ಪರವೂರ್: ಸೋಲೇ ಕಾಣದ ಸತೀಶನ್
ಎರ್ನಾಕುಳಂ ಜಿಲ್ಲೆಯ 14 ವಿಧಾನಸಭಾ ಕ್ಷೇತ್ರಗಳ ಪೈಕಿ 2021ರ ಕೇರಳ ಚುನಾವಣೆಯಲ್ಲಿ ಯುಡಿಎಫ್ 8 ಕ್ಷೇತ್ರಗಳನ್ನು ಪಡೆದಿದ್ದರೆ, ಎಲ್‌ಡಿಎಫ್ 6 ಕ್ಷೇತ್ರಗಳನ್ನು ಗೆಲ್ಲುವಲ್ಲಿ ಯಶಸ್ವಿ ಯಾಗಿತ್ತು. ಈ ಬಾರಿ ಕೂಡಾ ಎರಡೂ ಒಕ್ಕೂಟಗಳೂ ಬಲಿಷ್ಠ ಅಭ್ಯರ್ಥಿಗಳನ್ನು ಜಿಲ್ಲೆಯಲ್ಲಿ ಕಣಕ್ಕಿಳಿಸಿವೆ.
-
ನರೇಂದ್ರ ಪಾರೆಕಟ್
ಕೇರಳದ ಮಧ್ಯ ತಿರುವಾಂಕೂರು ಪ್ರದೇಶ ಎಂಬ ಹೆಗ್ಗಳಿಕೆಯ ಎರ್ನಾಕುಳಂ ಜಿಲ್ಲೆ ವಾಣಿಜ್ಯ ನಗರಿ ಎಂದೂ ತಿಳಿಯಲ್ಪಟ್ಟಿದ್ದು, ಅಲ್ಲಿರುವವರು ಪ್ರಬುದ್ಧ ಮತದಾರರು ಎಂಬ ಭಾವನೆ ಕೇರಳದಲ್ಲಿದೆ. ಆ ಜಿಲ್ಲೆಯ ಪರವೂರ್ ವಿಧಾನಸಭಾ ಸದಸ್ಯ ರಾಗಿರುವವರು ಕೇರಳದ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್.
ಕೇರಳದ ಪ್ರಮುಖ ಸಾಂಸ್ಕೃತಿಕ ನಗರ ಮತ್ತು ಪ್ರವಾಸೋದ್ಯಮ ತಾಣ ಎರ್ನಾಕುಳಂ-ಕೊಚ್ಚಿನ್ ಎಂಬ ಅವಳಿ ನಗರ. ಇದು ಹಿಂದಿನ ತಿರುವಾಂಕೂರು ಪ್ರದೇಶದ ಮಧ್ಯ ಭಾಗ.
ನಮ್ಮ ರಾಜ್ಯದ ರಾಜಧಾನಿ ಬೆಂಗಳೂರಿನಂತೆಯೇ ಅಲ್ಲೂ ಜನಜೀವನ. ಮಲಯಾಳಂ ಭಾಷೆಯನ್ನು ಹೊರತುಪಡಿಸಿ ತಮಿಳು, ಬಂಗಾಳಿ, ಕೊಂಕಣಿ ಮತ್ತು ಕನ್ನಡ ಭಾಷೆಯನ್ನು ಮಾತನಾಡುವ ಸಾವಿರಾರು ಮಂದಿ ಎರ್ನಾಕುಳಂ-ಕೊಚ್ಚಿನ್ ಪ್ರದೇಶದಲ್ಲಿದ್ದಾರೆ. ಆ ಕಾರಣಕ್ಕಾಗಿಯೇ ನಮ್ಮ ಕನ್ನಡದ ಸಂಸ್ಕೃತಿಯನ್ನು ಸದಾ ಪ್ರತಿಬಿಂಬಿಸುತ್ತಾ ಸಕ್ರಿಯ ವಾಗಿರುವ "ಕನ್ನಡ ಸಂಘ-ಕೊಚ್ಚಿನ್" ಕೂಡ ದಕ್ಷಿಣ ಕೇರಳದ ಸಾಂಸ್ಕೃತಿಕ ಭೂಪಟದಲ್ಲಿ ತನ್ನ ಭದ್ರ ನೆಲೆ ಕಂಡುಕೊಂಡಿದೆ.
ಕೇರಳ ಹೈಕೋರ್ಟ್, ಕೊಚ್ಚಿನ್ ಕೋಟೆ, ಬೋಲ್ಘಾಟಿ ಪ್ಯಾಲೆಸ್ ಮತ್ತಿತ್ತರ ಪ್ರವಾಸಿತಾಣ ಗಳು ಮತ್ತು ಮಲಯಾಳಂ ಚಿತ್ರೋದ್ಯಮದ ಕೇಂದ್ರವೂ ಇದಾಗಿರುವುದರಿಂದ ಎರ್ನಾಕುಳಂ ಜಿಲ್ಲೆ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತದೆ. ಎರ್ನಾಕುಳಂ ಜಿಲ್ಲೆಯಲ್ಲಿರುವ ಒಟ್ಟು 14 ವಿಧಾನಸಭಾ ಕ್ಷೇತ್ರಗಳೆಂದರೆ ಆಲುವಾ, ಅಂಗಮಾಲಿ, ಎರ್ನಾಕುಳಂ, ಕಳಮಶ್ಶೇರಿ, ಕೊಚ್ಚಿನ್, ಕೋದಮಂಗಲಂ ಕುನ್ನಾತುನ್ನಾಡ್, ಮೂವಾಟು ಪುಝ, ಪರವೂರ್, ಪೆರುಂಬಾವೂರ್, ಪಿರವಂ, ತೃಕ್ಕಾಕ್ಕರ, ತೃಪ್ಪುಣ್ಣಿತ್ತುರ ಮತ್ತು ವೈಪಿನ್.
ಈ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಕೇರಳದ ಎಲ್‌ಡಿಎಫ್ ಮತ್ತು ಯುಡಿಎಫ್ ಒಕ್ಕೂಟಗಳದ್ದೇ ಪಾರಮ್ಯ. ಎರ್ನಾಕುಳಂ ಜಿಲ್ಲೆಯಲ್ಲಿ ಸರಿಸುಮಾರು 25 ಲಕ್ಷ ಮಂದಿ ಮತದಾರರಿದ್ದಾರೆ. ಇಲ್ಲಿ ವಾಸಿಸುವವರ ಪೈಕಿ ಬಹು ಸಂಖ್ಯಾತರು ಹಿಂದುಗಳಾಗಿದ್ದರೂ, ಕ್ರಿಶ್ಚನ್ ಮತದಾರರ ಸಂಖ್ಯೆ ಕಡಿಮೆಯೇನಲ್ಲ. ಆ ಕಾರಣಕ್ಕಾಗಿ ರಾಜಕೀಯ ಪಕ್ಷಗಳು ಹಿಂದೂ, ಕ್ರಿಶ್ಚನ್ ಅಭ್ಯರ್ಥಿಗಳಿಗೇ ಹೆಚ್ಚಿನ ಸಂಖ್ಯೆಯಲ್ಲಿ ಮಣೆ ಹಾಕುತ್ತವೆ.
ಇದನ್ನೂ ಓದಿ: BJP Kerala Campaign: ತ್ರಿಶೂರ್, ಪಾಲಕ್ಕಾಡಿನಲ್ಲಿ ಬಿಜೆಪಿಗೆ ಗೆಲುವಿನ ನಿರೀಕ್ಷೆ
ವಲಸೆ ಮತದಾರರ ಪ್ರಮಾಣವೇ ಹೆಚ್ಚು: ಕೇರಳದ ಯಾವುದೇ ಜಿಲ್ಲೆಗೆ ಹೋಲಿಸಿದರೂ ಎರ್ನಾಕುಳಂ-ಕೊಚ್ಚಿನ್ ನಗರದಲ್ಲಿ ಇರುವಷ್ಟು ವಲಸೆ ಮತದಾರರ ಸಂಖ್ಯೆ ಬೇರೆ ಎಲ್ಲೂ ಇಲ್ಲ. ಹಾಗಾಗಿ ಒಂದು ನಿಗಧಿತ ಸಿದ್ಧಾಂತಕ್ಕೆ ಮತ ಹಾಕುವ ಯೋಚನೆ ಮಾಡುವವರ ಪ್ರಮಾಣ ಎರ್ನಾಕುಳಂ ಜಿಲ್ಲೆಯಲ್ಲಿ ತೀರಾ ಕಡಿಮೆ.
ಎರ್ನಾಕುಳಂ ಜಿಲ್ಲೆಯ 14 ವಿಧಾನಸಭಾ ಕ್ಷೇತ್ರಗಳ ಪೈಕಿ 2021ರ ಕೇರಳ ಚುನಾವಣೆಯಲ್ಲಿ ಯುಡಿಎಫ್ 8 ಕ್ಷೇತ್ರಗಳನ್ನು ಪಡೆದಿದ್ದರೆ, ಎಲ್‌ಡಿಎಫ್ 6 ಕ್ಷೇತ್ರಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈ ಬಾರಿ ಕೂಡಾ ಎರಡೂ ಒಕ್ಕೂಟಗಳೂ ಬಲಿಷ್ಠ ಅಭ್ಯರ್ಥಿಗಳನ್ನು ಜಿಲ್ಲೆಯಲ್ಲಿ ಕಣಕ್ಕಿಳಿಸಿವೆ. ಜಿಲ್ಲೆಯ ಪೆರುಂಬಾವೂರ್, ಅಂಗಮಾಲಿ, ಆಲುವ, ಪರವೂರ್, ತೃಪ್ಪುಣ್ಣಿತ್ತುರ, ಎರ್ನಾಕುಳಂ, ತೃಕ್ಕಾಕ್ಕರ ಮುಂತಾದೆಡೆ ಕಾಂಗ್ರೆಸ್ ಒಕ್ಕೂಟ ಬಲಿಷ್ಠ ವಾಗಿದ್ದರೆ, ಉಳಿದ ಕಡೆ ಎಡರಂಗ ಒಕ್ಕೂಟ ಬಲಿಷ್ಠವಾಗಿದೆ.
ಪರವೂರ್ ವಿರೋಧ ಪಕ್ಷದ ನಾಯಕನ ಕ್ಷೇತ್ರ: ಎರ್ನಾಕುಳಂ ಜಿಲ್ಲೆಯ ಪರವೂರ್ ವಿಧಾನಸಭಾ ಕ್ಷೇತ್ರವು ಕೇರಳದ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಪ್ರಸ್ತುತ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಅವರ ಕ್ಷೇತ್ರವಾಗಿದೆ. ಅವರು 2001, 2006, 2011, 2016 ಮತ್ತು 2021 ಹೀಗೆ ಐದು ಸಲ ಪರವೂರ್ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಬಂದವರು. 2011ರಲ್ಲಿ ಅವರ ಗೆಲುವಿನ ಅಂತರ 11 ಸಾವಿರ ಇದ್ದರೆ, 2016ರಲ್ಲಿ ಅವರ ಅಂತರ 20 ಸಾವಿರಕ್ಕೆ ಏರಿತು. 2021ರಲ್ಲಿ 22,00 ಸಾವಿರ ಅಂತರದಿಂದ ಅವರು ತಮ್ಮ ಪ್ರತಿಸ್ಪರ್ಧಿ ಯನ್ನು ಸೋಲಿಸಿದ್ದಾರೆ. ಈ ಸಲ ಸತೀಶನ್ ಅವರ ವಿರುದ್ಧ ಎಡರಂಗದ ಅಭ್ಯರ್ಥಿಯಾಗಿ ಇ.ಟಿ. ಟೈಸನ್ ಸ್ಪರ್ಧೆಗಿಳಿದಿದ್ದು, ಬಿಜೆಪಿ ಈ ವಿಧಾನಸಭಾ ಕ್ಷೇತ್ರದಲ್ಲಿ ವತ್ಸಲ ಪ್ರಸನ್ನ ಕುಮಾರ್ ಎಂಬವರನ್ನು ಕಣಕ್ಕಿಳಿಸಿದೆ.
ಕಳೆದ ಎರಡು ಅವಧಿಯಲ್ಲಿ ನಿರಂತರವಾಗಿ ಎಡರಂಗ ಸರಕಾರದ ಆಡಳಿತವಿದ್ದು, ಈ ಸಲ ಕೇರಳದ ಮತದಾರರು ಆಡಳಿತ ವಿರೋಧಿ ನಿಲುವನ್ನು ತಳೆದಿದ್ದು ಕಾಂಗ್ರೆಸ್ ನೇತೃತ್ವದ ಐಕ್ಯರಂದ ಸರಕಾರವನ್ನು ಅಧಿಕಾರಕ್ಕೆ ತರುವುದು ನಿಶ್ಚಿತ ಎಂಬ ಆತ್ಮವಿಶ್ವಾಸ ವಿರೋಧ ಪಕ್ಷದ ನಾಯಕ ವಿ.ಡಿ ಸತೀಶನ್ ಅವರಲ್ಲಿದೆ. ಹಾಗಾಗಿ ತಮ್ಮ ಪಕ್ಷದ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದರೆ ತಾನು ೫ ವರ್ಷಗಳ ಕಾಲ ವಿರೋಧಪಕ್ಷದ ನಾಯಕನಾಗಿ ಸಮರ್ಥ ವಾಗಿ ಕಾರ್ಯ ನಿರ್ವಹಿಸಿರುವ ಕಾರಣ ಮುಖ್ಯಮಂತ್ರಿ ಹುದ್ದೆ ತಮಗೆ ಒಲಿಯಬಹುದೆಂಬ ಮಹತ್ವಾಕಾಂಕ್ಷೆಯನ್ನೂ ಅವರು ಹೊಂದಿದ್ದಾರೆ.
ಕೊಚ್ಚಿನ್: ಪ್ರವಾಸೋದ್ಯಮ ಆದಾಯ ತಾಣ
ಕೇರಳದ ಕೊಚ್ಚಿನ್ ಒಂದು ಉತ್ತಮ ಪ್ರವಾಸೋದ್ಯಮ ತಾಣ. ಹಲವಾರು ಪ್ರೇಕ್ಷಣೀಯ ತಾಣಗಳು ಅಲ್ಲಿವೆ. ಹಾಗಾಗಿ ಕೊಚ್ಚಿನ್ ಪ್ರವಾಸೋದ್ಯಮವು ಅಲ್ಲಿನ ಸ್ಥಳೀಯರಿಗೆ ಉತ್ತಮ ಉದ್ಯೋಗಾವಕಾಶಗಳನ್ನು ನೀಡಿದೆ.