ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಲ್ಯಾಣ ಕರ್ನಾಟಕಕ್ಕೆ ಸಿಗಲಿದೆ ಹೈಸ್ಪೀಡ್ ರೈಲು ಸಂಪರ್ಕ

ಸುಮಾರು 2 ಲಕ್ಷ ಕೋಟಿ ರುಪಾಯಿ ಬಜೆಟ್ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ರೈಲು ಮಾರ್ಗ 671 ಕಿ.ಮೀ. ಉದ್ದ ಇರಲಿದೆ. ಮಾರ್ಗವು ಜಾರಿಗೆ ಬಂದರೆ, ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಮುಂಬೈ ಮತ್ತು ಹೈದರಾಬಾದ್ ನಗರಗಳು ಅತ್ಯಂತ ಸಮೀಪವಾಗಲಿವೆ. ಸದ್ಯ 2 ಮಹಾನಗರಗಳಿಗೆ ಕಲಬುರಗಿ ಯಿಂದ ತಲುಪಲೂ ಸುದೀರ್ಘ ಸಮಯ ಬೇಕಾಗುತ್ತಿದ್ದು, ಬುಲೆಟ್ ಟ್ರೇನ್ ಆರಂಭ ವಾದರೆ ಕಲಬುರಗಿಯಿಂದ ಕೇವಲ ಎರಡು ತಾಸಿನಲ್ಲಿ ಮುಂಬೈ ನಗರವನ್ನು ತಲುಪಬಹುದಾಗಿದೆ.

ಕಲ್ಯಾಣ ಕರ್ನಾಟಕಕ್ಕೆ ಸಿಗಲಿದೆ ಹೈಸ್ಪೀಡ್ ರೈಲು ಸಂಪರ್ಕ

-

Profile
Ashok Nayak Jun 16, 2026 2:27 PM

ದೇವೇಂದ್ರ ಜಾಡಿ ಕಲಬುರಗಿ

ಮುಂಬೈ-ಹೈದರಾಬಾದ್ ನಡುವೆ ಬುಲೆಟ್ ಟ್ರೇನ್

ಜಾರಿ ಬಳಿಕ ವಾಣಿಜ್ಯನಗರಿ ಕೇವಲ 2 ಗಂಟೆ ದೂರ

ಕಲಬುರಗಿ ಮೂಲಕ 671 ಕಿ.ಮೀ. ಹೈಸ್ಪೀಡ್ ರೈಲು ಮಾರ್ಗಕ್ಕೆ ಯೋಜನೆಗೆ ಕ್ರಿಯಾಯೋಜನೆ ಸಿದ್ದ

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಬುಲೆಟ್ ಟ್ರೇನ್ ಯೋಜನೆ ಈಗ ಕಲ್ಯಾಣ ಕರ್ನಾಟಕದ ಹೊಸ್ತಿಲಿಗೆ ಬಂದು ನಿಂತಿದೆ. ದೇಶದ ಎರಡು ಪ್ರಮುಖ ಆರ್ಥಿಕ ಕೇಂದ್ರಗಳಾದ ಮುಂಬೈ ಮತ್ತು ಹೈದರಾಬಾದ್ ನಗರಗಳನ್ನು ಜೋಡಿಸುವ ಬಹುನಿರೀಕ್ಷಿತ ಹೈಸ್ಪೀಡ್ ರೈಲು ಯೋಜನೆಗೆ ಅಂತಿಮ ಕ್ರಿಯಾಯೋಜನೆ ಸಿದ್ಧಗೊಂಡಿದ್ದು, ಈ ಮಹತ್ವದ ರೈಲು ಕಲಬುರಗಿ ಮಾರ್ಗವಾಗಿ ಸಂಚರಿಸಲಿದೆ.

ರಾಷ್ಟ್ರೀಯ ಹೈಸ್ಪೀಡ್ ರೈಲು ಕಾರ್ಪೋರೇಷನ್ ಲಿಮಿಟೆಡ್ ಈ ಬೃಹತ್ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಯೋಜನೆಯ ಮೊದಲ ಹಂತದ ಸಮೀಕ್ಷೆ, ಪರಿಶೀಲನೆ ಹಾಗೂ ಭೂಮಿ ಗುರುತಿಸುವಿಕೆ ಪ್ರಕ್ರಿಯೆಗಳು ಈಗಾಗಲೇ ಯಶಸ್ವಿಯಾಗಿ ಪೂರ್ಣಗೊಂಡಿವೆ.

ಸುಮಾರು 2 ಲಕ್ಷ ಕೋಟಿ ರುಪಾಯಿ ಬಜೆಟ್ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ರೈಲು ಮಾರ್ಗ 671 ಕಿ.ಮೀ. ಉದ್ದ ಇರಲಿದೆ. ಮಾರ್ಗವು ಜಾರಿಗೆ ಬಂದರೆ, ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಮುಂಬೈ ಮತ್ತು ಹೈದರಾಬಾದ್ ನಗರಗಳು ಅತ್ಯಂತ ಸಮೀಪವಾಗಲಿವೆ. ಸದ್ಯ 2 ಮಹಾನಗರಗಳಿಗೆ ಕಲಬುರಗಿಯಿಂದ ತಲುಪಲೂ ಸುದೀರ್ಘ ಸಮಯ ಬೇಕಾಗುತ್ತಿದ್ದು, ಬುಲೆಟ್ ಟ್ರೇನ್ ಆರಂಭ ವಾದರೆ ಕಲಬುರಗಿಯಿಂದ ಕೇವಲ ಎರಡು ತಾಸಿನಲ್ಲಿ ಮುಂಬೈ ನಗರವನ್ನು ತಲುಪಬಹುದಾಗಿದೆ. ಈ ಹೈಸ್ಪೀಡ್ ಕಾರಿಡಾರ್‌ಗಾಗಿ ಭೀಮಾ, ಮುಲ್ಲಾಮಾರಿ ಸೇರಿದಂತೆ ಪ್ರಮುಖ ನದಿಗಳ ಮೇಲೆ ಕಠಿಣ ತಂತ್ರಜ್ಞಾನದ ಸ್ಟೀಲ್ ಬ್ರಿಡ್'ಗಳು, 101 ಪ್ರಮುಖ ಸೇತುವೆಗಳು ಹಾಗೂ ಪಶ್ಚಿಮ ಘಟ್ಟಗಳ ಕೆಲವೆಡೆ ಗುಡ್ಡಗಳನ್ನು ಕೊರೆದು ಅತ್ಯಾಧುನಿಕ ಸುರಂಗ ಮಾರ್ಗಗಳನ್ನು ನಿರ್ಮಿಸಲು ಕ್ರಿಯಾ ಯೋಜನೆಯಲ್ಲಿ ನೀಲನಕ್ಷೆ ಸಿದ್ಧಪಡಿಸಲಾಗಿದೆ.

ಇದನ್ನೂ ಓದಿ: Kalaburagi News: ಹಲ್ಲಿ ಬಿದ್ದ ನೀರು ಸೇವಿಸಿ ನಾಲ್ವರು ವಿದ್ಯಾರ್ಥಿಗಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು

ಸುದೀರ್ಘ ಕಾಮಗಾರಿ: 2027-28ರಲ್ಲಿ ಚಾಲನೆ?

ಈ ಬೃಹತ್ ಬುಲೆಟ್ ಟ್ರೇನ್ ಯೋಜನೆಯ ಸಿವಿಲ್ ಕಾಮಗಾರಿಗಳು 2027-28ರ ಅವಧಿಯಲ್ಲಿ ಅಧಿಕೃತವಾಗಿ ಆರಂಭವಾಗುವ ಸಾಧ್ಯತೆಗಳಿವೆ. ಅತ್ಯಂತ ಸಂಕೀರ್ಣ ಹಾಗೂ ಸುದೀರ್ಘ ತಂತ್ರಜ್ಞಾನ ಆಧಾರಿತ ಯೋಜನೆಯಾಗಿರುವುದರಿಂದ ಇದು ಸಂಪೂರ್ಣವಾಗಿ ಪೂರ್ಣಗೊಳ್ಳಲು ಕನಿಷ್ಠ ಒಂದು ದಶಕದ ಸಮಯ ತೆಗೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಕರ್ನಾಟಕ ಭಾಗದಲ್ಲಿ ಕಲಬುರಗಿ ತಾಲೂಕಿನ ‘ತಾಜಸುಲ್ತಾನಪುರ’ ಗ್ರಾಮದ ಬಳಿ ಬುಲೆಟ್ ಟ್ರೇನ್‌ನ ಹೈಟೆಕ್ ರೈಲ್ವೆ ನಿಲ್ದಾಣ ತಲೆಯೆತ್ತಲಿದ್ದು, ಈ ಭಾಗದ ಆರ್ಥಿಕ ಹಾಗೂ ಔದ್ಯೋಗಿಕ ವಲಯಕ್ಕೆ ಹೊಸ ಚೈತನ್ಯ ನೀಡಲಿದೆ.

ಯೋಜನೆ ಹೈಲೈಟ್

ಒಟ್ಟು ಮಾರ್ಗದ ಉದ್ದ 671 ಕಿಲೋಮೀಟರ್

ಅಂದಾಜು ವೆಚ್ಚ 2 ಲಕ್ಷ ಕೋಟಿ ರುಪಾಯಿ

101 ಸಾಮಾನ್ಯ ಸೇತುವೆಗಳು, ನದಿಗಳ ಮೇಲೆ ಬೃಹತ್ ಸ್ಟೀಲ್ ಬ್ರಿಡ್ಜ್‌ಗಳು ಮತ್ತು ಅತ್ಯಾಧುನಿಕ ಸುರಂಗ ಮಾರ್ಗಗಳು.

ವಾಣಿಜ್ಯ ನಗರಿ ಮುಂಬೈ, ಐಟಿ ಹಬ್ ಹೈದರಾಬಾದ್, ಶೈಕ್ಷಣಿಕ ನಗರಿ ಪುಣೆ, ಧಾರ್ಮಿಕಕ್ಷೇತ್ರ ಪಂಢರಾಪುರಕ್ಕೆ ವೇಗದ ಸಂಪರ್ಕ

ಬುಲೆಟ್ ರೈಲು ಎಲ್ಲೆಲ್ಲಿ ನಿಲ್ಲಲಿದೆ?

ಮಹಾರಾಷ್ಟ್ರ: ವಿಕ್ರೋಲಿ, ಥಾಣೆ, ನವಿ ಮುಂಬೈ, ಪುಣೆ, ಪಿಂಪ್ರಿ-ಚಿಂಚವಾಡ, ಲೋನಾವಾಲ, ಸೊಲ್ಲಾಪುರ, ಪಂಢರಾಪುರ, ಬಾರಾಮತಿ.

ಕರ್ನಾಟಕ: ಕಲಬುರಗಿ (ತಾಜಸುಲ್ತಾನಪುರ),

ತೆಲಂಗಾಣ: ಕೊಕಪೇಟ (ಹೈದರಾಬಾದ್), ವಿಕಾರಾಬಾದ್.

image

ಬಹಳ ದಿನಗಳಿಂದ ಚರ್ಚೆಯಲ್ಲಿದ್ದ ಮುಂಬೈ-ಹೈದರಾಬಾದ್ ಬುಲೆಟ್ ಟ್ರೇನ್ ಯೋಜನೆಗೆ ಕ್ರಿಯಾಯೋಜನೆ ಸಲ್ಲಿಕೆಯಾಗಿರುವುದು ಕಲ್ಯಾಣ ಕರ್ನಾಟಕದ ಜನರಲ್ಲಿ ಹೊಸ ಭರವಸೆ ಮೂಡಿಸಿದೆ. ಈ ಯೋಜನೆ ಮುಗಿದರೆ ಮುಂಬೈ, ಪುಣೆ, ಹೈದರಾಬಾದ್ ನಗರಗಳಿಗೆ ನಮ್ಮ ಭಾಗದಿಂದ ಸಂಪರ್ಕ ಸುಲಭವಾಗಿ ವ್ಯಾಪಾರ-ವಹಿವಾಟು ವೃದ್ಧಿಸಲಿದೆ. ಸುದೀರ್ಘ ಯೋಜನೆ ಯಾಗಿರುವುದರಿಂದ ಅತ್ಯುನ್ನತ ಗುಣಮಟ್ಟದೊಂದಿಗೆ ಕಾಮಗಾರಿ ಪೂರ್ಣಗೊಳ್ಳಲಿ.

-ಶರಣಬಸಪ್ಪ ಪಪ್ಪಾ, ಅಧ್ಯಕ್ಷ, ಕೆಕೆಸಿಸಿಐ