ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸ್ವಪ್ರಯತ್ನದಲ್ಲಿಯೇ ಯುಪಿಎಸ್‌ಸಿ ಕ್ಲಿಯರ್

ಮೂರು ಬಾರಿಯ ವಿಫಲತೆಯ ಬಳಿಕ, ಅಂತಿಮ ಪ್ರಯತ್ನದಲ್ಲಿ ಗೆಲುವು ಸಿಕ್ಕಿದೆ. ಸತತ ಪ್ರಯತ್ನದ ಬಳಿಕ ಸಿಕ್ಕಿರುವ ಈ ಯಶಸ್ಸು ನೆಮ್ಮದಿ ಎನಿಸುತ್ತಿದೆ. ಯಾವುದೇ ಕೋಚಿಂಗ್ ಸೆಂಟರ್‌ನಲ್ಲಿ ತರಬೇತಿ ಪಡೆಯದೇ ಸ್ವಪ್ರಯತ್ನದಿಂದಲೇ ಯುಪಿಎಸ್‌ಸಿಯ ಟಾಪ್ 25ರೊಳಗೆ ಬಂದಿರುವುದಕ್ಕೆ ಖುಷಿ‌ ಯಿದೆ ಎಂದು ಯುಪಿಎಸ್‌ಸಿ ರ‍್ಯಾಂಕ್‌ನಲ್ಲಿ ಕರ್ನಾಟಕಕ್ಕೆ ಮೊದಲ ಹಾಗೂ ದೇಶದಲ್ಲಿ 24ನೇ ರ‍್ಯಾಂಕ್ ಪಡೆದಿ ರುವ ರಂಗಮಂಜು ಹೇಳಿದ್ದಾರೆ.

ಸ್ವಪ್ರಯತ್ನದಲ್ಲಿಯೇ ಯುಪಿಎಸ್‌ಸಿ ಕ್ಲಿಯರ್

Profile Ashok Nayak Apr 24, 2025 11:33 AM

ಅಪರ್ಣಾ ಎ.ಎಸ್ ಬೆಂಗಳೂರು

ಯಾವುದೇ ಕೋಚಿಂಗ್ ಕೇಂದ್ರದಲ್ಲಿ ತರಬೇತಿ ಪಡೆದಿಲ್ಲ

ಯುಪಿಎಸ್‌ಸಿಯಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದ ರಂಗಮಂಜು ಅಭಿಪ್ರಾಯ

ಮೂರು ಬಾರಿಯ ವಿಫಲತೆಯ ಬಳಿಕ, ಅಂತಿಮ ಪ್ರಯತ್ನದಲ್ಲಿ ಗೆಲುವು ಸಿಕ್ಕಿದೆ. ಸತತ ಪ್ರಯತ್ನದ ಬಳಿಕ ಸಿಕ್ಕಿರುವ ಈ ಯಶಸ್ಸು ನೆಮ್ಮದಿ ಎನಿಸುತ್ತಿದೆ. ಯಾವುದೇ ಕೋಚಿಂಗ್ ಸೆಂಟರ್‌ನಲ್ಲಿ ತರಬೇತಿ ಪಡೆಯದೇ ಸ್ವಪ್ರಯತ್ನದಿಂದಲೇ ಯುಪಿಎಸ್‌ಸಿಯ ಟಾಪ್ 25ರೊಳಗೆ ಬಂದಿರುವುದಕ್ಕೆ ಖುಷಿ‌ ಯಿದೆ ಎಂದು ಯುಪಿಎಸ್‌ಸಿ ರ‍್ಯಾಂಕ್‌ನಲ್ಲಿ ಕರ್ನಾಟಕಕ್ಕೆ ಮೊದಲ ಹಾಗೂ ದೇಶದಲ್ಲಿ 24ನೇ ರ‍್ಯಾಂಕ್ ಪಡೆದಿರುವ ರಂಗಮಂಜು ಹೇಳಿದ್ದಾರೆ. ಬೆಂಗಳೂರಿನ ದಿವಂಗತ ಐಪಿಎಸ್ ಅಧಿಕಾರಿ ಆರ್. ರಮೇಶ್ ಅವರ ಪುತ್ರರಾಗಿರುವ ರಂಗಮಂಜು ಅವರು ಎಂಬಿಬಿಎಸ್ ಮುಗಿಸಿದ್ದಾರೆ. ಮೂರು ಬಾರಿ ಯುಪಿಎಸ್‌ಸಿ ಕ್ಲಿಯರ್ ಮಾಡುವಲ್ಲಿ ವಿಫಲ ವಾದರೂ ಛಲ ಬಿಡದೇ ಅಂತಿಮ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದ್ದಾರೆ. ‘ವಿಶ್ವವಾಣಿ’ಗೆ ನೀಡಿರುವ ವಿಶೇಷ ಸಂದರ್ಶನದ ಪೂರ್ಣಪಾಠ ಇಲ್ಲಿದೆ.

ಇದನ್ನೂ ಓದಿ: Bangalore To Mangalore Train: ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು; ಇಲ್ಲಿದೆ ವೇಳಾಪಟ್ಟಿ

ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದಿರುವುದಕ್ಕೆ ಹೇಗನಿಸುತ್ತಿದೆ?

- ಈ ಹಿಂದೆ ಮೂರು ಬಾರಿ ಪರೀಕ್ಷೆ ಬರೆದಿದ್ದರೂ ಕ್ಲಿಯರ್ ಆಗಿರಲಿಲ್ಲ. ಆದರೆ ಅಂತಿಮ ಪ್ರಯತ್ನ ದಲ್ಲಿ ಯಶಸ್ಸು ಸಿಕ್ಕಿದೆ. ಅದರಲ್ಲಿಯೂ ಕರ್ನಾಟಕಕ್ಕೆ ಮೊದಲ ರ‍್ಯಾಂಕ್ ಪಡೆದಿರುವುದು ಖುಷಿ ಯಾಗುತ್ತಿದೆ. ತಂದೆಯ ನೆನಪಿನಲ್ಲಿ ತಾಯಿಯ ಪ್ರೋತ್ಸಾಹದಿಂದ ಈ ಸಾಧನೆ ಪೂರ್ಣ ಗೊಳಿಸಿದಕ್ಕೆ ನೆಮ್ಮದಿ ಎನಿಸುತ್ತಿದೆ.

ಹೇಗಿತ್ತು ಪರೀಕ್ಷಾ ತಯಾರಿ?

-ಯಾವುದೇ ಕೋಚಿಂಗ್ ಕೇಂದ್ರಗಳಲ್ಲಿ ತರಬೇತಿ ಪಡೆದಿರಲಿಲ್ಲ. ಆದರೆ ಸರಣಿ ಪರೀಕ್ಷಾ ಟೆಸ್ಟ್‌ ಗಳನ್ನು ಬರೆಯುತ್ತಿದೆ. ಪೇಪರ್ ಆಧಾರದಲ್ಲಿ ಉತ್ತರ ಬರೆಯುವಿಕೆ ನನ್ನ ತಯಾರಿಯ ಪ್ರಮುಖ ಭಾಗವಾಗಿತ್ತು. ತರಬೇತಿ ಕೇಂದ್ರಗಳಿಗೆ ಹೋಗದೇ, ಸಾಮಾಜಿಕ ಜಾಲತಾಣದಿಂದ ದೂರವಿದ್ದು ಪರೀಕ್ಷೆಗೆ ತಯಾರಿ ನಡೆಸಿದ್ದೆ.

ಮುಂದಿನ ಯೋಜನೆ ಏನು?

- ಯುಪಿಎಸ್‌ಸಿಯಲ್ಲಿ ಒಮ್ಮೆ ಆಯ್ಕೆಯಾದರೆ ಎಲ್ಲವೂ ಹಿರಿತನದ ಆಧಾರದಲ್ಲಿಯೇ ನಡೆಯುತ್ತದೆ. ಆದ್ದರಿಂದ ಮುಂದಿನ ಯೋಜನೆಗಳಿಗಿಂತ, ಸಿಗುವ ಅವಕಾಶದಲ್ಲಿ ಸೇವೆ ಮಾಡಬೇಕು ಎನ್ನುವ ಇಚ್ಛೆಯಿದೆ. ಸಾರ್ವಜನಿಕರಿಗೆ ಒಳಿತು ಮಾಡುವ ಹಾಗೂ ಸರಕಾರದ ತೀರ್ಮಾನದಲ್ಲಿ ಭಾಗವಾಗಿರಬೇಕು ಎನ್ನುವ ಬಯಕೆಯಿದೆ. ಆಡಳಿತದಲ್ಲಿದ್ದುಕೊಂಡು ದೇಶ ಸೇವೆ ಮಾಡುವುದಷ್ಟೇ ನನ್ನ ಬಯಕೆಯಾಗಿದೆ.

ಮೂರು ಭಾರಿ ಸೋತಾಗ ಕೈಬಿಡುವ ಯೋಚನೆ ಬಂದಿತ್ತಾ?

- ಹೌದು, ಮೂರು ಬಾರಿ ಸತತ ಸೋಲಾದಾಗ ಯುಪಿಎಸ್‌ಸಿ ಬಿಡಬೇಕು ಎನಿಸಿತ್ತು. ಆದರೆ ಆ ಸಮಯದಲ್ಲಿ ನನಗೆ ಮಾನಸಿಕವಾಗಿ ಧೈರ್ಯ ತುಂಬಿದ್ದು ನನ್ನ ತಾಯಿ ಸುನೀತಾ. ತಂದೆ ದಿ.ಆರ್. ರಮೇಶ್ ಅವರ ಕನಸನ್ನು ಈಡೇರಿಸಲು ಶ್ರಮ ಪಟ್ಟೆ ಅದಕ್ಕೆ ಪ್ರತಿಫಲ ಸಿಕ್ಕಿದೆ. ವೈಫಲ್ಯದ ದಿನಗಳಲ್ಲಿ ಗುರುಗಳು ಮಾರ್ಗದರ್ಶನ ಮಾಡುತ್ತಿದ್ದರು. ನಿನಗೆ ಪಾಸ್ ಮಾಡಲು ಸಾಧ್ಯವಿದೆ ಎಂದು ಮತ್ತಷ್ಟು ಪ್ರೋತ್ಸಾಹ, ಉತ್ತೇಜನ ನೀಡುತ್ತಿದ್ದರು. ನನಗೆ ನನ್ನ ಮೇಲೆ ನಂಬಿಕೆ ಇರಲಿಲ್ಲ. ಆದರೆ ಅವರ ಮಾತುಗಳು ನನ್ನಲ್ಲಿ ಭರವಸೆ ಮೂಡಿಸಿತ್ತು.

ಆಕಾಂಕ್ಷಿಗಳಿಗೆ ನಿಮ್ಮ ಸಲಹೆ ಏನು?

ಪ್ರಿಲಿಮ್ಸ್ ಪರೀಕ್ಷೆಗಳಲ್ಲಿ ಅನೇಕ ಬಾರಿ ನಮ್ಮ ಅದೃಷ್ಠವೂ ಕೈಹಿಡಿಯಬೇಕಾಗುತ್ತದೆ. ನಾನೂ ಸಹ ಮೂರು ಬಾರಿ ಸೋಲನುಭವಿಸಿದ್ದೇನೆ. ಆದರೆ ಒಂದು ಬಾರಿ ಪ್ರಿಲಿಮ್ಸ್ ಮುಗಿಸಿದರೆ, ಮೈನ್ಸ್ ನಿಮ್ಮ ಕೈಯಲ್ಲೇ ಇರುತ್ತದೆ. ಸರಣಿ ಪರೀಕ್ಷಾ ಟೆಸ್ಟ್‌ಗಳನ್ನು ತೆಗೆದುಕೊಳ್ಳುವುದರಿಂದ ಉತ್ತಮ ರೀತಿಯಲ್ಲಿ ತಯಾರಿ ಮಾಡಬಹುದು. ಈ ಹಂತದಲ್ಲಿ ಜನರು ತುಂಬಾ ಚೆನ್ನಾಗಿ ಪರೀಕ್ಷೆ ಬರೆಯಬಹುದು. ಆದರೆ ಅಗತ್ಯವಾದಷ್ಟು ಪರಿಶ್ರಮ, ಪ್ರಯತ್ನ ತಯಾರಿ ಪರೀಕ್ಷೆಯಲ್ಲಿ ಮಾಡಬೇಕು. ನಾನು ದಿನ ದಲ್ಲಿ 6-8 ಗಂಟೆ ಓದುತ್ತಿದೆ. ನಿತ್ಯ ಒಂದು ಗಂಟೆ ದಿನಪತ್ರಿಕೆ ಗಳನ್ನು ಓದುವುದಕ್ಕೆ ಮೀಸಲಿರಿ ಸುತ್ತಿದೆ. ಬಳಿಕ ಉತ್ತರ ಬರೆಯುವ ತಯಾರಿ ಮಾಡುತ್ತಿದೆ. ಬಳಿಕ ಇತಿಹಾಸ, ಭೂಗೋಳ ವಿಷಯಗಳ ಓದಿನ ಕಡೆಗೆ ಗಮನಹರಿಸುತ್ತಿದ್ದೆ. ಯಾವುದೇ ರೀತಿಯಾದ ಟೈಮ್ ಟೇಬಲ್ ಮಾಡಿಕೊಂಡು ನಾನು ಓದಿರಲಿಲ್ಲ.

*

ನನ್ನ ಸಾಧನೆಗೆ ತಂದೆಯೇ ಸ್ಪೂರ್ತಿ. ಅವರ ನಿಧನದ ನಂತರ ತಾಯಿ ಎನ್.ಸುನೀತಾ ಅವರು ಪ್ರೋತ್ಸಾಹ ನೀಡಿದರು. ಯಾವ ಅಕಾಡೆಮಿಯಲ್ಲೂ ತರಬೇತಿ ಪಡೆಯದೇ, ಮನೆಯ ಕುಳಿತು ಸತತ ಅಧ್ಯಯನ ನಡೆಸಿದೆ. ಕೋವಿಡ್ ಸಮಯದಲ್ಲಿ ಯಶಸ್ಸು ಸಿಗಲಿಲ್ಲ. ಕೊನೆಯ ಪ್ರಯತ್ನದಲ್ಲಿ ಸಂದರ್ಶನಕ್ಕೆ ಅವಕಾಶ ಸಿಕ್ಕಿತ್ತು. ಯಶಸ್ವಿಯೂ ಆದೆ. ಕರ್ನಾಟಕದಲ್ಲಿ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಇಚ್ಛೆ ಇಟ್ಟುಕೊಂಡಿದ್ದೇನೆ.

- ರಂಗಮಂಜು, ಯುಪಿಎಸ್‌ಸಿ 24ನೇ ರ‍್ಯಾಂಕ್ ಪಡೆದ ಅಭ್ಯರ್ಥಿ