MLA S.N. Subbareddy: ಸರ್ಕಾರಿ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಿ : ರೈತರಿಗೆ ಶಾಸಕ ಸುಬ್ಬಾರೆಡ್ಡಿ ಕರೆ
ರೈತರನ್ನು ಆರ್ಥಿಕವಾಗಿ ಅಭಿವೃದ್ದಿ ಹೊಂದಲು ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಅವುಗಳನ್ನು ರೈತರು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ರಿಯಾಯತಿ ದರದಲ್ಲಿ ಕೃಷಿ ಹಾಗೂ ಕೃಷಿ ಸಂಬAಧಿತ ಇಲಾಖೆಗಳ ಮೂಲಕ ಕೃಷಿ ಯಾಂತ್ರೀಕರಣ, ಹನಿ ನೀರಾವರಿ, ತುಂತುರು ನೀರಾವರಿ, ರಿಯಾಯತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಹೀಗೆ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದೆ.
-
ಗುಡಿಬಂಡೆ: ದೇಶದ ಆರ್ಥಿಕತೆಯ ಬೆನ್ನೆಲುಬಾದ ರೈತರ ಅಭಿವೃದ್ದಿಗಾಗಿ ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು, ಯೋಜನೆಗಳನ್ನು ಜಾರಿ ಮಾಡಿದ್ದು, ಮಧ್ಯವರ್ತಿಗಳ ಆಮಿಷಗಳಿಗೆ ಒಳಗಾಗದೇ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ(MLA S.N. Subbareddy) ಕರೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದ ಬಳಿ ಕೃಷಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ರಿಯಾಯತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರೈತರನ್ನು ಆರ್ಥಿಕವಾಗಿ ಅಭಿವೃದ್ದಿ ಹೊಂದಲು ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಅವುಗಳನ್ನು ರೈತರು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ರಿಯಾಯತಿ ದರದಲ್ಲಿ ಕೃಷಿ ಹಾಗೂ ಕೃಷಿ ಸಂಬAಧಿತ ಇಲಾಖೆಗಳ ಮೂಲಕ ಕೃಷಿ ಯಾಂತ್ರೀಕರಣ, ಹನಿ ನೀರಾವರಿ, ತುಂತುರು ನೀರಾವರಿ, ರಿಯಾಯತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಹೀಗೆ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದೆ. ಆದರೆ ರೈತರು ಅವುಗಳನ್ನು ಬಳಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ತಮಗೆ ಸೇರಿದ ಭೂಮಿ ದಾಖಲೆಗಳು ಸರಿಯಾಗಿ ಇಲ್ಲದ ಕಾರಣ, ಪವತಿ ವಾರಸು ಖಾತೆ ಮಾಡಿಸಿಕೊಳ್ಳದೇ ಸೌಲಭ್ಯ ಗಳನ್ನು ಪಡೆದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ.
ಇದನ್ನೂ ಓದಿ: MLA S.N. Subbareddy: ರೈತರು ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಲು ಶಾಸಕ ಸುಬ್ಬಾರೆಡ್ಡಿ ಕರೆ
ಅದರಲ್ಲೂ ಬೆಂಬಲ ಬೆಲೆ ಯೋಜನೆಯಡಿ ರೈತರಾದ ತಾವೇ ಮೋಸ ಹೋಗುತ್ತಿದ್ದಿರಿ. ರಾಗಿ ಬೆಲೆಗೆ ಒಳ್ಳೆಯ ಬೆಲೆ ಸಿಗುತ್ತಿದೆ. ಆದರೆ ದಳ್ಳಾಲಿಗಳು ನಿಮ್ಮ ಬಳಿ ಎರಡು ಮೂರು ಸಾವಿರಕ್ಕೆ ರಾಗಿ ಖರೀದಿ ಮಾಡುತ್ತಾರೆ. ಅವರು ತಮ್ಮ ಮೂಲಕವೇ ಸರ್ಕಾರಕ್ಕೆ ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡಿ ನಿಮಗೆ ನೀಡಿದ ಹಣದ ದುಪ್ಪಟ್ಟು ಪಡೆಯುತ್ತಾರೆ. ಇದರಿಂದಾಗಿ ಕಷ್ಟಪಟ್ಟ ನಿಮಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಈ ರೀತಿಯ ಮೋಸಕ್ಕೆ ಬಲಿಯಾಗದೇ ಸರ್ಕಾರದ ಸೌಲಭ್ಯ ಗಳನ್ನು ತಾವೇ ನೇರವಾಗಿ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ಸಲಹೆ ನೀಡಿದರು.
ಬಳಿಕ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಕೇಶವರೆಡ್ಡಿ ಮಾತನಾಡಿ, ಕೃಷಿ ಇಲಾಖೆ ಯಿಂದ ರಿಯಾಯತಿ ದರದಲ್ಲಿ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗುತ್ತಿದೆ. ಕಸಬಾ ಹಾಗೂ ಸೋಮೇನಹಳ್ಳಿ ಹೋಬಳಿಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳು ದಾಸ್ತಾನಾಗಿದ್ದು, ರೈತರು ಪಡೆದುಕೊಳ್ಳಬಹುದಾಗಿದೆ. ಈ ಬಾರಿ ವಾಡಿಕೆ ಮಳೆಗಿಂತ ಉತ್ತಮ ಮಳೆ ಆರಂಭವಾಗಿದೆ. ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳು ಸಹ ಚುರುಕುಗೊಂಡಿದೆ. ಯೂರಿಯಾ ಪಡೆಯಲು ಯಾವುದೇ ಮೋಸ ಆಗಬಾರದೆಂದು ರೈತರ ಎಫ್.ಐ.ಡಿ ಸಂಖ್ಯೆಯ ಮೂಲಕ ರಸಗೊಬ್ಬರ ವಿತರಣೆಗೆ ಮಾರಾಟಗಾರರಿಗೆ ಸೂಚನೆ ನೀಡಲಾಗಿದೆ. ಕೃಷಿ ಸಂಬಂಧಿತ ಏನೇ ಸಮಸ್ಯೆಗಳಿದ್ದರೂ ಕಚೇರಿ ಸಮಯದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದರು.
ಈ ಸಮಯದಲ್ಲಿ ತಹಸೀಲ್ದಾರ್ ಸಿಗ್ಬತ್ತುಲ್ಲಾ, ಪ.ಪಂ ಅಧ್ಯಕ್ಷ ವಿಕಾಸ್, ಜಂಟಿ ಕೃಷಿ ನಿರ್ದೇಶಕ ಅಭೀದ್, ಕುರುಬೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಪಾಪಿರೆಡ್ಡಿ, ಕೃಷಿಕ ಸಮಾಜದ ಮಂಜುನಾಥರೆಡ್ಡಿ, ರಾಮಚಂದ್ರರೆಡ್ಡಿ, ಎಂ.ಸಿ.ಚಿಕ್ಕನರಸಿಂಹಪ್ಪ, ಸರ್ಕಾರಿ ನೌಕರರ ಸಂಘದ ಮುನಿಕೃಷ್ಣಪ್ಪ, ಮುಖಂಡರಾದ ಆದಿರೆಡ್ಡಿ, ಹೆಚ್.ಪಿ.ಲಕ್ಷ್ಮೀನಾರಾಯಣ, ಕೃಷ್ಣೆಗೌಡ, ನರೇಂದ್ರ, ಬಾಬು, ಆದಿನಾರಾಯಣರೆಡ್ಡಿ, ಅಂಬರೀಶ್, ಆತ್ಮ ಸಿಬ್ಬಂದಿ, ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ, ಕೃಷಿ ಸಖಿಗಳು ಸೇರಿದಂತೆ ರೈತರು ಭಾಗಿಯಾಗಿದ್ದರು.