ನವದೆಹಲಿ, ಜ. 27: ಯುರೋಪಿಯನ್ ಒಕ್ಕೂಟದೊಂದಿಗೆ (European Union) ಭಾರತವು ನಡೆಸಿರುವ ಮುಕ್ತ ವ್ಯಾಪಾರ ಒಪ್ಪಂದದ (Free Trade Agreement) ಪರಿಣಾಮ ಯುರೋಪ್ ಉತ್ಪನ್ನಗಳ ರಫ್ತಿನ ಮೇಲೆ ಶೇ. 97ರಷ್ಟು ಸುಂಕ ಕಡಿತವಾಗಲಿದೆ. ಇದರಿಂದ ಭಾರತೀಯ ಗ್ರಾಹಕರಿಗೆ ಹಲವು ವಸ್ತುಗಳು (European products) ಅತ್ಯಂತ ಕಡಿಮೆ ಬೆಲೆಗೆ ಇದೆ. ಜತೆಗೆ ಭವಿಷ್ಯದಲ್ಲಿ ಭಾರತೀಯರಿಗೆ ಕೃಷಿ, ಆಟೋ ಮೊಬೈಲ್ ಸೇರಿದಂತೆ ಹಲವು ಕ್ಷೇತ್ರಗಳ ವಸ್ತುಗಳು ಅತ್ಯಂತ ಕಡಿಮೆ ಬೆಲೆಗೆ ಲಭ್ಯವಾಗಲಿದೆ. ಈ ಕುರಿತು ಮಂಗಳವಾರ (ಜನವರಿ 27) ಘೋಷಣೆ ಹೊರಡಿಸಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi), ಭಾರತವು ಯುರೋಪಿಯನ್ ಒಕ್ಕೂಟದೊಂದಿಗೆ ನಡೆಸಿರುವ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಯುರೋಪಿಯನ್ ಒಕ್ಕೂಟದ ಸರಕುಗಳ ರಫ್ತಿನ ಮೇಲೆ ಶೇ. 96.6ರಷ್ಟು ಸುಂಕಗಳನ್ನು ತೆಗೆದು ಹಾಕುವುದಾಗಿ ತಿಳಿಸಿದರು.
ಐತಿಹಾಸಿಕವಾಗಿರುವ ಈ ಮುಕ್ತ ವ್ಯಾಪಾರ ಒಪ್ಪಂದದ ಪರಿಣಾಮ ಯುರೋಪ್‌ನಿಂದ ಆಮದಾಗುವ ಐಷಾರಾಮಿ ಕಾರ್, ವೈನ್, ಆಲಿವ್ ಎಣ್ಣೆ, ಚಾಕೊಲೇಟ್‌ಗಳು ಸೇರಿದಂತೆ ಹಲವು ವಸ್ತುಗಳ ಮೇಲಿನ ಆಮದು ಸುಂಕ ಕಡಿತವಾಗಲಿದೆ. ಇದರಿಂದ ಈ ವಸ್ತುಗಳು ಭಾರತದಲ್ಲಿ ಅಗ್ಗವಾಗಲಿವೆ. ಇದರೊಂದಿಗೆ ಭಾರತದ ರೈತರ ಹಿತಾಸಕ್ತಿಯನ್ನು ಪರಿಗಣಿಸಿ ಅಕ್ಕಿ, ಸಕ್ಕರೆ ಮತ್ತು ಕೋಳಿ ಮಾಂಸದಂತಹ ಕೃಷಿ ವಲಯಗಳನ್ನು ಸುಂಕ ಕಡಿತದ ಪಟ್ಟಿಯಿಂದ ಹೊರಗಿಡಲಾಗಿದೆ.
ಆಮದು ಕಾರ್‌ಗಳ ಮೇಲಿನ ಸುಂಕವನ್ನು ಶೇ. 40 ಇಳಿಸಲು ಭಾರತ ನಿರ್ಧಾರ; ಕಾರ್ ಬೆಲೆ ಅಗ್ಗವಾಗುವ ಸಾಧ್ಯತೆ
ಯಾವುದು ಅಗ್ಗ?
ಒಪ್ಪಂದದಡಿ ಪ್ರಸ್ತುತ ಸರಾಸರಿ ಶೇ. 36ಕ್ಕಿಂತ ಹೆಚ್ಚಿರುವ ಕೃಷಿ- ಆಹಾರ ಸಂಬಂಧಿತ ವಸ್ತುಗಳ ಮೇಲಿನ ಸುಂಕಗಳನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ. ಇದರಲ್ಲಿ ಯುರೋಪಿಯನ್ ವೈನ್‌ಗಳ ಮೇಲಿನ ಸುಂಕವನ್ನು ಆರಂಭದಲ್ಲಿ ಶೇ. 150ರಿಂದ ಶೇ. 75ಕ್ಕೆ, ಅನಂತರ ಶೇ. 20ರವರೆಗೆ ಹಂತಹಂತವಾಗಿ ಇಳಿಸಲಾಗುತ್ತದೆ.
ಆಲಿವ್ ಎಣ್ಣೆಯ ಮೇಲಿನ ಸುಂಕವನ್ನು ಶೇ. 45ರಷ್ಟು ಇಳಿಸಿ ಬಳಿಕ ಸಂಪೂರ್ಣವಾಗಿ ರದ್ದುಗೊಳಿಸಲು ನಿರ್ಧರಿಸಲಾಗಿದೆ. ಬ್ರೆಡ್, ಪೇಸ್ಟ್ರಿ, ಚಾಕೊಲೇಟ್ ಮತ್ತು ಮಿಠಾಯಿಗಳಂತಹ ಸಂಸ್ಕರಿಸಿದ ಆಹಾರ ಪದಾರ್ಥಗಳ ಮೇಲಿನ ಸುಂಕವನ್ನು ಶೇ. 50ರಷ್ಟು ತೆಗೆದುಹಾಕಲು ನಿರ್ಧರಿಸಲಾಗಿದೆ.
ಟಾರಿಫ್ ಕಡಿತವಾಗಲಿರುವ ಉತ್ಪನ್ನಗಳು
| ಉತ್ಪನ್ನ | ಪ್ರಸ್ತುತ ಇರುವ ಟಾರಿಫ್ | ಭವಿಷ್ಯದ ಟಾರಿಫ್ |
|---|---|---|
| ಮೆಷಿನ್ ಮತ್ತು ಎಲೆಕ್ಟ್ರಿಕಲ್ ಉಪಕರಣ | ಶೇ. 44ರ ತನಕ | ಬಹುತೇಕ ಎಲ್ಲ ಉತ್ಪನ್ನಗಳಿಗೆ ಶೇ. 0 |
| ಏರ್‌ಕ್ರಾಫ್ಟ್ ಮತ್ತು ಸ್ಪೇಸ್‌ಕ್ರಾಫ್ಟ್ | ಶೇ. 11ರ ತನಕ | ಬಹುತೇಕ ಎಲ್ಲ ಉತ್ಪನ್ನಗಳಿಗೆ ಶೇ. 0 |
| ಆಪ್ಟಿಕಲ್, ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಉಪಕರಣಗಳು | ಶೇ. 27.5ರ ತನಕ | 90 ಉತ್ಪನ್ನಗಳಿಗೆ ಶೇ. 0 |
| ಪ್ಲಾಸ್ಟಿಕ್ | ಶೇ. 16.5 ತನಕ | ಬಹುತೇಕ ಎಲ್ಲ ಉತ್ಪನ್ನಗಳಿಗೆ ಶೇ. 0 |
| ಮುತ್ತು, ಅಮೂಲ್ಯ ಕಲ್ಲು ಮತ್ತು ಲೋಹ | ಶೇ. 22.5 ತನಕ | 20ರಷ್ಟು ಉತ್ಪನ್ನಗಳಿಗೆ ಶೇ. 0 |
| ರಾಸಾಯನಿಕಗಳು | ಶೇ. 22 ತನಕ | ಬಹುತೇಕ ಎಲ್ಲ ಉತ್ಪನ್ನಗಳಿಗೆ ಶೇ. 0 |
| ವಾಹನಗಳು | ಶೇ. 110 | ಶೇ. 10 |
| ಕಬ್ಬಿಣ ಮತ್ತು ಸ್ಟೀಲ್ | ಶೇ. 22 ತನಕ | ಬಹುತೇಕ ಎಲ್ಲ ಉತ್ಪನ್ನಗಳಿಗೆ ಶೇ. 0 |
| ಔಷಧಗಳು | ಶೇ. 11 ತನಕ | ಬಹುತೇಕ ಎಲ್ಲ ಉತ್ಪನ್ನಗಳಿಗೆ ಶೇ. 0 |
ಕೃಷಿ ವಲಯಗಳಿಗೆ ಸುಂಕ ಕಡಿತವಿಲ್ಲ
ಕೃಷಿ ವಲಯವನ್ನು ಪರಿಗಣಿಸಿ ಗೋಮಾಂಸ, ಕೋಳಿ ಮಾಂಸ, ಅಕ್ಕಿ, ಸಕ್ಕರೆ ಮತ್ತು ಎಥೆನಾಲ್ ಉತ್ಪನ್ನಗಳ ಮೇಲಿನ ಸುಂಕದಲ್ಲಿ ಯಾವುದೇ ಕಡಿತ ಮಾಡಿಲ್ಲ. ಯುರೋಪ್‌ನ ಕಟ್ಟುನಿಟ್ಟಾದ ಆಹಾರ ಸುರಕ್ಷತಾ ಮಾನದಂಡಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ.
ಟಾರಿಫ್ ಕಡಿತವಾಗಲಿರುವ ಉತ್ಪನ್ನಗಳು
| ಉತ್ಪನ್ನ | ಪ್ರಸ್ತುತ ಟಾರಿಫ್ | ಭವಿಷ್ಯದ ಟಾರಿಫ್ |
|---|---|---|
| ವೈನ್ | ಶೇ. 150 | ಶೇ. 20ರಿಂದ ಶೇ. 30 |
| ಸ್ಪಿರಿಟ್ | ಶೇ. 150ರ ತನಕ | ಶೇ. 40 |
| ಬಿಯರ್ | ಶೇ. 110 | ಶೇ. 50 |
| ಆಲಿವ್ ಎಣ್ಣೆ, ಮಾರ್ಗರೀನ್ ಮತ್ತು ಇತರ ಸಸ್ಯಜನ್ಯ ಎಣ್ಣೆಗಳು | ಶೇ. 45 ತನಕ | ಶೇ. 0 |
| ಕಿವಿ ಹಣ್ಣು | ಶೇ. 33 | ಶೇ. 10 |
| ಜ್ಯೂಸ್ ಮತ್ತು ಅಲ್ಕೋಹಾಲ್ ರಹಿತ ಬಿಯರ್ | ಶೇ. 55 ತನಕ | ಶೇ. 0 |
| ಸಂಸ್ಕರಿಸಿದ ಆಹಾರ (ಬ್ರೆಡ್, ಪೇಸ್ಟ್ರಿ, ಬಿಸ್ಕೇಟ್, ಪಾಸ್ತಾ, ಚಾಕೊಲೇಟ್, ಸಾಕುಪ್ರಾಣಿಗಳ ಆಹಾರ) | ಶೇ. 50 ತನಕ | ಶೇ. 0 |
| ಕುರಿ ಮಾಂಸ | ಶೇ. 33 | ಶೇ. 0 |
| ಸಾಸೇಜ್ | ಶೇ. 110 | ಶೇ. 50 |
ಇಳಿಕೆಯಾಗಲಿದೆ ಕಾರ್‌ಗಳ ಬೆಲೆ
ಯುರೋಪಿಯನ್ ಯೂನಿಯನ್‌ನೊಂದಿಗಿನ ವ್ಯಾಪಾರ ಒಪ್ಪಂದದಿಂದ ವಿದೇಶಗಳಿಂದ ಕಾರುಗಳ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಲಿದೆ. ಯುರೋಪಿಯನ್ ಒಕ್ಕೂಟ ರಾಷ್ಟ್ರಗಳಿಂದ ಆಮದು ಮಾಡುವ ಕಾರ್‌ಗಳ ಮೇಲಿನ ಸುಂಕವನ್ನು ಶೇ. 110ರಿಂದ ಶೇ. 10ಕ್ಕೆ ಇಳಿಸಲು ಭಾರತ ನಿರ್ಧರಿಸಿದೆ. ಇನ್ನು ಸ್ಥಳೀಯವಾಗಿ ಜೋಡಣೆ ಮಾಡಲು ಆಮದಾಗುವ ಬಿಡಿಭಾಗಗಳ ಕಿಟ್‌ಗಳ ಮೇಲೆ ಶೇ. 16.5ರಷ್ಟು ಸುಂಕ ವಿಧಿಸಲಾಗುತ್ತಿದ್ದು, ಇದನ್ನು ಮುಂದಿನ 5ರಿಂದ 10 ವರ್ಷಗಳ ಅವಧಿಯಲ್ಲಿ ಸಂಪೂರ್ಣವಾಗಿ ರದ್ದುಗೊಳಿಸಲು ತೀರ್ಮಾನಿಸಲಾಗಿದೆ. ಇದರಿಂದ ಮರ್ಸಿಡಿಸ್ ಬೆಂಜ್, ಬಿಎಂಡಬ್ಲ್ಯು ಮತ್ತು ಆ್ಯಡಿ ಕಂಪೆನಿಗಳ ಕಾರ್‌ಗಳು, ಲಂಬೋರ್ಗಿನಿ, ಪೋರ್ಷೆ, ಫೆರಾರಿ, ಮಸೆರಾಟಿ, ರೋಲ್ಸ್ ರಾಯ್ಸ್ ಮತ್ತು ಬೆಂಟ್ಲಿಯಂತಹ ಐಷಾರಾಮಿ ಕಾರ್‌ಗಳ ಬೆಲೆ ಗಣನೀಯವಾಗಿ ಇಳಿಕೆಯಾಗಲಿದೆ.
ಭಾರತ–ಇಯು ವ್ಯಾಪಾರ ಒಪ್ಪಂದಕ್ಕೆ ಸಹಿ: ಅಮೆರಿಕದ ಮೇಲೆ ಪರಿಣಾಮವೇನು?
ಇಷ್ಟು ಮಾತ್ರವಲ್ಲದೆ ಈ ಒಪ್ಪಂದದಡಿ ಜಿಐ ಟ್ಯಾಗ್ ನೀಡುವ ಬಗ್ಗೆಯೂ ಮಾತುಕತೆ ನಡೆಸಲಾಗುತ್ತಿದೆ. ಇದರಿಂದ ಯುರೋಪಿಯನ್ ಕೃಷಿ ಉತ್ಪನ್ನಗಳ ನಕಲಿಗೆ ತಡೆ ಬೀಳಲಿದೆ. ಭಾರತದಲ್ಲಿ ಅಸಲಿ ಉತ್ಪನ್ನಗಳು ಗ್ರಾಹಕರ ಕೈಸೇರುವುದನ್ನು ಇದು ಖಚಿತ ಪಡಿಸಲಿದೆ ಎನ್ನಲಾಗುತ್ತಿದೆ.