ನಾಳೆ ಕರಾವಳಿಯಲ್ಲಿ ಸಂಪುಟ ಸಭೆ: ತುಳು 2ನೇ ಆಡಳಿತ ಭಾಷೆ, ಮೂಲಸೌಕರ್ಯ ಯೋಜನೆಗಳಿಗೆ ಅಧಿಕೃತ ಮುದ್ರೆಯ ನಿರೀಕ್ಷೆ
ಕರ್ನಾಟಕದ ಆಡಳಿತ ಶಕ್ತಿ ಸೌಧವೇ ಕರಾವಳಿಯಂಗಳಕ್ಕೆ ಇಳಿದು ಬರುತ್ತಿರುವ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು, ಧಾರ್ಮಿಕಸಾಮಾಜಿಕ ಸಂಘಟನೆಗಳು ಹಾಗೂ ಕೈಗಾರಿಕಾ ಒಕ್ಕೂಟಗಳು ಸರಕಾರದ ಮುಂದಿಟ್ಟಿರುವ ಪ್ರಮುಖ ಪ್ರಸ್ತಾವನೆಗಳು ಮತ್ತು ಅವುಗಳ ಸಂಪುಟ ಅನುಮೋದನೆಯ ಸಾಧ್ಯತೆಗಳು ಹೀಗಿದೆ.
-
ಜಿತೇಂದ್ರ ಕುಂದೇಶ್ವರ, ಮಂಗಳೂರು
ರಾಜ್ಯ ಸರಕಾರದ ಪೂರ್ಣ ಪ್ರಮಾಣದ ಸಚಿವ ಸಂಪುಟ ಸಭೆಯು ತುಳುನಾಡು ಕರಾವಳಿಯ ರಾಜಧಾನಿ ಮಂಗಳೂರಿನಲ್ಲಿ ಸೆ.18ರಂದು ಸಮಾವೇಶಗೊಳ್ಳುತ್ತಿರುವ ಹಿನ್ನೆಲೆ ಕರಾವಳಿಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ, ತುಳು ಭಾಷೆ ಅಸ್ಮಿತೆ ಹಾಗೂ ಮೂಲಸೌಕರ್ಯ ಯೋಜನೆಗಳಿಗೆ ಅಧಿಕೃತ ಮುದ್ರೆ ಬೀಳುವ ನಿರೀಕ್ಷೆ ಗರಿಗೆದರಿದೆ.
ಕರ್ನಾಟಕದ ಆಡಳಿತ ಶಕ್ತಿ ಸೌಧವೇ ಕರಾವಳಿಯಂಗಳಕ್ಕೆ ಇಳಿದು ಬರುತ್ತಿರುವ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು, ಧಾರ್ಮಿಕಸಾಮಾಜಿಕ ಸಂಘಟನೆಗಳು ಹಾಗೂ ಕೈಗಾರಿಕಾ ಒಕ್ಕೂಟಗಳು ಸರಕಾರದ ಮುಂದಿಟ್ಟಿರುವ ಪ್ರಮುಖ ಪ್ರಸ್ತಾವನೆಗಳು ಮತ್ತು ಅವುಗಳ ಸಂಪುಟ ಅನುಮೋದನೆಯ ಸಾಧ್ಯತೆಗಳು ಹೀಗಿದೆ.
ತುಳು ಭಾಷಾ ಅಸ್ಮಿತೆ: ತುಳು ಭಾಷೆಯನ್ನು ರಾಜ್ಯದ 2ನೇ ಹೆಚ್ಚುವರಿ ಅಧಿಕೃತ ಆಡಳಿತ ಭಾಷೆ ಯನ್ನಾಗಿ ತಕ್ಷಣವೇ ಘೋಷಿಸಬೇಕು ಮತ್ತು ಸಂವಿಧಾನದ 8ನೇ ಅನುಸೂಚಿಗೆ ಸೇರ್ಪಡೆಗೊಳಿಸಲು ಕೇಂದ್ರ ಸರಕಾರಕ್ಕೆ ಪ್ರಬಲ ಶಿಫಾರಸು ಕಳುಹಿಸಬೇಕು ಎಂದು ಅವಳಿ ಜಿಲ್ಲೆಯ ಶಾಸಕರು, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ನೇತೃತ್ವದ ಬಿಜೆಪಿ ನಿಯೋಗ ಹಾಗೂ ವಿಶ್ವ ಹಿಂದೂ ಪರಿಷತ್ ಸಂಘಟನೆಗಳು ಬಲವಾಗಿ ಆಗ್ರಹಿಸಿವೆ.
ಇದನ್ನೂ ಓದಿ: Maharashtra coast: ರಾಯಗಢದ ಕರಾವಳಿಯಲ್ಲಿ ಅನುಮಾನಾಸ್ಪದ ಬೋಟ್ ಪತ್ತೆ; ಹೆಚ್ಚಿದ ಭದ್ರತೆ
ಇದಕ್ಕೆ ಪೂರಕವಾಗಿ, ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಡಾ.ಎಂ.ಮೋಹನ್ ಆಳ್ವ ಸಮಿತಿ ಸಲ್ಲಿಸಿದ ವರದಿಯನ್ನು ಯಥಾವತ್ ಜಾರಿಗೊಳಿಸಲು ಸಂಪುಟ ಸಭೆಯಲ್ಲೇ ಅಧಿಕೃತ ನಿರ್ಣಯ ಕೈಗೊಳ್ಳಬೇಕೆಂದು ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಒತ್ತಾಯಿಸಿದ್ದಾರೆ.
ಕ್ರೀಡಾ ವಿಶ್ವವಿದ್ಯಾಲಯ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಕ್ರೀಡಾಂಗಣಗಳ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಅನುದಾನ ಮತ್ತು ಸುಧಾರಿತ ಕ್ರೀಡಾ ಸಾಮಗ್ರಿಗಳನ್ನು ಒದಗಿಸುವಂತೆ ಕರಾವಳಿಯ ಶಾಸಕರು ಸರಕಾರಕ್ಕೆ ಮನವಿ ಮಾಡಿದ್ದಾರೆ. ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಉಡುಪಿಯಲ್ಲಿ ‘ಭಾರತ್ ಜೋಡೋ ಕ್ರೀಡಾ ವಿಶ್ವವಿದ್ಯಾಲಯ’ ಆರಂಭಿಸುವ ಪ್ರಸ್ತಾವನೆ ಯನ್ನು ಸರಕಾರದ ಮುಂದಿಡ ಲಾಗಿದ್ದು, ಸಂಪುಟದಲ್ಲಿ ತಾತ್ವಿಕ ಒಪ್ಪಿಗೆ ಸಿಗುವ ಸಾಧ್ಯತೆಯಿದೆ.
ಐಟಿ ಕಾರಿಡಾರ್: ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ಪ್ರದೇಶದ ರಸ್ತೆಗಳ ನವೀಕರಣಕ್ಕೆ 28 ಕೋಟಿ ವಿಶೇಷ ಅನುದಾನ ಒದಗಿಸುವುದು ಹಾಗೂ ತೊಕ್ಕೊಟ್ಟು-ಮುಡಿಪುಮೆಲ್ಕಾರ್ ರಸ್ತೆ ಯನ್ನು ವಿಸ್ತರಿಸಿ ಅಲ್ಲಿ ಶಿಕ್ಷಣ, ಆರೋಗ್ಯ ಮತ್ತು ಐಟಿ ಕಾರಿಡಾರ್ ಆಗಿ ಅಭಿವೃದ್ಧಿಪಡಿಸುವ ಮಹತ್ವಾ ಕಾಂಕ್ಷೆಯ ಪ್ರಸ್ತಾವನೆ ಯನ್ನು ಸಚಿವ ಯು.ಟಿ. ಖಾದರ್(U T Khader) ಸಂಪುಟದ ಮುಂದಿಟ್ಟಿ ದ್ದಾರೆ. ಸ್ಥಳೀಯ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಯ ದೃಷ್ಟಿಯಿಂದ ಈ ಯೋಜನೆಗಳಿಗೆ ತ್ವರಿತ ಹಣಕಾಸು ಮತ್ತು ಆಡಳಿತಾತ್ಮಕ ಅನುಮೋದನೆ ದೊರೆಯುವ ಸಾಧ್ಯತೆ ನಿಚ್ಚಳವಾಗಿದೆ.
ಜಂಬಿಟ್ಟಿಗೆ ನೀತಿ ಸರಳೀಕರಣ: ಕರಾವಳಿ ಜಿಲ್ಲೆಗಳಲ್ಲಿ ಸಾಮಾನ್ಯ ಜನರು ಮನೆ ಮತ್ತು ಕಟ್ಟಡ ನಿರ್ಮಾಣ ಮಾಡಲು ಕೈಗೆಟುಕುವ ದರ ದಲ್ಲಿ ಸುಲಭವಾಗಿ ಮರಳು ಹಾಗೂ ಜಂಬಿಟ್ಟಿಗೆ ಕಲ್ಲು ಸಿಗುವಂತೆ ಪ್ರಸ್ತುತ ಇರುವ ಕಠಿಣ ನಿಯಮಾವಳಿಗಳನ್ನು ಸರಳಗೊಳಿಸಬೇಕೆಂದು ವಿವಿಧ ಕೈಗಾರಿಕಾ ಸಂಸ್ಥೆಗಳು ಮತ್ತು ಸಿಪಿಐ (ಎಂ) ಒಕ್ಕೂಟಗಳು ಆಗ್ರಹಿಸಿವೆ.
ಕಡಲ್ಕೊರೆತ, ಸಿಆರ್‌ಝಡ್ ಮತ್ತು ಕಸ್ತೂರಿ ರಂಗನ್ ಗಂಟು
ಕರಾವಳಿಯ ಪ್ರತಿ ಮುಂಗಾರಿನಲ್ಲೂ ಆತಂಕ ತರುವ ಕಡಲ್ಕೊರೆತ ತಡೆ ಕಾಮಗಾರಿಗಳಿಗೆ ಸಭೆಯಲ್ಲಿ ತಕ್ಷಣದ ವಿಶೇಷ ಅನುದಾನ ಮಂಜೂರಾಗುವ ಸಾಧ್ಯತೆಯಿದೆ. ಆದರೆ ಸಿಆರ್‌ಝಡ್ ನಿಯಮಗಳು ಕೇಂದ್ರದ ವ್ಯಾಪ್ತಿಗೆ ಬರುವುದ ರಿಂದ, ನಿಯಮ ಸಡಿಲಿಕೆಗೆ ಕೇಂದ್ರಕ್ಕೆ ಅಧಿಕೃತ ಶಿಫಾರಸು ಕಳುಹಿಸಲು ಮಾತ್ರ ರಾಜ್ಯ ಸಂಪುಟ ನಿರ್ಧಾರ ಕೈಗೊಳ್ಳಬಹುದು.
ಮತ್ತೊಂದೆಡೆ, ಪಶ್ಚಿಮ ಘಟ್ಟ ವ್ಯಾಪ್ತಿಯ ಜನವಸತಿ ಮತ್ತು ಕೃಷಿ ಭೂಮಿಯನ್ನು ಕಸ್ತೂರಿರಂಗನ್ ವರದಿಯ ಪರಿಸರ ಸೂಕ್ಷ್ಮ ವಲಯದಿಂದ ಹೊರಗಿಡಲು ಕರಾವಳಿ-ಮಲೆನಾಡು ಭಾಗದ ಶಾಸಕರು ಒಕ್ಕೊರಲಿನಿಂದ ಒತ್ತಾಯಿಸಿದ್ದು, ರೈತರಿಗೆ ತೊಂದರೆ ಯಾಗದಂತೆ ವರದಿಯನ್ನು ತಿದ್ದುಪಡಿ ಮಾಡಲು ಅಥವಾ ತಿರಸ್ಕರಿಸಲು ಕೇಂದ ಸರಕಾರಕ್ಕೆ ನಿರ್ಣಯ ರವಾನಿಸಲು ಸಂಪುಟ ಸಭೆ ಒಪ್ಪಿಗೆ ನೀಡುವ ಸಂಭವ ಬಹಳ ಹೆಚ್ಚಾಗಿದೆ.
ದೇಗುಲ ಕಾರಿಡಾರ್‌ಗೆ ಪ್ರಸ್ತಾವ
ರಾಷ್ಟ್ರೀಯ ಹೆದ್ದಾರಿಯ ಸಂಚಾರ ದಟ್ಟಣೆಗೆ ಪರ್ಯಾಯವಾಗಿ ಮಂಗಳೂರಿನ ಕೊಣಾಜೆ (ವಿಶ್ವ ವಿದ್ಯಾಲಯ)ಯಿಂದ ಉಡುಪಿಯ ಮಣಿಪಾಲದವರೆಗೆ ಮೆಟ್ರೋ ನಿರ್ಮಿಸುವುದು ಹಾಗೂ ಮುಂದಿನ ಹಂತದಲ್ಲಿ ಇದನ್ನು ಕುಂದಾಪುರ ದವರೆಗೆ ವಿಸ್ತರಿಸಲು ಸಂಪುಟದಲ್ಲಿ ತಾತ್ವಿಕ ಅನುಮೋದನೆ ನೀಡಬೇಕೆಂದು ಶಾಸಕ ವಿ.ಸುನಿಲ್ ಕುಮಾರ್ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಇದರೊಂದಿಗೆ, ಕಾರವಾರದ ಗೋಕರ್ಣದಿಂದ ಉಡುಪಿಯ ಕೃಷ್ಣ ಮಠ, ದಕ್ಷಿಣ ಕನ್ನಡದ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಗಳನ್ನು ಬೆಸೆಯುವ ‘ಕರಾವಳಿ ಟೆಂಪಲ್ ಟೂರಿಸಂ’ ಕಾರಿಡಾರ್ ರಚನೆಗೆ ಬಲವಾದ ಬೇಡಿಕೆ ಮಂಡನೆಯಾಗಿದೆ. ಅಲ್ಲದೆ, ನಿರ್ಲಕ್ಷ್ಯಕ್ಕೊಳಗಾಗಿರುವ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ರಸ್ತೆಗಳ ದುರಸ್ತಿ-ನಿರ್ವಹಣೆಗೆ ಪ್ರತ್ಯೇಕ ಪ್ಯಾಕೇಜ್ ಘೋಷಿಸ ಬೇಕು. ಉಡುಪಿ- ಬೆಂಗಳೂರು ಸಂಪರ್ಕ ಸುಗಮಗೊಳಿಸಲು ಹಿರಿಡ್ಕ ಗುರುವಾಯನಕೆರೆ ರಸ್ತೆಯನ್ನು ತಕ್ಷಣವೇ ಅಗಲೀಕರಣ ಗೊಳಿಸಬೇಕು ಎಂಬ ಪ್ರಸ್ತಾವನೆಗಳು ಇವೆ.