ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dr Rohith Kumar H G Column: ಚಾಂಡಿಪುರ ವೈರಸ್ ಮಕ್ಕಳನ್ನೇ ಏಕೆ ಗುರಿಯಾಗಿಸುತ್ತದೆ?

ಚಾಂಡಿಪುರ ವೈರಸ್ ಹೊಸ ವೈರಸ್ ಅಲ್ಲ. ಇದರ ಕಥೆ ಸುಮಾರು ಆರು ದಶಕಗಳಷ್ಟು ಹಳೆಯದು. 1965ರಲ್ಲಿ ಮಹಾರಾಷ್ಟ್ರದ ನಾಗಪುರ ಜಿಲ್ಲೆಯ ಚಾಂಡಿಪುರ ಎಂಬ ಹಳ್ಳಿಯಲ್ಲಿ ಕಂಡುಬಂದ ಜ್ವರದ ಪ್ರಕರಣಗಳ ತನಿಖಾ ಅಧ್ಯಯನ ನಡೆಸುತ್ತಿದ್ದ ಭಾರತೀಯ ವಿಜ್ಞಾನಿಗಳು ಈ ವೈರಸ್ ಅನ್ನು ಮೊದಲ ಬಾರಿಗೆ ಪತ್ತೆಹಚ್ಚಿದರು. ಹಾಗಾಗಿ, ಇದಕ್ಕೆ ‘ಚಾಂಡಿಪುರ ವೈರಸ್’ ಎಂದು ಕರೆಯಲಾಯಿತು.

ಚಾಂಡಿಪುರ ವೈರಸ್ ಮಕ್ಕಳನ್ನೇ ಏಕೆ ಗುರಿಯಾಗಿಸುತ್ತದೆ?

-

Profile
Ashok Nayak Aug 26, 2026 5:00 AM

ಸೋಂಕು ಸ್ಫೋಟ

ಡಾ.ರೋಹಿತ್ ಕುಮಾರ್ ಎಚ್.ಜಿ.

ಇತ್ತೀಚೆಗೆ ಗುಜರಾತ್‌ನಲ್ಲಿ ಕಾಣಿಸಿಕೊಂಡಿರುವ ಚಾಂಡಿಪುರ ವೈರಸ್ ಸೋಂಕಿಗೆ 22 ಮಕ್ಕಳು ಸಾವನ್ನಪ್ಪಿದ್ದಾರೆ. ಶಂಕಿತ 184 ಪ್ರಕರಣಗಳಲ್ಲಿ 35 ಮಂದಿ ಚಾಂಡಿಪುರ ವೈರಸ್‌ನಿಂದ ಸೋಂಕಿತ ರಾಗಿರುವುದು ದೃಢಪಟ್ಟಿದೆ. ರಾಜಸ್ಥಾನದಲ್ಲೂ ಕನಿಷ್ಠ 3 ಜನರಿಗೆ ಸೋಂಕು ಕಾಣಿಸಿದ್ದು, ಇಬ್ಬರ ಸಾವಿಗೆ ಕಾರಣವಾಗಿದೆ. ದೃಢಪಟ್ಟ ಸೋಂಕಿತರಲ್ಲಿ ಎಲ್ಲರೂ 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರುವುದು ಹೆಚ್ಚು ಕಳವಳವನ್ನುಂಟು ಮಾಡಿದೆ. ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿ ಕೇಂದ್ರ ಸರಕಾರವು ರಾಷ್ಟ್ರೀಯ ತಜ್ಞರ ತಂಡವನ್ನು ಗುಜರಾತಿಗೆ ಕಳುಹಿಸಿ ಪರಿಸ್ಥಿತಿ ಯನ್ನು ಪರಿಶೀಲಿಸುತ್ತಿದೆ. ಆದರೆ, ಈ ವೈರಸ್ ಏಕಾಏಕಿ ಎಲ್ಲಿಂದ ಬಂತು? ಇದು ಹೊಸ ವೈರಸ್ಸಾ? ಏಕೆ ಮುಖ್ಯವಾಗಿ ಮಕ್ಕಳನ್ನೇ ಬಾಧಿಸುತ್ತದೆ? ಕೋವಿಡ್‌ನಂತೆ ಇದು ಸಹ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆಯೇ? ಈ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳುವುದು ಅತ್ಯಗತ್ಯ.

ಚಾಂಡಿಪುರ ವೈರಸ್ ಹೊಸ ವೈರಸ್ ಅಲ್ಲ. ಇದರ ಕಥೆ ಸುಮಾರು ಆರು ದಶಕಗಳಷ್ಟು ಹಳೆಯದು. 1965ರಲ್ಲಿ ಮಹಾರಾಷ್ಟ್ರದ ನಾಗಪುರ ಜಿಲ್ಲೆಯ ಚಾಂಡಿಪುರ ಎಂಬ ಹಳ್ಳಿಯಲ್ಲಿ ಕಂಡುಬಂದ ಜ್ವರದ ಪ್ರಕರಣಗಳ ತನಿಖಾ ಅಧ್ಯಯನ ನಡೆಸುತ್ತಿದ್ದ ಭಾರತೀಯ ವಿಜ್ಞಾನಿಗಳು ಈ ವೈರಸ್ ಅನ್ನು ಮೊದಲ ಬಾರಿಗೆ ಪತ್ತೆಹಚ್ಚಿದರು. ಹಾಗಾಗಿ, ಇದಕ್ಕೆ ‘ಚಾಂಡಿಪುರ ವೈರಸ್’ ಎಂದು ಕರೆಯ ಲಾಯಿತು. ನಂತರ ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಯ ವಿಜ್ಞಾನಿಗಳು ಇದರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿದರು. ಆರಂಭದಲ್ಲಿ ಇದು ಸಾಮಾನ್ಯ ಜ್ವರವನ್ನು ಉಂಟುಮಾಡುವ ವೈರಸ್ ಎಂದು ಭಾವಿಸಲಾಗಿತ್ತು. ಆದರೆ ಸುಮಾರು ನಾಲ್ಕು ದಶಕಗಳ ನಂತರ ಅಂದರೆ 2003ರಲ್ಲಿ ಈ ವೈರಸ್‌ನ ಮಾರಣಾಂತಿಕ ಸಾಮರ್ಥ್ಯ ಮತ್ತೊಮ್ಮೆ ಆತಂಕಕಾರಿ ರೀತಿಯಲ್ಲಿ ಬೆಳಕಿಗೆ ಬಂತು.

ಇದನ್ನೂ ಓದಿ: Dr. Rohith Kumar H G Column: ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದೇಕೆ?

2003ರ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಆಂಧ್ರ ಪ್ರದೇಶದಲ್ಲಿ 329 ಶಂಕಿತ ಎನ್ಸೆಫಲೈಟಿಸ್ ಪ್ರಕರಣಗಳು ವರದಿಯಾಗಿದ್ದು, 183 ಮಂದಿ ಮೃತಪಟ್ಟಿದ್ದರು. ನಂತರದ ಅಧ್ಯಯನಗಳು ಈ ಸೋಂಕುಗಳಿಗೆ ಚಾಂಡಿ ಪುರ ವೈರಸ್ ಪ್ರಮುಖ ಕಾರಣವಾಗಿದ್ದುದನ್ನು ಸೂಚಿಸಿದವು. ಈ ಏಕಾಏಕಿ ಉಂಟಾದ ಸೋಂಕಿನ ಸಂದರ್ಭದಲ್ಲಿ 9 ತಿಂಗಳಿಂದ 14 ವರ್ಷದವರೆಗಿನ ಮಕ್ಕಳೇ ಮುಖ್ಯವಾಗಿ ಸೋಂಕಿಗೆ ಒಳಗಾಗಿದ್ದರು. ಅಲ್ಲದೆ, ಇವರಲ್ಲಿ ಬಹುತೇಕ ಮಕ್ಕಳು ಆಸ್ಪತ್ರೆಗೆ ದಾಖಲಾದ 48 ಗಂಟೆಗಳ ಒಳಗೆ ನಿಧನರಾಗಿದ್ದರು. ಅಲ್ಲಿಂದ 2024 ರವರೆಗೆ ಗುಜರಾತ್, ಆಂಧ್ರ ಪ್ರದೇಶ, ಒಡಿಶಾ, ಬಿಹಾರ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಚಾಂಡಿಪುರ ವೈರಸ್ ಸೋಂಕುಗಳು ಹಲವು ಬಾರಿ ದಾಖಲಾಗಿದ್ದವು.

ಮಕ್ಕಳನ್ನೇ ಏಕೆ ಹೆಚ್ಚು ಬಾಧಿಸುತ್ತದೆ?

ಈ ವೈರಸ್‌ನ ಅತ್ಯಂತ ವಿಚಿತ್ರ ಲಕ್ಷಣವೆಂದರೆ, ಇದು ಮುಖ್ಯವಾಗಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನೇ ತೀವ್ರವಾಗಿ ಬಾಧಿಸುತ್ತದೆ. ಆದರೆ ಹೀಗೇಕೆ ಎನ್ನುವ ಪ್ರಶ್ನೆಗೆ ವಿಜ್ಞಾನದಲ್ಲಿ ಇನ್ನೂ ಸಂಪೂರ್ಣ ಉತ್ತರ ಸಿಕ್ಕಿಲ್ಲ. ಮಕ್ಕಳ ಪ್ರತಿರಕ್ಷಣಾ ವ್ಯವಸ್ಥೆಯ ಬೆಳವಣಿಗೆಯ ಹಂತ, ನರಕೋಶಗಳ ವಯಸ್ಸಿಗೆ ಸಂಬಂಧಸಿದ ಗುಣಲಕ್ಷಣಗಳು ಹಾಗೂ ವೈರಸ್ ಮೆದುಳಿಗೆ ಪ್ರವೇಶಿಸುವ ಮತ್ತು ಅಲ್ಲಿ ವೇಗವಾಗಿ ವೃದ್ಧಿಸುವ ಸಾಮರ್ಥ್ಯ, ಹೀಗೆ ಹಲವು ಅಂಶಗಳು ಇದರಲ್ಲಿ ಪಾತ್ರ ವಹಿಸಬಹುದು ಎಂದು ಅಧ್ಯಯನಗಳು ಸೂಚಿಸುತ್ತವೆ.

72 ok

ಚಾಂಡಿಪುರ ವೈರಸ್ ನಮ್ಮ ಮೆದುಳನ್ನು ರಕ್ಷಿಸಲು ಇರುವ ‘ರಕ್ತ-ಮೆದುಳು ತಡೆಗೋಡೆ’ಯನ್ನು ಹೇಗೆ ದಾಟಿ ಕೇಂದ್ರ ನರಮಂಡಲವನ್ನು ತಲುಪುತ್ತದೆ ಎಂಬುದನ್ನು ಇನ್ನೂಅರಿಯಲಾಗಿಲ್ಲ. ವೈರಸ್ ಮೆದುಳಿಗೆ ತಲುಪಿದ ನಂತರ ನರಕೋಶಗಳಲ್ಲಿ ವೃದ್ಧಿಯಾಗಿ ಅವುಗಳಿಗೆ ಹಾನಿ ಉಂಟು ಮಾಡುವುದರಿಂದ ತೀವ್ರ ಮೆದುಳಿನ ಉರಿಯೂತ ಮತ್ತು ನರಮಂಡಲದ ಸಮಸ್ಯೆಗಳು ಕಾಣಿಸಿ ಕೊಳ್ಳಬಹುದು ಎಂದು ಅಧ್ಯಯನ ಗಳು ಸೂಚಿಸುತ್ತವೆ. ಮಕ್ಕಳಲ್ಲಿ ಈ ಪ್ರಕ್ರಿಯೆ ಏಕೆ ಹೆಚ್ಚು ತೀವ್ರ ವಾಗುತ್ತದೆ ಎಂಬುದೂ ಇನ್ನೂ ಸಂಶೋಧನೆಯ ವಿಷಯವಾಗಿದೆ.

ಚಾಂಡಿಪುರ ವೈರಸ್ ಸೋಂಕಿನಲ್ಲಿ ವೈದ್ಯರನ್ನು ಹೆಚ್ಚು ಆತಂಕಕ್ಕೀಡು ಮಾಡುವುದು ರೋಗ ಗಂಭೀರ ಗೊಳ್ಳುವ ವೇಗ. ರೋಗದ ಲಕ್ಷಣಗಳು ಆರಂಭವಾದಾಗ ಮಗುವಿಗೆ ಸಾಮಾನ್ಯವಾಗಿ ತೀವ್ರ ಜ್ವರ ಕಾಣಿಸಿ ಕೊಳ್ಳುತ್ತದೆ. ಅದರೊಂದಿಗೆ ವಾಂತಿ, ತಲೆನೋವು, ಸುಸ್ತು ಮತ್ತು ಹೊಟ್ಟೆನೋವು ಕಾಣಿಸಬಹುದು. ಕೆಲವು ಮಕ್ಕಳಲ್ಲಿ ಕೆಲವೇ ಗಂಟೆಗಳಲ್ಲಿ ಮೂರ್ಛೆ, ಪ್ರಜ್ಞಾಹೀನತೆ ಅಥವಾ ಇತರ ತೀವ್ರ ನರಲಕ್ಷಣಗಳು ಕಾಣಿಸಿಕೊಳ್ಳಬಹುದು.

ಕೆಲವು ಪ್ರಕರಣಗಳಲ್ಲಿ ರೋಗ ಲಕ್ಷಣಗಳು ಆರಂಭವಾದ 48 ರಿಂದ 72 ಗಂಟೆಗಳೊಳಗೆ ಪರಿಸ್ಥಿತಿ ಜೀವಕ್ಕೆ ಅಪಾಯಕಾರಿ ಆಗಬಹುದು. ಇದೇ ಕಾರಣದಿಂದ ಮಕ್ಕಳಲ್ಲಿ ಜ್ವರದೊಂದಿಗೆ ಮೂರ್ಛೆ ಅಥವಾ ಪ್ರeಯಲ್ಲಿ ಬದಲಾವಣೆ ಕಂಡುಬಂದರೆ ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವುದು ಅತ್ಯಗತ್ಯ. ಒಂದು ಮುಖ್ಯ ವ್ಯತ್ಯಾಸ ವನ್ನು ಇಲ್ಲಿ ನೆನಪಿಡಬೇಕು. ‘ಅಕ್ಯೂಟ್ ಎನ್ಸೆಫಲೈಟಿಸ್ ಸಿಂಡ್ರೋಮ್’ಗೆ ಹಲವು ಕಾರಣಗಳಿರ ಬಹುದು. ಅವುಗಳಲ್ಲಿ ಚಾಂಡಿಪುರ ವೈರಸ್ ಕೂಡ ಒಂದು.

ವೈರಸ್ ಹೇಗೆ ಹರಡುತ್ತದೆ?

ಕೊರೊನಾ ವೈರಸ್‌ನಂತೆ ಇದು ಒಬ್ಬರಿಂದ ಮತ್ತೊಬ್ಬರಿಗೆ ಉಸಿರಾಟದ ಮೂಲಕ ಹರಡುವುದಿಲ್ಲ. ಚಾಂಡಿಪುರ ವೈರಸ್ ಕೀಟಗಳಿಂದ ಹರಡುವ ರೋಗಾಣುವಾಗಿದೆ. ಸಾಮಾನ್ಯವಾಗಿ ಸೋಂಕಿತ ಸ್ಯಾಂಡ್- (ಮರಳು ನೊಣ)ಗಳ ಕಡಿತದ ಮೂಲಕ ಈ ವೈರಸ್ ಮನುಷ್ಯರಿಗೆ ಹರಡುತ್ತದೆ. ಕೆಲವು ಜಾತಿಯ ಸೊಳ್ಳೆ ಗಳು ಮತ್ತು ಇತರ ಕೀಟಗಳೂ ವೈರಸ್ ಹರಡುವಲ್ಲಿ ಪಾತ್ರವಹಿಸಬಹುದು ಎಂದು ಅಧ್ಯಯನಗಳು ಸೂಚಿಸಿವೆ. ಆದರೆ, ಇದುವರೆಗೆ ಮನುಷ್ಯರಿಂದ ಮನುಷ್ಯರಿಗೆ ಯಾವುದೇ ರೀತಿಯಲ್ಲಿ ಈ ವೈರಸ್ ಹರಡಿರುವುದು ದಾಖಲಾಗಿಲ್ಲ.

ಕಳೆದ ಹಲವು ದಶಕಗಳ ಭಾರತದಲ್ಲಿನ ಪ್ರಮುಖ ಸೋಂಕಿನ ಸ್ಫೋಟಗಳನ್ನು ಗಮನಿಸಿದರೆ, ಚಾಂಡಿಪುರಾ ವೈರಸ್ ಪ್ರಕರಣಗಳು ಹೆಚ್ಚಾಗಿ ಮಳೆಗಾಲದ ಅವಧಿಯಲ್ಲಿ ಕಾಣಿಸಿಕೊಂಡಿರುವುದು ಗಮನಾರ್ಹ. ಮಳೆಗಾಲದಲ್ಲಿ ತೇವಾಂಶ, ಉಷ್ಣತೆ ಮತ್ತು ಪರಿಸರದ ಕೆಲವು ಬದಲಾವಣೆಗಳು ಈ ಕೀಟಗಳ ಬೆಳವಣಿಗೆ ಮತ್ತು ಹರಡುವಿಕೆಗೆ ಅನುಕೂಲಕರ ಪರಿಸ್ಥಿತಿಯನ್ನು ಸೃಷ್ಟಿಸಬಹುದು. ಗ್ರಾಮೀಣ ಪ್ರದೇಶಗಳಲ್ಲಿನ ಕಳಪೆ ವಸತಿ ವ್ಯವಸ್ಥೆ, ಮಣ್ಣಿನ ಗೋಡೆಗಳು, ಪ್ರಾಣಿಗಳ ಕೊಟ್ಟಿಗೆಗಳು ಹಾಗೂ ಅಸಮರ್ಪಕ ನೈರ್ಮಲ್ಯ ಇತ್ಯಾದಿಗಳು ಸ್ಯಾಂಡ್-ಗಳ ಸಂತಾನೋತ್ಪತ್ತಿಗೆ ಅನುಕೂಲ ವಾಗಬಹುದು. ಪರಿಣಾಮವಾಗಿ ವೈರಸ್ ಹರಡುವ ಅವಕಾಶವೂ ಹೆಚ್ಚಾಗಬಹುದು.

ಔಷಧಿ ಅಥವಾ ಲಸಿಕೆ ಇದೆಯೇ?

ದುರದೃಷ್ಟವಶಾತ್, ಚಾಂಡಿಪುರ ವೈರಸ್‌ಗೆ ಇನ್ನೂ ಲಸಿಕೆ ಅಥವಾ ನಿರ್ದಿಷ್ಟ ಆಂಟಿವೈರಲ್ ಔಷಧಿ ಲಭ್ಯ ವಿಲ್ಲ. ಹೀಗಾಗಿ ಚಿಕಿತ್ಸೆ ಮುಖ್ಯವಾಗಿ ರೋಗಿಯ ಲಕ್ಷಣಗಳನ್ನು ನಿಯಂತ್ರಿಸುವುದು ಮತ್ತು ಅಗತ್ಯವಿರುವ ತೀವ್ರ ನಿಗಾ ಚಿಕಿತ್ಸೆಯನ್ನು ನೀಡುವುದರ ಮೇಲೆ ಅವಲಂಬಿತವಾಗಿದೆ. ಮಗುವಿಗೆ ಉಸಿರಾಟದ ತೊಂದರೆ ಇದ್ದರೆ ಉಸಿರಾಟದ ನೆರವು, ಮೂರ್ಛೆ ನಿಯಂತ್ರಿಸಲು ಔಷಧಿಗಳು ಮತ್ತು ಮೆದುಳಿನ ಉರಿಯೂತದಿಂದ ಉಂಟಾಗುವ ತೊಂದರೆಗಳನ್ನು ನಿಯಂತ್ರಿಸುವ ತುರ್ತು ಚಿಕಿತ್ಸೆ ಯನ್ನು ನೀಡಲಾಗುತ್ತದೆ. ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ದಾಖಲಿಸಿ, ಅಗತ್ಯವಿದ್ದಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ನೀಡಿದರೆ ಬದುಕುಳಿಯುವ ಸಾಧ್ಯತೆ ಹೆಚ್ಚುತ್ತದೆ.

ಈ ವೈರಸ್ ಕುರಿತು ಅನಗತ್ಯ ಭಯ ಬೇಡ. ಆದರೆ ನಿರ್ಲಕ್ಷ ವೂ ಬೇಡ. ಪೋಷಕರು ವಿಶೇಷವಾಗಿ ಮಳೆಗಾಲ ದಲ್ಲಿ ಮಕ್ಕಳಿಗೆ ತೀವ್ರ ಜ್ವರ, ವಾಂತಿ, ಅತಿಯಾದ ನಿದ್ರೆ, ಮೂರ್ಛೆ ಅಥವಾ ಪ್ರಜ್ಞೆಯಲ್ಲಿ ಬದಲಾವಣೆ ಕಂಡುಬಂದರೆ ವಿಳಂಬ ಮಾಡದೆ ಆಸ್ಪತ್ರೆಗೆ ಕರೆದೊಯ್ಯಬೇಕು. ಗ್ರಾಮೀಣ ಪ್ರದೇಶ ಗಳಲ್ಲಿ ಮನೆಗಳ ಗೋಡೆಗಳ ಬಿರುಕುಗಳನ್ನು ಮುಚ್ಚುವುದು, ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛ ವಾಗಿಡುವುದು, ಸ್ಯಾಂಡ್ - ಗಳ ನಿಯಂತ್ರಣಕ್ಕಾಗಿ ಕೀಟನಾಶಕ ಸಿಂಪಡಣೆ, ಮಕ್ಕಳನ್ನು ಕೀಟಗಳ ಕಡಿತದಿಂದ ರಕ್ಷಿಸಲು ಉದ್ದನೆಯ ಬಟ್ಟೆ, ಸೂಕ್ತ ಕೀಟ ನಿವಾರಕಗಳನ್ನು ಬಳಸುವುದು ಮತ್ತು ಸೂಕ್ಷ್ಮ ಜಾಲರಿಯ ಸೊಳ್ಳೆಪರದೆಗಳನ್ನು ಬಳಸುವುದು ಸೋಂಕಿನ ಅಪಾಯವನ್ನು ಕಡಿಮೆ ಮಾಡಬಹುದು.

ನಾವು ಕಲಿಯಬೇಕಾದ ಪಾಠ

ಅಪರೂಪದ ಕಾಯಿಲೆ ಎಂದರೆ ಅಪ್ರಮುಖ ಕಾಯಿಲೆ ಎಂದಲ್ಲ. ಚಾಂಡಿಪುರ ವೈರಸ್‌ನಂತಹ ಸೋಂಕು ಗಳ ವಿಷಯದಲ್ಲಿ, ಪ್ರತಿ ಬಾರಿ ಸೋಂಕಿನ ಸೋಟ ಸಂಭವಿಸಿದಾಗ ಮಾತ್ರ ಎಚ್ಚೆತ್ತು ಕೊಳ್ಳುವ ಬದಲು, ಸೋಂಕು ಕಾಣಿಸಿಕೊಳ್ಳುವ ಮೊದಲೇ ಸಿದ್ಧವಾಗಿರುವ ವ್ಯವಸ್ಥೆಯನ್ನು ನಾವು ನಿರ್ಮಿಸಬೇಕಾಗಿದೆ. 1965ರಲ್ಲಿ ಪತ್ತೆಯಾದ ಈ ವೈರಸ್, 2003ರಲ್ಲಿ ದೊಡ್ಡ ಪ್ರಮಾಣದ ಸಾವಿಗೆ ಕಾರಣವಾಯಿತು. ನಂತರವೂ ಹಲವು ರಾಜ್ಯಗಳಲ್ಲಿ ಸೋಂಕಿನ ಸ್ಫೋಟಗಳು ದಾಖಲಾಗಿವೆ.

ಆದರೂ, ಆರು ದಶಕಗಳ ನಂತರವೂ ಮಕ್ಕಳಲ್ಲಿ ಈ ವೈರಸ್ ಏಕೆ ಹೆಚ್ಚು ತೀವ್ರವಾಗುತ್ತದೆ ಎಂಬ ಮೂಲಭೂತ ಪ್ರಶ್ನೆಗೆ ಸಂಪೂರ್ಣ ಉತ್ತರ ಸಿಕ್ಕಿಲ್ಲ. ನಿರ್ದಿಷ್ಟ ಲಸಿಕೆ ಅಥವಾ ಆಂಟಿವೈರಲ್ ಔಷಧಿಯೂ ನಮ್ಮ ಬಳಿ ಇಲ್ಲ. ಇದು ವಿಜ್ಞಾನ ವಿಫಲವಾಗಿದೆ ಎಂಬುದರ ಸೂಚನೆಯಲ್ಲ. ಬದಲಿಗೆ, ಇಂತಹ ಸೋಂಕುಗಳ ಮೇಲೆ ಸೋಂಕಿನ ಸ್ಫೋಟ ಮುಗಿದ ನಂತರವೂ ನಿರಂತರವಾಗಿ ಸಂಶೋಧನೆ ನಡೆಸುವ ಅಗತ್ಯವನ್ನು ತೋರಿಸುತ್ತದೆ.

ಸೋಂಕು ಕಾಣಿಸಿಕೊಂಡಾಗ ತುರ್ತು ಪ್ರತಿಕ್ರಿಯೆ ನೀಡುವುದು ಅಗತ್ಯವೇ ಸರಿ. ಆದರೆ ಅದಕ್ಕಿಂತ ಮುಖ್ಯವಾಗಿ, ಸೋಂಕಿನ ಸ್ಫೋಟಗಳ ನಡುವಿನ ಅವಧಿಯಲ್ಲಿಯೇ ಸಂಶೋಧನೆ, ವೈರಸ್ ಮತ್ತು ಅದರ ವಾಹಕಗಳ ಮೇಲ್ವಿಚಾರಣೆ, ತ್ವರಿತ ರೋಗನಿರ್ಣಯ ಹಾಗೂ ಸ್ಥಳೀಯ ಆರೋಗ್ಯ ವ್ಯವಸ್ಥೆ ಗಳ ಸಿದ್ಧತೆ ಯನ್ನು ಬಲಪಡಿಸಬೇಕು. ಸೋಂಕಿನ ಸ್ಫೋಟ ಮುಗಿದ ನಂತರ ಸಂಶೋಧನೆಯ ಗಮನವೂ ಕಡಿಮೆ ಯಾಗಬಾರದು. ಮುಂದಿನ ಸ್ಫೋಟ ಬರುವ ಮೊದಲು ನಮಗೆ ಇನ್ನಷ್ಟು ಉತ್ತರಗಳು ಸಿದ್ಧವಾಗಿರಬೇಕು.

ಕೊರೊನಾ ಸಾಂಕ್ರಾಮಿಕದ ನಂತರ ವೈರಸ್‌ಗಳ ಬಗ್ಗೆ ನಮ್ಮಲ್ಲಿ ಜಾಗೃತಿ ಹೆಚ್ಚಾಗಿದೆ. ಆದರೆ ಪ್ರತಿಯೊಂದು ವೈರಸ್ ಒಂದೇ ರೀತಿಯಲ್ಲಿ ವರ್ತಿಸುವುದಿಲ್ಲ. ಚಾಂಡಿಪುರ ವೈರಸ್ ಸೋಂಕು ಅಪರೂಪವಾಗಿ ಕಾಣಿಸಿ ಕೊಂಡರೂ, ಮಕ್ಕಳಲ್ಲಿ ಅತ್ಯಂತ ವೇಗವಾಗಿ ಮೆದುಳನ್ನು ಬಾಧಿಸುವ ಸಾಮರ್ಥ್ಯ ಹೊಂದಿರುವು ದರಿಂದ ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಇಂತಹ ಸೋಂಕುಗಳ ಬಗ್ಗೆ ನಮ್ಮ ಪ್ರತಿಕ್ರಿಯೆ ಭಯವನ್ನು ಆಧರಿಸಿರಬಾರದು. ವೈಜ್ಞಾನಿಕ ಅರಿವು, ನಿರಂತರ ಸಂಶೋಧನೆ ಮತ್ತು ಮುಂಚಿತ ಸಿದ್ಧತೆಯನ್ನು ಆಧರಿಸಿರಬೇಕು.

(ಲೇಖಕರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಗ್ರ್ಯಾಂಟ್ಸ್ ಮ್ಯಾನೇಜರ್)