ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದುಪ್ಪಟ್ಟಾದ ಜೆಟ್‌ ಇಂಧನ ಬೆಲೆ; ವಿಮಾನ ಪ್ರಯಾಣಿಕರ ಜೇಬಿಗೆ ಬೀಳಲಿದೆ ಕತ್ತರಿ

ಪಶ್ಚಿಮ ಏಷ್ಯಾದಲ್ಲಿ ಯುದ್ಧ ಪ್ರಾರಂಭವಾದ ಬಳಿಕ ಜಾಗತಿಕ ಮಟ್ಟದಲ್ಲಿ ಮೊದಲು ಕಾಣಿಸಿಕೊಂಡಿದ್ದೇ ತೈಲ ಬಿಕ್ಕಟ್ಟು. ಇದರ ಪರಿಣಾಮ ಇಂಧನ ಬೆಲೆ ಏರಿಕೆ, ಅದನ್ನು ಅವಲಂಬಿಸಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆ ಮುನ್ಸೂಚನೆ ಎಲ್ಲರಿಗೂ ಇತ್ತು. ಇದರ ಹೊರೆಯನ್ನು ಈಗ ವಿಮಾನ ಪ್ರಯಾಣಿಕರು ಭರಿಸಬೇಕಾಗಿದೆ. ಯಾಕೆಂದರೆ ಇನ್ನು ಮುಂದೆ ವಿಮಾನ ಪ್ರಯಾಣವು ದುಬಾರಿ ಎನಿಸಲಿದೆ.

ವಿಮಾನ ಪ್ರಯಾಣ ಇನ್ನು ಬಲು ದುಬಾರಿ

ಸಂಗ್ರಹ ಚಿತ್ರ -

ನವದೆಹಲಿ: ದೇಶದಲ್ಲಿ ಇಂಧನ ಬೆಲೆ ಹೆಚ್ಚಳವಾಗಿರುವುದರಿಂದ ವಿಮಾನ ಪ್ರಯಾಣ (Indian airlines) ಇನ್ನು ದುಬಾರಿಯಾಗಲಿದೆ. ಗ್ರಾಹಕರಿಗೆ ಹೆಚ್ಚು ಹೊರೆಯಾಗದಂತೆ ವಿಮಾನ ಪ್ರಯಾಣ ದರ ಹೆಚ್ಚಿಸಿರುವುದಾಗಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ (Ministry of Petroleum and Natural Gas) ಹೇಳಿದ್ದರೂ ಕೂಡ ಇನ್ನು ವಿಮಾನ ಪ್ರಯಾಣಿಕರ ಜೇಬಿಗೆ ಹೊರೆ ಬೀಳುವುದು ಖಚಿತ. ದೇಶೀಯ ವಿಮಾನಗಳ (domestic airlines) ಬೆಲೆಯಲ್ಲಿ ಭಾಗಶಃ ಏರಿಕೆ ಮಾಡಲಾಗಿದ್ದು, ಅಂತಾರಾಷ್ಟ್ರೀಯ ವಿಮಾನಗಳ (international airlines) ಬೆಲೆ ಮಾತ್ರ ದುಪ್ಪಟ್ಟಾಗಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಪರಿಣಾಮ ಜಾಗತಿಕವಾಗಿ ಇಂಧನ ಬೆಲೆಗಳು ಹೆಚ್ಚಳವಾಗಿದ್ದು, ಈ ಹಿನ್ನೆಲೆಯಲ್ಲಿ ದೇಶದಲ್ಲಿ ವಿಮಾನ ಪ್ರಯಾಣ ದರ ಕೂಡ ಹೆಚ್ಚಳಗೊಳಿಸಲಾಗಿದೆ.

ಕಳೆದ ಫೆಬ್ರವರಿ ತಿಂಗಳ ಅಂತ್ಯದಲ್ಲಿ ಇರಾನ್ ಮೇಲೆ ಯುಎಸ್ ಮತ್ತು ಇಸ್ರೇಲ್ ಸೇನಾ ಪಡೆಯು ದಾಳಿ ನಡೆಸಿದ ಬಳಿಕ ವಾಯುಯಾನ ಟರ್ಬೈನ್ ಇಂಧನ (ಎಟಿಎಫ್) ಅಥವಾ ಜೆಟ್ ಇಂಧನದ ಬೆಲೆಗಳು ಜಾಗತಿಕ ಮಟ್ಟದಲ್ಲಿ ಏರಿಕೆಯಾಗಿದೆ. ಆದರೆ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ಭಾರತದಲ್ಲಿ ದೇಶೀಯ ನಿಗದಿತ ವಿಮಾನಗಳ ಇಂಧನದ ಬೆಲೆಯನ್ನು ಭಾಗಶಃ ಮಾತ್ರ ಹೆಚ್ಚಿಸಿವೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ (ಎಂಒಪಿಎನ್‌ಜಿ) ತಿಳಿಸಿದೆ.

ಎಚ್.ಡಿ.ಎಫ್.ಸಿ. ಬ್ಯಾಂಕ್ `ಭಾರತದ ಅತ್ಯಂತ ಸುರಕ್ಷಿತ ಖಾಸಗಿ ಬ್ಯಾಂಕ್’ ಮತ್ತು `ಪ್ರೀಮಿಯರ್ ಬ್ಯಾಂಕಿಂಗ್ ಗೆ ಭಾರತದ ಅತ್ಯುತ್ತಮ’ ಎಂಬ ಪುರಸ್ಕಾರಗಳಿಗೆ ಭಾಜನ

ಜೆಟ್ ಇಂಧನದ ಅಂತಾರಾಷ್ಟ್ರೀಯ ಬೆಲೆ ಏರಿಕೆಯನ್ನು ಗಮನಿಸಿದರೆ ಭಾರತದಲ್ಲಿ ಏಪ್ರಿಲ್ 1 ರಿಂದ ವಿಮಾನ ಪ್ರಯಾಣ ದರ ದುಪ್ಪಟ್ಟಾಗುವ ನಿರೀಕ್ಷೆ ಇತ್ತು. ಆದರೆ ನಿಗದಿತ ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ಭಾಗಶಃ ಬೆಲೆ ಹೆಚ್ಚಳ ಮಾಡಲಾಗಿದ್ದು, ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಮಾರುಕಟ್ಟೆ ಸಂಬಂಧಿತ ಬೆಲೆಯನ್ನು ಪಾವತಿಸಬೇಕಾಗುತ್ತದೆ. ಖಾಸಗಿ ಚಾರ್ಟರ್ ಆಪರೇಟರ್‌ಗಳಂತೆ ನಾನ್-ಶೆಡ್ಯೂಲ್ಡ್ ಆಪರೇಟರ್‌ಗಳು ಕೂಡ ಸಂಪೂರ್ಣ ದರವನ್ನು ಪಾವತಿಸಬೇಕು ಎಂದು ಸಚಿವಾಲಯ ತಿಳಿಸಿದೆ.

ವಾಯುಯಾನ ಟರ್ಬೈನ್ ಇಂಧನ ಬೆಲೆಗಳಲ್ಲಿನ ತೀವ್ರ ಏರಿಕೆಯ ಪರಿಣಾಮವನ್ನು ಕಡಿಮೆ ಮಾಡುವ ಸಲುವಾಗಿ ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ಭಾಗಶಃ ಬೆಲೆ ಹೆಚ್ಚಳಕ್ಕೆ ಅವಕಾಶ ನೀಡಲಾಗಿದೆ. ಈ ಮೂಲಕ ದೇಶೀಯ ವಿಮಾನಯಾನ ಬೆಲೆಗಳು ತೀವ್ರ ಏರಿಕೆಯಾಗುವ ಸಾಧ್ಯತೆ ಕಡಿಮೆ ಎಂದು ಸಚಿವಾಲಯ ಹೇಳಿದೆ.

2001ರಿಂದ ಭಾರತದಲ್ಲಿ ನಿಯಂತ್ರಣ ಮುಕ್ತಗೊಳಿಸಲಾದ ಎಟಿಎಫ್ ಬೆಲೆಗಳನ್ನು ಅಂತಾರಾಷ್ಟ್ರೀಯ ಮಾನದಂಡಗಳ ಆಧಾರದ ಮೇಲೆ ಮಾಸಿಕವಾಗಿ ಪರಿಷ್ಕರಿಸಲಾಗುತ್ತದೆ. ಆದರೆ ಪ್ರಸ್ತುತ ಇರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಯಲ್ಲಿ ಇದು ಏಪ್ರಿಲ್ 1ರಿಂದ ಶೇಕಡಾ 100ಕ್ಕಿಂತಲೂ ಹೆಚ್ಚಳವಾಗುವ ನಿರೀಕ್ಷೆ ಇತ್ತು. ಆದರೆ ದೇಶೀಯ ವಿಮಾನ ಪ್ರಯಾಣ ವೆಚ್ಚವನ್ನು ನಿಯಂತ್ರಿಸುವ ಸಲುವಾಗಿ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪೆನಿಗಳು ನಾಗರಿಕ ವಿಮಾನಯಾನ ಸಚಿವಾಲಯದೊಂದಿಗೆ ಸಮಾಲೋಚನೆ ನಡೆಸಿ ಭಾಗಶಃ ಮತ್ತು ತಕ್ಷಣಕ್ಕೆ ಅಗತ್ಯವಿರುವಷ್ಟನ್ನು ಮಾತ್ರ ಹೆಚ್ಚಳಗೊಳಿಸಿ ಜಾರಿಗೊಳಿಸಿದೆ.

ಇದರಿಂದ ದೇಶೀಯ ವಿಮಾನಯಾನ ಸಂಸ್ಥೆಗಳು ಶೇ. 25 ರಷ್ಟು ಬೆಲೆ ಹೆಚ್ಚಳ ಮಾಡಲಿದೆ. ಇದು ಜಾಗತಿಕ ಬೆಲೆ ಏರಿಕೆಯ ಪೂರ್ಣ ದರದ ಬದಲಿಗೆ ಲೀಟರ್‌ಗೆ ಸುಮಾರು 15 ರೂ. ಆಗಿದೆ. ಇನ್ನು ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಮಾತ್ರ ಜಾಗತಿಕ ಮಾರುಕಟ್ಟೆ ದರವನ್ನು ಪಾವತಿಸಬೇಕಾಗುತ್ತದೆ. ಈ ವಿಧಾನವು ಪ್ರಯಾಣಿಕರು ಮತ್ತು ವಾಯುಯಾನ ವಲಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ತಿಳಿಸಿದ್ದಾರೆ.

ಗಲ್ಫ್ ರಾಷ್ಟ್ರಗಳಿಗೆ ಪ್ರಯಾಣಿಸುವವರಿಗೆ ಏರ್ ಇಂಡಿಯಾ, ಇಂಡಿಗೋ ವಿಮಾನಯಾನ ಸಂಸ್ಥೆಯಿಂದ ಮಹತ್ವದ ಸೂಚನೆ

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸೂಚನೆಯ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ವಾಯುಯಾನ ಟರ್ಬೈನ್ ಇಂಧನ ಅಥವಾ ಜೆಟ್ ಇಂಧನದ ಬೆಲೆ ಹೆಚ್ಚಳ ಮಾಡಲಾಗಿದೆ. ಎಟಿಎಫ್ ಬೆಲೆಗಳು ಶೇ. 8.5ರಷ್ಟು ಹೆಚ್ಚಳವಾಗಿದ್ದು, ಇದು ಈ ಹಿಂದೆ ಸೂಚಿಸಿದಂತೆ ಶೇ. 115ರಷ್ಟಾಗಿಲ್ಲ. ಜೆಟ್ ಇಂಧನದ ಪ್ರಸ್ತುತ ಬೆಲೆ ಪ್ರತಿ ಕಿಲೋ ಲೀಟರ್‌ಗೆ ಸುಮಾರು 1.04 ಲಕ್ಷ ರೂ. ಗಳಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.