ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bihar Election ground report by Raghav Sharma Nidle : 20 ವರ್ಷ ಕಳೆದರೂ ತಗ್ಗದ ನಿತೀಶ್ ಜನಪ್ರಿಯತೆ

ಅ.೩೧ರಂದು ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್ ಸಂಚಾರ ಸಾಧ್ಯವಾಗದ ಕಾರಣ ತಾವು ತೆರಳಿ ಭಾಷಣ ಮಾಡಬೇಕಿದ್ದ ಪ್ರದೇಶಗಳ ಜನರಿಗೆ ಬಿಜೆಪಿ, ಆರ್‌ಜೆಡಿ ನಾಯಕರು ಮೊಬೈಲ್ ಮೂಲಕ ಸಂದೇಶ ನೀಡುತ್ತಿದ್ದರೆ, ನಿತೀಶ್ ಕುಮಾರ್ 300 ಕಿಮೀ ದೂರವನ್ನು ಕಾರಿನ ಕ್ರಮಿಸಿ, ಸಮಸ್ತಿಪುರ, ದರ್ಭಂಗಾ ಮತ್ತು ಮಧುಬನಿ ಜಿಲ್ಲೆಗಳಲ್ಲಿ ಪ್ರಚಾರಭಿಯಾನ ನಡೆಸಿದರು.

20 ವರ್ಷ ಕಳೆದರೂ ತಗ್ಗದ ನಿತೀಶ್ ಜನಪ್ರಿಯತೆ

-

Ashok Nayak Ashok Nayak Nov 6, 2025 7:46 AM

ಬಿಹಾರ ಮಹಿಳೆಯರು ಈಗಲೂ ನಿತೀಶ್ ಅಭಿವೃದ್ಧಿ ದೃಷ್ಟಿಕೋನವನ್ನು ಕೊಂಡಾಡುತ್ತಾರೆ. ಸಮಾಜದಲ್ಲಿ ನಮಗೆ ಗುರುತು ನೀಡಿದ್ದೇ ನಿತೀಶ್ ಎನ್ನುವುದು ಬಡ- ಮಧ್ಯಮ ಗ್ರಾಮೀಣ ಮಹಿಳಾ ವರ್ಗದ ಮಾತು. ನಿತೀಶ್‌ ಜೀ ನೇ ಕಾಮ್‌ ತೋ ಕಿಯಾ ಹೇ ಎಂಬ ಮೆಚ್ಚುಗೆಯ ಮಾತು ಬಿಹಾರದಾದ್ಯಂತ ಕೇಳುತ್ತದೆ.

ಬಿಹಾರ ರಾಜಕಾರಣದಲ್ಲಿ ಕಳೆದ ೨೦ ವರ್ಷಗಳಿಂದ ಹೆಜ್ಜೆಗುರುತು ಮೂಡಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪಾಲಿಗೆ ಇದು ಬಹುತೇಕ ಕೊನೆ ಚುನಾವಣೆ ಯಾಗಿದ್ದು, ಪಕ್ಷ ಮತ್ತು ಮೈತ್ರಿಕೂಟದ ಗೆಲುವಿಗಾಗಿ ಪ್ರತಿಷ್ಠೆ ಪಣಕ್ಕಿಟ್ಟು ಹೋರಾಟಕ್ಕಿಳಿ ದಿದ್ದಾರೆ.

ವೃದ್ಧ ನಿತೀಶ್ ಚಾಚಾ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ ಎಂಬ ತೇಜಸ್ವಿ ಯಾದವ್ ಮತ್ತು ಪ್ರಶಾಂತ್ ಕಿಶೋರ್ ವ್ಯಂಗ್ಯೋಕ್ತಿಗಳಿಗೆ ಕಿವಿಗೊಡದೆ ರಾಜ್ಯದ ಉದ್ದಗಲ ಪ್ರವಾಸ-ಪ್ರಚಾರ ಮಾಡುತ್ತಿದ್ದಾರೆ. ಅ.೩೧ರಂದು ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್ ಸಂಚಾರ ಸಾಧ್ಯವಾಗದ ಕಾರಣ ತಾವು ತೆರಳಿ ಭಾಷಣ ಮಾಡಬೇಕಿದ್ದ ಪ್ರದೇಶಗಳ ಜನರಿಗೆ ಬಿಜೆಪಿ, ಆರ್‌ಜೆಡಿ ನಾಯಕರು ಮೊಬೈಲ್ ಮೂಲಕ ಸಂದೇಶ ನೀಡುತ್ತಿದ್ದರೆ, ನಿತೀಶ್ ಕುಮಾರ್ 300 ಕಿಮೀ ದೂರವನ್ನು ಕಾರಿನ ಕ್ರಮಿಸಿ, ಸಮಸ್ತಿಪುರ, ದರ್ಭಂಗಾ ಮತ್ತು ಮಧುಬನಿ ಜಿಲ್ಲೆಗಳಲ್ಲಿ ಪ್ರಚಾರಭಿಯಾನ ನಡೆಸಿದರು. ಅಲ್ಲಲ್ಲಿ ತಮ್ಮ ಕಾರನ್ನು ನಿಲ್ಲಿಸಿ, ಜನರನ್ನು ಭೇಟಿಯಾದರು. ಅವರ ಈ ಸಕ್ರಿಯತೆ ಕಂಡು, ನಿತೀಶ್ ಮಾನಸಿಕವಾಗಿ ಕುಸಿದಿದ್ದಾರೆ ಎಂದವರೂ ತಣ್ಣಗಾದರು.

ಎನ್‌ಡಿಎ ಮೈತ್ರಿಕೂಟಕ್ಕೆ ನಿತೀಶ್ ಕುಮಾರ್‌ರದ್ದೇ ನಾಯಕತ್ವ ಎಂದು ಬಿಜೆಪಿ ನಾಯಕರು ಆರಂಭದಲ್ಲಿ ಘೋಷಿಸಲು ಹಿಂದೇಟು ಹಾಕಿದರೂ, ದಿಲ್ಲಿಯಲ್ಲಿ ಕೇಂದ್ರ ಸರ್ಕಾರ ಸುರಕ್ಷಿತ ವಾಗಿರಬೇಕೆಂದರೆ ನಿತೀಶರ ಮಾನ-ಸಮ್ಮಾನಕ್ಕೆ ಅಡ್ಡಿಯಾಗಬಾರದು ಎಂಬುದನ್ನು ಅರ್ಥಮಾಡಿಕೊಂಡ ನಂತರ, ಎನ್‌ಡಿಎಗೆ ಅವರದ್ದೇ ನಾಯಕತ್ವ ಮತ್ತು ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಕೇಸರಿ ನಾಯಕರು ರಾಗ ಬದಲಿಸಿದರು.

ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಗೃಹಸಚಿವ ಅಮಿತ್ ಶಾ, ಸಿಎಂ ನಿತೀಶ್ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ಆದರೆ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಫಲಿತಾಂಶದ ನಂತರ ತೀರ್ಮಾನ ಮಾಡಲಾಗುತ್ತದೆ ಎಂದು ಹೇಳಿದ್ದು, ಜೆಡಿಯು ವಲಯದಲ್ಲಿ ಕಸಿವಿಸಿ ಉಂಟು ಮಾಡಿತ್ತು. ನಂತರ ಎಚ್ಚೆತ್ತುಕೊಂಡ ಬಿಜೆಪಿ ನಾಯಕರು ನಿತೀಶರಿಗೆ ನಾಯಕತ್ವ ಎಂಬ ಮಂತ್ರ ಜಪಿಸಿದರು.

ಇದನ್ನೂ ಓದಿ: Bihar Election ground report by Raghav Sharma Nidle: ಬಿಹಾರದಲ್ಲಿ ತೇಜಸ್ವಿಗೆ ಹೊರೆಯಾಗಿದೆಯೇ ಕಾಂಗ್ರೆಸ್?

ಲೋಕಸಭೆ ಚುನಾವಣೆಯಲ್ಲಿ ಕೇಸರಿಪಡೆಯ ದಿಗ್ಗಜ ನಾಯಕರ ತಪ್ಪುಗಳಿಂದಲೇ ಉತ್ತರ ಪ್ರದೇಶದಲ್ಲಿ ನಿರೀಕ್ಷಿತ ಸೀಟುಗಳನ್ನು ಕಳೆದುಕೊಂಡು ಹಿನ್ನಡೆ ಅನುಭವಿಸಿದ ಬಿಜೆಪಿ, ಬಿಹಾರದ ನಿತೀಶ್ ಕುಮಾರ್ ಮತ್ತು ಆಂಧ್ರಪ್ರದೇಶದ ಚಂದ್ರ ಬಾಬು ನಾಯ್ಡುರವರನ್ನು ಅವಲಂಬಿಸಿಯೇ ಕೇಂದ್ರದಲ್ಲಿ ಸರ್ಕಾರ ನಡೆಸುತ್ತಿದೆ.

ಹೀಗಿರುವಾಗ ಬಿಹಾರ ಚುನಾವಣೆಯಲ್ಲಿ ಒಂದೊಮ್ಮೆ ಜೆಡಿಯುಗಿಂತ ಬಿಜೆಪಿ ಅತ್ಯುತ್ತಮ ಸ್ಟ್ರೈಕ್‌ರೇಟ್ ಪಡೆದುಕೊಂಡು ಅಧಿಕಾರಕ್ಕೆ ಏರಿದರೂ, ನಿತೀಶರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸುವುದು ಸದ್ಯಕ್ಕಂತೂ ಅಸಾಧ್ಯದ ಮಾತು. ಅವರಾಗಿಯೇ ಸಿಎಂ ಪದವಿ ಬಿಟ್ಟುಕೊಡಬೇಕೆ ಹೊರತೂ ಬಿಜೆಪಿ ಅವರಿಂದ ಸಿಎಂ ಸ್ಥಾನವನ್ನು ಒತ್ತಾಯದಿಂದ ಪಡೆದುಕೊಳ್ಳಲು ಸಾಧ್ಯವಿಲ್ಲ.

Nidle

ಏಕೆಂದರೆ ಬಿಹಾರ ಎನ್ ಡಿಎ ಬಂಡಿಗೆ ನಿತೀಶರ ಸಾಥ್ ಬೇಕೇಬೇಕು ಮತ್ತು ಅವರ ಜತೆಗಿನ ಸಂಬಂಧದಲ್ಲಿ ಸಣ್ಣ ಬಿರುಕು ಕಾಣಿಸಿಕೊಂಡರೂ, ದಿಲ್ಲಿ ಗದ್ದುಗೆಯ ಭದ್ರತೆಗೆ ಅದು ಹಾನಿ ಮಾಡಬಹುದು. ಕಳೆದ ಬಿಹಾರ ಚುನಾವಣೆಯಲ್ಲಿ 110 ಸೀಟುಗಳಿಂದ ಸ್ಪರ್ಧಿಸಿದ್ದ ಬಿಜೆಪಿ ೭೪ನ್ನು ಗೆದ್ದುಕೊಂಡು ಮೈತ್ರಿಕೂಟದ ಹಿರಿಯಣ್ಣ ಎನಿಸಿಕೊಂಡಿತ್ತು. ಆದರೆ, ಈ ಬಾರಿ ೧೦೧ ಸ್ಥಾನಕ್ಕೆ ಇಳಿದಿದೆ. ೨೯ ಸೀಟುಗಳನ್ನು ಚಿರಾಗ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿಗೆ ಹಂಚಿಕೆ ಮಾಡಿರುವುದರಿಂದ ಸಣ್ಣ ಮಟ್ಟಿಗೆ ಸೀಟುಗಳ ತ್ಯಾಗ ಅನಿವಾರ್ಯವಾಗಿದೆ. 2020ರಲ್ಲಿ 115 ಸೀಟುಗಳಲ್ಲಿ ಸ್ಪರ್ಧಿಸಿ ಕೇವಲ ೪೩ರನ್ನಷ್ಟೇ ಗೆದ್ದು ಮುಜುಗರ ಅನುಭವಿಸಿ ದರೂ, ಈ ಬಾರಿ ಜೆಡಿಯು ಕೂಡ 101 ಸೀಟುಗಳಿಂದ ಸ್ಪರ್ಧಿಸುತ್ತಿದೆ.

ಬಿಜೆಪಿಗೆ ಹೋಲಿಸಿದರೆ ಕಳೆದ ಬಾರಿ ನಿತೀಶರ ಸ್ಟ್ರೈಕ್‌ರೇಟ್ ತೀರಾ ಕಡಿಮೆ ಇತ್ತು. ಹಾಗಂತ, ಆ ಕಾರಣ ನೀಡಿ ಅವರ ಸೀಟುಗಳನ್ನು ಕಡಿಮೆ ಮಾಡುವಂತಿರಲಿಲ್ಲ. ಗಾಳಿ ಜತೆ ಗುದ್ದಾಡಲು ಹೋದರೆ ನಷ್ಟ ತನಗೇ ಎನ್ನುವುದು ಬಿಜೆಪಿಯವರಿಗೆ ಗೊತ್ತಿಲ್ಲದೇನಿಲ್ಲ.

2020ರಲ್ಲಿ ಎಲ್‌ಜೆಪಿಯ ಚಿರಾಗ್ ಪಾಸ್ವಾನ್‌ರನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು ನಿತೀಶ್ ವಿರುದ್ಧ ತೆರೆಮರೆಯ ತಂತ್ರಗಾರಿಕೆ ಹೆಣೆದು, ಅವರ ಸೀಟುಗಳನ್ನು ಕಡಿಮೆ ಮಾಡಿದ್ದರು. ಆದರೆ, ಈ ಬಾರಿ ಚಿರಾಗ್ ಪಾಸ್ವಾನ್ ಎನ್‌ಡಿಎ ಮೈತ್ರಿಕೂಟದ ಇರುವುದರಿಂದ ಜೆಡಿಯು-ಎಲ್‌ಜೆಪಿ ಮತಗಳ ವಿಭಜನೆ ಸಾಧ್ಯತೆ ಕಡಿಮೆ.

ಸಿಎಂ ನಿತೀಶ್ ಅವರು ಚಿರಾಗ್ ಪಾಸ್ವಾನ್‌ರನ್ನು ಖುದ್ದಾಗಿ ಭೇಟಿ ಮಾಡಿ, ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡು, ಎರಡೂ ಪಕ್ಷಗಳ ಮತವರ್ಗಕ್ಕೆ ಪಾಸಿಟಿವ್ ಸಂದೇಶ ರವಾನಿಸುವ ಯತ್ನ ಮಾಡಲಾಗಿದೆ. ಬಿಜೆಪಿಗೆ ಕೂಡ ಇದು ಇಂಥದ್ದೊಂದು ಸಂದೇಶ ರವಾನೆಯಾಗುವುದು ಅನಿವಾರ್ಯ. ಏಕೆಂದರೆ, ಬಿಹಾರದಲ್ಲಿ ಜೆಡಿಯು ವಿರುದ್ಧ ಏನೇ (ಕು)ತಂತ್ರಗಾರಿಕೆ ಮಾಡಿದರೂ, ಅದು ಕೇಂದ್ರ ಸರ್ಕಾರದ ಬುಡ ಅಲುಗಾಡಿಸಬಹುದು.

ಆದರೆ, 2020ರಲ್ಲಿ ಅಂಥದ್ದೊಂದು ಸಾಧ್ಯತೆಗಳಿರಲಿಲ್ಲ. 2019ರ ಲೋಕಸಭೆ ಫಲಿತಾಂಶ ಬಿಜೆಪಿಯನ್ನು ರಾಜಕೀಯವಾಗಿ ಮಜಬೂತುಗೊಳಿಸಿತ್ತು. ಆದರೆ, 2024ರ ಫಲಿತಾಂಶ ಬಿಜೆಪಿಯನ್ನು ತಕ್ಕಮಟ್ಟಿಗೆ ತಗ್ಗಿ-ಬಗ್ಗಿ ನಡೆಯುವಂತೆ ಮಾಡಿತು. ಹೀಗಾಗಿ, ನಿತೀಶರ ಮಾನ-ಸಮ್ಮಾನ ಉಳಿಸುವುದು ಬಿಜೆಪಿಗೀಗ ಅತ್ಯಗತ್ಯ.

ಚುನಾವಣಾ ಮೈದಾನದಲ್ಲಿ ಪಿಎಂ ಮೋದಿ-ಸಿಎಂ ನಿತೀಶರ ಬಗ್ಗೆ ಮತದಾರರು; ಮುಖ್ಯವಾಗಿ ಮಹಿಳಾ ಮತದಾರರು, ಅಚ್ಚಾ ಕಾಮ್ ಕಿಯಾ ಹೇ ಎಂದು ಮಾತನಾಡು ತ್ತಿರುವುದು ಉಲ್ಲೇಖಾರ್ಹ ಮತ್ತು ಅದು ಎನ್‌ಡಿಎ ಮೈತ್ರಿಕೂಟದ ಅತಿದೊಡ್ಡ ಪ್ಲಸ್ ಪಾಯಿಂಟ್.

ಚುನಾವಣೆಗೆ ಕೆಲ ದಿನಗಳಿಗೆ ಮುನ್ನ ಮುಖ್ಯಮಂತ್ರಿ ಮಹಿಳಾ ರೋಜ್ ಗಾರ್ ಯೋಜನೆ ಅಡಿಯಲ್ಲಿ ೭೫ ಲಕ್ಷ ಜೀವಿಕಾ ದೀದಿಗಳ (ಸ್ವಸಹಾಯ ಸಂಘದ ಮಹಿಳೆಯರಿಗೆ) ಬ್ಯಾಂಕ್ ಖಾತೆಗೆ ತಲಾ ರು. ೧೦ ಹಣ ಜಮೆಯಾಗಿರುವುದು ಅವರನ್ನು ಸಂತುಷ್ಟಗೊಳಿಸಿರುವುದು ಎದ್ದುಕಾಣುತ್ತಿದೆ.

ವಿಧವಾ ಪಿಂಚಣಿ ರೂ.400ರಿಂದ ರೂ.1100ಕ್ಕೆ ಏರಿಕೆಯಾಗಿದೆ. ಬಿಹಾರದಾದ್ಯಂತ 125 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ. 125ಕ್ಕಿಂತ ಹೆಚ್ಚು ಯೂನಿಟ್ ಬಳಕೆಯಾದರೆ, 125ರ ನಂತರದ ಸಂಖ್ಯೆಗಳಿಗಷ್ಟೇ ಹಣ ಪಾವತಿ ಮಾಡುವ ಕ್ರಮವನ್ನು ಸರ್ಕಾರ ಜಾರಿ ಮಾಡಿದೆ. ದಿಲ್ಲಿಯಲ್ಲಿ ಆಮ್ ಆದ್ಮಿ ಸರ್ಕಾರ 200 ಯೂನಿಟ್ ಉಚಿತ ನೀಡಿತ್ತು. ಆದರೆ, 200 ದಾಟಿ 201 ಯೂನಿಟ್ ಆದರೆ, ಎಲ್ಲಾ 201 ಯೂನಿಟ್‌ನ ವಿದ್ಯುತ್ ಶುಲ್ಕ ಪಾವತಿ ಮಾಡಬೇಕಿತ್ತು.

2005ರಿಂದ ೨೦ ವರ್ಷಗಳ ಕಾಲ ಸಿಎಂ ಆಗಿರುವ ನಿತೀಶ್ ಕುಮಾರ್ ಮೇಲೆ ಭ್ರಷ್ಟಾಚಾರ, ಸ್ವಜನಪಕ್ಷಪಾತದ ಆರೋಪ ಇಲ್ಲದಿರುವುದನ್ನೂ ಜನ ಮಾತನಾಡಿಕೊಳ್ಳುತ್ತಾರೆ. ತನ್ನ ಸ್ವಂತಕ್ಕಾಗಿ ಹಣ ದುರುಪಯೋಗ ಮಾಡಲಿಲ್ಲ. ಬಿಹಾರ ಅಭಿವೃದ್ಧಿಗೆ ಆದ್ಯತೆ ನೀಡಿದರು. ಆರ್‌ಜೆಡಿಯ ದುರಾಡಳಿತ ವಿರೋಧಿಸಿ ಅಧಿಕಾರಕ್ಕೆ ಬಂದು, ನಂತರ ಕೆಲ ಅನಿವಾರ್ಯ ರಾಜಕೀಯ ಸನ್ನಿವೇಶಗಳಲ್ಲಿ ಲಾಲೂ ಪ್ರಸಾದ್ ಜತೆ ಕೈಜೋಡಿಸಬೇಕಾಗಿ ಬಂದಿತ್ತು.

ಹಾಗಂತ, ಆಗಲೂ ನಿತೀಶರು ಪ್ರಾಮಾಣಿಕತೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಿಲ್ಲ ಎಂದು ಬಿಹಾರ ಜನರೇ ಮಾತನಾಡುತ್ತಾರೆ. ಆರ್‌ಜೆಡಿ ಬೆಂಬಲಿಸುವ ಮತದಾರರು ತಾವು ಆರ್‌ಜೆಡಿಗೇ ಮತ ಹಾಕುವುದು ಎಂದು ವಾದಿಸಿ, ನಿತೀಶರನ್ನು ಪಲ್ಟು ರಾಮ, ಕುರ್ಸಿ ಕುಮಾರ್, ದಲ್ ಬದ್ಲು ಎಂದೆ ವ್ಯಂಗ್ಯವಾಡಿದರೂ ರಾಜ್ಯದ ಅಭಿವೃದ್ಧಿ ಮಾಡಿದ್ದಾರೆ, ಏಳಿಗೆಗಾಗಿ ದುಡಿದಿದ್ದಾರೆ ಎಂಬುದನ್ನೂ ಒಪ್ಪಿಕೊಳ್ಳುತ್ತಾರೆ.

ಬಿಹಾರದಲ್ಲಿ ಇನ್ನೂ ಅಭಿವೃದ್ಧಿಗೆ ತೆರೆದುಕೊಳ್ಳದ ನಿಕೃಷ್ಟ ಪರಿಸ್ಥಿತಿಯಲ್ಲಿರುವ ಅನೇಕ ಗ್ರಾಮೀಣ ಪ್ರದೇಶಗಳಿದ್ದರೂ, ರಾಜ್ಯದಲ್ಲಿ ಮೂಲಸೌಕರ್ಯ, ರಸ್ತೆ, ಶಿಕ್ಷಣ ಕ್ಷೇತ್ರಗಳಲ್ಲಿ ನಿಧಾನವಾಗಿ ಸುಧಾರಣೆ ಯಾಗುತ್ತಿರುವುದು ನಗರ ಪ್ರದೇಶಗಳಲ್ಲಿ ಕಾಣುತ್ತದೆ.

ನಳಂದಾ ಜಿಯಲ್ಲಿ ಸುಮಾರು 455 ಎಕರೆ ಭೂಪ್ರದೇಶದಲ್ಲಿ ರಾಜ್ಯ-ಕೇಂದ್ರ ಸರ್ಕಾರ ಸೇರಿ ಆಧುನಿಕ ನಳಂದಾ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯ ಸ್ಥಾಪನೆ ಮಾಡಿದ್ದು, ನಳಂದಾ ಮತ್ತು ರಾಜಗೀರ್ ಪ್ರದೇಶಗಳು ಈಗ ವಿಶ್ವದ ಗಮನಸೆಳೆಯುತ್ತಿವೆ.

ಕೊರೊನಾ ಮಹಾಮಾರಿ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಪ್ರತಿ ಬಡ ವ್ಯಕ್ತಿಗೆ ೫ ಕೆಜಿ ದವಸ-ಧಾನ್ಯ ನೀಡುತ್ತಿರುವುದನ್ನು ಗ್ರಾಮೀಣ ಪ್ರದೇಶಗಳ ಆರ್ಥಿಕವಾಗಿ ಹಿಂದುಳಿದ ಜನರು ಚರ್ಚಿಸುತ್ತಾರೆ ಮತ್ತು ಮೋದಿ ಜೀ ಗರೀಬ್ ಕೇ ಬಾರೆ ಚಿಂತಾ ಕರ್ತೆ ಹೇ ಎಂದು ಹೇಳುತ್ತಾರೆ. ಹಾಗಂತ, ಬೆಲೆ ಏರಿಕೆ ತಡೆಯದ ಸರ್ಕಾರ, ಬಡವರನ್ನು ಕಿತ್ತು ತಿನ್ನುತ್ತಿದೆ.

ಶಿಕ್ಷಣ ಪಡೆದ ಮಕ್ಕಳು ಉದ್ಯೋಗವಿಲ್ಲದೆ ಮನೆಯಲ್ಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುವ ಮತವರ್ಗವನ್ನೂ ಕಾಣಬಹುದು. ಇಂಥವರು, ಬದಲಾವಣೆಗಾಗಿ ತೇಜಸ್ವಿ ಯಾದವ್‌ರತ್ತ ಮುಖ ಮಾಡುತ್ತಿದ್ದಾರೆ. ಬದಲಾವಣೆ ಬೇಕು ಎಂದು ಬಯಸಿದರೂ, ಲಾಲೂ ಪರಿವಾರದ ಆರ್ ಜೆಡಿಗೆ ವೋಟ್ ಹಾಕಲಾರೆ ಎನ್ನುವ ಮಂದಿ, ಜನ ಸುರಾಜ್ ಪಾರ್ಟಿಯ ಪ್ರಶಾಂತ್ ಕಿಶೋರ್‌ರನ್ನು ಭರವಸೆಯ ಕಂಗಳಿಂದ ನೋಡುತ್ತಿದ್ದಾರೆ.

ಕರ್ನಾಟಕದ ಬಳ್ಳಾರಿ, ಕುಡಚಿ ಭಾಗಗಳಲ್ಲಿ ಎನ್‌ಟಿಪಿಸಿ, ಕೆಪಿಸಿಎಲ್, ಜಿಂದಾಲ್ ಸ್ಟೀಲ್ ಸಂಸ್ಥೆಗಳಲ್ಲಿ ಮೆಕ್ಯಾನಿಕಲ್ ಸೂಪರ್ ವೈಸರ್ ಆಗಿ ಹಲವು ವರ್ಷ ಕೆಲಸ ಮಾಡಿದ್ದ ಗೋಪಾಲ್ ಗಂಜ್ ಜಿಯ ದಿವಾಕರ್ ಮಿಶ್ರಾ ಪ್ರಕಾರ, ಬಿಹಾರ ಕರ್ನಾಟಕಕ್ಕಿಂತ ಸುಮಾರು ೬೦ ವರ್ಷ ಹಿಂದೆ ಇದೆಯಂತೆ. ಲಾಲೂ ಅವಧಿಯ ಜಂಗಲ್ ರಾಜ್‌ನಿಂದ ಹೊರಬಂದು ನಿತೀಶರನ್ನು ಗೆಲ್ಲಿಸಿದ್ದರಿಂದ ನಾವೂ ಸಣ್ಣ ಮಟ್ಟಿಗೆ ಅಭಿವೃದ್ಧಿಯ ಮುಖ ನೋಡುವಂತಾ ಯಿತು.

2014ರಿಂದ ರಾಜ್ಯಕ್ಕೆ ಕೇಂದ್ರ ಸರ್ಕಾರವೂ ಸಾಕಷ್ಟು ಅನುದಾನ ನೀಡುತ್ತಿರುವುದನ್ನು ಅಲ್ಲಗಳೆಯಲು ಸಾಧ್ಯವೇ ಎಂದವರು ಪ್ರಶ್ನಿಸುತ್ತಾರೆ. ಬಿಹಾರದಲ್ಲಿ ಹಿಂದು-ಮುಸ್ಲಿಂ ರಾಜಕಾರಣ ನಡೆಯುವುದಿಲ್ಲ, ಅದನ್ನು ನೀವು ಪಕ್ಕದ ಉತ್ತರಪ್ರದೇಶದಲ್ಲಿ ನೋಡಬಹುದು. ನಿತೀಶ್ ಸರ್ಕಾರ ಕೆಲಸ ಮಾಡಿದ್ದನ್ನು ಒಪ್ಪಿಕೊಳ್ಳುತ್ತೇನೆ ಮತ್ತು ನಿತೀಶ್ ಸರ್ಕಾರದ ಜತೆಗಿದ್ದೇನೆ.

ಇಲ್ಲಿನ ರಸ್ತೆಗಳೇ ಕಲ್ಯಾಣದ ಕಥೆ ಹೇಳುತ್ತವೆ. ಆದರೂ ಹೊಸ ಬದಲಾವಣೆ ಬಿಹಾರಕ್ಕೆ ಮತ್ತು ಸರ್ಕಾರಗಳು ಬದಲಾಗುತ್ತಿರಬೇಕು ಎನ್ನುವುದು ಬೋಧಗಯಾದ ಮತದಾರ ಮಹಮ್ಮದ್ ಇಫ್ತಿಕಾರ್ ಖಾನ್ ಅಭಿಪ್ರಾಯ.

ಫಾಲ್ತು ಬಾತ್ ಚೋಡಿಯೇ..!

ನಿತೀಶ್ ಕುಮಾರ್ ತಮ್ಮ ಪುತ್ರ ನಿಶಾಂತ್ ಕುಮಾರ್‌ರನ್ನು ತಮ್ಮ ಪಕ್ಷ ರಾಜಕಾರಣದಿಂದ ಸ್ವಲ್ಪ ದೂರವೇ ಇಟ್ಟಿದ್ದಾರೆ. ಆದರೂ ಪಕ್ಷದ ಬೆಂಬಲಿಗರು ನಿಶಾಂತ್ ಭವಿಷ್ಯದ ನಾಯಕ ಎಂದೇ ಮಾತನಾಡಿಕೊಳ್ಳುತ್ತಾರೆ ಮತ್ತು ಈ ಚುನಾವಣೆಯಲ್ಲಿ ಅವರು ಸ್ಪರ್ಧೆ ಮಾಡು ತ್ತಾರೆ ಎಂಬ ನಿರೀಕ್ಷೆಯಲ್ಲಿ ಕೂಡ ಇದ್ದರು. ಆದರೆ ನಿತೀಶ್ ಆಸಕ್ತಿ ತೋರಲಿಲ್ಲ. ಗಯಾ ಜಿಲ್ಲೆಯ ವೀರ್‌ಗಂಜ್‌ನಲ್ಲಿ ಚುನಾವಣೆ ಕೆಲಸದಲ್ಲಿ ತೊಡಗಿದ್ದ ಸರ್ಕಾರಿ ಅಧಿಕಾರಿ ಒಬ್ಬರು ಮಾತಾಡುತ್ತಾ, ಕೆಲ ತಿಂಗಳುಗಳ ಹಿಂದೆ ನಳಂದಾ ಜಿಲ್ಲೆಯ ನಿತೀಶ್ ಬೆಂಬಲಿಗರು ಬಂದು ನಿಶಾಂತ್ ಇದೇ ಜಿಯಿಂದ ಚುನಾವಣೆ ನಿಲ್ಲಬೇಕು. ನೀವು ಇದಕ್ಕೆ ಒಪ್ಪಬೇಕು ಎಂದು ಒತ್ತಾಯ ಮಾಡಿದ್ದರು. ಅದಕ್ಕೆ ಖಡಕ್ ಉತ್ತರ ಕೊಟ್ಟಿದ್ದ ನಿತೀಶರು ಇಂಥಾ ಫಾಲ್ತು ವಿಷಯ ಇಟ್ಟುಕೊಂಡು ನನ್ನ ಬಳಿ ಬರಬೇಡಿ ಎಂದು ಅ ಬಾಯಿ ಮುಚ್ಚಿಸಿದರು ಎಂದು ಮಾಹಿತಿ ಹಂಚಿಕೊಂಡರು. ನಿತೀಶ್ ಸ್ವಂತಕ್ಕೆಂದು ಏನೂ ಮಾಡಿಕೊಂಡವರಲ್ಲ. ಅವರನ್ನು ಜನ ಇಷ್ಟಪಡೋದು ಇದಕ್ಕೇ. ರಾಜ್ಯ ರಾಜಕಾರಣದಿಂದ ಅವರನ್ನು ದೂರ ಇಡಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಆ ಸರ್ಕಾರಿ ಅಧಿಕಾರಿ.