ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಗುರಿ ಮುಟ್ಟುವುದೇ ಏಮ್ಸ್ ಹೋರಾಟ?

ಪ್ರಾದೇಶಿಕ ಅಸಮತೋಲನೆ ನಿವಾರಣೆಗಾಗಿ ರಾಯಚೂರಿನಲ್ಲಿ ಐಐಟಿ ಸ್ಥಾಪಿಸುವಂತೆ ಪ್ರೊ.ನಂಜುಂಡಪ್ಪ ಸಮಿತಿ ಸರಕಾರಕ್ಕೆ ಶಿಫಾರಸ್ಸು ಮಾಡಿತ್ತು. ಜಗದೀಶ ಶೆಟ್ಟರ್ ಮುಖ್ಯಮಂತ್ರಿ ಯಾಗಿದ್ದಾಗ ಕಲಬುರ್ಗಿಯ ಸಚಿವ ಸಂಪುಟದಲ್ಲೂ ತಿರ್ಮಾನಿಸಲಾಗಿತ್ತು. ನಂತರ ನಡೆದ ರಾಜಕೀಯ ಮೇಲಾಟದಿಂದ ರಾಯಚೂರಿಗೆ ಐಐಟಿ ಕೈ ತಪ್ಪಿ ಧಾರವಾಡದ ಪಾಲಾಯಿತು.

ಗುರಿ ಮುಟ್ಟುವುದೇ ಏಮ್ಸ್ ಹೋರಾಟ?

Profile Ashok Nayak Jul 5, 2025 6:05 PM

ಬಸವರಾಜ ನಾಗಡದಿನ್ನಿ, ರಾಯಚೂರು

ಸುದೀರ್ಘ 1149 ದಿನಗಳ ಹೋರಾಟ

ಜಿಲ್ಲೆಗೆ ಬೇಕೇ ಬೇಕು ಕೇಂದ್ರದ ‘ಏಮ್ಸ್’

ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಕಳೆದ 1149 ದಿನಗಳಿಂದ ನಿರಂತರ ಧರಣಿ ನಡೆಯುತ್ತಿದೆ. ಧರಣಿಯ ಹಿಂದೆ ಕಾಣದ ಕೈ ಒಂದು ಕೆಲಸ ಮಾಡುತ್ತಿದೆ ಎಂಬ ಸಂಶಯವಿದ್ದು ಹೋರಾಟಗಾರರು ಮತ್ತು ಶಾಸಕ ಡಾ.ಶಿವರಾಜ ಪಾಟೀಲರ ನಡುವೆ ಪರಸ್ಪರ ನಿಂದಿಸುವ ಮಟ್ಟಕ್ಕೆ ಹೋಗಿ ದೂರು ಕೂಡ ದಾಖಲಾಗಿದೆ. ಹಾಗಾಗಿ ಹೋರಾಟದ ಉದ್ದೇಶ ಈಡೇರುವುದೇ ಎಂಬ ಅನುಮಾನ ಮೂಡುವಂತಾಗಿದೆ.

ಸುದೀರ್ಘ ಹೋರಾಟ

ಸುದೀರ್ಘ ೧೧೪೯ ದಿನಗಳ ಹೋರಾಟವನ್ನ ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷಿಸಿ ಯಾವುದೇ ತಿರ್ಮಾನ ಕೈಗೊಂಡಿಲ್ಲ. ಆದರೆ ಏಮ್ಸ್ ಹೋರಾಟ ಸಮಿತಿ ಮತ್ತು ಬಿಜೆಪಿಯ ರಾಯಚೂರು ನಗರ ಶಾಸಕ ಡಾ.ಶಿವರಾಜ ಪಾಟೀಲ್ ನಡುವೆ ಪರಸ್ಪರ ಅವಾಚ್ಯ ಶಬ್ದಗಳಿಂದ ವಾಕ್ಸಮರ ನಡೆಸುವ ಮೂಲಕ ಏಮ್ಸ್ ಹೋರಾಟ ಗುರಿ ತಲುಪುವುದೇ..? ಎಂಬ ಗೊಂದಲ ಎದ್ದಿದೆ.

ಐಐಟಿ ಧಾರವಾಡದ ಪಾಲು

ಪ್ರಾದೇಶಿಕ ಅಸಮತೋಲನೆ ನಿವಾರಣೆಗಾಗಿ ರಾಯಚೂರಿನಲ್ಲಿ ಐಐಟಿ ಸ್ಥಾಪಿಸುವಂತೆ ಪ್ರೊ.ನಂಜುಂಡಪ್ಪ ಸಮಿತಿ ಸರಕಾರಕ್ಕೆ ಶಿಫಾರಸ್ಸು ಮಾಡಿತ್ತು. ಜಗದೀಶ ಶೆಟ್ಟರ್ ಮುಖ್ಯಮಂತ್ರಿ ಯಾಗಿದ್ದಾಗ ಕಲಬುರ್ಗಿಯ ಸಚಿವ ಸಂಪುಟದಲ್ಲೂ ತಿರ್ಮಾನಿಸಲಾಗಿತ್ತು. ನಂತರ ನಡೆದ ರಾಜಕೀಯ ಮೇಲಾಟದಿಂದ ರಾಯಚೂರಿಗೆ ಐಐಟಿ ಕೈ ತಪ್ಪಿ ಧಾರವಾಡದ ಪಾಲಾಯಿತು.

ಐಐಟಿ ಧಾರವಾಡಕ್ಕೆ ನೀಡಿದ್ದನ್ನ ಪ್ರತಿಭಟಿಸಿ ಗ ನಡೆದ ಹೋರಾಟ ರಾಯಚೂರು ಜಿಲ್ಲೆಯ ಪ್ರತಿ ಮನಸ್ಸುಗಳಲ್ಲಿ ಕಿಚ್ಚು ಹತ್ತಿಸಿತ್ತು. ಅದರ ಫಲವಾಗಿ ರಾಯಚೂರಿಗೆ ಥ್ರಿಬಲ್ (ಐಐಐಟಿ) ಐಟಿ ನೀಡುವ ಮೂಲಕ ಹೋರಾಟ ತಣ್ಣಗಾಗುವಂತೆ ಮಾಡಲಾಗಿತ್ತಾದರೂ, ಜಿಲ್ಲೆಗಾಗಿರುವ ಅನ್ಯಾಯದ ಬಗ್ಗೆ ಹೋರಾಟಗಾರರ ಎದೆಯಲ್ಲಿದ್ದ ಕಿಚ್ಚು ಆರಿರಲಿಲ್ಲ.

ಇದನ್ನೂ ಓದಿ: Roopa Gururaj Column: ನಳ ನೀಲರ ಸ್ಪರ್ಶದಿಂದ ತೇಲಿದ ರಾಮಸೇತುವಿನ ಕಲ್ಲುಗಳು

ಏಮ್ಸ್ ಬೇಕೇ ಬೇಕು

ಡಾ.ಬಸವರಾಜ ಕಳಸ, ಅಶೋಕ ಜೈನ್, ಎಂ ಆರ್ ಭೇರಿ ಸೇರಿದಂತೆ ಹಲವು ಹೋರಾಟಗಾರರು ರಾಯಚೂರಿಗೆ ಏಮ್ಸ್ ಬೇಕೆಬೇಕು. ಏಮ್ಸ್ ಮಂಜೂರು ಆಗುವವರೆಗೆ ಹೋರಾಟ ನಿಲ್ಲಿಸುವುದಿಲ್ಲ. ಪ್ರಾಣ ಬೇಕಾದರೂ ಬಿಟ್ಟೆವು ಏಮ್ಸ್ ಬಿಡುವುದಿಲ್ಲ ಎಂಬ ಘೋಷ ವಾಕ್ಯದೊಂದಿಗೆ ಮಹಾತ್ಮ ಗಾಂಧಿ ಪುತ್ಥಳಿಯ ಮುಂದೆ ಕಳೆದ ೧೧೪೯ ದಿನಗಳಿಂದ ನಿರಂತರವಾಗಿ ಧರಣಿ ನಡೆಸುತ್ತಿದ್ದಾರೆ. ಎರಡೆರಡು ಬಾರಿ ದೆಹಲಿಗೆ ನಿಯೋಗ ತೆರಳಿ ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಕೇಂದ್ರ ಸಚಿವರ ಗಮನಕ್ಕೆ ತಂದಿದ್ದಾರೆ. ರಾಜ್ಯದ ಕಾಂಗ್ರೆಸ್ ಸಂಸದರು ಕೂಡ ಇವರಿಗೆ ಸಾಥ್ ನೀಡಿದ್ದಾರೆ.

ಶಾಸಕರ ಜತೆ ಶೀತಲ ಸಮರ

ಈ ನಡುವೆ ಹೋರಾಟಗಾರರು ಮತ್ತು ಶಾಸಕ ಡಾ.ಶಿವರಾಜ ಪಾಟೀಲರ ನಡುವೆ ಶೀತಲ ಸಮರ ನಡೆಯುತ್ತಾ ಬಂದಿದೆ. ಹೋರಾಟಗಾರರು ಕೇವಲ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಾ, ಟೀಕಿಸುತ್ತಿದ್ದಾರೆ. ರಾಜ್ಯ ಸರಕಾರ ಕಾನೂನಾತ್ಮಕವಾಗಿ ರಾಯಚೂರಿಗೆ ಏಮ್ಸ್ ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವನೆಯನ್ನೇ ಸಲ್ಲಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಬಾರಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಸಿ ಎಂ ಪತ್ರ ಬರೆದರೆ ಅದು ವೈಯಕ್ತಿಕವಾಗುತ್ತದೆ ವಿನಃ ಸರಕಾರದ ನಿರ್ಧಾರ ವಾಗುವುದಿಲ್ಲ ಎಂಬ ಅಪಸ್ವರದ ಮಾತು ಕೇಳಿ ಬಂದಿವೆ.

ಜೋಶಿ ಹೇಳಿಕೆಗೆ ಕಿಡಿ

ಕಳೆದ ಕೆಲ ದಿನಗಳ ಹಿಂದೆ ಜಿಲ್ಲೆಗೆ ಆಗಮಿಸಿದ್ದ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಶಾಸಕ ಡಾ.ಶಿವರಾಜ ಪಾಟೀಲ ಅವರ ಮನೆಯಲ್ಲಿ ಪತ್ರಕರ್ತರ ಪ್ರಶ್ನೆಗೆ ರಾಯಚೂರಿಗೆ ಏಮ್ಸ್ ನೀಡಬೇಕೋ ಬೇಡವೋ ಎಂಬದನ್ನು ತಜ್ಞರ ಸಮಿತಿ ನಿರ್ಧರಿಸುತ್ತದೆ ಎಂದು ಉತ್ತರ ನೀಡಿದ್ದರು. ಕೇಂದ್ರ ಸಚಿವರ ಈ ಹೇಳಿಕೆಯಿಂದ ಕೆರಳಿದ ಹೋರಾಟಗಾರರು ಪ್ರಲ್ಹಾದ ಜೋಶಿ ಮತ್ತು ಡಾ.ಶಿವರಾಜ ಪಾಟೀಲ ವಿರುದ್ದ ಹರಿಹಾಯ್ದಿದ್ದರು. ಇದಕ್ಕೆ ಪ್ರತಿಯಾಗಿ ಶಾಸಕರ ಬೆಂಬಲಿಗರು ಸುದ್ದಿಗೋಷ್ಠಿ ನಡೆಸಿ, ಹೋರಾಟಗಾರರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದರು.

ದಿನಕ್ಕೊಂದು ಹೇಳಿಕೆ

ಸಾಲದೆಂಬಂತೆ ಸ್ವತಃ ಶಾಸಕರು ಬೃಹತ್ ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಹೋರಾಟಗಾರರ ಮೇಲೆ ಕ್ರಮ ಕೈ ಗೊಳ್ಳುವಂತೆ ಮನವಿ ಸಲ್ಲಿಸಿದ್ದರು. ಶಾಸಕರ ಒತ್ತಡದಿಂದಾಗಿ ಹೋರಾಟಗಾರರ ವಿರುದ್ದ ದೂರು ದಾಖಲಾಗಿದೆ. ದಿನಕ್ಕೊಂದು ಸಂಘಟನೆಯವರು ಹೋರಾಟ ಗಾರರ ಪರ ಮತ್ತು ಶಾಸಕರ ಪರವಾಗಿ ಹೇಳಿಕೆ ನೀಡುತ್ತಿದ್ದಾರೆ.

ಏಮ್ಸ್ ಮಂಜೂರಾತಿಗಾಗಿ ಶಾಸಕರು ಮತ್ತು ಧರಣಿ ನಿರತರು ಒಗ್ಗೂಡಿ ಹೋರಾಟ ಮಾಡಬೇಕಿತ್ತು. ಆದರೆ ಹೋರಾಟದಲ್ಲೂ ರಾಜಕೀಯ ಬೆರೆತು ಜಿಲ್ಲೆಗೆ ಬೇಕಾಗಿರುವ ಏಮ್ಸ್ ಬೇಡಿಕೆಯ ಮೂಲ ಉದ್ದೇಶಕ್ಕೆ ಧಕ್ಕೆ ಬರುವಂತಾಗಿದೆ.