ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪದವೀಧರರ ಚುನಾವಣೆಯಲ್ಲೂ ಹಣದ ಪ್ರಭಾವ?

ಶಿಕ್ಷಕರು, ಸರ್ಕಾರಿ ನೌಕರರು, ಖಾಸಗಿ ಶಾಲಾ-ಕಾಲೇಜುಗಳ ಸಿಬ್ಬಂದಿ ಹಾಗೂ ಹೊಸದಾಗಿ ಪದವೀಧರರ ಮತದಾರರ ಪಟ್ಟಿಗೆ ಸೇರ್ಪಡೆಯಾದ ಯುವಕರು ಸೇರಿದಂತೆ ವಿವಿಧ ವರ್ಗಗಳ ಮತದಾರರು ಅಲ್ಲಿ ಸೇರಿದ್ದ ದೃಶ್ಯಗಳು ಚರ್ಚೆಗೆ ಕಾರಣವಾಗಿವೆ. ಈ ಬೆಳವಣಿಗೆಯು ಮತದಾನದ ಪಾವಿತ್ರ್ಯ ಮತ್ತು ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಯ ಕುರಿತು ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಗುಣ, ಅರ್ಹತೆಗಿಂತ ಆಮಿಷಕ್ಕೆ ಮಣೆ ಹಾಕಿದರೇ ಮತದಾರರು?

-

Profile
Ashok Nayak Oct 24, 2026 11:14 AM

ಮುನಿರಾಜು ಎಂ. ಅರಿಕೆರೆ

ಚಿಕ್ಕಬಳ್ಳಾಪುರ : ಪ್ರಜ್ಞಾವಂತ ಮತದಾರರು, ಶಿಕ್ಷಕರು ಹಾಗೂ ಸರ್ಕಾರಿ ನೌಕರರು ಪ್ರತಿನಿಧಿಸುವ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿಯೂ ಹಣದ ಆಮಿಷದ ಕುರಿತ ಚರ್ಚೆ ಮುನ್ನೆಲೆಗೆ ಬಂದಿರುವುದು ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಆತ್ಮಾವಲೋಕನಕ್ಕೆ ಎಡೆ ಮಾಡಿಕೊಟ್ಟಿದೆ. 

ಚಿಂತಕರ ಚಾವಡಿ ಎಂದೇ ಕರೆಯಲ್ಪಡುವ ಮೇಲ್ಮನೆ ಪ್ರತಿನಿಧಿಯಾಗುವವರ ಚುನಾವಣೆಯಲ್ಲಿ ಅಭ್ಯರ್ಥಿಯ ಗುಣ, ಅರ್ಹತೆ, ಪ್ರಾಮಾಣಿಕತೆ ಹಾಗೂ ಜನಪರ ಕಾಳಜಿಯನ್ನು ಪರಿಗಣಿಸಿ ಮತ ಚಲಾಯಿಸಬೇಕಾದ ಜಾಗದಲ್ಲಿ ಹಣದ ಪ್ರಭಾವದ ಆರೋಪಗಳು ಕೇಳಿ ಬಂದಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ.

ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಲ್ಲಿ ಸುರೇಶ್‌ಗೌಡ ಹೋಟೆಲ್‌ನ ಕೆಳಮಹಡಿಯಲ್ಲಿ ಮತದಾರರಿಗೆ ಹಣ ವಿತರಣೆ ನಡೆದಿದೆ ಎನ್ನಲಾದ ಘಟನೆಗೆ ಸಂಬಂಧಿಸಿದ ದೃಶ್ಯಗಳು ಮಾಧ್ಯಮಗಳ ಗಮನ ಸೆಳೆದಿವೆ. 

ಇದನ್ನೂ ಓದಿ: Chikkabalalpur News: ಭೂಮಿ ವಿವಾದದಲ್ಲಿ ಹಲ್ಲೆ, ಗುಡಿಸಲು ತೆರವು ಆರೋಪ: ಸಂತ್ರಸ್ತರಿಗೆ ರಕ್ಷಣೆ ನೀಡುವಂತೆ ಅಂಬೇಡ್ಕರ್ ಸೇನೆ ಆಗ್ರಹ

ಶಿಕ್ಷಕರು, ಸರ್ಕಾರಿ ನೌಕರರು, ಖಾಸಗಿ ಶಾಲಾ-ಕಾಲೇಜುಗಳ ಸಿಬ್ಬಂದಿ ಹಾಗೂ ಹೊಸದಾಗಿ ಪದವೀಧರರ ಮತದಾರರ ಪಟ್ಟಿಗೆ ಸೇರ್ಪಡೆಯಾದ ಯುವಕರು ಸೇರಿದಂತೆ ವಿವಿಧ ವರ್ಗಗಳ ಮತದಾರರು ಅಲ್ಲಿ ಸೇರಿದ್ದ ದೃಶ್ಯಗಳು ಚರ್ಚೆಗೆ ಕಾರಣವಾಗಿವೆ. ಈ ಬೆಳವಣಿಗೆಯು ಮತದಾನದ ಪಾವಿತ್ರ್ಯ ಮತ್ತು ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಯ ಕುರಿತು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಅಭ್ಯರ್ಥಿಯ ಅರ್ಹತೆ, ಪಕ್ಷದ ಸಿದ್ಧಾಂತ, ಸರ್ಕಾರದ ಸಾಧನೆಗಳು ಹಾಗೂ ಜನಪರ ಕಾರ್ಯಕ್ರಮಗಳನ್ನು ಮುಂದಿಟ್ಟು ಮನವರಿಕೆ ಮಾಡುವುದು ರಾಜಕೀಯ ಪಕ್ಷಗಳ ಜವಾಬ್ದಾರಿ. ಆದರೆ, ಮತದಾರರಿಗೆ ಹಣ ಅಥವಾ ಇತರ ಉಡುಗೊರೆಗಳ ಆಮಿಷವೊಡ್ಡುವ ಪ್ರವೃತ್ತಿ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದೆ. ಇಂತಹ ಘಟನೆಗಳು ನಡೆದಿರುವುದು ದೃಢಪಟ್ಟಲ್ಲಿ, ಚುನಾವಣಾ ನಿಯಮಗಳ ಪ್ರಕಾರ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.

1411176 ಒಕ

ಹಣದ ಆಮಿಷದ ಚರ್ಚೆ

ಹಣದ ಮೂಲಕ ಮತದಾರರನ್ನು ಸೆಳೆಯುವ ಪ್ರವೃತ್ತಿಯ ಕುರಿತು ವಿವಿಧ ಚುನಾವಣೆಗಳ ಸಂದರ್ಭದಲ್ಲಿ ಆರೋಪಗಳು ಕೇಳಿಬರುತ್ತಲೇ ಇವೆ. 

ಈ ಬಾರಿಯ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿಯೂ ಮತದಾರರಿಗೆ ಹಣದ ಜತೆಗೆ ಭರ್ಜರಿ ಊಟದ ವ್ಯವಸ್ಥೆ ಮಾಡಲಾಗಿರುವ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಜೋರಾಗಿ ಕೇಳಿಬಂದಿವೆ. 

ಚಿಕ್ಕಬಳ್ಳಾಪುರದಲ್ಲಿ  ಪೆಂಡಾಲ್ ಹಾಕಿ ಮತದಾರರ ಭಾಗದ ಸಂಖ್ಯೆಯನ್ನು ಬರೆದುಕೊಡು ವಾಗಲೇ  ಟೋಕನ್‌ಗಳನ್ನು ವಿತರಿಸುವ ಮೂಲಕ ಮತದಾರರನ್ನು ಗುಪ್ತ ಸ್ಥಳದಲ್ಲಿ ಸೇರಿಸಿ ಹಣ ವಿತರಿಸುವ  ದೃಶ್ಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡುವ ಅಗತ್ಯ ಮತ್ತಷ್ಟು ಮಹತ್ವ ಪಡೆದಿದೆ.

ಮತದಾನದಲ್ಲಿ ಉತ್ಸಾಹ

ಇನ್ನೊಂದೆಡೆ, ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಪದವೀಧರರು ಮತದಾರರ ಪಟ್ಟಿಗೆ ಸೇರ್ಪಡೆ ಯಾಗಿದ್ದು, ಬೆಳಗ್ಗೆಯಿಂದ ಮತದಾನದ ಅಂತಿಮ ಹಂತದವರೆಗೂ ಉತ್ಸಾಹದಿಂದ ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದ್ದು ಗಮನಾರ್ಹವಾಗಿತ್ತು. ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಚಿಕ್ಕಬಳ್ಳಾಪುರದ ಮತಗಟ್ಟೆಗಳಿಗೆ ಖುದ್ದಾಗಿ ಭೇಟಿ ನೀಡದಿದ್ದರೂ, ಪಕ್ಷಗಳ ಜಿಲ್ಲಾಧ್ಯಕ್ಷರು, ವಿವಿಧ ಮಂಡಳಿಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಜಿಲ್ಲೆಯಲ್ಲಿ ಮತದಾನ ಶಾಂತಿಯುತವಾಗಿ ನಡೆಯಲು ಪೊಲೀಸ್ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿತ್ತು. ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ್‌ಗಳು ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಿತು.

ಮೌಲ್ಯಾಧಾರಿತ ಮತದಾನ ಅಗತ್ಯ

ವಿದ್ಯಾವಂತರು ಹಾಗೂ ಪ್ರಜ್ಞಾವಂತರು ಪ್ರತಿನಿಧಿಸುವ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಪ್ರತಿನಿಧಿಯನ್ನು ಆಯ್ಕೆ ಮಾಡುವ ಚುನಾವಣೆಯಲ್ಲಿ ಅಭ್ಯರ್ಥಿಯ ಜ್ಞಾನ, ಅನುಭವ, ಪ್ರಾಮಾಣಿಕತೆ ಮತ್ತು ಜನಸೇವೆಯ ಬದ್ಧತೆಗೆ ಆದ್ಯತೆ ದೊರೆಯಬೇಕು. ಹಣ ಅಥವಾ ಉಡುಗೊರೆ ಗಳ ಆಮಿಷಕ್ಕೆ ಒಳಗಾಗದೆ, ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ಮತದಾರನ ಮೇಲಿದೆ.

ಎನ್.ಡಿ.ಎ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಕೂಡ ಹಣ ಉಡುಗೊರೆ ಊಟ ಹೊಂಂಚುವಲ್ಲಿ  ಮುಂಚೂಣಿಯಲ್ಲಿ ನಿಂತಿರುವುದು ಕೂಡ ಪ್ರಜ್ಞಾವಂತ ನಾಗರೀಕರನ್ನು ಚಿಂತೆಗೀಡು ಮಾಡಿವೆ ಎಂದರೆ ತಪ್ಪಾಗಲಾರದು.

ಕಾರಣ ಮತದಾನವು ಕೇವಲ ಹಕ್ಕು ಮಾತ್ರವಲ್ಲ, ಸಮಾಜದ ಭವಿಷ್ಯವನ್ನು ನಿರ್ಧರಿಸುವ ಮಹತ್ವದ ಹೊಣೆಗಾರಿಕೆಯೂ ಹೌದು. ಚುನಾವಣೆಯಲ್ಲಿ ಹಣದ ಪ್ರಭಾವದ ಕುರಿತ ಚರ್ಚೆಗಳು ಮರುಕಳಿಸದಂತೆ ರಾಜಕೀಯ ಪಕ್ಷಗಳು, ಚುನಾವಣಾ ಅಧಿಕಾರಿಗಳು ಹಾಗೂ ಮತದಾರರು ಒಟ್ಟಾಗಿ ಜಾಗೃತಿ ವಹಿಸುವುದು ಅಗತ್ಯವಾಗಿದೆ.