ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಂಗಳೂರಂತೆ ಕಲಬುರಗಿಗೂ ರೈಲ್ವೆ ಜಾಲ ಬರಲಿ

ಕಲಬುರಗಿ ಬೀದರ್ ರೈಲು ಮಾರ್ಗವೂ ದಕ್ಷಿಣ ಮಧ್ಯ ರೈಲ್ವೆ ವ್ಯಾಪ್ತಿಯಲ್ಲಿದೆ. ಹೀಗಾಗಿ ಕಲ್ಯಾಣ ಕರ್ನಾಟಕದ ರೈಲ್ವೆ ಜಾಲವು ಒಂದೇ ಆಡಳಿತ ಕೇಂದ್ರದಡಿ ಇಲ್ಲದೆ ಹಲವು ಕಡೆ ಚದುರಿದೆ. ಇದರ ನೇರ ಪರಿಣಾಮ ಅನುಭವಿಸುತ್ತಿರುವವರು ಸಾಮಾನ್ಯ ಪ್ರಯಾಣಿಕರು. ಉದ್ಯೋಗ, ಶಿಕ್ಷಣ, ವ್ಯಾಪಾರ, ಚಿಕಿತ್ಸೆ ಹಾಗೂ ವಲಸೆಗಾಗಿ ಪ್ರತಿನಿತ್ಯ ಸಾವಿರಾರು ಜನರು ರೈಲನ್ನೇ ಅವಲಂಬಿಸಿದ್ದಾರೆ.

ಮಂಗಳೂರಂತೆ ಕಲಬುರಗಿಗೂ ರೈಲ್ವೆ ಜಾಲ ಬರಲಿ

-

Profile
Ashok Nayak Aug 31, 2026 10:17 AM

ದೇವೇಂದ್ರ ಜಾಡಿ ಕಲಬುರಗಿ

ಕರ್ನಾಟಕಕ್ಕೆ ರೈಲ್ವೆ ನ್ಯಾಯ ಯಾವಾಗ? ಮಂಜೂರಾದ ಪ್ರತ್ಯೇಕ ರೈಲ್ವೆ ವಿಭಾಗಕ್ಕೆ ಇನ್ನಾದರೂ ಚಾಲನೆ ನೀಡಿ

ರಾಜ್ಯದ ಅಭಿವೃದ್ಧಿಯ ವೇಗಕ್ಕೆ ಸಾರಿಗೆ ಸಂಪರ್ಕ ಪ್ರಮುಖ ಆಧಾರವಾಗಿದ್ದರೂ, ಕಲ್ಯಾಣ ಕರ್ನಾಟಕದ ರೈಲ್ವೆ ವ್ಯವಸ್ಥೆ ಮಾತ್ರ ಇಂದಿಗೂ ಆಡಳಿತಾತ್ಮಕವಾಗಿ ಚದುರಿ ಹೋಗಿರುವುದು ಈ ಭಾಗದ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಒಂದೇ ಭೌಗೋಳಿಕ ಪ್ರದೇಶದ ರೈಲು ನಿಲ್ದಾಣ ಗಳು ಬೇರೆ ಬೇರೆ ರೈಲ್ವೆ ವಲಯ ಹಾಗೂ ವಿಭಾಗಗಳ ಅಡಿಯಲ್ಲಿ ಇರುವುದರಿಂದ ರೈಲು ಸೇವೆಗಳ ವಿಸ್ತರಣೆ, ಹೊಸ ರೈಲುಗಳ ಬೇಡಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಪ್ರಯಾಣಿಕರ ಸಮಸ್ಯೆಗಳಿಗೆ ಸಮಗ್ರ ಪರಿಹಾರ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ಕಲಬುರಗಿ-ವಾಡಿ ಸೇರಿ ಪ್ರಮುಖ ನಿಲ್ದಾಣಗಳು ಮಧ್ಯ ರೈಲ್ವೆಯ ಸೋಲಾಪುರ ವಿಭಾಗದ ವ್ಯಾಪ್ತಿಯಲ್ಲಿದ್ದರೆ, ಚಿತ್ತಾಪುರ, ಸೇಡಂ, ಮಳಖೇಡ್ ರೋಡ್ ಸೇರಿದಂತೆ ಹೈದರಾಬಾದ್ ಮಾರ್ಗದ ನಿಲ್ದಾಣಗಳು ದಕ್ಷಿಣ ಮಧ್ಯ ರೈಲ್ವೆಯ ಸಿಕಂದರಾಬಾದ್ ವಿಭಾಗದ ವ್ಯಾಪ್ತಿಯಲ್ಲಿವೆ.

ಕಲಬುರಗಿ ಬೀದರ್ ರೈಲು ಮಾರ್ಗವೂ ದಕ್ಷಿಣ ಮಧ್ಯ ರೈಲ್ವೆ ವ್ಯಾಪ್ತಿಯಲ್ಲಿದೆ. ಹೀಗಾಗಿ ಕಲ್ಯಾಣ ಕರ್ನಾಟಕದ ರೈಲ್ವೆ ಜಾಲವು ಒಂದೇ ಆಡಳಿತ ಕೇಂದ್ರದಡಿ ಇಲ್ಲದೆ ಹಲವು ಕಡೆ ಚದುರಿದೆ. ಇದರ ನೇರ ಪರಿಣಾಮ ಅನುಭವಿಸುತ್ತಿರುವವರು ಸಾಮಾನ್ಯ ಪ್ರಯಾಣಿಕರು. ಉದ್ಯೋಗ, ಶಿಕ್ಷಣ, ವ್ಯಾಪಾರ, ಚಿಕಿತ್ಸೆ ಹಾಗೂ ವಲಸೆಗಾಗಿ ಪ್ರತಿನಿತ್ಯ ಸಾವಿರಾರು ಜನರು ರೈಲನ್ನೇ ಅವಲಂಬಿಸಿದ್ದಾರೆ. ಸಮರ್ಪಕ ರೈಲುಗಳಿಲ್ಲದೆ ಗಂಟೆಗಟ್ಟಲೆ ಕಾಯುವುದು, ದೂರದ ನಗರಗಳಿಗೆ ತೆರಳಲು ಬಸ್ ಅಥವಾ ದುಬಾರಿ ಖಾಸಗಿ ಸಾರಿಗೆ ಅವಲಂಬಿಸುವುದು, ಸೀಟಿಗಾಗಿ ಪರದಾಡುವುದು ಈ ಭಾಗದ ಜನರ ನಿತ್ಯದ ಸಂಕಷ್ಟವಾಗಿದೆ.

ಇದನ್ನೂ ಓದಿ: UP ATS Raid in Kalaburagi: ಪಾಕಿಸ್ತಾನದ ಜತೆ ಸಂಪರ್ಕ ಶಂಕೆ: ಕಲಬುರಗಿಯಲ್ಲಿ ಇಬ್ಬರನ್ನು ವಶಕ್ಕೆ ಪಡೆದ ಉತ್ತರ ಪ್ರದೇಶದ ಎಟಿಎಸ್

ಹೊಸ ರೈಲು ಸೇವೆ ಅಥವಾ ನಿಲ್ದಾಣ ಅಭಿವೃದ್ಧಿಯ ಬೇಡಿಕೆ ಬಂದಾಗಲೂ ಅದು ವಿವಿಧ ಆಡಳಿತ ಹಂತಗಳಲ್ಲಿ ಸಿಲುಕುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಂಗಳೂರಿನ ರೈಲ್ವೆ ಆಡಳಿತವನ್ನು ಒಂದೇ ವಿಭಾಗದಡಿ ತರಲು ಕೈಗೊಂಡಿರುವ ಮಾದರಿಯನ್ನು ಕಲಬುರಗಿಗೂ ಅನ್ವಯಿಸಬೇಕು ಎಂಬ ಬೇಡಿಕೆ ಬಲಗೊಂಡಿದೆ. ಕಲಬುರಗಿ ಜಂಕ್ಷನ್ ನಿಂದ ವಾಡಿ ಜಂಕ್ಷನ್‌ವರೆಗೆ ಸಂಬಂಧಿತ ನಿಲ್ದಾಣಗಳನ್ನು ಒಂದೇ ರೈಲ್ವೆ ವ್ಯವಸ್ಥೆಯಡಿ ತರಬೇಕು. ಇಲ್ಲದಿದ್ದರೆ, ಬಹುದಿನಗಳ ಬೇಡಿಕೆಯಾಗಿ ರುವ ಕಲಬುರಗಿ ಪ್ರತ್ಯೇಕ ರೈಲ್ವೆ ವಿಭಾಗಕ್ಕೆ ಶೀಘ್ರ ಚಾಲನೆ ನೀಡಿ, ಆಡಳಿತಾತ್ಮಕ ಕಾರ್ಯಾರಂಭ ಮಾಡಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಬಾಕಿ ಇರುವ ಸ್ಟೇಬ್ಲಿಂಗ್ ಲೈನ್ ಹಾಗೂ 2014ರಲ್ಲಿ ಮಂಜೂರಾದ 2ನೇ ಪಿಟ್ ಲೈನ್ ಕಾಮಗಾರಿಗಳನ್ನು ತಕ್ಷಣ ವೇಗಗೊಳಿಸಬೇಕು. ವರ್ಷಗಳ ಕಾಲ ಕಾಮಗಾರಿಗಳು ವಿಳಂಬವಾಗುವುದು ಈ ಭಾಗದ ರೈಲ್ವೆ ಅಭಿವೃದ್ಧಿಯ ಮೇಲಿನ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಬಾರದು.

ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಸಂವಿಧಾನದ 371(ಜೆ) ಆಶಯವು ಈ ಭಾಗದ ಸಮಗ್ರ ಅಭಿವೃದ್ಧಿಯನ್ನು ಒಳಗೊಂಡಿದೆ. ರೈಲ್ವೆ ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿದ್ದರೂ, ರಾಜ್ಯ ಸರಕಾರವೂ ಈ ಭಾಗದ ಅಗತ್ಯಗಳನ್ನು ಕೇಂದ್ರದ ಮುಂದೆ ಪರಿಣಾಮಕಾರಿಯಾಗಿ ಮಂಡಿಸಿ, ಅಗತ್ಯ ಸಮನ್ವಯ ಸಾಧಿಸುವ ಕರ್ತವ್ಯ ಹೊಂದಿದೆ.

ಜನಪ್ರತಿನಿಧಿಗಳೇ, ಇದು ಕೇವಲ ರೈಲಿನ ಬೇಡಿಕೆಯಲ್ಲ ಮಂಗಳೂರಿನ ಮಾದರಿಯಲ್ಲಿ ಕಲಬುರಗಿ ರೈಲ್ವೆ ಜಾಲವನ್ನು ಒಂದೇ ವಿಭಾಗದಡಿ ತರಬೇಕೆಂಬ ಬೇಡಿಕೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸಂಸದರು, ಶಾಸಕರು ಹಾಗೂ ರಾಜ್ಯದ ಸಚಿವರು ಪಕ್ಷಭೇದ ಮರೆತು ಒಗ್ಗಟ್ಟಿನಿಂದ ಧ್ವನಿ ಎತ್ತಬೇಕಾ ಗಿದೆ. ಚುನಾವಣೆ ಸಂದರ್ಭದಲ್ಲಿ ರೈಲು ಸಂಪರ್ಕದ ಭರವಸೆ ನೀಡುವುದಷ್ಟೇ ಸಾಲದು. ಸಂಸತ್ ನಲ್ಲೂ, ಕೇಂದ್ರ ರೈಲ್ವೆ ಸಚಿವಾಲಯದ ಮುಂದೆಯೂ ನಿರಂತರವಾಗಿ ಒತ್ತಡ ತಂದು ಫಲಿತಾಂಶ ಪಡೆಯುವುದು ಜನಪ್ರತಿನಿಽಗಳ ಜವಾಬ್ದಾರಿಯಾಗಿದೆ.

ಇನ್ನೆಷ್ಟು ವಿಳಂಬ?

ಕಲಬುರಗಿ ಪ್ರತ್ಯೇಕ ರೈಲ್ವೆ ವಿಭಾಗದ ಬೇಡಿಕೆ ದಶಕಗಳಿಂದಲೂ ಕೇಳಿ ಬರುತ್ತಿದೆ. ಪ್ರತಿ ಬಜೆಟ್ ನಲ್ಲೂ ನಿರೀಕ್ಷೆ ಮೂಡುತ್ತದೆ; ಆದರೆ, ಅನುಷ್ಠಾನದ ಹಂತದಲ್ಲಿ ವಿಚಾರ ಮತ್ತೆ ಮುಂದೂಡ ಲ್ಪಡುತ್ತಿದೆ ಎಂಬ ಅಸಮಾಧಾನ ಜನರಲ್ಲಿದೆ. ಮಂಜೂರಾತಿ ಹಾಗೂ ಘೋಷಣೆಗಳ ಆಚೆಗೆ ಹೋಗಿ, ರೈಲ್ವೆ ವಿಭಾಗದ ಕಾರ್ಯಾರಂಭಕ್ಕೆ ಅಗತ್ಯ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು.

image

ಕಲಬುರಗಿ ರೈಲ್ವೆ ಜಾಲವನ್ನು ಹಲವು ವಿಭಾಗಗಳಲ್ಲಿ ಚದುರಿಸಿರುವುದರಿಂದ ಜನರ ಬೇಡಿಕೆಗಳಿಗೆ ಸಮರ್ಪಕ ಸ್ಪಂದನೆ ಸಿಗುತ್ತಿಲ್ಲ. ಮಂಗಳೂರಿನ ಮಾದರಿಯಲ್ಲಿ ಕಲಬುರಗಿಯ ರೈಲ್ವೆ ನಿಲ್ದಾಣ ಗಳನ್ನು ಒಂದೇ ವ್ಯವಸ್ಥೆಯಡಿ ತರಬೇಕು. ಇಲ್ಲದಿದ್ದರೆ ದಶಕಗಳ ಹಿಂದೆಯೇ ಅನುಮೋದನೆ ಸಿಕ್ಕಿರುವ ಪ್ರತ್ಯೇಕ ರೈಲ್ವೆ ವಿಭಾಗದ ಬೇಡಿಕೆಗೆ ಶೀಘ್ರ ಚಾಲನೆ ನೀಡಿ, ಈ ಭಾಗಕ್ಕೆ ನ್ಯಾಯ ಒದಗಿಸಬೇಕು.

- ಮುತ್ತಣ್ಣ ನಡಗೇರಿ, ಹೋರಾಟಗಾರ