ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Prakash Hegde Column: ಪ್ರಾಣಿಹತ್ಯೆಯಿಲ್ಲದ ಮಾಂಸಾಹಾರ

ಪ್ರಯೋಗಾಲಯದ ಕಪಾಟುಗಳಲ್ಲಿ ಕೋಳಿಯ ಜೀವಕೋಶಗಳಿಂದ ಮಾಂಸವನ್ನು ಬೆಳೆಸುವ ವ್ಯವಸ್ಥೆ, ಅದಕ್ಕೆ ಸಂಬಂಧಿಸಿದ ವೈಜ್ಞಾನಿಕ ಪ್ರಯೋಗಗಳು ಮತ್ತು ಈ ತಂತ್ರಜ್ಞಾನವು ಆಹಾರೋದ್ಯಮದ ಸ್ವರೂಪವನ್ನೇ ಬದಲಿಸಬಲ್ಲ ಸಾಧ್ಯತೆಗಳ ಕುರಿತು ನೀಡಿದ ವಿವರಣೆ. ಅಧಿಕಾರಿಗಳ ಮಾತುಗಳಲ್ಲಿ ಅಡಕವಾಗಿದ್ದ ಭವಿಷ್ಯದ ಚಿತ್ರಣ ಇನ್ನೂ ರೋಚಕವಾಗಿತ್ತು.

Prakash Hegde Column: ಪ್ರಾಣಿಹತ್ಯೆಯಿಲ್ಲದ ಮಾಂಸಾಹಾರ

-

Profile
Ashok Nayak Nov 2, 2026 7:21 AM

ಆಹಾರ

ಪ್ರಕಾಶ ಹೆಗಡೆ

ಹವಾಮಾನ ಬದಲಾವಣೆಯ ವಿನಾಶಕಾರಿ ಎಚ್ಚರಿಕೆಯ ನಡುವೆ ಭೂಗ್ರಹವನ್ನು ಉಳಿಸುವ ಮಹತ್ಕಾರ್ಯದಲ್ಲಿ ಸಾಮಾನ್ಯರೂ ಅಳಿಲು ಸೇವೆ ಮಾಡಲು ಎರಡು ಸರಳ ಮಾರ್ಗಗಳಿವೆ-ಪೆಟ್ರೋಲ್ ವಾಹನಗಳ ಪ್ರಯಾಣಕ್ಕೆ ವಿದಾಯ ಹೇಳುವುದು ಮತ್ತು ಮಾಂಸಾಹಾರವನ್ನು ತ್ಯಜಿಸುವುದು. ಮೊದಲನೆಯದಕ್ಕೆ ಪರ್ಯಾಯವಾದ ನವೀಕರಿಸಬಹುದಾದ ಇಂಧನ ಮತ್ತು ವಿದ್ಯುತ್ ಬಳಕೆಯ ಪರಿಹಾರಗಳಿವೆ. ಎರಡನೆಯ ಮಾರ್ಗವಾದ ಮಾಂಸಾಹಾರ ತ್ಯಜಿಸುವುದಕ್ಕೆ ಪರ್ಯಾಯ ಮಾಂಸ ಉತ್ಪಾದಿಸುವ ಮಾರ್ಗದ ಕುರಿತಾದ ವಿಮರ್ಶೆಯಿದು. ದಶಕಗಳ ಹಿಂದೆ ಅಮೆರಿಕದ ಕೆಂಟುಕಿ ರಾಜ್ಯದ ಲೂಯಿವಿಲ್ ನಲ್ಲಿರುವ ಕೆಎಫ್‌ʼಸಿ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದಾಗ, ಆಹಾರ ಉತ್ಪಾದನೆಯ ಆಯಾಮ ನನ್ನ ಕುತೂಹಲವನ್ನು ಕೆರಳಿಸಿತ್ತು.

ಪ್ರಯೋಗಾಲಯದ ಕಪಾಟುಗಳಲ್ಲಿ ಕೋಳಿಯ ಜೀವಕೋಶಗಳಿಂದ ಮಾಂಸವನ್ನು ಬೆಳೆಸುವ ವ್ಯವಸ್ಥೆ, ಅದಕ್ಕೆ ಸಂಬಂಧಿಸಿದ ವೈಜ್ಞಾನಿಕ ಪ್ರಯೋಗಗಳು ಮತ್ತು ಈ ತಂತ್ರಜ್ಞಾನವು ಆಹಾರೋದ್ಯಮದ ಸ್ವರೂಪವನ್ನೇ ಬದಲಿಸಬಲ್ಲ ಸಾಧ್ಯತೆಗಳ ಕುರಿತು ನೀಡಿದ ವಿವರಣೆ. ಅಧಿಕಾರಿಗಳ ಮಾತುಗಳಲ್ಲಿ ಅಡಕವಾಗಿದ್ದ ಭವಿಷ್ಯದ ಚಿತ್ರಣ ಇನ್ನೂ ರೋಚಕವಾಗಿತ್ತು.

ಕೋಳಿಯನ್ನು ಸಾಕಿ, ಕೊಂದು ಮಾಂಸ ಪಡೆಯುವ ಸಾಂಪ್ರದಾಯಿಕ ಪದ್ಧತಿಗೆ ಬದಲಾಗಿ, ನಿಯಂತ್ರಿತ ಪರಿಸರದಲ್ಲಿ ಮಾಂಸವನ್ನು ಬೆಳೆಸಿ, ಅದರಿಂದ ಜನಪ್ರಿಯ ಆಹಾರ ಉತ್ಪನ್ನಗಳನ್ನು ತಯಾರಿಸುವ ದಿನಗಳು ದೂರವಿಲ್ಲ ಎಂಬ ಭರವಸೆಯ ಆಶಯವದು. ಈಗದು ಸಾಕಾರವಾಗುವ ಹಂತದಲ್ಲಿದೆ. ಮಾಂಸಾಹಾರ ಭಕ್ಷಣೆಯಿಂದಾಗುವ ಹಾನಿಯನ್ನು ಅರಿತರೆ ಮಾಂಸಾಹಾರಿಗಳು ಸಸ್ಯಾಹಾರಿ ಗಳಾಗುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.

ಇದನ್ನೂ ಓದಿ: Prakash Hegde Column: ಸ್ಟಾರ್‌ಲಿಂಕ್‌: ಭಾರತಕ್ಕೆ ತಾರೆಯೋ ಧೂಮಕೇತುವೋ ?

ಇಲ್ಲಿ ಮಾಂಸ ಎಂಬ ಪದವು ಕೋಳಿ ಸೇರಿದಂತೆ ಇತರ ಪಕ್ಷಿಗಳ ಮಾಂಸ, ದನ ಮತ್ತು ಎಮ್ಮೆಯ ಮಾಂಸ, ಹಂದಿ, ಕುರಿ, ಮೇಕೆ ಹಾಗೂ ಕೆಲವು ಇತರ ಪ್ರಾಣಿಗಳ ಮಾಂಸವನ್ನೂ ಒಳಗೊಂಡಿದೆ. ಮಾಂಸಾಹಾರಿಗಳ ಮಾಂಸದ ಹಸಿವು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಕಳೆದ ಐದು ವರ್ಷಗಳಲ್ಲಿ ಜಾಗತಿಕ ಮಾಂಸ ಉತ್ಪಾದನೆಯು ವಾರ್ಷಿಕ ಸರಾಸರಿ 2%ರಷ್ಟು ವೃದ್ಧಿಸಿದ್ದು, 2025ರಲ್ಲಿ ಸುಮಾರು 40 ಕೋಟಿ ಟನ್‌ಗಳ ಮಟ್ಟ ತಲುಪಿದೆ. ಈ ಮಾಂಸದ ಬೇಡಿಕೆಯನ್ನು ಪೂರೈಸಲು ಪ್ರಾಣಿಗಳ ಸಾಕಾಣಿಕೆ, ಮೇವು ಮತ್ತು ಅಧಿಕ ಪ್ರಮಾಣದ ಭೂಮಿಯ ಕಬಳಿಕೆಯಾಗು ತ್ತದೆ.

ಮುಂದಿನ ದಿನಗಳ ಲೆಕ್ಕಾಚಾರದಂತೆ ಚೀನಾ, ಭಾರತ ಹಾಗೂ ಇಂಡೋನೇಷ್ಯಾವನ್ನೂ ಒಟ್ಟು ಸೇರಿಸಿದ ವಿಸ್ತೀರ್ಣಕ್ಕಿಂತಲೂ ಹೆಚ್ಚು ಭೂಮಿಯ ಅವಶ್ಯಕತೆ ಪ್ರಾಣಿಗಳ ಸಾಕಾಣಿಕೆ ಹಾಗೂ ಅವುಗಳ ಮೇವುಗಳಿ ಗಾಗಿ ಮೀಸಲಾಗಿರಿಸಬೇಕಾಗುತ್ತದೆ. Our World in Data ಪ್ರಕಟಿಸಿರುವ ಅಂಕಿಅಂಶಗಳ ಪ್ರಕಾರ, ಪ್ರಪಂಚದ ಒಟ್ಟು ಅರಣ್ಯನಾಶದ ಸುಮಾರು 90%ರಷ್ಟು ಕೃಷಿ ಮತ್ತು ಅರಣ್ಯ ಉತ್ಪನ್ನಗಳ ಉತ್ಪಾದನೆಗೆ ಸಂಬಂಧಿಸಿದೆ.

2000ದ ಇಸವಿಯಿಂದ ಜಾಗತಿಕವಾಗಿ ಪ್ರತಿವರ್ಷ ಸರಾಸರಿ 56 ಲಕ್ಷ ಹೆಕ್ಟೇರ್ ಅರಣ್ಯ ಕೃಷಿ ಚಟುವಟಿಕೆ ಗಳಿಗಾಗಿ ನಾಶವಾಗುತ್ತಿದ್ದು, ಈ ಅರಣ್ಯನಾಶಕ್ಕೆ ದನದ ಮಾಂಸ ಉತ್ಪಾದನೆಯೊಂದೇ 41%ರಷ್ಟು ಕಾರಣವಾಗಿದೆ. ಕೆಲವು ಅಧ್ಯಯನಗಳ ಪ್ರಕಾರ, ಮಾನವರು ನೇರವಾಗಿ ಸೇವಿಸ ಬಹುದಾದ ಧಾನ್ಯ ಗಳಲ್ಲಿರುವ ಪ್ರತಿ 100 ಕ್ಯಾಲೊರಿ ಶಕ್ತಿಗೆ ಪ್ರತಿಯಾಗಿ ಕೋಳಿ ಮಾಂಸದಿಂದ ಕೇವಲ 12-13 ಕ್ಯಾಲೊರಿ ಗಳಷ್ಟು ಮಾತ್ರ ಮರಳಿ ದೊರೆಯುತ್ತದೆ. ಅಂದರೆ, ಧಾನ್ಯಗಳನ್ನು ನೇರವಾಗಿ ಮಾನವ ಆಹಾರವಾಗಿ ಬಳಸುವುದಕ್ಕೆ ಹೋಲಿಸಿದರೆ, ಅವುಗಳನ್ನು ಕೋಳಿಗಳಿಗೆ ತಿನ್ನಿಸಿ ಮಾಂಸ ಪಡೆಯುವ ಪ್ರಕ್ರಿಯೆಯಲ್ಲಿ ಆಹಾರ ಶಕ್ತಿಯ ಗಣನೀಯ ಭಾಗ ನಷ್ಟವಾಗುತ್ತದೆ.

62 food

ಇನ್ನೂ ಒಂದು ಸಮಸ್ಯೆಯಿದೆ. ಕೋಟ್ಯಂತರ ಪ್ರಾಣಿಗಳನ್ನು ಕೈಗಾರಿಕಾ ಪ್ರಮಾಣದಲ್ಲಿ ಸಾಕಿ ಅವುಗಳನ್ನು ಸಾಂಕ್ರಾಮಿಕ ರೋಗಗಳಿಂದ ಮುಕ್ತವಾಗಿರಿಸಲು ಜಗತ್ತಿನ ಆಂಟಿಬಯಾಟಿಕ್ ಉತ್ಪಾದನೆಯ 70%ರಷ್ಟು ಬಳಸಲಾಗುತ್ತದೆ. ಅಷ್ಟೇ ಅಲ್ಲ, ಪ್ರಾಣಿಗಳನ್ನು ಮಾಂಸವಾಗಿ ಬಳಸುವ ಮುನ್ನ ತಿಂಗಳುಗಟ್ಟಲೇ ಸಾಕಬೇಕು ಮತ್ತು ಕಾಯಬೇಕು.

ಪರಿಸರದ ಮೇಲಿನ ಪರಿಣಾಮದ ಗಂಭೀರತೆಯನ್ನು ಮನಗಂಡು, ಕೃಷಿ ಮತ್ತು ಪಶುಸಂಗೋಪನೆ ಯಿಂದ ಹೊರಸೂಸುವ ಹಸಿರುಮನೆ ಅನಿಲಗಳಿಗೂ ಆರ್ಥಿಕ ಹೊಣೆಗಾರಿಕೆಯನ್ನು ವಿಧಿಸುವ ಪ್ರಯತ್ನಗಳು ಜಗತ್ತಿನ ಕೆಲವು ದೇಶಗಳಲ್ಲಿ ಆರಂಭವಾಗಿವೆ. ಜಾನುವಾರುಗಳ ಜೀರ್ಣಕ್ರಿಯೆಯಿಂದ ಹೊರಬರುವ ಮೀಥೇನ್ ಮತ್ತು ಅವುಗಳ ಸಗಣಿಯಿಂದ ಬಿಡುಗಡೆಯಾಗುವ ಅನಿಲಗಳನ್ನು ನಿಯಂತ್ರಿಸುವ ಉದ್ದೇಶದಿಂದ ಡೆನ್ಮಾರ್ಕ್ ನೀತಿಯ ಪ್ರಕಾರ, 2030ರಿಂದ ಜಾನುವಾರು ಸಾಕಾಣಿಕೆಗೆ ಸಂಬಂಧಿಸಿದ ಹಸಿರುಮನೆ ಅನಿಲ ಹೊರಸೂಸುವಿಕೆಗೆ ರೈತರು ತೆರಿಗೆ ಪಾವತಿಸಬೇಕಾಗುತ್ತದೆ. ಆರಂಭದಲ್ಲಿ ಪ್ರತಿ ಟನ್ ಇಂಗಾಲದ ಡೈಆಕ್ಸೈಡ್ ಸಮಾನ ಹೊರಸೂಸುವಿಕೆಗೆ 300 ಕ್ರೋನರ್ (4000 ರುಪಾಯಿ) ತೆರಿಗೆ ವಿಧಿಸುವ ಉದ್ದೇಶವಿದ್ದು, 2035ರ ವೇಳೆಗೆ ಅದನ್ನು 750 ಕ್ರೋನರ್‌ಗೆ ಏರಿಸಲು ನಿರ್ಧರಿಸಲಾಗಿದೆ. ಈಗ ನಮ್ಮ ಕಥೆಯ ಕೇಂದ್ರಬಿಂದುವಿನತ್ತ ಸಾಗೋಣ.

ಒಂದು ಕ್ಷಣ ಕಲ್ಪಿಸಿಕೊಳ್ಳಿ. ನಿಮ್ಮ ಊಟದ ತಟ್ಟೆಯಲ್ಲಿ ಕೋಳಿ ಮಾಂಸವಿದೆ. ಅದರ ರುಚಿ, ಸುವಾಸನೆ ಮತ್ತು ಪೌಷ್ಟಿಕಾಂಶಗಳು ಸಾಂಪ್ರದಾಯಿಕ ಕೋಳಿ ಮಾಂಸದಂತೆಯೇ ಇವೆ. ಆದರೆ ಆ ಮಾಂಸಕ್ಕಾಗಿ ಯಾವುದೇ ಕೋಳಿಯನ್ನು ಕೊಂದಿಲ್ಲ. ಇದು ಯಾವುದೋ ವೈಜ್ಞಾನಿಕ ಫ್ಯಾಂಟಸಿ ಕಲ್ಪನೆಯಲ್ಲ.

ಜೀವಕೋಶ ವಿಜ್ಞಾನ, ಅಂಗಾಂಶ ಎಂಜಿನಿಯರಿಂಗ್ ಮತ್ತು ಜೈವಿಕ ಉತ್ಪಾದನಾ ತಂತ್ರಜ್ಞಾನಗಳ ನೆರವಿನಿಂದ ಸಾಕಾರಗೊಳ್ಳುತ್ತಿರುವ ಪ್ರಾಮಾಣಿಕ ಪ್ರಯತ್ನ. ಪ್ರಾಣಿಗಳ ಜೀವಕೋಶಗಳಿಂದಲೇ ಮಾಂಸವನ್ನು ಬೆಳೆಸುವ ಈ ಪರಿಕಲ್ಪನೆಯ ಹಿಂದಿರುವ ತರ್ಕವೇನು? ಇದರ ಅಗತ್ಯವೇನು? ವೈಜ್ಞಾನಿಕ ಸಾಧ್ಯತೆಗಳೇನು? ಇದರಿಂದ ಮಾನವಕುಲಕ್ಕಾಗುವ ಪ್ರಯೋಜನಗಳೇನು? ಅಥವಾ, ಸಸ್ಯಜನ್ಯ ಪದಾರ್ಥ ಗಳನ್ನೇ ಬಳಸಿ, ಮಾಂಸದ ರುಚಿ, ವಿನ್ಯಾಸ ಮತ್ತು ಅನುಭವವನ್ನು ಹೋಲುವ ಆಹಾರವನ್ನು ತಯಾರಿಸುವುದು ನಿಜಕ್ಕೂ ಎಷ್ಟರ ಮಟ್ಟಿಗೆ ಸಾಧ್ಯ? ಸಾವಿರಾರು ವಿಜ್ಞಾನಿಗಳು ಈಗಾಗಲೇ ಈ ಕ್ಷೇತ್ರದ ಸಂಶೋಧನೆಯಲ್ಲಿ ಮುಂದುವರಿದ ಹಂತದಲ್ಲಿದ್ದಾರೆ.

ಒಂದು ವಿಧಾನವೆಂದರೆ, ಸೋಯಾ, ಬಟಾಣಿ ಮತ್ತು ಗೋಧಿಯ ಪ್ರೋಟಿನ್‌ಗಳ ಜತೆಗೆ ಸಸ್ಯಜನ್ಯ ಕೊಬ್ಬನ್ನು ಬಳಸಿ, ಮಾಂಸದ ರುಚಿ, ವಿನ್ಯಾಸ ಹಾಗೂ ಅನುಭವವನ್ನು ಹೋಲುವ ಆಹಾರವನ್ನು ತಯಾರಿಸುವುದು. ವೈಜ್ಞಾನಿಕವಾಗಿ ಸುಲಭವಲ್ಲ. ಏಕೆಂದರೆ ಸಸ್ಯ ಪ್ರೋಟಿನ್‌ಗಳು ಗೋಳಾಕಾರ ದಲ್ಲಿದ್ದರೆ, ಪ್ರಾಣಿ ಪ್ರೋಟಿನ್‌ಗಳು ನಾರಿನಂತಿರುತ್ತವೆ.

ಸಸ್ಯಜನ್ಯ ಎಣ್ಣೆಗಳು ಸಾಮಾನ್ಯ ತಾಪಮಾನದಲ್ಲಿ ದ್ರವವಾಗಿದ್ದರೆ, ಪ್ರಾಣಿಗಳ ಕೊಬ್ಬು ಘನವಾಗಿ ರುತ್ತದೆ. ಕಷ್ಟವೆನಿಸಿದರೂ ಅಸಾಧ್ಯವೇನಲ್ಲ. ನಮ್ಮಲ್ಲನೇಕರು ಸೋಯಾ ಚಂಕ್ಸ್ ಅನ್ನು ಅಡುಗೆ ಯಲ್ಲಿ ಬಳಸಿ ಮಾಂಸಾಹಾರದ ಅನುಭವವನ್ನು ಪಡೆದಿರಬಹುದು. ಇನ್ನೊಂದು ವಿಧಾನವೆಂದರೆ, ನಮಗೆ ಬೇಕಾದ ಪ್ರಾಣಿಗಳ ಜೀವಕೋಶಗಳನ್ನು ದೊಡ್ಡ ಜೈವಿಕ ಟ್ಯಾಂಕ್‌ಗಳಲ್ಲಿ ಬೆಳೆಸಿ ಮಾಂಸ ಉತ್ಪಾದಿಸುವುದು. ಇದನ್ನೇ ‘ಕೋಶಸಂವರ್ಧಿತ ಮಾಂಸ’ (Cultivated /Cultured Meat) ಎಂದು ಕರೆಯಲಾಗುತ್ತದೆ.

ಹಿಂದೆ ನೆನಪಿಸಿದ ನನ್ನ ಕೆಎಫ್‌ʼಸಿ ಭೇಟಿಯಲ್ಲೂ ಇದೇ ತಂತ್ರಜ್ಞಾನದ ಸಾರವಿತ್ತು. ಅಂದರೆ, ಪ್ರಾಣಿಯನ್ನು ಕೊಲ್ಲದೆ, ಅದರ ದೇಹದ ಹೊರಗೇ ಜೀವಕೋಶಗಳಿಂದ ಮಾಂಸವನ್ನು ಬೆಳೆಸುವುದು. ಕೋಶಸಂವರ್ಧಿತ ಮಾಂಸದ ಪೌಷ್ಟಿಕಾಂಶ, ರುಚಿ, ವಿನ್ಯಾಸ ಸೇರಿದಂತೆ ಎಲ್ಲ ಗುಣಲಕ್ಷಣಗಳೂ ಸಾಂಪ್ರದಾಯಿಕ ಮಾಂಸದಂತೆಯೇ ಇರುತ್ತವೆ.

ಪ್ರಾಣಿಗಳ ಕೋಶಸಂವರ್ಧಿತ ಮಾಂಸ ಉತ್ಪಾದನೆಯ ತಂತ್ರಜ್ಞಾನವನ್ನು ಅರ್ಥಮಾಡಿಕೊಳ್ಳಲು, ಸಸ್ಯಗಳ ಅಂಗಾಂಶ ಕೃಷಿಯನ್ನು (Tissue Culture) ಉದಾಹರಣೆಯಾಗಿ ಪರಿಗಣಿಸಬಹುದು. ಒಂದು ಸಸ್ಯದ ಅಂಗಾಂಶವನ್ನು ಪೋಷಕಾಂಶಯುಕ್ತ ಮಾಧ್ಯಮದಲ್ಲಿ ಬೆಳೆಸಿ, ಅದರಿಂದ ಹೊಸ ಸಸಿಗಳನ್ನು ಉತ್ಪಾದಿಸುವಂತೆ, ಪ್ರಾಣಿಯ ಸ್ನಾಯು ಅಥವಾ ಕೊಬ್ಬಿನ ಜೀವಕೋಶಗಳನ್ನು ಸೂಕ್ತ ಪೋಷಕಾಂಶಗಳು ಮತ್ತು ನಿಯಂತ್ರಿತ ಪರಿಸರದಲ್ಲಿ ಬೆಳೆಸಿ ಮಾಂಸವನ್ನು ಉತ್ಪಾದಿಸಬಹುದು.

ಸಸ್ಯಗಳ ಅಂಗಾಂಶ ಕೃಷಿಯಲ್ಲಿ ಹೊಸ ಸಸಿಗಳು ರೂಪುಗೊಂಡರೆ, ಪ್ರಾಣಿಗಳ ಕೋಶಸಂವರ್ಧನೆ ಯಲ್ಲಿ ಸ್ನಾಯು ಮತ್ತು ಕೊಬ್ಬಿನ ಕೋಶಗಳನ್ನು ವೃದ್ಧಿಸಿ ಮಾಂಸದ ಅಂಗಾಂಶವನ್ನು ರೂಪಿಸಲಾಗುತ್ತದೆ. ಅರ್ಥಾತ್ ಮಾಂಸ ಉತ್ಪಾದನೆಗೆ ಇಡೀ ಪ್ರಾಣಿಯನ್ನೇ ಸಾಕಿ ಬೆಳೆಸುವ ಬದಲು ಅದರ ಜೀವಕೋಶಗಳನ್ನೇ ಬಳಸುವುದು. ಸಿಂಗಪುರ, ಜಪಾನ್, ಇಸ್ರೇಲ್, ಅಮೆರಿಕ, ದಕ್ಷಿಣ ಕೊರಿಯಾ ಮತ್ತು ಚೀನಾದಂತಹ ದೇಶಗಳು ಆಹಾರ ಭದ್ರತೆ ಹಾಗೂ ಭವಿಷ್ಯದ ಪ್ರೋಟಿನ್ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ತಂತ್ರಜ್ಞಾನದ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆ ಮಾಡುತ್ತಿವೆ.

ಸಿಂಗಪುರವು 2020ರಲ್ಲಿ ಕೋಶಸಂವರ್ಧಿತ ಮಾಂಸದ ವಾಣಿಜ್ಯ ಮಾರಾಟಕ್ಕೆ ಅನುಮತಿ ನೀಡಿದ ಮೊದಲ ದೇಶವೆನಿಸಿದೆ. ಅಮೆರಿಕದಲ್ಲಿಯೂ ಸಂಬಂಧಿತ ನಿಯಂತ್ರಣ ಸಂಸ್ಥೆಗಳು ಕೆಲವು ಉತ್ಪನ್ನ‌ ಗಳಿಗೆ ಹಂತ ಹಂತವಾಗಿ ಅನುಮೋದನಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿವೆ. ಭಾರತವೂ ಕೃಷಿ, ಪಶುಸಂಗೋಪನೆ, ಔಷಧಿಯ ಜೈವಿಕ ತಂತ್ರಜ್ಞಾನ ಮತ್ತು ಆಹಾರ ಸಂಸ್ಕರಣೆಯಲ್ಲಿ ಉನ್ನತ ಅನುಭವ ಹೊಂದಿದೆ.

ಈ ಕ್ಷೇತ್ರಗಳ ಸಹಕಾರದಿಂದ ಕೋಶಸಂವರ್ಧಿತ ಆಹಾರ ಉತ್ಪಾದನೆಗೆ ಬೇಕಾದ ಕೆಲವು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವೆಡೆ ರಚನಾತ್ಮಕ ಪ್ರಯತ್ನಗಳೂ ನಡೆಯುತ್ತಿವೆ. ಆರಂಭಿಕ ಪ್ರಯೋಗಗಳಲ್ಲಿ ಕೋಶಸಂವರ್ಧಿತ ಮಾಂಸವನ್ನು ಉತ್ಪಾದಿಸುವ ವೆಚ್ಚ ಬಹಳ ಅಧಿಕವಾಗಿತ್ತು. ನಂತರದ ಸಂಶೋಧನೆಗಳು ಉತ್ಪಾದನಾ ವೆಚ್ಚವನ್ನು ತಗ್ಗಿಸುವ ಹಲವು ಮಾರ್ಗಗಳನ್ನು ಗುರುತಿಸಿವೆ.

ಉತ್ಪಾದನೆಯ ಪ್ರಮಾಣ ಹೆಚ್ಚಿ, ತಂತ್ರಜ್ಞಾನವು ಕೈಗಾರಿಕಾ ಮಟ್ಟದಲ್ಲಿ ಸ್ಥಿರಗೊಂಡಂತೆ, ಬೃಹತ್ ಪ್ರಮಾಣದ ಉತ್ಪಾದನೆಯಿಂದ ದೊರೆಯುವ economies of scale, ಪೋಷಕ ಮಾಧ್ಯಮಗಳ ವೆಚ್ಚ ಇಳಿಕೆ ಮತ್ತು ಸ್ವಯಂಚಾಲಿತ ಪ್ರಕ್ರಿಯೆಗಳು ಕೋಶಸಂವರ್ಧಿತ ಮಾಂಸದ ಉತ್ಪಾದನಾ ವೆಚ್ಚವನ್ನು ಗಣನೀಯವಾಗಿ ತಗ್ಗಿಸುತ್ತದೆ.

ನಿಯಂತ್ರಿತ ಪರಿಸರದಲ್ಲಿ ಕೋಶಸಂವಽತ ಮಾಂಸವನ್ನು ಉತ್ಪಾದಿಸುವುದರಿಂದ, ಸಾಂಪ್ರದಾಯಿಕ ಪಶುಸಂಗೋಪನೆಯಲ್ಲಿ ಪ್ರಾಣಿಗಳು ಬೆಳೆಯಲು ತಿಂಗಳುಗಟ್ಟಲೇ ಕಾಯಬೇಕಾದ ಅವಧಿ ಗಣನೀಯವಾಗಿ ಕಡಿಮೆಯಾಗುತ್ತದೆ. ಆಹಾರಕ್ಕಾಗಿ ಪ್ರಾಣಿಗಳನ್ನು ಸಾಕುವ, ಅಮಾನವೀಯವಾಗಿ ಬಂಧನದಲ್ಲಿಡುವ ಮತ್ತು ಮಾಂಸಕ್ಕಾಗಿ ಕ್ರೂರವಾಗಿ ಕೊಲ್ಲುವ ಪದ್ಧತಿಯನ್ನು ಕೊನೆಗೊಳಿಸುವ ಉದ್ದೇಶದಿಂದ ಪ್ರಾಣಿ ಹಿತಾಸಕ್ತಿ ಸಂಘಟನೆಗಳು ಕೈಗಾರಿಕಾ ಪಶುಸಂಗೋಪನೆಯಲ್ಲಿ ಪ್ರಾಣಿಗಳು ಅನುಭವಿಸುವ ಸಂಕಷ್ಟ ಮತ್ತು ಹಿಂಸೆಯ ವಿರುದ್ಧ ದಶಕಗಳಿಂದ ಹೋರಾಡುತ್ತಿವೆ.

ಈ ಹಿನ್ನೆಲೆಯಲ್ಲಿ, ಪ್ರಾಣಿಗಳ ಜೀವಕೋಶಗಳಿಂದಲೇ ಮಾಂಸ ಉತ್ಪಾದಿಸುವ ಕೋಶಸಂವರ್ಧಿತ ಮಾಂಸದ ತಂತ್ರಜ್ಞಾನಕ್ಕೆ ಪೆಟಾ (PETA), ಫೋರ್ ಪಾಸ್ (FOUR PAWS), ಮರ್ಸಿ ಫಾರ್ ಅನಿಮಲ್ಸ್ (Mercy for Animals) ಮುಂತಾದ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ದಶಕಗಳ ಹಿಂದೆಯೇ ಪೆಟಾ, ಪ್ರಯೋಗಾಲಯದಲ್ಲಿ ವಾಣಿಜ್ಯ ಪ್ರಮಾಣದಲ್ಲಿ ಕೋಳಿ ಮಾಂಸ ಉತ್ಪಾದಿಸುವ ಸಂಶೋಧಕರಿಗೆ ಒಂದು ಮಿಲಿಯನ್ ಡಾಲರ್ ಬಹುಮಾನ ಘೋಷಿಸಿತ್ತು. ಸಸ್ಯಾಧಾರಿತ ಮಾಂಸವನ್ನು ಸಸ್ಯಾಹಾರಿಗಳು ಒಪ್ಪಿಕೊಳ್ಳುವುದು ಸಹಜಕ್ರಿಯೆ. ಆದರೆ ಪ್ರಾಣಿಯ ಜೀವಕೋಶ ಗಳಿಂದಲೇ ಬೆಳೆಸಿದ ಮಾಂಸದ ವಿಚಾರದಲ್ಲಿ ಆಹಾರ ಪದ್ಧತಿಯ ಸಾಂಪ್ರದಾಯಿಕ ನಂಬಿಕೆಗಳು ಮತ್ತು ವ್ಯಾಖ್ಯಾನಗಳ ಚೌಕಟ್ಟೇ ಮರುಪರಿಶೀಲನೆಗೆ ಒಳಗಾಗಬಹುದು. ಭ್ರೂಣವಾಗಿ ಬೆಳೆಯದೆ, ಮರಿಯಾಗಿ ಮೊಟ್ಟೆಯೊಡೆಯದ ಫಾರ್ಮ್ ಮೊಟ್ಟೆಗಳನ್ನು ಅನೇಕ ಸಸ್ಯಾಹಾರಿಗಳು ಸ್ವೀಕರಿಸಿರು ವಂತೆಯೇ, ಪ್ರಾಣಿಯನ್ನು ಕೊಲ್ಲದೇ ಅದರ ಜೀವಕೋಶಗಳಿಂದ ಬೆಳೆಸಿದ ಮಾಂಸವೂ ಭವಿಷ್ಯದಲ್ಲಿ ಅನೇಕ ಸಸ್ಯಾಹಾರಿಗಳ ಒಪ್ಪಿಗೆ ಗಳಿಸಬಹುದು.

ಮಾಂಸಕ್ಕೂ ಪ್ರಾಣಿಹತ್ಯೆಗೂ ಶತಮಾನಗಳಿಂದ ಬೆಸೆದುಕೊಂಡಿರುವ ಸಂಬಂಧವನ್ನು ವಿಜ್ಞಾನ ಕಳಚಿಹಾಕಿದರೆ, ಆಹಾರದ ಕುರಿತ ನಮ್ಮ ನಂಬಿಕೆಗಳು, ನೈತಿಕ ಮೌಲ್ಯಗಳು ಮತ್ತು ಸಾಂಪ್ರ‌ ದಾಯಿಕ ಗಡಿಗಳೂ ಹೊಸ ರೂಪ ಪಡೆಯಬಹುದು. ಇದಲ್ಲದೆ, ಮಾಂಸ ಉತ್ಪಾದನೆಗಾಗಿ ಪ್ರಾಣಿಗಳ ಸಾಕಣೆ, ಮೇವು ಬೆಳೆಸುವಿಕೆ ಮತ್ತು ಅರಣ್ಯನಾಶದಿಂದ ಉಂಟಾಗುವ ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮೂಲಕ, ಈ ತಂತ್ರಜ್ಞಾನವು ಜಾಗತಿಕ ತಾಪಮಾನ ಏರಿಕೆಯ ವೇಗವನ್ನು ತಗ್ಗಿಸಲು ಮತ್ತು ಭೂಮಿಯ ಪರಿಸರ ಸಮತೋಲನವನ್ನು ಕಾಪಾಡುವ ಮಹತ್ವದ ಕ್ಯಾಟಲಿಸ್ಟ್ ಆಗಬಹುದು.