ಮೇಲ್ಮನೆಯಲ್ಲಿ ಕಾರ್ಯದರ್ಶಿ ಸ್ಥಾನದಲ್ಲಿ ಸದ್ಯದಲ್ಲೇ ಶೂನ್ಯ ಸೃಷ್ಟಿ
ಪರಿಷತ್ತಿನ ಇತಿಹಾಸದ ಇಂಥ ಸ್ಥಿತಿ ನಿರ್ಮಾಣವಾಗುತ್ತಿರುವುದು ಪ್ರಥಮ. ಹೇಗೆಂದರೆ, ಸದ್ಯ ವಿಧಾನ ಪರಿಷತ್ತಿನ ಕಾರ್ಯದರ್ಶಿ ಮಹಾಲಕ್ಷ್ಮೀ ಅವರು ಮೇ ತಿಂಗಳ ಅಂತ್ಯಕ್ಕೆ ನಿವೃತ್ತಿಯಾಗು ತ್ತಿದ್ದು, ಅವರ ನಂತರದಲ್ಲಿ ಕಾರ್ಯದರ್ಶಿಯಾಗಬೇಕಿದ್ದ ಎಸ್.ನಿರ್ಮಲಾ ಅವರು ಮಾರ್ಚ್‌ನ ಸೇವೆ ಮುಗಿಸಲಿದ್ದಾರೆ.
-
ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಪರಿಷತ್ತಿನಲ್ಲಿ ಮೊದಲ ಬಾರಿಗೆ ಮಹತ್ವದ ಹುದ್ದೆಗೆ ಅರ್ಹರೇ ಇಲ್ಲ
ನಿರ್ಮಲಾ ಮುಂದುವರಿಕೆ ಅನಿವಾರ್ಯ
ಇಷ್ಟೂ ದಿನ ವಿಧಾನಸಭೆಯಲ್ಲಿ ನಡೆಯುತ್ತಿದ್ದ ಕಾರ್ಯದರ್ಶಿ ಹುದ್ದೆಗಳ ಗೊಂದಲ ಇದೀಗ ವಿಧಾನ ಪರಿಷತ್ ಕಡೆ ತಿರುಗಿದೆ. ಆದರೆ ಇಲ್ಲಿನ ಸಮಸ್ಯೆ ವಿಚಿತ್ರ ಹಾಗೂ ವಿಶೇಷ. ವಿಧಾನಸಭೆಯಲ್ಲಿ ಕಾರ್ಯದರ್ಶಿ ಹುದ್ದೆ ಬೇಕೆಂದು ಕಾಳಗವೇ ನಡೆಯುತ್ತಿದ್ದರೆ, ಇತ್ತ ಪರಿಷತ್ತಿನಲ್ಲಿ ಕಾರ್ಯದರ್ಶಿ ಹುದ್ದೆಗೆ ಅರ್ಹರೇ ಇಲ್ಲದೆ ಹೊರಗಿನಿಂತ ಕರೆ ತರುವ ಅನಿವಾರ್ಯ! ಈ ಸ್ಥಿತಿ ಪರಿಷತ್ತಿನಲ್ಲಿ ಸದ್ಯದ ಶುರುವಾಗಲಿದೆ.
ಹೌದು... ಅಂದ ಹಾಗೆ ಪರಿಷತ್ತಿನ ಇತಿಹಾಸದ ಇಂಥ ಸ್ಥಿತಿ ನಿರ್ಮಾಣವಾಗುತ್ತಿರುವುದು ಪ್ರಥಮ. ಹೇಗೆಂದರೆ, ಸದ್ಯ ವಿಧಾನ ಪರಿಷತ್ತಿನ ಕಾರ್ಯದರ್ಶಿ ಮಹಾಲಕ್ಷ್ಮೀ ಅವರು ಮೇ ತಿಂಗಳ ಅಂತ್ಯಕ್ಕೆ ನಿವೃತ್ತಿಯಾಗುತ್ತಿದ್ದು, ಅವರ ನಂತರದಲ್ಲಿ ಕಾರ್ಯದರ್ಶಿಯಾಗಬೇಕಿದ್ದ ಎಸ್.ನಿರ್ಮಲಾ ಅವರು ಮಾರ್ಚ್‌ನ ಸೇವೆ ಮುಗಿಸಲಿದ್ದಾರೆ. ಇವರ ನಂತರ ಆ ಸ್ಥಾನವನ್ನು ಯಾರು ಅಲಂಕರಿಸಲಿದ್ದಾರೆ ಎಂದರೆ ಸದ್ಯ ಯಾರೂ ಇಲ್ಲ. ಅಂದರೆ ಸದ್ಯ ಪರಿಷತ್ತಿನಲ್ಲಿ ರುವ ಅಧಿಕಾರಿಗಳೆ ಉಪ ಕಾರ್ಯದರ್ಶಿ ಹಂತದವರು. ಇವರನ್ನು ಕಾರ್ಯದರ್ಶಿ ಹುದ್ದಗೆ ನಿಯೋಜಿಸುವುದಾಗಲಿ, ಪ್ರಭಾರ ವಹಿಸುವುದಾಗಲಿ ಸಾಧ್ಯವಿಲ್ಲ. ಹೀಗಾಗಿ ಪರಿಷತ್ತಿನ ಕಾರ್ಯದರ್ಶಿ ಸ್ಥಾನದಲ್ಲಿ ಸದ್ಯದ ಶೂನ್ಯ ಆವರಿಸಲಿದೆ. ಇದರಿಂದ ಒಂದು ಕಡೆ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಇದರ ಬಗ್ಗೆ ತಲೆಕೆಡಿಸಿಕೊಂಡಿದ್ದು, ಮತ್ತೊಂದು ಕಡೆ ಸರಕಾರಕ್ಕೂ ಇದು ಸಣ್ಣ ತಲೆನೋವಾಗಿದೆ.
ಇದನ್ನೂ ಓದಿ: Vishweshwar Bhat Column: ಫ್ಯಾಂಟಮ್ ವೈಬ್ರೇಶನ್ ಸಿಂಡ್ರೋಮ್
ಹೀಗಾಗಿ ಇಂಥ ಮಹತ್ವದ ಹುದ್ದೆಗೆ ಹಾಲಿ ಇರುವ ಕಾರ್ಯದರ್ಶಿ ಮಹಾಲಕ್ಷ್ಮೀ ಅಥವಾ ನಂತರದಲ್ಲಿ ಕಾರ್ಯದರ್ಶಿ 2 ಸ್ಥಾನದಲ್ಲಿರುವ ಎಸ್.ನಿರ್ಮಲಾ ಅವರನ್ನು ನಿವೃತ್ತಿ ನಂತರದಲ್ಲೂ ಮುಂದುವರಿಸಬೇಕಿದೆ. ಆದರೆ ಮಹಾಲಕ್ಷ್ಮೀ ಅವರ ವಿರುದ್ಧ ಅನೇಕ ರೀತಿಯ ಅಕ್ರಮ, ಅವ್ಯವಹಾರಗಳ ಆರೋಪ ಇರುವ ಕಾರಣ, ನಂತರದ ಅರ್ಹರಾದ ಅಧಿಕಾರಿ ಎಸ್.ನಿರ್ಮಲಾ ಅವರನ್ನು ನಿವೃತ್ತಿ ನಂತರ ಸೇವಾ ಅವಧಿ ವಿಸ್ತರಿಸಿ ಕಾರ್ಯದರ್ಶಿ ಮಾಡಬೇಕಾದ ಅನಿವಾರ್ಯವಿದೆ.
ಈ ಇಬ್ಬರೂ ಅಧಿಕಾರಿಗಳೂ ಬೇಡ ಎನ್ನುವುದಾದರೆ ಹೊರಗಿನಿಂದ ಒಪ್ಪಂದ ಸೇವೆಗೆ ಕಾರ್ಯದರ್ಶಿ ನೇಮಿಸಬೇಕಾಗುತ್ತದೆ. ಆದರೆ ಇದು ಸುಲಭವಲ್ಲ. ಇಂಥ ಸನ್ನಿವೇಶನದಲ್ಲಿ ಸರಕಾರ ಇನ್ನೊಂದು ವಾರದ ಒಳಗೆ ಇದರ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರುವ ಅನಿವಾರ್ಯಕ್ಕೆ ಸಿಲುಕಿದೆ.
ಇದರ ಮಧ್ಯೆ, ಪರಿಷತ್ ಆಡಳಿತ ಸುಗಮಗೊಳಿಸುವ ದೃಷ್ಟಿಯಿಂದ ಸಭಾಪತಿ ಬಸವರಾಜ ಹೊರಟ್ಟಿ ಅವರು ಸದ್ಯದ ಈ ಗೊಂದಲಕ್ಕೊಂದು ತೆರೆ ಎಳೆಯಲು ಗಂಭೀರ ಚಿಂತನೆ ನಡೆಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ನಿರ್ಮಲಾ ನೇಮಕ ಸಾಧ್ಯತೆ
ಒಟ್ಟು 75 ಸದಸ್ಯ ಬಲದ ವಿಧಾನ ಪರಿಷತ್ತಿನಲ್ಲಿ ವರ್ಷಕ್ಕೆ 60 ದಿನಗಳ ಅಧಿವೇಶನ ನಡೆಸುವುದು ಮತ್ತು ಸದಸ್ಯರು ಪ್ರಶ್ನೋತ್ತರ, ಸೌಲಭ್ಯಗಳು ಮತ್ತು ಸಭಾಪತಿಗಳ ಆಡಳಿತ ಮತ್ತು ಕಾನೂನು, ಶಿಷ್ಟಾಚಾರ ವ್ಯವಸ್ಥೆ ಸೇರಿದಂತೆ ಒಟ್ಟಾರೆ ಆಡಳಿತ ನೋಡಿಕೊಳ್ಳ ಬೇಕಾದ ಮಹತ್ವದ ಕೆಲಸವನ್ನು ಕಾರ್ಯದರ್ಶಿ ನಿರ್ವಹಿಸುತ್ತಾರೆ. ಈ ಹುದ್ದೆಗೆ ಮುಂದೆ ಯಾರೂ ಅರ್ಹರಿಲ್ಲದ ಕಾರಣ ಹಾಲಿ ಕಾರ್ಯದರ್ಶಿ ಮಹಾಲಕ್ಷ್ಮೀ ಅವರನ್ನು ನಿವೃತ್ತಿ ನಂತರ ನೇಮಿಸುವ ಅವಕಾಶವಿದೆ. ಆದರೆ ಇವರ ವಿರುದ್ಧ ವಿರುದ್ಧ ಪದವಿಗಳ ನಕಲಿ ಅಂಕಪಟ್ಟಿ ಹಾಗೂ ಅನೇಕ ರೀತಿಯ ಹಣ ದುರ್ಬಳಕೆ, ಕಾಮಗಾರಿ ಅಕ್ರಮಗಳ ಆರೋಪ ಗಳು ಇರುವ ಕಾರಣ ಇವರನ್ನು ಕಾರ್ಯದರ್ಶಿಯಾಗಿ ಮುಂದುವರಿಸಲು ಸರಕಾರಕ್ಕೆ ಆಸಕ್ತಿ ಇಲ್ಲ ಎನ್ನಲಾಗಿದೆ. ಆರೋಪಗಳ ಹಿನ್ನೆಲೆಯಿಂದ ಸಭಾಪತಿ ಬಸವರಾಜ ಹೊರಟ್ಟಿ ಕೂಡ ಇವರ ಹೆಸರು ಶಿಫಾರಸು ಮಾಡುವುದು ಕಷ್ಟ ಎನ್ನಲಾಗಿದೆ.
ಹೊರಗಿನ ಕಾರ್ಯದರ್ಶಿ ಬಂದರೆ?
ಕಾರ್ಯದರ್ಶಿ ಹುದ್ದೆಗೆ ಅರ್ಹರೇ ಇಲ್ಲದ ಸ್ಥಿತಿ ಪರಿಷತ್ತಿನಲ್ಲಿ ಎಂದಿಗೂ ಬಂದಿರಲಿಲ್ಲ. ಆದರೆ ವಿಧಾನ ಸಭೆಯಲ್ಲಿ ಇಂಥ ಸನ್ನಿವೇಶ ಎದುರಾಗಿ ಆಗ ಮುತ್ತಲಗೇರಿ ಎಂಬುವವ ರನ್ನು ಆನಂತರ ವಿಧಾನಸಭೆ, ಪರಿಷತ್ ಸೇರಿದಂತೆ ವಿಧಾನಮಂಡಲ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು. ನಂತರ ಪ್ರಧಾನ ಕಾರ್ಯದರ್ಶಿ ಹುದ್ದೆ ಸೃಷ್ಟಿಸಿ ರಾಬಿ ಸನ್ ಡಿಸೋಜಾ ಹಾಗೂ ಭರತೇಶ್ ಎಂಬ ನಿವೃತ್ತ ನ್ಯಾಯಾಧೀಶರನ್ನು ನೇಮಿಸಲಾಗಿತ್ತು. ಆದರೆ ನ್ಯಾಯಾಂಗ ಹಿನ್ನೆಲೆಯವರಿಗೆ ಶಾಸಕಾಂಗ ಕಾರ್ಯ ಕಲಾಪ ಮತ್ತು ಶಾಸಕರೊಂದಿಗೆ ವ್ಯವಹರಿಸುವುದು ಕಷ್ಟವಾಗಿ ಸರಕಾರ ಅನೇಕ ಬಾರಿ ಮುಜುಗರ ಅನುಭವಿಸಬೇಕಿತ್ತು. ಹೀಗಾಗಿ ಹೊರಗಿನಿಂದ ನ್ಯಾಯಾಧೀಶರನ್ನು ಕರೆತಂದು ಪರಿಷತ್ ಆಡಳಿತ ನಡೆಸುವುದು ಸುಲಭವಲ್ಲ. ಸದ್ಯಕ್ಕೆ ಅದು ಸೂಕ್ತವೂ ಅಲ್ಲ ಎಂದು ಕಾನೂನು ಇಲಾಖೆ ಅಧಿಕಾರಿಗಳು ಸರಕಾರಕ್ಕೆ ತಿಳಿಸಿದ್ದಾರೆ ಎನ್ನಲಾಗಿದೆ.