ಶೈಕ್ಷಣಿಕ ಕ್ರಾಂತಿಗೆ ಸಜ್ಜಾದ ಕಲ್ಯಾಣ ಕರ್ನಾಟಕ
ಮೆಟ್ರೊ ನಗರಗಳಿಗೆ ಕೋಚಿಂಗ್ ಪಡೆಯಲು ಹೋಗುತ್ತಿರುವ ಸ್ಪರ್ಧಾರ್ಥಿಗಳು ದುಬಾರಿ ಜೀವನ ಶೈಲಿ, ಅಪರಿಚಿತ ಪರಿಸರ ಮತ್ತು ವಸತಿ ಸಮಸ್ಯೆಗಳು ಅನೇಕ ಪ್ರತಿಭಾವಂತರನ್ನು ಸ್ಪರ್ಧೆ ಯಿಂದ ಹಿಂದೆ ಸರಿಯುವಂತೆ ಮಾಡುತ್ತಿದ್ದವು. ಆದರೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ದೂರದೃಷ್ಟಿಯಿಂದಾಗಿ, ದೇಶದ ಖ್ಯಾತ ವಿಷಯ ತಜ್ಞರೇ ಕಲಬುರಗಿಗೆ ಬಂದು ಸ್ಥಳೀಯ ವಿದ್ಯಾರ್ಥಿಗಳಿಗೆ ಪಾಠ ಮಾಡಲಿದ್ದಾರೆ
-
ದೇವೇಂದ್ರ ಜಾಡಿ, ಕಲಬುರಗಿ
ಯುವ ಸಮೂಹದ ಕನಸುಗಳಿಗೆ ರೆಕ್ಕೆ ನೀಡಲಿರುವ ಕಲಬುರಗಿಯ ಪ್ರಬುದ್ಧ ಅಕಾಡೆಮಿ ಲೋಕಾರ್ಪಣೆಗೆ ಸಿದ್ಧ
ಕಲ್ಯಾಣ ಕರ್ನಾಟಕ ಭಾಗದ ಉದ್ಯೋಗಾಕಾಂಕ್ಷಿಗಳ ದಶಕಗಳ ಕಾಲದ ಕನಸೊಂದು ಈಗ ನನಸಾಗುವ ಕಾಲ ಹತ್ತಿರ ಬಂದಿದೆ. ಶೈಕ್ಷಣಿಕವಾಗಿ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಸರಕಾರ ಹಲವು ಕ್ರಮ ಕೈಗೊಂಡಿದೆ.
ಗುಣಮಟ್ಟದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗಾಗಿ ಬೆಂಗಳೂರು, ಹೈದರಾಬಾದ್ ಅಥವಾ ದೆಹಲಿಯಂತಹ ಮಹಾನಗರಗಳಿಗೆ ಅಲೆಯುತ್ತಿದ್ದ ಯುವಜನತೆಗೆ ಕಲಬುರಗಿಯಲ್ಲೇ ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯವಿರುವ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ‘ಪ್ರಬುದ್ಧ ಅಕಾಡೆಮಿ’ ಸಿದ್ಧಗೊಂಡಿದೆ. 29.52 ರು. ವೆಚ್ಚದಲ್ಲಿ ಬೃಹತ್ ಹೈಟೆಕ್ ಕಟ್ಟಡ ನಿರ್ಮಾಣ ಮಾಡಿದ್ದು, ಇನ್ನೊಂದು ವಾರದಲ್ಲಿ ಲೋಕಾರ್ಪಣೆ ಆಗಲಿದೆ.
ಯುಪಿಎಸ್‌ಸಿ, ಕೆಪಿಎಸ್‌ಸಿ, ಬ್ಯಾಂಕಿಂಗ್, ಪೊಲೀಸ್ ಇಲಾಖೆ ಉನ್ನತ ಹುದ್ದೆಗಳ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಸ್ಥಳೀಯವಾಗಿ ಗುಣಮಟ್ಟದ ತರಬೇತಿ ನೀಡುವ ಉದ್ಧೇಶವಿದೆ.
ಮೆಟ್ರೊ ನಗರಗಳಿಗೆ ಕೋಚಿಂಗ್ ಪಡೆಯಲು ಹೋಗುತ್ತಿರುವ ಸ್ಪರ್ಧಾರ್ಥಿಗಳು ದುಬಾರಿ ಜೀವನಶೈಲಿ, ಅಪರಿಚಿತ ಪರಿಸರ ಮತ್ತು ವಸತಿ ಸಮಸ್ಯೆಗಳು ಅನೇಕ ಪ್ರತಿಭಾವಂತರನ್ನು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮಾಡುತ್ತಿದ್ದವು. ಆದರೆ ಕಲಬುರಗಿ ಜಿಲ್ಲಾ ಉಸ್ತು ವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ದೂರದೃಷ್ಟಿಯಿಂದಾಗಿ, ದೇಶದ ಖ್ಯಾತ ವಿಷಯ ತಜ್ಞರೇ ಕಲಬುರಗಿಗೆ ಬಂದು ಸ್ಥಳೀಯ ವಿದ್ಯಾರ್ಥಿಗಳಿಗೆ ಪಾಠ ಮಾಡಲಿದ್ದಾರೆ. ಇದರಿಂದ ಅಭ್ಯರ್ಥಿಗಳ ಆರ್ಥಿಕ ಹೊರೆ ತಗ್ಗುವುದಲ್ಲದೆ. ಆತ್ಮವಿಶ್ವಾಸವೂ ವೃದ್ಧಿಸಲಿದೆ. ]
ಇದನ್ನೂ ಓದಿ: Kalaburagi Airport: ಕೇಂದ್ರ-ರಾಜ್ಯ ತಿಕ್ಕಾಟ, ಕಲಬುರಗಿಯಿಂದ ಹಾರದ ವಿಮಾನ
ಹೈಟೆಕ್ ಮೂಲಸೌಕರ್ಯದ ಸಂಗಮ: ಜೇವರ್ಗಿ ರಸ್ತೆಯ ಅಟಲ್ ಬಿಹಾರಿ ವಾಜಪೇಯಿ ಲೇಔಟ್‌ನಲ್ಲಿ ಸುಮಾರು 29.52 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಅಕಾಡೆಮಿ, ಒಂದು ಸುಸಜ್ಜಿತ ವಿಶ್ವವಿದ್ಯಾಲಯದಂತೆ ಕಂಗೊಳಿಸುತ್ತಿದೆ. 10,450 ಚದರ ಮೀಟರ್ ವಿಸ್ತೀರ್ಣದಲ್ಲಿ ಹರಡಿರುವ ಈ ಕ್ಯಾಂಪಸ್‌ನಲ್ಲಿ ಏಕಕಾಲಕ್ಕೆ 1000 ಅಭ್ಯರ್ಥಿಗಳಿಗೆ ಉನ್ನತ ಮಟ್ಟದ ತರಬೇತಿ ನೀಡುವ ಸಾಮರ್ಥ್ಯವಿದೆ.
ಪ್ರಬುದ್ಧ ಅಕಾಡೆಮಿಗೆ ಪ್ರವೇಶ ಹೇಗೆ?
ಪ್ರಬುದ್ಧ ಅಕಾಡೆಮಿಯಲ್ಲಿ ತರಬೇತಿ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳಿಗೆ ಮುಕ್ತ ಅವಕಾಶವಿರುತ್ತದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುವ ಅರ್ಹತಾ ಪರೀಕ್ಷೆ ಯಲ್ಲಿ ಪಡೆದ ಅಂಕಗಳ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗು ತ್ತದೆ. ಅತ್ಯಾಧುನಿಕ ಮೂಲ ಸೌಕರ್ಯ ಮತ್ತು ಪರಿಣಿತ ತರಬೇತಿ ಮಾದರಿಯೊಂದಿಗೆ, ಪ್ರಬುದ್ಧ ಅಕಾಡೆಮಿಯು ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳ ಭವಿಷ್ಯವನ್ನು ಬದಲಿಸುವ ‘ಗೇಮ್ ಚೇಂಜರ್’ ಆಗಿ ಹೊರಹೊಮ್ಮುವ ನಿರೀಕ್ಷೆಯಿದೆ.
*
ಕಲ್ಯಾಣ ಕರ್ನಾಟಕ ಭಾಗದ ಉದ್ಯೋಗಾಕಾಂಕ್ಷಿಗಳಿಗೆ ಅತ್ಯುತ್ತಮ ತರಬೇತಿ ನೀಡಲು ಕಲಬುರಗಿಯಲ್ಲಿ ಪ್ರಬುದ್ಧ ಅಕಾಡೆಮಿ ಸ್ಥಾಪಿಸಲಾಗಿದೆ. ಇದರ ಕಾಮಗಾರಿ ಪೂರ್ಣ ಗೊಂಡಿದ್ದು, ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ. ಇದು ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಹೊಸ ಶಕ್ತಿ ಮತ್ತು ಆತ್ಮವಿಶ್ವಾಸ ನೀಡಲಿದೆ.
-ಪ್ರಿಯಾಂಕ್ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ
ಯುವಜನತೆಗೆ ತರಬೇತಿ ನೀಡಲು ಪ್ರಬುದ್ಧ ಅಕಾಡೆಮಿ ಸಜ್ಜಾಗಿದೆ. ಗುಣಮಟ್ಟದ ತರಬೇತಿಗಾಗಿ ದೇಶದ ಪ್ರಮುಖ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು. ನಾನೇ ಖುದ್ದಾಗಿ ಕಟ್ಟಡ ಮತ್ತು ಸೌಲಭ್ಯಗಳನ್ನು ಪರಿಶೀಲಿಸಿದ್ದೇನೆ. ಸಚಿವರೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಉದ್ಘಾಟನಾ ದಿನಾಂಕ ನಿಗದಿಪಡಿಸಲಾಗುವುದು.
-ಫೌಜಿಯಾ ತರನ್ನುಮ್, ಕಲಬುರಗಿ ಜಿಲ್ಲಾಧಿಕಾರಿ
*
ಅಕಾಡೆಮಿ ಪ್ರಮುಖ ಸೌಲಭ್ಯಗಳು
1)ಸ್ಮಾರ್ಟ್ ಕ್ಲಾಸ್‌ರೂಮ್‌ಗಳು, ಡಿಜಿಟಲ್, ಎಐಆಧಾರಿತ ಕಲಿಕಾ ವ್ಯವಸ್ಥೆ
2)ಡಿಜಿಟಲ್ ಲೈಬ್ರರಿ ಮತ್ತು ಸಮಗ್ರ ಉಲ್ಲೇಖಿತ ಪುಸ್ತಕಗಳ ಸಂಪನ್ಮೂಲ ಕೇಂದ್ರ
3)ಆನ್‌ಲೈನ್ ಪರೀಕ್ಷೆಗಳಿಗಾಗಿ ಕಂಪ್ಯೂಟರ್ ಲ್ಯಾಬ್ ಮತ್ತು ಮಾಕ್ ಟೆಸ್ಟ್ ಕೇಂದ್ರಗಳು.
4)ಗುಂಪು ಅಧ್ಯಯನ ವಲಯಗಳು, ಸಮಾಲೋಚನಾ ಕೊಠಡಿಗಳು ಮತ್ತು ವಿಶ್ರಾಂತಿ ಕೇಂದ್ರ
5)ಸಂವಹನ ಕಲೆ, ಐಕ್ಯೂ, ಎಸ್‌ಕ್ಯೂ ಮತ್ತು ಸೈಕೋಮೆಟ್ರಿಕ್ ಮೌಲ್ಯಮಾಪನಗಳಿಗೆ ವಿಶೇಷ ವ್ಯವಸ್ಥೆ.