, ನಾವು ಮೈಸೂರಿನ ಮಹಾರಾಜಾ ಮೈದಾನದಲ್ಲಿ ಸಭೆ ಮಾಡುತ್ತೇವೆ ಎಂದ ಕೂಡಲೇ ನೀವೂ ಅದೇ ದಿನ ಅಲ್ಲಿ ಸಭೆ ಮಾಡಲು ಹೊರಟಿದ್ದೀರಿ.

ನೀವು ಸಭೆ ಮಾಡುವ ವಿಷಯವನ್ನು ಮುಂಚೆಯೇ ಹೇಳಿದ್ದರೆ ನಾವು ಬೇರೆ ದಿನ ಸಭೆ ಮಾಡುತ್ತಿದ್ವಿ. ಎಲ್ಲಕ್ಕಿಂತ ಮುಖ್ಯವಾಗಿ ನೀವು ನಿಮ್ಮ ಮಾಸ್ ಪವರ್ ತೋರಿಸಲು ಹೊರಟಿದ್ದೀರಿ. ಆದರೆ ನನ್ನದು ಮಾಸ್ ಕಮ್ಯುನಿಕೇಶನ್ ಸಭೆ. ಇವತ್ತು ಸಂವಿಧಾನದ ಶಕ್ತಿ, ಮಹತ್ವ, ಅನಿವಾರ್ಯತೆಯನ್ನು ನಾಡಿನ ಮನೆ-ಮನೆಗೆ ತಿಳಿಸುವುದು ನಮ್ಮ ಉದ್ದೇಶವೇ ಹೊರತು ರಾಜಕಾರಣವಲ್ಲ’ ಎಂದು ನೇರವಾಗಿ ಹೇಳಿದ್ದಾರೆ.

ಯಾವಾಗ ಅವರು ಇಷ್ಟು ನೇರವಾಗಿ ಮಾತನಾಡಿದರೋ? ಆಗ ಯತೀಂದ್ರ ಅವರು ‘ಇಲ್ಲ ಸಾರ್, ಯಾವುದನ್ನೂ ಮನಸ್ಸಿನಲ್ಲಿಟ್ಟುಕೊಳ್ಳಬೇಡಿ. ನೀವು-ತಂದೆಯವರು ಮತ್ತೆ ಒಂದಾಗಿ. ನೀವು ಒಂದಾದರೆ ಮಾತ್ರ ಅಹಿಂದ ವರ್ಗಗಳ ಶಕ್ತಿ ಪುನಃ ಮೇಲೆದ್ದು ನಿಲ್ಲುತ್ತದೆ’ ಎಂದಿದ್ದಾರೆ.

ಅರ್ಥಾತ್, ಮುನಿಸಿನಿಂದ ಪರಸ್ಪರ ದೂರವಾಗಿದ್ದ ಸಿದ್ದರಾಮಯ್ಯ ಮತ್ತು ಮಹದೇವಪ್ಪ ಅವರನ್ನು ಒಂದುಗೂಡಿಸುವ ವಿದ್ಯುಕ್ತ ಪ್ರಯತ್ನ ಅವರಿಂದ ಆರಂಭವಾಗಿದೆ. ಇದು ಸಾಧಿತವಾದರೆ ಕರ್ನಾಟಕದ ರಾಜಕೀಯ ಚಿತ್ರ ಬೇರೆ ರೂಪ ಪಡೆಯಲಿದೆ.

ಲಾಸ್ಟ್ ಸಿಪ್: ಈ ಮಧ್ಯೆ ಸ್ಟಿಂಗ್ ವಿವಾದವನ್ನು ತಮ್ಮ ತಲೆಗೆ ಕಟ್ಟುವ ಸನ್ನಾಹ ಸ್ಪಷ್ಟವಾಗಿರುವು ದರಿಂದ ಸ್ಟಿಂಗ್ ಹಿಂದಿನ ಚಿದಂಬರ ರಹಸ್ಯವನ್ನು ಬಿಚ್ಚಿಡಲು ಕೇಂದ್ರ ಸಚಿವ ಎಚ್.ಡಿ.ಕುಮಾರ ಸ್ವಾಮಿ ನಿರ್ಧರಿಸಿದ್ದಾರೆ. ಮೂಲಗಳ ಪ್ರಕಾರ, ತಮ್ಮ ಬಳಿ ಇರುವ ಹಲವು ಮಹತ್ವದ ದಾಖಲೆಗಳನ್ನು ಕುಮಾರಸ್ವಾಮಿ ಬಹಿರಂಗಗೊಳಿಸಲು ಸಜ್ಜಾಗಿದ್ದು, ಇದು ರಾಜ್ಯ ರಾಜಕಾರಣದ ದಿಕ್ಕನ್ನು ಬದಲಿಸಲಿದೆ.