T20 World Cup: ಆಸ್ಟ್ರೇಲಿಯಾ ಕನಸು ಭಗ್ನ, ಸೂಪರ್-8ಕ್ಕೆ ಪ್ರವೇಶಿಸಿದ ಜಿಬಾಬ್ವೆ!
ಪಲ್ಲೆಕೆಲೆ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಐರ್ಲೆಂಡ್ ಹಾಗೂ ಜಿಂಬಾಬ್ವೆ ನಡುವಣ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಬಿ ಗುಂಪಿನ ಪಂದ್ಯ ಮಳೆಯಿಂದ ರದ್ದಾಯಿತು ಹಾಗೂ ಉಭಯ ತಂಡಗಳಿಗೆ ಒಂದೊಂದು ಅಂಕವನ್ನು ಹಂಚಲಾಯಿತು. 5 ಅಂಕಗಳೊಂದಿಗೆ ಜಿಂಬಾಬ್ವೆ ಸೂಪರ್-8ಕ್ಕೆ ಪ್ರವೇಶ ಮಾಡಿದ್ದು, ಸತತ ಎರಡು ಪಂದ್ಯಗಳನ್ನು ಸೋತ ಪರಿಣಾಮ ಆಸ್ಟ್ರೇಲಿಯಾ ತಂಡ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿತು.
ಆಸ್ಟ್ರೇಲಿಯಾವನ್ನು ಹಿಂದಿಕ್ಕಿ ಸೂಪರ್-8ಕ್ಕೆ ಜಿಂಬಾಬ್ವೆ. -
ಪಲ್ಲೆಕೆಲೆ: ಪ್ರಸ್ತುತ ನಡೆಯುತ್ತಿರುವ 2026ರ ಐಸಿಸಿ ಟಿ20 ವಿಶ್ವಕಪ್ (T20 World Cup 2025) ಟೂರ್ನಿಯಲ್ಲಿ ಆಸ್ಟ್ರೇಲಿಯಾದ (Australia) ಪಯಣ ಅಂತ್ಯವಾಗಿದೆ. ಸತತ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ ಪರಿಣಾಮ 2021ರ ಟಿ20 ವಿಶ್ವಕಪ್ ಚಾಂಪಿಯನ್ಸ್ ಸೂಪರ್-8ಕ್ಕೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ. ಮಂಗಳವಾರ ಇಲ್ಲಿನ ಪಲ್ಲೆಕೆಲೆ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯಬೇಕಾಗಿದ್ದ ಜಿಂಬಾಬ್ವೆ ಹಾಗೂ ಐರ್ಲೆಂಡ್ (ZIM vs IRE) ನಡುವಣ ಪಂದ್ಯ ಮಳೆಯಿಂದ ರದ್ದಾಯಿತು. ಐರ್ಲೆಂಡ್ ತಂಡ, ಈ ಪಂದ್ಯವನ್ನು ಗೆದ್ದಿದ್ದರೆ ಮಾತ್ರ ಆಸ್ಟ್ರೇಲಿಯಾ ತಂಡದ ಸೂಪರ್-8ರ ಆಸೆ ಜೀವಂತವಾಗಿರುತ್ತಿತ್ತು. ಆದರೆ, ಮಳೆ ಇದಕ್ಕೆ ಅವಕಾಶ ನೀಡಲಿಲ್ಲ. ಟಾಸ್ ಕಾಣದೆ ಪಂದ್ಯ ಅಂತ್ಯವಾದ ಕಾರಣ ಜಿಂಬಾಬ್ವೆ ಹಾಗೂ ಐರ್ಲೆಂಡ್ ತಂಡಗಳು ಒಂದೊಂದು ಅಂಕವನ್ನು ಪಡೆದವು. ಒಟ್ಟು ಐದು ಅಂಕಗಳ ಮೂಲಕ ಸಿಕಂದರ್ ರಾಜಾ ನಾಯಕತ್ವದ ಜಿಂಬಾಬ್ವೆ ಸೂಪರ್-8ಕ್ಕೆ ಅರ್ಹತೆ ಪಡೆಯಿತು ಹಾಗೂ 2028ರ ಚುಟಕು ವಿಶ್ವಕಪ್‌ಗೂ ನೇರ ಅರ್ಹತೆ ಗಿಟ್ಟಿಸಿತು.
ಆಸ್ಟ್ರೇಲಿಯಾ ತಂಡ ಇಲ್ಲಿಯವರೆಗೆ ಆಡಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಸೋಲು ಅನುಭವಿಸಿದೆ. ಮಿಚೆಲ್ ಮಾರ್ಷ್ ನಾಯಕತ್ವದ ಆಸೀಸ್ ಬಿ ಗುಂಪಿನಲ್ಲಿ ಕೇವಲ ಎರಡು ಅಂಕಗಳನ್ನು ಹೊಂದಿದೆ. ಕಾಂಗರೂ ಪಡೆ, ಒಮಾನ್ ವಿರುದ್ಧ ತಮ್ಮ ಅಂತಿಮ ಪಂದ್ಯವನ್ನು ಆಡಬೇಕಾಗಿದೆ. ಆ ಪಂದ್ಯದಲ್ಲಿ ಗೆದ್ದರೂ ಸಹ ಅವರಿಗೆ 4 ಅಂಕಗಳನ್ನು ತಲುಪಲು ಮಾತ್ರ ಅವಕಾಶ ಸಿಗಲಿದೆ. ಇದರ ನಡುವೆ ಜಿಂಬಾಬ್ವೆ ಕೇವಲ ಮೂರು ಪಂದ್ಯಗಳಲ್ಲಿ 5 ಅಂಕಗಳನ್ನು ಹೊಂದಿದೆ. ಒಮಾನ್ ತಂಡವನ್ನು ಸೋಲಿಸಿದ ನಂತರ ಜಿಂಬಾಬ್ವೆ, ಆಸ್ಟ್ರೇಲಿಯಾ ತಂಡವನ್ನು ಮಣಿಸಿತ್ತು. ಟಿ20 ವಿಶ್ವಕಪ್ ಟೂರ್ನಿಯ ಮೊದಲ ಸುತ್ತಿನಲ್ಲಿ ಆಸ್ಟ್ರೇಲಿಯಾ ಹೊರಬಿದ್ದಿರುವುದು ಇದು ಎರಡನೇ ಬಾರಿ. ಅವರು 2009ರಲ್ಲಿ ಗುಂಪು ಹಂತದಿಂದ ನಿರ್ಗಮಿಸಿತ್ತು.
T20 World Cup: ಅಫ್ಘಾನಿಸ್ತಾನ ಔಟ್, ಕೆನಡಾ ವಿರುದ್ಧ ಗೆದ್ದು ಸೂಪರ್-8ಕ್ಕೆ ಪ್ರವೇಶಿಸಿದ ನ್ಯೂಜಿಲೆಂಡ್!
ಸೂಪರ್-8ಕ್ಕೆ 7 ತಂಡಗಳು ಅರ್ಹತೆ
ಶ್ರೀಲಂಕಾ ಈಗಾಗಲೇ ಬಿ ಗುಂಪಿನಿಂದ ಸೂಪರ್-8ಕ್ಕೆ ಅರ್ಹತೆ ಪಡೆದಿದೆ. ಆಸ್ಟ್ರೇಲಿಯಾ ಮತ್ತು ಐರ್ಲೆಂಡ್ ಕೂಡ ಟೂರ್ನಿಯಿಂದ ಹೊರಬಿದ್ದಿವೆ. 2026ರ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8ಕ್ಕೆ ತಲುಪಿದ ಏಳನೇ ತಂಡ ಜಿಂಬಾಬ್ವೆ. ಇದಕ್ಕೂ ಮೊದಲು, ಭಾರತ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ಈಗಾಗಲೇ ತಮ್ಮ ಸೂಪರ್-8 ಸ್ಥಾನಗಳನ್ನು ಪಡೆದುಕೊಂಡಿವೆ.
We’ve done it! 🇿🇼 🥳
— Zimbabwe Cricket (@ZimCricketv) February 17, 2026
#T20WorldCup pic.twitter.com/DH887WL0Cl
ಭಾರತದ ಗುಂಪಿನಲ್ಲಿ ಜಿಂಬಾಬ್ವೆ
ಭಾರತ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ಜೊತೆ ಸೂಪರ್-8ರ ಗುಂಪಿನಲ್ಲಿ ಜಿಂಬಾಬ್ವೆ ಸ್ಥಾನ ಪಡೆದಿದೆ. ಆಸ್ಟ್ರೇಲಿಯಾ ಈಗ ಹೊರಬಿದ್ದಿದ್ದು, ಜಿಂಬಾಬ್ವೆ ಅವರ ಸ್ಥಾನವನ್ನು ಆಕ್ರಮಿಸಿಕೊಳ್ಳಲಿದೆ. ಸೂಪರ್-8 ನಲ್ಲಿ ಜಿಂಬಾಬ್ವೆಯ ಮೊದಲ ಪಂದ್ಯ ಫೆಬ್ರವರಿ 23 ರಂದು ಮುಂಬೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿದೆ. ನಂತರ ಸಿಕಂದರ್ ರಾಜಾ ಪಡೆ ಫೆಬ್ರವರಿ 26 ರಂದು ಭಾರತ ಮತ್ತು ಮಾರ್ಚ್ ಒಂದರಂದು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಅದಕ್ಕೂ ಮೊದಲು, ಶ್ರೀಲಂಕಾ ಮತ್ತು ಜಿಂಬಾಬ್ವೆ ಫೆಬ್ರವರಿ 19 ರಂದು ನಡೆಯುವ ಬಿ ಗುಂಪಿನ ಅಂತಿಮ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.