ಆಸ್ಪತ್ರೆಗೆ ದಾಖಲಾದ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್; ಐಸಿಯುನಲ್ಲಿ ಮುಂದುವರಿದ ಚಿಕಿತ್ಸೆ, ಆರೋಗ್ಯ ಸಮಸ್ಯೆ ಏನು?
ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಅವರನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. 90 ವರ್ಷದ ಹಿರಿಯ ಸ್ಕ್ರಿಪ್ಟ್ ರೈಟರ್ ಸಲೀಂ ಖಾನ್ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ನಟ ಸಲ್ಮಾನ್ ಖಾನ್ ಸೇರಿದಂತೆ ಅರ್ಬಾಜ್, ಸೋಹೈಲ್ ಮತ್ತು ಇಡೀ ಖಾನ್ ಕುಟುಂಬ ಆಸ್ಪತ್ರೆಗೆ ಭೇಟಿ ನೀಡಿದೆ. ಸದ್ಯ ಅವರ ಅನಾರೋಗ್ಯದ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.
-
ಬಾಲಿವುಡ್ ಜನಪ್ರಿಯ ಸ್ಕ್ರಿಪ್ಟ್ ರೈಟರ್ ಮತ್ತು ನಟ ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಅವರು ಅನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಲೀಂ ಖಾನ್ ಅವರಿಗೆ ಈಗ 90 ವರ್ಷ ವಯಸ್ಸಾಗಿದೆ. ಸದ್ಯ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಿ, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಯಾವ ಕಾರಣಕ್ಕಾಗಿ ಅವರನ್ನು ಆಡ್ಮಿಟ್ ಮಾಡಲಾಗಿದೆ ಎಂಬ ಬಗ್ಗೆ ನಿಖರವಾದ ಕಾರಣವನ್ನು ಬಹಿರಂಗಪಡಿಸಿಲ್ಲ.
ಆಸ್ಪತ್ರೆಗೆ ಬಂದ ಸಲ್ಮಾನ್ ಖಾನ್
ತಂದೆ ಸಲೀಂ ಖಾನ್ ಅವರು ದಾಖಲಾಗಿರುವ ಲೀಲಾವತಿ ಆಸ್ಪತ್ರೆಯ ಹೊರಗೆ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದು, ಪಾಪರಾಜಿಗಳ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿವೆ. ಸಲೀಂ ಅವರ ಪುತ್ರಿ ಅಲ್ವಿರಾ ಖಾನ್, ಅಳಿಯ ಅತುಲ್ ಅಗ್ನಿಹೋತ್ರಿ ಮತ್ತು ಮೊಮ್ಮಗ ಅಯಾನ್ ಅಗ್ನಿಹೋತ್ರಿ ಕೂಡ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಸಲ್ಮಾನ್ ಸಹೋದರರಾದ ಅರ್ಬಾಜ್ ಖಾನ್ ಮತ್ತು ಸೋಹೈಲ್ ಖಾನ್ ಹಾಗೂ ಸೋದರಿ ಅರ್ಪಿತಾ ಖಾನ್ ಕೂಡ ಆಸ್ಪತ್ರೆಗೆ ಭೇಟಿ ನೀಡಿ, ತಂದೆ ಸಲೀಂ ಖಾನ್ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ.
Salman Khan: ಆಮೀರ್ ಖಾನ್ ಕಾಲೆಳೆದ ಸಲ್ಮಾನ್ ಖಾನ್; ಫುಲ್ ವೈರಲ್ ಆಗ್ತಿದೆ ಈ ವಿಡಿಯೊ
ಬಾಲಿವುಡ್‌ನ ಶ್ರೇಷ್ಠ ರೈಟರ್
ಬಾಲಿವುಡ್‌ನ ಶ್ರೇಷ್ಠ ಚಿತ್ರಕಥೆಗಾರರಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟಿರುವ ಸಲೀಂ ಖಾನ್, ಜಾವೇದ್ ಅಖ್ತರ್ ಜೊತೆಗೆ ಸೇರಿ 'ಶೋಲೆ', 'ಹಾಥಿ ಮೇರೆ ಸಾಥಿ', 'ಜಂಜೀರ್', 'ಸೀತಾ ಔರ್ ಗೀತಾ', 'ದೀವಾರ್', 'ಡಾನ್', 'ಕ್ರಾಂತಿ', ಮತ್ತು 'ಮಿಸ್ಟರ್ ಇಂಡಿಯಾ'ದಂತಹ ಚಿತ್ರಗಳಿಗೆ ಸ್ಕ್ರಿಪ್ಟ್ ಬರೆದಿದ್ದಾರೆ. 70ರ ದಶಕದಲ್ಲಿ ಬಾಲಿವುಡ್ ಮುಖ್ಯವಾಹಿನಿಯ ಸಿನಿಮಾಗಳ ಕಥೆಯ ಟ್ರೆಂಡ್ ಅನ್ನೇ ಬದಲಾಯಿಸಿತ್ತು ಸಲೀಂ-ಜಾವೇದ್ ಜೋಡಿ. ಅಂದಹಾಗೆ, ಡಾ. ರಾಜ್‌ಕುಮಾರ್ ಮತ್ತು ಆರತಿ ಅಭಿನಯದ ʻಪ್ರೇಮದ ಕಾಣಿಕ, ʼʻರಾಜ ನನ್ನ ರಾಜʼ ಸಿನಿಮಾಗಳಿಗೂ ಈ ಜೋಡಿ ಕಥೆ ಬರೆದಿತ್ತು.
ಸಲೀಂ ಖಾನ್ ಅವರು 2025ರ ನವೆಂಬರ್ 24 ರಂದು ತಮ್ಮ 90ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈಚೆಗೆ ನಡೆದ 2026ರ ಬಿಎಂಸಿ ಚುನಾವಣೆಯಲ್ಲಿ ಮತ ಚಲಾಯಿಸುವಾಗ ಸಲೀಂ ಅವರು ಕೊನೆಯದಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು.