ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

New DGP Dr Saleem ? : ನೂತನ ಡಿಜಿಪಿಯಾಗಿ ಡಾ.ಸಲೀಂ ನೇಮಕ ಸಾಧ್ಯತೆ

ಒಂದೊಮ್ಮೆ ಮುಂದಿನ ಮೂರು ದಿನಗಳಲ್ಲಿ ಅಲೋಕ್ ಮೋಹನ್ ಅವರ ಕೋರಿಕೆಯನ್ನು ಕೇಂದ್ರ ಸರಕಾರ ಪುರಸ್ಕರಿಸಿ ದರೆ, ಅದರ ಪ್ರಕಾರ ಸರಕಾರ ನಡೆದುಕೊಂಡಿದ್ದೇ ಆದರೆ ಅವರು ಇನ್ನೂ ಮೂರು ತಿಂಗಳ ಕಾಲ ಡಿಜಿಪಿಯಾಗಿಯೇ ಇರಬಹುದು. ಆದರೆ ಸದ್ಯದ ಸನ್ನಿವೇಶದಲ್ಲಿ ಆ ಸಾಧ್ಯತೆ ಕ್ಷೀಣ ಎನ್ನ ಲಾಗುತ್ತಿದೆ. ಪ್ರಸ್ತುತ ರಾಜ್ಯ ರಾಜಕೀಯ ಸನ್ನಿವೇಶ, ಸರಕಾರದ ನಡೆಗಳು ಹಾಗೂ ಮುಂದಿನ ಯೋಜನೆ ಗಳನ್ನು ಗಮನದಲ್ಲಿಟ್ಟುಕೊಂಡು ಸಲೀಂ ಅವರನ್ನೇ ಡಿಜಿಪಿಯಾಗಿ ನೇಮಕ ಮಾಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ನೂತನ ಡಿಜಿಪಿಯಾಗಿ ಡಾ.ಸಲೀಂ ನೇಮಕ ಸಾಧ್ಯತೆ

Profile Ashok Nayak Apr 28, 2025 10:25 AM

ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ಉನ್ನತ ಹುದ್ದೆಗೆ ಐಪಿಎಸ್‌ಗಳಲ್ಲಿ ಭಾರೀ ಪೈಪೋಟಿ, ಕನ್ನಡಿಗರಿಗೆ ಅವಕಾಶಕ್ಕೆ ಆಸಕ್ತಿ

ಠಾಕೂರ್ ಕೋರ್ಟ್ ಮೆಟ್ಟಿಲೇರಿದರೆ ಕೊಂಚ ಹಿನ್ನಡೆ

ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ.ಅಲೋಕ್ ಮೋಹನ್ ಅವರ ಸೇವಾ ಅವಧಿ ಮೂರು ದಿನಗಳಲ್ಲಿ ಅಂತ್ಯವಾಗಲಿದ್ದು, ಹಿರಿಯ ಐಪಿಎಸ್ ಅಧಿಕಾರಿ ಡಾ.ಎಂ.ಎ.ಸಲೀಂ ನೂತನ ಡಿಜಿಪಿ ಯಾಗಿ ನೇಮಕವಾಗುವ ಸಾಧ್ಯತೆ ಹೆಚ್ಚಾಗಿದೆ. ಇದರೊಂದಿಗೆ ಅನೇಕ ವರ್ಷಗಳ ನಂತರ ಕನ್ನಡದ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಡಿಜಿಪಿ ಹುದ್ದೆ ಅಲಂಕರಿಸುವ ಅವಕಾಶ ದೊರೆಯುವ ನಿರೀಕ್ಷೆ ಇದೆ. ಆದರೆ ಸೇವಾ ಹಿರಿತನ ಹೊಂದಿರುವ ಪ್ರಶಾಂತ್ ಕುಮಾರ್ ಠಾಕೂರ್ ಏನಾದರೂ ಕೋರ್ಟ್ ಮೆಟ್ಟಿಲೇರಬಹು ದೆಂಬ ಆತಂಕ ಸರಕಾರಕ್ಕಿದ್ದರೆ ಸಲೀಂ ಅವರ ನೇಮಕಕ್ಕೆ ಕೊಂಚ ಹಿನ್ನಡೆಯಾಗಬಹುದು ಎಂದು ಹೇಳಲಾಗಿದೆ.

ಈ ಮಧ್ಯೆ, ಹಾಲಿ ಪೊಲೀಸ್ ಮಹಾನಿರ್ದೇಶಕರಾದ ಡಾ.ಅಲೋಕ್ ಮೋಹನ್ ಅವರು ತಮ್ಮ ಸೇವೆಯನ್ನು ಇನ್ನೂ ಮೂರು ತಿಂಗಳ ಕಾಲ ವಿಸ್ತರಿಸಬೇಕೆಂದು ಮನವಿ ಸಲ್ಲಿಸಿದ್ದು, ಇದನ್ನು ರಾಜ್ಯ ಸರಕಾರ ಪುರಸ್ಕರಿಸಿದೆ. ಹಾಗೆಯೇ ಇದನ್ನು ಕೇಂದ್ರ ಸರಕಾರದ ಅನುಮತಿಗೂ ಕಳುಹಿಸಿದೆ. ಆದರೆ ಕೇಂದ್ರ ಸರಕಾರದಿಂದ ಈತನಕ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಒಂದೊಮ್ಮೆ ಮುಂದಿನ ಮೂರು ದಿನಗಳಲ್ಲಿ ಅಲೋಕ್ ಮೋಹನ್ ಅವರ ಕೋರಿಕೆಯನ್ನು ಕೇಂದ್ರ ಸರಕಾರ ಪುರಸ್ಕರಿಸಿ ದರೆ, ಅದರ ಪ್ರಕಾರ ಸರಕಾರ ನಡೆದುಕೊಂಡಿದ್ದೇ ಆದರೆ ಅವರು ಇನ್ನೂ ಮೂರು ತಿಂಗಳ ಕಾಲ ಡಿಜಿಪಿಯಾಗಿಯೇ ಇರಬಹುದು. ಆದರೆ ಸದ್ಯದ ಸನ್ನಿವೇಶದಲ್ಲಿ ಆ ಸಾಧ್ಯತೆ ಕ್ಷೀಣ ಎನ್ನಲಾಗುತ್ತಿದೆ. ಪ್ರಸ್ತುತ ರಾಜ್ಯ ರಾಜಕೀಯ ಸನ್ನಿವೇಶ, ಸರಕಾರದ ನಡೆಗಳು ಹಾಗೂ ಮುಂದಿನ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಸಲೀಂ ಅವರನ್ನೇ ಡಿಜಿಪಿಯಾಗಿ ನೇಮಕ ಮಾಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಸಲೀಂ ಅವರು ತುಮಕೂರು ಮೂಲದ ಕನ್ನಡದ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದು, ಉಡುಪಿ, ಹಾಸನ ಎಸ್‌ಪಿಯಾಗಿದ್ದ ಅವರು, ಮೈಸೂರು ನಗರ ಪೊಲೀಸ್ ಆಯುಕ್ತರಾಗಿದ್ದರು.

ಇದನ್ನೂ ಓದಿ: R T Vittalmurthy Column: ಹನುಮಂತ ಹಗ್ಗ ತಿನ್ನುವಾಗ ಪೂಜಾರಿಗೆಲ್ಲಿ ಶಾವಿಗೆ ?

ಹಾಗೆಯೇ ಇಲಾಖೆಯ ಅನೇಕ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಸೈ ಎನಿಸಿಕೊಂಡಿದ್ದಾರೆ. ಅದರಲ್ಲೂ ವಿಶೇಷ ವಾಗಿ ನಗರಗಳ ಸಂಚಾರ ದಟ್ಟಣೆ ನಿಯಂತ್ರಿಸುವಲ್ಲಿ ಅವರು ಮಾಡಿರುವ ಎಲ್ಲ ಯಶಸ್ವಿ ಪ್ರಯೋಗಳು ಮತ್ತು ಅವರ ಅನುಭವಗಳನ್ನು ಆಧರಿಸಿ ಸಲೀಂ ಅವರನ್ನೇ ನೇಮಿಸುವುದು ಸೂಕ್ತ ಎನ್ನುವ ಲೆಕ್ಕಾಚಾರ ಸರಕಾರದ್ದಾಗಿದೆ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

ಇದರ ಮಧ್ಯೆ, 1980ರ ದಶಕದಲ್ಲಿ ನಿಜಾಮುದ್ದೀನ್ ಅವರ ನಂತರ ಅಲ್ಪಸಂಖ್ಯಾತರ ಸಮುದಾಯದ ಅಧಿಕಾರಿಯೊಬ್ಬರಿಗೆ ಡಿಜಿಪಿ ಹುದ್ದೆ ದೊರಕಿಸಿದಂತಾಗುತ್ತದೆ. ಹಾಗೆಯೇ ದಕ್ಷತೆಗೂ ಅವಕಾಶ ನೀಡಿದಂತಾಗುತ್ತದೆ ಎನ್ನುವ ಅಭಿಪ್ರಾಯವೂ ಸರಕಾರದಲಿದೆ. ಹೀಗಾಗಿ ಕೆಲವು ವರ್ಷಗಳ ನಂತರ ಸರಕಾರ ಡಿಜಿಪಿ ನೇಮಕ ವಿಚಾರದಲ್ಲಿ ಪಾಲಿಸಿಕೊಂಡು ಬಂದಿರುವ ಸೇವಾ ಹಿರಿತನ ಸಂಪ್ರದಾಯ ದಾಟಿ ಸಲೀಂ ಅವರಿಗೆ ಅವಕಾಶ ಕಲ್ಪಿಸುವ ಬಗ್ಗೆ ಸರಕಾರ ಮಟ್ಟದಲ್ಲಿ ಗಂಭೀರ ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಡಿಜಿಪಿ ಹುದ್ದೆಗೆ ಏನೆಲ್ಲಾ ಆಗುತ್ತಿದೆ?

ಹಾಲಿ ಡಿಜಿಪಿ ಅಲೋಕ್ ಮೋಹನ್ ತಮ್ಮ ಸೇವೆಯನ್ನು ಮೂರು ತಿಂಗಳ ಕಾಲ ವಿಸ್ತರಿಸುವಂತೆ ಸರಕಾರಕ್ಕೆ ಕೋರಿಕೆ ಸಲ್ಲಿಸಿದ್ದರು. ಅವರು ತಿಂಗಳ ಅಂತ್ಯಕ್ಕೆ ತಾವು ನಿವೃತ್ತಿಯಾಗುತ್ತಿರುವ ಕಾರಣ ಈ ಹುದ್ದೆಯಲ್ಲಿ ಎರಡು ವರ್ಷ ಪೂರೈಸಲು ಆಗುತ್ತಿಲ್ಲ. ಆದ್ದರಿಂದ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಪೊಲೀಸ್ ಮುಖ್ಯಸ್ಥರ ಹುದ್ದೆಗಳಿಗೆ ಎರಡು ವರ್ಷಗಳ ಅವಧಿ ನೀಡಬೇಕೆಂದು ವಿನಂತಿಸಿ ದ್ದಾರೆ. ಇದನ್ನು ಸರಕಾರ ಪುರಸ್ಕರಿಸಿ, ಕೇಂದ್ರದ ಯುಪಿಎಸ್‌ಸಿ ಮತ್ತು ಕೇಂದ್ರ ಗೃಹ ಇಲಾಖೆ ಅನುಮತಿಗೆ ಕಳುಹಿಸಿದೆ. ಆದರೆ ಕೇಂದ್ರದಿಂದ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗಿದೆ. ಇದೇ ವೇಳೆ ಸರಕಾರ ಹೊಸ ಡಿಜಿಪಿ ನೇಮಕ ಪ್ರಕ್ರಿಯೆಯನ್ನೂ ಆರಂಭಿಸಿದ್ದು, ನಿಯಮದಂತೆ ನಾಲ್ಕು ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರುಗಳನ್ನು ಕೇಂದ್ರಕ್ಕೆ ಸಲ್ಲಿಸಿದೆ. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಡಿಜಿಯಾಗಿರುವ ಪ್ರಶಾಂತ್ ಕುಮಾರ್ ಠಾಕೂರ್, ಸಿಐಡಿ ಡಿಜಿಯಾಗಿರುವ ಡಾ.ಎಂ.ಎ.ಸಲೀಂ, ಪೊಲೀಸ್ ಗೃಹ ನಿರ್ಮಾಣ ವಿಭಾಗದ ಡಿಜಿಯಾಗಿರುವ ರಾಮಚಂದ್ರ ರಾವ್, ಸಿಐಡಿ ಸೈಬರ್ ವಿಭಾಗದ ಡಿಜಿಪಿ ಪ್ರಣಬ್ ಮೊಹಂತಿ ಅವರ ಹೆಸರುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಆಯ್ಕೆ ಸಮಿತಿ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಇದಕ್ಕೆ ಇನ್ನೆರಡು ದಿನಗಳಲ್ಲಿ ಕೇಂದ್ರ ದಿಂದ ಪ್ರತಿಕ್ರಿಯೆ ಬರಲಿದ್ದು, ಆನಂತರ ಸರಕಾರ ತನ್ನ ವಿವೇಚನಾಧಿಕಾರ ಬಳಸಿ ಮುಂದಿನ ಆಡಳಿತಕ್ಕೆ ಪೂರಕವಾದ ಹಿರಿಯ ಅಧಿಕಾರಿಯನ್ನು ಡಿಜಿಪಿಯಾಗಿ ನೇಮಕ ಮಾಡಲಿದೆ. ಹೀಗಾಗಿ ಇನ್ನೆರಡು ದಿನಗಳಲ್ಲಿ ಸರಕಾರದ ಆಯ್ಕೆ ಅಧಿಕೃತವಾಗಿ ಪ್ರಕಟವಾಗಲಿದೆ.

ಐಪಿಎಸ್‌ ಅಧಿಕಾರಿಗಳ ರೇಸ್‌ ಹೇಗಿದೆ ?

ಸದ್ಯ ಡಿಜಿಪಿ ಹುದ್ದೆಗೆ ಸೇವಾ ಹಿರಿತನ ಆಧಾರದಲ್ಲಿ ಪ್ರಶಾಂತ್ ಕುಮಾರ್ ಠಾಕೂರ್ ಅರ್ಹರಿದ್ದಾರೆ. ಆದರೆ ಇವರು ಇಲಾಖೆಯಲ್ಲಿ ಸರಕಾರದ ನಿಲುವುಗಳನ್ನು ನಿರ್ಧರಿಸುವ ಪ್ರಮುಖ ಹಾಗೂ ಆಯ ಕಟ್ಟಿನ ಹುದ್ದೆಗಳಲ್ಲಿ ಸೇವೆ ಸಲ್ಲಿಸಿಲ್ಲ. ಅಷ್ಟಕ್ಕೂ ಬಿಹಾರ ಮೂಲದ ಅವರು ಸರಕಾರಕ್ಕೆ ಅಷ್ಟಾಗಿ ಆಪ್ತವಾಗಿರುವಂತೆ ಕಾಣುತ್ತಿಲ್ಲ ಎನ್ನಲಾಗಿದೆ. ಹೀಗಾಗಿ ಸರಕಾರ ಸಿಐಡಿ ಡಿಜಿಯಾಗಿರುವ ಸಲೀಂ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಆದರೆ ಇದನ್ನು ವಿರೋಧಿಸಿ ಠಾಕೂರ್ ಅವರು ಕೇಂದ್ರ ಆಡಳಿತ ನ್ಯಾಯಾಧೀಕರಣಕ್ಕೂ ಹೋಗಬಹುದು. ಇಲ್ಲವೆ ಸಲೀಂ ಅವರು ಡಿಜಿಪಿಯಾಗಿ ನಿವೃತ್ತಿ ಯಾದ ನಂತರವೂ ಠಾಕೂರ್ ಅವರಿಗೆ ಅವಕಾಶ ಸಿಗುವುದರಿಂದ ಕೋರ್ಟ್ ಮೆಟ್ಟಿಲೇರದೆ ಸುಮ್ಮ ನಿರುವುದಕ್ಕೂ ಅವಕಾಶವಿದೆ. ಇನ್ನು ಮೂರನೇ ಸೇವಾ ಹಿರಿತನದಲ್ಲಿರುವ ರಾಮಚಂದ್ರ ರಾವ್ ಅವರು ರನ್ಯಾರಾವ್ ಬಹುಕೋಟಿ ಚಿನ್ನಸಾಗಣೆ ಪ್ರಕರಣದಲ್ಲಿ ತಳುಕು ಹಾಕಿಕೊಂಡಿರುವ ಕಾರಣ ಅವರ ನೇಮಕ ಸಾಧ್ಯತೆ ಕಡಿಮೆ ಎಂದು ಸರಕಾರದ ಮೂಲಗಳು ತಿಳಿಸಿವೆ. ಇವರ ನಂತರ ಪ್ರಣಬ್ ಮೊಹಂತಿ ಕೂಡ ರೇಸ್‌ನಲ್ಲಿದ್ದಾರೆ ಎನ್ನಲಾಗಿದೆ.