ಜೂನ್ನಿಂದ ಅಕ್ಟೋಬರ್ವರೆಗೆ ಮಾತ್ರ ದರ್ಶನ : ಸುವರ್ಣಗಿರಿಯಲ್ಲಿ ಬಿತ್ತದೆ ಬೆಳೆಯುವ ವಿಸ್ಮಯ ಭತ್ತ!
ದೇವಸ್ಥಾನದ ಗುಡ್ಡದ ಮೇಲಿನ ಸುಮಾರು 20 ಗುಂಟೆ ಜಮೀನಿನಲ್ಲಿ ಪ್ರತಿವರ್ಷ ಮಳೆಗಾಲ ಆರಂಭವಾಗುತ್ತಿದ್ದಂತೆ ಭತ್ತದ ಸಸಿಗಳು ಕಾಣಿಸಿಕೊಳ್ಳುತ್ತವೆ. ಸುಮಾರು 200 ಅಡಿ ಉದ್ದ ಹಾಗೂ 70 ಅಡಿ ಅಗಲದ ಪ್ರದೇಶದಲ್ಲಿ ಹಸಿರಿನಿಂದ ಕಂಗೊಳಿಸುವ ಪೈರು ಜೂನ್ನಿಂದ ಅಕ್ಟೋಬರ್ವರೆಗೆ ಮಾತ್ರ ವೀಕ್ಷಣೆಗೆ ಲಭ್ಯ. ಬಳಿಕ ಕಟಾವು ನಡೆಸಿ ಭತ್ತವನ್ನು ಸಂಗ್ರಹಿಸಲಾಗುತ್ತದೆ.
-
ಶ್ರೀಮಂತ ಮೇಳಕುಂದಾ
20 ಗುಂಟೆ ಪ್ರದೇಶದಲ್ಲಿ ಸ್ವಾಭಾವಿಕವಾಗಿ ಬೆಳೆಯುವ ಅಪರೂಪದ ಬೆಳೆ
ಕಲಬುರಗಿ(ಕಾಳಗಿ): ರೈತರು ಭತ್ತ ಬೆಳೆಯಲು ಬೀಜ ಬಿತ್ತಿ, ನೀರು ಹಾಯಿಸಿ, ಗೊಬ್ಬರ ನೀಡಿ ತಿಂಗಳುಗಟ್ಟಲೆ ಆರೈಕೆ ಮಾಡುವುದು ಸಹಜ. ಆದರೆ ಕಾಳಗಿ ತಾಲೂಕಿನ ಸೂಗೂರು (ಕೆ) ಗ್ರಾಮದ ಸುವರ್ಣಗಿರಿ ಬೆಟ್ಟದ ಮೇಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಬಿತ್ತನೆಯೇ ಇಲ್ಲದೆ ಭತ್ತದ ಪೈರು ಕಾಣಿಸಿಕೊಳ್ಳುತ್ತಿರುವುದು ಭಕ್ತರು ಹಾಗೂ ಕೃಷಿ ವಲಯದ ಕುತೂಹಲಕ್ಕೆ ಕಾರಣವಾಗಿದೆ.
ದೇವಸ್ಥಾನದ ಗುಡ್ಡದ ಮೇಲಿನ ಸುಮಾರು 20 ಗುಂಟೆ ಜಮೀನಿನಲ್ಲಿ ಪ್ರತಿವರ್ಷ ಮಳೆಗಾಲ ಆರಂಭವಾಗುತ್ತಿದ್ದಂತೆ ಭತ್ತದ ಸಸಿಗಳು ಕಾಣಿಸಿಕೊಳ್ಳುತ್ತವೆ. ಸುಮಾರು 200 ಅಡಿ ಉದ್ದ ಹಾಗೂ 70 ಅಡಿ ಅಗಲದ ಪ್ರದೇಶದಲ್ಲಿ ಹಸಿರಿನಿಂದ ಕಂಗೊಳಿಸುವ ಪೈರು ಜೂನ್ನಿಂದ ಅಕ್ಟೋಬರ್ವರೆಗೆ ಮಾತ್ರ ವೀಕ್ಷಣೆಗೆ ಲಭ್ಯ. ಬಳಿಕ ಕಟಾವು ನಡೆಸಿ ಭತ್ತವನ್ನು ಸಂಗ್ರಹಿಸಲಾಗುತ್ತದೆ.
ಸುತ್ತಮುತ್ತಲಿನ ಗ್ರಾಮಗಳ ಜನರ ಜತೆಗೆ ಮಹಾರಾಷ್ಟ್ರ, ತೆಲಂಗಾಣ ಹಾಗೂ ಆಂಧ್ರಪ್ರದೇಶ ದಿಂದಲೂ ಭಕ್ತರು ಇಲ್ಲಿಗೆ ಆಗಮಿಸಿ ಈ ಅಪರೂಪದ ದೃಶ್ಯ ಕಣ್ತುಂಬಿಕೊಳ್ಳುತ್ತಿದ್ದಾರೆ. ಇಲ್ಲಿನ ಪೈರಿನಿಂದ ದೊರೆಯುವ ಬೀಜವನ್ನು ಬೇರೆಡೆ ಬಿತ್ತಿದರೂ ಅದೇ ರೀತಿ ಮೊಳಕೆ ಬರುವುದಿಲ್ಲ ಎಂಬುದು ಸ್ಥಳೀಯರ ನಂಬಿಕೆ.
ಇದನ್ನೂ ಓದಿ: Crop Top Fashion 2026: ಬೋಲ್ಡ್ ಲುಕ್ಗಾಗಿ ಬಾಕ್ಸಿ ಕ್ರಾಪ್ ಟಾಪ್ ಸ್ಟೈಲಿಂಗ್
ಹಾಥಿರಾಮಜೀ ಭಕ್ತಿಯೊಂದಿಗೆ ಬೆಸೆದ ಇತಿಹಾಸ
ಸ್ಥಳೀಯ ಹಿರಿಯರ ಪ್ರಕಾರ, ರಾಜಸ್ಥಾನದ ನಾಗೌರ್ ಜಿಲ್ಲೆಯ ಹಾಥಿರಾಮಜೀ ಮಹಾರಾಜರು ಬಾಲಾಜಿ ದರ್ಶನಕ್ಕಾಗಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಸುವರ್ಣಗಿರಿ ಬೆಟ್ಟಕ್ಕೆ ಬಂದಿದ್ದರು. ಇಲ್ಲಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದ ಬಳಿಕ ಈ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸಿದರು ಎಂಬ ಪ್ರತೀತಿ ಇದೆ. ಹೀಗಾಗಿ ಸೂಗೂರು (ಕೆ)ಯನ್ನು ವೆಂಕಟೇಶ್ವರ ಸ್ವಾಮಿಯ ಮೂಲಸ್ಥಾನವೆಂದು ಭಕ್ತರು ಪರಿಗಣಿಸುತ್ತಾರೆ.
ಹಿಂದಿನ ಕಾಲದಲ್ಲಿ ಋಷಿ-ಮುನಿಗಳು ಈ ಬೆಟ್ಟದಲ್ಲಿ ಅನುಷ್ಠಾನ ನಡೆಸಿ ತಮ್ಮ ಆಹಾರಕ್ಕಾಗಿ ಪೈರು ಬೆಳೆಸುತ್ತಿದ್ದರು ಎಂಬ ನಂಬಿಕೆಯೂ ಇದೆ. ಇಲ್ಲಿನ ಭತ್ತವನ್ನು ಮೊದಲು ಸ್ವಾಮಿಗೆ ನೈವೇದ್ಯ ಅರ್ಪಿಸಿ, ಬಳಿಕ ಸಾಧು-ಸಂತರು ಹಾಗೂ ಭಕ್ತರು ಸ್ವೀಕರಿಸುತ್ತಿದ್ದರು ಎಂಬ ಪ್ರತೀತಿಯನ್ನು ಗ್ರಾಮಸ್ಥರು ಮುಂದುವರಿಸಿಕೊಂಡು ಬಂದಿದ್ದಾರೆ.
ಈಗ ನೈವೇದ್ಯವಾಗಿ ಭತ್ತದ ಅಕ್ಕಿ
ಹಿಂದೆ ಈ ಬೆಳೆಯನ್ನು ಕೊಯ್ದು ರಾಶಿ ಮಾಡುವುದಕ್ಕೂ, ಅಕ್ಕಿಯಾಗಿ ಬಳಕೆ ಮಾಡುವುದಕ್ಕೂ ಭಕ್ತರು ಹಿಂಜರಿಯುತ್ತಿದ್ದರು. ಆದರೆ ಹಾಥಿರಾಮಜೀ ಮಠ, ತಿರುಮಲ-ತಿರುಪತಿಯ ಶ್ರೀ ಕೃಷ್ಣದಾಸ ಮಹಾರಾಜರ ಮಾರ್ಗದರ್ಶನದಲ್ಲಿ ದೇವಸ್ಥಾನದ ಅರ್ಚಕರ ಸಮ್ಮುಖದಲ್ಲಿ ಪ್ರತಿ ವರ್ಷ ಡಿಸೆಂಬರ್ ಮೊದಲ ವಾರದಲ್ಲಿ ಭತ್ತದ ರಾಶಿ ಮಾಡಲಾಗುತ್ತಿದೆ. ಸುಮಾರು ಒಂದು ಕ್ವಿಂಟಲ್ವರೆಗೆ ಉತ್ಪನ್ನ ದೊರೆಯುತ್ತದೆ ಎಂದು ದೇವಸ್ಥಾನದವರು ತಿಳಿಸಿದ್ದಾರೆ.
ಇದರಿಂದ ತಯಾರಿಸಿದ ಅಕ್ಕಿಯನ್ನು ವೈಕುಂಠ ಏಕಾದಶಿಯ ಮರುದಿನ ದ್ವಾದಶಿಯಂದು ವೆಂಕಟೇಶ್ವರ ಸ್ವಾಮಿಗೆ ನೈವೇದ್ಯವಾಗಿ ಅರ್ಪಿಸಿ, ನಂತರ ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಿಸ ಲಾಗುತ್ತದೆ.
ಅಕ್ಕಿಯಲ್ಲೂ ಮೂರು ಗೆರೆ!
ಇಲ್ಲಿನ ಬೆಳೆಯ ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ ಭತ್ತದಲ್ಲಿ ಮೂರು ಬಣ್ಣಗಳ ಛಾಯೆ ಕಂಡುಬರುತ್ತದೆ ಎನ್ನುವುದು. ಭತ್ತವನ್ನು ಅಕ್ಕಿಯಾಗಿ ಪರಿವರ್ತಿಸಿದಾಗ ಕಾಳಿನ ಮೇಲ್ಭಾಗದಲ್ಲಿ ಮೂರು ನಾಮಗಳಂತೆ ಗೆರೆಗಳು ಸ್ಪಷ್ಟವಾಗಿ ಗೋಚರಿಸುತ್ತವೆ ಎಂದು ದೇವಸ್ಥಾನದವರು ಹೇಳುತ್ತಾರೆ.
ಈ ವಿಶಿಷ್ಟ ಬೆಳೆಯ ಸ್ವರೂಪಕ್ಕೆ ಕಾರಣವೇನು? ಬೀಜ ಬೇರೆಡೆ ಮೊಳೆಯದಿರುವುದಕ್ಕೆ ವೈಜ್ಞಾನಿಕ ಕಾರಣವೇನು? ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಕೃಷಿ ಇಲಾಖೆ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವರದಿಗಾಗಿ ಕಾಯಲಾಗುತ್ತಿದೆ.
ಈ ಮಧ್ಯೆ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳೂ ವೇಗ ಪಡೆದಿವೆ. ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪ, ಪುಷ್ಪರಣಿ, ವೈಭವ ಮಂಟಪ ಹಾಗೂ ಯಜ್ಞಮಂಟಪ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ. ನವರಾತ್ರಿ ಬ್ರಹ್ಮೋತ್ಸವವೂ ಪ್ರತಿವರ್ಷ ನಡೆಯುತ್ತಿದ್ದು, ಧಾರ್ಮಿಕ ಕ್ಷೇತ್ರದ ಜತೆಗೆ ಪ್ರವಾಸಿ ತಾಣವಾಗಿಸುವ ಪ್ರಯತ್ನ ನಡೆದಿದೆ.
ವಿಸ್ಮಯ ಭತ್ತದ ವಿಶೇಷತೆ
ಸುವರ್ಣಗಿರಿಯ ಈ ಪೈರಿನಲ್ಲಿ ಸಾಮಾನ್ಯ ಕೃಷಿ ಪದ್ಧತಿಯ ಗುರುತು ಕಾಣುವುದಿಲ್ಲ ಎಂಬುದು ಸ್ಥಳೀಯರ ಗಮನ ಸೆಳೆದಿದೆ. ಮಳೆಗಾಲದ ಅವಧಿಯಲ್ಲಿ ಕಾಣಿಸಿಕೊಳ್ಳುವ ಸಸ್ಯಗಳು ನಂತರ ತೆನೆ ಬಿಡುತ್ತವೆ. ಡಿಸೆಂಬರ್ನಲ್ಲಿ ಕಟಾವು ಮಾಡಿ ಸಂಗ್ರಹಿಸುವ ಉತ್ಪನ್ನವನ್ನು ಧಾರ್ಮಿಕ ವಿಧಿ ವಿಧಾನಗಳಲ್ಲಿ ಬಳಸಲಾಗುತ್ತಿದೆ. ಅಕ್ಕಿಯ ಮೇಲಿನ ಮೂರು ಗೆರೆಗಳೂ ವಿಶೇಷ ಆಕರ್ಷಣೆಯಾಗಿವೆ.
ಪ್ರಯೋಗಾಲಯದ ವರದಿ ಬಾಕಿ
ಸುವರ್ಣಗಿರಿಯಲ್ಲಿ ಕಾಣಿಸಿಕೊಳ್ಳುವ ಭತ್ತದ ಮಾದರಿಯನ್ನು ಕೃಷಿ ಇಲಾಖೆ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಿದೆ. ಸಸ್ಯದ ಸ್ವರೂಪ, ಬೀಜದ ಗುಣಲಕ್ಷಣ ಹಾಗೂ ವಿಶಿಷ್ಟ ಬೆಳವಣಿಗೆಗೆ ಕಾರಣವಾಗಿರುವ ಅಂಶಗಳ ಬಗ್ಗೆ ವೈಜ್ಞಾನಿಕ ಪರಿಶೀಲನೆ ನಡೆಯಬೇಕಿದೆ. ಸದ್ಯಕ್ಕೆ ಸ್ಥಳೀಯ ನಂಬಿಕೆಗಳೇ ಆಧಾರವಾಗಿದ್ದು, ಅಧಿಕೃತ ಪರೀಕ್ಷಾ ವರದಿ ಬಂದಿಲ್ಲ.
![]()
ಶ್ರೀ ವೆಂಕಟೇಶ್ವರ ಸ್ವಾಮಿಯ ದೈವಾನುಗ್ರಹದಿಂದಲೇ ಈ ಪೈರು ಕಾಣಿಸಿಕೊಳ್ಳುತ್ತದೆ ಎಂಬ ನಂಬಿಕೆ ನಮ್ಮೂರಿನಲ್ಲಿದೆ. ಇದರ ವೈಶಿಷ್ಟ್ಯ ನೋಡಲು ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶ ಸೇರಿದಂತೆ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಿದ್ದಾರೆ.
- ಸಿದ್ದು ಗುತ್ತೇದಾರ, ಗ್ರಾಮಸ್ಥ
![]()
ಸೂಗೂರಿನಲ್ಲಿ ಬೆಳೆಯುವ ಭತ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಬೆಳೆಗೆ ಸಂಬಂಧಿಸಿದ ಪರೀಕ್ಷಾ ಫಲಿತಾಂಶ ಇನ್ನೂ ಇಲಾಖೆಗೆ ಬಂದಿಲ್ಲ. ವರದಿ ಲಭ್ಯವಾದ ಬಳಿಕ ಅದರ ವೈಜ್ಞಾನಿಕ ಹಿನ್ನೆಲೆ ಹಾಗೂ ವಿಶೇಷತೆಯ ಕುರಿತು ಸ್ಪಷ್ಟ ಮಾಹಿತಿ ದೊರೆಯಲಿದೆ.
- ಸಮದ್ ಪಟೇಲ್, ಜಂಟಿ ನಿರ್ದೇಶಕ, ಕೃಷಿ ಇಲಾಖೆ, ಕಲಬುರಗಿ