ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranjith H Ashwath Column: ಕೆಟ್ಟ ಪರಂಪರೆಗೆ ನಾಂದಿ ಹಾಡದಿರಲಿ ಸದನ

ಮೊಬೈಲ್ ಬಳಕೆಯಷ್ಟೇ ಅಲ್ಲದೇ, ಶಾಸಕರು ಸದನಕ್ಕೆ ಹಾಜರಾಗದಿದ್ದರೆ ವೇತನ ತಡೆ ಹಿಡಿ ಯುವುದಕ್ಕೆ, ಸಚಿವರು ಸದನಕ್ಕೆ ಬಾರದಿದ್ದರೆ ಕ್ರಮವಹಿಸುವುದಕ್ಕೆ ಅನೇಕ ಅವಕಾಶ ಗಳಿವೆ. ಆದರೆ ಇತಿಹಾಸದಲ್ಲಿ ಈವರೆಗೆ ಶಾಸಕರು ಅನಧಿಕೃತ ಗೈರಾಗಿದ್ದಾರೆ ಎನ್ನುವ ಕಾರಣಕ್ಕೆ ವೇತನಕ್ಕೆ ಕತ್ತರಿ ಪ್ರಯೋಗ ಮಾಡಿರುವ ಅಥವಾ ತಡೆಹಿಡಿದಿರುವ ಉದಾಹರಣೆ ಗಳಿಲ್ಲ.

ಕೆಟ್ಟ ಪರಂಪರೆಗೆ ನಾಂದಿ ಹಾಡದಿರಲಿ ಸದನ

ಮುಖ್ಯ ವರದಿಗಾರ ಹಾಗೂ ಅಂಕಣಕಾರ ರಂಜಿತ್‌ ಎಚ್.ಅಶ್ವತ್ಥ

Ranjith H Ashwath Ranjith H Ashwath Mar 25, 2025 6:18 AM

ಅಶ್ವತ್ಥಕಟ್ಟೆ

ranjith.hoskere@gmail.com

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದಕ್ಕೂ ಅದರದ್ದೇ ಆದ ಕಟ್ಟುಪಾಡುಗಳಿವೆ. ಅದ ರಲ್ಲಿಯೂ ಸಂಸದೀಯ ವ್ಯವಸ್ಥೆಯಲ್ಲಿ ಪ್ರತಿಯೊಂದಕ್ಕೂ ಅದರದ್ದೇ ಆದ ನಿಯಮಾ ವಳಿಯನ್ನು ರೂಪಿಸಲಾಗಿದೆ. ಈ ನಿಯಮಾವಳಿಯಲ್ಲಿ ಚಿಕ್ಕ ಏರುಪೇರಾದರೂ ಅದಕ್ಕೆ ‘ಕಠಿಣ’ ಕ್ರಮ ಕೈಗೊಳ್ಳಲು ಅನೇಕ ನಿಯಮಗಳ ಉಲ್ಲೇಖಗಳಿವೆ. ಆದರೆ ಈ ಕ್ರಮಗಳನ್ನು ಯಾವ ಸಮಯದಲ್ಲಿ ಯಾವ ರೀತಿ ತೆಗೆದುಕೊಳ್ಳಬೇಕು ಎನ್ನುವುದು ಸಭಾಧ್ಯಕ್ಷ ಅಥವಾ ಸಭಾಪತಿ ಸ್ಥಾನದಲ್ಲಿ ಕೂತಿರುವ ವ್ಯಕ್ತಿಯ ಮೇಲೆ ನಿಂತಿರುತ್ತದೆ.

ಉದಾಹರಣೆಗೆ, ಸದನದ ಒಳಗೆ ಮೊಬೈಲ್ ಅನ್ನು ಬಳಸುವಂತಿಲ್ಲ. ಒಂದು ವೇಳೆ ಬಳಸಿದರೆ ಅಂಥವರ ವಿರುದ್ಧ ಕ್ರಮವಷ್ಟೇ ಅಲ್ಲದೇ, ಮೊಬೈಲ್ ಅನ್ನು ವಶಕ್ಕೆ ಪಡೆಯಲು ಮಾರ್ಷಲ್‌ಗಳಿಗೆ ಸೂಚಿಸುವ ಅಧಿಕಾರ ಸಭಾಧ್ಯಕ್ಷರಾದವರಿಗೆ ಇರುತ್ತದೆ. ಆದರೆ ವಿಧಾನಸಭೆ, ಪರಿಷತ್‌ಗೆ ಬರುವ ಬಹುಪಾಲು ಶಾಸಕರು ಮೊಬೈಲ್ ಗಳನ್ನು ಹಿಡಿದು ಕೊಂಡೇ ಬರುತ್ತಾರೆ. ಸದನದೊಳಗೆ ವಾದ ಮಾಡುವಾಗ ಮೊಬೈಲ್‌ಗಳನ್ನು ಪ್ರದರ್ಶನ ಮಾಡುತ್ತಾರೆ. ನಿಯಮದ ಪ್ರಕಾರ ಆ ಸಮಯದಲ್ಲಿ ಮೊಬೈಲ್‌ಗಳನ್ನು ಜಪ್ತಿ ಮಾಡಬೇಕು. ಆದರೆ ಈವರೆಗೆ ಯಾವ ಸಭಾಧ್ಯಕ್ಷರೂ ಇಂಥ ತೀರ್ಮಾನವನ್ನು ಕೈಗೊಂಡಿಲ್ಲ.

ಇದನ್ನೂ ಓದಿ: Ranjith H Ashwath Column: ಬೇರುಗಳನ್ನು ಗಟ್ಟಿಗೊಳಿಸುವುದು ಯಾವಾಗ ?

ಮೊಬೈಲ್ ಬಳಕೆಯಷ್ಟೇ ಅಲ್ಲದೇ, ಶಾಸಕರು ಸದನಕ್ಕೆ ಹಾಜರಾಗದಿದ್ದರೆ ವೇತನ ತಡೆ ಹಿಡಿಯುವುದಕ್ಕೆ, ಸಚಿವರು ಸದನಕ್ಕೆ ಬಾರದಿದ್ದರೆ ಕ್ರಮವಹಿಸುವುದಕ್ಕೆ ಅನೇಕ ಅವಕಾಶ ಗಳಿವೆ. ಆದರೆ ಇತಿಹಾಸದಲ್ಲಿ ಈವರೆಗೆ ಶಾಸಕರು ಅನಧಿಕೃತ ಗೈರಾಗಿದ್ದಾರೆ ಎನ್ನುವ ಕಾರಣಕ್ಕೆ ವೇತನಕ್ಕೆ ಕತ್ತರಿ ಪ್ರಯೋಗ ಮಾಡಿರುವ ಅಥವಾ ತಡೆಹಿಡಿದಿರುವ ಉದಾಹರಣೆ ಗಳಿಲ್ಲ.

ಇನ್ನು ಬಹುತೇಕ ಸಮಯದಲ್ಲಿ ಶಾಸಕರು ಸಹಿ ಹಾಕಿ ಹೊರನಡೆಯುತ್ತಾರೆ, ಆ ರೀತಿ ಮಾಡಿದರೂ ಕ್ರಮವಹಿಸುವ ಎಚ್ಚರಿಕೆಯು ಅನೇಕ ಬಾರಿ ಪೀಠದಿಂದ ಬಂದಿದೆ. ಆದರೂ ಯಾರೂ ಈವರೆಗೆ ಕ್ರಮವಹಿಸಿಲ್ಲ. ಈ ರೀತಿಯ ಕಠಿಣ ಕ್ರಮ ವಹಿಸಲು ಅವಕಾಶವಿದ್ದರೂ, ಕಠಿಣ ಕ್ರಮ ತೆಗೆದುಕೊಳ್ಳದೇ ಇರುವುದಕ್ಕೆ ಕಾರಣವಿದೆ. ಅದೇನೆಂದರೆ, ಇಡೀ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕರಿಗೆ ಈ ರೀತಿಯ ಶಿಕ್ಷೆ ವಿಧಿಸಿದರೆ ಕ್ಷೇತ್ರದಲ್ಲಿ ಕೆಟ್ಟ ಸಂದೇಶ ರವಾನೆ ಯಾಗುತ್ತದೆ ಎನ್ನುವುದಕ್ಕೆ.

ಈ ಉದಾಹರಣೆಯನ್ನು ಈಗ ಪ್ರಸ್ತಾಪಿಸಲು ಕಾರಣ, ಕಳೆದ ವಾರ ಬಿಜೆಪಿಯ 18 ಶಾಸಕ ರನ್ನು ಆರು ತಿಂಗಳ ಅವಧಿಗೆ ಅಮಾನತು ಮಾಡಿರುವ ವಿಷಯ. ಬಜೆಟ್ ಅಧಿವೇಶನದ ಕೊನೆಯ ದಿನ ಬಿಜೆಪಿ ಶಾಸಕರು ಹನಿಟ್ರ್ಯಾಪ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ, ಬಾವಿಗಿಳಿದು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ಕಾವು ವಿಕೋಪಕ್ಕೆ ಹೋಗಿ, ಕೆಲ ಶಾಸಕರು ತಳ್ಳಾಟ-ನೂಕಾಟ ಮಾಡಿದರೆ, ಇನ್ನು ಕೆಲವರು ಸ್ಪೀಕರ್ ಪೀಠದತ್ತ ತೆರಳಿ ಪ್ರತಿಭಟನೆ ನಡೆಸಿದರು. ಈ ವೇಳೆ ವಿಧೇಯಕದ ಪ್ರತಿಗಳನ್ನು ಹರಿದು ಹಾಕಿದ್ದನ್ನು, ವೈಯಕ್ತಿಕ ಟೀಕೆ ಮಾಡಿಕೊಂಡಿದ್ದನ್ನು ಸಭಾಧ್ಯಕ್ಷರು ಗಮನಿಸಿದ್ದಾರೆ.

ಈ ಗಲಾಟೆಯನ್ನು ತಡೆಯಲು ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಸದನವನ್ನು ಹತ್ತು ನಿಮಿಷಗಳ ಕಾಲ ಮುಂದಕ್ಕೆ ಹಾಕಿ, ಬಳಿಕ 18 ಶಾಸಕರನ್ನು ಆರು ತಿಂಗಳ ಮಟ್ಟಿಗೆ ಅಮಾ ನತು ಮಾಡುವ ಶಿಕ್ಷೆಯನ್ನು ವಿಧಿಸಿದರು (ಈಗ ಈ ಆದೇಶವನ್ನು ಹಿಂಪಡೆಯಲು ಸಜ್ಜಾಗಿ ದ್ದಾರೆ ಎನ್ನುವುದು ಬೇರೆ ಮಾತು).

ಅಮಾನತಿನ ಶಿಕ್ಷೆಗೆ ಸಂಬಂಧಿಸಿದಂತೆ ಪರ-ವಿರೋಧ ಚರ್ಚೆಗಳು ಆರಂಭಗೊಂಡಿವೆ. ಅದರಲ್ಲಿ ಪ್ರಮುಖವಾಗಿ ಶಾಸಕರು ಈ ರೀತಿಯ ವರ್ತನೆ ತೋರಿದ್ದಕ್ಕೆ ಕ್ರಮ ಕೈಗೊಂಡಿ ದ್ದರಲ್ಲಿ ತಪ್ಪಿಲ್ಲ. ಆದರೆ ಆರು ತಿಂಗಳ ಕಾಲ ಅಮಾನತು ಮಾಡುವುದರೊಂದಿಗೆ, ವಿಧಿಸಿದ್ದ ಷರತ್ತುಗಳನ್ನು ಗಮನಿಸಿದರೆ ಮುಂದಿನ ಆರು ತಿಂಗಳು ಅಮಾನತಾಗಿರುವ 18 ಶಾಸಕರು ‘ಮನೆಯಲ್ಲಿಯೇ ಕೂರಬೇಕು’ ಎನ್ನುವಂತಿದೆ.

ಶಾಸಕರು ಮಾಡಿರುವ ತಪ್ಪಿಗೆ ಆ ಕಲಾಪದಿಂದ ಅಥವಾ ಆ ದಿನದ ಮಟ್ಟಿಗೆ ಹೊರ ಹಾಕುವ ಶಿಕ್ಷೆ ವಿಧಿಸುವುದು ಸರಿ. ಆದರೆ ಆರು ತಿಂಗಳು ಅಮಾನತಿನ ಕಠಿಣ ಶಿಕ್ಷೆ ವಿಧಿಸು ವುದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಎನ್ನುವುದು ಬಹುಪಾಲು ಜನರ ಅಭಿಪ್ರಾಯ. ಒಂದು ವೇಳೆ ಈ ಬಾರಿ ಆರು ತಿಂಗಳ ಅಮಾನತನ್ನು ಒಪ್ಪಿಕೊಂಡರೆ, ಮುಂದೆ ಬರುವ ಸರಕಾರವು ಪ್ರತಿಪಕ್ಷ ಸ್ಥಾನದಲ್ಲಿರುವವರನ್ನು ಇಡೀ ವರ್ಷ ಹೊರಹಾಕಲು ತೀರ್ಮಾನಿಸಿ ದರೆ ಏನು ಮಾಡಬೇಕು? ಎನ್ನುವುದು ಹಲವರ ಪ್ರಶ್ನೆಯಾಗಿದೆ.

ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಬಿಜೆಪಿಯ 18 ಶಾಸಕರ ವಿರುದ್ಧ ಕೈಗೊಂಡಿರುವ ಅಮಾನತಿನ ಶಿಕ್ಷೆಯಲ್ಲಿ ಶಾಸಕರಿಗೆ ನೀಡುವ ದಿನಭತ್ಯೆ ಸ್ಥಗಿತಗೊಳಿಸುವುದು, ಯಾವುದೇ ಸಭೆಗಳಲ್ಲಿ ಭಾಗವಹಿಸದಂತೆ, ಅಧಿಕಾರಿಗಳಿಗೆ ಯಾವುದೇ ಸೂಚನೆ ನೀಡದಂತೆ ನಿರ್ಬಂಧ ಗಳನ್ನು ವಿಧಿಸಿರುವುದು ಅತಿರೇಕದ ತೀರ್ಮಾನ ಎನ್ನುವುದು ಹಲವರ ಅಭಿಪ್ರಾಯ ವಾಗಿದೆ.

ಈ ರೀತಿ ಅಮಾನತು ಶಿಕ್ಷೆ ನೀಡುವುದು, ಶಾಸಕರಿಗೆ ನೀಡುವ ಶಿಕ್ಷೆಗಿಂತ ಹೆಚ್ಚಾಗಿ ಅವರು ಪ್ರತಿನಿಧಿಸುವ ಕ್ಷೇತ್ರದ ಜನರಿಗೆ ನೀಡುವ ಶಿಕ್ಷೆಯಾಗಿದೆ. ಆರು ತಿಂಗಳ ಕಾಲ ಅಧಿಕಾರಿಗಳು, ಶಾಸಕರ ಮಾತು ಕೇಳಬಾರದು ಎನ್ನುವುದಾದರೆ, ಇಡೀ ಕ್ಷೇತ್ರದಲ್ಲಿ ಅರಾಜಕತೆ ಸೃಷ್ಟಿ ಯಾಗುವ ಸಾಧ್ಯತೆಯಿದೆ ಎನ್ನುವ ಆತಂಕವಿದೆ. ಕಳೆದ ಶುಕ್ರವಾರ ನಡೆದ ಘಟನೆ ಕರ್ನಾ ಟಕ ವಿಧಾನಮಂಡಲ ಇತಿಹಾಸದಲ್ಲಿ ಹೊಸದೇನಲ್ಲ, ಈ ಹಿಂದೆ ಸಿದ್ದರಾಮಯ್ಯ ಅವರು ಸದನದ ಬಾಗಿಲಿಗೆ ಒದ್ದು ಸದನ ಪ್ರವೇಶಿಸಿದ ಇತಿಹಾಸವಿದೆ.

ಪ್ರತಿಪಕ್ಷದ ಸ್ಥಾನದಲ್ಲಿರುವಾಗ ಈ ರೀತಿಯ ‘ಆವೇಶ’ಭರಿತ ನಡೆಗಳು ಸಾಮಾನ್ಯ. ಆದರೆ ಆ ಎಲ್ಲವನ್ನೂ ನಿಭಾಯಿಸಬೇಕಿರುವುದು ಸ್ಪೀಕರ್ ಆದವರ ಕೆಲಸ. ಮುಂದಿನ ದಿನದಲ್ಲಿ ಆದೇಶವನ್ನೂ ಹಿಂಪಡೆಯಲು ಅವಕಾಶವಿದೆ. ಆದರೆ ಈ ರೀತಿಯ ಆದೇಶದ ಮೂಲಕ ಕೆಟ್ಟ ಸಂಪ್ರದಾಯಕ್ಕೆ ಅವರು ನಾಂದಿ ಹಾಡಿದ್ದಾರೆ ಎನ್ನುವುದು ಸುಳ್ಳಲ್ಲ.

ಹಾಗೆ ನೋಡಿದರೆ ಕರ್ನಾಟಕವಷ್ಟೇ ಅಲ್ಲ, ಇಡೀ ದೇಶದ ಸಂಸದೀಯ ವ್ಯವಸ್ಥೆಯಲ್ಲಿ ಆಡಳಿತ ಪಕ್ಷ ಮಾಡುವ ಬಹುಪಾಲು ಕೆಲಸವನ್ನು ಪ್ರತಿಪಕ್ಷಗಳು ಒಪ್ಪುವುದಿಲ್ಲ. ಈ ಹಿಂದೆ ಸಿದ್ದರಾಮಯ್ಯ ಅವರು ಪ್ರತಿಪಕ್ಷ ನಾಯಕರಾಗಿದ್ದಾಗ, ‘ಆಡಳಿತ ಪಕ್ಷ ಮಾಡಿರುವುದನ್ನು ವಿರೋಧಿಸುವುದಕ್ಕೇ ಪ್ರತಿಪಕ್ಷ’ವಿರುವುದು ಎನ್ನುವ ಮಾತನ್ನು ಹೇಳಿದ್ದರು.

ಆಡಳಿತ ಪಕ್ಷವನ್ನು ವಿರೋಧಿಸುವುದೇ ವಿರೋಧ ಪಕ್ಷದ ಕೆಲಸವಲ್ಲ ಎನ್ನುವುದು ಥಿಯರಿ ಟಿಕಲಿ ಎಷ್ಟು ಸತ್ಯವೋ, ಎಲ್ಲವನ್ನು ವಿರೋಧಿಸುವುದೇ ಪ್ರತಿಪಕ್ಷದ ಕೆಲಸ ಎನ್ನು ವುದು ‘ರಾಜಕೀಯ ಬಲ್ಲ’ ಎಲ್ಲರಿಗೂ ತಿಳಿದಿರುವ ಸಾಮಾನ್ಯ ಜ್ಞಾನ. ಯಾವುದೇ ವಿಧೇಯಕ ವನ್ನು ಮಂಡಿಸುವಾಗ, ಅದು ಸರ್ವಾನುಮತದಿಂದ ಅಂಗೀಕಾರವಾಗುವ ಉದಾಹರಣೆ ಗಳು ಈ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ತೀರಾ ಕಡಿಮೆ.

ಒಂದು ವೇಳೆ ಸರ್ವಾನುಮತದಿಂದ ಅನುಮೋದಿಸಿದರೂ, ಅನುಮೋದಿಸುವ ಹೊಸ್ತಿಲಲ್ಲಿ ‘ಕೊಂಕು’ ತೆಗೆಯುವುದು ಸಾಮಾನ್ಯ. ಇನ್ನು ಕೆಲವೊಂದು ವಿಧೇಯಕಗಳನ್ನು ತೀವ್ರ ಖಂಡಿ ಸುವ ಕಾರಣಕ್ಕೆ, ಬಾವಿಗಿಳಿದು ಪ್ರತಿಭಟನೆ ಮಾಡುವುದು, ಬಿಲ್ ಪ್ರತಿ ಹರಿದು ತೂರು ವುದು, ವಿಧೇಯಕ ಮಂಡಿಸುವ ಸಚಿವರಿಗೆ ಅಡ್ಡಿಪಡಿಸುವುದು ಕರ್ನಾಟಕದ ವಿಧಾನ ಮಂಡಲದಲ್ಲಿ ನಡೆದುಕೊಂಡು ಬಂದಿರುವ ಸಾಮಾನ್ಯ ಸಂಗತಿ. ಈ ಹಿಂದೆ ಕಾಂಗ್ರೆಸ್, ಅಧಿವೇಶನದ ಸಮಯದಲ್ಲಿ ಮಾಡಿದ್ದ ಪ್ರತಿಭಟನೆಯ ರೀತಿಯಲ್ಲಿಯೇ, ಕಳೆದ ವಾರದ ಅಽವೇಶನದ ಸಮಯದಲ್ಲಿ ಬಿಜೆಪಿ ಮಾಡಿತ್ತು.

ಆದರೆ ವಿಧೇಯಕದ ಪ್ರತಿಗಳನ್ನು ಹರಿದು ಸ್ಪೀಕರ್‌ಗೆ ಎಸೆದರು, ಪೀಠದ ಮೇಲೆ ಬಂದರು ಎನ್ನುವ ಕಾರಣಕ್ಕೆ ಆರು ತಿಂಗಳ ಕಾಲ ಶಿಕ್ಷೆ ‘ತೀರಾ’ ಕಠಿಣ ಎನ್ನುವುದಷ್ಟೇ ಎಲ್ಲರ ಅಭಿ ಪ್ರಾಯ.

ಬಿಜೆಪಿ ಶಾಸಕರು ಸ್ಪೀಕರ್ ಕುರ್ಚಿಯ ಬಳಿ ಹೋಗಿದ್ದು, ವಿಧೇಯಕದ ಪ್ರತಿಗಳನ್ನು ಹರಿದು ಹಾಕಿದ್ದು ಎಲ್ಲವೂ ಸಂಸದೀಯ ವ್ಯವಸ್ಥೆಗೆ ವಿರುದ್ಧವಾಗಿವೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಈ ಹಿಂದೆ ಈ ರೀತಿ ಮಾಡಿದಾಗ, ಬಹುತೇಕ ಸಮಯದಲ್ಲಿ ಸಭಾಧ್ಯಕ್ಷ ಸ್ಥಾನ ದಲ್ಲಿ ಕೂತವರು ಎಚ್ಚರಿಕೆ ನೀಡಿ ವಿಷಯವನ್ನು ಕೈಬಿಟ್ಟಿದ್ದರು.

ತೀರಾ ಅತಿರೇಕ ಎನಿಸುವ ವರ್ತನೆ ತೋರಿದಾಗಲೂ, ಆ ದಿನದ ಮಟ್ಟಿಗೆ ಅಥವಾ ಆ ಅಧಿವೇಶನದ ಮಟ್ಟಿಗೆ ಅವರನ್ನು ಹೊರಹಾಕಲಾಗಿತ್ತು. ಆದರೆ ಈ ಎಲ್ಲವನ್ನೂ ಮೀರಿ ಆರು ತಿಂಗಳ ಕಾಲ ಅಮಾನತು ಮಾಡುವ ಶಿಕ್ಷೆಯೊಂದಿಗೆ, ಶಾಸಕನಾಗಿ ಉಪಯೋಗಿಸ ಬೇಕಾದ ಯಾವ ಅಧಿಕಾರ ಹಾಗೂ ಸವಲತ್ತುಗಳನ್ನು ಉಪಯೋಗಿಸಬಾರದು ಎನ್ನುವುದು ಶಾಸಕರ ಮೂಲಭೂತ ಹಕ್ಕನ್ನು ಕಸಿದುಕೊಂಡಂತೆ ಎನ್ನುವುದು ಎಲ್ಲರ ಅಂಬೋಣ.

ಇಡೀ ಘಟನೆಯ ಸಮಯದಲ್ಲಿ ಒಂದು ವಿಷಯವನ್ನು ಗಮನಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮೇಲಿನ ಚರ್ಚೆಯ ಮೇಲೆ ಪ್ರತಿಕ್ರಿಯಿಸುವಾಗ ಬಿಜೆಪಿಗರು ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರು. ಬಳಿಕ ಬಿಜೆಪಿಗರು ಬಾವಿಯಲ್ಲಿರುವಾಗಲೇ, ಸ್ಪೀಕರ್ ಖಾದರ್ ಅವರು ವಿತ್ತೀಯ ವಿಧೇಯಕ ಸೇರಿದಂತೆ ಹಲವು ವಿಧೇಯಕಗಳನ್ನು ಪ್ರಸ್ತಾಪಿಸಿ, ಅನುಮೋದನೆಗೆ ಮುಂದಾದರು.

ಈ ವೇಳೆ ಬಿಜೆಪಿಗರು ವಿಧೇಯಕದ ಪ್ರತಿಗಳನ್ನು ಹರಿಯುವ ಮೂಲಕ ಗಲಾಟೆ ಹೆಚ್ಚಿಸಿ ದರು. ಕೆಲ ಬಿಜೆಪಿಗರು ಸಭಾಧ್ಯಕ್ಷರ ಪೀಠದೆಡೆಗೆ ನುಗ್ಗಲು ಮುಂದಾದ ಸಮಯದಲ್ಲಿ ಕೆಲ ಮಾರ್ಷಲ್‌ಗಳು ಅವರನ್ನು ತಡೆಯಲು ಪ್ರಯತ್ನಿಸಿದರು. ಆದರೆ ಖಾದರ್ ಅವರು ಮಾರ್ಷಲ್‌ಗಳಿಗೆ ಅಡ್ಡಪಡಿಸಬೇಡಿ ಎನ್ನುವ ಸೂಚನೆ ನೀಡಿದ್ದರು. ಇದರಿಂದ ಅಶ್ವತ್ಥ ನಾರಾಯಣ ಸೇರಿದಂತೆ ಕೆಲ ಬಿಜೆಪಿ ಶಾಸಕರು ಸಭಾಧ್ಯಕ್ಷರ ಪೀಠದ ಬಳಿ ನಿಂತರು. ಈ ರೀತಿ ಶಾಸಕರು ಪೀಠದತ್ತ ಬರಲು ಪರೋಕ್ಷವಾಗಿ ಸಭಾಧ್ಯಕ್ಷರೇ ಅನುಮತಿಸಿ, ಬಳಿಕ ಅಮಾ ನತು ಮಾಡಿದ್ದು ಏಕೆ? ವಿಧೇಯಕ ಪಾಸ್ ಮಾಡಿಕೊಳ್ಳಲು ಹೀಗೆ ಮಾಡಿದ್ದಾಗಿ ಸಮರ್ಥನೆ ನೀಡಿರುವ ಖಾದರ್ ಅವರು, ಬಳಿಕವೂ ಶಾಸಕರು ಸಭಾಧ್ಯಕ್ಷರ ಪೀಠ ಏರಿರುವುದಕ್ಕೆ ‘ಎಚ್ಚರಿಕೆ’ ನೀಡಿ ವಿಷಯವನ್ನು ಇತ್ಯರ್ಥಪಡಿಸಬಹುದಿತ್ತು.

ದೇಶಕ್ಕೇ ಮಾದರಿ ಎನಿಸಿರುವ ಕರ್ನಾಟಕ ವಿಧಾನ ಮಂಡಲಕ್ಕೆ ತನ್ನದೇ ಆದ ಇತಿಹಾಸ ವಿದೆ. ಸಂಸದೀಯ ವ್ಯವಸ್ಥೆಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ನಾಯಕರು ಈ ವಿಧಾನಸಭೆ, ವಿಧಾನಪರಿಷತ್‌ನಲ್ಲಿ ಸದಸ್ಯರಾಗಿದ್ದಾರೆ. ಸಕಾರಾತ್ಮಕವಾಗಿ ಚರ್ಚೆಯಾಗಿ ರುವಷ್ಟೇ, ನಕಾರಾತ್ಮಕವಾಗಿಯೂ ಕರ್ನಾಟಕ ವಿಧಾನ ಮಂಡಲದ ಹಲವು ಘಟನೆಗಳು ಸದ್ದು ಮಾಡಿವೆ.

ಮೈಕ್ ಅನ್ನೇ ಕಿತ್ತೆಸೆದ, ಪೇಪರ್ ವೇಟ್ ಅನ್ನು ಸಭಾಧ್ಯಕ್ಷರಿಗೆ ಎಸೆದ, ಉಪಸಭಾಪತಿ ಯನ್ನೇ ಕುರ್ಚಿಯಿಂದ ಎಳೆದು ಬಿಸಾಕಿದ ಘಟನೆ ನಡೆದಾಗಲೂ ಯು.ಟಿ. ಖಾದರ್ ವಿಧಿ ಸಿದ ‘ಆರು ತಿಂಗಳ ಅಮಾನತಿನ’ ಶಿಕ್ಷೆಯನ್ನು ನೀಡಿದ ಉದಾಹರಣೆಗಳಿರಲಿಲ್ಲ. ಶಿಕ್ಷೆ ಕೊಟ್ಟು ಸರಿದಾರಿಗೆ ತರಲು ಶಾಸಕರು ಶಾಲಾ ಮಕ್ಕಳಲ್ಲ.

ಇದೇ ರೀತಿ ಯಾರೇ ಪ್ರತಿಪಕ್ಷ ಸ್ಥಾನದಲ್ಲಿದ್ದರೂ, ‘ಇತಿ-ಮಿತಿ’ಯೊಳಗೆ ತಮ್ಮ ವಿರೋಧ ವನ್ನು ಹೊರಹಾಕಬೇಕು ಎನ್ನುವುದು ನಿಜ. ಆದ್ದರಿಂದ ಇಡೀ ದೇಶಕ್ಕೆ ಮಾದರಿ ಎನಿಸಿರುವ ಕರ್ನಾಟಕ ವಿಧಾನಮಂಡಲದ ಗೌರವವನ್ನು ಕಾಪಾಡಿಕೊಳ್ಳಲೆಂದು, ಆಡಳಿತ-ಪ್ರತಿಪಕ್ಷ ಹಾಗೂ ಸಭಾಧ್ಯಕ್ಷ ಸ್ಥಾನದಲ್ಲಿರುವವರೂ ಇನ್ನಷ್ಟು ಪ್ರಯತ್ನಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕಿದೆ ಎನ್ನುವುದು ಸ್ಪಷ್ಟ.