ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಚಿನ್ನ, ಬೆಳ್ಳಿ ದರ ಇಳಿಕೆ ಸದ್ಯದಲ್ಲೇ ಇಳಿಕೆಯಾಗುತ್ತಾ? ಹೂಡಿಕೆ ಮಾಡೋದು ಸುರಕ್ಷಿತವೇ? ಈ ಬಗ್ಗೆ ಏನು ಹೇಳುತ್ತಾರೆ ತಜ್ಞರು?

When Gold and Silver Rate will Decrease? ಕೆಲವು ವರ್ಷಗಳಿಂದ ನಿರಂತರ ಏರಿಕೆಯಾಗುತ್ತಿರುವ ಚಿನ್ನ, ಬೆಳ್ಳಿ ದರ ಹೀಗೆಯೇ ಮುಂದುವರಿಯುತ್ತದೆಯೇ? ಇದೇ ರೀತಿ ಮುಂದುವರಿದರೆ ಹೂಡಿಕೆ ಮಾಡುವುದು ಸುರಕ್ಷಿತವೇ? ಚಿನ್ನ, ಬೆಳ್ಳಿ ಬೆಲೆ ಹೆಚ್ಚಳವಾಗುತ್ತಿರುವುದು ಏಕೆ? ಇದನ್ನು ಖರೀದಿ ಮಾಡುವಾಗ ಏನೆಲ್ಲ ಅಂಶಗಳನ್ನು ಪರಿಗಣಿಸಬೇಕು? ಈ ಕುರಿತು ತಜ್ಞರ ಕೌಟಿಲ್ಯ ಕ್ಯಾಪಿಟಲ್ ಸ್ಥಾಪಕ ಅಶೋಕ್ ದೇವಾನಾಂಪ್ರಿಯ ನೀಡಿರುವ ಮಾಹಿತಿ ಇಲ್ಲಿದೆ.

ಚಿನ್ನ, ಬೆಳ್ಳಿ ಮೇಲೆ ಹೂಡಿಕೆ ಮಾಡೋದು ಹೇಗೆ?

ಅಶೋಕ್ ದೇವಾನಾಂಪ್ರಿಯ ಮತ್ತು ಕೇಶವ ಪ್ರಸಾದ್‌ -

ಬೆಂಗಳೂರು, ಜ. 8: ಚಿನ್ನ, ಬೆಳ್ಳಿಯನ್ನು (Gold and Silver) ವಸ್ತುವಾಗಿ ನಾವು ಖರೀದಿ ಮಾಡಬೇಕೆ ಹೊರತು ಆಸ್ತಿಯಾಗಿ ಅಲ್ಲ. ಯಾಕೆಂದರೆ ಇದರ ಬೆಲೆ (Gold rate) ಯಾವತ್ತೂ ಇದೇ ರೀತಿ ಹೆಚ್ಚಳವಾಗುತ್ತದೆ ಎನ್ನಲು ಸಾಧ್ಯವಿಲ್ಲ. ನಮಗೆ ಇಷ್ಟವಿದೆ, ಇಷ್ಟು ಬೇಕು ಎಂದಷ್ಟೇ ಇದನ್ನು ಖರೀದಿ ಮಾಡಬೇಕು. ಆಸ್ತಿಯಾಗಿ ಚಿನ್ನ, ಬೆಳ್ಳಿಯನ್ನು ಖರೀದಿ ಮಾಡಿದರೆ ಮುಂದೆ ಬಹುದೊಡ್ಡ ತೊಂದರೆ ಅನುಭವಿಸಬೇಕಾಗಬಹುದು ಎನ್ನುತ್ತಾರೆ ಆರ್ಥಿಕ ತಜ್ಞ, ಕೌಟಿಲ್ಯ ಕ್ಯಾಪಿಟಲ್ ಸ್ಥಾಪಕರಾದ (Founder of cautilya Capital) ಅಶೋಕ್ ದೇವಾನಾಂಪ್ರಿಯ (Ashok Devanampriya). 'ವಿಶ್ವವಾಣಿ ಮನಿ' (Vishwavani money) ಯೂಟ್ಯೂಬ್‌ ಚಾನೆಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿ, ಚಿನ್ನ, ಬೆಳ್ಳಿ ಮೇಲೆ ಹೂಡಿಕೆ ಯಾವ ರೀತಿ ಇರಬೇಕು ಎನ್ನುವ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಚಿನ್ನದ ದರವು ಸಾಮಾನ್ಯವಾಗಿ ಮಾರುಕಟ್ಟೆಯ ಅನಿಶ್ಚಿತತೆ, ಯುದ್ಧ, ಆತಂಕದ ಸನ್ನಿವೇಶ ಉಂಟಾದಾಗ ಮಾತ್ರ ಹೆಚ್ಚಳವಾಗುತ್ತದೆ. ಇಲ್ಲವಾದರೆ ಅದು ಸ್ಥಿರತೆಯನ್ನು ಕಾಯ್ದುಕೊಳ್ಳುತ್ತದೆ ಅಥವಾ ಕೊಂಚ ಇಳಿಕೆ ದಾಖಲಿಸುತ್ತದೆ. ಚಿನ್ನ, ಬೆಳ್ಳಿ ದರಗಳು ಎಷ್ಟು ಎತ್ತರದವರೆಗೆ ಬೆಳೆಯುತ್ತದೆ ಎನ್ನುವುದನ್ನು ನಿಶ್ಚಿತ ರೂಪದಲ್ಲಿ ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಇವತ್ತಿನ ಮಾರುಕಟ್ಟೆ ಪರಿಸ್ಥಿತಿ ಮುಂದಿನ 1,000- 5,000 ದಿನಗಳ ಬಳಿಕ ಚಿನ್ನದ ದರದ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಅಶೋಕ್ ದೇವಾನಾಂಪ್ರಿಯ.

ಅಶೋಕ್ ದೇವಾನಾಂಪ್ರಿಯ ಜತೆಗಿನ ಸಂದರ್ಶನ ಇಲ್ಲಿದೆ:



ಇಕ್ವಿಟಿ ಮಾರುಕಟ್ಟೆ ಚೆನ್ನಾಗಿದ್ದರೆ ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಚಿನ್ನ ಎನ್ನುವುದು ಭಾರತೀಯರ ಪಾಲಿಗೆ ಅಸ್ತಿ ಅಲ್ಲ. ಅದು ಆಪದ್ಧನ. ಹೀಗಾಗಿ ಭಾರತೀಯರು ಇದರ ಬೆಲೆ ಹೆಚ್ಚಳವಾದರೂ, ಕಡಿಮೆಯಾದರೂ ಏನೂ ಚಿಂತೆ ಮಾಡುವುದಿಲ್ಲ. ಯಾಕೆಂದರೆ ಇವತ್ತು ಚಿನ್ನದ ಬೆಲೆ ಎಷ್ಟೇ ಹೆಚ್ಚಳವಾಗಿದ್ದರೂ ಕೂಡ ನಿತ್ಯವೂ ಚಿನ್ನ ಖರೀದಿ ಭಾರತದಲ್ಲಿ ನಡೆಯುತ್ತಲೇ ಇದೆ ಎಂದು ಅವರು ಹೇಳಿದರು.

ಸಾಮಾನ್ಯವಾಗಿ ಚಿನ್ನದ ಬೆಲೆ ಒಂದು ಸಾರಿ ಬಿದ್ದರೆ ಅದು ಮತ್ತೆ ಮೊದಲಿನ ದಾಖಲೆಯನ್ನು ಮುರಿಯಲು ಹಲವು ದಶಕಗಳನ್ನೇ ತೆಗೆದುಕೊಳ್ಳಬಹುದು. ಇದಕ್ಕೆ ಹಿಂದಿನ ಸಾಕ್ಷಿಯೂ ಇದೆ. ಈ ಹಿಂದೆ ಚಿನ್ನ ತನ್ನ ಹಿಂದಿನ ದಾಖಲೆಯನ್ನು ಮುರಿಯಲು 27 ವರ್ಷ ಮತ್ತು ಬೆಳ್ಳಿ ತನ್ನ ಹಿಂದಿನ ಬೆಲೆಯ ದಾಖಲೆಯನ್ನು ಮುರಿಯಲು 30-35 ವರ್ಷ ತೆಗೆದುಕೊಂಡಿತ್ತು ಎಂದರು.

ನಾವು ಚಿನ್ನವನ್ನು ಚಿನ್ನ ಎಂದೇ ಖರೀದಿ ಮಾಡಬೇಕು. ಒಂದು ವೇಳೆ ಅದರಿಂದ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಖರೀದಿ ಮಾಡುವುದಾದರೆ ಅದಕ್ಕಿಂತ ಬೆಲೆಬಾಳುವ ವಸ್ತುಗಳಿವೆ. ನಾವುಗಳನ್ನು ಖರೀದಿ ಮಾಡಿ. ಯಾಕೆಂದರೆ ಚಿನ್ನ ನಿರಂತರ ಲಾಭ ಕೊಡುವ ವಸ್ತುವಲ್ಲ. ಚಿನ್ನ, ಬೆಳ್ಳಿ ಖರೀದಿ ಮಾಡುವಾಗ ಸಮಯ ಮತ್ತು ನಮ್ಮ ಅಗತ್ಯವನ್ನು ನೋಡಿಕೊಳ್ಳಬೇಕು ಎನ್ನುತ್ತಾರೆ ಅವರು.
ಹೊಸ ಕಾರು ಖರೀದಿಸುವ ಮುನ್ನ ಯೋಜನೆ ಹೇಗಿರಬೇಕು? ಈ ಬಗ್ಗೆ ಹಣಕಾಸು ತಜ್ಞರ ಕಿವಿ ಮಾತೇನು?

ದೇಶದ ಸೆಂಟ್ರಲ್ ಬ್ಯಾಂಕ್‌ ಚಿನ್ನ ಖರೀದಿ ಮಾಡುತ್ತಿದೆ. ಇದರಿಂದ ಚಿನ್ನ, ಬೆಳ್ಳಿಯ ದರದ ಮೇಲೆ ಹೆಚ್ಚಿನ ಪರಿಣಾಮ ಏನೂ ಬೀರುವುದಿಲ್ಲ. ಅದೊಂದು ಸಣ್ಣ ಪ್ರಮಾಣದಲ್ಲಿ ನಡೆಯುತ್ತದೆ ಅಷ್ಟೆ ಎನ್ನುತ್ತಾರೆ ಅಶೋಕ್.

ಚಿನ್ನ, ಬೆಳ್ಳಿಯ ಬೆಲೆಗಳು ಕೇವಲ ಬೇಡಿಕೆಯ ಆಧಾರದ ಮೇಲೆ ನಿಂತಿರುತ್ತದೆ. ಆದರೆ ಕಂಪನಿಗಳು ಹೆಚ್ಚಿನ ಲಾಭ ಗಳಿಸಬೇಕು ಎನ್ನುವ ಉದ್ದೇಶದಿಂದ ಸಾಕಷ್ಟು ಮಂದಿ ಕೆಲಸ ಮಾಡುತ್ತಾರೆ. ಹೀಗಾಗಿ ಲಾಭ ಮಾಡುವ ಉದ್ದೇಶವಿದ್ದರೆ ಕಂಪನಿಯ ಷೇರುಗಳಲ್ಲಿ ಮಾಡುವುದು ಹೆಚ್ಚು ಸೂಕ್ತ ಎನ್ನುತ್ತಾರೆ ಅವರು.

ಹೊಸ ವರ್ಷದಲ್ಲಿ ಹೂಡಿಕೆ ಎಲ್ಲಿ, ಹೇಗೆ ಮಾಡಬೇಕು ?

ಚಿನ್ನ, ಬೆಳ್ಳಿಯ ದರ ಯಾವತ್ತೂ ಒಂದೇ ರೀತಿ ಇರುತ್ತದೆ ಎನ್ನಲು ಸಾಧ್ಯವಿಲ್ಲ. ಇವತ್ತು ಎತ್ತರದಲ್ಲಿರುವುದು ನಾಳೆ ಧೊಪ್ಪನೆ ಕೆಳಗೆ ಬೀಳಬಹುದು. ಹೀಗಿರುವಾಗ ಯಾವತ್ತೂ ಚಿನ್ನವನ್ನು ಸಣ್ಣ ಪ್ರಮಾಣದಲ್ಲಿ ಸಂಗ್ರಹಿಸಿಡಿ. ಭವಿಷ್ಯದಲ್ಲಿ ಎಷ್ಟು ಚಿನ್ನ ಬೇಕು ಎನ್ನುವುದನ್ನು ನಿರ್ಧರಿಸಿ ಬೇಕಾಗುವಷ್ಟು ಚಿನ್ನವನ್ನು ಅಲ್ಪ ಪ್ರಮಾಣದಲ್ಲಿ ವಾರಕೊಮ್ಮೆ, ತಿಂಗಳಿಗೊಮ್ಮೆ, ಮೂರು ತಿಂಗಳಿಗೊಮ್ಮೆ ಖರೀದಿಸಿ. ಇದು ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ ಎನ್ನುತ್ತಾರೆ ಅಶೋಕ್ ದೇವಾನಾಂಪ್ರಿಯ.