ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Prakash Hegde Column: ಸ್ಟಾರ್‌ಲಿಂಕ್‌: ಭಾರತಕ್ಕೆ ತಾರೆಯೋ ಧೂಮಕೇತುವೋ ?

ಸರ್ಕಾರದ ವರದಿಯಂತೆ ಸ್ಟಾರ್‌ಲಿಂಕ್ ಮಾತ್ರವಲ್ಲದೆ ಜಿಯೋ ಉಪಗ್ರಹ ಸೇವೆ ಮತ್ತು ಭಾರತಿ ಬೆಂಬಲಿತ ಯುಟೆಲ್‌ಸ್ಯಾಟ್ ಒನ್‌ವೆಬ್ ಕೂಡ ಇದೇ ರೀತಿಯ ನಿಯಂತ್ರಣ ಪ್ರಕ್ರಿಯೆಯಲ್ಲಿವೆ. ಮಸ್ಕ್ ಅವರ ಉದ್ಯಮಶೀಲತೆಯನ್ನು ಭಾರತ ಗೌರವಿಸುತ್ತದಾದರೂ ಅವರು ಭಾರತದ ನೀತಿ ನಿರ್ಧಾರಗಳ ಚೌಕಟ್ಟಿಗೆ ಅನುಗುಣವಾಗಿ ತಮ್ಮ ಉದ್ಯಮವನ್ನು ಭಾರತದಲ್ಲಿ ಅಳವಡಿಸಿಕೊಳ್ಳ ಬೇಕೇ ಹೊರತು, ತಮ್ಮ ಉದ್ಯಮದ ಅನುಕೂಲಕ್ಕೆ ತಕ್ಕಂತೆ ಭಾರತದ ನೀತಿಗಳು ಬದಲಾಗ ಬೇಕೆಂದು ನಿರೀಕ್ಷಿಸಿದರೆ ಅವರ ಟೆಸ್ಲಾ ಕಾರಿನ ಕಥೆಯ ಡೇಜಾವೂ ಕಾಣಬಹುದು.

ಸ್ಟಾರ್‌ಲಿಂಕ್‌: ಭಾರತಕ್ಕೆ ತಾರೆಯೋ ಧೂಮಕೇತುವೋ ?

-

Profile
Ashok Nayak Oct 27, 2026 11:25 AM

ಮೇಘ ಸಂದೇಶ

ಪ್ರಕಾಶ ಹೆಗಡೆ

ಕೆಲ ವಾರಗಳ ಹಿಂದೆ, ಎಲಾನ್ ಮಸ್ಕ್ ಅವರ ಹೇಳಿಕೆ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಅವರು ತಮ್ಮ ಸಿಗ್ನೇಚರ್ ವ್ಯಂಗ್ಯ ಶೈಲಿಯಲ್ಲಿ ಭಾರತೀಯ ಪ್ರಭಾವಿ ಉದ್ಯಮಿಗಳು ಸ್ಟಾರ್‌ಲಿಂಕ್‌ನ ಭಾರತ ಪ್ರವೇಶಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ, ಭಾರತದ ನಿಜವಾದ ಆಡಳಿತಗಾರ ಅಂಬಾನಿಯೇ? ಎಂದು ವಿವಾದಾಸ್ಪದ ಹೇಳಿಕೆಯಿತ್ತರು.

ಆದರೆ ವಾಸ್ತವವೆಂದರೆ, ಭಾರತದಲ್ಲಿ ಸ್ಟಾರ್ ಲಿಂಕ್‌ಗೆ ಅಗತ್ಯವಾದ ಕೆಲವು ಅನುಮತಿಗಳು ದೊರೆತಿದ್ದರೂ, ವಾಣಿಜ್ಯ ಸೇವೆ ಆರಂಭಿಸಲು ಭದ್ರತಾ ಪರಿಶೀಲನೆ ಸೇರಿದಂತೆ ಇನ್ನೂ ಕೆಲವು ಷರತ್ತುಗಳನ್ನು ಪೂರೈಸಬೇಕಿತ್ತು.

ಸರ್ಕಾರದ ವರದಿಯಂತೆ ಸ್ಟಾರ್‌ಲಿಂಕ್ ಮಾತ್ರವಲ್ಲದೆ ಜಿಯೋ ಉಪಗ್ರಹ ಸೇವೆ ಮತ್ತು ಭಾರತಿ ಬೆಂಬಲಿತ ಯುಟೆಲ್‌ಸ್ಯಾಟ್ ಒನ್‌ವೆಬ್ ಕೂಡ ಇದೇ ರೀತಿಯ ನಿಯಂತ್ರಣ ಪ್ರಕ್ರಿಯೆಯಲ್ಲಿವೆ. ಮಸ್ಕ್ ಅವರ ಉದ್ಯಮಶೀಲತೆಯನ್ನು ಭಾರತ ಗೌರವಿಸುತ್ತದಾದರೂ ಅವರು ಭಾರತದ ನೀತಿ ನಿರ್ಧಾರಗಳ ಚೌಕಟ್ಟಿಗೆ ಅನುಗುಣವಾಗಿ ತಮ್ಮ ಉದ್ಯಮವನ್ನು ಭಾರತದಲ್ಲಿ ಅಳವಡಿಸಿಕೊಳ್ಳ ಬೇಕೇ ಹೊರತು, ತಮ್ಮ ಉದ್ಯಮದ ಅನುಕೂಲಕ್ಕೆ ತಕ್ಕಂತೆ ಭಾರತದ ನೀತಿಗಳು ಬದಲಾಗ ಬೇಕೆಂದು ನಿರೀಕ್ಷಿಸಿದರೆ ಅವರ ಟೆಸ್ಲಾ ಕಾರಿನ ಕಥೆಯ ಡೇಜಾವೂ ಕಾಣಬಹುದು.

ಹಿಂದೆ ಮಸ್ಕ್ ಅವರ ಟೆಸ್ಲಾ ಭಾರತಕ್ಕೆ ಪ್ರವೇಶಿಸಲು ಪ್ರಯತ್ನಿಸಿದಾಗಲೂ ಇದೇ ರೀತಿಯ ಧೋರಣೆ ಸ್ಪಷ್ಟವಾಗಿತ್ತು. 2021ರಲ್ಲಿ ಭಾರತದಲ್ಲಿ ಕಾರ್ಖಾನೆ ಸ್ಥಾಪಿಸುವ ಮಾತುಕತೆ ನಡೆಯುತ್ತಿರುವಾಗಲೇ, ಆಮದು ಸುಂಕವನ್ನು ಕಡಿಮೆ ಮಾಡಬೇಕೆಂದು ಟೆಸ್ಲಾ ಒತ್ತಾಯಿಸಿತ್ತು. ಭಾರತ ಸರ್ಕಾರವು ದೇಶೀಯ ಉತ್ಪಾದನೆ ಮತ್ತು ಉದ್ಯೋಗ ಸೃಷ್ಟಿಗೆ ಧಕ್ಕೆಯುಂಟಾಗುವ ವಿಶೇಷ ತೆರಿಗೆ ರಿಯಾಯಿತಿ ನೀಡಲು ಸಿದ್ಧವಿರಲಿಲ್ಲ.

ಇದನ್ನೂ ಓದಿ: Prakash Hegde Column: ಅನ್‌ʼಸಂಗ್‌ ರಷ್ಯಾ: ಜಗತ್ತಿಗೆ ಕಾಣದ ಯಶೋಗಾಥೆ

ನಂತರ ಸ್ಥಳೀಯ ಉತ್ಪಾದನೆಗೆ ಹೂಡಿಕೆ ಮಾಡುವ ಕಂಪನಿಗಳಿಗೆ ಷರತ್ತುಬದ್ಧ ಆಮದು ಸುಂಕ ರಿಯಾಯಿತಿ ನೀಡುವ ನೀತಿ ರೂಪಿಸಿದರೂ, ಟೆಸ್ಲಾ ಭಾರತದಲ್ಲಿ ಕಾರ್ಖಾನೆ ಸ್ಥಾಪಿಸುವ ಯೋಜನೆ ಯನ್ನು ಮುಂದುವರಿಸಲಿಲ್ಲ. ಟೆಸ್ಲಾ 2025ರಲ್ಲಿ ಕಾರುಗಳ ಮಾರಾಟ ಆರಂಭಿಸಿದ ಬಳಿಕವೂ ನಿರೀಕ್ಷಿತ ಯಶಸ್ಸು ಕಾಣಲಿಲ್ಲ.

ಇತ್ತೀಚಿನ ವರದಿಯ ಪ್ರಕಾರ ಅಕ್ಟೋಬರ್ 2026ರವರೆಗೆ ಕೇವಲ ಸಾವಿರ ಕಾರುಗಳ ಮಾರಾಟ ತಲುಪಲು ಹೆಣಗಾಡುತ್ತಿದೆ. ಸ್ಟಾರ್‌ಲಿಂಕ್ ಎಲಾನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ. ಸಾಮಾನ್ಯ ಇಂಟರ್ನೆಟ್ ತಂತ್ರಜ್ಞಾನದಲ್ಲಿ, ಆಪ್ಟಿಕಲ್ ಫೈಬರ್ ಕೇಬಲ್ ಅಥವಾ ಮೊಬೈಲ್ ಟವರ್‌ಗಳನ್ನೇ ಅವಲಂಬಿಸಲಾಗುತ್ತದೆ. ಇದರ ಮುಂದುವರಿದ ಕ್ರಾಂತಿಕಾರಿ ರೂಪಾಂತರವೇ ಸ್ಟಾರ್‌ಲಿಂಕ್.

ಭೂಮಿಯ ಸುತ್ತ ಕೆಳಮಟ್ಟದ ಕಕ್ಷೆಯಲ್ಲಿ (350ರಿಂದ 500 ಕಿಮೀ) ಸಾವಿರಾರು ಸಣ್ಣ ಉಪಗ್ರಹ ಗಳನ್ನು ಸ್ಥಾಪಿಸಿ, ಮನೆಯ ಮೇಲ್ಛಾವಣಿ/ವಿಶೇಷ ಆಂಟೆನಾ ಮೂಲಕ ಜಗತ್ತಿನ ಮೂಲೆಮೂಲೆಗೂ ಇಂಟರ್ನೆಟ್ ಒದಗಿಸುವುದೇ ಈ ತಂತ್ರಜ್ಞಾನ. ಈಗಾಗಲೇ ಇದರ ಸೇವೆ ವಿಶ್ವದ 150ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಲಭ್ಯವಿದೆ.

Prakash H

ಸ್ಟಾರ್‌ಲಿಂಕ್‌ನ ಪ್ರಮುಖ ವೈಶಿಷ್ಟ್ಯಗಳೆಂದರೆ ವೇಗದ ಇಂಟರ್ನೆಟ್ ಸಂಪರ್ಕ, ಪರ್ಯಾಯ ಸಂಪರ್ಕದ ಉಪಯುಕ್ತತೆ ಹಾಗೂ ಫೈಬರ್ ಕೇಬಲ್ ತಲುಪಲಾಗದ ಹಳ್ಳಿಗಳು, ಪರ್ವತ ಪ್ರದೇಶ ಗಳು, ದ್ವೀಪಗಳು ಹಾಗೂ ಸಾಂಪ್ರದಾಯಿಕ ಸಂಪರ್ಕ ವ್ಯವಸ್ಥೆ ತಲುಪದ ಪ್ರದೇಶಗಳಲ್ಲಿ ಯೂ ಇಂಟರ್ನೆಟ್ ಒದಗಿಸುವ ಸಾಮರ್ಥ್ಯ.

ಸ್ಟಾರ್‌ಲಿಂಕ್ ಅತ್ಯುತ್ತಮ ತಂತ್ರಜ್ಞಾನವೆಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಅಪಾಯ ವೆಂದರೆ ತಂತ್ರಜ್ಞಾನದ ಮಹತ್ವದ ಕಾರ್ಯಾಚರಣಾತ್ಮಕ ನಿರ್ಧಾರಗಳ ಮೇಲೆ ಒಂದು ಖಾಸಗಿ ಕಂಪನಿ ಹೊಂದಿರುವ ಪ್ರಭಾವ. ರಷ್ಯಾ, ಸುಡಾನ್, ಮ್ಯಾನ್ಮಾರ್ ಮತ್ತು ಬ್ರೆಜಿಲ್‌ನ ಹಿಂದಿನ ಘಟನೆಗಳು ಖಾಸಗಿ ಕಂಪನಿಯ ಪ್ರಭಾವ ಯುದ್ಧ, ಮಾನವೀಯ ಬಿಕ್ಕಟ್ಟು ಮತ್ತು ಕಾನೂನು ಸಂಘರ್ಷಗಳ ಸಂದರ್ಭದಲ್ಲಿ ಹೇಗೆ ಮಹತ್ವ ಪಡೆದು ನಿರ್ಣಾಯಕತ್ವದ ಪ್ರಾಬಲ್ಯ ಪಡೆದು ಕೊಂಡುದರ ಜ್ವಲಂತ ನಿದರ್ಶನಗಳು.

ಇತ್ತೀಚೆಗೆ ಯುಕ್ರೇನ್‌ನದ ಅಚಾತುರ್ಯದಿಂದ ಸ್ಟಾರ್‌ಲಿಂಕ್‌ನ ಮೇಲಿನ ಭರವಸೆಗೆ ದೊಡ್ಡ ಪೆಟ್ಟಾಗಿದೆ. ಸ್ಟಾರ್‌ಲಿಂಕ್‌ನ ಮಿಲಿಟರಿ ಬಳಕೆಯ ಆವೃತ್ತಿಯಲ್ಲಿ ಗಂಟೆಗೆ 160 ಕಿ.ಮೀ.ಗಿಂತ ವೇಗವಾಗಿ ಚಲಿಸುವ ಡ್ರೋನ್ ಸಂಪರ್ಕ ನಿಯಂತ್ರಣ ಮಾಡಿದ್ದರಿಂದ ದೂರದ ಗುರಿಗಳ ಮೇಲೆ ದಾಳಿ ನಡೆಸಲು ಯುಕ್ರೇನ್ ಬಳಸುತ್ತಿದ್ದ ಡ್ರೋನ್‌ಗಳು, ರಷ್ಯಾದ ಹೊಸ ಜೆಟ್ ಎಂಜಿನ್ ಚಾಲಿತ ಡ್ರೋನ್‌ಗಳನ್ನು ವಿರೋಧಿಸಲಾಗದೆ ಗುರಿ ತಲುಪುವ ಮೊದಲೇ ನಿಷ್ಪರಿಣಾಮಕಾರಿಯಾದವು. ಅಷ್ಟೇ ಅಲ್ಲದೇ ಇಂಟರ್ನೆಟ್ ವೇಗವನ್ನು ಸಶಸ ಸಂಘರ್ಷ ನಡೆಯುತ್ತಿರುವ ಪ್ರದೇಶಗಳಲ್ಲಿ ಕಡಿತಗೊಳಿಸಿದ್ದರಿಂದ ಮಿಲಿಟರಿ ಕಾರ್ಯಾಚರಣೆಗೆ ತೊಂದರೆಯಾಯಿತು.

ಇನ್ನೊಂದೆಡೆ ರಷ್ಯಾ ಯುಕ್ರೇನ್‌ನಲ್ಲಿ ಯುದ್ಧದ ಸಂಬಂಧಿತ ವ್ಯವಸ್ಥೆಯನ್ನು ಪ್ರಭಾವಿಯಾಗಿಸಲು ಸ್ಟಾರ್‌ಲಿಂಕ್ ಬಳಸಿತು. ಈ ತಂತ್ರಜ್ಞಾನದ ಕುಯುಕ್ತಿಯ ಕೈವಾಡ ಮಸ್ಕ್ ಅವರ ಕಂಪನಿಯತ್ತ ಬೆಟ್ಟು ಮಾಡಿವೆ. ಕಾರ್ಗಿಲ್ ಯುದ್ಧದ ಸಮಯದಲ್ಲಿ ಯುದ್ಧಭೂಮಿಯ ಮೇಲಿನ ಜಿಪಿಎಸ್ ದತ್ತಾಂಶಕ್ಕಾಗಿ ಭಾರತ ಅಮೆರಿಕವನ್ನು ಕೇಳಿದಾಗ, ಅಮೆರಿಕ ದತ್ತಾಂಶ ನೀಡಲು ನಿರಾಕರಿಸಿತು. ಪರಿಣಾಮವಾಗಿ ನಾವು ನಾವಿಕ್ ವ್ಯವಸ್ಥೆಯನ್ನು ನಿರ್ಮಿಸಿದೆವು.

ಇಲ್ಲಿ ಮುಖ್ಯವಾಗಿ ಕಾಡಬೇಕಾದ ಪ್ರಶ್ನೆ ದೇಶದ ನಿರ್ಣಾಯಕ ಸಂವಹನ ವ್ಯವಸ್ಥೆಯ ಮೇಲಿನ ನಿಯಂತ್ರಣ ಯಾರ ಕೈಯಲ್ಲಿರಬೇಕು, ಎಷ್ಟಿರಬೇಕು ಮತ್ತು ಹೇಗಿರಬೇಕು ಎಂಬುದು. ಕೂಡಲೇ ಎಚ್ಚರಗೊಂಡ ಯುರೋಪ್ ಈಗ ತನ್ನದೇ ಆದ ಉಪಗ್ರಹ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸಲು ಮುಂದಾಗಿದೆ.

ಯುರೋಪಿನ ನಾಲ್ಕು ಪ್ರಮುಖ ದೂರಸಂಪರ್ಕ ಸಂಸ್ಥೆಗಳಾದ ಡಾಯ್ಚೆ ಟೆಲಿಕಾಮ್, ಆರೆಂಜ್, ಟೆಲಿಫೋನಿಕಾ ಮತ್ತು ವೊಡಾಫೋನ್‌ಗಳು ಮೊಬೈಲ್ ಫೋನ್‌ಗಳಿಗೆ ನೇರವಾಗಿ ಉಪಗ್ರಹ ಸಂಪರ್ಕ ಒದಗಿಸುವ ವ್ಯವಸ್ಥೆಗಾಗಿ ಎರಡು ಗಿಗಾಹರ್ಟ್ಸ್ ರೇಡಿಯೊ ಸ್ಪೆಕ್ಟ್ರಮ್ ಪಡೆಯಲು ಜಂಟಿ ಪ್ರಯತ್ನ ನಡೆಸುತ್ತಿವೆ. ಇದಕ್ಕೆ ಪೂರಕವಾಗಿ, ಯುರೋಪಿಯನ್ ಒಕ್ಕೂಟವು ಐರಿಸ್-2 ಎಂಬ ತನ್ನದೇ ಆದ ಸುರಕ್ಷಿತ ಉಪಗ್ರಹ ಜಾಲವನ್ನು ಅಭಿವೃದ್ಧಿಪಡಿಸುತ್ತಿದ್ದು, 2026ರ ಆಗಸ್ಟ್‌ನಲ್ಲಿ ಅದರ ಯೋಜನೆಯನ್ನು ನೂರಾರು ಉಪಗ್ರಹಗಳ ಜಾಲವಾಗಿ ವಿಸ್ತರಿಸುವ ಮುಂದಿನ ಹಂತಕ್ಕೆ ಅನುಮೋದನೆ ನೀಡಿದೆ. ‌

ಚೀನಾ ಸಹ ಈಗಾಗಲೇ ತನ್ನದೇ ಆದ ಉಪಗ್ರಹ ಇಂಟರ್ನೆಟ್ ಜಾಲವನ್ನು ಅಭಿವೃದ್ಧಿಪಡಿಸುತ್ತಿದೆ. ಭೂಮಿಗೆ ಸಮೀಪದ ಕಕ್ಷೆಯಲ್ಲಿ 256 ಉಪಗ್ರಹಗಳನ್ನು ಸ್ಥಾಪಿಸಿ ಸ್ಪೇಸ್‌ಸೇಲ್ ಎಂಬ ಪ್ರಮುಖ ಯೋಜನೆಯ ಅಭವೃದ್ಧಿಯ ಅಂತಿಮ ಹಂತದಲ್ಲಿದೆ. ಯುರೋಪಿನ ಸ್ವಾವಲಂಬನೆಯ ಹಂಬಲ ಮತ್ತು ಚೀನಾದ ಉಪಗ್ರಹ ಜಾಲದ ಪ್ರಗತಿಯ ಯಶಸ್ಸಿನಿಂದ ಪ್ರೇರೇಪಿತರಾಗಿ, ಆರ್ಥಿಕವಾಗಿ ಸಶಕ್ತ ರಾಷ್ಟ್ರಗಳೆಲ್ಲವೂ ಈಗ ತಮ್ಮದೇ ಉಪಗ್ರಹ ಇಂಟರ್ನೆಟ್ ಸಾಮ್ರಾಜ್ಯ ಕಟ್ಟಿಕೊಳ್ಳುವ ಪೈಪೋಟಿಗೆ ಇಳಿದಿವೆ.

ಭಾರತವೂ ಈ ಉಪಗ್ರಹ ಕ್ರಾಂತಿಯಲ್ಲಿ ಬಹಳಷ್ಟು ಮುಂದುವರಿದಿದೆ. ಭಾರತದ ಗ್ರಾಹಕರು ಬೆಲೆ ಸಂವೇದನಾಶೀಲರರೆಂದು ಅರಿತಿರುವ ಎಲಾನ್ ಮಸ್ಕ್, ಸ್ಟಾರ್‌ಲಿಂಕ್ ಸೇವೆಯನ್ನು ಕೈಗೆಟುಕುವ ದರದಲ್ಲಿ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಕಂಪನಿಯ ವೆಬ್‌ಸೈಟ್‌ನ ಪ್ರಕಾರ ಸಾಧನಕ್ಕೆ ರೂ.34000 ಮತ್ತು ಮಾಸಿಕ ಶುಲ್ಕಕ್ಕೆ ರೂ.8600 ಎಂದು ನಮೂದಿಸಲಾಗಿತ್ತು. ಇದಕ್ಕೆ ಹೋಲಿಸಿದರೆ, ಭಾರತದಲ್ಲಿ ಜಿಯೋ -ಬರ್ ಸೇವೆಯ 30 ಎಂಬಿಪಿಎಸ್ ಯೋಜನೆ ತಿಂಗಳಿಗೆ ರೂ.399ರಿಂದ ಮತ್ತು 100 ಎಂಬಿಪಿಎಸ್ ಯೋಜನೆ ರೂ.699ರಿಂದ ಆರಂಭವಾಗುತ್ತದೆ.

ಹಾಗೆಯೇ ಏರ್‌ಟೆಲ್ ಎಕ್ಸ್‌ಟ್ರೀಮ್ ಫೈಬರ್‌ನ 100 ಎಂಬಿಪಿಎಸ್ ಯೋಜನೆಯ ದರ ಪ್ರತಿ ತಿಂಗಳಿಗೆ ರೂ.799. ಉತ್ತಮ ಫೈಬರ್ ಸಂಪರ್ಕಕ್ಕೆ ತಿಂಗಳಿಗೆ ರೂ.500ರಿಂದ ರೂ.1500 ವ್ಯಯವಾಗುತ್ತದೆ.

ಹೆಚ್ಚಿನ ಕುಟುಂಬಗಳು ತಮ್ಮ ಇಂಟರ್ನೆಟ್ ಬಿಲ್ ರೂ.1000ಕ್ಕಿಂತ ಕಡಿಮೆಯ ಮಟ್ಟದಲ್ಲಿರುವಂತೆ ನೋಡಿಕೊಳ್ಳುತ್ತವೆ. ಹೀಗಿರುವಾಗ, ಸ್ಟಾರ್‌ಲಿಂಕ್‌ನ ಹೇಳಿಕೆಯಂತೆ ಕೈಗೆಟಕುವ ದರವೆಂದರೇನೆಂದು ನಾವೇ ವಿಮರ್ಶಿಸಿಕೊಳ್ಳಬೇಕು. ಏಷ್ಯಾದ ಅನೇಕ ದೇಶಗಳಲ್ಲಿ ಲಭ್ಯವಿರುವ ಸ್ಟಾರ್‌ಲಿಂಕ್ ಸೇವೆಯ ದರದ ಪಟ್ಟಿ ನೋಡಿದರೆ, ಸಾಮಾನ್ಯರು ಸ್ಟಾರ್‌ಲಿಂಕ್ ಸೇವೆಯ ಚಂದಾದಾರರಾಗಲು ಅಸಾಧ್ಯವೆಂದೆನಿಸುತ್ತದೆ.

ಅಕ್ಟೋಬರ್‌ನ ವಿನಿಮಯ ದರದ ಆಧಾರದಲ್ಲಿ, ಸ್ಟಾರ್‌ಲಿಂಕ್ ಸಾಧನದ ಒಮ್ಮೆಯ ವೆಚ್ಚ ಮತ್ತು ಮಾಸಿಕ ಶುಲ್ಕ ಕ್ರಮವಾಗಿ ಫಿಲಿಪ್ಪೀನ್ಸ್‌ನಲ್ಲಿ ರೂ.22400 ಮತ್ತು ರೂ.6200, ಇಂಡೋನೇಷ್ಯಾದಲ್ಲಿ ರೂ.25100 ಮತ್ತು ರೂ.3500, ವಿಯೆಟ್ನಾಂನಲ್ಲಿ ರೂ.31800 ಮತ್ತು ರೂ.5000 ಹಾಗೂ ಬಾಂಗ್ಲಾ ದೇಶದಲ್ಲಿ ರೂ.20300 ಮತ್ತು ರೂ.4000ರಷ್ಟಿದೆ.‌

ಮಸ್ಕ್ ಕೇವಲ ಉದ್ಯಮಿಯೆಂದು ಪರಿಗಣಿಸಿದರೆ ಇಷ್ಟೊಂದು ಚಿಂತಿಸುವ ಅಗತ್ಯವಿರಲಿಲ್ಲ. ಆದರೆ ಅವರ ಪ್ರಭಾವ ಅಮೆರಿಕ ಸರಕಾರದಲ್ಲಿ ಆಳವಾಗಿ ಬೇರೂರಿದೆ. ಅವರು 2025ರಲ್ಲಿ ಟ್ರಂಪ್ ಆಧ್ಯಕ್ಷರಾದ ಕೂಡಲೇ ಡಿಪಾರ್ಟ್‌ಮೆಂಟ್ ಆಫ್ ಗವರ್ನಮೆಂಟ್ ಎಫಿಷಿಯೆನ್ಸಿ (DOGE) ಎಂಬ ಸರಕಾರಿ ವಿಭಾಗದ ಮುಖ್ಯಸ್ಥರಾಗಿದ್ದರು. ಡೋಜಿಯ ಉದ್ದೇಶವೆಂದರೆ ಸರ್ಕಾರಿ ವೆಚ್ಚದಲ್ಲಿನ ಅನಗತ್ಯ ಖರ್ಚು ಕಡಿತಗೊಳಿಸುವುದು, ಆಡಳಿತಾತ್ಮಕ ಕ್ರಮಗಳನ್ನು ಸರಳೀಕರಿಸುವುದು ಹಾಗೂ ತಂತ್ರಜ್ಞಾದ ಮೂಲಕ ಸರ್ಕಾರದ ಕಾರ್ಯಕ್ಷಮತೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದು. ‌

ಇನ್ನು ಮಸ್ಕ್ ಅವರ ಸ್ಪೇಸ್‌ಎಕ್ಸ್ ಕಂಪನಿಗೆ ಪೆಂಟಗನ್ ಮತ್ತು ಅಮೆರಿಕದ ಗುಪ್ತಚರ ಸಂಸ್ಥೆ ಗಳೊಂದಿಗೆ ಚಾಲ್ತಿಯಲ್ಲಿರುವ ಬೃಹತ್ ಒಪ್ಪಂದಗಳಿವೆ. ಈ ವರ್ಷದ ಅಮೆರಿಕದ ಮಧ್ಯಂತರ ಚುನಾವಣೆಗೆ ಸಂಬಂಧಿಸಿದಂತೆ, ರಿಪಬ್ಲಿಕನ್ ಪಕ್ಷದ ಉದ್ದೇಶಗಳಿಗೆ ಅವರು ರೂ.260 ಕೋಟಿಗೂ (3 ಕೋಟಿ ಡಾಲರ್) ಹೆಚ್ಚು ದೇಣಿಗೆ ನೀಡಿದ್ದಾರೆ.

ಅರ್ಥಾತ್, ಪರಿಸ್ಥಿತಿಗೆ ತಕ್ಕಂತೆ ಮಸ್ಕ್ ಅವರ ಹಿತಾಸಕ್ತಿಗಳು ಮತ್ತು ಅಮೆರಿಕ ಸರ್ಕಾರದ ಹಿತಾಸಕ್ತಿ ಗಳು ಬಹುಶಃ ಒಂದೇ ದಿಕ್ಕಿನಲ್ಲಿ ಸಾಗಬಹುದು. ಇದು ಭಾರತದ ಹಿತಾಸಕ್ತಿಗೆ ತದ್ವಿರುದ್ಧವಾದ ಕ್ರಮವಾಗಿರಬಹುದು. ಉಪಗ್ರಹ ಇಂಟರ್ನೆಟ್ ಕಂಪನಿಗಳಿಗೆ ಪರವಾನಗಿ ನೀಡುವ ಷರತ್ತುಗಳು ಸ್ಪಷ್ಟವಾಗಿರಬೇಕು.

ಭಾರತದ ಇಂಟರ್ನೆಟ್ ಸಂಪರ್ಕದ ಮೇಲಿನ ನಿಯಂತ್ರಣ ಸರ್ಕಾರದ ಅಧೀನದಲ್ಲಿರಬೇಕು. ಉಪಗ್ರಹಗಳು ದತ್ತಾಂಶವನ್ನು ಭೂಮಿಯ ಕೇಂದ್ರಕ್ಕೆ ಕಳುಹಿಸುವ ಮೊದಲು, ಸರಕಾರದ ನಿರ್ಬಂಧವಿಲ್ಲದಿದ್ದರೆ, ಪರಸ್ಪರ ಲೇಸರ್ ಕಿರಣಗಳ ಮೂಲಕ ವಿನಿಮಯ ಮಾಡಿಕೊಳ್ಳಬಲ್ಲವು. ಅಂದರೆ ಭಾರತೀಯ ದತ್ತಾಂಶವು ದೇಶದ ಹೊರಗೆ ಮಾರ್ಗೀಕೃತವಾಗುವ ಅಪಾಯವಿದೆ. ಪರವಾನಗಿ ಇಲ್ಲದ ಸ್ಟಾರ್‌ಲಿಂಕ್ ಟರ್ಮಿನಲ್‌ಗಳು ಮಣಿಪುರ ಮತ್ತು ಅಸ್ಸಾಂನಲ್ಲಿ ಕಾಣಿಸಿಕೊಂಡಿ ರುವ ವರದಿಗಳೂ ಕಳವಳಕಾರಿಯಾಗಿವೆ. ಭೂಮಿಯ ಕಕ್ಷೆಯಲ್ಲಿ ಹನ್ನೆರಡು ಸಾವಿರ ಸ್ಟಾರ್‌ಲಿಂಕ್ ಉಪಗ್ರಹಗಳು ಸಂಚರಿಸುತ್ತಿರುವಾಗ, ಈ ಸೇವೆ ಭಾರತೀಯ ಕಾನೂನಿನ ಅಡಿಯಲ್ಲಿ ಕಾರ್ಯ ನಿರ್ವಹಿಸುವುದೂ, ಭಾರತೀಯ ನ್ಯಾಯಾಲಯಗಳ ವ್ಯಾಪ್ತಿಗೆ ಒಳಪಡುವುದೂ ಅನಿವಾರ್ಯ.

ಭಾರತದ ಪ್ರತಿಯೊಂದು ಬಿಟ್ ದತ್ತಾಂಶವೂ ಭಾರತೀಯ ಗೇಟ್‌ವೇ ಮೂಲಕವೇ ಸಾಗಬೇಕು. ಅಗತ್ಯವಿದ್ದಾಗ ಸೇವೆಯನ್ನು ಪರಿಶೀಲಿಸಲು ಮತ್ತು ಸ್ಥಗಿತಗೊಳಿಸಲು ಸರ್ಕಾರಕ್ಕೆ ಕಾನೂನುಬದ್ಧ ಅಧಿಕಾರವಿರಬೇಕು. ಭಾರತದಲ್ಲಿ ಜಿಯೋ ಮತ್ತು ಏರ್ಟೆಲ್ ಸಂಸ್ಥೆಗಳು ಉಪಗ್ರಹ ಆಧಾರಿತ ಇಂಟರ್ನೆಟ್ ತಂತ್ರeನದಲ್ಲಿ ಮಹತ್ವಾಕಾಂಕ್ಷೆಯ ಹೂಡಿಕೆಗಳಿಗೆ ಸಿದ್ಧವಾಗಿವೆ.

ದಶಕಗಳಿಂದ ಭಾರತೀಯ ದೂರಸಂಪರ್ಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಗಳು ದತ್ತಾಂಶ ನಿಯಂತ್ರಣ ಸೇರಿದಂತೆ ದೇಶದ ಕಾನೂನು ಮತ್ತು ನಿಯಂತ್ರಣ ವ್ಯವಸ್ಥೆಯ ಚೌಕಟ್ಟಿ ನಲ್ಲಿ ಬೆಳೆದುಬಂದಿವೆ. ಭಾರತ ಬಯಸುವುದು ಹಲವು ಸಂಸ್ಥೆಗಳು ಸಮಾನ ನಿಯಮಗಳಡಿ ಸ್ಪರ್ಧಿಸಿ, ಗ್ರಾಹಕರಿಗೆ ಉತ್ತಮ ಸೇವೆ ಮತ್ತು ಕೈಗೆಟುಕುವ ದರ ಒದಗಿಸುವ ಆರೋಗ್ಯಕರ ಸ್ಪರ್ಧೆಯನ್ನು. ಯಾವುದೇ ಒಂದು ಕಂಪನಿಯ ಪಾರಮ್ಯವನ್ನಲ್ಲ.

ಸ್ಟಾರ್‌ಲಿಂಕ್ ಕೂಡ ಈ ಸ್ಪರ್ಧೆಯಲ್ಲಿ ಭಾಗವಹಿಸಿ, ತನ್ನ ತಂತ್ರಜ್ಞಾನ ಮತ್ತು ಸೇವೆಯ ಗುಣಮಟ್ಟ ದಿಂದ ಗ್ರಾಹಕರ ವಿಶ್ವಾಸ ಗಳಿಸಲಿ. ಡಿಜಿಟಲ್ ಪಾವತಿ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನ ಸಾಮರ್ಥ್ಯ ಸಾಬೀತುಪಡಿಸಿರುವ ಭಾರತ, ಉಪಗ್ರಹ ಸಂವಹನದಲ್ಲಿಯೂ ಸ್ವಾವಲಂಬನೆ ಯತ್ತ ದೃಢ ಹೆಜ್ಜೆಯಿಡಬೇಕು. ಭಾರತವೂ ಉಪಗ್ರಹ ಇಂಟರ್ನೆಟ್ ಕ್ರಾಂತಿಯಲ್ಲಿ ಬಹು ಬೇಗ ಯಶಸ್ಸು ಗಳಿಸಲೆಂದು ಆಶಿಸೋಣ.