ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Puneeth Rajkumar: ಪುನೀತ್‌ @50: ಕನ್ನಡದ ಪವರ್‌ ಸ್ಟಾರ್‌ ನಟಿಸಿದ ಟಾಪ್‌ 10 ಮೂವಿಗಳು ಯಾವುದು ಗೊತ್ತಾ?

ಮಾರ್ಚ್ 17, ಕನ್ನಡದ ಸೂಪರ್‌ಸ್ಟಾರ್ ಆಗಿರುವ ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ 50ನೇ ಜನ್ಮದಿನ. ಅವರು 2021ರಲ್ಲಿ ಹಠಾತ್ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು. ಅವರ ಅಕಾಲಿಕ ಮರಣವು ರಾಷ್ಟ್ರದಾದ್ಯಂತ ಆಘಾತದ ಅಲೆಗಳನ್ನು ಎಬ್ಬಿಸಿತ್ತು.. ಅವರ ಜನ್ಮ ದಿನದಂದು, ಅವರು ನಟಿಸಿದ ಟಾಪ್‌ 10 ಮೂವಿಗಳ ಬಗ್ಗೆ ಸಣ್ಣ ಪರಿಚಯ ಇಲ್ಲಿದೆ ನೋಡಿ.

ಅಪ್ಪು ನಟಿಸಿದ ಅತ್ಯುತ್ತಮ ಸಿನೆಮಾಗಳಿವು.

ಅಪ್ಪು ನಟಿಸಿದ ಅತ್ಯುತ್ತಮ ಸಿನೆಮಾಗಳು

Profile Sushmitha Jain Mar 17, 2025 1:45 PM

ಮಾರ್ಚ್ 17, ಕನ್ನಡದ ಸೂಪರ್‌ಸ್ಟಾರ್ ಆಗಿರುವ ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ 50ನೇ ಜನ್ಮದಿನ. ಅವರು 2021ರಲ್ಲಿ ಹಠಾತ್ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು. ಅವರ ಅಕಾಲಿಕ ಮರಣವು ರಾಷ್ಟ್ರದಾದ್ಯಂತ ಆಘಾತದ ಅಲೆಗಳನ್ನು ಎಬ್ಬಿಸಿತ್ತು. ಅವರ ಪ್ರಭಾವಶಾಲಿ ಅಭಿನಯಕ್ಕೆ ಹೆಸರುವಾಸಿಯಾದ ಪುನೀತ್, ಅಪ್ಪು, ಮಿಲನ, ಅರಸು, ಜಾಕಿ ಮತ್ತು ಇನ್ನೂ ಅನೇಕ ಬ್ಲಾಕ್‌ಬಸ್ಟರ್ ಹಿಟ್‌ಗಳನ್ನು ನೀಡಿದ್ದರು. ಅವರ ಜನ್ಮ ದಿನದಂದು, ಅವರು ನಟಿಸಿದ ಟಾಪ್‌ 10 ಮೂವಿಗಳ ಬಗ್ಗೆ ಸಣ್ಣ ಪರಿಚಯ ಇಲ್ಲಿದೆ ನೋಡಿ.

ಅಪ್ಪು (2002): ಪುರಿ ಜಗನ್ನಾಥ್ ನಿರ್ದೇಶಿಸಿದ, ಅಪ್ಪು ರಕ್ಷಿತಾ ಜೊತೆಗೆ ಪುನೀತ್ ಅವರ ಚೊಚ್ಚಲ ಸಿನಿಮಾವಾಗಿದೆ. ಈ ಚಿತ್ರವು ಹಿಟ್ ಆಗಿ ಪುನೀತ್‌ "ಅಪ್ಪು" ಎಂಬ ಹೆಸರಿನಿಂದಲೇ ಕರ್ನಾಟಕದಾದ್ಯಂತ ಜನಪ್ರಿಯರಾದರು. ಅವರ 50 ನೇ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ ಈ ಕ್ಲಾಸಿಕ್‌ ಸಿನಿಮಾದ ಮರುಮಾದರಿ ಆವೃತ್ತಿಯನ್ನು ಮಾರ್ಚ್ 14ರಂದು ಚಿತ್ರಮಂದಿರಗಳಲ್ಲಿ ಮರುಬಿಡುಗಡೆ ಮಾಡಲಾಗಿದೆ.

ರಾಜಕುಮಾರ (2017): ಸಂತೋಷ್ ಆನಂದ್‌ರಾಮ್ ನಿರ್ದೇಶನದ ರಾಜಕುಮಾರ ಒಂದು ಆಕ್ಷನ್ ಸಿನಿಮಾ. ಈ ಹಿಟ್‌ ಸಿನಿಮಾದಲ್ಲಿ ಪುನೀತ್ ಜೊತೆ ಪ್ರಿಯಾ ಆನಂದ್ ನಟಿಸಿದ್ದಾರೆ. ದಾರಿಯಲ್ಲಿ ಎದುರಾಗುವ ಅನೇಕ ಸವಾಲುಗಳ ನಡುವೆಯೂ ತನ್ನ ಪಾತ್ರಕ್ಕೆ ನಿಷ್ಠರಾಗಿರುವ ಕರ್ತವ್ಯನಿಷ್ಠ ಮಗನ ಪಾತ್ರವನ್ನು ಪುನೀತ್‌ ನಿರ್ವಹಿಸಿದ್ದಾರೆ.

ಮಿಲನ (2007): ಪ್ರಕಾಶ್ ನಿರ್ದೇಶನದ ಮಿಲನ, ಪುನೀತ್ ಮತ್ತು ಪಾರ್ವತಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ರೊಮ್ಯಾಂಟಿಕ್‌ ಸಿನಿಮಾವಾಗಿದೆ. ಇದು ಕನ್ನಡ ಸಿನಿ ಉದ್ಯಮದಲ್ಲಿ ಪಾರ್ವತಿ ಅವರ ಚೊಚ್ಚಲ ಸಿನಿಮಾವಾಗಿ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಹಿಟ್ ಆಯಿತು. ಮಿಲನ ಪುನೀತ್ ಅವರ ಸ್ಮರಣೀಯ ಚಿತ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದರಲ್ಲಿ ಪೂಜಾ ಗಾಂಧಿ, ದಿಲೀಪ್ ರಾಜ್, ಸುಮಿತ್ರಾ ಮತ್ತು ಮುಖ್ಯಮಂತ್ರಿ ಚಂದ್ರು ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಅರಸು (2007): ಈ ಚಿತ್ರದಲ್ಲಿ, ಪುನೀತ್ ಒಬ್ಬ ಉದ್ಯಮಿಯ ಮಗನ ಪಾತ್ರವನ್ನು ನಿರ್ವಹಿಸಿದ್ದಾರೆ. ರಮ್ಯಾ ಪಾತ್ರವು ಪುನೀತ್‌ ಅವರ ವಿವಾಹ ಪ್ರಸ್ತಾಪವನ್ನು ತಿರಸ್ಕರಿಸಿದ ನಂತರ ಆತ ತನ್ನ ಸಂಪತ್ತನ್ನು ತ್ಯಜಿಸಿ ಸ್ವಂತವಾಗಿ ಜೀವನ ಕಟ್ಟಿಕೊಳ್ಳಲು ಯತ್ನಿಸುವ ರೋಚಕ ಸಿನಿಮಾ ಇದು. ತ್ರಿಕೋನ ಪ್ರೇಮ ಕತೆ ಹೊಂದಿರುವ ಈ ಸಿನಿಮಾವು, ಬಡ ಜನರ ಸಂಕಷ್ಟಗಳನ್ನು ಕಣ್ಣಿಗೆ ಕಟ್ಟುವ ರೀತಿಯಲ್ಲಿ ವಿವರಿಸುತ್ತದೆ. ಈ ಚಿತ್ರವನ್ನು ಮಹೇಶ್ ಬಾಬು ನಿರ್ದೇಶಿಸಿದ್ದಾರೆ ಮತ್ತು ಶ್ರೀನಿವಾಸ ಮೂರ್ತಿ, ಮೀರಾ ಜಾಸ್ಮಿನ್ ಮತ್ತು ಕೋಮಲ್ ಕೂಡ ಇದರಲ್ಲಿ ನಟಿಸಿದ್ದಾರೆ.

ಈ ಸುದ್ದಿಯನ್ನು ಓದಿ:Puneeth Rajkumar birthday: ಇಂದು ಪುನೀತ್‌ 50ನೇ ಜನ್ಮದಿನ, ಧ್ರುವ 369 ಸಿನಿಮಾ ಟೀಸರ್‌ ರಿಲೀಸ್‌

ಹುಡುಗರು (2011): ಕೆ. ಮಾದೇಶ್ ನಿರ್ದೇಶಿಸಿದ ಸಿನಿಮಾ ಇದು. ಇದರಲ್ಲಿ, ಪುನೀತ್, ಶ್ರೀನಗರ ಕಿಟ್ಟಿ, ಯೋಗೇಶ್ ಮತ್ತು ರಾಧಿಕಾ ಪಂಡಿತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ತಮಿಳು ಚಿತ್ರ ನಾಡೋಡಿಗಳ್ ನ ರಿಮೇಕ್ ಆಗಿದೆ. ಈ ಚಿತ್ರದಲ್ಲಿ ಪುನೀತ್ ಅವರ ಅಭಿನಯವು ಅವರಿಗೆ ಫಿಲ್ಮ್‌ಫೇರ್ ಮತ್ತು ಕನ್ನಡದಲ್ಲಿ SIIMA ಅತ್ಯುತ್ತಮ ನಟ ಪ್ರಶಸ್ತಿ ಎರಡನ್ನೂ ತಂದುಕೊಟ್ಟಿತು.

ದೊಡ್ಮನೆ ಹುಡ್ಗ (2016): ದೊಡ್ಡಮನೆ ಹುಡ್ಗ ಪುನೀತ್ ಅವರ ಮತ್ತೊಂದು ಬ್ಲಾಕ್‌ಬಸ್ಟರ್ ಆಕ್ಷನ್-ಪ್ಯಾಕ್ಡ್ ಸಿನಿಮಾ. ಇದರಲ್ಲಿನ ಪುನೀತ್ ಅಭಿನಯ ಪ್ರೇಕ್ಷಕರನ್ನು ಮೆಚ್ಚಿಸಿತು. ದುನಿಯಾ ಸೂರಿ ನಿರ್ದೇಶಿಸಿದ ಈ ಚಿತ್ರವು ಪುನೀತ್ ಅವರ ಪ್ರಮುಖ ಪಾತ್ರದಲ್ಲಿ 25ನೇ ಚಿತ್ರವಾಗಿದೆ. ತಾರಾಗಣದಲ್ಲಿ ರೆಬೆಲ್‌ ಸ್ಟಾರ್‌ ಅಂಬರೀಶ್‌, ಸುಮಲತಾ, ರಾಧಿಕಾ ಪಂಡಿತ್‌ ಮತ್ತು ಚಿಕ್ಕಣ್ಣ ಕೂಡಾ ಇದ್ದರು.

ಪೃಥ್ವಿ (2010): ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಪುನೀತ್ ಕೇಂದ್ರಬಿಂದುವಾಗಿದ್ದು, ಪ್ರಾಮಾಣಿಕ ಐಎಎಸ್ ಅಧಿಕಾರಿ ಪೃಥ್ವಿ ಕುಮಾರ್ ಪಾತ್ರವನ್ನು ನಿರ್ವಹಿಸಿದ್ದಾರೆ. ಬಳ್ಳಾರಿಯಲ್ಲಿ ನೆಲೆಗೊಂಡಿರುವ ಈ ಪಾತ್ರವು ನ್ಯಾಯದ ಬಗೆಗಿನ ಅಚಲ ಬದ್ಧತೆಯ ನಡುವೆ ಭ್ರಷ್ಟ ರಾಜಕಾರಣಿಗಳು ಮತ್ತು ಅಕ್ರಮ ಗಣಿ ದೊರೆಗಳ ನಡುವಿನ ಘರ್ಷಣೆಯ ಕಥಾಹಂದರವನ್ನು ಹೊಂದಿದೆ. ಈ ಚಿತ್ರವನ್ನು ಜಾಕೋಬ್ ವರ್ಗೀಸ್ ನಿರ್ದೇಶಿಸಿದ್ದಾರೆ.

ಅಂಜನಿ ಪುತ್ರ (2017): ಕೌಟುಂಬಿಕ ಭಾವನೆಗಳನ್ನು ಮೇಳೈಸುವ ಆಕ್ಷನ್ ರೊಮ್ಯಾಂಟಿಕ್ ಚಿತ್ರವಾದ ಅಂಜನಿ ಪುತ್ರದಲ್ಲಿ ಪುನೀತ್‌ ಅವರು ರಶ್ಮಿಕಾ ಮಂದಣ್ಣ ಜೊತೆಗೆ ಮಿಂಚಿದ್ದಾರೆ. ವಿಮರ್ಶಕರಿಂದ ಅಂಜನಿ ಪುತ್ರವು ಮಿಶ್ರ ವಿಮರ್ಶೆಗಳನ್ನು ಪಡೆದರೂ, ಅದು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿಯಾದ ಯಶಸ್ಸನ್ನು ಕಂಡಿದೆ.

ವಂಶಿ (2008): ಪ್ರಕಾಶ್ ನಿರ್ದೇಶನದ ವಂಶಿ ಚಿತ್ರದಲ್ಲಿ, ಪುನೀತ್ ಪೊಲೀಸ್ ಅಕಾಡೆಮಿ ತರಬೇತಿ ಪಡೆಯುವ ಅಭ್ಯರ್ಥಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ತನ್ನ ತಂದೆಯ ಹತ್ಯೆಯ ನಂತರ, ಅವರ ತಂದೆಯ ಗ್ಯಾಂಗ್ ಅನ್ನು ಸೇರಲು ಒತ್ತಾಯಿಸಲ್ಪಡುತ್ತಾನೆ. ಪುನೀತ್ ಜೊತೆಗೆ, ಈ ಚಿತ್ರದಲ್ಲಿ ಲಕ್ಷ್ಮಿ, ನಿಕಿತಾ ತುಕ್ರಾಲ್, ರವಿ ಕೇಲ್, ಅವಿನಾಶ್ ಯೆಳಂದೂರು ಮತ್ತು ರಾಜೇಂದ್ರ ಕಾರಂತ್ ನಟಿಸಿದ್ದಾರೆ.

ಜೇಮ್ಸ್ (2022): ಚೇತನ್ ಕುಮಾರ್ ನಿರ್ದೇಶನದ 'ಜೇಮ್ಸ್' ಚಿತ್ರವು ಪುನೀತ್ ಅವರ ಅಕಾಲಿಕ ಮರಣದ ಮೊದಲು ಅವರ ಕೊನೆಯ ಚಿತ್ರವಾಗಿತ್ತು. ಆಕ್ಷನ್ ಥ್ರಿಲ್ಲರ್ ಚಿತ್ರವು ಆರ್. ಶರತ್‌ಕುಮಾರ್, ಶ್ರೀಕಾಂತ್, ಪ್ರಿಯಾ ಆನಂದ್ ಮತ್ತು ಇತರರನ್ನು ಒಳಗೊಂಡಿದೆ. ಮಾರ್ಚ್ 17, 2022 ರಂದು ಪುನೀತ್ ಅವರ ಜನ್ಮದಿನದಂದು ಬಿಡುಗಡೆಯಾದ ಈ ಚಿತ್ರವು ಪ್ರೀತಿಯ ನಟನಿಗೆ ಗೌರವವನ್ನು ಸಲ್ಲಿಸಿತು.