ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

2025 ಭಾರತದ ಪಾಲಿಗೆ ಸುಧಾರಣೆಯ ಪರ್ವ, ಹೊಸ ವರ್ಷ ಮತ್ತಷ್ಟು ಪ್ರಗತಿ ನಿರೀಕ್ಷೆ

ಭಾರತವು ಕಳೆದೊಂದು ದಶಕದಿಂದೀಚೆಗೆ, ಪ್ರಧಾನಿ ನರೇಂದ್ರ ಮೋದಿ ಅವರ ಸಾರಥ್ಯದಲ್ಲಿ ಅಭೂತಪೂರ್ವ ಸಾಧನೆಯಿಂದ ವಿಶ್ವದ ಪ್ರಭಾವಿ ರಾಷ್ಟ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಜಿಡಿಪಿ ಗಾತ್ರದ ದೃಷ್ಟಿಯಿಂದ 4ನೇ ಸ್ಥಾನಕ್ಕೇರಿದೆ. ಪ್ರಪಂಚದಲ್ಲಿಯೇ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರಮುಖ ದೇಶವಾಗಿದೆ.

ಭಾರತದ ಅಭಿವೃದ್ಧಿ ಚಟುವಟಿಕೆಗೆ ವೇಗ

ಸಾಂದರ್ಭಿಕ ಚಿತ್ರ. -

Ramesh B
Ramesh B Jan 7, 2026 7:54 PM
  • ಶ್ರೀಧರ್‌ ಎಚ್.ವಿ.

ಭಾರತವು ಕಳೆದೊಂದು ದಶಕದಿಂದೀಚೆಗೆ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಸಾರಥ್ಯದಲ್ಲಿ ಅಭೂತಪೂರ್ವ ಸಾಧನೆಯಿಂದ ವಿಶ್ವದ ಪ್ರಭಾವಿ ರಾಷ್ಟ್ರಗಳಲ್ಲಿ ಒಂದಾಗಿರುವುದು ಪವಾಡಸದೃಶ ಬೆಳವಣಿಗೆ. 2014ರಲ್ಲಿ ಭಾರತವು ಜಿಡಿಪಿ ಗಾತ್ರದ ದೃಷ್ಟಿಯಿಂದ 10ನೇ ಸ್ಥಾನದಲ್ಲಿತ್ತು. ಆದರೆ ಈಗ 4ನೇ ಸ್ಥಾನಕ್ಕೇರಿದೆ. ಪ್ರಪಂಚದಲ್ಲಿಯೇ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರಮುಖ ದೇಶವಾಗಿದೆ. ತಲಾ ಆದಾಯ ಕೂಡ ಹೆಚ್ಚುತ್ತಿದೆ. ಕರೆನ್ಸಿಯ ಖರೀದಿ ಸಾಮರ್ಥ್ಯದಲ್ಲಿ (ಪಿಪಿಪಿ) ಈಗಾಗಲೇ ಮೂರನೇ ಸ್ಥಾನಕ್ಕೆ ಏರಿಕೆಯಾಗಿರುವುದು ದೇಶದ ಐತಿಹಾಸಿಕ ಮೈಲಿಗಲ್ಲಾಗಿದೆ. ಜಿಡಿಪಿಯಲ್ಲೂ ಜರ್ಮನಿಯನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರುವ ದಿನಗಳು ದೂರವಿಲ್ಲ. ಇದನ್ನು ನಮ್ಮ ದೇಶದ ಆರ್ಥಿಕತೆಯ ಜೈತ್ರಯಾತ್ರೆಯ ನಾಂದಿ ಎನ್ನಬಹುದು. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ಭಾರತದ ಹಿರಿಮೆಗೆ ಇದು ಮಹತ್ವದ ಗರಿಯಾಗಲಿದೆ.

ಅಮೆರಿಕವು 30 ಟ್ರಿಲಿಯನ್‌ ಡಾಲರ್‌, ಚೀನಾ 19 ಟ್ರಿಲಿಯನ್‌ ಡಾಲರ್‌ ಮತ್ತು ಜರ್ಮನಿ 4.7 ಟ್ರಿಲಿಯನ್‌ ಡಾಲರ್‌ ಗಾತ್ರದ ಆರ್ಥಿಕತೆಯಾಗಿದ್ದರೆ, ಭಾರತ 4.18 ಟ್ರಿಲಿಯನ್‌ ಡಾಲರ್‌ ಗಾತ್ರ ಗಳಿಸಿದೆ. 2030-32ರ ವೇಳೆಗೆ, ಜರ್ಮನಿಯನ್ನೂ ಹಿಂದಿಕ್ಕಿ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗುವ ಉತ್ಸಾಹದಲ್ಲಿ ದೇಶ ಮುಂದುವರಿಯುತ್ತಿರುವುದು ಈ ಶತಮಾನದ ಐತಿಹಾಸಿಕ ಬೆಳವಣಿಗೆಯಾಗಿದೆ. ಆರ್ಥಿಕತೆ 2014ರಿಂದ 2025ರ 11 ವರ್ಷಗಳಲ್ಲಂತೂ ಗಣನೀಯ ವೃದ್ಧಿಸಿದೆ. ಒಟ್ಟು ರಾಷ್ಟ್ರೀಯ ಉತ್ಪನ್ನ ಅಥವಾ ಜಿಡಿಪಿ ಮೌಲ್ಯವು 2014-15ರಲ್ಲಿ 106 ಲಕ್ಷ ಕೋಟಿ ರುಪಾಯಿಯಷ್ಟಿದ್ದರೆ, 2024-25ರ ವೇಳೆಗೆ 331 ಲಕ್ಷ ಕೋಟಿ ರುಪಾಯಿಗೆ ಏರಿಕೆಯಾಗಿರುವುದು ವಿಶೇಷ. 2025 ಮಹತ್ವದ ಸುಧಾರಣಾ ವರ್ಷ ಎಂದು ಕರೆಯಬಹುದು. ಪ್ರಧಾನಿ ನರೇಂದ್ರ ಮೋದಿಯವರು ದೇಶದ ಆರ್ಥಿಕತೆ, ಆಡಳಿತ, ಸಾಮಾಜಿಕ ಭದ್ರತೆಯ ಚೌಕಟ್ಟನ್ನು ಬಲಪಡಿಸಲು ಐತಿಹಾಸಿಕ ಸುಧಾರಣೆಯ ಕ್ರಮಗಳನ್ನು ಜಾರಿಗೊಳಿಸಿದರು.

ಮಧ್ಯಮ ವರ್ಗದ ಜನತೆಗೆ ತೆರಿಗೆ ರಿಲೀಫ್

2025ರ ಕೇಂದ್ರ ಬಜೆಟ್‌ ನಲ್ಲಿ ದೇಶದ ಮಧ್ಯಮ ವರ್ಗದ ಜನತೆಗೆ ವಾರ್ಷಿಕ 12 ಲಕ್ಷ ರುಪಾಯಿ ತನಕ ಆದಾಯ ತೆರಿಗೆಯಿಂದ ರಿಲೀಫ್‌ ನೀಡಿರುವುದು ಮಹತ್ವದ ಸುಧಾರಣೆ ಕ್ರಮವಾಗಿದೆ. ಇದರಿಂದ ಜನರ ಕೈಯಲ್ಲಿ ಹೆಚ್ಚು ಉಳಿತಾಯ, ಖರ್ಚು ವೆಚ್ಚಗಳಿಗೆ ಹಣ ಸಿಗುವಂತಾಗಿದೆ. ಆದಾಯ ತೆರಿಗೆ ಕಾಯಿದೆ 1961 ಅನ್ನು ಆದಾಯ ತೆರಿಗೆ ಕಾಯಿದೆ 2025 ಬದಲಿಸಿತು. ತೆರಿಗೆ ಪದ್ಧತಿಯನ್ನು ಇದು ಸರಳಗೊಳಿಸಿತು. ಹೆಚ್ಚು ಪಾರದರ್ಶಕಗೊಳಿಸಿತು. ತಂತ್ರಜ್ಞಾನ ಆಧರಿತ ತೆರಿಗೆ ಆಡಳಿತ ವ್ಯವಸ್ಥೆ ರೂಪುಗೊಂಡಿತು.

ಕೇಂದ್ರ ಬಜೆಟ್ 2026 ಸಮೀಪಿಸುತ್ತಿದ್ದಂತೆ ಹೂಡಿಕೆದಾರರ ಗಮನ ಸೆಳೆಯುತ್ತಿವೆ ರೈಲ್ವೇ ಷೇರುಗಳು

ಜಿಎಸ್‌ಟಿ ಸುಧಾರಣೆಯಿಂದ ದರ ಇಳಿಕೆ

ಜಿಎಸ್‌ಟಿ ಸುಧಾರಣೆಯಿಂದ ದಿನ ನಿತ್ಯದ ಬಳಕೆಯ ಸರಕುಗಳು, ಸೇವೆಗಳ ದರಗಳಿ ಇಳಿಕೆಯಾಗಿವೆ. ಕುಟುಂಬಗಳ ಮೇಲಿನ ಒತ್ತಡ ಶಮನವಾಗಿದೆ. ಸಣ್ಣ ಉದ್ದಿಮೆಗಳು, ರೈತರು, ಕಾರ್ಮಿಕ ಕೇಂದ್ರಿತ ವಲಯಗಳ ಮೇಲಿನ ಒತ್ತಡ ಉಪಶಮನವಾಗಿದ್ದು, ಅವರೆಲ್ಲ ನಿರಾಳರಾಗಿದ್ದಾರೆ. 2025-26 ಸಾಲಿ ಜಿಎಸ್‌ಟಿ ಸಂಗ್ರಹ ಅಂದಾಜಿಗಿಂತಲೂ ಹೆಚ್ಚು ಆಗುವ ಸಾಧ್ಯತೆ ಇದೆ ಎಂದು ಎಸ್‌ಬಿಐ ಸಂಶೋಧನ ವರದಿ ತಿಳಿಸಿದೆ.

ಸಣ್ಣ ಉದ್ದಿಮೆಗಳಿಗೆ ವಹಿವಾಟು ಮಿತಿ ಹೆಚ್ಚಳ

ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ (ಎಂಎಸ್‌ಎಂಇ) ಕೇಂದ್ರ ಸರಕಾರದ ನಾನಾ ಸೌಲಭ್ಯಗಳು ಸಿಗುವಂತಾಗಲು, ಅವುಗಳ ಅರ್ಹತೆಯ ಮಾನದಂಡದಲ್ಲಿ ಸುಧಾರಣೆ ತರಲಾಗಿದೆ. ವಹಿವಾಟು ಮಿತಿಯನ್ನು ಏರಿಸಲಾಗಿದೆ. ಇದರಿಂದಾಗಿ ಸರಕಾರಿ ಸೌಲಭ್ಯಗಳ ಜತೆಗೆ ಸರಕಾರಿ ಇಲಾಖೆಗಳ ವಾರ್ಷಿಕ ಖರೀದಿಯಲ್ಲೂ ಅವಕಾಶ ಸಿಗುತ್ತದೆ. ಇದು ಸಣ್ಣ ಮತ್ತು ಮಧ್ಯಮ ವಲಯದ ಉದ್ದಿಮೆಗಳ ಪ್ರಗತಿಗೆ ಸಹಕಾರಿಯಾದ ನಡೆಯಾಗಿದೆ.

ಕಾರ್ಮಿಕ ನೀತಿ ಸಂಹಿತೆ ಸುಧಾರಣೆ

ಹಳೆಯ ಮತ್ತು ಅಪ್ರಸ್ತುತವಾಗಿದ್ದ 29 ಕಾರ್ಮಿಕ ಕಾನೂನುಗಳನ್ನು ಬದಲಿಸಿ 4 ನವೀನ ಕಾರ್ಮಿಕ ನೀತಿ ಸಂಹಿತೆಯನ್ನಾಗಿಸಿ ಸುಧಾರಣೆ ಮಾಡಿರುವುದು ಗಮನಾರ್ಹ. ಕಾರ್ಮಿಕರ ಕಲ್ಯಾಣ ಮತ್ತು ಉದ್ದಿಮೆಗಳ ಬೆಳವಣಿಗೆಗೆ ಪೂರಕವಾದ ನೀತಿ ಇದಾಗಿದೆ. ಅಸಂಘಟಿತ ವಲಯದ ಕೆಲಸಗಾರರು ಮತ್ತು ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯವಾಗಿರುವ ಗಿಗ್‌ ಕಾರ್ಮಿಕರಿಗೂ ಸಾಮಾಜಿಕ ಭದ್ರತೆ ಒದಗಿಸಿರುವುದನ್ನು ಇಲ್ಲಿ ಗಮನಿಸಬಹುದು.

ವಿಬಿ ಜಿ ರಾಮ್‌ ಜಿ ಕಾಯ್ದೆಗೆ ತೀವ್ರ ವಿರೋಧ; ಜನವರಿ 8ರಿಂದ ಮನರೇಗಾ ಬಚಾವೋ ಅಭಿಯಾನ ಘೋಷಿಸಿದ ಕಾಂಗ್ರೆಸ್

ನರೇಗಾ ಬದಲಿಗೆ ವಿಬಿ-ಜಿ ರಾಮ್‌ ಜಿ

ಎಂಜಿ ನರೇಗಾ ಯೋಜನೆಯ ಹೆಸರನ್ನು ವಿಕಸಿತ್‌ ಭಾರತ್‌ ಗ್ಯಾರಂಟಿ ಫಾರ್‌ ರೋಜ್ಗಾರ್‌ ಎಂದು‌ ಬದಲಿಸಲಾಗಿದೆ. ಇದರಿಂದ ಗ್ರಾಮೀಣ ಜನರಿಗೆ ಪ್ರತಿ ವರ್ಷ ಖಾತರಿಯ ಉದ್ಯೋಗದ ದಿನಗಳ ಸಂಖ್ಯೆ 125 ಕ್ಕೆ ಏರಿಕೆಯಾಗಿದೆ. ಹೊಸ ವ್ಯವಸ್ಥೆಯಲ್ಲಿ 60:40 ಅನುಪಾತದಲ್ಲಿ ಯೋಜನೆಯ ನಿಧಿ ಪೂರೈಕೆ ಆಗಲಿದೆ. ಇದರಿಂದ ರಾಜ್ಯಗಳ ಉತ್ತರದಾಯಿತ್ವ ಹೆಚ್ಚಲಿದೆ. ನಿಧಿ ಸೋರಿಕೆ ತಡೆಗೂ ಇದು ಸಹಕಾರಿ. ಸ್ಥಳೀಯವಾಗಿ ಅಗತ್ಯ ಇರುವ ಮೂಲಸೌಕರ್ಯ ಅಭಿವೃದ್ಧಿಗೆ ಯೋಜನೆಯನ್ನು ಸಮರ್ಥವಾಗಿ ಬಳಸಬಹುದು. ರಸ್ತೆಗಳು, ಗೋದಾಮುಗಳು, ಮಾರುಕಟ್ಟೆಗಳ ಸೌಕರ್ಯಗಳು ಅಭಿವೃದ್ಧಿಯಾದರೆ ರೈತರ ಆದಾಯವೂ ಹೆಚ್ಚುತ್ತದೆ. ವಿಕಸಿತ್‌ ಗ್ರಾಮ ಪಂಚಾಯತ್‌ ಪ್ಲಾನ್‌ ಎಂಬ ಪರಿಕಲ್ಪನೆಯ ಅಡಿಯಲ್ಲಿ ಗ್ರಾಮೀಣ ಭಾಗದ ಕೆಲಸಗಳು ನಡೆಯಲಿವೆ. ಬ್ಲಾಕ್‌, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಕೇಂದ್ರೀಕೃತವಾಗಲಿದೆ. ಪಿಎಂ ಗತಿ ಶಕ್ತಿ ರಾಷ್ಟ್ರೀಯ ಯೋಜನೆಗೂ ಲಿಂಕ್‌ ಆಗಲಿದೆ. ಹೀಗಾಗಿ ಇದು ಹೆಚ್ಚು ಉತ್ಪಾದಕತೆಯನ್ನು ತಾನಾಗಿಯೇ ಗಳಿಸಿಕೊಳ್ಳಲಿದೆ.

ವಿಮೆ ಕ್ಷೇತ್ರಕ್ಕೆ ವಿದೇಶಿ ಹೂಡಿಕೆ ಮಿತಿ ಹೆಚ್ಚಳ

ವಿಮೆ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ ಮಿತಿಯನ್ನು 74 ಪರ್ಸೆಂಟ್‌ ನಿಂದ 100 ಪರ್ಸೆಂಟ್‌ಗೆ ಹೆಚ್ಚಿಸಲಾಗಿದೆ. " ಸಬ್‌ಕಾ ಬಿಮಾ, ಸಬ್‌ ಕಿ ರಕ್ಷಾ ʼʼ ಕಾಯಿದೆ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದು ವಿಮೆ ವಲಯಕ್ಕೆ ಅಗತ್ಯವಿರುವ ಬಂಡವಾಳ ಹೂಡಿಕೆಯನ್ನು ಹೆಚ್ಚಿಸಲಿದೆ. ವಿಮೆಯ ಸಾಂದ್ರತೆ ಹೆಚ್ಚಲಿದೆ. ಗುಣಮಟ್ಟ ಕೂಡ ವೃದ್ಧಿಸಲಿದೆ. ಸಾಗರ ವಲಯದ ಐದು ಪ್ರಮುಖ ಕಾಯಿದೆಗಳನ್ನು ಜಾರಿಗೆ ತರಲಾಗಿದೆ. ಇದು ವಸಾಹತುಶಾಹಿ ಕಾಲದ ಹಲೆಯ ಕಾನೂನುಗಳನ್ನು ಬದಲಿಸಲಿದೆ. ಬಂದರುಗಳ ನವೀಕರಣ, ಕರಾವಳಿ ವ್ಯಾಪಾರ ಅಭಿವೃದ್ಧಿಗೆ ಇದು ಉತ್ತೇಜನಕಾರಿಯಾಗಿದೆ.

ಕರಾವಳಿ ಶಿಪ್ಪಿಂಗ್‌ ಕಾಯಿದೆಯಿಂದ ಕರಾವಳಿ ತೀರದಲ್ಲಿ ವ್ಯಾಪಾರ ಚಟುವಟಿಕೆಗಳಲ್ಲಿ 6 ಪರ್ಸೆಂಟ್‌ ಹೆಚ್ಚುವ ನಿರೀಕ್ಷೆ ಇದೆ. ಇದರಿಂದ ಲಾಜಿಸ್ಟಿಕ್‌ ವೆಚ್ಚದಲ್ಲಿ ವಾರ್ಷಿಕ 10,000 ಕೋಟಿ ರುಪಾಯಿ ಉಳಿತಾಯವನ್ನೂ ನಿರೀಕ್ಷಿಸಲಾಗಿದೆ. ಉದ್ಯಮಸ್ನೇಹಿ ಬೆಳವಣಿಗೆಯ ದೃಷ್ಟಿಯಿಂದ 22 ಗುಣಮಟ್ಟ ನಿಯಂತ್ರಣ ಉಪಕ್ರಮಗಳನ್ನು ರದ್ದುಪಡಿಸಲಾಗಿದೆ. 53 ಅನ್ನು ಅಮಾನತಿನಲ್ಲಿ ಇಡಲಾಗಿದೆ. ನಿಯಮಾವಳಿಗಳ ಸಂಕೀರ್ಣ ಪ್ರಕ್ರಿಯೆಗಳನ್ನು ಸಡಿಲ ಮಾಡಲಾಗಿದೆ. ಉತ್ಪಾದಕರು ಮತ್ತು ಸಣ್ಣ ಉದ್ದಿಮೆಗಳಿಗೆ ಇನ್‌ಪುಟ್‌ ವೆಚ್ಚವನ್ನು ಕಡಿಮೆ ಮಾಡಲಾಗಿದೆ.

2025ರ ಸೆಕ್ಯುರಿಟೀಸ್‌ ಸಂಹಿತೆಯಲ್ಲಿ ಮೂರು ಹಣಕಾಸು ಕಾನೂನುಗಳನ್ನು ಸಂಯೋಜಿಸಲಾಗಿದೆ. ಸೆಬಿಯ ಆಡಳಿತವನ್ನು ಮತ್ತಷ್ಟು ಬಲಪಡಿಸಲಾಗಿದೆ. ಹೂಡಿಕೆದಾರರ ಹಿತಾಸಕ್ತಿಯನ್ನು ರಕ್ಷಿಸಲಾಗಿದೆ.

ಭಾರತಕ್ಕೆ ಶೀಘ್ರದಲ್ಲೇ ಗುಡ್‌ನ್ಯೂಸ್‌ ನೀಡ್ತಾರಾ ಡೊನಾಲ್ಡ್‌ ಟ್ರಂಪ್‌? ಸುಂಕ ಕಡಿತದ ಬಗ್ಗೆ ಭಾರತೀಯ ರಾಯಭಾರಿ ಹೇಳಿದ್ದೇನು?

ಪ್ರಮುಖ ವ್ಯಾಪಾರ ಒಪ್ಪಂದಗಳ ಕಾಲ

ಭಾರತವು 2025ರಲ್ಲಿ ಒಮಾನ್‌, ಬ್ರಿಟನ್‌ ಮತ್ತು ನ್ಯೂಜಿಲೆಂಡ್‌ ಜತೆಗೆ ಪ್ರಮುಖ ವ್ಯಾಪಾರ ಒಪ್ಪಂದವನ್ನು ಮಾಡಿಕೊಂಡಿದೆ. 2025ರ ಅಕ್ಟೋಬರ್‌ 1ರಿಂದ ಭಾರತ-ಇಎಫ್‌ ಟಿಎ ಟಿಇಪಿಎ ಜಾರಿಯಾಗಿದೆ. ಇದರಿಂದ ಸುಂಕ ರಹಿತ ರಫ್ತು ಅವಕಾಶ ಹೆಚ್ಚಳವಾಗಿದೆ. ಹೂಡಿಕೆಯ ಒಳ ಹರಿವು ಏರಿಕೆಯಾಗಿದೆ.

2025ರಲ್ಲಿ ದೀರ್ಘಕಾಲದಿಂದ ನನೆಗುದಿಯಲ್ಲಿದ್ದ ಪರಮಾಣು ಇಂಧನ ವಲಯದ ಸುಧಾರಣೆಯ ಕ್ರಮಗಳೂ ಜರುಗಿರುವುದು ವಿಶೇಷ. ಪರಮಾಣು ಇಂಧನ ಮತ್ತು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ವಲಯದ ಪಾಲ್ಗೊಳ್ಳುವಿಕೆಗೆ ಇದರಿಂದ ಉತ್ತೇಜನ ಸಿಕ್ಕಿದೆ. ಪರಮಾಣು ವಿದ್ಯುತ್‌ ವಲಯದಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಗೆ ಶಾಂತಿ ಕಾಯಿದೆ ಜಾರಿಯಾಗಿದೆ. ವಿಕಸಿತ್‌ ಭಾರತ್‌ ಶಿಕ್ಷಾ ಅಧಿಷ್ಠಾನ್‌ ವಿಧೇಯಕದ ಮೂಲಕ ಉನ್ನತ ಶಿಕ್ಷಣದಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಗೆ ಪ್ರೋತ್ಸಾಹ ನೀಡಲಾಗಿದೆ. 2047ರಲ್ಲಿ ವಿಕಸಿತ ಭಾರತದ ಹೊಸ ಪರ್ವಕ್ಕೆ ಇದು ಪೂರಕವಾಗಿದೆ.