ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Raghava Sharma Nidle Column: ಮೋದಿ ಕಾ ಬಾಪ್‌ ಎನ್ನುವಷ್ಟು ಹತಾಶೆಯೇಕೆ ?

ಕೆಲ ದಿನಗಳ ಹಿಂದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಳಸಿದ ‘ಮೋದಿ ಕಾ ಬಾಪ್ ಭೀ ಜಾಯೇಗಾ’ ಎಂಬ ಮಾತು ರಾಜಕೀಯ ವಲಯದಲ್ಲಿ ಮತ್ತೊಂದು ವಿವಾದ ಎಬ್ಬಿಸಿದೆ. ಈ ಹೇಳಿಕೆ ಕೇವಲ ಒಬ್ಬ ರಾಜಕೀಯ ನಾಯಕನ ಆಕ್ರೋಶದ ಅಭಿವ್ಯಕ್ತಿಯೇ? ಅಥವಾ ಭಾರತೀಯ ರಾಜಕಾರಣದಲ್ಲಿ ದಿನೇದಿನೆ ಹೆಚ್ಚುತ್ತಿರುವ ವೈಯಕ್ತಿಕ ವಾಗ್ದಾಳಿ ಯ ಮತ್ತೊಂದು ನಿದರ್ಶನವೇ? ಇಂತಹ ಹೇಳಿಕೆಗಳು ವಿರೋಧ ಪಕ್ಷಗಳಿಗೆ ರಾಜಕೀಯ ಲಾಭ ತಂದುಕೊಡುತ್ತವೆಯೇ ಅಥವಾ ಅವುಗಳೇ ಆಡಳಿತ ಪಕ್ಷಕ್ಕೆ ಅನುಕೂಲಕರವಾಗಿ ಪರಿಣಮಿಸುತ್ತವೆಯೇ ಎಂಬ ಪ್ರಶ್ನೆಗಳು ಮತ್ತೆ ಚರ್ಚೆಗೆ ಬಂದಿವೆ.

ಮೋದಿ ಕಾ ಬಾಪ್‌ ಎನ್ನುವಷ್ಟು ಹತಾಶೆಯೇಕೆ ?

-

ಜನಪಥ

ಭಾರತದ ರಾಜಕಾರಣದಲ್ಲಿ ಮಾತಿನ ಸಮರ ಹೊಸದೇನಲ್ಲ. ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವಿನ ವಾಕ್ಸಮರ, ಪರಸ್ಪರ ಆರೋಪ- ಪ್ರತ್ಯಾರೋಪಗಳು ಪ್ರಜಾಪ್ರಭುತ್ವದ ಸಹಜ ಲಕ್ಷಣಗಳು. ಆದರೆ ರಾಜಕೀಯ ಟೀಕೆಗಳು ನೀತಿ, ಸಿದ್ಧಾಂತ, ಆಡಳಿತ ವೈಫಲ್ಯ ಮತ್ತು ಸಾರ್ವಜನಿಕ ಸಮಸ್ಯೆಗಳ ಚರ್ಚೆಯಿಂದ ಹೊರಬಂದು ವ್ಯಕ್ತಿಯ ಕುಟುಂಬ, ಜನ್ಮ, ಜಾತಿ, ಧರ್ಮ ಹಾಗೂ ವೈಯಕ್ತಿಕ ಘನತೆ ಯನ್ನು ಗುರಿಯಾಗಿಸಿಕೊಂಡಾಗ ಪ್ರಜಾಪ್ರಭುತ್ವದಲ್ಲಿ ಚರ್ಚೆಯ ಗುಣಮಟ್ಟವೇ ಪ್ರಶ್ನೆಗೆ ಒಳಗಾಗು ತ್ತದೆ.

ಕೆಲ ದಿನಗಳ ಹಿಂದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಳಸಿದ ‘ಮೋದಿ ಕಾ ಬಾಪ್ ಭೀ ಜಾಯೇಗಾ’ ಎಂಬ ಮಾತು ರಾಜಕೀಯ ವಲಯದಲ್ಲಿ ಮತ್ತೊಂದು ವಿವಾದ ಎಬ್ಬಿಸಿದೆ. ಈ ಹೇಳಿಕೆ ಕೇವಲ ಒಬ್ಬ ರಾಜಕೀಯ ನಾಯಕನ ಆಕ್ರೋಶದ ಅಭಿವ್ಯಕ್ತಿಯೇ? ಅಥವಾ ಭಾರತೀಯ ರಾಜಕಾರಣದಲ್ಲಿ ದಿನೇದಿನೆ ಹೆಚ್ಚುತ್ತಿರುವ ವೈಯಕ್ತಿಕ ವಾಗ್ದಾಳಿಯ ಮತ್ತೊಂದು ನಿದರ್ಶನವೇ? ಇಂತಹ ಹೇಳಿಕೆಗಳು ವಿರೋಧ ಪಕ್ಷಗಳಿಗೆ ರಾಜಕೀಯ ಲಾಭ ತಂದುಕೊಡುತ್ತವೆಯೇ ಅಥವಾ ಅವುಗಳೇ ಆಡಳಿತ ಪಕ್ಷಕ್ಕೆ ಅನುಕೂಲಕರವಾಗಿ ಪರಿಣಮಿಸುತ್ತವೆಯೇ ಎಂಬ ಪ್ರಶ್ನೆಗಳು ಮತ್ತೆ ಚರ್ಚೆಗೆ ಬಂದಿವೆ.

ಮಲ್ಲಿಕಾರ್ಜುನ ಖರ್ಗೆಯವರಲ್ಲಿ ಹತಾಶೆ, ನೋವು ಇರುವುದು ಸಹಜ. ಕೇಂದ್ರದಲ್ಲಿ ಹಾಗೂ ಹಲವು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡು, ಸಂಘಟನಾತ್ಮಕವಾಗಿ ದುರ್ಬಲಗೊಂಡಿರುವ ತಮ್ಮ ಪಕ್ಷಕ್ಕೆ ಈಗಲೂ ಬಿಜೆಪಿಗೆ ಪರ್ಯಾಯ ಶಕ್ತಿಯಾಗಿ ಜನಸಮೂಹವನ್ನು ಸೆಳೆಯಲು ಅಸಾಧ್ಯವಾಗುತ್ತಿರುವಾಗ ಅವರಲ್ಲಿ ಸಂಕಟವಿರುವುದು ಸಹಜವೇ.

ಇದನ್ನೂ ಓದಿ: Raghava Sharma Nidle Column: ಅಷ್ಟಕ್ಕೂ ʼರೆಜೀಮ್ ಚೇಂಜ್ʼ ಯಾರಿಗೆ ಬೇಕಿದೆ ?

ವೋಟ್ ಚೋರಿ ವಿರುದ್ಧ ದೊಡ್ಡ ಹೋರಾಟ, ಪ್ರತಿಭಟನೆಗಳನ್ನು ನಡೆಸಿದರೂ ಅದು ಜನಾಂದೋಲನ ವಾಗಿ ಮಾರ್ಪಾಡಾಗದಿರುವುದು ಕೂಡ ಅವರ ಆಕ್ರೋಶಕ್ಕೆ ಕಾರಣವಿರಬಹುದು. ಮೇಲಾಗಿ, ಪಾಟ್ನಾದಲ್ಲಿ ಅವರು ಭಾಷಣ ಮಾಡುತ್ತಿದ್ದಾಗ ಬೆರಳೆಣಿಕೆ ಮಂದಿ ಮಾತ್ರ ಇದ್ದದ್ದು ಹತಾಶೆಯನ್ನು ದುಪ್ಪಟ್ಟು ಮಾಡಿರಬಹುದು. ಆದರೆ, ಅದೇನೇ ಇದ್ದರೂ, ಖರ್ಗೆ ಅವರಂತಹ ಹಿರಿಯ ಸಂಸದೀಯ ಪಟು, ರಾಜಕೀಯ ಮುತ್ಸದ್ದಿಯೊಬ್ಬರ ಬಾಯಿಯಿಂದ ಮೋದಿ ಕಾ ಬಾಪ್ ಭೀ ಜಾಯೇಗಾ ಎಂಬ ಹೇಳಿಕೆ ಹೊರಬೀಳುವುದು ಸಾರ್ವಜನಿಕ ಜೀವನದಲ್ಲಿ ಉತ್ತಮ ಮೇಲ್ಪಂಕ್ತಿಯನ್ನು ಹಾಕುವುದಿಲ್ಲ.

ಬಹುಶಃ ಇದೇ ತರಹದ ಹೇಳಿಕೆಯನ್ನು ಅವರ ಪುತ್ರ, ಸಚಿವ ಪ್ರಿಯಾಂಕ ಖರ್ಗೆ ಆಡಿದ್ದಿದ್ದರೆ ಜನ ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲವೇನೋ. ದೆಹಲಿಯಲ್ಲಿ ಪತ್ರಕರ್ತನಾಗಿ ಖರ್ಗೆಯವರನ್ನು ಅನೇಕ ಬಾರಿ ಹತ್ತಿರದಿಂದ ನೋಡಿದ್ದರಿಂದ, ಅವರಿಂದ ಬಾಪ್‌ನಂತಹ ಮಾತುಗಳನ್ನು ನಾನಂತೂ ನಿರೀಕ್ಷಿಸಿರಲಿಲ್ಲ.

ಕೆಲವೊಮ್ಮೆ ಮಾತಿನ ವೇಗದಲ್ಲಿ ಇಂತಹಾ ನುಡಿಮುತ್ತುಗಳು ಬಂದು ಹೋಗುತ್ತವೆ. ಆದರೆ, ಅದರಿಂದಾಗುವ ರಾಜಕೀಯ ಹಾನಿ? ಅಕ್ಟೋಬರ್ 25ರಂದು ಬಿಹಾರದ ಪಾಟ್ನಾದ ಬಾಪು ಸಭಾಗೃಹದಲ್ಲಿ ಬಿಹಾರದ ಮೊದಲ ಮುಖ್ಯಮಂತ್ರಿ ಶ್ರೀಕೃಷ್ಣ ಸಿಂಗ್ ಅವರ 139ನೇ ಜನ್ಮದಿನಾ ಚರಣೆ ಕಾರ್ಯಕ್ರಮ ನಡೆಯುತ್ತಿದ್ದಾಗ ಖರ್ಗೆಯವರು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಹಾಗೂ ಮತಗಳ್ಳತನದ ಕುರಿತು ಮಾತನಾಡುತ್ತಿದ್ದರು. ಚುನಾವಣಾ ಅಕ್ರಮಗಳಲ್ಲಿ ಭಾಗಿಯಾದವರನ್ನು ಜೈಲಿಗೆ ಕಳುಹಿಸುವುದಾಗಿ ಹೇಳುತ್ತಿದ್ದ ಸಂದರ್ಭದಲ್ಲಿ ಸಭೆಯಲ್ಲಿದ್ದ ವ್ಯಕ್ತಿಯೊಬ್ಬರ ‘ಮೋದಿ ನಹೀಂ ಜಾಯೇಗಾ’ ಎಂಬ ಮಾತಿಗೆ ವ್ಯಗ್ರಗೊಂಡು, ‘ಮೋದಿ ಕಾ ಬಾಪ್ ಭೀ ಜಾಯೇಗಾ’ (ಮೋದಿ ಮಾತ್ರವಲ್ಲ, ಅವರಪ್ಪನೂ ಹೋಗಬೇಕಾಗುತ್ತದೆ) ಎಂದು ಖರ್ಗೆ ಗುಡುಗಿದ್ದರು.

RSN 28

ನಹೀ ಜಾಯೇಗಾ ಎಂದ ವ್ಯಕ್ತಿಯನ್ನು ಕಾರ್ಯಕ್ರಮದಿಂದ ಹೊರಹಾಕಿದರೂ, ನಂತರ ಆತ ಸ್ಪಷ್ಟನೆ ನೀಡಿ ‘ನಾನು ಮೋದಿ ವಿರೋಧಿಯೇ. ಜಬ್ ತಕ್ ಬಗಾವತ್ ನಹೀಂ ಹೋಗಾ, ಮೋದಿ ನಹೀಂ ಜಾಯೇಗಾ’ (ಜನರು ದಂಗೆ ಅಥವಾ ಬೃಹತ್ ಪ್ರತಿರೋಧ ನಡೆಸದ ಹೊರತು ಮೋದಿ ಅಧಿಕಾರದಿಂದ ಹೋಗುವುದಿಲ್ಲ) ಎಂದು ಹೇಳಿದ್ದೆ. ಆದರೆ ನನ್ನ ಮಾತನ್ನು ತಪ್ಪಾಗಿ ಅರ್ಥೈಸಿ ಆಕ್ರೋಶ ಹೊರಹಾಕಿದ್ದಾರೆ ಎಂದು ಮಾಧ್ಯಮಕ್ಕೆ ತಿಳಿಸಿದ್ದೆ.

ಇರಲಿ, ಆತ ಕಾಂಗ್ರೆಸ್ ಕಾರ್ಯಕರ್ತನೇ ಇದ್ದಿರಬಹುದು. ಆದರೆ, ಖರ್ಗೆಯವರು ಬಳಸಿದ ಪದಗಳು ರಾಷ್ಟ್ರೀಯ ಚರ್ಚೆಯಾಗಿ ಮಾರ್ಪಾಡಾದವು. ಅವರು ಪ್ರಸ್ತಾಪಿಸಿದ್ದ ಮೂಲ ವಿಷಯಗಳು ಬದಿಗೆ ಸರಿದವು. ಬಿಜೆಪಿ ರಾಜಕೀಯವಾಗಿ ಸಣ್ಣ ಮಟ್ಟಿಗೆ ಬ್ಯಾಕ್ ಫೂಟ್‌ನಲ್ಲಿದೆ ಎಂಬ ವಾತಾವರಣ ಇದ್ದಾಗಲೆ ಕಾಂಗ್ರೆಸ್ಸಿಗರು ತಮ್ಮ ‘ಹದ’ ತಪ್ಪಿದ ಮಾತುಗಳಿಂದಲೇ ಆ ವಾತಾವರಣ ಕೆಡಿಸಿದ್ದನ್ನು ಅನೇಕ ಬಾರಿ ನೋಡಿದ್ದೇವೆ.

ಖರ್ಗೆಯವರು ತಮ್ಮ ‘ಬಾಪ್’ ಮಾತಿನಿಂದ ಬಿಜೆಪಿಗೆ ಹೊಸದೊಂದು ಅಸ್ತ್ರ ಕೊಟ್ಟುಬಿಟ್ಟರು. 2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಗದಗ ಜಿಲ್ಲೆಯ ರೋಣದ ಪ್ರಚಾರ ಸಭೆಯಲ್ಲಿ ಖರ್ಗೆ ಅವರು ಮೋದಿಯವರನ್ನು ‘ವಿಷಸರ್ಪ’ಕ್ಕೆ ಹೋಲಿಸಿದ್ದರು. ಇದೀಗ ಅವರ ಬಾಪ್ ಹೇಳಿಕೆ ಹಿನ್ನೆಲೆಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹರು ಎತ್ತಿದ ಪ್ರಶ್ನೆ ಇಲ್ಲಿ ಉಲ್ಲೇಖಾರ್ಹ.

ಖರ್ಗೆಯವರೇ, ನೀವು 50 ವರ್ಷಗಳ ಕಾಲ ರಾಜಕಾರಣ ಮಾಡಿದ್ದೀರಿ. ನಿಮ್ಮ ಬಗ್ಗೆ ಯಾರಾದರೂ ಇದೇ ರೀತಿಯಾಗಿ ಮಾತನಾಡಿದ್ದರೆ, ಇಡೀ ದಲಿತ ಸಮುದಾಯಕ್ಕೆ ಅವಮಾನವಾಗಿದೆ ಎಂದು ಈಗಾಗಲೇ ಪ್ರಕರಣ ದಾಖಲಿಸುತ್ತಿದ್ದಿರಿ. ಹಾಗಾದರೆ ನಿಮ್ಮ ವಿರುದ್ಧ ಯಾವ ರೀತಿಯ ಪ್ರಕರಣ ದಾಖಲಿಸಬೇಕು ಸ್ವಾಮಿ? ಎನ್ನುವುದು ಪ್ರತಾಪ್ ಪ್ರಶ್ನೆ.

ಖರ್ಗೆ ವಿರುದ್ಧ ಯಾವುದೇ ರಾಜಕಾರಣಿ ಬಹುಶಃ ಈ ಪದಪ್ರಯೋಗ ಮಾಡಿದ್ದಿದ್ದರೆ, ಅವರಲ್ಲ ದಿದ್ದರೂ, ಅವರ ಬೆಂಬಲಿಗರು ಖಂಡಿತವಾಗಿಯೂ ಅಟ್ರಾಸಿಟಿ ಕೇಸು ಹಾಕಿಸುತ್ತಿದ್ದರು. ಅಲ್ಲದೆ, ಇದು ಇಡೀ ದಲಿತ ಸಮುದಾಯಕ್ಕೆ ಮಾಡಿದ ಅಪಮಾನ ಎಂದು ಪ್ರಚಾರ ಮಾಡುತ್ತಿದ್ದರು. ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡ ರಾಜಕೀಯ ವಾಗ್ದಾಳಿಗಳಿಗೆ ಎರಡು ದಶಕಗಳಿಗೂ ಹೆಚ್ಚಿನ ಇತಿಹಾಸವಿದೆ.

2002ರ ಗುಜರಾತ್ ಕೋಮುಗಲಭೆಗಳು ದೇಶದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಕರಾಳ ಅಧ್ಯಾಯಗಳಲ್ಲಿ ಒಂದು. ಆಗ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. 2007ರ ಗುಜರಾತ್ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮೋದಿ ವಿರುದ್ಧ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಬಳಸಿದ ‘ಮೌತ್ ಕಾ ಸೌದಾಗರ್’ ಅಥವಾ ‘ಸಾವಿನ ವ್ಯಾಪಾರಿ’ ಎಂಬ ಪದಪ್ರಯೋಗ ಭಾರೀ ವಿವಾದ ಎಬ್ಬಿಸಿತ್ತು.

ಮೋದಿ ಮತ್ತು ಬಿಜೆಪಿ ಆ ಹೇಳಿಕೆಯನ್ನು ತಮ್ಮ ವಿರುದ್ಧದ ವೈಯಕ್ತಿಕ ದಾಳಿಯೆಂದು ಬಿಂಬಿಸಿ, ಜನಾಭಿಪ್ರಾಯ ಗಳಿಸುವಲ್ಲೂ ಯಶಸ್ವಿಯಾಗಿದ್ದರು. ಸೋನಿಯಾ ಅವರ ಆ ಹೇಳಿಕೆ ಚುನಾವಣಾ ಪ್ರಚಾರದಲ್ಲಿ ಪ್ರಮುಖ ವಿಷಯವಾಗಿತ್ತು. ಇತರೆ ವಿರೋಧಿ ಅಂಶಗಳ ಜತೆಗೆ ಸಾವಿನ ವ್ಯಾಪಾರಿ ಹೇಳಿಕೆಯೂ ಕಾಂಗ್ರೆಸ್‌ಗೆ ರಾಜಕೀಯವಾಗಿ ತಿರುಗುಬಾಣವಾಗಿ ಕಾಡಿತ್ತು.

ಪ್ರತಿಪಕ್ಷಗಳ ವೈಯಕ್ತಿಕ ಟೀಕೆಯನ್ನು ತನ್ನ ಮೇಲಿನ ದಾಳಿಯೆಂದು ಜನರ ಮುಂದೆ ಮಂಡಿಸಿ, ತನ್ನ ಬೆಂಬಲಿಗರನ್ನು ಒಗ್ಗೂಡಿಸಿಕೊಳ್ಳುವಲ್ಲಿ ಮೋದಿ ನಿಷ್ಣಾತರು. 2017ರ ಗುಜರಾತ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನದ ಬಳಿಕ ಜನರ ಮೂಡ್ ನಮ್ಮ ಪರವಾಗಿದೆ ಎಂದು ಖುಷಿಯಲ್ಲಿದ್ದ ಕಾಂಗ್ರೆಸ್ಸಿಗರಿಗೆ, ಮಣಿಶಂಕರ್ ಅಯ್ಯರ್ ಮೋದಿಯವರನ್ನು ‘ನೀಚ್ ಕಿಸಂ ಕಾ ಆದ್ಮಿ’ ಎಂದು ಕರೆದದ್ದು ಭಾರೀ ಆಘಾತ ಉಂಟುಮಾಡಿತ್ತು.

ಎರಡನೇ ಹಂತದ ಮತದಾನಪೂರ್ವದಲ್ಲಿ ಬಿಜೆಪಿಯು ಈ ನೀಚ್ ಆದ್ಮಿ ಹೇಳಿಕೆಯನ್ನು ಪ್ರಚಾರ ಅಸ್ತ್ರವನ್ನಾಗಿ ಮಾಡಿಕೊಂಡಿತು. ನಾನಾಗ ವರದಿಗಾರಿಕೆಗಾಗಿ ಗುಜರಾತ್‌ನಲ್ಲೇ ಇದ್ದೆ. ಪ್ರಧಾನಿ ಮೋದಿ ಸೇರಿ ಬಿಜೆಪಿಯ ಎಲ್ಲಾ ರಾಲಿಗಳಲ್ಲಿ ನೀಚ್ ಆದ್ಮಿಯೇ ಸದ್ದು ಮಾಡಿತ್ತು. ಈ ಪದಪ್ರಯೋಗವನ್ನು ಮೋದಿ ತಮ್ಮ ಸಾಮಾಜಿಕ ಹಿನ್ನೆಲೆ ಮತ್ತು ಘನತೆಯ ಮೇಲಿನ ದಾಳಿಯೆಂದು ವ್ಯಾಖ್ಯಾನಿಸಿದರು.

ಕಾಂಗ್ರೆಸ್ಸಿಗರಲ್ಲಿ ಉತ್ತರವಿರಲಿಲ್ಲ. ಮಣಿಶಂಕರ್ ಅಯ್ಯರ್ ವಿರುದ್ಧ ಶಿಸ್ತಿನ ಕ್ರಮವಾಯಿತಾದರೂ, ಚುನಾವಣಾ ಹಾನಿ ತಡೆಯಲಾಗಲಿಲ್ಲ. ಬಿಜೆಪಿಯ ಸ್ಥಾನಗಳು 2012ರ ಚುನಾವಣೆಗಿಂತ ಕಡಿಮೆಯಾದರೂ, ಕಷ್ಟಪಟ್ಟು ಅಧಿಕಾರ ಉಳಿಸಿಕೊಂಡಿತ್ತು. ಅಯ್ಯರ್ ಹೇಳಿಕೆ ಬಿಜೆಪಿಗೆ ಕೊನೆ ಹಂತದಲ್ಲಿ ಶಕ್ತಿ ತುಂಬಿತ್ತು!

2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಫೆಲ್ ಯುದ್ಧವಿಮಾನ ಖರೀದಿ ಒಪ್ಪಂದದ ಬಗ್ಗೆ ಕೇಂದ್ರ ಸರ್ಕಾರವನ್ನು ಟೀಕಿಸುವಾಗ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಯವರನ್ನು ‘ಚೌಕಿದಾರ್ ಚೋರ್ ಹೈ’ ಎಂದು ಟೀಕಿಸಿದ್ದರು. ಪ್ರಧಾನಿ ಮೋದಿ ತಮ್ಮನ್ನು ದೇಶದ ಕಾವಲುಗಾರ ಎಂದು ಬಿಂಬಿಸಿಕೊಂಡಿದ್ದ ಹಿನ್ನೆಲೆಯಲ್ಲಿ ವಿಪಕ್ಷಗಳಿಗೆ ‘ಚೌಕಿದಾರ್ ಚೋರ್ ಹೈ’ ರಾಜಕೀಯ ಪ್ರಚಾರದ ಅಸ್ತ್ರವಾಗಿತ್ತು.

ರಫೆಲ್ ಪ್ರಕರಣಕ್ಕೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ವಿಚಾರಣೆಯೊಂದನ್ನು ತಮ್ಮ ರಾಜಕೀಯ ಘೋಷಣೆಗೆ ಜೋಡಿಸಿದ್ದಕ್ಕಾಗಿ ರಾಹುಲ್ ಗಾಂಧಿ ನಂತರ ನ್ಯಾಯಾಲಯದ ಮುಂದೆ ವಿಷಾದ ವ್ಯಕ್ತಪಡಿಸಿದ್ದರು. 2019ರಲ್ಲಿ ಕರ್ನಾಟಕದ ಕೋಲಾರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾಗ ಮೋದಿ ಉಪನಾಮಕ್ಕೆ ಸಂಬಂಧಿಸಿ ರಾಹುಲ್ ಗಾಂಧಿ ಅವರು ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ... ಎಲ್ಲಾ ಕಳ್ಳರಿಗೂ ಮೋದಿ ಎಂಬ ಸಾಮಾನ್ಯ ಉಪನಾಮ ಏಕಿದೆ? ಎಂದು ಪ್ರಶ್ನಿಸುತ್ತಾ, ಪ್ರಧಾನಿ ಮೋದಿ ಅವರನ್ನು ಕಳ್ಳ ಎಂದಿದ್ದರು.

ಈ ಹೇಳಿಕೆ ಮಾನನಷ್ಟ ಮೊಕದ್ದಮೆಗೆ ಕಾರಣವಾಗಿ, 2023ರಲ್ಲಿ ಸೂರತ್ ನ್ಯಾಯಾಲಯ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಪರಿಣಾಮವಾಗಿ ಅವರ ಲೋಕಸಭಾ ಸದಸ್ಯತ್ವ ಅನರ್ಹಗೊಂಡಿತು. ಆದರೆ ಅದೇ ವರ್ಷದ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ಶಿಕ್ಷೆಯ ತೀರ್ಪಿನ ಜಾರಿಗೆ ತಡೆ ನೀಡಿತು. ನಂತರ ಲೋಕಸಭಾ ಸದಸ್ಯತ್ವ ಮರುಸ್ಥಾಪನೆಯಾಯಿತು. ಹಾಗಂತ, ಜೈಲುಶಿಕ್ಷೆಗೆ ತಡೆಯಾಜ್ಞೆ ನೀಡಿದ್ದರಿಂದ ರಾಹುಲ್ ದೋಷಮುಕ್ತಗೊಂಡರು ಎಂದೇನಲ್ಲ. ವೈಯಕ್ತಿಕ ವಾಗ್ದಾಳಿಯ ಕುರಿತು ಚರ್ಚಿಸುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಬಳಸಿರುವ ಪದಪ್ರಯೋಗಗಳನ್ನೂ ಉಲ್ಲೇಖಿಸಬೇಕಾಗುತ್ತದೆ.

2012ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ಅವರು, ಹಿಮಾಚಲ ಪ್ರದೇಶದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಶಶಿ ಥರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರನ್ನು ‘50 ಕೋಟಿ ರೂಪಾಯಿಯ ಗರ್ಲ್ ಫ್ರೆಂಡ್’ ಎಂದಿದ್ದರು. ಐಪಿಎಲ್ ತಂಡದ ಷೇರು ಹಂಚಿಕೆ ವಿವಾದದ ಹಿನ್ನೆಲೆಯಲ್ಲಿ ಮೋದಿ ಈ ಮಾತು ಬಳಸಿದ್ದರು. ಈ ಹೇಳಿಕೆಯು ರಾಜಕೀಯ ಆರೋಪ ಮಾಡುವಾಗ ವ್ಯಕ್ತಿಯ ಖಾಸಗಿ ಸಂಬಂಧವನ್ನು ಸಾರ್ವಜನಿಕ ಅಪಹಾಸ್ಯಕ್ಕೆ ಒಳಪಡಿಸುವುದು ಎಷ್ಟರಮಟ್ಟಿಗೆ ಸಮಂಜಸ ಎಂಬ ಪ್ರಶ್ನೆಯನ್ನು ಎತ್ತಿತ್ತು.

ದೇಶದ ಮಹಿಳೆಯರ ಬಗ್ಗೆ ಮೋದಿಯವರು ಮಾತನಾಡುವಾಗ, ವಿಪಕ್ಷಗಳು ಈಗಲೂ ಸುನಂದಾ ಪುಷ್ಕರ್ ಕುರಿತ ಹೇಳಿಕೆಯನ್ನು ನೆನಪಿಸುತ್ತವೆ. 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಯ ಸಂದರ್ಭದಲ್ಲಿ ಮೋದಿಯವರ ‘ಸ್ಮಶಾನ-ಕಬರಿಸ್ತಾನ’ದ ಹೋಲಿಕೆಗಳೂ ದೊಡ್ಡ ವಿವಾದ ಸೃಷ್ಟಿಸಿದ್ದವು.

ಫೆ.19ರಂದು ಫತೇಪುರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ, ಒಂದು ಗ್ರಾಮದಲ್ಲಿ ಕಬರಿಸ್ತಾನ ನಿರ್ಮಿಸಿದರೆ ಸ್ಮಶಾನವೂ ಇರಬೇಕು; ರಂಜಾನ್ ಸಂದರ್ಭದಲ್ಲಿ ವಿದ್ಯುತ್ ನೀಡಿದರೆ ದೀಪಾವಳಿಗೂ ನೀಡಬೇಕು; ಹೋಳಿ ಮತ್ತು ಈದ್ ಸಂದರ್ಭದಲ್ಲಿಯೂ ತಾರತಮ್ಯ ಇರಬಾರದು ಎಂಬ ಅರ್ಥದಲ್ಲಿ ಅವರು ಮಾತನಾಡಿದ್ದರು. ತಮ್ಮ ಮಾತು ಎಲ್ಲ ಧರ್ಮದ ಜನರಿಗೂ ಸಮಾನ ಸೌಲಭ್ಯ ನೀಡಬೇಕೆಂಬ ತತ್ವಕ್ಕೆ ಸಂಬಂಧಿಸಿದೆ ಎಂದು ಮೋದಿ ಪ್ರತಿಪಾದಿಸಿದ್ದರೂ, ಚುನಾವಣೆ ಸಂದರ್ಭದಲ್ಲಿ ಹಿಂದೂ- ಮುಸ್ಲಿಂ ಭಾವನೆಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವ ಪ್ರಯತ್ನವೆನ್ನುವುದು ರಾಜಕೀಯ ವರದಿ ಮಾಡುವ ಯಾರಿಗಾದರೂ ಅರ್ಥವಾಗುತ್ತದೆ.

ವೈಯಕ್ತಿಕ ದಾಳಿ, ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸಿ ವಾಗ್ದಾಳಿ ನಡೆಸುವುದು ಸಾಮಾಜಿಕ ಆರೋಗ್ಯಕ್ಕೆ ಒಳ್ಳೆಯದಲ್ಲ. ರಾಜಕೀಯ ಭಾಷೆಯ ಮೌಲ್ಯಮಾಪನಕ್ಕೆ ಒಂದೇ ಮಾನದಂಡ ಇರಬೇಕು. ಮೋದಿಯವರ ವಿರುದ್ಧ ವೈಯಕ್ತಿಕ ಅವಹೇಳನ ನಡೆದಾಗ ಅದನ್ನು ಪ್ರಶ್ನಿಸುವವರು, ಮೋದಿ ಅಥವಾ ಅವರ ಪಕ್ಷದ ನಾಯಕರು ಇತರರ ವಿರುದ್ಧ ಅಂಥದ್ದೇ ಪದಪ್ರಯೋಗ ಮಾಡಿದಾಗ ಅದೇ ಧಾಟಿಯಿಂದ ಪ್ರಶ್ನಿಸುವುದಿಲ್ಲ.

ಸರ್ಕಾರದ ನೀತಿಯನ್ನು ಖಂಡಿಸಬಹುದು, ನಿರ್ಧಾರಗಳನ್ನು ಪ್ರಶ್ನಿಸಬಹುದು. ಭ್ರಷ್ಟಾಚಾರದ ಆರೋಪಗಳಿಗೆ ತನಿಖೆ ಕೇಳಬಹುದು. ಜನರ ಹಕ್ಕುಗಳಿಗಾಗಿ ಹೋರಾಟ ನಡೆಸ ಬಹುದು. ಇವೆಲ್ಲವೂ ಪ್ರಜಾಪ್ರಭುತ್ವದ ಅಗತ್ಯ ಅಂಗಗಳು. ಆದರೆ ವ್ಯಕ್ತಿಯ ಕುಟುಂಬ, ಜನ್ಮ ಅಥವಾ ಖಾಸಗಿ ಬದುಕಿನ ಅವಹೇಳನ ರಾಜಕೀಯ ಹೋರಾಟಗಳಿಗೆ ಅನಿವಾರ್ಯ ಸಾಧನವಲ್ಲ. ರಾಜಕೀಯದಲ್ಲಿ ಎದುರಾಳಿಯನ್ನು ಅವಮಾನಿಸುವ ಮಾತು ತಾತ್ಕಾಲಿಕವಾಗಿ ಚಪ್ಪಾಳೆ ಗಿಟ್ಟಿಸಬಹುದು. ಆದರೆ ಅದೇ ಮಾತು ಎದುರಾಳಿಗೆ ಸಾರ್ವಜನಿಕ ಸಹಾನುಭೂತಿ ಗಳಿಸುವ ಅವಕಾಶ ನೀಡುವ ಜತೆಗೆ ಪ್ರಶ್ನಿಸಲು ಬಯಸಿದ ಆಡಳಿತಾತ್ಮಕ ವಿಷಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತದೆ.

ಆಡಳಿತ ಪಕ್ಷಕ್ಕೆ ತನ್ನ ವಿರುದ್ಧದ ಆರೋಪಗಳಿಗಿಂತ ಎದುರಾಳಿಯ ಭಾಷೆಯನ್ನು ಚರ್ಚೆಯ ಕೇಂದ್ರವಾಗಿಸುವ ಅವಕಾಶವನ್ನೂ ನೀಡುತ್ತದೆ. ದೇಶದ ಪ್ರಜಾಪ್ರಭುತ್ವ ಮತ್ತಷ್ಟು ಪ್ರಬುದ್ಧಗೊಳ್ಳ ಬೇಕೆಂದರೆ ಪಕ್ಷಗಳು, ಜನಪ್ರತಿನಿಧಿಗಳು ಈ ವಾಸ್ತವ ಅರ್ಥಮಾಡಿಕೊಳ್ಳಬೇಕು. ಆದರೆ, ನಮ್ಮ ಈಗಿನ ಜನನಾಯಕರಲ್ಲಿ ಆ ಕುರಿತ ಕನಿಷ್ಠ ಕಾಳಜಿಯೂ ಇದ್ದಂತಿಲ್ಲ.