ಪ್ರತಿಯೊಬ್ಬರಲ್ಲೂ ಇರಲೇಬೇಕು ಟರ್ಮ್ ಇನ್ಶೂರೆನ್ಸ್; ಇದರಿಂದ ಏನು ಲಾಭ? ಈ ಬಗ್ಗೆ ತಜ್ಞರ ಅಭಿಮತ ಇಲ್ಲಿದೆ
ಟರ್ಮ್ ಇನ್ಶೂರೆನ್ಸ್ ನಿರ್ದಿಷ್ಟ ಅವಧಿ ಪೂರ್ಣಗೊಂಡ ಬಳಿಕವೇ ನಮ್ಮ ಕೈಗೆ ಸಿಗುತ್ತದೆ. ಇಲ್ಲವಾದರೆ ಯಾವುದಾದರೂ ದುರಂತ ಸಂಭವಿಸಿದಾಗ ಮಾತ್ರ ಈ ಮೊತ್ತ ನಮ್ಮನ್ನು ಅವಲಂಬಿಸಿದವರ ಕೈಗೆ ಹೋಗುತ್ತದೆ. ಹೀಗಾಗಿ ಇದನ್ನು ಖರೀದಿ ಮಾಡುವುದು ವ್ಯರ್ಥ ಎನ್ನುವ ಯೋಚನೆ ಸಾಕಷ್ಟು ಮಂದಿಯಲ್ಲಿ ಇದೆ. ಆದರೆ ಇದನ್ನು ಪ್ರತಿಯೊಬ್ಬರು ಮಾಡಲೇಬೇಕು. ಅದೂ ಸಂಪೂರ್ಣ ಜೀವಿತಾವಧಿಯ ಕಾಲಕ್ಕೆ ಎನ್ನುತ್ತಾರೆ ಹಣಕಾಸು ತಜ್ಞ ಜಿ.ಎಂ. ಜಗನ್ನಾಥ್.
ಜಿ.ಎಂ. ಜಗನ್ನಾಥ್ -
ಬೆಂಗಳೂರು, ಡಿ. 8: ಜೀವನ ಮುಖ್ಯ. ಆದರೆ ಅದಕ್ಕಿಂತ ಹೆಚ್ಚು ಮುಖ್ಯವಾದದ್ದು ಜೀವ. ಹೀಗಾಗಿ ಪ್ರತಿಯೊಬ್ಬರು ಸುಖ, ಶಾಂತಿ, ನೆಮ್ಮದಿಯಿಂದ ಬದುಕಲು ಅವಧಿ ವಿಮೆಯನ್ನು (Term insurance) ಖರೀದಿಸುವುದು ಮುಖ್ಯ ಎನ್ನುತ್ತಾರೆ ಹಣಕಾಸು ತಜ್ಞ ಜಿ.ಎಂ. ಜಗನ್ನಾಥ್ (GM Jagannath). 'ವಿಶ್ವವಾಣಿ ಮನಿ' (Vishwavani money) ಯೂಟ್ಯೂಬ್ ಚಾನಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಟರ್ಮ್ ಇನ್ಶೂರೆನ್ಸ್ ನಮ್ಮ ಜೀವಕ್ಕೆ ಮಾತ್ರವಲ್ಲ ನಮ್ಮನ್ನು ಅವಲಂಬಿಸಿದವರನ್ನು ಕೂಡ ಕಾಪಾಡುತ್ತದೆ ಎಂದು ಹೇಳಿದರು.
ಪ್ರತಿಯೊಬ್ಬರು ಕೆಲಸಕ್ಕೆ ಸೇರಿದಾಗಲೇ ಟರ್ಮ್ ಇನ್ಶೂರೆನ್ಸ್ ಅಥವಾ ಅವಧಿ ವಿಮೆಯನ್ನು ಖರೀದಿಸಬೇಕು. ಅದೂ ಸಂಪೂರ್ಣ ಜೀವಿತಾವಧಿಯ ಕಾಲಕ್ಕೆ. ಯಾಕೆಂದರೆ ಇದರಿಂದ ಸಾಕಷ್ಟು ಲಾಭವಿದೆ ಎಂದು ಅವರು ತಿಳಿಸಿದರು.
ಚಿನ್ನ ಯಾವಾಗ ಖರೀದಿಸಬೇಕು? ನಿಮ್ಮೆಲ್ಲ ಗೊಂದಲಗಳಿಗೆ ಇಲ್ಲಿದೆ ಉತ್ತರ
21ನೇ ವರ್ಷದಲ್ಲಿ ಸಾಮಾನ್ಯವಾಗಿ ನಾವು ಕೆಲಸಕ್ಕೆ ಸೇರುತ್ತೇವೆ. ಆಗ ದೇವರಿಗೆ ಹೇಗೆ ನಾವು ಹಣ ಎತ್ತಿಡುತ್ತೇವೆಯೋ ಅಂತೆಯೇ ವಿಮೆಗೂ ಎತ್ತಿಟ್ಟುಕೊಳ್ಳಬೇಕು. ಯಾಕೆಂದರೆ ನಾವು 21 ವರ್ಷಕ್ಕೆ ಅವಧಿ ವಿಮೆಯಲ್ಲಿ ವರ್ಷಕ್ಕೆ 12 ಸಾವಿರ ಹೂಡಿಕೆ ಮಾಡಿದರೆ ಒಂದು ಕೋಟಿ ರೂ. ವಿಮೆ ಮೊತ್ತವನ್ನು ಪಡೆಯಬಹುದು. ಅದೇ 25 ವರ್ಷಕ್ಕೆ ಸೇರಿದರೆ ಆಗ ವರ್ಷಕ್ಕೆ 15 ಸಾವಿರ ರೂ. ಹೂಡಿಕೆ ಮಾಡಬೇಕಾಗುತ್ತದೆ. ವಯಸ್ಸು ಹೆಚ್ಚಾದಂತೆ ವಿಮೆಯ ಪ್ರೀಮಿಯಂ ಮೊತ್ತವೂ ಹೆಚ್ಚಾಗುತ್ತದೆ. ಅದಕ್ಕಾಗಿ ಕಡಿಮೆ ವಯಸ್ಸಿನಲ್ಲೇ ಅವಧಿ ವಿಮೆಯಲ್ಲಿ ಹಣ ಹೂಡಿಕೆ ಮಾಡುವುದು ಒಳ್ಳೆಯದು ಎಂದರು.
ಟರ್ಮ್ ಇನ್ಶೂರೆನ್ಸ್ ಬಗ್ಗೆ ಇಲ್ಲಿದೆ ಮಾಹಿತಿ:
ವಯಸ್ಸು ಹೆಚ್ಚಾದಂತೆ ವಿಮೆ ಖರೀದಿ ಮಾಡಬೇಕಾದರೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಮೆಡಿಕಲ್ ಸರ್ಟಿಫಿಕೇಟ್ ಬೇಕಾಗುತ್ತದೆ. ಜತೆಗೆ ಕೆಲವು ಕಾನೂನು ತೊಡಕುಗಳು ಕೂಡ ಉಂಟಾಗುತ್ತದೆ. ಹೀಗಾಗಿ 60 ವರ್ಷದವನು ಒಂದು ವೇಳೆ ಒಂದು ಕೋಟಿ ರೂ.ಯ ಅವಧಿ ವಿಮೆ ಮಾಡಬೇಕಾದರೆ ವರ್ಷಕ್ಕೆ 2.4 ಲಕ್ಷ ರೂ. ಕಟ್ಟಬೇಕಾಗುತ್ತದೆ. ಸಣ್ಣ ವಯಸ್ಸಿನಲ್ಲೇ ಅವಧಿ ವಿಮೆಯನ್ನು ಪ್ರಾರಂಭಿಸಿದರೆ ಇದರ ಪ್ರೀಮಿಯಂ ಮೊತ್ತ ಅದರ ಅವಧಿ ಮುಗಿಯುವವರೆಗೆ ಒಂದೇ ರೀತಿ ಇರುತ್ತದೆ ಎಂದು ಅವರು ತಿಳಿಸಿದರು.
ವಿಮೆ ಖರೀದಿ ಮಾಡುವಾಗ ನಮಗೆ ಸೂಕ್ತ ಪಾಲಿಸಿ ತೆಗೆದುಕೊಳ್ಳುವುದು ಬಹಳ ಮುಖ್ಯ. ಪ್ರತಿಯೊಬ್ಬರು ಗರಿಷ್ಠ ತಾವು ಜೀವಿಸಬಹುದಾದ ಗರಿಷ್ಠ ವಯಸ್ಸು 80 ವರ್ಷದವರೆಗಿನ ಪಾಲಿಸಿ ತೆಗೆದುಕೊಂಡು ಇಟ್ಟಿರುವುದು ಸುರಕ್ಷಿತವಾಗಿದೆ. ಇದರಿಂದ ಪಾಲಿಸಿ ತೆಗೆದುಕೊಂಡವರು ಮಾತ್ರವಲ್ಲ ಅವರನ್ನು ಅವಲಂಬಿಸಿದವರು ಕೂಡ ಸುರಕ್ಷಿತವಾಗಿರುತ್ತಾರೆ ಎಂದು ಹೇಳಿದರು.
ಅವಧಿ ವಿಮೆಯಲ್ಲಿ ಬದುಕಿದ್ದಾಗ ಹಣ ಸಿಗೋದಿಲ್ಲ. ಇದು ನಾವು ಬದುಕಿರುವವರೆಗೆ ನಮಗೆ ಕೇವಲ ವಿಮೆ ಸುರಕ್ಷತೆಯನ್ನು ಒದಗಿಸುತ್ತದೆ. ಎಂಡೋ ಮೆಂಟ್ ಪಾಲಿಸಿಯಲ್ಲಿ ಮಧ್ಯೆ ಬೋನಸ್, ಕಟ್ಟಿರುವ ಮೊತ್ತವನ್ನು ತೆಗೆಯಬಹುದು. ಇದರಿಂದ ಅವಧಿ ಪೂರ್ಣಗೊಂಡಾಗ ಸಣ್ಣ ಮೊತ್ತವಷ್ಟೇ ನಮ್ಮ ಕೈ ಸೇರುತ್ತದೆ. ಅದರ ಬದಲು ಅದೇ ಮೊತ್ತವನ್ನು ಅವಧಿ ವಿಮೆ ಮತ್ತು ಪಿಪಿಎಫ್ ನಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಮೊತ್ತ ನಮ್ಮ ಕೈ ಸೇರುತ್ತದೆ. ಮಾತ್ರವಲ್ಲ ನಾವು ಸುರಕ್ಷಿತವಾಗಿ, ಸಂತೋಷದಿಂದ ಜೀವನ ಕಳೆಯಬಹುದಾಗಿದೆ ಎಂದು ಅವರು ತಿಳಿಸಿದರು.
ದೀರ್ಘಾವಧಿಯ ಅವಧಿ ವಿಮೆ ಖರೀದಿ ಮಾಡುವಾಗ ಕಂಪನಿ ಮುಚ್ಚಿ ಹೋಗಬಹುದು ಎನ್ನುವ ಭಯ ಬೇಡ. ಯಾಕೆಂದರೆ ಭಾರತದಲ್ಲಿ ಯಾವ ಬ್ಯಾಂಕ್ ಕೂಡ ಈವರೆಗೆ ಮುಚ್ಚಿಲ್ಲ. ಬ್ಯಾಂಕ್‌ಗಳು ವಿಲೀನವಾಗಿವೆ. ಹೀಗಾಗಿ ಈ ಬಗ್ಗೆ ಭಯ ಬೇಡ ಎಂದ ಅವರು, ಒಂದು ವೇಳೆ ಬ್ಯಾಂಕ್‌ಗಳು ಮುಚ್ಚಿದರೆ ಎನ್ನುವ ಭಯವಿರುವವರು ಎರಡು- ಮೂರು ಕಂಪನಿಗಳಲ್ಲಿ ಹೂಡಿಕೆ ಮಾಡಬಹುದು ಎಂದರು.
ರೆಪೊ ದರ ಇಳಿಕೆಯ ಬಳಿಕ 50 ಲಕ್ಷ ರೂ. ಗೃಹ ಸಾಲದಲ್ಲಿ ಎಷ್ಟು ಇಳಿಕೆಯಾಗಲಿದೆ?
ವಿಮೆ ಖರೀದಿ ಮಾಡುವಾಗ ನಾಮಿನೇಷನ್ ಇದೆ. ಆದರೆ ಆ ಬಗ್ಗೆ ಯಾರಲ್ಲಿಯೂ ಹೇಳಿಕೊಳ್ಳಬೇಕಾಗಿಲ್ಲ. ವಿಮೆಗೆ ಜಿಎಸ್‌ಟಿ ತೆಗೆದುಹಾಕಲಾಗಿದೆ. ಇದಕ್ಕೆ ತೆರಿಗೆ ವಿನಾಯಿತಿಯೂ ಇದೆ ಎಂದು ಹೇಳಿದರು.
ವಯಸ್ಸಾದವರು ಕೂಡ ವಿಮೆಯನ್ನು ಖರೀದಿಸಬಹುದು. ಇವರಿಗೆ ರಿಸ್ಕ್ ಹೆಚ್ಚಾಗಿರುವುದರಿಂದ ಪ್ರೀಮಿಯಂ ಮೊತ್ತ ಹೆಚ್ಚಾಗಿರುತ್ತದೆ. ಸಣ್ಣ ವಯಸ್ಸಿನಲ್ಲೇ ಅವಧಿ ವಿಮೆ ಖರೀದಿ ಮಾಡುವುದರಿಂದ ಪ್ರೀಮಿಯಂ ಮೊತ್ತ ಕಡಿಮೆ ಇರುತ್ತದೆ. ಕೆಲಸಕ್ಕೆ ಸೇರಿದ ತಕ್ಷಣ ತಗೊಂಡರೆ ವಿಮೆ ಅವಧಿ ಪೂರ್ತಿ ಒಂದೇ ರೀತಿಯ ಪ್ರೀಮಿಯಂ ಮೊತ್ತವಿರುತ್ತದೆ. ಹೀಗಾಗಿ ವಯಸ್ಸಾದಂತೆ ಯಾರಿಗೂ ಹೆಚ್ಚು ಹೊರೆಯಾಗುವುದಿಲ್ಲ ಎಂದು ಅವರು ತಿಳಿಸಿದರು.